ಬಾಡಿದ ಕುಸುಮ

ವಿಜಯ್ ನದು ಒಂದು ಚಿಕ್ಕ ಕುಟುಂಬ.ಚಿಕ್ಕ ವಯಸ್ಸಿನಲ್ಲಿಯೇ ತಂದೆಯನ್ನ ಕಳೆದುಕೊಂಡಿದ್ದ, ಆ ನಂತರ ಅಮ್ಮನೇ ಎಲ್ಲ ವಿಜಿಗೆ.ಮನೆಯಲ್ಲಿ ಇದ್ದದ್ದು ವಿಜಿ ಅವನ ತಾಯಿ ಮತ್ತು ತಂಗಿ ಮಾತ್ರ.ತಾಯಿ ಕಷ್ಟಪಟ್ಟು ದುಡಿದು ಮಕ್ಕಳಿಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತಿದ್ದರು.ಡಿಗ್ರಿಯ ಕೊನೆಯ ವರ್ಷ ವಿಜಿಯದು.ತಂಗಿ ಚರಿತಳದು ಪಿ ಯು ಸಿ ಮೊದಲನೆಯ ವರ್ಷ.ತುಂಬಾ ಚುರುಕು ಮತ್ತು ಚೂಟೀಯಾಗಿದ್ದ ವಿಜಿ ಕಾಲೇಜ್ ಸೆರಿದ ಮೆಲೆ ಸಹವಾಸ ದೋಷದಿಂದ ಕೆಟ್ಟ ಚಟಗಳಿಗೆ ಬಲಿಯಾಗಿದ್ದ.ಸಾಕಷ್ಟು ಬುದ್ದಿ ಹೇಳಿ ಅಮ್ಮ ಕೋನೆಗೆ ಸೋತು ಸುಮ್ಮನಾಗಿದ್ದರು.ನೀ ಹೀಗೆ ನಡೆದುಕೋಳ್ಳುತ್ತಿದ್ದರೆ ಮುಂದೆ ನಿನ್ನ ತಂಗಿಯ ಗತಿಯೇನು ಎಂದೆಲ್ಲ ಸಮಝಾಯಿಸಿ ಹೆಳಿದರೂ ಎನೂ ಉಪಯೋಗವಾಗಲಿಲ್ಲ.ಹಾಗಾಗಿ ಅಮ್ಮ ಅಣ್ಣ ತಂಗಿಯ ನಡುವಿನ ಒಡನಾಟವನ್ನೇ ಕಡಿಮೆ ಮಾಡಿಬಿಟ್ಟಿದ್ದರು.ಇತ್ತೀಚೆಗೆಗಂತೂ ದಿನವಿಡೀ ಪೊಲಿ ಹುಡುಗರ ಜೊತೆ ಸೆರಿ ಹರಟುತ್ತ ಉರೂರು ಅಲೆಯುತ್ತ ದಿನ ಕಳೆಯುತ್ತಿದ್ದ. ಅದೊಂದು ದಿನ ವಿಜಿ ಎಂದಿನಂತೆ ಕಾಲೇಜಿನಲ್ಲಿ ಹುಡುಗರ ಜೋತೆ ಹರಟುತ್ತಿದ್ದ.ತುಂಬಾ ಬಿಸಿ ಬಿಸಿ ಸುದ್ದಿ ಚರ್ಚೆಯಗುತ್ತಿತ್ತು.ವಿಜಿಯ ಪೋಲಿ ಗೆಳೆಯರಲ್ಲಿ ಒಬ್ಬನಾದ ಸಿದ್ದು ಒಂದು ಹುಡುಗಿ ಹಿಂದೆ ಬಿದ್ದಿದ್ದ,ಹಿಂದಿನ ದಿನ ಪ್ರಪೋಸ್ ಮಾಡುವುದಾಗಿ ಹೇಳಿ ಹೊಗಿದ್ದ.ಇಂದು ಸಿದ್ದು ಕಾಲೇಜಿಗೆ ಬರುವುದೇ ತಡ ಎಲ್ಲರೂ ಸುತ್ತರಿದು ಎನಾಯ್ತೊ ಮಗ ನಿನ್ ಲವ್ ಸ್ಟೊರಿ ಅಂತ ಕಾಡತೋಡಗಿದರು.ಅವಳು ಖಡಾಖಂಡಿತವಾಗಿ ನಿರಾಕರಿಸಿದ್ದನ್ನ ತಲೆ ಕೆಳ ಹಾಕಿಕೊಂಡೇ ಹೇಳಿದ ಸಿದ್ದು.ಬಿಟ್ಟಾಕು ಮಗಾ ಅವಳಲ್ಲದಿದ್ದರೆ ಮತ್ತೋಬ್ಬಳು ಸಿಗ್ತಾಳೆ ಅಂದರೂ ಕೇಳದ ಸಿದ್ದು ಅವಳಿಗೆ ಒಂದು ಗತಿ ಕಾಣಿಸುವ ನಿರ್ಧಾರಕ್ಕೆ ಬಂದ. ಅವನ ಸಹಾಯಕ್ಕೆ  ವಿಜಿಯ ಜೊತೆಗೆ ಕೆಲ ಸ್ನೇಹಿತರೆಲ್ಲ ತಯಾರಾದರು.ಎಲ್ಲರೂ ಸೇರಿ ಅವಳ ಮುಖಕ್ಕೆ ಆಸಿಡ್ ಎರಚುವ ನಿರ್ಧಾರಕ್ಕೆ ಬಂದರಲ್ಲದೆ  ಎಲ್ಲವನ್ನೂ ಸರಿಯಾಗಿ ಪ್ಲಾನ್ ಮಾಡಿ ಸಂಜೆಯ ಹೊತ್ತಿಗೆ ಅವಳು ಕಾಲೇಜಿನಿಂದ ಮನೆಗೆ ಹೋಗುವ ದಾರಿಯಲ್ಲಿ ಸ್ವಲ್ಪ ನಿರ್ಜನ ಪ್ರದೇಶದಲ್ಲಿ ಈ ಕೆಲಸವನ್ನ ಮಾಡುವುದಾಗಿ ತೀರ್ಮಾನಿಸಿದರು.

      ಅಂದು ಅವಳು ಸಂಜೆಯ ಹೊತ್ತಿಗೆ ಗೆಳೆತಿಯರ ಜೊತೆಗೂಡಿ ಮನೆಯ ಕಡೆ ಹೊರಟಿದ್ದಳು,ತುಸು ಕತ್ತಲಾದ್ದರಿಂದ ಮುಖಗಳೆಲ್ಲ ಅಸ್ಪಷ್ಟವಾಗಿದ್ದವು. ಸರಿಯಾಗಿ ಗುರುತಿಸಿ ಅವಳ ಕಡೆ ಬೊಟ್ಟು ಮಾಡಿದ್ದ ಸಿದ್ದು. ತಾನೇ ಖುದಾಗಿ ತಂದಿದ್ದ ಆಸಿಡ್ ಬಾಟಲ್ ನ್ನ ಸಿದ್ದುವಿನ ಕೈಗಿಡುತ್ತ ವಿಜಿ ಬೇಗ ಹೋಗಿ ಕೆಲಸ ಮುಗಿಸಿಕೊಂಡು ಬರುವಂತೆ ಸೂಚಿಸಿ ತಾನು ಆಚಿಚೆಗೆ ಗಮನಿಸುವುದಾಗಿ ತಿಳಿಸಿದ.ಕೆಲವೇ ಕ್ಷಣದಲ್ಲಿ ನಿರ್ಜನವಾದ ಆ ಪ್ರದೇಶ ಜನರಿಂದ ತುಂಬಿತ್ತು..ಕ್ಷಣಾರ್ಧದಲ್ಲೇ  ಅರಳಿ ಹೂವಾಗಬೇಕಿದ್ದ ಮೊಗ್ಗೊಂದು ಬಾಡಿಹೋಗಿತ್ತು.ಸಾವಿರಾರು ಆಸೆ ತುಂಬಿಕೊಂಡಿದ್ದ ಕಣ್ಣುಗಳಲ್ಲಿ ರಕ್ತ ಸುರಿಯುತ್ತಿತ್ತು.ಸುಂದರ ಕುಸುಮವೊಂದು ಸುಟ್ಟು  ಕರಕಲಾಗಿತ್ತು. ಎಲ್ಲರೂ ಗುಂಪುಗೂಡಿ ಮಧ್ಯದಲ್ಲಿ ಮುಖದ ಮೇಲೆ ಕೈ ಇಟ್ಟುಕೊಂಡು ಅಸಹಾಯಕತೆಯಿಂದ ರೋಧಿಸುತ್ತಿದ್ದ ಅವಳನ್ನ ನೋಡಿ ಏನೂ ಸಂಬಂಧವಿಲ್ಲದಂತೆ ಸರಿಯುತ್ತಿದ್ದರು.ಕೊನೆಗೊಬ್ಬ ಪುಣ್ಯಾತ್ಮರಾರೋ ಗೆಳತಿಯ ಸಹಾಯದಿಂದ ಅವಳನ್ನ ಆಸ್ಪತ್ರೆಗೆ ಸೇರಿಸಿ ಮನೆಗೆ ಹೇಳಿಕಳುಹಿಸಿದರು. ಇತ್ತ ದೊಡ್ಡ ಯುದ್ಧದಲ್ಲಿ ಜಯಭೆರಿ ಬಾರಿಸಿದಂತೆ ಕುಣಿದು ಕುಪ್ಪಳಿಸುತ್ತಿತ್ತು ಹುಡುಗರ ದಂಡು.ರಾತ್ರಿಯವರೆಗೆ ಮಜಾಮಾಡಿ ಎಲ್ಲರೂ ಮನೆಯ ದಾರಿ ಹಿಡಿದರು.ವಿಜಿ ಏನೋ ಖುಷಿಯಿಂದ ಮನೆಗೆ ಬಂದಿದ್ದ,ಮನೆಗೆ ಬೀಗ ಇದ್ದದ್ದನ್ನ ನೋಡಿ ಅಕ್ಕಪಕ್ಕದಲ್ಲಿ ವಿಚಾರಿಸಿದಾಗ ಮನೆಗೆ ಬಂಡ ಕೂಡಲೇ ಅಮ್ಮ ಆಸ್ಪತ್ರೆಗೆ ಬರುವುದಾಗಿ ಹೇಳಿದ್ದಾರೆಂದು ತಿಳಿದು ಆಸ್ಪತ್ರೆಯ ಕಡೆಗೆ ಹೆಜ್ಜೆ ಹಾಕಿದ್ದ.ಆಸ್ಪತ್ರೆಯಲ್ಲಿ ಮೂಲೆಯಲ್ಲಿ ಕುಳಿತು ಅಳುತ್ತಿದ್ದ ಅಮ್ಮನನ್ನ ನೋಡಿ ಏನಾಯ್ತಮ್ಮ ಈಗ?ದಿನವೂ ಒಬ್ಬರಿಗಲ್ಲ ಒಬ್ಬರಿಗೆ ಏನಾದರೂ ಆಗುತ್ತಲೇ ಇರುತ್ತೆ, ಹಾಗಂತ ದಿನವೂ ಕಣ್ಣೀರಿಡುತ್ತಾ ಕುಳಿತರೆ ಹೇಗೆ? ಪರೋಪಕಾರ ಮಾಡುವುದನ್ನ ಬಿಟ್ಟು ಮನೆಗೆ ನಡಿ ನನಗೆ ತುಂಬಾ ಹಸಿವಾಗಿದೆ ಅಂತ ತಿರಸ್ಕಾರದಿಂದಲೇ ನುಡಿದಿದ್ದ.ಇದನ್ನೆಲ್ಲಾ ಕೇಳಿ ಅಮ್ಮನ ಆಕ್ರಂದನ ಜೋರಾಗಿತ್ತು.ಏನಾಯಿತೀಗ ಅಂತ ಕೋಪದಿಂದಲೇ ನುಡಿದ ವಿಜಿ. ಯಾರೋ ನಮ್ಮ ಚರಿತಳ ಮೇಲೆ ಆಸಿಡ್ ಹಾಕಿದ್ದಾರೆ ಕಣೋ, ಬದುಕುಳಿಯುವುದು ತುಂಬಾ ಕಷ್ಟ ಅಂತ ಡಾಕ್ಟರ್ ಹೇಳಿದ್ದಾರೆ ಅಂತ ಜೋರಾಗಿ ಕಣ್ಣೀರಿಡಲು ಸಂಜೆ ಗೆಳೆಯರ ಜೊತೆಗೂಡಿ ಆಸಿಡ್ ಹಾಕಿದ್ದು ನನ್ನ ಸ್ವಂತ ತಂಗಿಯ ಮೇಲೆ ಅಂತ ಗೊತ್ತಾಗಿ ನಿಂತಲ್ಲೇ ಕುಸಿದ ವಿಜಿ. ಯಾರೋ ನಮ್ಮ ಚರಿತಳನ್ನ ಚುಡಾಯಿಸುತ್ತಿದ್ದಾರಂತೆ ಕಣೋ ನೀನು ಇಡೀ ದಿನ ಪೋಲಿ ಹುಡುಗರ ಜೊತೆ ಅಲೆಯುವುದನ್ನ ಬಿಟ್ಟು ಸ್ವಲ್ಪ ಅವಳ ಬಗ್ಗೆ ಗಮನ ಕೊಡೊ, ನೀನೆ ಪೋಲಿಯಾದರೆ ಅವಳನ್ನ ನೋಡಿಕೊಳ್ಳೋರು ಯಾರೋ ಅಂತೆಲ್ಲ ಕೆಲ ದಿನದ ಹಿಂದೆಯೇ ಅಮ್ಮ ಹೇಳಿದ್ದ ಮಾತುಗಳೆಲ್ಲ ವಿಜಿಯ ಮನಸ್ಸಿಗೆ ಬಾಣಗಳಂತೆ ಬಂದು ಅಪ್ಪಳಿಸಿದಾಗ ತನಗರಿಯದೇ ವಿಜಿಯ ಕಣ್ಣು ತುಂಬಿ ಬಂದಿತ್ತು.

ಕಾಲ ಮಿಂಚಿತ್ತು ,ಹೂವು ಬಾಡಿತ್ತು
ವಿಧಿಯ ಅಟ್ಟಹಾಸಕೆ,
ಮುಗ್ಧ ಜೀವ ಬಲಿಯಾಗಿತ್ತು.

ಓ ನಲ್ಲೆ

ನಾನಿನ್ನ ನೋಡಿ,ಹೆದರಿ ನಡುಗುತ್ತ
ಯಾರಿರದಿರಲು ನಿನ್ನ ಸುತ್ತಮುತ್ತ
ಕೊಟ್ಟೇನು ನಿನಗೊಂದು ಮುತ್ತ
ಕೊಟ್ಟೇನು ನಿನಗೊಂದು ಮುತ್ತ

ನನ್ನೆಡೆಗೆ ಕುಡಿ ನೋಟ ಬೀರುತ್ತ
ನಿಂತಿರಲು ನೀ ನಸುನಗುತ್ತ
ಕೊಟ್ಟೇನು ನಿನಗೊಂದು ಮುತ್ತ
ಕೊಟ್ಟೇನು ನಿನಗೊಂದು ಮುತ್ತ

ತಿರುಗುತಿರಲು ನೀ ಮಂದಿರದ ಸುತ್ತ
ಬೀಳದೆನಗೆ ನಿನ್ನ ಚಪ್ಪಲಿಯ ಹೊಡೆತ
ಆಗ ಕೊಟ್ಟೇನು ನಿನಗೊಂದು ಮುತ್ತ
ಆಗ ಕೊಟ್ಟೇನು ನಿನಗೊಂದು ಮುತ್ತ .
ಮಡದಿ ಇಂದೆನಗೆ ಮಾಡಿಕೊಟ್ಟಳು ಉಪ್ಪಿಟ್ಟು
ನಾನೆಂದೆ ಇದೇನಿದು ಕಾಂಕ್ರೀಟು..
ಹುಸಿಕೊಪದಿ ಉಪ್ಪಿಟ್ಟ ಬದಿಗಿಟ್ಟು
ಮಾಡಿಕೊಟ್ಟಳು ಪ್ರೀತಿಯಿಂದ ಥಾಲಿಪಿಟ್ಟು
ನಾನೆಂದೆ ಇದೇನಿದು ಬರೀ ಹಿಟ್ಟು ಹಿಟ್ಟು..
ನನ್ನಾಕೆ ಕೋಪದಿ ಅದನ ತೆಗೆದಿಟ್ಟು
ತಲೆಯ ಮೇಲೊಂದು ಕೊಟ್ಟು
ಹೊರನಡೆದಳು ಅಡುಗೆಯ ನನ್ನ ಪಾಲಿಗಿಟ್ಟು... :(

ಹನಿ ಹನಿ 10 :

೧.
ಅವಳು ಕೊಟ್ಟ ಮುತ್ತಿಗೆ ನಾ ತಲೆ ತಿರುಗಿ ಬಿದ್ದೆ
ಆಮೇಲೆ,
ಎದ್ದು ನೋಡಿದರೆ ನಾ ಮಂಚದ ಕೆಳಗಿದ್ದೆ.

೨.
ಅವಳ ಕಣ್ಣ ಸನ್ನೆಗೆ ಹೃದಯ ಜೋರಾಗಿ ಬಡಿದಿತ್ತು
ಮುಂದೆ ,
ಅವಳು ಬಿಟ್ಟು ಹೋದಾಗ ಅದರ ಕೆಲಸ ನಿಂತಿತ್ತು.

೩.
ದಿನವಿಡೀ ಅವಳದೇ ಧ್ಯಾನದಲಿ ಮುಳುಗಿರುತ್ತಿದೆ
ಅಲ್ಲದೆ ,
ರಾತ್ರಿಯೂ ಕನಸಲಿ ಕಾದುತ್ತಿದ್ದಳು ಕೊಡದೆ ನಿದ್ದೆ.

೪.
ಇಲ್ಲದ ಹುಡುಗಿಯ ಕನಸಲಿ ಜೀವನ ನಡೆದಿತ್ತು
ಮುಂದೆ ,
ಮಡದಿಯ ಮೊಗದಲಿ ಅವಳ ಮುಖ ಕಂಡಿತ್ತು.

ಮೌನ :

ಮೌನದಲ್ಲಿರುವ  ಮಾತುಗಳೆಷ್ಟೋ.?
ಮೌನದಲ್ಲಿರುವ ಭಾವನೆಗಳೆಷ್ಟೋ.?
ಮೌನದಲಿ ಬೆರೆಯುವ ಸಂಬಂಧಗಳೆಷ್ಟೋ.?
ಮೌನದಲಿ ಮರೆಯುವ ಮುನಿಸುಗಳೆಷ್ಟೋ..?

ಹೆಸರಿನಲ್ಲೇನಿದೆ:




ಅಲ್ಲ ಈ ಹೆಸರಿನಲ್ಲೇನಿದೆ ಬಿಡಿ ಅಂತ ನಾವೆಲ್ಲಾ ಹೆಸರಿನ ಬಗ್ಗೆ ಅಷ್ಟಾಗಿ ಯೋಚನೆ ಮಾಡೋಕೆ ಹೋಗಲ್ಲ ಅಲ್ಲವಾ?? ಇರಲಿ ಬಿಡಿ ಅದಕ್ಕೆ ನಾನು ಹೊಸ ಪೀಠಿಕೆ ಹಾಕಿದ್ದು. ವಿಷಯ ಏನಪ್ಪಾ ಅಂದರೆ ನಮ್ಮ ನಿಮ್ಮ ಹೆಸರು ಮತ್ತು ಅಡ್ಡ ಹೆಸರು(ಸರ್ ನೇಮ್). ಹಮ್.. ಇದರ ಬಗ್ಗೆ ಸ್ವಲ್ಪ ಕುತೂಹಲ ವಹಿಸಿದರೆ ನಮ್ಮ ಗಮನಕ್ಕೆ ಬರೋದು ತುಂಬಾ ಮಜವಾದ ಸಂಗತಿ..ಹೆಸರು ಅಂದ್ರೆ ಏನಪ್ಪಾ? ನನಗೆ ತಿಳಿದ ಮಟ್ಟಿಗೆ ಯಾವುದೇ ವ್ಯಕ್ತಿ ಅಥವಾ ವಸ್ತುಗಳನ್ನ ಗುರುತಿಸುವ ಸಲುವಾಗಿ ನಾವಿಡುವ ಶಬ್ಧವೇ ಹೆಸರು.ವಸ್ತುವನ್ನ ಬಿಟ್ಟಾಕಿ ಸದ್ಯ ನಾವು ವ್ಯಕ್ತಿಗಳ ಬಗ್ಗೆ ಮಾತನಾಡೋಣ... ನಮಗೆಲ್ಲ ನಮ್ಮ ಅಪ್ಪ ಅಮ್ಮಂದಿರು ಚಂದದ ಹೆಸರಿಟ್ಟಿದ್ದಾರೆ ಅಲ್ಲವಾ? ಇದು ನಮ್ಮ ಭಾವನೆ ಅಷ್ಟೇ ಅದು ಸರಿಯೋ ತಪ್ಪು ಅಂತ ಕೂಡ ನಮಗೆ ಗೊತ್ತಿರೋಲ್ಲ.. ಅಲ್ಲ ಗೊತ್ತಾದರೂ ಮತ್ತೆ ಚೇಂಜ್ ಮಾಡೋಕೆ ಆಗುತ್ತಾ..ಬಿಡಿ.ಹಳೆಯ ಕಾಲದಲ್ಲಿ ಬಹುತೇಕ ದೇವರ ಹೆಸರು ಅಥವಾ ಹಿರಿಯರ ಹೆಸರನ್ನ ಇಡುತ್ತ ಇದ್ದರು. ರಾಮ ಕೃಷ್ಣ ಹನುಮಂತ ರಾಧೇ ರುಕ್ಮಿಣಿ ಹೀಗೆ. ಇನ್ನು ಈಗಿನ ಕಾಲದ ಹೆಸರು ಕೇಳಬೇಡ ಬಿಡಿ. ಹೆಸರಿಡೋಕೆ ವಿಷಯಗಳು ಬೇಕಾ ದೇವರ ಹೆಸರಿದೆ,ಋಷಿ ಮುನಿಗಳ ಹೆಸರಿದೆ, ಮಹಾನ ಪುರುಷರ ಹೆಸರಿದೆ, ಮರಗಿಡಗಳ ಹೆಸರಿದೆ, ಪ್ರಾಣಿ ಪಕ್ಷಿಗಳ ಹೆಸರಿದೆ, ಸಿನಿಮಾ ನಟರ ಹೆಸರಿದೆ ಹೀಗೆ ಸಾಕಷ್ಟಿದೆ ಬಿಡಿ ಏನಪ್ಪಾ ಇದು ಅಂತ ಯೋಚನೆ ಮಾಡ್ತಾ ಇದ್ದೀರಾ ಮುಂದೆ ಇದೆ ನೋಡಿ ಗಮ್ಮತು..

ಹೆಸರಿಗೆ ತಕ್ಕಂತೆ ನಿಮ್ಮ ನಡೆ ನುಡಿಗಳು ಸ್ವಭಾವ ಇದ್ದರೆ ಚೆನ್ನ ಇಲ್ಲವಾದರೆ ತುಂಬಾ ಕಷ್ಟ.. ಈಗ ನೋಡಿ "ಭೀಮ" ಅಂತ ಹೆಸರಿಟ್ಟುಕೊಂಡವ ನರಪೇತಲ ಆಗಿದ್ದರೆ ಹೇಗೆ ಅಲ್ಲವೇ? ಹಾಗಂತ "ಕೃಷ್ಣ" ಅಂತ ಹೆಸರಿಟ್ಟುಕೊಂಡು ಕಳ್ಳತನ ಮಾಡಿದ್ರೆ ಸರಿ ಅಂತ ಅಂದ್ರೆ ಒದೆ ಬೀಳೋದು ಗ್ಯಾರಂಟಿ.ಕೆಂಡದಂತ ಕಪ್ಪು ಹುಡುಗಿಗೆ ಹೆಸರು ಕೇಳಿದರೆ ನಗುತ್ತ "ಶ್ವೇತ" ಅಂತ ಹೇಳಿದರೆ ಹೇಗಿರುತ್ತೆ ಹೇಳಿ? ನಾನು ಸುಮಾರು ಜನರನ್ನ ನೋಡಿದ್ದೇನೆ ಹೆಸರಿನಲ್ಲಿ ಮಾತ್ರ "ಚೈತನ್ಯ" ಇರುತ್ತೆ ಹೊರತು ಮತ್ಯಾವುದರಲ್ಲೂ ಇರೋಲ್ಲ. "ನಾರಾಯಣ" ಅಂತ ಹೆಸರಿಟ್ಟುಕೊಂಡು ಊರೆಲ್ಲ ತಿರುಗಿ ಸುದ್ದಿ ಹಬ್ಬಿಸುವ ಮಂದಿಯೂ ಇದ್ದಾರೆ ಬಿಡಿ. "ನೀಲವೇಣಿ" ಅಂತ ಹೆಸರಿಟ್ಟುಕೊಂಡವರ ಜಡೆ ನೋಡಿದರೆ ಅಷ್ಟೇ. "ಸುಶೀಲ" ಅಂತ ಹೆಸರಿಟ್ಟುಕೊಂಡು ದಿನವೂ ಒಬ್ಬೊಬ್ಬರ ಜೊತೆ ತಿರುಗುವರಿಗೆ ಏನನ್ನೋಣ?"ಸೌಮ್ಯ" ಹೆಸರಿನಾಕೆ ಸೌಮ್ಯವಾಗಿರದೆ "ದುರ್ಗಾ" ಹೆಸರಿನಾಕೆ ಸೌಮ್ಯವಾಗಿರುವುದೂ ಕೂಡ ಇದೆ. "ನಾಗಪ್ಪ" ಅನ್ನುವವನು ಬುಸ್ ಗುಡದಿದ್ದರೆ  ಸಾಕು."ಆನಂದ" "ಸ್ಮಿತಾ" "ಉಲ್ಲಾಸ" "ಸಂತೋಷ" ಹೆಸರಿನ ವ್ಯಕ್ತಿಯ ಮುಖದಲ್ಲಿ ನಗುವಾಗಲಿ ಸಂತೋಷವಾಗಲಿ ಇರೋದೇ ಇಲ್ಲ. "ಆದರ್ಶ" ಅನ್ನುವವನು ಯಾರಿಗಾದರೂ ಆದರ್ಶನಾಗುತ್ತಾನೆ ಅಥವಾ "ವಿವೇಕ"ಅನ್ನುವವನು ವಿವೇಕದಿಂದ ಇರುತ್ತಾನೆ ಅಂತ ಹೇಳೋಕೆ ಆಗಲ್ಲ .ಅಬ್ಬಾ ಹೇಳೋಕೆ ಸಾಕಷ್ಟು ಇದೆ ಬಿಡಿ.. ಏನು ಮಾಡೋಕೆ ಆಗುತ್ತೆ ಅಪ್ಪ ಅಮ್ಮಂಗೆ ಮೊದಲೇ ಗೊತ್ತಿರೋತ್ತ ಮಂದೆ ಮಕ್ಕಳು ಹೇಗಿರುತ್ತಾರೆ ಅಂತ ಅವರೇನೋ ಇಷ್ಟಪಟ್ಟು ಹೆಸರಿಡುತ್ತಾರೆ ಅಲ್ಲವೇ? ಬಿಡಿ..

ಇನ್ನೊಂದು ವಿಷಯ ಏನು ಗೊತ್ತ? ಹಳೆಯ ಕಾಲದಲ್ಲಿ "ನಾಗಪ್ಪ" "ಬಸಪ್ಪ" "ಭರಮಪ್ಪ" ಅಂತೆಲ್ಲ ಹೆಸರು ಇಡ್ತಾ ಇದ್ದರು ಅದೇ ಅವರ ಹೆಂಡಂದಿರ ಹೆಸರು ಏನಿರುತ್ತೆ ಗೊತ್ತ?? "ನಾಗಮ್ಮ" "ಬಸವ್ವ "ಭರಮವ್ವ"...ಹೀಗೆ. ಕೃಷ್ಣ ಹೆಸರಿರುವವರು ಬೇಕಾದಷ್ಟು ಮದುವೆಯಾಗಿ "ಗಣೇಶ" "ಹನುಮಂತ" ಹೆಸರಿನವರು ಮದುವೆ ಆಗಲಾರದೆ ಇರಲಾದೀತೇ?ಇನ್ನು "ಶಿವ"ನ ಹೆಂಡತಿಯಾಗುವವಳು "ಸರಸ್ವತಿ", "ನಾರಾಯಣ"ನ ಹೆಂಡತಿಯಾಗುವವಳು "ಪಾರ್ವತಿ", "ಕೃಷ್ಣ"ನ ಹೆಂಡತಿಯಾಗಿ ಬರುವವಳು "ಯಶೋದ" ಆಗಿದ್ದರೆ?? ಹೌದುರೀ ನಮ್ಮ ತಂದೆಯ ಹೆಸರು ಕೃಷ್ಣ ಅಮ್ಮ ಯಶೋದ ಹಾಗಾಗಿ ಮದುವೆ ಆದ ಕೂಡಲೇ ಸತ್ಯಭಾಮ ಅಂತ ಚೇಂಜ್ ಮಾಡಿದ್ರು ಈಗ ಗಂಡನ ಮನೆಯಲ್ಲಿ ಸತ್ಯಭಾಮ ತವರಿನಲ್ಲಿ ಯಶೋದ.. ಅದಕ್ಕಾಗಿಯೇ ಅಂತ ಕಾಣುತ್ತೆ ನಮ್ಮಲ್ಲಿ ಮದುವೆಯಾದ ನಂತರ ಹೆಂಡತಿಯ ಹೆಸರು ಬದಲಿಸುವ ರೂಢಿ ಇರುವುದು.

ಇನ್ನು ಅಡ್ಡ ಹೆಸರಿನ ಬಗ್ಗೆ ಬಂದರೆ ಕೇಳಬೇಡಿ ಏನೆಲ್ಲಾ ಇವೆರಿ ಉಳ್ಳಾಗಡ್ಡೆ, "ಬೆಳ್ಳುಳ್ಳಿ", "ಮೆಣಸಿನಕಾಯಿ","ಗಿಡ್ ಮನಿ","ಕೆಳಗಿನ ಮನೆ","ಮೇಲಿನ ಮನೆ", "ತಂಬೋಲಿ", "ಅಂಗಡಿ" ಹೀಗೆ ಏನೇನೋ?? ಮುಂಚೆ ಯಾವುದೋ ಊರಲ್ಲಿದ್ದರು ಅದೇ ಊರಿನ ಹೆಸರೇ ಅಡ್ಡ ಹೆಸರಾಗಿರುತ್ತೆ."ಮಂಗಳೂರು" ಹೆಸರಿನವರು ಮಂಗಳೂರು ನೋಡೇ ಇರೋಲ್ಲ."ಖರೆ" ಅಡ್ಡ ಹೆಸರಿನವರು ನಿಜವೇ ಹೇಳುತ್ತಾರ ಅನ್ನುವ ಪ್ರಶ್ನೆ ಬರದೇ ಇರಲಾರದು. ಮತ್ತೆ ನೋಡಿ ಇಡುವ ಹೆಸರೊಂದು ಕರೆವ ಹೆಸರೊಂದು ಇದರಲ್ಲೂ ಮಜಾ ಇದೆ. ಚಂದ್ರ ಶೇಖರ ಅಂತ ಹೆಸರಿದ್ರೆ "ಚಮ್ಯಾ" ಅಂತಲೋ "ಚಂದು" ಅಂತಲೋ ಕರೆಯುತ್ತಾರೆ.ರಮೇಶ "ರಮ್ಯಾ" ಆದರೆ ಸುರೇಶ "ಸುರ್ಯಾ",ಪವನ "ಪವಿ" ಆದರೆ ಸೂರಜ "ಸೂರಿ" ಆಗುತ್ತಾನೆ.ಚಿದಂಬರ "ಚಿದು" ಆದರೆ ಪ್ರಕಾಶ "ಪಕ್ಯಾ".ಕೊನೆಗೆ ಅವರಿಗೇ ತಮ್ಮ ಹೆಸರು ಏನೆಂದು ಮರೆತು ಹೋಗುವ ಪರಿಸ್ಥಿತಿ ಬರುತ್ತೆ.ಇದೆಲ್ಲ ಇದ್ದ ಹೆಸರಲ್ಲೇ ಶಾರ್ಟ್ ಕಟ್ ಆದರೆ ಇನ್ನು ಕೆಲವರು ಪ್ರೀತಿಯಿಂದ "ಚ್ಯಾಂ" "ಮ್ಯಾಂ" "ಕಾವು" ಅಂತೆಲ್ಲ ಕರೆಯುತ್ತಾರೆ.ಇನ್ನು ಹವ್ಯಕರಲ್ಲಿ ಗಂಡು ಮಕ್ಕಳಿಗೆಲ್ಲ "ತಮ್ಮ" ಅಥವಾ "ಮಾಣಿ" ಅಂತ ಕರೆದರೆ ಹೆಣ್ಣು ಮಕ್ಕಳಿಗೆ "ಕೂಸೇ" ಅನ್ನುತ್ತಾರೆ. ಒಮ್ಮೆ ಲೇ ಭೂಮೀ ಆಕಾಶಂಗೆ ಕರಿಯೇ ಅಂತ ಒಬ್ಬ ಹೆಂಗಸು ಅಂದಾಗ ಕೆಲ ಕ್ಷಣ ಕಸಿವಿಸಿಗೊಂಡಿದ್ದೆ. ನಾನು ಮಹಾರಾಷ್ಟ್ರದಲ್ಲಿ ಇರುವುದರಿಂದ ಇಲ್ಲಿನ ಕೆಲವು ಹೆಸರುಗಳ ಬಗ್ಗೆ ಹೇಳುತ್ತೇನೆ ಕೇಳಿ ಇಲ್ಲಿನ ಮುಖ್ಯ ಹೆಸರುಗಳಲ್ಲಿ "ಸಾಯಲಿ" ಒಂದು.. ಹೆಸರು ಕೇಳಿದ್ರೆ ಸಾಯಲಿ ಅಂದ ಕೂಡಲೇ ನನಗೆ ಮೊದಲೆಯ ಬಾರಿಗೆ ಘಾಬರಿಯಾಗಿತ್ತು. "ಸೈ" "ಜಾಯಿ" "ಜುಯಿ"ಹೀಗೆ ಹಲಾವಾರು ಹೆಸರುಗಳು ಇಲ್ಲಿ ಕೇಳಿಬರುತ್ತೆ.ಅಡ್ಡ ಹೆಸರುಗಳಲ್ಲಿ "ಪ್ರಾಣಿ" ಅಡ್ಡ ಹೆಸರು ಕೇಳಿದಾಗ ನನಗೆ ನಗುವೇ ಬಂದಿತ್ತು. "ಝಾಕಾಸ್" "ದಶಪುತ್ರೆ" "ಅಷ್ಟಪುತ್ರೆ" "ಕಂಗಾಲ್" ಈ ರೀತಿಯ ಹೆಸರುಗಳೂ ಇವೆ.

ಇತ್ತೀಚೆಗಂತೂ ಹೆಸರಿಡುವದು ದೊಡ್ಡ ಸಂಭ್ರಮವೇ ಆಗಿದೆ.ನಮ್ಮ ಮಗುವಿಗೆ ಹೆಸರಿಡಬೇಕಿದೆ ಏನಾದರೂ ಹೆಸರು ಹೇಳುತ್ತೀರಾ ಅಂತ ಕೇಳಿದವರಿಗೆ ಮಗು ಗಂಡೋ ಹೆಣ್ಣೋ ಅಂದಾಗ  ಇನ್ನು ಹುಟ್ಟಿಲ್ಲ ಹುಟ್ಟಿದ ಮೇಲೆ ಇಡಲು ಈಗಿಂದಲೇ ತಯಾರಿ ಮಾಡುತ್ತಿದ್ದೇವೆ ಅನ್ನುವ ಜನರಿದ್ದಾರೆ.ಮಗು ಹುಟ್ಟುವ ಮೊದಲೇ ಹೆಸರು ನಿರ್ಧರಿಸುವಷ್ಟು ಕಾಲ ಮುಂದಾಗಿದೆ.ಅಪ್ಪನ ಹೆಸರಿನ ಮೊದಲನೇ ಅಕ್ಷರ ಅಮ್ಮನ ಹೆಸರಿನ ಕೊನೆಯ ಅಕ್ಷರ ಸೇರಿಸಿಯೋ ಮಗನ ಹೆಸರು ಬರಬೇಕು ಹಾಗೆ ಹೀಗೆ ಅಂತ ಇಂಟರ್ನೆಟ್ ನಲ್ಲಿ ಹುಡುಕಾಡಿ ಅವರಿಗೆ ಇವರಿಗೆ ಕೇಳಿ ಕೊನೆಗೆ ಮಗನಿಗೆ "ಟಾಮಿ" ಅಂತ ಹೆಸರಿಟ್ಟು ಮನೆ ನಾಯಿಗೆ "ರಾಜು" ಅಂತ ಹೆಸರಿಡುತ್ತಾರೆ ಅಷ್ಟೇ. ಇಂಟರ್ನೆಟ್  ಅಲ್ಲಿ ಅಪ್ಪ ಅಮ್ಮನ ಹೆಸರು ಟೈಪ್ ಮಾಡಿದ್ರೆ ಅದಕ್ಕೆ ಸೂಟ್ ಆಗುವ ಮಕ್ಕಳ ಹೆಸರು ಬರುತ್ತೆ ಅನ್ನುವುದನ್ನ ಕೇಳಿದ್ದೇನೆ. ಒಬ್ಬ ದಂಪತಿಗೆ ಗಂಡು ಮಗುವಾಯಿತು "ಚಿದಂಬರ" ಅಂತ ಹೆಸರಿಟ್ಟರಂತೆ ಎರಡನೆಯದು ಗಂಡು "ಔದುಂಬರ" ಅಂತ ಇಟ್ಟರಂತೆ ಮತ್ತೆರಡು ಗಂಡಾಯಿತು???  "ನವಂಬರ", "ಡಿಸಂಬರ" !!!  ಚೀನಾ ಜಪಾನ ನಲ್ಲಿ ಪಾತ್ರೆಗಳನ್ನ ಮೇಲಿಂದ ಬೀಳಿಸಿ ಬರುವ ಶಬ್ಧವನ್ನೇ ತಮ್ಮ ಮಕ್ಕಳಿಗೆ ಇಡುತ್ತಾರಂತೆ "ಟಿಂಗ್ ಟಾಂಗ್ ಟುಂಗ್" ಅಂತೆಲ್ಲ, ಅಬ್ಬ ನಮ್ಮ ದೇಶದಲ್ಲಿ ಈ ರೂಢಿ ಇಲ್ಲ ಇದ್ದಿದ್ದರೆ ನಮ್ಮ ಹೆಸರು ಏನಾಗಿರುತ್ತಿತ್ತೋ?

ಹೆಸರಿನಲ್ಲೇನಿದೆ ಅಂತ ಹೇಳೋಕೆ ಹೋದ್ರೆ ಇನ್ನೂ ಬೇಕಾದಷ್ಟಿದೆ ಬಿಡಿ... ಸುಮ್ನೆ ಪಾಪ ನಿಮ್ಮನ್ನ ಎಷ್ಟು ಅಂತ ಕೊರೆಯೋದು ಅಲ್ಲವ?? ಇದನ್ನ ಓದಿದ ಮೇಲೆ ನಿಮಗೂ ಕೂಡ ನಿಮ್ಮ ಹೆಸರಿನ ಬಗ್ಗೆ ತಲೆಯಲ್ಲಿ ಹುಳ ಹೊಕ್ಕ ಹಾಗೆ ಆಗಿದೆ ಅಲ್ಲವಾ? ಬೇಜಾರು ಮಾಡ್ಕೋಬೇಡ್ರೀ  ಸುಮ್ನೆ ತಮಾಷೆಗೆ ಅಂತ ಇಷ್ಟೆಲ್ಲಾ ಕೊರೆದಿದ್ದು.
ಮೇಲೆ ಒಂದು ಮಾತು ಹೇಳಿದ್ದೆ "ಖರೆ ಅಡ್ಡ ಹೆಸರಿನವರು ನಿಜವೇ ಹೇಳುತ್ತಾರ ಅನ್ನುವ ಪ್ರಶ್ನೆ ಬರದೇ ಇರಲಾರದು"ಅಂತ.. ಹೌದಲ್ಲವೇ??

ಸ್ವಾತಂತ್ರ್ಯ:


ಅಂದು ನಡು ರಾತ್ರಿಯಲಿ
ಯಾರೋ ಯಾರಿಗೋ
ಏನೋ ಕೊಟ್ಟು ಹೋದರು
ಏನೊಂದೂ ತಿಳಿಯದ
ಕೆಲ ಜನ ಅದನ್ನೇ
ಸ್ವಾತಂತ್ರ್ಯವೆಂದರು.

ಚಂಚಲ ಚಿತ್ತ:

ಭಾವನೆಗಳ ಸುತ್ತ
ಕನಸುಗಳ ಹುಡುಕುತ್ತ
ಜಾರುತಿದೆ ಅತ್ತಿತ್ತ
ಈ ಚಂಚಲ ಚಿತ್ತ.

ತುಂಬಿದ ಕತ್ತಲೆಗಳ ಸುತ್ತ
ಕೇಳುತಿದೆ ದ್ವೇಷ ಅಸೂಯೆಗಳ ಮಂತ್ರ
ಸುತ್ತಲಿರಲು ಸರ್ಪಗಳ ಹುತ್ತ
ಇದ್ದರೂ ನಮಗೆಲ್ಲಿದೆ ಇಲ್ಲಿ ಸ್ವಾತಂತ್ರ್ಯ.

ಪ್ರೀತಿ ಪ್ರೇಮವ ಬದಿಗಿಟ್ಟು
ತಿಂದ ಮನೆಗೇ ದ್ರೋಹ ಬಗೆಯುವರೆಲ್ಲ
ಭಾವನೆಗಳ ಹರಾಜಿಗಿಟ್ಟು
ಕಾಂಚಾಣದ ಮೋಡಿಗೆ ಕುಣಿಯುತಿಹರೆಲ್ಲ.

ನನ್ನವರಾರಿಲ್ಲ ಇಲ್ಲಿ
ನನಗ್ಯಾರಲ್ಲೂ ನಂಬಿಕೆಯಿಲ್ಲ
ಶುಭ ಕೊರುವವರಿಲ್ಲ ಇಲ್ಲಿ
ಇರುವರು ಬರೀ ವೈರಿಗಳೆಲ್ಲ.

ಜೀವನ ನಡೆಸುವ ಧೈರ್ಯವಿಲ್ಲ
ಈ ಕೊಳಕು ಜಗದಲಿ
ಮೃದು ಮನಕೆ ಸಮಾಧಾನವಿಲ್ಲ
ಹೇಗೆ ನಾ ಬದುಕಲಿ..

ಭಾವನೆಗಳ ಸುತ್ತ
ಕನಸುಗಳ ಹುಡುಕುತ್ತ
ಜಾರುತಿದೆ ಅತ್ತಿತ್ತ
ಈ ಚಂಚಲ ಚಿತ್ತ.

ಮುಂಜಾನೆ ಮಂಜು:



















ಮುಂಜಾನೆಯ ಮಂಜಲ್ಲಿ
ಹೆಜ್ಜೆಯ ಮೇಲೆ ಹೆಜ್ಜೆಯನಿಕ್ಕುತ
ಭವಿಷ್ಯದ ಹುಡುಕಾಟದಲಿ
ಸಾಗುತಿದೆ ನಮ್ಮೀ ಪಯಣ.


ಫೋಟೋ ಕೃಪೆ:ಸೌಮ್ಯ ಭಾಗವತ್.

ಹನಿ ಹನಿ 9:

೧.
ನನ್ನೆದೆಯ
ಗೂಡಲಿ
ನಿನ್ನದೇ
ನೆನಪ
ಹಕ್ಕಿಗಳ
ಚಿಲಿಪಿಲಿ.

೨.
ಗೆಳತಿ...
ನೀನಿಲ್ಲದ ಈ ಬಾಳು ಬಲು ಬೇಸರ,
ನೀನಿಲ್ಲದ ಈ ಬಾಳು ಬಲು ಬೇಸರ,
.
.
.
ನೀನಿದ್ದರೆ ಖರ್ಚಿನದೇ ಮಹಾಪೂರ. :)

೩.
ಪ್ರಿಯೆ..
ನೀ ಜೊತೆಗಿದ್ದರೆ ಸಜಾ
ಇಲ್ಲದಿದ್ದರೆ ಫುಲ್ ಮಜಾ..

ಕೋರಿಕೆ..

ನಿನ್ನೊಲವ
ಮಳೆ ಹನಿಗಾಗಿ
ಕಾದಿದೆ ನನ್ನೀ
ಹೃದಯ ಧರಿತ್ರಿ..

ಪ್ರೀತಿಯ
ಮಳೆ ಸುರಿಸಿ
ಮನವ ತಣಿಸೆ
ಭಾಗ್ಯ ವಿಧಾತ್ರಿ..

ಶುಭರಾತ್ರಿ :

ನಿದ್ರಾದೇವಿಯ
ಮಡಿಲಲಿ
ಲಾಲಿ ಹಾಡ
ಕೇಳುತ
ಮಲಗುವ ಮುನ್ನ
ನಿಮಗೆಲ್ಲ
ಶುಭ ರಾತ್ರಿಯ
ಶುಭ ಸಂದೇಶ.

ಮೋಡವೆಲ್ಲ ಚದುರಿ
ಚಂದಿರ ನಕ್ಕಿರಲು,
ಬಾನಿನ ತುಂಬೆಲ್ಲ
ನಕ್ಷತ್ರ ಮಿನುಗಿರಲು,
ರಾತ್ರಿಯ ಕಂಪಿಗೆ
ನಿದಿರೆ ಬಂದಿರಲು,
ಮಲಗುವ ಮೊದಲು
ನಿಮಗೆಲ್ಲ ಶುಭ ಸಂದೇಶಗಳು..

ಹನಿ ಹನಿ 8 :

ವಿರಹ :

೧.
ನಿನ್ನ
ಅಗಲಿಕೆಯ
ಮನದ
ಗಾಯಕೆ
ನಿನ್ನದೇ
ಸ್ಪರ್ಶದ
ಮುಲಾಮು
ಬೇಕು.

೨.
ನಿನ್ನ ಜೊತೆಗೂಡಿ
ಕಟ್ಟಿದ ಕನಸ ಗೋಪುರ
ನಿನ್ನ ವಿರಹದ
ಬಿರುಗಾಳಿಗೆ ನೆಲಕಚ್ಚಿದೆ.

೩.
ಬಂದೆ ನೀನು
ನನ್ನ ಬಾಳಲಿ
ಮರುಭೂಮಿಯ
ಚಿಲುಮೆಯಂತೆ
ಕ್ಷಣದಲೇ ಮಾಯವಾದೆ
ತೀರಿಸದೆ ಮನದ ದಾಹವ
ಮುಂದೆಲ್ಲಿ ಸಿಗುವೆ
ಅಂತಲೂ ಹೇಳದಂತೆ.

೪.
ನೀ ದೂರಾದೆಯೆಂದು
ಹುಡುಕಿದೆ ನಾ ಎಲ್ಲೆಲ್ಲಿ
ನನಗೆ ತಿಳಿಯಲೇ ಇಲ್ಲ
ಇದ್ದೆ ನೀ ನನ್ನ ಹೃದಯದಲ್ಲಿ.


೫.
ನೀ ಬಂದು
ಹಕ್ಕಿಯಂತೆ
ನನ್ನೆದೆಯಲಿ
ಗೂಡ ಮಾಡಿ
ನೆನಪೆಂಬ
ಮೊಟ್ಟೆಯನಿತ್ತು
ಕಾವು ಕೊಡದೆ
ಹಾರಿ ಹೋದೆಯಲ್ಲ.

೬.
ನೀ ಅತ್ತರೆ
ನನ್ನೆದೆಯಲಿ
ಏನೋ ತೊಳಲಾಟ
ಅದೇ ನೀ ನಕ್ಕರೆ
ನಿಲ್ಲುವುದು
ನನ್ನೆದೆಯ ಬಡಿದಾಟ.

೭.
ಓ ನಲ್ಲೆ
ನೀ ಬಂದು
ಬಿಗಿದಪ್ಪಿ
ನನ್ನೆದೆಯಲಿ
ಬಿಟ್ಟು ಹೋದ
ಕನಸುಗಳು
ನನಸಾಗದೇ
ಕಾಯುತಿದೆ
ನಿನ್ನದೇ
ಪುರಾಗಮಾನವ.

ನಿರೀಕ್ಷೆ:



ನೀ ಒಪ್ಪಿದ ನಂತರ
ವಿವಾಹ ಬಂಧನಕೆ
ಕಾದ ಕ್ಷಣಗಳೆಷ್ಟೋ..

ಬಾಗಿಲಲಿ ಕುಳಿತು
ನಿನ್ನ ನೆನೆಯುತ
ಕಾದ ಕ್ಷಣಗಳೆಷ್ಟೋ..

ನೀ ನಗುತ ತರುವ
ಮೊಳ ಮಲ್ಲಿಗೆಯ ಕಂಪಿಗೆ
ಕಾದ ಕ್ಷಣಗಳೆಷ್ಟೋ..

ಪರದೂರಿಗೆ ಹೋದಾಗ
ನಿನ್ನಾಗಮನವ ಬಯಸಿ
ಕಾದ ಕ್ಷಣಗಳೆಷ್ಟೋ..

ಹುಸಿ ಕೋಪವ ಮರೆತು
ನಿನ್ನೊಲವ ಉಡುಗೊರೆಗೆ
ಕಾದ ಕ್ಷಣಗಳೆಷ್ಟೋ..

ಮಳೆಯಲಿ ನೆನೆಯುತ
ನಿನ್ನ ಬಿಸಿಯಪ್ಪುಗೆಗೆ
ಕಾದ ಕ್ಷಣಗಳೆಷ್ಟೋ..

ಪ್ರೀತಿಯಲಿ ಬಿಗಿದಪ್ಪಿ
ನೀಡುವ ಸಿಹಿ ಮುತ್ತಿಗೆ
ಕಾದ ಕ್ಷಣಗಳೆಷ್ಟೋ..

ಮನ ಕೊರಗಿ ನೊಂದಾಗ
ನೀ ನೀಡುವ ಸಾಂತ್ವನಕೆ
ಕಾದ ಕ್ಷಣಗಳೆಷ್ಟೋ..

ಪ್ರೀತಿಯ ಒಲವ ಬೆರೆಸಿ
ಉಣಿಸುವ ಕೈ ತುತ್ತಿಗೆ
ಕಾದ ಕ್ಷಣಗಳೆಷ್ಟೋ..

ಕಪ್ಪು ಬಿಳುಪ ಜೀವನದಿ
ತುಂಬುವ ಒಲುಮೆ ರಂಗಿಗೆ
ಕಾದ ಕ್ಷಣಗಳೆಷ್ಟೋ..

ಕ್ಷಣ ಕ್ಷಣವ ನೆನೆಯುತ
ಸಿಗುವ ಕ್ಷಣದ ಸುಖಕೆ
ಕಾದ ಕ್ಷಣಗಳೆಷ್ಟೋ..??

ಜೀವನದಲ್ಲಿ ಸಿಗುವ ಕ್ಷಣದ ಸುಖಕೆ ಎಷ್ಟೋ ಮಹತ್ವದ ಕ್ಷಣವನ್ನ ಕಾಯುತ್ತಲೇ ಕಳೆಯುವ ಹೆಣ್ಣಿಗೆ ನನ್ನ ನಮನ.

ಋಣ:























ಓ ಹಡೆದವ್ವ ನನಗೆ ಜನುಮ ನೀಡುವಾಗ ನೀ ಪಟ್ಟ ನೋವೆಷ್ಟೋ ...? 
ಓ ತಂದೆ ನಿಮ್ಮ ಹೆಗಲೆತ್ತರಕೆ ನನ್ನ ಬೆಳೆಸುವಾಗ ಪಟ್ಟ ಕಷ್ಟವೆಷ್ಟೋ ..?

 
ತಿಳಿಯದೆ ನಾ ನೀಡಿದ ಕಷ್ಟಕೆ
ಅವ್ವ ನೀ ಬೆನ್ನ ಸವರಿದ್ದೆ
ತಿಳಿದೇ ಮಾಡಿದ ಎಷ್ಟೋ ತಪ್ಪಿಗೆ
ತಿದ್ದಿ ಬುದ್ಧಿ ಮಾತ ಹೇಳಿದ್ದೆ.

ಅಂದು ನೀ ಹೊಡೆದ ಪೆಟ್ಟಿಗೆ
ಮನೆ ಬಿಟ್ಟು ಓಡಿ ಹೋಗಿದ್ದೆ ,
ಹೊಡೆತವಲ್ಲ ತಂದೆ ಅದು
ಪ್ರೀತಿಯ ಅಪ್ಪುಗೆಯೆಂದು ತಿಳಿಯದೆ .

ನನ್ನ ನಿಮ್ಮೆತ್ತರಕೆ ಬೆಳೆಸಿದ ಕಷ್ಟಕೆ
ಇಂದು ಮನ ತುಂಬಿ ಬಂದಿದೆ,
ನನಗೆಂದೋ ಕಡಿಮೆ ಮಾಡದ
ನಿಮ್ಮ ನೋವು ಇಂದೆನಗೆ ಅರಿವಾಗಿದೆ.

ಜನುಮವೀಡಿ ಜೀತ ಮಾಡಲೇ
ಹೆಗಲ ಮೇಲೆ ಹೊತ್ತು ತಿರುಗಲೇ,
ಇದ್ಯಾವುದು ಸಾಲದಾಗದೆ ಹೋಯಿತಲ್ಲ
ತೀರಿಸಲು ನಿಮ್ಮ ಈ ಋಣವ .

ಮಡದಿಯ ವಿರೋಧವಾದರೇನು
ಜಗವೇ ಎದುರು ನಿಂತರೇನು,
ಬಿಡೆನು ನಾ ನಿಮ್ಮನೆಂದಿಗೂ
ಬಿಡೆನು ನಾನೆಂದಿಗೂ ಬಿಡೆನು.

ನನಗೂ ಇಷ್ಟವಿದೆ ಮಳೆಯಾಗಲು:














ನನಗೂ ಇಷ್ಟವಿದೆ ಮಳೆಯಾಗಲು

ಹೇಳದೆ ಬಂದು ನಿನ್ನ ಸೇರಿ
ಹುಚ್ಚನಂತೆ  ಸ್ಪರ್ಶಿಸಲು,
ಕೂದಲಿನಿಂದ ಬೆನ್ನ ಮೇಲಿಳಿದು
ಮೈಯ್ಯೆಲ್ಲ ತೋಯ್ದು ತಂಪಾಗಿಸಲು.

ಹಣೆಯ ಮೇಲಿಂದ ಇಳಿದು
ಕೆನ್ನೆಯ ರಂಗ ಸವಿಯಲು,
ತುಟಿಗೊಂದು ಸಿಹಿ ಮುತ್ತನೀಡಿ
ಮೊಗದಲಿ ಮಂದಹಾಸ ಮೂಡಿಸಲು

ನನಗೂ ಇಷ್ಟವಿದೆ ಮಳೆಯಾಗಲು...

ಮಿಲನ:















ಇಂದೇಕೋ ಜೀವ ಕಾದಿತ್ತು
ನಲ್ಲನ ಒಡನಾಟಕೆ,
ಅವನ ಆಗಮನವಾಗಿತ್ತು
ನೆನೆದ ಕೆಲ ಹೊತ್ತಿಗೆ.

ನನ್ನ ಮುಖ ರಂಗೇರಿತ್ತು
ಕಂಡವನ ತುಟಿಗೆ,
ದೇಹವೆಲ್ಲ ಬಿಸಿಯಾಗಿತ್ತು
ನನ್ನವನ ಅಪ್ಪುಗೆಗೆ.

ತನು ಮನವೆಲ್ಲ ಕಂಪಿಸಿತ್ತು
ನಲ್ಲನ ತುಂಟಾಟಕೆ,
ನಾಚಿ ಕೆನ್ನೆ ಕೆಂಪೇರಿತ್ತು
ಕೊಟ್ಟ ಸಿಹಿ ಮುತ್ತಿಗೆ.

ಇಂದು ಮನದಾಸೆ ತೀರಿತ್ತು
ಸೇರಿ ನಲ್ಲನ ಜೊತೆಗೆ,
ರಾತ್ರಿಯಿಡೀ ಹೀಗೆ ಕಳೆದಿತ್ತು
ನಮ್ಮೀ ಸರಸದಾಟದೊಳಗೆ.

ಮಳೆರಾಣಿ:



















ವಿರಹ ವೇದನೆಯಲಿ ಜೀವ ಮುದುಡಿತ್ತು
ನಿನ್ನಯ ಸ್ಪರ್ಶವಿಲ್ಲದೆ ಮನ ನೊಂದಿತ್ತು,
ಇಂದು ನನ್ನ ಮನದಾಸೆಗೆ ಮತ್ತೆ ಜೀವ ಬಂದಿತ್ತು
ಕಾರ್ಮೋಡಗಳ ಅಂಚಿನಲ್ಲಿ ನಿನ್ನ ಮೊಗ ಕಂಡಿತ್ತು.

ಬಾನಂಚಿನ ಮೇಘಗಳ ಮಾಲೆಯಿಂದ ಜಿಗಿದು
ನನ್ನಯ ಮನ ತಣಿಸಲು ಬಂದಿರುವೆ ನೀನಿಂದು,
ನೆತ್ತಿಯ ಮೇಲೆ ಬಿದ್ದ ನಿನ್ನ ಹನಿಯ ಸ್ಪರ್ಶಕೆ
ಮನದಲಿ ನವ ಚೈತನ್ಯ ಮೂಡಿದೆಯಿಂದು.

ಹಣೆಯ ಮೇಲಿಂದ ಕೆನ್ನೆಯ ಮೇಲಿಳಿದು
ಹಾಗೆ ಸಿಹಿ ಮುತ್ತನಿಟ್ಟು ತುಟಿಗೊಂದು,
ನಿನ್ನ ಅಪ್ಪುಗೆಯಲಿ ಶರೀರವೆಲ್ಲ ತೋಯ್ದು
ತಂಪಾಗದೆ ಮೈಯ್ಯೆಲ್ಲ ಬಿಸಿಯಾಗಿದೆಯಿಂದು.

ಪ್ರೀತಿಯ ಮಾಯೆ:

ಪ್ರೀತಿಯಲೇ ಪರದಾಟ,
ಪ್ರೀತಿಯಲೇ ಹೊಡೆದಾಟ,
ಪ್ರೀತಿಯಲೇ ನಲಿದಾಟ,
ಪ್ರೀತಿಯಲೇ ಕುಣಿದಾಟ.

ಏನೆಲ್ಲಾ ಇದೆ ಈ ಪ್ರೀತಿಯಲಿ...
ಮನಸು ಮನಸುಗಳ ಮಿಲನದಲಿ.

ಹಾಗೆ ಸುಮ್ಮನೆ:

ಕಿರು ನಗೆಯಲಿ ಎರಡು ಜೀವಗಳ ಮಿಲನವಾಗಿತ್ತು,
ಜಿನುಗಿದ ಮಳೆಹನಿಗೆ ಮನದಲಿ ಕೆಂಗುಲಾಬಿ ಅರಳಿತ್ತು.


ನೆನಪುಗಳಿಂದಲೇ ಕವನ,
ನೆನಪುಗಳಿಂದಲೇ ಜೀವನ,
ನೆನಪುಗಳ ನೆನಪಲ್ಲೇ
ಸಾಗುತಿದೆ ನಮ್ಮೀ ಪಯಣ.


"ಪ್ರಿಯೆ
ಕವಿತೆ ಬರೆದೆ ನಿನ್ನ ಹೊಗಳುತ...
ಓದಿದವರೆಲ್ಲ ಹೋದರು
ನಿನ್ನ ನೋಡಬೇಕೆನ್ನುತ,
ನಿನ್ನ ಸ್ನೇಹ ಬಯಸುತ.."


ನೆನಪೆಂಬುದು ಸಾಗರದ ಅಲೆಯಂತೆ,
ಹೃದಯವೆಂಬುದು ಕಲ್ಲ ಬಂಡೆಯಂತೆ.
ಅಲೆಗಳ ಹೊಡೆತಕ್ಕೆ ಬಂಡೆ ಸವೆಯುವುದಿಲ್ಲ,
ನೆನಪುಗಳಿಲ್ಲದೇ ಹೃದಯ ಮಿಡಿಯುವುದಿಲ್ಲ.


ಮುಂಗಾರಿನ ಮಳೆ ಹನಿ ಹನಿಯಾಗಿ ಸುರಿದಿದೆ,
ಮತ್ತೆ ನನ್ನವಳ ನೆನಪ ತಂದಿದೆ..
ಮರೆಯಲಾಗದೆ ಕಳೆದ ದಿನ ಅವಳ ಜೊತೆ,
ಮತ್ತೆ ಸೇರು ಬಾ ನನ್ನ ಜೊತೆ ಎಂದಿದೆ..







ಬಯಲುಸೀಮೆಯ ಹುಡುಗನೂ,ಹವ್ಯಕ ಹುಡುಗಿಯೂ..



















ಇದೊಂದು ಪುಟ್ಟ ಕಥೆ,ನಮ್ಮ ನಾಯಕ ಪಕ್ಕ ಬಯಲುಸೀಮೆಯ ಪೋರ,ಮತ್ತೆ ನಾಯಕಿ ಹವ್ಯಕ ಕೂಸು.ತಮ್ಮ ತಮ್ಮ ಊರಲ್ಲಿ ಹೈಸ್ಕೂಲ್ ಮುಗಿಸಿ ಈಗ ಕಾಲೇಜ್ ಗೆ ಎಲ್ಲ ಬಿಟ್ಟು ಮಂಗಳೂರಿಗೆ ಬಂದು ಮುಟ್ಟಿದಾರೆ.ಮೂರು ಬೇರೆ ಬೇರೆ ದಿಕ್ಕುಗಳು,ಇರಲಿ ಬಿಡಿ.ನಾಯಕ ನಾಯಕಿ ಇದ್ದ ಮೇಲೆ ವಿಲನ್ ಬೇಡವೇ? ಅವನೂ ಇದಾನೆ, ಇಲ್ಲೇ ಲೋಕಲ್ ಮಂಗಳೂರಿನವನು.ನಮ್ಮ ಈ ಪೋರ ವೆಂಕಿಗೋ ಹವ್ಯಕ ಪೋರಿ ಮೇಲೆ ಲವ್ವೋ ಲವ್ವು, ಇನ್ನು ಈ ಹವ್ಯಕ ಕೂಸು ಶ್ವೇತಂಗೆ ಇವನ ಮೇಲೆ ಲವ್ ಇದ್ದ ಇಲ್ಯ ಹೇಳಿ ಅದಕ್ಕೇ ತಿಳಿದಿಲ್ಲೇ.ಒಂದೊಂದ್ ಸಲ ಒಳ್ಳೆ ಮಾಣಿ ಅನಸ್ತ, ಮತ್ತೊಂದ್ ಸಲ ಕೆಟ್ ಮಾಣಿ ಅನಸ್ತ, ಹಂಗಾಗಿ ಕೂಸು ಯಾವಾಗಲೂ ಕನ್ಫ್ಯೂಸ್ ಅಲ್ಲೇ ಇರ್ತು.ಇನ್ನು ನಮ್ಮ ವಿಲನ್ ಅರವಿಂದ..ಅವನಿಗೂ ಈ ಹುಡುಗಿ ಮೇಲೆ ಕಣ್ಣಿದೆ, ಎಂತ ಮಾಡುದು ಹೇಳಿ ಗೊತ್ತಾಗುದಿಲ್ಲ ಮಾರಾಯ್ರೇ..

ಈಗ ನೀವು ಯೋಚನೆ ಮಾಡಿ ಈ ಮೂವರೂ ಒಟ್ಟಿಗೆ ಸೇರಿ ಮಾತನಾಡ್ತಾ ಇದ್ದರೆ ಹೇಗಿರುತ್ತೆ ಅಂತ.. ಸರಿ ಒಂದು ಸೀನ್ ಕ್ರಿಎಟ್ ಮಾಡಿಯೇ ಬಿಡೋಣ. ಒಂದು ಪಾರ್ಕ್,ಪಾರ್ಕಲ್ಲಿ ಈಗ ಮೂವರು ಒಟ್ಟಿಗೆ ಇದ್ದಾರೆ.ಹೇಗೆ ಅಂತೆಲ್ಲ ಕೇಳಬೇಡಿ ಒಟ್ಟಿಗೆ ಇದಾರೆ. ವೆಂಕಿ ಮತ್ತೆ ಅರವಿಂದ ಇಬ್ಬರೂ ತಮ್ಮ ಪ್ರೀತಿ ವಿಷ್ಯ ಶ್ವೇತ ಮುಂದೆ ಇಟ್ಟಿದಾರೆ,ಈಗ ಹುಡುಗಿ ಯಾರನ್ನ ಚೂಸ್ ಮಾಡ್ತಾಳೆ ಅಂತ ನೋಡೋಣ..
ಮುಂದೆ ಬರೋ ಸನ್ನಿವೇಶದಲ್ಲಿ
Hr  ಅಂದ್ರೆ ಹೀರೋ ವೆಂಕಿ,
Hn  ಅಂದ್ರೆ ಹಿರೋಇನ್ ಶ್ವೇತ,
Vl  ಅಂದ್ರೆ ವಿಲನ್ ಅರವಿಂದ.. ಓಕೆ ನ.. ನಡೀರಿ ಮತ್ತೆ ತಡ ಯಾಕೆ
ರೆಡಿ ೧..೨..೩.. ಆಕ್ಷನ್....

Hr: ಲೇ ನಿಂಗ್ ಎಸ್ಟ್ ಸಲ ಹೇಳಿವ್ನಿ ನಂಗ್ ನಿನ್ ಮೇಲೆ ಲವ್ ಐಯ್ತಿ ಅಂತ,ನಿಮ್ಮೌನ್ ನೀ ಏನೂ ಹೇಳವಲ್ಲಿ?

Hn: ನೀ ಸುಮ್ಮಂಗ್ ಕೂತ್ಕಳಾ.. ನಿಂಗೆ ಸರೀ ಮಾತಾಡುಲೇ ಬತ್ತಿಲ್ಯ ಹೇಳಿ? ಯಾವಾಗ್ ನೋಡದ್ರೂ ಬಯ್ಕತ್ತನೇ
        ಇರ್ತ.. ನೀ ಹಿಂಗೆಲ್ಲ ಮಾತಾಡಿದ್ರೆ ನಾ ನಿನ್ ಕೈಲಿ ಮಾತಾಡ್ತ್ನೆ ಇಲ್ಲೇ ನೋಡು.

Vl: (ಹಿರೋಗೆ):ಅಲ್ಲಾ ನೀವು ಏನು ಹೀಗೆ ಮಾತಾಡೋದು?ನಿಮಗೆ ಅಪ್ಪ ಅಮ್ಮ ಹೇಗೆ ಮಾತಾಡ್ಬೇಕು ಅಂತ
       ಹೇಳಿಕೊಟ್ಟಿಲ್ವ?ಎಂತ ಹೊಲಸು ಶಬ್ದ.. ಬಾಯಲ್ಲಿ ಹುಳ ಬೀಳಲಿಕ್ಕೆ ಉಂಟು ಮತ್ತೆ!

Hn : ಹುಳನೇ ಬೀಳ್ತು ಮತ್ತೆ..

Hr : ಲೇ ತಮ್ಮ ನೀ ಸ್ವಲ್ಪ ಮುಚ್ಕೊಂಡು ಕೂಡ್ಲೇ. ನೋಡ್ ಶೇತ ನಿಂಗ್ ನನ್ ಮ್ಯಾಗ್ ಲವ್ ಐತೋ ಇಲ್ಲೋ ಹೇಳ್ಬುಡು.

Hn : ಅದು ಶೇತ ಅಲ್ದಾ ಮಾಣಿ ಶ್ವೇತ..

Vl : (ಮಧ್ಯದಲ್ಲಿ)ಅಲ್ಲ ನೀವು ಏನು ಶ್ವೇತಂಗೆ ಗದರಿಸುವುದು? ಪಾಪದ ಹುಡುಗಿ ಅಂತ ಹೆದರಿಸುವುದಾ?

Hn : ಇವಂಗೆ ಯಾರ್ ಹೆದರ್ತ? ಇವ ಎಂತ ದೊಡ್ಡ ಗೆಂಡೆನ ಹೇಳಿ..

Hr : ಲೇ ಮಂಗ್ಯಾನ್ಕೆ ನೀ ವಸಿ ಮುಚ್ಕೊಂಡು ಕೂಡು ಅಂತ ಹೇಳಿಲ್ಲ?ಸಾನೆ ದಿವಸದಿಂದ ಕಾಳ್ ಹಾಕ್ಕೊಂಡ್ ಬರಾಕತ್ತಿನಿ
        ಮಧ್ಯದಾಗೆ ನಿಂದೇನ್ಲಾ ಕಿರಿಕ್ಕು?

Vl : (ನಗುತ್ತ) ಕಾಳು ಹಾಕೋಕೆ ಅದೆಂತ ಪಾರಿವಾಳವಾ?

Hn : ಏ ಎಂತದು ಅದು ಹಕ್ಕಿ ಪಿಕ್ಕಿ ಅಂತೆ. ನಾ ಹಕ್ಕಿ ಆದರೂ ಪಾರಿವಾಳ ಅಲ್ಲ ಮತ್ತೆ, ರಣಹದ್ದು ಕುಕ್ ಬಿಡ್ತೆ  ಅಷ್ಟೇ.

Hr : ಬಿಟ್ಟಾಕು ಶೇತ.. ನಾನು ಮುಂಚಿಗಿಂದಾನೂ ಲೈನಲ್ಲಿ ಇವನಿ. ನೀನೂ ಒಂದ್ಕಿತ ಹೇಳಿದ್ದಿ ನನ್
       ಕಂಡ್ರೆ ಇಷ್ಟ ಐತಿ ಅಂತ. ಮತ್ ಲವ್ ಐತಿ ಅಂತ ಹೇಳ್ಬಿಡ್ಲಾ..

Vl : ಎಂತದು ನೀನು ಲೈನಲ್ಲಿ ಇರುವುದು? ನಿನ್ನ ಹಿಂದೆ ಲೈನಲ್ಲಿ ನಾನಿದ್ದೇನೆ ತಿಳಿಯಿತಾ? ನೋಡಿ ಶ್ವೇತ
      ಈಗ ನೀವು ಗೊಂದಲಕ್ಕೆ ಬೀಳಬಾರದು ಆಯಿತಾ? ಇದು ನಿಮ್ಮ ಜೀವನ ಪ್ರಶ್ನೆ ಅಲ್ಲವಾ?
      ನಿಧಾನವಾಗಿ ನಿರ್ಧಾರ ತೆಗೆದುಕೊಳ್ಳಬೇಕು ಆಯಿತಾ?

Hn : (ವೆಂಕಿಗೆ) ಈ ಕೊಡಂಗೆ ಎಷ್ಟ್ ಹೇಳಿದ್ರೂ ಅಷ್ಟೇ..ಅದು ಶೇತ ಅಲ್ದಾ ಶ್ವೇತ ನ ಮಾರಾಯ..
       (ಮನೋಹರ)ನಿಂದೆಂತದ? ನಿಂಗ ನನ್ನ ಎಂತ ಹೇಳಿ ತಿಳಿಕಂಡಿದ್ರಿ? ನಾ ಎಂತ ದೇವಸ್ಥಾನದಲ್ಲಿ
        ಸಿಕ್ಕ ಪ್ರಸಾದವನ? ಲೈನಲ್ಲಿ ಬಂದು ನಿಂತ್ಕಂಡಿದ್ರಡ?

Vl : ಅದು ಹಾಗಲ್ಲ ಮಾರಾಯ್ರೇ.. ಅವನು ಮತ್ತೆ ಯಾಕೆ ಹಾಗೆ ಹೇಳುವುದು,ನಾನು ಮೊದಲು ಲೈನಲ್ಲಿ
      ಇದ್ದೇನೆ ಅಂತ?ಅದಕ್ಕೆ ನಾನು ಹಾಗೆ ಹೇಳಿದೆ ಅಷ್ಟೇ.ತಪ್ಪು ತಿಳಿಬೇಡಿ ಆಯಿತಾ.

Hr : ಶ್ವೇತ, ಶ್ವೇತ, ಶ್ವೇತ.. ಈಗ ಸರಿ ಐತೋ ಇಲ್ಲೋ?
       (ಮನೋಹರಂಗೆ)ಲೇ ನೀ ಏನ್ ಲೈನಾಗ್ ಅದೀಯಲೇ? ಮುಸುಡಿ ನೋಡ್ಕೊಂಡಿಯೋ ಇಲ್ಲೋ ಅರಸಾದಾಗೆ?
       ಆಂ ಮಗನೆ ಊದಿದರೆ ಹಾರ್ಕೊಂಡು ಹೊಗಾಂಗ್ ಅದೀ.. ನಿಮ್ಮೌನ್ ನನ್ ಐಟಂ ಗೆ ಲೈನ್ ಹೊಡಿತಿ?

Vl : ಒಯ್ ಏನು? ಎಂಥದು? ಆ...
        ನಾನು ಹೇಗೆ ಇದ್ರೆ ನಿಮಗೆಂಥ?ಶ್ವೇತಂಗೆ ಇಷ್ಟ ಆದ್ರೆ ಆಯಿತಲ್ಲ? ಶ್ವೇತನೆ ಒಮ್ಮೆ ಹೇಳಿದ್ದುಂಟು
        ನೀವು ಸ್ಮಾರ್ಟ್ ಅಂತ. ಸ್ವಲ್ಪ ದಪ್ಪ ಕಮ್ಮಿ ಅಷ್ಟೇ. ಅದಕ್ಕೆಂತ ದಪ್ಪ ಆಗೋಗೆ ಎಷ್ಟು ದಿನ ಬೇಕು?
        ನಿನ್ ಮುಖ ನೋಡಿದ್ಯಾ ನೀನು ಕನ್ನಡೀಲಿ? ಯಾವುದು ಎಲ್ಲಿಂದ ಶುರುವಾಗಿ ಎಲ್ಲಿಗೆ ಮುಗಿಯುತ್ತೆ
        ಅಂತಾನೆ ಗೊತ್ತಾಗುವುದಿಲ್ಲ..

Hr : ಮುಂಡೆ ಮಗಂದು ನಂಗೆ ಬತ್ತಿ ಹಚ್ಚಾಕತ್ತಿ? ಸುಮ್ಮಕ ನಿನ್ ಕೆಲಸ ಎಷ್ಟ್ ಐತಿ ಅಷ್ಟ ನೋಡ್ಕಂಡು ಹೋಗು.

Vl : ಎಂತದು... ನಿನ್ನದು ಅತಿ ಆಯಿತು, ಎಂತದಾ ಬ್ಯಾವರ್ಸಿ ಅಂ ?? ನಮಗೂ ಬೈಗುಳ ಚೆನ್ನಾಗಿ ಗೊತ್ತುಂಟು
        ಆಯಿತಾ? ಮತ್ತೆ ನಮ್ಮ ಸುದ್ದಿಗೆ ಬಂದರೆ ಅಷ್ಟೇ...

Hr : ಏನ್ ಮಾಡ್ತೀಲೆ? ಏನ್ ಮಾಡ್ತಿ ನೀ? ಮಾಡ್ಕೋ ಹೋಗ.. ಅದೇನ್ ಕಿಸಿತಿ ಅಂತ ನಾನು ನೋಡ್ತೀನಿ.

Hn : ಸುಮ್ಮಂಗ್ ಕೂತಕಳ್ರಾ.. ಬಿಟ್ರೆ ಒಬ್ಬರಿಗೊಬ್ರು ಚಚ್ಕಂಡೆ ಬಿಟ್ತ್ರಿ.... ಎಂತ ಕೆಟ್ ಕೆಟ್ ಬೈಯ್ತ್ರಿ ನಿಂಗ?
         ಹೇಸಗೆ ಆಗ್ತಿಲ್ಯ ಹೇಳಿ ನಿಂಗಕ್ಕೆ?

Hr : ನೋಡ ಮತ್ತೆ ಅವ ಏನ್ ಅನ್ನಾಕತ್ತಾನ್ ಅಂತ. ನನ್ ಕಡಿಯಿಂದ ಸಾರೀ..

Vl : ತಪ್ಪಾಯ್ತು ಆಯಿತಾ?

Hn : ಇದಕ್ಕೆಲ್ಲ ಏನೂ ಕಮ್ಮಿ ಇಲ್ಲೇ...
        ಎಂತದು ನಿಂಗ ಲೈನಲ್ಲಿ ಇದ್ದಿ, ಕಾಳ್ ಹಾಕಿದ್ದಿ ಅಂತೆಲ್ಲ ಹೇಳ್ತಾ ಇದ್ರಲ? ನಿಂಗ ನನ್ ಸಲುವಾಗಿ
        ಎಂತ ಮಾಡಿದ್ರಾ? ಹೇಳ್ರಾ?

Hr : ಶ್ವೇತ ನಿನ್ ಮ್ಯಾಕೆ ಲವ್ ಆದಾಗಿಂದ ಬೇರೆ ಏನೂ ಹೊಳಿದಾಗೈತಿ.. ದಿನ ರಾತ್ರಿ ನಿಂದೆ ಚಿಂತೆ ಚಿನ್ನ..
       ನೀ ಏನ್ ಹೇಳಿದ್ರೂ ನಾ ಮಾಡಾಕ್ ರೆಡಿ ಅದಿನಿ.(ಅಪ್ಪಿ ತಪ್ಪಿ ಜಾನ್ ಗೀನ್ ಕೊಡು ಅಂದೀಯ ಅಂತ
        ಮನಸಲ್ಲೇ ನುಡಿದಿದ್ದ.)

Vl : ಎಂತ ಮಾಡಬೇಕು ಹೇಳಿ? ಇಷ್ಟು ದಿನ ಅವ ಅಡ್ಡ ಗೋಡೆ ಇದ್ದನಲ್ಲ?ಎಂತ ಮಾದುದಕ್ಕೂ ಬಿಡುವದಿಲ್ಲವಾಗಿತ್ತು.
        ಈಗ ನೀನು ಎಂತ ಹೇಳಿದ್ರೂ ನಾನು ಮಾಡೋಕೆ ತಯಾರಿದ್ದೇನೆ ಆಯಿತಾ?

Hn :ನೋಡಿ ನಿಂಗ ಇಬ್ರೂ ನೋಡುಲೆ ಒಳ್ಳೆಯವರ ತರಾನೆ ಕಾಣತ್ರಿ. ನಿಂಗ ಇಬ್ರೂ ಪ್ರೀತಿ ಪ್ರೇಮ ಹೇಳ್ತಾ ಇರ್ತ್ರಿ,
       ಇಷ್ಟಾದರೂ ಒಂದ್ ದಿನ ಆದರೂ ಪ್ರೀತಿಯಿಂದ ಏನಾದರೂ ತಂದ ಕೊಟ್ಟಿರಾ ಹೇಳಿ?

Vl : ಎಂತ ಬೇಕು ಹೇಳು ನಾನು ತಂದು ಕೊಡುತ್ತೇನೆ? (ಕಿಸೆಯಲ್ಲಿ ಕೈ ಹಾಕಿ10 ರೂ. ನೋಟನ್ನ ಶ್ವೇತ ನ ಕೈಗಿಡುತ್ತ)
       ಇಕ ಇಟ್ಟುಕೋ ಚಾಕೊಲೆಟ್ ತೆಗೆದುಕೋ ಆಯಿತಾ..

Hr : ಏನಲೆ ಮಗನೆ ... ಏನ್ ಭಿಕ್ಷೆ ಹಾಕಾಕತ್ತಿ? ಏನ್ ತಿಳ್ಕೊಂಡಿಯಲೇ ಶ್ವೇತನ್ನ? (ತಾನೂ ಕಿಸೆಗೆ ಕೈ ಹಾಕಿ 100  
        ರೂ.ನೋಟು ತೆಗೆದು ಶ್ವೇತನಿಗೆ ಕೊಟ್ಟ) ಇಟ್ಕೋ ನೀ.. ಮಜಾ ಮಾಡು.

Hn : ಎಂತಾದ 10 ರೂಪಾಯ್ ಕೊಡ್ತೆ? ನಾನೆಂತ ಭಿಕ್ಷುಕಿ ತಾರಾ ಕಾಣ್ತ್ನನ??

Vl : ಅಲ್ಲ ನೀವು ಎಂತಕೆ ತಪ್ಪು ತಿಳಿದು ಕೊಳ್ಳುವುದು? ಇಗೋ ತಗೋಳಿ..(ಪಾಕೀಟಿನಿಂದ ತೆಗೆದಿದ್ದ 1000  ರೂ.
       ನೋಟು ಈಗ ಶ್ವೇತ ಕೈಯ್ಯಲ್ಲಿತ್ತು.)

Hn : ಒಯ್ ಎಂತದ್ರೋ ನಿಂಗ ದುಡ್ಡು ಕೊಡ್ತಿದ್ರ ? ಎಂತದಾದ್ರೂ ಕೊಟ್ಟಿದ್ರ ಕೇಳಿದ್ರೆ ಈಗ ದುಡ್ ಕೊಡ್ತಿದ್ದ.

Hr : (ಸಿಟ್ಟಿನಿಂದ ಕೈಲಿದ್ದ ಉಂಗುರ ತೆಗೆದು ಶ್ವೇತಳ ಕೈಗಿಡುತ್ತ ) ಬೇಡ ಅನ್ಬೇಡ ನೀ ಇಟ್ಕೋ..
        ನೀ ನನ್ನಾಕೀ ತಿಳಿತೋ ಇಲ್ಲೋ?

Vl : (ಕೊರಳಲ್ಲಿದ್ದ ಸರ ತೆಗೆದು ಶ್ವೇತನಿಗೆ ಕೊಡುತ್ತ) ಅವನದು ಎಂತದು ಪುಗುಸಟ್ಟೆ ಉಂಗುರ. ಇದನ್ನ ಇಟ್ಟುಕೋ   
        ಆಯಿತಾ?  ನೀನು ನನ್ನವಳೇ ಆದಮೇಲೆ ನನ್ನದೆಲ್ಲ ನಿನ್ನದೇ ಅಲ್ಲವೋ?

Hn : ಇದೆಲ್ಲ ಎಂತದ್ರೋ?

Hr : ನೀ ಮಾತಾಡ ಬೇಡ.. ಅಪ್ಪ ಮಾಡಿ ಇಟ್ಟಾನ್ ಅಂತ ಕೊಡಾಕತ್ತಾನ್... ಮತ್ತೇನಿಲ್ಲ..
       (ಮನೋಹರನಿಗೆ) ಎನಲೇ ಸೂಳೆ ಮಗನೆ? ಏನ ನೀ ಏನ್ ಶ್ವೇತಂಗೆ ಮಾರಾಕ್ ತಗೊಂಡಿ?
        ಎನಲೇ ಮಂಗ್ಯಾನಕೆ?

Vl : ನಿಂದೆಂತದ ಬ್ಯಾವರ್ಸಿ? ನಿಮ್ಮ ಅಪ್ಪನದು ನಾನೇನು ಕೊಟ್ಟಿಲ್ಲ ಅಲ್ಲವ? ಮತ್ತೆಂತದು? ನಾಯಿಗೆ ಹುಟ್ಟಿದವನೇ?

Hn : ಸ್ವಲ್ಪ ಸುಮ್ಮಂಗೆ ಇರತ್ರಾ?

Hr : (ಶ್ವೇತನ್ನ ಬದಿಗೆಳೆದು, ಮನೋಹರನ ಕಡೆಗೆ ಹೋಗುತ್ತಾ) ಅವನ್ ಅವೌನ್..  ನಿನ್ ಇವತ್ ಬಿಡಾಕಿಲ್ಲಲೇ ...
       ಸಾಯ್ಸೆ ಬಿಡ್ತೀನಿ..

Vl : (ತಾನೂ ಮುಂದಾಗುತ್ತ)ಬಾರಾ ನಾನು ನೋಡೇ ಬಿಡ್ತೀನಿ ಎಂತ ಮಾಡ್ತೆ ಅಂತ..

ಧಿಶೂಂ ಧಿಶೂಂ ಅಂತ ಹೊಡೆದಾಟ ಶುರುವಾಯ್ತು ನೋಡಿ. ಈ ಮಧ್ಯದಲ್ಲಿ ಶ್ವೇತ ಕಿರುಚಾಡಿದ್ದು ಇಬ್ರಿಗೂ ಕೆಳಿಸ್ತಲೇ ಇರಲಿಲ್ಲ. ಇವನ್ನೆಲ್ಲ ದೂರದಿಂದಲೇ ನೋಡುತ್ತಿದ್ದ ಇವರ ಕಾಲೆಜಿನವನೇ ಆದ ರಹೀಮ ಅಲ್ಲಿಗೆ ಬಂದು ಇಬ್ಬರ ಜಗಳವನ್ನ ಕ್ಷಣದಲ್ಲೇ ಬಿಡಿಸಿ, ಇಬ್ಬರನ್ನೂ ಬದಿಗೊತ್ತಿ

ರಹೀಮ: ಏನು ನಿಮ್ಮದು ಏಕೆ ಜಗಳ ಮಾಡ್ಲಿಕೆ ಉಂಟು? ಯಾಕೆ ಚೋಟೆ ಚೋಟೆ ಮಕ್ಳಿದು ಹಾಗೆ ಫೈಟಿಂಗ್ ಮಾಡಿದ್ದು?

Hn : ಇಬ್ಬರೂ ನನ್ನ ಪ್ರೀತಿ ಮಾಡ್ತೀನಿ ಅಂತ ಬಂದ, ದುಡ್ಡು ಚೈನು ಉಂಗರ ಎಲ್ಲ ಕೊಟ್ಟ ಈಗ ಹೊಡ್ದಾಡ್ಕತ್ತಿದ್ದ..

ರಹಿಮ: ಏನು ನಿಮ್ದುಕೆ ಲವ್ ಆಗಿದೆ. ಲವ್ ಗೆ ಅಂದ್ರೆ ಏನು ಅಂತ ತಿಳ್ದಿದೆ ನಿಮ್ದುಕೆ? ದುಡ್ಡು ಕಾಸು ಕೊಟ್ಟರೆ
           ಪ್ರೀತಿಗೆ ಸಿಗುತ್ತೆ ನಿಮ್ದುಕೆ? ಕಾಸು ಮುಗಿದ ಮೇಲೆ ಪ್ರೀತಿಗೆ ಹಾಗೆ ಇರುತ್ತೆ? ಅಂ? ಪ್ರೀತಿಗೆ ಅಂದ್ರೆ ಏನು
           ಅಂತ ಗೊತ್ತಿಲ್ದೆ ನಿಮ್ದುಕೆ ಪ್ರೀತಿಗೆ ಹೇಗೆ ಆಯ್ತು? ನಿಮ್ದುಕೆ ಆಗಿದ್ದು ಪ್ರೀತಿ ಅಲ್ಲ, ಹುಡುಗಿ ನೋಡಿದ ಕೂಡಲೇ
           ಓ ಎಂತ ಫಿಗರು ಅಂತ ಹೇಳಿ ಆಗಿದ್ದು ಬರೀ ಆಕರ್ಷಣೆ ಮಾತ್ರ. ನಾನು ಏನು ಹೇಳಿದ್ದು ಗೊತ್ತಾಯ್ತು ನಿಮ್ದುಕೆ?    
           ನಿಮಗೆಲ್ಲಿ ಗೊತ್ತಾಗಬೇಕು.? ಪ್ರೀತಿಗೆ ಅಂದ್ರೆ ಏನು ಅಂತಾನೆ ಗೊತ್ತಿಲ್ಲ ನಿಮ್ದುಕೆ.ದುಡ್ಡು ಕಾಸಿಗೆ ಪ್ರೀತಿ ಬರುತ್ತೆ?
           ಇಲ್ಲ ಒಳ್ಳೇದು ಮನಸಿಗೆ ಇರ್ಬೇಕು. ಎರಡು ಮನಸು ಒಂದಾರೆ ಮಾತ್ರ ಅದು ಪ್ರೀತಿಗೆ ಆಗುತ್ತೆ. ಒಬರನ್ನ
           ಒಬ್ಬರು ಅರ್ಥಗೆ ಮಾಡ್ಕೊಬೇಕು.. ನಿಮ್ದುಕೆ ಒಬ್ರಾದ್ರೂ ಹುಡ್ಗಿದು ಮನಸಲ್ಲಿ ಏನಿದೆ ಅಂತ ತಿಳ್ಕೊಳ್ಳೋಕೆ
           ಪ್ರಯತ್ನ ಮಾಡಿದೆ? ಇಲ್ಲ? ಮತ್ತೆ ನಿಮ್ದುಕೆ ಪ್ರೀತಿಗೆ ಹೇಗೆ ಆಯ್ತು? ದಿಲ್ ಗೆ ದಿಲ್ ಸೇರಿದರೆ ಮಾತ್ರ ಪ್ಯಾರ್ಗೆ
           ಆಗುತ್ತೆ.(ಶ್ವೇತನಿಗೆ ಉದ್ದೇಶಿಸಿ) ಅಲ್ಲ ನಿಮ್ದುಕೆ ತಿಳಿಲಿಲ್ಲ ? ಇವರದ್ದು ಹುಚ್ಚು ಹುಚ್ಚಾಗಿ ಏನೇನೋ ಮಾಡ್ತಿದೆ
           ಅಂತ? ನೀವು ಹುಡ್ಗೀರು ಸರಿಗೆ ಇದ್ರೆ ಎಲ್ಲ ಸರಿ ಇರುತ್ತೆ. ನಿಮ್ದುಕೆ ಏನು ಹೇಳ್ತದೆ ? ನಾನು ಹೇಳಿದ್ದು
           ಸರಿಗೆ ಇದೆ?

ತದೇಕಚಿತ್ತದಿಂದ ನೋಡುತ್ತಿದ್ದ ಶ್ವೇತ ಒಮ್ಮೆಲೇ ರಹಿಮನನ್ನ ಉದ್ದೇಶಿಸಿ:
"ನಿಮ್ಮದು ಮೇಲೆ  ಲವ್ ಗೆ ಆಗಬುಟ್ಟೈತೆ
ನಮ್ದುಕೆ ಪ್ರ್ಯಾರಗೆ ಆಗಬುಟ್ಟೈತೆ, ನಿಮ್ಮದು ಮೇಲೆ
ನಮ್ದುಕೆ ಪ್ರ್ಯಾರಗೆ ಆಗಬುಟ್ಟೈತೆ"   ಅಂತ ರಹಿಮನ ಕೆನ್ನೆಗೇ ಮುತ್ತಿಡಬೇಕೇ?


* ಹಾಸ್ಯಕ್ಕೆಂದು ಬರೆದ ಈ ಪುಟ್ಟ ಕಥೆ ಯಾರ ಮನವನ್ನ ನೋಯಿಸಲಾಗಲಿ ಅಥವಾ ಯಾರನ್ನೂ ದೂಷಿಸಿ ಬರೆದಿದ್ದಲ್ಲ.
ಕೆಲವು ಅವಾಚ್ಯ ಶಬ್ಧಗಳನ್ನ ಉಪಯೋಗಿಸಿದ್ದೇನೆ. ಇದರಿಂದ ಯಾರದ್ದೇ ಮನಸ್ಸಿಗೆ ನೋವಾಗಿದ್ದಲ್ಲಿ ಕ್ಷಮೆ ಇರಲಿ.
- ಇಂತಿ ನಿಮ್ಮವ.

 






ಹನಿ ಹನಿ 7:

ಪ್ರೀತಿ:
ಇಲ್ಲಿ ಬರೆದಿರುವ ಕವನಗಳು ಎರಡು ಜೀವಗಳ ನಡುವಿನ ಪ್ರೀತಿಯ ಬಗ್ಗೆ ಮಾತ್ರ.


ಪ್ರೀತಿಗೆ ಎಂದೂ ಸಾವಿಲ್ಲ ಎನ್ನುವರೆಲ್ಲ,
ಆದರೆ ಪ್ರಿತಿಸಿದವರು ಸಾಯುವರಲ್ಲ ??


ದಿನವಿಡೀ ಪ್ರೀತಿ ಪ್ರೇಮವೆಂದು ಅಲೆದಾಡುವರು
ಸಿಗದ ಪ್ರೀತಿಯ ತೆಗಳುತ ರಾತ್ರಿ ಕುಡಿಯುವರು.


ಪ್ರೀತಿಯೆಂಬ ಮಾಯೆಗೆ ಬಲಿಯಾಗದವರಿಲ್ಲ...
ಪ್ರೀತಿಯ ಸುಳಿಗೆ ಸಿಕ್ಕು ನರಳಾಡದವರಿಲ್ಲ ...
ಏನೀ ಪ್ರೀತಿ ಮಾಯೆ,ಏನೀ ಪ್ರೀತಿಯ ಛಾಯೆ?
ಯಾಕೋ ಏನೋ ನನಗೆಂದೂ ಅದು ಕಾಡಲಿಲ್ಲ.

 

ಹನಿ ಹನಿ 6:

ಪ್ರಿಯೆ ಕಣ್ಣೆದುರಿಗೆ ಸದಾ ನೀನಿರುವೆ..
ರಾತ್ರಿ ಕಣ್ಮುಚ್ಚಿದಾಗಲೂ ನೀನೆ ಕಾಣುವೆ.

ನೀ ಎದುರಿಗಿದ್ದಾಗ ಮಾತನಾಡಲು ಹೆದರಿದೆ
ರಾತ್ರಿ ಕನಸಿನಲಿ ಪ್ರಣಯ ಗೀತೆ ಹಾಡಿದೆ..

ಹಗಲಿನಲಿ ನಿನ್ನ ಜೊತೆ ತಿರುಗಾಟ
ಇರುಳಿನಲಿ ನೀನಿಲ್ಲದೆ ಪರದಾಟ..

ಪ್ರಿಯೆ ದಿನವಿಡೀ ನಿನ್ನ ಜೊತೆಯಲ್ಲೇ ಇರುವೆ
ಮತ್ತೆ ಕನಸಿನಲ್ಲೂ ಯಾಕೆ ಬಂದು ಕಾಡುವೆ ..

ಹಗಲಿರುಳು ಸದಾ ನಿನ್ನದೇ ಧ್ಯಾನ
ಹೀಗಾದರೆ ಹೇಗೆ ನನ್ನ ಜೀವನ ..?



ಹನಿ ಹನಿ 5:

ಗಂಡನ ಗೋಳು:
 
ಬೃಹತ್ ಗಾತ್ರದ ಶರೀರ
ಇಷ್ಟು ದೊಡ್ಡ ಮೀಸೆ ಹೊತ್ತ
ನನಗೇ ಹೆದರದ ನನ್ನಾಕೆ
ಎರಡೇ ಮೀಸೆ ಹೊತ್ತ
ಒಂದು ಪುಟ್ಟ ಜಿರಳೆಗೆ
ಹೆದರುವಳಲ್ಲ...!
ಕಾಡದ ಪ್ರಶ್ನೆ:
ಎಲ್ಲರು ಅವಳನು ಹೊಗಳಿ
ರಂಭೆ ಮೇನಕೆಯೆಂದರು,
ನಾ ಕೇಳಿದೆ ಅವರಿಗೆ
ಯಾರಾದರೂ ನೋಡಿರುವಿರಾ
ರಂಭೆ ಮೇನಕೆಯರನು?
ಅದಕೆ ಅವರೆಂದರು
ಯಾರನ್ನ ಹೊಗಳಿದೆವೋ
ಅವಳಿಗೇ ಈ ಪ್ರಶ್ನೆ ಹೊಳೆದಿಲ್ಲ
ಮಧ್ಯದಲ್ಲಿ ನಿನ್ನದೇನು ಎಂದು?

ವಿಪರ್ಯಾಸ:

ನಿನ್ನ ಮೊಗ ಚೆಂದವೆಂದೆ,
ಸುಮ್ಮನೆ ತಲೆಯಾಡಿಸಿದಳು.

ನಿನ್ನ ರೂಪಕೆ ಮನ ಸೋತೆನೆಂದೆ,
ಮುಗುಳ್ನಕ್ಕು ಸುಮ್ಮನಾದಳು.

ನೀನೆಂದರೆ ನನಗಿಷ್ಟವೆಂದೆ,
ನಕ್ಕು ತಲೆ ಕೆಳಗೆ ಹಾಕಿದಳು.

ನಾ ನಿನ್ನ ಪ್ರೆಮಿಸುತ್ತಿದ್ದೆನೆಂದೆ,
ಆಗಲೂ ಮೌನವಾಗಿದ್ದಳು.
..
..
ಯಾಕೋ ಎಲ್ಲೋ ಎಡವಟ್ಟಾಗಿದೆ ಎಂದೆನಿಸಿತು.
ಕೊನೆಗೆ ತಿಳಿಯಿತು ಅವಳು ಕಿವುಡಿಯೆಂದು....!


ನುಡಿಮುತ್ತುಗಳು:

"ಸಾಧನೆಗೆ ಗುರಿಗಿಂತ ಛಲವೇ ಮುಖ್ಯ"

"ಪ್ರತಿಫಲದ ಅಪೇಕ್ಷೆಯಿಲ್ಲದೆ ಮಾಡಿದ ಸಹಾಯ ಎಂದಿಗೂ ದೊಡ್ಡದು."

"ಜೀವನದಲ್ಲಿ ನೀನೊಬ್ಬನೇ ಏನಾದರೂ ಸಾಧಿಸಿ ಮೇಲೆ ಬರುವುದಕ್ಕಿಂತ ಹತ್ತು ಜನರನ್ನ ಮೇಲೆ ತಂದರೆ ಅದಕ್ಕಿಂತ ದೊಡ್ಡ ಸಾಧನೆ ಬೇರೊಂದಿಲ್ಲ."

"ಜೀವನದಲ್ಲಿ ಎಂದೂ ಯಾರಿಂದಲೂ ಸಹಾಯದ ಅಪೇಕ್ಷೆಯನ್ನ ಇಡಬಾರದು. ಯಾಕೆಂದರೆ ನಾವು ಕಷ್ಟದಲ್ಲಿ ಇದ್ದಾಗ ಯಾರಾದರೂ ಸಹಾಯ ಮಾಡದಿದ್ದರೆ ಅದಕ್ಕಿಂತ ದೊಡ್ಡ ಯಾತನೆ ಬೇರೊಂದಿಲ್ಲ."

"ದೇವರಲ್ಲಿ ಎಂದಿಗೂ ಕೇವಲ ಸ್ವಂತದ ಏಳಿಗೆಯಾಗಲಿ ಅಂತ ಬೇಡಿಕೊಳ್ಳದೆ ಹತ್ತು ಜನರ ಏಳಿಗೆಯಾಗಲಿ ಅಂತ ಬೇಡಿಕೊಳ್ಳಿ. ದೇವರ ಕೊಡುವ ವರಕ್ಕಿಂತ ಆ ಹತ್ತು ಜನರನ್ನ ಉದ್ಧಾರ ಮಾಡಿದ ಪುಣ್ಯ ಎಷ್ಟೋ ದೊಡ್ಡದು"

"ಮನುಷ್ಯನಿಗೆ ಯಾವಾಗ ಒಂದು ವಸ್ತು ಸುಲಭವಾಗಿ ಸಿಗುವ ಹಾಗೆ ಇರುತ್ತೋ ಆಗ ಅದರ ಬೆಲೆ ಗೊತ್ತಿರುವುದಿಲ್ಲ, ಆದರೆ ಯಾವಾಗ ಆ ವಸ್ತುವಿನ ಬೆಲೆ ತಿಳಿಯುತ್ತದೋ ಆಗ ಅದು ಸುಲಭವಾಗಿ ಸಿಗುವುದಿಲ್ಲ."
 

ಹನಿ ಹನಿ 4:

ಗಂಡಸರ ಪಾಡು:

ಮದುವೆಗೆ ಮೊದಲು,
ಪ್ರಿಯೆ ಮತ್ತೆ ಯಾವಾಗ ಸಿಗುವೆಯಾ?
ಮದುವೆಯ ನಂತರ,
ತವರಿಗೆ ಯಾವಾಗ ಹೋಗ್ತಿಯಾ??

ಮದುವೆಗೆ ಮೊದಲು,
ಚೆಲುವೆ ನಾ ನಿನ್ನ ಪ್ರೀತಿಸುವೆ
ಮದುವೆಯ ನಂತರ,
ನಾ ಏಕೆ ಪ್ರೀತಿ ಮಾಡಿದೆ?

ಮದುವೆಗೆ ಮೊದಲು,
ಹೀರೋ ನಂಬರ್ ೧
ಮದುವೆಯ ನಂತರ,
ಕೂಲಿ ನಂಬರ್ ೧

ಮದುವೆಗೆ ಮೊದಲು,
ನಾ ನಿನ್ನ ಬಿಡಲಾರೆ.
ಮದುವೆಯ ನಂತರ,
ನಾ ನಿನ್ನ ಸಹಿಸಲಾರೆ.

ಮದುವೆಗೆ ಮೊದಲು,
ಏನಾದರೂ ಮಾತನಾಡುತಿರು
ಮದುವೆಯ ನಂತರ,
ಒಂದು ದಿನವಾದರೂ ಸುಮ್ಮನಿರು.

ಮದುವೆಗೆ ಮೊದಲು,
ಆಯ್ ಲವ್ ಯು.
ಮದುವೆಯ ನಂತರ,
ಫುಲ್ ನೋವೆ ನೋವು.


ಹುಡುಗರ ಫೇಸ್ ಬುಕ್ ಗೋಳು:

ಎಂದೂ ಬರದ ಫ್ರೆಂಡ್ ರಿಕ್ವೆಸ್ಟ ಗಳು,
ಮೆಸೇಜ್ ಇಲ್ಲದ ಇನ್ ಬಾಕ್ಸ್ ಗಳು.
ಲೈಕೇ ಇಲ್ಲದ ಒಳ್ಳೆ ಫೋಟೋಗಳು
ಇದುವರೆಗೂ ಕಾಣದ ಕಾಂಮೆಂಟುಗಳು.

ತಲೆ ಕೆಡಿಸುವ ಪ್ರೊಫೈಲ್ ಫೋಟೋಗಳು
ರಿಕ್ವೆಸ್ಟ್ ಅಕ್ಸೆಪ್ಟ್ ಮಾಡದ ಪೀಸುಗಳು.
ಬರೀ ಕಾಡುವ ಟ್ಯಾಗು ಶೇರುಗಳು
ಯಾರೂ ಮೂಸಿ ನೋಡದ ವಾಲ್ ಪೋಸ್ಟುಗಳು

ಗುಡ್ ಮಾರ್ನಿಂಗ್,ಗುಡ್ ನೈಟುಗಳು
ಹಲೋ ಹಾಯ್ ಹೌ ಆರ್ ಯು ಗಳು,
ಇವೇ ನಮ್ಮ ದಿನ ನಿತ್ಯದ ಪಾಡುಗಳು
ಇವೇ ನಮ್ಮ ಫೇಸ್ ಬುಕ್ ಗೋಳುಗಳು.

ಆದಷ್ಟು ಬೇಗ "ಹುಡುಗಿಯರ
ಫೇಸ್ ಬುಕ್ ಗೋಳು" ಬರಲಿದೆ.

ಹನಿ ಹನಿ 3:

ನಿನ್ನಯ ಸ್ಪರ್ಶದಿಂದ ಬಂದ ಹರುಷ
ಎಂದೆಂದೂ ಮಾಸದಿರಲಿ ಈ  ನಿಮಿಷ.

ನಿಮಿಷದಲ್ಲಿ ಆದವು ಸುಂದರ ಕವನಗಳು..
ಮರೆಯದಿರಲಿ ಎಂದಿಗೂ ಮನದಾಳದ ಮಾತುಗಳು.

ರಾತ್ರಿಯಲಿ ಇರಲಿ ಸುಂದರ ಕನಸುಗಳು,
ಜೀವನದಲಿ ಸದಾ ಬರಲಿ ಶುಭ ದಿನಗಳು..

ಮನದಾಳದ  ಮಾತೊಂದ ನೀ ನುಡಿದೆ ಗೆಳೆಯ,
ಹೊರಗೆಳೆದೆ ನನ್ನ ನೆನಪುಗಳ ಸೇರೆಮಾಲೆಯ.


ನೆನಪುಗಳ ಸರಮಾಲೆಯಿದೆ ನನ್ನ  ಮನದಲಿ,
ಕೇಳುವ ಜನರಿಲ್ಲದೆ ನಾ ಹೇಗೆ ಹಾಡಲಿ.

ಕವನ ಬರೆಯೋದು ನನಗೇನೂ ಹೊಸದಲ್ಲ,
ಆದರೆ ಅದನ್ನು ಕೇಳುವ ಜೀವ ಜೊತೆಗಿಲ್ಲ...


ಹನಿ ಹನಿ 2:

ಹುಡುಗರ ಪಾಡು:

ಹುಡುಗಿ ಸಿಗದೇ ಇದ್ರೆ
ಲೈಫು ಫುಲ್ ಬೋರು,
ಹುಡುಗಿ ಸಿಕ್ಕ ಮೇಲೆ
ಫುಲ್ ಅವಳದೇ ಜೋರು..

ಹುಡುಗಿ ಏನೋ ಸ್ಲಿಮ್ಮು
ಜೀನ್ಸ್ ಪ್ಯಾಂಟು ಟೀ ಶರ್ಟು
ಅವಳ ನೋಡಿದ ಮೇಲೆ
ನಾನಾದೆ ಫುಲ್ ಟೈಟು.

ಹುಡುಗಿ ಸಿಗುವ ಮೊದಲು
ನಾನೊಬ್ಬ ಜೋಕರ್,
ಹುಡುಗಿ ಸಿಕ್ಕ ಮೇಲೆ
ಪೂರಾ ಪಾಪರ್.

ಹುಡುಗಿ ಸಿಗುವ ಮೊದಲು
ಓನ್ಲಿ ಪರ ಪರ
ಹುಡುಗಿ ಸಿಕ್ಕ ಮೇಲೆ
ಫುಲ್ ಹರ ಹರ..


ಗಂಡಸರ ಪಾಡು:

ಹೆಂಡತಿ ತವರಲಿದ್ದರೆ
ವಿರಹ ವೇದನೆ,
ಅದೇ ಮನೆಯಲಿದ್ದರೆ
ನೋವ ಯಾತನೆ..

ಮದುವೆಗೆ ಮೊದಲು ಮುಂಗಾರು ಮಳೆ
ಹನಿ ಹನಿಯಾಗಿ ಸುರಿದಿದೆ,
ಮದುವೆಯ ನಂತರ ನನ್ನ ಜೀವನ
ಅದೇ ನೀರಲಿ ಮುಳುಗಿ ಹೋಗಿದೆ.

ಮದುವೆಗೆ ಮೊದಲು ನಿನ್ನ ಮೊಗದಲಿ
ಚಂದಿರ ಕಾಣುತ್ತಿದ್ದ,
ಮದುವೆಯ ನಂತರ,ನನ್ನ ಬಾಳಿಗೇ ಗ್ರಹಣ ಹಿಡಿದಿದೆ
ಇನ್ನೆಲ್ಲಿಯ ಚಂದಿರ?

ಮದುವೆಯಾಗುವವರೆಗೂ ನಾನಾಗಿದ್ದೆ
ಒಬ್ಬ ಅಮರ ಪ್ರೇಮಿ,
ಮದುವೆಯಾದಮೇಲೆ ತಂದುಕೊಂಡಂತಾಗಿದೆ
ಜೀವನದಲಿ ದೊಡ್ಡ ಸುನಾಮಿ.

ಹುಟ್ಟು ಸಾವಿನ ಮಧ್ಯೆ ನಾಲ್ಕೈದು ದಿನ:








ಆಟವಾಗಿತ್ತು ಅಂದು ಪ್ರೇಮವೆಂಬುದು
ಪ್ರೀತಿಯ ಭಾಷೆ ಎನೂಂದೂತಿಳಿಯದೆ,
ಸ್ನೇಹವೆಮಬುದಷ್ಟೇ ತಿಳಿದಿತ್ತು ನಮಗೆ
ಆಡುವುದೊಂದೇ ಗೊತ್ತಿತ್ತು ಮರದ ಕೆಳಗೆ.

ಉದಯವಾಯಿತಿಂದು ನಮ್ಮೀ ಪ್ರೀತಿ
ಎರಡು ಹೃದಯದ ಮಿಲನವಾಯಿತು,
ಜಗದ ನೋವ ಮರೆತ ನಮಗೆ
ದಿನವಿಡೀ ಪ್ರೇಮ ಪಾಠವಾಯಿತು.

ಪ್ರೀತಿ ಪ್ರೇಮ ಮುಗಿಯಿತಿಂದು
ನಮಗೆ ಮದುವೆಯಾಯಿತು,
ಎರಡು ಮಕ್ಕಳ ಜನುಮವಾಗಿ
ಸಂಸಾರದ ಭಾರ ತಿಳಿದಾಯಿತು.

ವ್ರುದ್ಧಾಪ್ಯವು ಬಂದೊದಗಿದೆ ಈಗ
ಏನೊಂದು ಬೇಡವಾಗಿದೆ,
ನೋಡದ ಮಕ್ಕಳ ಕಂಡು
ಈ ಮುದಿ ಜೀವ ಕೊರಗಿದೆ.

ಇಷ್ಟು ವರ್ಷ ಜೊತೆ ನಡೆದ ಜೀವ
ಇಂದು ನನ್ನ ಬಿಟ್ಟು ದೂರವಾಗಿದೆ,
ಕಳೆದ ನೆನಪ ಮೆಲುಕ ಹಾಕುತ
ಮನವು ಕೊನೆಯ ದಿನವ ಎಣಿಸುತಿದೆ.

ಹುಟ್ಟು ಸಾವ ನಡುವಿನ ನಾಲ್ಕೈದು ದಿನ
ಹೀಗೆ ಕಳೆದು ಹೋಗಿದೆ,
ಯಾರು ಬಂದರು,ಯಾರು ಹೋದರು
ಏನೊಂದೂ ತಿಳಿಯದೆ.





ಗೆಳತಿ:



ನೀ ನನ್ನ ಗೆಳತಿ
ಈ ಮನದ ಒಡತಿ,
ಹುಚ್ಚು ಕನಸುಗಳಿಗೆ
ನೀ ಬೇಲಿ ಹಾಕುತಿ.

ದೂರವಿದ್ದರೂ ಸದಾ
ನನ್ನೇಳಿಗೆಯ ಬಯಸುತಿ,
ನನ್ನ ಗೆಲುವ ನಗುವಿಗೆ
ಸದಾ ನೀ ಹರಸುತಿ.

ಸ್ನೇಹದ ಒಲುಮೆಯ
ಕಾಡಿ ನೀ ಬೇಡುತಿ,
ಕಾಣದ ಪ್ರೀತಿಯ
ಸದಾ ನೀ ನೀಡುತಿ.

ಜೀವನದ ಪಾಠವ
ಮರೆಯದೆ ನೀ ತಿಳಿಸುತಿ,
ಒಲುಮೆ ಸಂಧ್ಯಾರಾಗವ
ದಿನವೂ ನೀ ಹಾಡುತಿ.

ಹೃದಯದ ಬೇಗೆಯ
ಕಡಿಮೆ ನೀ ಮಾಡುತಿ,
ಮನದ ನೋವಿಗೆ
ನೀ ಔಷಧವ ನೀಡುತಿ

ಏನೆಂದು ಹೊಗಳಲಿ
ನಾ ನಿನ್ನ ಓ ಗೆಳತಿ,
ಆಗಿರುವೆ ನನ್ನೆಲ್ಲ ಸಾಧನೆಗೆ
ನೀ ಕರುಣಾ ಮೂರುತಿ....











ಹನಿ ಹನಿ:

ಈ ಕವನ ಬರೆಯೋದು
ಸುಮ್ನೆ ಟೈಮ್ ವೇಷ್ಟು,
ಮಾಡಿದರಾಯಿತು ಎಲ್ಲಿಂದಾದರೂ
ಕಾಪಿ ಪೇಸ್ಟು .....!

ಹೊದೊರೆಲ್ಲ ಹೋಗಲಿ
ದೂರ ದೂರ,
ಸ್ವಲ್ಪವಾದರೂ ಕಮ್ಮಿಯಾಗಲಿ
ನಮ್ಮನೆ ಭಾರ..

ಮುಂದಿನ ಕವನ ಪುರುಷರಿಗೆ ಮಾತ್ರ...

ಮದುವೆಗೆ ಮುಂಚೆ ಹೇಳುವರು
ಈ ಲೈಫು ತುಂಬಾ ಗ್ರೇಟು,
ಮದುವೆಯಾದ ನಂತರ
ಆಗಿಗಿರುವರು ಫುಲ್ ಟೈಟು!

ಮದುವೆಗೆ ಮುಂಚೆ ಎಲ್ಲ ಕೊರಗುವರು
ವಿರಹ ವೆದನೆಯೆಂದು,
ಮದುವೆಯ ನಂತರ ಕೊರಗುವರು
ಪತ್ನಿ ತವರಿಗೆ ಹೋಗಿಲ್ಲವೆಂದು.

ಮದುವೆಗೆ ಮೊದಲು ಅವಳು ಬಲು ಸುಂದರಿ
ಮದುವೆಯಾದ ಮೇಲೆ ಆಗಿರುವಳು ಬಜಾರಿ..!
ಮದುವೆಗೆ ಮೊದಲು ಅವನೊಬ್ಬ
ಶೂರ ವೀರ ಗೆಲುವಿನ ಸರದಾರ.
ಮದುವೆಯಾದ ಮೇಲೆ
ಬರೀ ಪರಪರ ಪರಪರ.

 

ನಾಂದಿ:


ಸಾಕಿನ್ನು ಅಂಬೆ ಗಾಲಿಡುವುದ ಬಿಟ್ಟು
ನಡೆಯಬೇಕಾಗಿದೆ ತಲೆಯ ಎತ್ತಿ,
ಕೊಳಚೆ ಕೊಳಗೇರಿಯ ಸ್ವಚ್ಛಗೊಳಿಸಿ
ಸಮಾಜವ ಸುಧಾರಿಸಬೇಕಾಗಿದೆ ಮತ್ತೆ.

ಬರೀ ನಡೆದರೆ ಸಾಲದಾಗಿದೆ ಇಂದು
ಓಡಬೇಕಾಗಿದೆ ಹುಚ್ಚು ಜನರ ಜೊತೆ,
ದುಗುಡ ದುಮ್ಮಾನಗಳ ಬದಿಗೊತ್ತಿ
ಜಗಕೆ ಎದೆಯೊಡ್ಡಿ ನಿಲ್ಲಬೇಕಾಗಿದೆ ಮತ್ತೆ.

ಕೈಕಟ್ಟಿ ಕೂತು ಸುಮ್ಮನಿರದೆ
ಹೃದಯದಿ ಆಸೆ ಬೀಜವ ಬಿತ್ತಿ,
ಮನಕೆ ಧೈರ್ಯವ ತುಂಬುತ
ಏಳಿಸಬೇಕಾಗಿದೆ ಜನರ ಮತ್ತೆ.

ಮೌನವಾಗಿರದೆ ಮಾತಿಗೆ ಮಾತ ಬೆಳೆಸಿ
ಧಿಕ್ಕರಿಸಿ ಹೊಲಸು ರಾಜಕೀಯದ ಕ್ರೌರ್ಯವ,
ಸಿಗುವ ಕಾಂಚಾಣದ ಮೋಹಕೆ ಕುರುಡಾಗದೆ
ಹೋರಾಡಬೇಕಾಗಿದೆ ಪಡೆಯಲು ಸ್ವಾತಂತ್ರ್ಯವ ಮತ್ತೆ.

ಹರಡಿರಲು ಹುಚ್ಚು ನಾಯಿಯ ರೋಗ
ಕಷ್ಟ ಕಾರ್ಪಣ್ಯಗಳಿಗೆ ಲಸಿಕೆ ಮದ್ದಾಗಿ,
ದೌರ್ಜನ್ಯವೇ ತುಂಬಿರಲು ಎಲ್ಲೆಲ್ಲೂ
ಮನುಜ ಕುಲವ ಉದ್ಧರಿಸಬೇಕಾಗಿದೆ ಮತ್ತೆ.

ನೋಡಿ ಸಾಕಾಗಿದೆ ಜಗದ ಈ ಕೊರಗ
ಹೊಲಸು ದುರ್ಗಂಧ ಬೀರುತಿರುವ ಯುಗದಲಿ,
ಮತ್ತೆ ಜನುಮವೆತ್ತಿ ವೀರ ನಾಯಕನಾಗಿ
ಜಗದೋದ್ಧಾರಕೆ ನಾಂದಿ ಹಾಡಬೇಕಾಗಿದೆ ಮತ್ತೆ.


ಮುಗ್ಧ ಭಾವ:

ಹಾಕುತ ಪುಟ್ಟ ನಡಿಗೆ
ನಡೆದಿದೆ ಬಾಳ ನೌಕೆ,

ನಿನ್ನೆಯ ನೋವಿಲ್ಲದೆ
ನಾಳೆಯ ಚಿಂತೆಯಿಲ್ಲದೆ,
ಹಿರಿಯರ ಭಯವಿಲ್ಲದೆ
ಕಿರಿಯರ ಸ್ನೇಹವಿಲ್ಲದೆ,

ಬಡತನದ ಬೇಗೆಯಿಲ್ಲದೆ
ಸಿರಿತನದ ಮೋಹವಿಲ್ಲದೆ.
ನೋವು ನಲಿವ ಅರಿವಿಲ್ಲದೆ
ಪ್ರೀತಿ ದ್ವೇಷಗಳ ಜ್ಞಾನವಿಲ್ಲದೆ.

ತಿಳಿಯದೆ ಜಗದ ಒಡಂಬಡಿಕೆ
ತಲೆಯೆತ್ತಿ ಮುಗುಳ್ನಗೆಯ ಬೀರುತ,
ಹೊರಳಾಡುತ ಮಣ್ಣ ಗುಡ್ದೆಯಲಿ
ಯಾವುದರ ಪರಿವೆಯಿಲ್ಲದೆ ಆಡುತ .

ಹಾಡುತ ಕುಣಿಯುತ
ನಲಿಯುತ ಜಿಗಿಯುತ
ಮುಗ್ಧ ಮನಸ ದೇವಿ ಸ್ವರೂಪ
ಮಾತೆಯ ಮಡಿಲಲಿ ನಲಿಯುತ .

ಹಾಕುತ ಪುಟ್ಟ ನಡಿಗೆ
ನಡೆದಿದೆ ಬಾಳ ನೌಕೆ












ಬಯಕೆ:


ಮನದ ಭಾವನೆಗಳಿಗೆ ರೆಕ್ಕೆ ಬಂದು
ಗಗನಕೆ ಹಾರುವಾಸೆಯಾಗಿದೆ ಇಂದು.

ದುಗುಡ ದುಮ್ಮಾನಗಳ ಬದಿಗೊತ್ತಿ
ಮನದ ಆತಂಕವ ದೂರ ಚಿಮ್ಮಿ
ದ್ವೇಷ ಅಸೂಯೆಗಳ ನೋವ ಮರೆತು
ಬಾನಂಚಿನೆಡೆಗೆ ಹಾರಬೇಕಾಗಿದೆ.

ರಾಜಕೀಯದ ಕಚ್ಚಾಟವ ತೊರೆದು
ಕಷ್ಟ ಕಾರ್ಪಣ್ಯಗಳ ಬೇಗೆಯ ಬದಿಗೊತ್ತಿ
ದುರ್ಗಂಧದ ಬೀರುವ ಓಣಿಯ ಬಿಟ್ಟು
ಬಾನಲಿ ರೆಕ್ಕೆ ಬಿಚ್ಚಿ ನಲಿಯಬೇಕಾಗಿದೆ.

ದಿನವೂ ಇರುವುದಿದೇ ನಾಯಿ ಬಾಳು
ಅರಿವಿಲ್ಲದೆ ಕಚ್ಚಾಡುವ ಈ ಗೋಳು
ಇವೆಲ್ಲದರ ಕೆಟ್ಟ ಪೊರೆಯ ಕಳಚಿ
ಮನಕೆ ನೆನಪ ರೆಕ್ಕೆ ಪುಕ್ಕವ ಹಚ್ಚಿ

ಗಗನಕೆ ಹಾರುವಾಸೆಯಾಗಿದೆ ಇಂದು.

ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು:


ಶರಣು ಶರಣಾರ್ತಿ ಓದುಗರೇ..ನೋಡಿ ಎಲ್ಲ ವಿಷಯ ಬಿಟ್ಟು ಮನೆ ಕಟ್ಟಿ ನೋಡು ಮಾಡುವೆ ಮಾಡಿ ನೋಡು ಅನ್ನುವಲ್ಲಿಗೆ ಬಂದು ನಿಂತಿದೀನಿ ನಾನು.ಹೌದು ಕಣ್ರೀ ಈ ಎರಡು ವಿಷಯಗಳು ನಮ್ಮ ಜೀವನದಲ್ಲಿ ಆಗಲಿಲ್ಲ ಅಂದ್ರೆ ನಾವು ಹುಟ್ಟಿದ್ದೇ ವ್ಯರ್ಥ ಅಂತ ಜನ ಹೇಳ್ತಾರೆ ನಾನಲ್ಲ.ಆದರೆ ಒಂದು ವಿಷ್ಯ ಏನಪ್ಪಾ ಅಂದ್ರೆ ನನಗಂತೂ ಈ ಎರಡೂ ವಿಷಯದಲ್ಲಿ ಹೆಚ್ಚಿಗೆ ವ್ಯತ್ಯಾಸ ಇಲ್ಲ ಅಂತ ಅನ್ನಿಸಿದ್ದು. ಯಾಕೆಂದರೆ ಈಗಿನ ಕಾಲದಲ್ಲಿ ಮನೆ ಕಟ್ಟೋದೂ ಸುಲಭ ಅಲ್ಲ ಮದುವೆ ಮಾಡೋದೂ ಸುಲಭವಲ್ಲ. ಈ ಎರಡೂ ವಿಷಯಗಳೂ ಯಾವುದೇ ಯುದ್ಧಕ್ಕಿಂತ ಕಡಿಮೆಯೇನೂ ಇಲ್ಲ ಬಿಡಿ .ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವಂತೆ ವಿಷಯಕ್ಕಿಂತ ಪೀಠಿಕೆನೇ  ಜಾಸ್ತಿ ಆಗುವುದು ಬೇಡ ವಿಷಯಕ್ಕೆ ಬರೋಣ..

ಈಗ ನೋಡಿ ಮೊದಲು ಮನೆ ಕಟ್ಟಬೇಕು ಅಂದ್ರೆ ಮುಖ್ಯವಾಗಿ ಬೇಕಾಗಿದ್ದು ಅಂದ್ರೆ ಜಾಗ,ಅದೇ ರೀತಿ ಮದುವೆಗೆ ಗಂಡು/ಹೆಣ್ಣು. ದೊಡ್ಡ ಸಮಸ್ಯೆ ಇರೋದು ಇಲ್ಲೇ ನೋಡಿ. ಈಗ ಜಾಗ ಬೇಕು ಅಂದ್ರೆ ಅದರ ಬಗ್ಗೆ ಅಪೇಕ್ಷೆಗಳು ಬಹಳ ಇರುತ್ತೆ, ಮದುವೆಯ ವಿಚಾರದಲ್ಲಂತೂ ಬಿಡಿ. ನಮಗೆ ೩೦/೪೦ ಸೈಟೇ ಬೇಕು, ಅಂದ್ರೆ ಬಾಳ ಸಂಗಾತಿ ಇಷ್ಟೇ ಹೈಟು ಇಷ್ಟೇ ವೈಟು ಇರ್ಬೇಕು ಅನ್ನೋದು ಸಹಜ.ಇನ್ನು ಸೈಟು ಒಳ್ಳೆ ಏರಿಯದಲ್ಲೇ ಬೇಕು, ಮದುವೆಯಾಗುವವರು ಕೂಡ ಒಳ್ಳೆ ಮನೆಯವರಾಗಿರಬೇಕು ಅಂತ ಬೇರೆ ಹೇಳಬೇಕಾಗಿಲ್ಲ.. ಮುಂದೆ ಸೈಟು ಸಮತಟ್ಟಾಗಿರಬೇಕು ಅಂದ್ರೆ ಎತ್ತರ ತಗ್ಗು ಏನು ಇರಬಾರದು, ಅದೇ ರೀತಿ ಸಂಗಾತಿ ಆಗುವವರು ಫಿಟ್ ಆಗಿರಬೇಕು(ಕೈ ಕಾಲು ಮುಖ ಮೂತಿ ಎಲ್ಲ ಸರಿಯಾಗಿರಬೇಕು ಅಂತ ಅರ್ಥ) ಮದುವೆಯಾದ ಮೇಲೆ ನೋಡೋಣ ಅಂತ ಹೇಳೋಕೆ ಆಗುತ್ತಾ? ಸೈಟೇ ಸರಿಯಾಗಿಲ್ಲ ಅಂದ್ರೆ ಮನೆ ಕಟ್ಟೋದಾದರೂ ಹೇಗೆ ಅಲ್ವ? ಇಷ್ಟಕ್ಕೆ ಮುಗಿಯೂಲ್ಲ ಸ್ವಾಮೀ. ಮುಂದೆ ಇದೆ ನೋಡಿ ಮೇಲಿನ ಎಲ್ಲ ಕ್ವಾಲಿಟಿ  ಇದ್ದಮೇಲೂ ಸೈಟಿನ ಪೇಪರ್ ಸರಿಯಾಗಿಲ್ಲ ಅಂದ್ರೆ ಏನು ಮಾಡೋಕೆ ಬರುತ್ತೆ?, ಮದುವೆಯಾಗುವವರ ನಡುವಳಿಕೆನೆ ಸರಿಯಾಗಿಲ್ಲ ಅಂದ ಮೇಲೆ ಮದುವೆಯಾಗೋಕೆ ಆಗುತ್ತಾ? ಸೈಟಿನ ಬಗ್ಗೆ ಸ್ವಲ್ಪನಾದರೂ ಚೌಕಸಿನೆ ಮಾಡದೆ ಅದರ ಬಗ್ಗೆ ನಿರ್ಧಾರ ತಗೊಳೋಕೆ ಆಗುತ್ತಾ?ಇದೆ ರೀತಿ ಮದುವೆಯಲ್ಲೂ ಕೂಡ. ದೇವರೇ ಕಷ್ಟ ಇದೆ..

ಅಂತೂ ಇಂತೂ ಹತ್ತಾರು ಕಡೆ ಚೌಕಾಶಿ ಮಾಡಿ ಎಂಟತ್ತು ರಿಜೆಕ್ಟ್ ಮಾಡಿ ಕೊನೆಗೆ ಒಂದು ಸೈಟು ಬುಕ್ ಮಾಡ್ತಿವಿ.ಅಂದ್ರೆ ಮದುವೆಗೆ ವರ/ವಧು ಬುಕ್ ಮಾಡ್ತಿವಿ(ಈಗ ನಿಶ್ಚಿತಾರ್ಥ ಅಂದ್ರೆ ಬುಕ್ ಅಂದ ಹಾಗೆ ಯಾಕೆಂದ್ರೆ ಬೇಡವಾದರೆ ಕ್ಯಾನ್ಸಲ್ ಕೂಡ ಸುಲಭವಾಗಿ ಆಗುತ್ತೆ.) ಇಲ್ಲಿಂದ ಯುದ್ಧಕ್ಕೆ ರಣಕಹಳೆ ಮೂಡಿದ ಹಾಗೆ. ಹೌದು ರೀ ಮೊದಲೇ ಹೇಳಿದಂತೆ ಈ ಎರಡೂ ವಿಷಯ ಯುದ್ಧಕ್ಕಿಂತ ಏನೂ ಕಡಿಮೆಯಿಲ್ಲ. ಸೈಟು ತಗೊಂಡ ಮೇಲೆ ನಿಶ್ಚಿತಾರ್ಥ ಆದ ಮೇಲೆ ಲರ್ನಿಂಗ್ ಲೈಸೆನ್ಸ್ ಸಿಕ್ಕ ಹಾಗೆ ಹಾಗಾಗಿ ಆದಷ್ಟು ಬೇಗ ಪರಮ್ನೆಂಟ್ ಲೈಸೆನ್ಸ್ ತೆಗೆಯದೆ ಬೇರೆ ಪರ್ಯಾಯವೇ ಇಲ್ಲ. ಮನೆ ಕಟ್ಟೋವಾಗ ವಾಸ್ತು ಹೇಗಿರಬೇಕು(ಪೂರ್ವಕ್ಕೆ ಬಾಗಿಲು,ಪಶ್ಚಿಮಕ್ಕೆ ಅದು,ಉತ್ತರಕ್ಕೆ ಇದು ಹೀಗೆ ಸುಮಾರು ಇವೆ ಬಿಡಿ) ಅಂತಾ ನೋಡದೆ ಇರೋಕಾಗಲ್ಲ,ಮದುವೆ ಮಾಡೋವಾಗ ವಿಧಿ ವಿಧಾನಗಳ ಮರೆಯೋಕಾಗಲ್ಲ(ಈಗಿನ ಯುಗದಲ್ಲಿ ಇವೆಲ್ಲ ಕಡಿಮೆಯಾಗಿವೆ). ಮನೆ ಕಟ್ಟೋದಕ್ಕೂ  ಮದುವೆ ಮಾಡುವುದಕ್ಕೋ ಜನ ಬೇಕು ಆಳು ಕಾಳು ಬೇಕು, ಸಾವಿರಾರು ಸಾಮಾನುಗಳು ಬೇಕು. ಇವೆಲ್ಲದರ ಮಧ್ಯೆ ಪ್ರಶ್ನೆ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಅಡುಗೆ ಮನೆ ಈ ಕಡೆ ಇದ್ರೆ ಚೆನ್ನಾಗಿರೋದು, ಆ ಟೈಲ್ಸ್ ಬೇಡವಾಗಿತ್ತು,ಈ ಬಣ್ಣ ಸರಿಯಾಗಿಲ್ಲ ಅದೇ ರೀತಿ ಮದುವೆಯ ವಿಚಾರದಲ್ಲೋ ಈ ಸೀರೆ ಚೆನ್ನಾಗಿಲ್ಲ, ಮಂಟಪ ಸ್ವಲ್ಪ ಬೇರೆ ತರಹ ಇರಬೇಕಿತ್ತು,ಆ ಭಟ್ರು ಬೇಡ ಅಬ್ಬಾ.. ಒಬ್ಬರ ವಿಚಾರಗಳು ಇನ್ನೊಬ್ಬರಿಗೆ ಆಗಿ ಬರೋಲ್ಲ.. ಎಲ್ಲರ ಒಮ್ಮತದಿಂದ ಒಂದು ಮನೆ ಅಥವಾ ಮದುವೆ ಆಗಿದ್ದಂತೂ ಇರಲಿಕ್ಕಿಲ್ಲ. ಇವೆಲ್ಲದರ ನಡುವೆ ಪ್ರತಿಯೊಬ್ಬರೂ ತಮ್ಮ ತಮ್ಮ ವಿಚಾರವನ್ನ ಮಂಡಿಸುತ್ತಾರೆಯೇ ಹೊರತು ಯಾರೊಬ್ಬರೂ ಜವಾಬ್ದಾರಿಯನ್ನ ತೆಗೆದುಕೊಳ್ಳೋ ಸುದ್ದಿಗೆ ಬರುವುದಿಲ್ಲ. ಇವೆಲ್ಲ ಪೂರ್ವ ತಯಾರಿಗಳಷ್ಟೇ ಯಾವುದೇ ಮನೆ ಅಥವಾ ಮದುವೆ ಯಾವುದೇ ಗೊಂದಲವಿಲ್ಲದೆ ನಡುಯುವುದಕ್ಕೆ ಸಾಧ್ಯವೇ? ಖಂಡಿತ ಇಲ್ಲ ಮುಖ್ಯ ವಿಷಯಗಳೆಷ್ಟೋ ಹೊರ ಬರದೆ ಒಳಗಡೆಯೇ ಹೊಗೆಯಾಡುತ್ತಿರುತ್ತದೆ. ಮನೆಯ ವಿಷಯದಲ್ಲಿ ಯಾವುದೋ ಕಾಗದಪತ್ರದ ಗೊಂದಲ ಇದ್ದೆ ಇರುತ್ತೆ ಅಥವಾ ಯಾರದ್ದಾದರೂ ತಕರಾರುಗಳಂತೂ ಸಹಜ. ಮದುವೆಯಲ್ಲೋ ಕೇಳಬೇಡಿ ಹೆಂಗಸರ ಮನಾಪಮಾನಗಳ ವಿಷ್ಯ ಎಷ್ಟೋ ವರ್ಷಗಳ ನಂತರವೂ ಮರೆಯದೆ ಹಾಗೆ ಉಳಿದಿರುತ್ತೆ. ಉಸ್ಸಪ್ಪ..

ಅಂತೂ ಇಂತೂ ಎಲ್ಲ ಆಯಿತು.. (ಅಂದರೆ ಮನೆ ಕಟ್ಟುವ ಕೆಲಸ ಮುಗಿತು ಮದುವೆಯ ತಯಾರಿಗಳೆಲ್ಲ ಆಯಿತು ಮುಖ್ಯವಾದದ್ದು ತೋರಿಕೆಯ ವಿಷಯ) ಗೃಹಪ್ರವೇಶ ಅದೇ ರೀತಿ ಮದುವೆ. ಅಂದರೆ ಇಷ್ಟು ದಿನ ಕಷ್ಟಪಟ್ಟಿದ್ದೂ  ತಾವೇ ಮತ್ತೆ ಎಲ್ಲರಿಗೂ ಸಿಹಿ ಊಟವನ್ನ  ಹಾಕಬೇಕಾಗಿದ್ದೋ ತಾವೇ ಇದು ಯಾಕೆ ಅಂತ ನನಗೆ ಇದುವರೆಗೂ ತಿಳಿದಿಲ್ಲ. ಭಟ್ಟರಿಗೆ ಉಟಕ್ಕೆ ಕರೆದಿದ್ದೂ ಅಲ್ಲದೆ ಭೋಜನ ದಕ್ಷಿಣೆ ಬೇರೆ ಕೊಡಬೇಕಂತೆ ಇದ್ಯಾವ ನ್ಯಾಯನೋ? ಇರಲಿ ಬಿಡಿ ಇಷ್ಟು ಮಾಡಿದ ಕಷ್ಟಕ್ಕೆ ಜನರ ಮಾತನ್ನ ಕೇಳಿ ಹಾರ್ಟ್ ಅಟಾಕ್ ಆಗದಿದ್ದರೆ ಸಾಕು(ಯಾಕೆಂದರೆ ಪ್ರತಿಯೊಬ್ಬರ ವಿಚಾರಗಳೂ ಬೇರೆ ಬೇರೆ. ಎಲ್ಲ ಮುಗಿದ ಮೇಲೂ ಸೂಚನೆ ಕೊಡುವವರಿಗೆ ಎನೆನ್ನಬೇಕೂ?) ಬಂದ ಜನರಿಗೆ ಆದರಾತಿತ್ಯ ಸರಿಯಾಗಿರಬೇಕು ಇಲ್ಲವಾದಲ್ಲಿ ಇಷ್ಟು ದಿನ ನೀವು ಮಾಡಿದ ಕೆಲಸಕ್ಕೆ ಏನೂ ಅರ್ಥವಿರೋಲ್ಲ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಇವೆಲ್ಲದರ ನಡುವೆ ಎಷ್ಟು ಜನ ದುಡ್ಡು ಹೊಡೆದು ಐಶ್ ಮಾಡಿರುತ್ತರೋ ಗೊತ್ತೇ ಆಗಿರೋಲ್ಲ. ಇವಲ್ಲ ಆದ ಮೇಲೂ ಕೆಲ ದಿನದ ನಂತರ ಶ್ರಮ ಭೋಜನ ಅಂತ ಕೆಲವರು ಮಾಡ್ತಾರೆ(ಇದರಲ್ಲಿ ಯಾರ ಶ್ರಮ ಯಾರಿಗೆ ಭೋಜನ ಅಂತ ನನಗಿನ್ನೂ ತಿಳಿದಿಲ್ಲ)

ಸರಿ ಎಲ್ಲ ಮುಗಿದು ಮನೆಯೂ ಆಯಿತು ಮದುವೆಯೂ ಆಯಿತು ಗೆದ್ದೇ ಅಂತ ತಿಳ್ಕೊಂಡ್ರ ಇಲ್ಲ, ಮುಂದೆ ಶುರುವಾಗುತ್ತೆ ನೋಡಿ ಮನೆ ಕಟ್ಟಿದ ಮೇಲೆ ಮೇನ್ಟೇನ್ ಮಾಡೋಕೆ ಬೇರೆ ಯಾರೋ ಬರೋಲ್ಲ ಮದುವೆ ಆದ ಮೇಲೆ ನಿಮ್ಮದೊಂದೇ ಅಲ್ಲದೆ ನಿಮ್ಮ ಸಂಗಾತಿ ಮತ್ತೆ ಅವರ ಮನೆಯವರ ಕಾಳಜಿ ತಗೊಳೋಕೆ ಆಗಿಲ್ಲ ಅಂದ್ರೆ ಹೇಗೆ? ಆನೆ ಸಾಕೋದು ಅಂದ್ರ ಸುಲಭಾನ? ಅಲ್ಲ ತಾನೇ ಇದೆ ರೀತಿ ಮನೆ ಕಟ್ಟೋದು ಮದುವೆ ಮಾಡೋದು ಅದಾದ ಮೇಲೆ ಅದನ್ನ ನಿಭಾಯಿಸೋದು ಅಂದ್ರೆ ಸುಲಭಾ ಅಲ್ಲ ಕಣ್ರೀ.. ಅಬ್ಬಬ್ಬ ಬರೆಯೋದ್ರಲ್ಲೇ ಇಷ್ಟೆಲ್ಲಾ ಗೋಳಿದೆ ಇನ್ನೇನಾದ್ರೂ... ...??

ಅದಕ್ಕೆ ಹೇಳೋದು
ಬಾಳ ನೌಕೆಯ ನಾವಿಕನಾಗಿ ನೋಡು
ಜೀವನ ಯುದ್ಧದಲ್ಲಿ ಭಾಗವಹಿಸಿ ನೋಡು
ಗೆದ್ದರೂ ಗೆಲುವಿನ ನಗೆಯಿಲ್ಲ ನೋಡು
ಮನೆ 
ಕಟ್ಟಿ ನೋಡು ಮದುವೆ ಮಾಡಿ ನೋಡು.

ಹೆಣ್ಣು:

ವರ್ಷಾನು ವರ್ಷದಿಂದ ನಡೆದು ಬಂದಿರುವ ಹಲವಾರು ಮೂಢ ನಂಬಿಕೆಗಳು ಹೆಣ್ಣನ್ನ ಕೀಳು ಮಟ್ಟದಲ್ಲಿ ನೋಡ್ತಾ ಇವೆ.ಏನಪ್ಪಾ ಅಂದ್ರೆ ಹಳೆಯ ಕಾಲದಲ್ಲಿ ಹೆಣ್ಣಿನ ಮದುವೆ ಆಯ್ತು ಅಂದ್ರೆ ಅವಳ ಸ್ವಾತಂತ್ರ ಮುಗಿದಂತೆ.ಮದುವೆಯಾದ ಮೇಲೆ ಗಂಡನ ಮನೆಯಲ್ಲಿ ಸಾಮಾನ್ಯವಾಗಿ ಆಗಿನ ಕಾಲದಲ್ಲಿ ಎಲ್ಲರದ್ದು ಜಮೀನ್ದಾರರ ವಂಶವಾದ್ದರಿಂದ ಜೀತದಾಳಿನಂತೆ ದುಡಿಯುವುದು ಸಾಮಾನ್ಯ.ಮನೆಯಲ್ಲಿ ನೂರಾರು ಆಳುಗಳು,ಅವರಿಗೆ ಊಟ ತಿಂಡಿ.ದೊಡ್ಡ ಕುಟುಂಬವಾದ್ದರಿಂದ ಮನೆ ತುಂಬಾ ಜನರು ಅವರನ್ನ ವಿಚಾರಿಸಿಕೊಳ್ಳೋದು.ಆಗಿನ ಕಾಲದಲ್ಲಿ ಗಂಡಸರು ಮನೆ ಕೆಲಸ ಮಾಡಿದರೆ ಘೋರ ತಪ್ಪು ಮಾಡಿದಂತೆ.ಆದರೆ ಈಗಿನ ಕಾಲದಲ್ಲಿ ಇಷ್ಟೆಲ್ಲಾ ಅಂತೂ ಇಲ್ಲ.ಸಣ್ಣ ಪುಟ್ಟ ಮನೆ,ಮನೇಲಿ ಇರೋರು ನಾಲ್ಕೈದು ಜನ ಅಷ್ಟೇ.ಹಾಗಾಗಿ ಎಷ್ಟೋ ಕೆಲಸಗಳು ಹೆಂಗಸರಿಗೆ ಕಮ್ಮಿಯಾಗಿವೆ.ಅಷ್ಟೇ ಅಲ್ಲದೆ ಗಂಡಸರು ಕೂಡ ಮನೆ ಕೆಲಸದಲ್ಲಿ ನೆರವಾಗ್ತಾ ಇದಾರೆ.ಆಗಿನ ಕಾಲದಲ್ಲಿ ಮದುವೆಯಾದ ಮೇಲೆ ಹೆಣ್ಣಿನ ಶಿಕ್ಷಣ ಮುಗಿದಂತೆ.ಅವಳು ಮನೆ ಬಿಟ್ಟು ಹೊರ ಹೋಗೋ ಹಾಗಿಲ್ಲ,ಪರ ಪುರುಷರ ಜೊತೆ ಮಾತನಾಡೋ ಹಾಗಿಲ್ಲ ಇವೆಲ್ಲ ವಿಚಾರಗೆಲ್ಲ ಇದ್ದವು.ಆದರೆ ಈಗ ಅವೆಲ್ಲ ನಾಶವಾಗಿದೆ.

ಮುಖ್ಯವಾದ ಒಂದು ಮೂಢನಂಬಿಕೆ ಅಂದ್ರೆ "ಮಾಂಗಲಿಕ" ಅನ್ನೋದು. ಆ ಹುಡುಗಿ ಮಾಂಗಲಿಕ ಇದ್ದಾಳೆ ಅನ್ನೋದು.ಮಾಂಗಲಿಕ ಅಂತ ಅಂದ್ರೆ ಯಾರ ಜನ್ಮ ಪತ್ರಿಕೆಯಲ್ಲಿ 1,4,7,8,12  ನೆ ಸ್ಥಾನದಲ್ಲಿ ಮಂಗಳ ಗ್ರಹ ಇರುತ್ತೋ ಅಂಥಹ ಪತ್ರಿಕೆಯನ್ನ ಮಾಂಗಲಿಕ ಅಂತ ಹೇಳ್ತೇವೆ. ಅದರಿಂದ ಏನು ದೋಷ ಅನ್ನೋದು ಜನರಿಗೆ ಗೊತ್ತಿಲ್ಲ. ಮಾಂಗಲಿಕ ಇರುವುದರಿಂದ ಆ ಜನ ತಮ್ಮ ಅಧಿಕಾರವನ್ನ ಚಲಾಯಿಸೋ ಪ್ರಯತ್ನ ಮಾಡ್ತಾರೆ.ಅವ್ರು ತುಂಬಾ ಧೈರ್ಯಶಾಲಿಗಳು. ಈ ವಿಷಯ ಯಾರಿಗೂ ಗೊತ್ತಿಲ್ಲ. ಮಾಂಗಲಿಕ ಅಂದ್ರೆ ಏನೋ ತುಂಬಾ ದೊಡ್ಡ ದೋಷ ಅದರಿಂದ
ತಮ್ಮ ಮಗನಿಗೆ ಬೇಗ ಸಾವು ಬರುತ್ತೆ ಅಂತೆಲ್ಲ ನಂಬಿಕೆ ಇಟ್ಕೊಂಡು ಮನೆಗೆ ಬಂದಂತ ಲಕ್ಷ್ಮಿಯನ್ನ ಯಾವಾಗಲೂ ದೂಶಿಸ್ತಾ ಇರೋದು ಎಷ್ಟರ ಮಟ್ಟಿಗೆ ಸರಿ. ಆದರೆ ಈಗಿನ ಕಾಲದವರು ಪತ್ರಿಕೆ ಕೂಡ ನೋಡದೆ ಮಾಡುವೆ ಆಗ್ತಾರೆ.ಅವರೆಲ್ಲ ಚೆನ್ನಾಗಿ ಇಲ್ವಾ..?ಇವೆಲ್ಲ ಕೆಟ್ಟ ನಂಬಿಕೆಗಳು ಹೆಣ್ಣನ್ನ ಶೋಷಣೆಗೆ ಒಳಪಡಿಸುತ್ತಾ ಇದ್ದವು.ಆದರೆ ಈಗೀಗ ಅವೆಲ್ಲ ಬದಲಾಗ್ತಾ ಇವೆ ಅಂತ ನಾನು ಅನ್ಕೊಂಡಿದಿನಿ.

ಇನ್ನೊಂದು ವಿಷಯ ಗೊತ್ತ ನೀವೆಲ್ಲ ಬರೀ ಗಂಡು ಹೆಣ್ಣನ್ನ ಶೋಷಣೆಗೆ ಒಳಪಡಿಸ್ತಾ ಇದಾನೆ, ಹೆಣ್ಣನ್ನ ಅವನು ಅರ್ಥ ಮಾಡಿಕೊಳ್ಳೋಕೆ ಸಾಧ್ಯವಿಲ್ಲ, ಹೆಣ್ಣನ್ನ ಬರೀ ಹೆಣ್ಣು ಮಾತ್ರ ಅರ್ಥ ಮಾಡಿಕೊಳ್ತಾಳೆ ಅಂತ ಇದ್ದೀರಾ... ಆದ್ರೆ ಇವಿಷ್ಟಕ್ಕೂ  ಹೆಣ್ಣೇ ಕಾರಣ ಅನ್ನೋದು ನಿಮಗೆ ಗೊತ್ತಾ.??ನಾನು ಬರೀ ಹೆಣ್ಣಿನದೇ ತಪ್ಪು ಅಂತ ಹೇಳ್ತಾ ಇಲ್ಲ ಆದರೂ ಕೂಡ ಒಂದು ಹೆಣ್ಣಿನ ಶೋಷಣೆಗೆ ಇನ್ನೊಂದು ಹೆಣ್ಣೇ ಜಾಸ್ತಿ ಕಾರಣ ಅಂತ ನನ್ನ ಅನಿಸಿಕೆ ಯಾಕೆ ಅಂದ್ರೆ ನೋಡಿ ನೀವು ಹಳೆಯ ಕಾಲದಲ್ಲಿ ಇಡೀ ದಿನ ಹೊರಗೆ ಇರುವ ಗಂಡಿಗೆ ಮನೆಯಲ್ಲಿ ಹೆಂಡತಿ ಏನು ಮಾಡ್ತಾಳೆ ಅಂತ ಕೂಡ ಗೊತ್ತಿರೋಲ್ಲ ಆದರೆ ಅವನು ಮನೆಗೆ ಬಂದ ಮೇಲೆ ಹೆಂಡತಿಗೆ ಹೊಡೆಯೋದು ಯಾರ ಮಾತು ಕೇಳಿ ?? ಮನೇಲಿರೋ ಇನ್ನೊಂದು ಹೆಣ್ಣಿನ (ತಾಯಿ ,ಅಕ್ಕ.ದೊಡ್ಡಮ್ಮ...ಇತ್ಯಾದಿ) ಮಾತು ಕೇಳಿ ಅಲ್ವಾ??ಮತ್ಯಾವ ಕಾರಣಕ್ಕೋ ಕೂಡ ಅವನು ತನ್ನ ಹೆಂಡತಿಯನ್ನ ದೂಶಿಸೋಕೆ ಹೋಗಲ್ಲ. ಒಬ್ಬರನ್ನ ಕಂಡ್ರೆ ಒಬ್ಬರಿಗೆ ಆಗದೆ ಇರೋದು,ಅಥವಾ ಮನೆಯ ಅಧಿಕಾರ ಎಲ್ಲಿ ನಮ್ಮ ಕೈ ತಪ್ಪುವುದೋ ಅನ್ನೋ ಅನ್ನೋ ವಿಚಾರ ಮನೆಯ ಮಹಿಳೆಯನ್ನ ಒಬ್ಬರಿಗೊಬ್ಬರು ದೂಶಿಸತೊಡಗಿದ್ದು ತಾನೇ?ಉದಾಹರಣೆ ಬೇಕು ಅಂದ್ರೆ ಎಲ್ಲ ದೂರದರ್ಶನದ ದಾರಾವಾಹಿಗಳನ್ನ ನೋಡಿ ನಿಮಗೆ ಗೊತ್ತಾಗುತ್ತೆ ಹೌದೋ ಅಲ್ಲವೋ ಅಂತ.ಹಾಗಂತ ಬರೀ ಹೆಂಗಸರೇ ಕಾರಣ ಅಲ್ಲ. ಗಂಡಸು ವಿಚಾರ ಮಾಡದೆ ದುಡುಕುವುದು ಕೂಡ ತಪ್ಪು. ಇವಿಷ್ಟು ಹಳೆಯ ಕಾಲದ್ದಾದರೆ ಈಗಿನ ಕಾಲದಲ್ಲಿ ಇವೆಲ್ಲ ಎಷ್ಟೋ ಮಟ್ಟಿಗೆ ಕಡಿಮೆಯಾಗಿವೆ ಯಾಕೆಂದ್ರೆ ಮನೇಲಿ ಇರೋರೆ ಮೂರೋ ನಾಲ್ಕು ಜನ. ಮತ್ತೆ ಹೆಣ್ಣಿಗೆ ಬೇಕಾಗೋ ಎಲ್ಲ ಸೌಕರ್ಯಗಳು ಸಿಗ್ತಿವೆ.ಮದುವೆ ನಂತರ ಕೂಡ ಮುಂದೆ ಕಲಿಯೋ ಅವಕಾಶ ಅಥವಾ ಉದ್ಯೋಗ ಮಾಡುವ ಅವಕಾಶ ಇವೆಲ್ಲ ಇವೆ.ಏನಾದರೂ ಆದಲ್ಲಿ ಕಾನೂನು ಕೂಡ ಜಾಸ್ತಿ ಮಟ್ಟಿಗೆ ಹೆಣ್ಣಿನ ಪರವಾಗಿಯೇ ಇದೆ.ಆದರೆ ಇವೆಲ್ಲದರ ದುರುಪಯೋಗ ಈಗ ಆಗ್ತಾ ಇದೆ. ಎಷ್ಟೋ ಹೆಣ್ಣು ಮಕ್ಕಳು ಆಸ್ತಿ ಹೊಡೆಯೋ ಸಲುವಾಗಿ ಮದುವೆಯಾಗಿ ಒಂದೇ ವರ್ಷದಲ್ಲಿ ಗಂಡನ ಮೇಲೆ ಕಂಪ್ಲೇಂಟ್ ಮಾಡಿ ಅವನ ಹತ್ರ ಹಣ ಪಡ್ಕೊಂಡು ಡಿವೋರ್ಸ್ ತಗೊಂಡು ಬೇರೊಂದು ಮದುವೆ ಆದವರು ಕೂಡ ಇದ್ದಾರೆ.

ತಿಳಿದೋ ತಿಳಿಯದೆಯೋ ಗಂಡು ಇಷ್ಟು ದಿನ ಮಾಡಿದ ಶೋಷಣೆಗೆ ಇನ್ನು ಮುಂದೆ ಶಿಕ್ಷೆ ಅನುಭವಿಸುವದಂತೂ ನಿಜ.






ಧರ್ಮಾಚರಣೆ:

*ನಾನು ನಮ್ಮ ಸಂಸ್ಕೃತಿಯಲ್ಲಿನ ಶೋಡಷ ಸಂಸ್ಕಾರಗಳು ಹಾಗು ಕೆಲವು ವಿಷಯದ ಮೇಲೆ ಬರೆಯುವ ನಿರ್ಧಾರ ಮಾಡಿದ್ದೆ,ಆದರೆ ಈಗ ಅವೆಲ್ಲಕ್ಕೂ ಮೊದಲು ನಮ್ಮ ಧರ್ಮದ ಕೆಲ ಸಾಮಾನ್ಯ ಜ್ಞಾನಗಳ ಬಗ್ಗೆ ಮೊದಲು ಅರಿವು ಮೂಡಿಸಬೇಕು ಅನ್ನುವ ಉದ್ದೇಶದಿಂದ ಈ ವಿಷಯವನ್ನ ನಿಮ್ಮ ಮುಂದಿಡುತ್ತಿದ್ದೇನೆ.ಧರ್ಮಾಚರಣೆ ಅಂದರೆ ನಮ್ಮ ಧರ್ಮದ ಆಚರಣೆ (ಧರ್ಮದಲ್ಲಿರುವ ಆಚಾರ ವಿಚಾರಗಳು). ಈ ಧರ್ಮಾಚರಣೆಯ ಬಗ್ಗೆ ತಿಳಿಯುವ ಮೊದಲು ಧರ್ಮ ಅಂದರೇನು ಅನ್ನುವುದನ್ನ ತಿಳಿದುಕೊಳ್ಳಬೇಕು.

ಧರ್ಮ:  
ಶ್ರೀಯುತ ಸುಧಾಕರ ಶರ್ಮರು ಹೇಳಿದ ಪ್ರಕಾರ "ಯಾವುದು ಎಲ್ಲರನ್ನೂ ಉಳಿಸಿ ಬೆಳೆಸುತ್ತದೆಯೋ ಅದೇ ಧರ್ಮ.'ಯದ್ ಧಾರ್ಯತೆ ತದ್ ಧರ್ಮಂ' ಅಂದರೆ ನಾವು ಉಳಿದು ಬೆಳೆಯುವುದಕ್ಕಾಗಿ ಯಾವ ವಿಚಾರಗಳು,ಯಾವ ಆಚರಣೆಗಳು,ಯಾವ ಸಂಪ್ರದಾಯಗಳು ಉಪಯೋಗಕ್ಕೆ ಬರುತ್ತೋ ಅವೆಲ್ಲವೂ ಧರ್ಮ ಅನ್ನಿಸಿಕೊಳ್ಳುತ್ತೆ.ಎಲ್ಲರಿಗೂ ಉಳಿದು ಬೆಳೆಯುವುದಕ್ಕೆ ಸಹಾಯ ಮಾಡುವ ವಿಚಾರಗಳೇ ಧರ್ಮ."
"ಧರ್ಮೋ ರಕ್ಷತಿ ರಕ್ಷಿತಃ"ಅನ್ನುವಂತೆ ರಕ್ಷಿತ ಧರ್ಮವು ನಮ್ಮನ್ನು ರಕ್ಷಿಸುತ್ತದೆ.ನಾವು ಧರ್ಮದ ಉಳಿವಿಗಾಗಿ ಹೋರಾಡಿದರೆ ಧರ್ಮ ನಮ್ಮನ್ನ ರಕ್ಷಿಸುತ್ತದೆ. ಆದರಿಂದ ನಾವು ಧರ್ಮದ ಉಳಿವಿಗಾಗಿ ಎಷ್ಟು ಹೊರಾಡುತ್ತೆವೋ ಅಷ್ಟು ನಮ್ಮ ರಕ್ಷಣೆ ಮಾಡಿಕೊಂಡಂತೆ. ಈಗಿನ ಕಾಲದಲ್ಲಿ ಮುಸ್ಲಿಂ ಕ್ರಿಶ್ಚಿಯನ್ ಧರ್ಮವು ಮುಂದೆ ಬರಲು ಕಾರಣ ಅವರ ಪ್ರಚಂಡ ಉಪಾಸನೆ. ನೀವು ಸದ್ಯ ಈಡಿ ಸಮಾಜದ ಬಗ್ಗೆ ಯೋಚಿಸಬೇಕೆಂದಿಲ್ಲ ಮೊದಲು ನಿಮ್ಮ ಸ್ವಂತದ ವಿಚರಾಗಳನ್ನ ಬದಲಾಯಿಸಿಕೊಳ್ಳಿ ಆಮೇಲೆ ಸಮಾಜ ತನ್ನಿಂದ ತಾನೇ ಸುಧಾರಣೆಯಾಗುವುದು. ಧರ್ಮದ ಬಗ್ಗೆ ಇಷ್ಟು ಮಾಹಿತಿ ಬೇಕಾದಷ್ಟಿದೆ ಅಂದುಕೊಂಡಿದ್ದೇನೆ.ಇದರ ಬಗ್ಗೆ ಜಾಸ್ತಿ ಮಾತನಾಡಿದರೆ ಆಚರಣೆಯ ಬಗ್ಗೆ ಹೇಳುವವರಾರು..?

ಧರ್ಮಾಚರಣೆ:
ನಾವು ನಮ್ಮ ಧರ್ಮದ ಉಳಿವಿಗಾಗಿ ಏನು ಮಾಡಬೇಕು ಅನ್ನುವ ಮೊದಲು ನಮ್ಮ ಧರ್ಮದವರ ಸದ್ಯದ ಆಚರಣೆಗಳ ಬಗ್ಗೆ ಕೆಲ ಸಂಗತಿಗಳನ್ನ ಹೇಳಲು ಇಚ್ಚಿಸುತ್ತೇನೆ.ನನ್ನ ಅನುಭವಕ್ಕೆ ಬಂದ ಕೆಲ ಅಚ್ಚರಿಯ ವಿಷಯಗಳಿವೆ ಅದನ್ನ ಮೊದಲು ಹೇಳಿದರೆ ನೀವು ಅದರಲ್ಲಿನ ಯಾವ ಗುಂಪಿಗೆ ಬರುತ್ತೀರಿ ಅನ್ನುವುದು ನಿಮಗೆ ತಿಳಿಯುತ್ತೆ ಅದರಿಂದ ನಿಮ್ಮನ್ನ ನೀವು ಬದಲಾಯಿಸಿಕೊಳ್ಳಲು ಸುಲಭವಾಗಬಹುದು.
ನಾನು ಹಲವು ಕಡೆ ಪೂಜೆಗೆ ಹೋದಾಗ ಮತ್ತು ನಮ್ಮ ಸಹಕಾರಿಗಳ ಅನುಭವಕ್ಕೆ ಬಂದ ಕೆಲ ಸಂಗತಿಗಳಿವು. ನಾವು ಮೊದಲು ಹೋದ ತಕ್ಷಣ ಯಜಮಾನರಿಗೆ ಮಡಿ ಉಡಲು ಹೇಳುತ್ತೇವೆ(ಮಡಿ ಉಡಿ ಅಂತ ಹೇಳುವುದಲ್ಲದೆ ಅವರಿಗೆ ಮಡಿ ಉಡಿಸಿದ ಪ್ರಸಂಗಗಳಿವೆ.) ಇಲ್ಲಿಂದ ಶುರುವಾಯಿತು ನೋಡಿ,ಅದಕ್ಕೆ ಅವರ ಪ್ರಶ್ನೆ ಮಡಿಯನ್ನೇ ಉಡಬೇಕೇ? ಪ್ಯಾಂಟು ಶರ್ಟು ಆಗದೆ? ಹೊಸ ಬಟ್ಟೆಗಳು ನಡೆಯದೆ? ಮಡಿ ಮೈಲಿಗೆಯ ವಿಚಾರ ಬಿಡಿ ಇದಕ್ಕೆ ಏನೆನ್ನಬೇಕು ನೀವೇ ಹೇಳಿ.ಇದಾದ ನಂತರ ಅವರಿಗೆ ಕೆಳಗೆ ಕೂಡಲು ಹೇಳಿದರೆ ಅವರ ಪ್ರಶ್ನೆ ಎಷ್ಟು ಹೊತ್ತು ಕೂಡಬೇಕಾಗಬಹುದು?ನನಗೆ ಬಹಳ ಹೊತ್ತು ಕೆಳಗೆ ಕೂಡಲಾಗುವುದಿಲ್ಲ ಅನ್ನೋದು. ಈಗಿನ ಯುಗದಲ್ಲಿ ಉಟಕ್ಕೆ ಮೇಲೆ, ತಿಂಡಿಗೆ ಮೇಲೆ, ಮಲಗೋಕೆ ಮೇಲೆ, ಕೂಡೋದು ಖುರ್ಚಿ ಮೇಲೆ ಇವೆಲ್ಲ ಬಿಡಿ ಬೆಳಿಗ್ಗೆ ಬೆಳಿಗ್ಗೆ ಕೂಡ ಕೆಳಗೆ ಕೂಡೋ ಪರಿಸ್ಥಿತಿಯೂ ಇಲ್ಲ ಅದೂ ಈಗ ಮೇಲೆ. ಸರಿ ಬಿಡಿ ಅಂತೋ ಇಂತೋ ಅವರನ್ನ ಕೆಳಗೆ ಕೂಡಿಸಿದ ಮೇಲೆ ಮೊದಲ ನಮ್ಮ ಪ್ರಶ್ನೆ ಜನಿವಾರ ಇದೆಯೇ?(ಸದ್ಯ ನಮ್ಮ ಧರ್ಮದವರಿಗೆ ಈ ಪ್ರಶ್ನೆ ಕೇಳುವ ಕಾಲ ಬಂದಿರುವುದಂತೂ ನಿಜ) ಅದಕ್ಕೆ ಅವರ ಉತ್ತರ ಕೇಳಿದರೆ ಅಳಬೇಕೋ ನಗಬೇಕೋ ಒಂದೂ ತಿಳಿಯುವುದಿಲ್ಲ,"ಸ್ನಾನ ಮಾಡುವಾಗ ಬಿದ್ದೋಗಿದೆ, ಬನಿಯನ್ ತೆಗೆಯುವಾಗ ಬಿದ್ದೋಗುತ್ತೆ , ಮಂಚಕ್ಕೆ ಸಿಗಿಸಿರುವೆ ಇಗೋ ಹಾಕಿಕೊಂಡು ಬಂದೆ,ಇನ್ನು ಕೆಲವರು ಹೇಳುತ್ತಾರೆ ಕಪಾಟಿನ ಲೊಕರ್ ಅಲ್ಲಿದೆ ತೆಗೆದುಕೊಂಡು ಬರುತ್ತೇನೆ(ಅದೇನು ಚಿನ್ನದ ವಸ್ತುವೇ ಲೊಕರ್ ಅಲ್ಲಿ ಇಡೋಕೆ?) ಅಬ್ಬ ನಮ್ಮ ಜನರಿಗೆ ಜನಿವಾರ ಹಾಕಲು ಏನು ರೋಗ ಅಂತಾ? ತೀರ್ಥ ತೆಗೆದುಕೊಂಡರೆ ಶೀತ ಆರತಿ ತೆಗೆದುಕೊಂಡರೆ ಉಷ್ಣ ಅನ್ನುವ ಎಷ್ಟೋ ಜನರಿದ್ದಾರೆ.ಪೂಜೆಯ ಶುರುವಾತಿಗೆ ಆಚಮನದ ಬಗ್ಗೆ ಹೇಳಿದರೆ ಪೂಜೆ ಮುಗಿದಾಗ ಆಚಮನ ಮಾಡಿ ಅಂದರೆ ಮುಖ ಮುಖ ನೋಡುತ್ತಾರೆ. ಜನರಿಗೆ ತಾವು ಮಾಡುವ ಕೆಲಸದಲ್ಲಿ ಶ್ರದ್ದೆಯಿಲ್ಲದಿರುವುದರಂದ ಶ್ರದ್ದೆ ಹೋಗಲಿ ಲಕ್ಷವೂ ಇಲ್ಲದಿರುವುದರಿಂದ (ಹೋಮ ಶುರುವಾದ ಕೂಡಲೇ ಒಳಹೊಕ್ಕು ಬಾಗಿಲು ಮುಚ್ಚಿ ಕೂಡುತ್ತಾರೆ) ಪುರೋಹಿತರು ಆಡಿದ್ದೆ ಆಟವಾಗಿದೆ.
ದಿನನಿತ್ಯ ಜೋಗಿಂಗ್ ಗೆ, ವಾಕಿಂಗ್ ಗೆ, ಟಿ ವಿ ನೋಡೋಕೆ, ಜಿಮ್ ಗೆ ಹೋಗಲು ಸಮಯ ಬದಿಗಿಡುವ ಜನ ದಿನ ಒಂದು ಅರ್ಧ ಘಂಟೆ ಸಂಧ್ಯಾವಂದನೆಗೆ ದೇವರ ಪೂಜೆಗೆ ತೆಗೆಯದಿರುವುದು ವಿಷಾದದ ಸಂಗತಿ.ಇನ್ನೊಂದು ಬಾರಿ ನಡೆದ ಘಟನೆ ಒಂದು ಕಡೆ ಪೂಜೆಗೆ ಹೋದಾಗ ದೇವರ ಪೂಜೆ ಆಯಿತಾ ಎಂದಾಗ ಆ ಮನುಷ್ಯ ದೇವರನ್ನೆಲ್ಲ ಜರಡಿಯಲ್ಲಿ ಹಾಕಿ ಬೇಸಿನ್ ಕೆಳಗೆ ದೇವರನ್ನೆಲ್ಲ ಹಿಡಿದು ತಂದಿಟ್ಟು ಇಗೋ ಆಯಿತು ಎರಡೇ ನಿಮಿಷ ಅಂದಿದ್ದು ನೋಡಿ ಕೆಲ ಕ್ಷಣ ಸುಮ್ಮನಿದ್ದು ಓ ದೇವರೇ ಏನಪ್ಪಾ ನಿನ್ನ ಲೀಲೆ ಅನ್ನುವುದನ್ನ ಬಿಟ್ಟರೆ ಬೇರೇನೂ ತೋಚಲಿಲ್ಲ.ಹಿರಿಯರನ್ನ ನೋಡಿ ಕಿರಿಯರು ಅನುಕರಿಸುತ್ತಾರೆ ಆದರೆ ಮನೆಯ ಹಿರಿಯರಿಗೇ ಇವೆಲ್ಲ ಬೇಡವಾಗಿದ್ದರೆ ಮಕ್ಕಳಿಗೆ ಸಂಸ್ಕಾರಗಳ ಹೇಗೆ ತಿಳಿಯಬೇಕು?
ಕ್ರೈಸ್ತರಿಗೆ ಏಸುವಿನ ಮುಂದೆ ಕಣ್ಮುಚ್ಚಿ ನಿಂತು ಧ್ಯಾನ ಮಾಡಲು ನಾಚಿಕೆಯಿಲ್ಲ,ಮುಸ್ಲೀಮರಿಗೆ ತಲೆ ಮೇಲೆ ಟೋಪಿ ಹಾಕಿ ನಮಾಜು ಮಾಡಲು ನಾಚಿಕೆ ಇಲ್ಲದಿರುವಾಗ ನಮ್ಮ ಹಿಂದುಗಳಿಗೆ ದೇವರಿಗೆ ನಮಸ್ಕಾರ ಮಾಡಲು ಏಕೆ ನಾಚಿಕೆ ಅನ್ನುವುದೇ ತಿಳಿಯುವುದಿಲ್ಲ.ಎಲ್ಲಿಗೋ ಹೊರಟಾಗ ರಸ್ತೆಯಲ್ಲಿ ದೇವಸ್ಥಾನ ಕಾಣುತ್ತೆ,ಅಲ್ಲಿಗೆ ಹೋಗುವುದು ಬಿಡಿ ರಸ್ತೆಯಲ್ಲಿ ನಿಂತು ದೇವರಿಗೆ ನಮಸ್ಕಾರವನ್ನ ಮಾಡುವುದನ್ನ ನೋಡಿದರೆ ಬಹುಶಃ ಅವ್ರು ನಮಸ್ಕಾರ ಮಾಡಿದ್ದು ದೇವರ ಗಮನಕ್ಕೋ ಬಂದಿರಲಿಕ್ಕಿರಲಿಲ್ಲ ಅನ್ನಿಸುತ್ತೆ.ಆ ಕಡೆ ಈ ಕಡೆ ನೋಡಿ ನಮ್ಮ ಬದಿಗೆ ಯಾರೂ ನೋಡುತ್ತಿಲ್ಲ ಅನ್ನುವುದನ್ನ  ಖಚಿತಪಡಿಸಿಕೊಂಡು ನಮಸ್ಕಾರ ಮಾಡುವವರಿಗೆ ಏನೆನ್ನಬೇಕು? ದೇವರಿಗೆ ಕೈ ಜೋಡಿಸಲು ನಮಗೆ ಯಾರ ಭಯವೇಕೆ? ಹೀಗೆ ಎಷ್ಟೋ ವಿಷಯಗಳಿವೆ ಇವೆಲ್ಲ ನಮ್ಮ ಅನುಭವಕ್ಕೆ ಬಂದಂಥವ ವಿಷಯಗಳು. ಇದೆ ರೀತಿ ಎಷ್ಟೋ ಜನರ ಮನೆಯಲ್ಲಿ ಕೆಲಸ ಮಾಡುವಾಗ ಹೆದರಿಕೊಂಡು ಕೆಲಸ ಮಾಡುವ ಸನ್ನಿವೇಶಗಳು ಕೂಡ ಎದುರಾಗಿವೆ.ಅವರು ಎಲ್ಲಿ ತಪ್ಪು ಹುಡುಕುತ್ತಾರೋ ಅನ್ನುವ ಭಯ,ಅಂದರೆ ಅವರಿಗೆ ಧರ್ಮದ ಮೇಲಿರುವ ಶ್ರದ್ಧೆ ಮತ್ತು ಧರ್ಮದ ಬಗ್ಗೆ ತಿಳಿದುಕೊಂಡಿರುವ ವಿಷಯಗಳು. ನನಗೆ ಕೆಲವು ಜನರ ಬಗ್ಗೆ ಹೆಮ್ಮೆಯಿದೆ ಯಾಕೆಂದರೆ ಒಬ್ಬ ಪುರೋಹಿತನಿಗಿಂತ ಹೆಚ್ಚಿಗೆ ತಿಳಿದಿಕೊಂಡಿರುವುದಕ್ಕೆ. ಹಲವು ಬಾರಿ ಜನರ ಪ್ರಶ್ನೆಗೆ ದಂಗಾಗಿದ್ದೋ ಇದೆ. ಸದ್ಯದ ಪರಿಸ್ಥಿತಿ ನೋಡಿದರೆ ನಮ್ಮ ಧರ್ಮದ ಬಗ್ಗೆ ಸರಿಯಾಗಿ ತಿಳಿದುಕೊಂಡಿರುವವರ ಸಂಖ್ಯೆ ನನಗನ್ನಿಸಿದ ಮಟ್ಟಿಗೆ ಐದರಿಂದ ಹತ್ತು ಪ್ರತಿಶತ ಮಾತ್ರ.ಹಾಗಾಗಿ ನಮ್ಮ ಧರ್ಮದ ಬಗ್ಗೆ ಸದ್ಭಾವನೆ ಮೂಡಬೇಕಾಗಿದೆ.

ಸ್ವಲ್ಪ ನಮ್ಮ ಕನ್ಯಾಮಣಿಯ ಬಗ್ಗೆ ತಿಳಿಯೋಣ.. ಸದ್ಯದ ಕನ್ಯಾಮಣಿಗಳನ್ನ ನೋಡಿದರೆ ಅವರು ಹುಡುಗಿಯರೋ ಅಥವಾ ಹುಡುಗರೋ ಅನ್ನೋದು ತಕ್ಷಣ ತಿಳಿಯೋದೇ ಇಲ್ಲ. ಪ್ಯಾಂಟು ಶರ್ಟು, ಕಟ್ ಮಾಡಿದ ಕೂದಲು,ಕೈಯ್ಯಲ್ಲಿ ಬಳೆಯಿಲ್ಲ, ಕಿವಿಯಲ್ಲಿ ಒಲೆಯಿಲ್ಲ ಕಾಲಲ್ಲಿ ಗೆಜ್ಜೆಯಿಲ್ಲ (ಇದ್ದರೂ ಅದು ಫ್ಯಾಶನ್ ಬಿಟ್ಟರೆ ಮತ್ತೇನೂ ಅಲ್ಲ) ಹಣೆಯಲ್ಲಿ ಕುಂಕುಮವಂತೂ ಇಲ್ಲವೇ ಇಲ್ಲ, ಹೂವು ಮುಡಿಯುವುದು ಗೊತ್ತೇ ಇಲ್ಲ. ಇದಕ್ಕೆ ಕಾರಣ ಮನೆಯಲ್ಲಿ ಇರದ ಸಂಸ್ಕಾರಗಳು. ಮನೆಯಲ್ಲಿ ತಾಯಿ ಚಿಕ್ಕಮ್ಮ ದೊಡ್ಡಮ್ಮ ಅತ್ತೆ ಮುಂತಾದ ಹೆಂಗಸರು ಸರಿಯಾಗಿ ನಡೆದುಕೊಂಡರೆ ಎಲ್ಲ ಸರಿಯಾಗಿರುತ್ತೆ. ಈಗ ಸೀರೆ ಹೋಗಿ ಚುಡಿದಾರ,ಚುಡಿದಾರ ಹೋಗಿ ನೈಟಿ ಗೌನುಗಳು ಬಂದಿವೆ. ಮನೆಯಲ್ಲಿ ಯಾರಾದರೂ ಬಂದಾಗ ಹೇಗಿರಬೇಕು ಅನ್ನುವುದು ತಿಳಿಯದಾಗಿದೆ. ಸೀರೆ ಉಡೋಕೆ ತೊಂದರೆ ನೈಟಿ ಹಾಕಿಕೊಂಡರೆ ಫ್ರೀ ಆಗಿರುತ್ತೆ ಅಂತಾರೆ ನಿಮ್ಮ ತಲೆ ಧರ್ಮ ಬಿಟ್ಟು ಹೋಗಿ ಏನು ಸಾಧಿಸಬೇಕು ಅಂದುಕೊಂಡಿದ್ದೀರಿ? ಅಂದರೆ ಉತ್ತರವಿಲ್ಲ. ಮನೆಯಲ್ಲಿ ಹೆಣ್ಣು ಮಕ್ಕಳು ಅಡಿಗೆ ಮಾಡುವುದು ಹೋಗಲಿ ಒಂದು ದಿನವೂ ಕಸ ಗುಡಿಸಿ ನೆಲ ಒರೆಸಿದ್ದಂತೂ ಬಹುತೇಕ ಇರಲಿಕ್ಕಿಲ್ಲ.ಮನೆಗೆ ಮಗಳು ಎಷು ಹೊತ್ತಿಗೆ ಬರುತ್ತಾಳೆ?ಹೊರಗಡೆ ಏನೇನುಮಾಡುತ್ತಾಳೆ ಅನ್ನುವುದರ ಪರಿವೆ ಕೂಡ ಮನೆಯವರಿಗೆ ಇರುವುದಿಲ್ಲ.ಒಮ್ಮೆ ಮದುವೆಯಲ್ಲಿ ಮದುಮಗಳು ಚುಡಿದಾರ ಹಾಕಿಕೊಂಡು ಬಂದಿದ್ದನ್ನ ಕೇಳಿದರೆ ಎನೆನ್ನುತ್ತೀರೋ? ನೀವು ಸಮಾಜದ ಮುಂದೆ ಬರುವಾಗ ಪೂಜೆ ಪುನಸ್ಕಾರ ಮಾಡುವಾಗಲಾದರೂ ಸ್ವಲ್ಪ ಮಟ್ಟಿಗೆ ನಮ್ಮ ಧರ್ಮದ ವಿಚಾರ ಮಾಡಿದರೆ ತಪ್ಪೇನು?
ವಟ ಪೂರ್ಣಿಮೆಯ ಪೂಜೆ ಇದೆ ಅಂದಾದರೂ ಸೀರೆ ಉಟ್ಟು ಹೂ ಮುಡಿದು ಪೂಜೆ ಮಾಡಿದರೆ ನಿಮ್ಮ ಗಂಟೇನು ಹೋಗುತ್ತೆ? ಪೂಜೆ ಮಾಡುವುದಾದರೂ ಏತಕ್ಕೆ ಅನ್ನುವ ಎಷ್ಟೋ ಮಹಿಳೆಯರಿದ್ದಾರೆ. ನಿಮ್ಮ ಮತ್ತು ವಟ ವೃಕ್ಷದ ಮೈತ್ರಿ ಆಗಲಿ ಅಂತಾದರೂ ಪೂಜೆ ಮಾಡಿ. ಗಂಡನ್ನ ಬದಿಗಿಡಿ. ವಟ ವೃಕ್ಷದಿಂದ ಉತ್ಪತ್ತಿಯಾಗುವ ವಾಯುವೆನಿದೆ ಅದು ನಿಮ್ಮ ಆರೋಗ್ಯಕ್ಕೆ ಉತ್ತಮ. ವೃಕ್ಷದಿಂದ ಅದು ಬಿಟ್ಟು ಕೊಂಬೆ ಮುರಿದು ಅದನ್ನ ಮನೆಯಲ್ಲಿ ತಂದು ಮಾಡುವ ಪೂಜೆಯಿಂದ ಏನೂ ಪ್ರಯೋಜನವಿಲ್ಲ.

ಇನ್ನೊಂದು ವಿಚಾರ ನೀವೇನಾದರೂ ಚರ್ಚಲ್ಲಿ ಹೋಗಿ ನೋಡಿ ಪೋಪ್ ತಮ್ಮ ಪಾರಂಪಾರಿಕ ಬಟ್ಟೆಯಲ್ಲೇ ಬರುತ್ತಾರೆ.ಎಲ್ಲರೂ ಒಮ್ಮೆಲೇ ಕಣ್ಮುಚ್ಚಿಕೊಂಡು "ಓ ಫಾದರ್ " ಅಂತ ಏಸುವಿನ ಸ್ಮರಣೆ ಮಾಡುತ್ತಾರೆ,ಅದೇ ರೀತಿ ಮಸೀದಿಯಲ್ಲಿ ಎಲ್ಲ ಮುಸ್ಲೀಮರೂ ಒಮ್ಮೆಲೇ ನಮಾಜು ಮಾಡುವುದನ್ನ ನಾವು ನೋಡಿದ್ದೇವೆ.ಆದರೆ ನಮ್ಮ ಹಿಂದೂಗಳು ಹೀಗೆ ಸಾಮೂಹಿಕವಾಗಿ ಭಜನೆ ಮಾಡಿರುವುದನ್ನ ನಾನಂತೂ ನೋಡಿಲ್ಲ.ದೇವರ ನಾಮಸ್ಮರಣೆಯ ಹೆಸರೆತ್ತಿದರೆ ಒಳ್ಳೆ ಹರಳೆಣ್ಣೆ ಕುಡಿದವರ ಥರ ಮಾಡ್ತಾರೆ.ಕೈ ಮುಗಿದರೆ ಎಲುಬು ಮುರಿದು ಹೋಗುತ್ತೋ ಅನ್ನುವಂತಿರುತ್ತೆ ಅವರ ಕೈ ಮುಗಿಯುವಿಕೆ.

ದೇವರ ನಾಮಸ್ಮರಣೆ ಅನ್ನುವುದು ಕೇವಲ ಆಧ್ಯಾತ್ಮಿಕ ಆನಂದವನ್ನ ನೀಡುವುದಲ್ಲದೆ ಮನೆಯಲ್ಲಿನ ಎಷ್ಟೋ ಜಗಳಗಳನ್ನ ನಿರ್ಮೂಲನೆ ಮಾಡುವ ಶಕ್ತಿಯನ್ನ ಹೊಂದಿದೆ.ಮನೆಯಲ್ಲಿ ಕಸ ಗುಡಿಸುವಾಗ,ಸ್ನಾನ ಮಾಡುವಾಗ,ಅಡುಗೆ ಮಾಡುವಾಗಲಾದರೂ ದೇವರ ಸ್ತೋತ್ರಗಳನ್ನ ಹೇಳಬಹುದಲ್ಲ? ಬಾಥರೂಂ ಸಿಂಗರ್ ಅಂತ ತಮ್ಮನ್ನು ತಾವು ಹೊಗಳಿಕೊಳ್ಳುವವರ ಸಂಖ್ಯೆಗೇನೂ ಕಡಿಮೆಯಿಲ್ಲ,ಅಂಥವರು ಸ್ನಾನ ಮಾಡುವಾಗ ದೇವರ ಸ್ಮರಣೆ ಮಾಡುವುದರಲ್ಲಿ ತಪ್ಪೇನಿಲ್ಲ. ಇನ್ನು ಕೆಲವರು ಕೇಳುತ್ತಾರೆ "ಮನಸ್ಸಿನಲ್ಲಿ ನಾಮಸ್ಮರಣೆ ಮಾಡಿದರೆ ಆಗಬಹುದೋ?" ಮನಸ್ಸಿನಲ್ಲಿ ಬರೆದುಕೊಳ್ಳಲು ಸಾಧ್ಯವೇ ? ಇಲ್ಲ ತಾನೇ ಬರೆಯೋಕೆ ಕಾಗದ ಪೆನ್ನು ಅವಶ್ಯಕ ಅಲ್ಲವೇ ಅದೇ ರೀತಿ ದೊಡ್ಡ ಸ್ವರದಲ್ಲಿ ನಾಮಸ್ಮರಣೆ ಮಾಡುವುದರಿಂದ  ನಿಮ್ಮ ಮನಸ್ಸಿಗಲ್ಲದೆ ಸುತ್ತಮುತ್ತಲಿನ ಪರಿಸರಕ್ಕೂ ಶುಭಾದಾಯಕವಾಗಿರುತ್ತೆ. ಮನಸ್ಸಿನಲ್ಲಿರುವುದು ಕಾರ್ಯರೂಪಕ್ಕೆ ಬರದಿದ್ದರೆ ಮನಸ್ಸಿನಲ್ಲಿರುವುದಕ್ಕೆ ಯಾವುದೇ ಅರ್ಥವಿಲ್ಲ.
ನಿಮ್ಮಲ್ಲಿ ಕೆಲವರು ಭಜನೆ ನಾಮಸ್ಮರಣೆ ಮಾಡುತ್ತಿರಬಹುದು ಆದರೆ ಮಾಡದಿರುವವರಿಗೆ ನೀವು ಮಾದರಿಯಾಗಬೇಕು. ಮೊದಲೇ ಹೇಳಿದಂತೆ ಸಂಸ್ಕಾರಗಳು ಅನ್ನೋದು ಹಿರಿಯರಿಂದ ಕಿರಿಯರಿಗೆ ಬರುವಂತಹದು ಆದ್ದರಿಂದ ಮನೆಯ ಹಿರಿಯರು ಮಕ್ಕಳಿಗೆ ಸಂಸ್ಕಾರಗಳನ್ನ ಹೇಳಿಕೊಡಬೇಕಾಗಿದೆ.ಅಪ್ಪ ಮನೆಯಲ್ಲಿ ಸಂಧ್ಯಾವಂದನೆ ಪೂಜೆ ಮಾಡಿದರೆ ಮಗ ಕೂಡ ಅದರ ಅನುಕರಣೆ ಮಾಡುತ್ತಾನೆ. ಅಮ್ಮ ಬೆಳಿಗ್ಗೆ ಎದ್ದು ಮನೆಯುದುರು ರಂಗೋಲಿ ಹಾಕಿದರೆ ಮಗಳಿಗೂ ಕೂಡ ಅದು ತನ್ನಿಂತಾನೆ ರೂಢಿಯಾಗುತ್ತೆ. ಮಕ್ಕಳು ಅದನ್ನ ಅನುಕರಿಸದಿದ್ದರೆ ತಿದ್ದುವ ಕೆಲಸ ನಿಮ್ಮದು,ಅದನ್ನ ಬಿಟ್ಟು "ಬೇಡ ಮಗ ನಾನು ಪೂಜೆ ಮಾಡ್ತೀನಿ ನೀನು ಮಲಗು" ಅನ್ನೋದನ್ನ ಬಿಟ್ಟು ನಿಮ್ಮ ಜೊತೆ ಕೂಡಿಸಿಕೊಂಡು ಪೂಜೆ ಪುನಸ್ಕಾರಗಳನ್ನ ಮಾಡಿದರೆ ಅವರಿಗೂ ಅದರ ಬಗ್ಗೆ ಕುತೂಹಲ ಮೂಡುತ್ತದೆ. ಹೇಗೆ ನೀವು ನಿಮ್ಮ ಶರೀರಕ್ಕಾಗಿ ವ್ಯಾಯಾಮ ಮಾಡುತ್ತಿರೋ ಹಾಗೆಯೆ ಸಂಧ್ಯಾವಂದನೆ ಮತ್ತು ಗಾಯತ್ರಿ ಜಪ ಕೂಡ ನಿಮ್ಮ ಸ್ವಂತದ ಉದ್ಧರಕ್ಕಾಗಿಯೇ ಇರುವಂತಹುದು.ಅದನ್ನ ಬೇರೆಯವರ ಉಪಕಾರಕ್ಕಾಗಿ ಮಾಡದೆ ನಿಮ್ಮ ಸಲುವಾಗಿ ಮಾಡಿ. ಪ್ರತಿಯೊಬ್ಬರೂ ತಮ್ಮ ಧರ್ಮದ ಉಳಿವಿಗಾಗಿ ಹೋರಾಡುತ್ತಿರುವಾಗ ನಮ್ಮ ಹಿಂದೂ ಧರ್ಮದವರು ಈ ಧರ್ಮದಲ್ಲಿ ಹುಟ್ಟಿರುವುದಕ್ಕೆ ನಾಚಿಕೆ ಪಟ್ಟುಕೊಳ್ಳುವುದೇಕೆ? ನಮ್ಮ ಧರ್ಮದ ಆಚಾರ ವಿಚಾರಗಳನ್ನ ಮುಚ್ಚಿಡುವುದೇಕೆ?ಇದರಿಂದ ನೀವು ಈ ಧರ್ಮದಲ್ಲಿ ಹುಟ್ಟಿದ್ದು ಬರೀ ಹಿಂದೂ ಧರ್ಮವಲ್ಲದೆ ಮಾನವ ಧರ್ಮದಲ್ಲಿ ಹುಟ್ಟಿದ್ದೇ ವ್ಯರ್ಥವಾದಂತೆ.ಹಾಗಾಗಿ ಇಷ್ಟು ದಿನ ನಡೆದಿದ್ದರ ಬಗ್ಗೆ ಚಿಂತಿಸದೆ ಮುಂದೆ ನಡೆಯಬೇಕಾದ ವಿಚಾರಗಳ ಬಗ್ಗೆ ಚಿಂತಿಸೋಣ.




 ನಾನು ಇಷ್ಟೆಲ್ಲಾ ಬರೆದಿದ್ದು ನಮ್ಮ ಧರ್ಮದಲ್ಲಿನ ಕೀಳು ಭಾವನೆಯನ್ನ ತೋರಿಸಲು ಅಲ್ಲ. ಇದು ಸಧ್ಯದ ಪರಿಸ್ಥಿತಿ ಆಗಿದೆ.ಇದರ ಬಗ್ಗೆ ಯಾವುದೋ ಜನರ ಬಾಯಲ್ಲಿ ಕೇಳಿ ಸುಧಾರಿಸಿಕೊಳ್ಳುವುದಕ್ಕಿಂತ ನಮ್ಮ ನಮ್ಮಲ್ಲಿಯೇ ಈ ವಿಷಯ ಇತ್ಯರ್ಥವಾದರೆ ಒಳಿತಲ್ಲವೇ?
 
ಆದ್ದರಿಂದ ಎಲ್ಲ ಹಿಂದುಗಳೇ ಎಚ್ಚೆತ್ತುಕೊಳ್ಳಿ ಇಂದೇ ಪ್ರತಿಜ್ಞೆ ಮಾಡಿ
" ನಾನು ಬ್ರಾಹ್ಮಣ ಅನ್ನುವುದಕ್ಕೆ ನನಗೆ ಹೆಮ್ಮೆ ಇದೆ"
"ನಾನು ಹುಟ್ಟಿರುವುದು ಹಿಂದೂ ಧರ್ಮದಲ್ಲಿ ಅಂತ ಹೇಳಿಕೊಳ್ಳುವುದಕ್ಕೆ ನನಗೆ ಗರ್ವವಿದೆ."
"ಇಷ್ಟೇ ಅಲ್ಲದೆ ದಿನವೂ ಸಂಧ್ಯಾವಂದನೆ ಮತ್ತು ದೇವರ ನಾಮಸ್ಮರಣೆಗಾಗಿ ಕೆಲಹೊತ್ತನ್ನ ಮೀಸಲಾಗಿಡುವೆ.ನಮ್ಮ ಧರ್ಮದ ಆಚಾರ ವಿಚಾರಗಳನ್ನ ನಮ್ಮ ಮಕ್ಕಳಿಗೆ ನಮ್ಮ ಸಮಾಜಕ್ಕೆ ಸಾರುವೆ."
ಈ ಪ್ರತಿಜ್ಞೆಯನ್ನ ಮಾಡಿದಲ್ಲಿ ಮೊದಲು ನಾವು,ನಮ್ಮ ಕುಟುಂಬ,ನಮ್ಮ ಸಮಾಜ ನಂತರ ನಮ್ಮ ಈ ಧರ್ಮ ಹೇಗೆ ತಲೆ ಎತ್ತಿ ನಿಲ್ಲುವುದು ಅನ್ನುವುದನ್ನ ನೀವೇ ನೋಡಿ. ಆಗ ನಾವು ಹೆಮ್ಮೆಯಿಂದ ಹೇಳಬಹುದು

 " ಸನಾತನ ಹಿಂದೂ ಧರ್ಮಕ್ಕೆ ಜಯವಾಗಲಿ"


ಹಿಂದೂ ಸಂಸ್ಕೃತಿಯಲ್ಲಿ ಶೋಡಷ ಸಂಸ್ಕಾರಗಳು.

ಭಾಗ ೧:

ಸಂಸ್ಕಾರ = ಸಮ್ + ಕೃ 
‘संस्कारो हि गुणान्तराधानं उच्यते ।’
ಒಂದು ವಸ್ತುವಿನಲ್ಲಿರುವ ಅವಗುಣಗಳನ್ನ ತೊಳೆದು, ಶುದ್ಧಗೊಳಿಸಿ, ಉತ್ತಮಗೊಳಿಸಿ, ಅದಕ್ಕೆ ಚೇತನ, ಕಾಂತಿ,
ತುಂಬಿಸಿ ಹೊಳಪು ನೀಡುವುದೇ ಸಂಸ್ಕಾರದ ಮೂಲ ಅರ್ಥ.ಯಾವ ಕ್ರಿಯೆಯಿಂದ ಮನುಷ್ಯನ ಆಂತರಿಕ ದೋಷ
ನಿವಾರಣೆ ಆಗಿ ಸದ್ಗುಣ ವಿಕಸಿಸಿ ಶಕ್ತಿ ಸಂವರ್ಧನೆ ಆಗುತ್ತೋ ಅದು ಸಂಸ್ಕಾರ.ಸಂಸ್ಕಾರ ಕಲ್ಪನೆಯ ವಿಸ್ತಾರ,
ಅವುಗಳ ವಿಷಯ ವಿವರವಾಗಿ ಕಂಡುಬರುವುದು ‘ಗೃಹ್ಯಸೂತ್ರದಲ್ಲಿ. ಗೃಹ ಜೀವನಕ್ಕೆ ಸಂಬಂಧಪಟ್ಟ ಆಳವಾದ
ಚಿಂತನೆ ಗೃಹ್ಯಸೂತ್ರ ದಲ್ಲಿದೆ.ಮರಣೋತ್ತರ ಸಂಸ್ಕಾರಗಳು ದೈಹಿಕ ಸಂಸ್ಕಾರಕ್ಕೆ ಸಂಬಧಪಟ್ಟದಲ್ಲ.

ಭಾರತಿಯ ಪರಂಪರೆಯ ಅನುಸಾರ ಮನುಷ್ಯನ ಪ್ರತಿಯೊಂದು ಕ್ರಿಯೆಯೂ ಸಂಸ್ಕಾರಯುಕ್ತವಾಗಿರಬೇಕು.
ಶೋಡಷ ಅಂದರೆ ಹದಿನಾರು,ಸನಾತನ ಧರ್ಮದ ಪ್ರಕಾರ ಪ್ರತಿಯೊಂದು ಜೀವಕ್ಕೂ ಸುಸಂಸ್ಕೃತ ಮಾಡುವುದಕ್ಕಾಗಿ
ಗರ್ಭಾಧಾರಣೆಯಿಂದ ಹಿಡಿದು ಮದುವೆಯ ವರೆಗೆ ಪ್ರಮುಖವಾಗಿ ಹದಿನಾರು ಸಂಸ್ಕಾರವನ್ನ ಹೇಳಲಾಗಿದೆ.
ಕೆಲವು ಗ್ರಂಥಗಲ್ಲಿ ೪೮ ಸಂಸ್ಕಾರಗಳನ್ನ ಹೇಳಲಾಗಿದೆ.ಇನ್ನು ಕೆಲವು ಗ್ರಂಥಗಲ್ಲಿ ೨೫ ಸಂಸ್ಕಾರಗಳನ್ನ ಹೇಳಲಾಗಿದೆ.
ಅದರಲ್ಲಿ ಮುಖ್ಯವಾದವು ೧೬ ಸಂಸ್ಕಾರಗಳು.


ಈ ಸಂಸ್ಕಾರಗಳ ಮುಖ್ಯ ಉದ್ದಿಷ್ಟವೆನೆಂದರೆ:
೧.ಬೀಜದೊಷವನ್ನ ತಡೆಯಲು ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೨.ಗರ್ಭದೊಷವನ್ನ ತಡೆಯಲು ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೩.ಪೂರ್ವಜನ್ಮದ ದೋಷದಿಂದ ಯಾವುದೇ ದೇವರು ಮತ್ತು ಪಿತೃಗಳ ದೋಷವಿದ್ದರೆ,ಆ ದೋಷದ ನಿವಾರಣೆಗಾಗಿ,
ದೇವ ಮತ್ತು ಪಿತೃಗಳ ಋಣದಿಂದ ಮುಕ್ತವಾಗಲು ಮತ್ತು ಕುಲದೇವತೆ,ಇಷ್ಟದೇವತೆ,ಮಾತೃದೇವತೆ,ಪ್ರಜಾಪತಿ,
ವಿಷ್ಣು,ಇಂದ್ರ,ವರುಣ,ಅಷ್ಟದಿಕ್ಪಾಲ,ಸವಿತಾದೆವತಾ,ಅಗ್ನಿದೆವತಾ ಇತ್ಯಾದಿ ದೇವತೆಗಳನ್ನ ಪ್ರಸನ್ನಗೊಳಿಸಿ ಅವರ
ಆಶೀರ್ವಾದವನ್ನ ಪಡೆಯಲು  ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೪.ಮಗು ಆರೋಗ್ಯವಂತ,ಬಲವಂತ,ಆಯುಷ್ಯವಂತನಾಗಲು ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೫.ಮಗು ಬುದ್ಧಿವಂತ,ಸದಾಚಾರಿ,ಧರ್ಮದಲ್ಲಿ ಹೇಳಿದಂತೆ ಆಚರಣೆ ಮಾಡುವಂತನಾಗಲು ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೬.ನಮ್ಮ ಸತ್ಕೃತಿಯಿಂದ ಮತ್ತು ಧರ್ಮದ ವೃತ್ತಿಯಿಂದ ಆತ್ಮೋನ್ನತಿ ಮಾಡಿಕೊಂಡು ತಮ್ಮ ವಂಶದ ಮೊದಲನೇ
ಹನ್ನೆರಡು ಪೀಳಿಗೆ ಮತ್ತು ನಂತರದ ಹನ್ನೆರಡು ಪೀಳಿಗೆಯ ಉದ್ಧಾರ ಮಾಡುವ ಕ್ಷಮತೆ ಮಗುವಿಗೆ ಬರುವ
ಸಲುವಾಗಿ ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೭.ಸ್ವಂತದ ಆಧ್ಯಾತ್ಮಕ ಉನ್ನತಿಯನ್ನ ಮಾಡಿಕೊಂಡು ಬ್ರಹ್ಮಲೋಕ ಪ್ರಾಪ್ತಿ ಅಥವಾ ಮೋಕ್ಷ ಪಡೆಯುವ ಕ್ಷಮತೆ ಬರುವ
ಸಲುವಾಗಿ ಈ ಸಂಸ್ಕಾರಗಳನ್ನ ಮಾಡಲಾಗುತ್ತೆ.
೮.ಸನಾತನ ಧರ್ಮದ ಪ್ರಕಾರ ಪ್ರತಿಯೊಂದು ಮನುಷ್ಯನ ಪ್ರತಿಯೊಂದು ಕೃತಿ ಮತ್ತು ಪ್ರತಿ ಸಂಸ್ಕಾರಗಳೂ ಕೂಡ
ಪರಮೇಶ್ವರನನ್ನ ಪ್ರಸನ್ನಗೊಳಿಸಲು ಇರುವಂತದ್ದು.ಪರಮೇಶ್ವರನ ಕೃಪೆಯಿಂದ ಮಾತ್ರ ನಮ್ಮ ಎಲ್ಲ ಉದ್ದೇಶ ಈಡೇರುವುದು.
ಈ ಎಲ್ಲ ಸಂಸ್ಕಾರಗಳನ್ನ ಮಗುವಿನ ತಂದೆ ತಾಯಿ ಮತ್ತು ಗುರುಗಳು ಮಾಡುವುದಿರುತ್ತದೆ.

ಶೋಡಷ ಸಂಸ್ಕಾರಗಳು
೧.ಗರ್ಭಾದಾನ (ಋತುಶಾಂತಿ)
೨.ಪುಂಸವನ
೩.ಅನವಲೋಭನ
೪.ಸೀಮಂತೊನ್ನಯನ
೫.ಜಾತಕರ್ಮ
೬..ನಾಮಕರಣ.
೭.ನಿಷ್ಕ್ರಮಣ
೮.ಅನ್ನಪ್ರಾಶನ
೯.ಚೌಲ
೧೦.ಉಪನಯನ(ಮುಂಜಿ)
೧೧.ಮಹಾನಾಮ್ನೀ ವ್ರತ
೧೨.ಮಹಾ ವ್ರತ
೧೩.ಉಪನಿಷದ್ ವ್ರತ
೧೪.ಗೋದಾನ ವ್ರತ
೧೫.ಸಮಾವರ್ತನ
೧೬.ವಿವಾಹ(ಮದುವೆ)

ಪ್ರತಿಯೊಂದು ಸಂಸ್ಕಾರಕ್ಕೂ ಒಂದೊಂದು ಸಮಯ (ವಯಸ್ಸು) ಹೇಳಿದೆ.ಆಯಾ ಸಮಯಲ್ಲಿ ತಪ್ಪದೆ ಮಾಡುವಂತದ್ದು
ಆಸ್ತೀಕಧರ್ಮ.ಕಾರಣಾಂತರದಿಂದ ಸಂಸ್ಕಾರಗಳನ್ನ ಆಯಾ ಸಮಯದಲ್ಲಿ ಮಾಡಲಾಗದಿದ್ದರೆ ಅಥವಾ ತಪ್ಪಿ ಹೋದಲ್ಲಿ ಮುಂದಿನ ಸಂಸ್ಕಾರಮಾಡುವಾಗ ಹಿಂದಿನ ಸಂಸ್ಕಾರದ ಪ್ರಾಯಶ್ಚಿತ್ತವನ್ನ ಮಾಡಿಯೇ ಮುಂದಿನ ಸಂಸ್ಕಾರ ಮಾಡಬೇಕು.'ಷೋಡಶ ಸಂಸ್ಕಾರಗಳು’ಪ್ರಮುಖವಾಗಿ ತ್ರಿವರ್ಣ (ಬ್ರಾಹ್ಮಣ, ಕ್ಷತ್ರಿಯ, ವೈಶ್ಯ) ದವರಿಗೆ ಮಾತ್ರ ಇರುವಂತಹದ್ದು.

ಮುಂದಿನ ಭಾಗದಲ್ಲಿ ಶೋಡಷ ಸಂಸ್ಕಾರದ ವಯೋಮಾನ, ಸಂಸ್ಕಾರ ಲೋಪದ ಪ್ರಾಯಶ್ಚಿತ್ತ ಮತ್ತು
ಸಂಸ್ಕಾರದ ಪೂರ್ವ ಕೃತ್ಯಗಳ ಬಗ್ಗೆ ತಿಳಿಯೋಣ.

ಆಧಾರ ಗ್ರಂಥ: ಧರ್ಮಸಿಂಧು ಮತ್ತು ಶೋಡಷ ಸಂಸ್ಕಾರ.