ಮನೆ ಕಟ್ಟಿ ನೋಡು ಮದುವೆ ಮಾಡಿ ನೋಡು:


ಶರಣು ಶರಣಾರ್ತಿ ಓದುಗರೇ..ನೋಡಿ ಎಲ್ಲ ವಿಷಯ ಬಿಟ್ಟು ಮನೆ ಕಟ್ಟಿ ನೋಡು ಮಾಡುವೆ ಮಾಡಿ ನೋಡು ಅನ್ನುವಲ್ಲಿಗೆ ಬಂದು ನಿಂತಿದೀನಿ ನಾನು.ಹೌದು ಕಣ್ರೀ ಈ ಎರಡು ವಿಷಯಗಳು ನಮ್ಮ ಜೀವನದಲ್ಲಿ ಆಗಲಿಲ್ಲ ಅಂದ್ರೆ ನಾವು ಹುಟ್ಟಿದ್ದೇ ವ್ಯರ್ಥ ಅಂತ ಜನ ಹೇಳ್ತಾರೆ ನಾನಲ್ಲ.ಆದರೆ ಒಂದು ವಿಷ್ಯ ಏನಪ್ಪಾ ಅಂದ್ರೆ ನನಗಂತೂ ಈ ಎರಡೂ ವಿಷಯದಲ್ಲಿ ಹೆಚ್ಚಿಗೆ ವ್ಯತ್ಯಾಸ ಇಲ್ಲ ಅಂತ ಅನ್ನಿಸಿದ್ದು. ಯಾಕೆಂದರೆ ಈಗಿನ ಕಾಲದಲ್ಲಿ ಮನೆ ಕಟ್ಟೋದೂ ಸುಲಭ ಅಲ್ಲ ಮದುವೆ ಮಾಡೋದೂ ಸುಲಭವಲ್ಲ. ಈ ಎರಡೂ ವಿಷಯಗಳೂ ಯಾವುದೇ ಯುದ್ಧಕ್ಕಿಂತ ಕಡಿಮೆಯೇನೂ ಇಲ್ಲ ಬಿಡಿ .ಮಂತ್ರಕ್ಕಿಂತ ಉಗುಳೇ ಜಾಸ್ತಿ ಅನ್ನುವಂತೆ ವಿಷಯಕ್ಕಿಂತ ಪೀಠಿಕೆನೇ  ಜಾಸ್ತಿ ಆಗುವುದು ಬೇಡ ವಿಷಯಕ್ಕೆ ಬರೋಣ..

ಈಗ ನೋಡಿ ಮೊದಲು ಮನೆ ಕಟ್ಟಬೇಕು ಅಂದ್ರೆ ಮುಖ್ಯವಾಗಿ ಬೇಕಾಗಿದ್ದು ಅಂದ್ರೆ ಜಾಗ,ಅದೇ ರೀತಿ ಮದುವೆಗೆ ಗಂಡು/ಹೆಣ್ಣು. ದೊಡ್ಡ ಸಮಸ್ಯೆ ಇರೋದು ಇಲ್ಲೇ ನೋಡಿ. ಈಗ ಜಾಗ ಬೇಕು ಅಂದ್ರೆ ಅದರ ಬಗ್ಗೆ ಅಪೇಕ್ಷೆಗಳು ಬಹಳ ಇರುತ್ತೆ, ಮದುವೆಯ ವಿಚಾರದಲ್ಲಂತೂ ಬಿಡಿ. ನಮಗೆ ೩೦/೪೦ ಸೈಟೇ ಬೇಕು, ಅಂದ್ರೆ ಬಾಳ ಸಂಗಾತಿ ಇಷ್ಟೇ ಹೈಟು ಇಷ್ಟೇ ವೈಟು ಇರ್ಬೇಕು ಅನ್ನೋದು ಸಹಜ.ಇನ್ನು ಸೈಟು ಒಳ್ಳೆ ಏರಿಯದಲ್ಲೇ ಬೇಕು, ಮದುವೆಯಾಗುವವರು ಕೂಡ ಒಳ್ಳೆ ಮನೆಯವರಾಗಿರಬೇಕು ಅಂತ ಬೇರೆ ಹೇಳಬೇಕಾಗಿಲ್ಲ.. ಮುಂದೆ ಸೈಟು ಸಮತಟ್ಟಾಗಿರಬೇಕು ಅಂದ್ರೆ ಎತ್ತರ ತಗ್ಗು ಏನು ಇರಬಾರದು, ಅದೇ ರೀತಿ ಸಂಗಾತಿ ಆಗುವವರು ಫಿಟ್ ಆಗಿರಬೇಕು(ಕೈ ಕಾಲು ಮುಖ ಮೂತಿ ಎಲ್ಲ ಸರಿಯಾಗಿರಬೇಕು ಅಂತ ಅರ್ಥ) ಮದುವೆಯಾದ ಮೇಲೆ ನೋಡೋಣ ಅಂತ ಹೇಳೋಕೆ ಆಗುತ್ತಾ? ಸೈಟೇ ಸರಿಯಾಗಿಲ್ಲ ಅಂದ್ರೆ ಮನೆ ಕಟ್ಟೋದಾದರೂ ಹೇಗೆ ಅಲ್ವ? ಇಷ್ಟಕ್ಕೆ ಮುಗಿಯೂಲ್ಲ ಸ್ವಾಮೀ. ಮುಂದೆ ಇದೆ ನೋಡಿ ಮೇಲಿನ ಎಲ್ಲ ಕ್ವಾಲಿಟಿ  ಇದ್ದಮೇಲೂ ಸೈಟಿನ ಪೇಪರ್ ಸರಿಯಾಗಿಲ್ಲ ಅಂದ್ರೆ ಏನು ಮಾಡೋಕೆ ಬರುತ್ತೆ?, ಮದುವೆಯಾಗುವವರ ನಡುವಳಿಕೆನೆ ಸರಿಯಾಗಿಲ್ಲ ಅಂದ ಮೇಲೆ ಮದುವೆಯಾಗೋಕೆ ಆಗುತ್ತಾ? ಸೈಟಿನ ಬಗ್ಗೆ ಸ್ವಲ್ಪನಾದರೂ ಚೌಕಸಿನೆ ಮಾಡದೆ ಅದರ ಬಗ್ಗೆ ನಿರ್ಧಾರ ತಗೊಳೋಕೆ ಆಗುತ್ತಾ?ಇದೆ ರೀತಿ ಮದುವೆಯಲ್ಲೂ ಕೂಡ. ದೇವರೇ ಕಷ್ಟ ಇದೆ..

ಅಂತೂ ಇಂತೂ ಹತ್ತಾರು ಕಡೆ ಚೌಕಾಶಿ ಮಾಡಿ ಎಂಟತ್ತು ರಿಜೆಕ್ಟ್ ಮಾಡಿ ಕೊನೆಗೆ ಒಂದು ಸೈಟು ಬುಕ್ ಮಾಡ್ತಿವಿ.ಅಂದ್ರೆ ಮದುವೆಗೆ ವರ/ವಧು ಬುಕ್ ಮಾಡ್ತಿವಿ(ಈಗ ನಿಶ್ಚಿತಾರ್ಥ ಅಂದ್ರೆ ಬುಕ್ ಅಂದ ಹಾಗೆ ಯಾಕೆಂದ್ರೆ ಬೇಡವಾದರೆ ಕ್ಯಾನ್ಸಲ್ ಕೂಡ ಸುಲಭವಾಗಿ ಆಗುತ್ತೆ.) ಇಲ್ಲಿಂದ ಯುದ್ಧಕ್ಕೆ ರಣಕಹಳೆ ಮೂಡಿದ ಹಾಗೆ. ಹೌದು ರೀ ಮೊದಲೇ ಹೇಳಿದಂತೆ ಈ ಎರಡೂ ವಿಷಯ ಯುದ್ಧಕ್ಕಿಂತ ಏನೂ ಕಡಿಮೆಯಿಲ್ಲ. ಸೈಟು ತಗೊಂಡ ಮೇಲೆ ನಿಶ್ಚಿತಾರ್ಥ ಆದ ಮೇಲೆ ಲರ್ನಿಂಗ್ ಲೈಸೆನ್ಸ್ ಸಿಕ್ಕ ಹಾಗೆ ಹಾಗಾಗಿ ಆದಷ್ಟು ಬೇಗ ಪರಮ್ನೆಂಟ್ ಲೈಸೆನ್ಸ್ ತೆಗೆಯದೆ ಬೇರೆ ಪರ್ಯಾಯವೇ ಇಲ್ಲ. ಮನೆ ಕಟ್ಟೋವಾಗ ವಾಸ್ತು ಹೇಗಿರಬೇಕು(ಪೂರ್ವಕ್ಕೆ ಬಾಗಿಲು,ಪಶ್ಚಿಮಕ್ಕೆ ಅದು,ಉತ್ತರಕ್ಕೆ ಇದು ಹೀಗೆ ಸುಮಾರು ಇವೆ ಬಿಡಿ) ಅಂತಾ ನೋಡದೆ ಇರೋಕಾಗಲ್ಲ,ಮದುವೆ ಮಾಡೋವಾಗ ವಿಧಿ ವಿಧಾನಗಳ ಮರೆಯೋಕಾಗಲ್ಲ(ಈಗಿನ ಯುಗದಲ್ಲಿ ಇವೆಲ್ಲ ಕಡಿಮೆಯಾಗಿವೆ). ಮನೆ ಕಟ್ಟೋದಕ್ಕೂ  ಮದುವೆ ಮಾಡುವುದಕ್ಕೋ ಜನ ಬೇಕು ಆಳು ಕಾಳು ಬೇಕು, ಸಾವಿರಾರು ಸಾಮಾನುಗಳು ಬೇಕು. ಇವೆಲ್ಲದರ ಮಧ್ಯೆ ಪ್ರಶ್ನೆ ಮಾಡುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಅಡುಗೆ ಮನೆ ಈ ಕಡೆ ಇದ್ರೆ ಚೆನ್ನಾಗಿರೋದು, ಆ ಟೈಲ್ಸ್ ಬೇಡವಾಗಿತ್ತು,ಈ ಬಣ್ಣ ಸರಿಯಾಗಿಲ್ಲ ಅದೇ ರೀತಿ ಮದುವೆಯ ವಿಚಾರದಲ್ಲೋ ಈ ಸೀರೆ ಚೆನ್ನಾಗಿಲ್ಲ, ಮಂಟಪ ಸ್ವಲ್ಪ ಬೇರೆ ತರಹ ಇರಬೇಕಿತ್ತು,ಆ ಭಟ್ರು ಬೇಡ ಅಬ್ಬಾ.. ಒಬ್ಬರ ವಿಚಾರಗಳು ಇನ್ನೊಬ್ಬರಿಗೆ ಆಗಿ ಬರೋಲ್ಲ.. ಎಲ್ಲರ ಒಮ್ಮತದಿಂದ ಒಂದು ಮನೆ ಅಥವಾ ಮದುವೆ ಆಗಿದ್ದಂತೂ ಇರಲಿಕ್ಕಿಲ್ಲ. ಇವೆಲ್ಲದರ ನಡುವೆ ಪ್ರತಿಯೊಬ್ಬರೂ ತಮ್ಮ ತಮ್ಮ ವಿಚಾರವನ್ನ ಮಂಡಿಸುತ್ತಾರೆಯೇ ಹೊರತು ಯಾರೊಬ್ಬರೂ ಜವಾಬ್ದಾರಿಯನ್ನ ತೆಗೆದುಕೊಳ್ಳೋ ಸುದ್ದಿಗೆ ಬರುವುದಿಲ್ಲ. ಇವೆಲ್ಲ ಪೂರ್ವ ತಯಾರಿಗಳಷ್ಟೇ ಯಾವುದೇ ಮನೆ ಅಥವಾ ಮದುವೆ ಯಾವುದೇ ಗೊಂದಲವಿಲ್ಲದೆ ನಡುಯುವುದಕ್ಕೆ ಸಾಧ್ಯವೇ? ಖಂಡಿತ ಇಲ್ಲ ಮುಖ್ಯ ವಿಷಯಗಳೆಷ್ಟೋ ಹೊರ ಬರದೆ ಒಳಗಡೆಯೇ ಹೊಗೆಯಾಡುತ್ತಿರುತ್ತದೆ. ಮನೆಯ ವಿಷಯದಲ್ಲಿ ಯಾವುದೋ ಕಾಗದಪತ್ರದ ಗೊಂದಲ ಇದ್ದೆ ಇರುತ್ತೆ ಅಥವಾ ಯಾರದ್ದಾದರೂ ತಕರಾರುಗಳಂತೂ ಸಹಜ. ಮದುವೆಯಲ್ಲೋ ಕೇಳಬೇಡಿ ಹೆಂಗಸರ ಮನಾಪಮಾನಗಳ ವಿಷ್ಯ ಎಷ್ಟೋ ವರ್ಷಗಳ ನಂತರವೂ ಮರೆಯದೆ ಹಾಗೆ ಉಳಿದಿರುತ್ತೆ. ಉಸ್ಸಪ್ಪ..

ಅಂತೂ ಇಂತೂ ಎಲ್ಲ ಆಯಿತು.. (ಅಂದರೆ ಮನೆ ಕಟ್ಟುವ ಕೆಲಸ ಮುಗಿತು ಮದುವೆಯ ತಯಾರಿಗಳೆಲ್ಲ ಆಯಿತು ಮುಖ್ಯವಾದದ್ದು ತೋರಿಕೆಯ ವಿಷಯ) ಗೃಹಪ್ರವೇಶ ಅದೇ ರೀತಿ ಮದುವೆ. ಅಂದರೆ ಇಷ್ಟು ದಿನ ಕಷ್ಟಪಟ್ಟಿದ್ದೂ  ತಾವೇ ಮತ್ತೆ ಎಲ್ಲರಿಗೂ ಸಿಹಿ ಊಟವನ್ನ  ಹಾಕಬೇಕಾಗಿದ್ದೋ ತಾವೇ ಇದು ಯಾಕೆ ಅಂತ ನನಗೆ ಇದುವರೆಗೂ ತಿಳಿದಿಲ್ಲ. ಭಟ್ಟರಿಗೆ ಉಟಕ್ಕೆ ಕರೆದಿದ್ದೂ ಅಲ್ಲದೆ ಭೋಜನ ದಕ್ಷಿಣೆ ಬೇರೆ ಕೊಡಬೇಕಂತೆ ಇದ್ಯಾವ ನ್ಯಾಯನೋ? ಇರಲಿ ಬಿಡಿ ಇಷ್ಟು ಮಾಡಿದ ಕಷ್ಟಕ್ಕೆ ಜನರ ಮಾತನ್ನ ಕೇಳಿ ಹಾರ್ಟ್ ಅಟಾಕ್ ಆಗದಿದ್ದರೆ ಸಾಕು(ಯಾಕೆಂದರೆ ಪ್ರತಿಯೊಬ್ಬರ ವಿಚಾರಗಳೂ ಬೇರೆ ಬೇರೆ. ಎಲ್ಲ ಮುಗಿದ ಮೇಲೂ ಸೂಚನೆ ಕೊಡುವವರಿಗೆ ಎನೆನ್ನಬೇಕೂ?) ಬಂದ ಜನರಿಗೆ ಆದರಾತಿತ್ಯ ಸರಿಯಾಗಿರಬೇಕು ಇಲ್ಲವಾದಲ್ಲಿ ಇಷ್ಟು ದಿನ ನೀವು ಮಾಡಿದ ಕೆಲಸಕ್ಕೆ ಏನೂ ಅರ್ಥವಿರೋಲ್ಲ. ಯಾರದ್ದೋ ದುಡ್ಡು ಯಲ್ಲಮ್ಮನ ಜಾತ್ರೆ ಅಂತ ಇವೆಲ್ಲದರ ನಡುವೆ ಎಷ್ಟು ಜನ ದುಡ್ಡು ಹೊಡೆದು ಐಶ್ ಮಾಡಿರುತ್ತರೋ ಗೊತ್ತೇ ಆಗಿರೋಲ್ಲ. ಇವಲ್ಲ ಆದ ಮೇಲೂ ಕೆಲ ದಿನದ ನಂತರ ಶ್ರಮ ಭೋಜನ ಅಂತ ಕೆಲವರು ಮಾಡ್ತಾರೆ(ಇದರಲ್ಲಿ ಯಾರ ಶ್ರಮ ಯಾರಿಗೆ ಭೋಜನ ಅಂತ ನನಗಿನ್ನೂ ತಿಳಿದಿಲ್ಲ)

ಸರಿ ಎಲ್ಲ ಮುಗಿದು ಮನೆಯೂ ಆಯಿತು ಮದುವೆಯೂ ಆಯಿತು ಗೆದ್ದೇ ಅಂತ ತಿಳ್ಕೊಂಡ್ರ ಇಲ್ಲ, ಮುಂದೆ ಶುರುವಾಗುತ್ತೆ ನೋಡಿ ಮನೆ ಕಟ್ಟಿದ ಮೇಲೆ ಮೇನ್ಟೇನ್ ಮಾಡೋಕೆ ಬೇರೆ ಯಾರೋ ಬರೋಲ್ಲ ಮದುವೆ ಆದ ಮೇಲೆ ನಿಮ್ಮದೊಂದೇ ಅಲ್ಲದೆ ನಿಮ್ಮ ಸಂಗಾತಿ ಮತ್ತೆ ಅವರ ಮನೆಯವರ ಕಾಳಜಿ ತಗೊಳೋಕೆ ಆಗಿಲ್ಲ ಅಂದ್ರೆ ಹೇಗೆ? ಆನೆ ಸಾಕೋದು ಅಂದ್ರ ಸುಲಭಾನ? ಅಲ್ಲ ತಾನೇ ಇದೆ ರೀತಿ ಮನೆ ಕಟ್ಟೋದು ಮದುವೆ ಮಾಡೋದು ಅದಾದ ಮೇಲೆ ಅದನ್ನ ನಿಭಾಯಿಸೋದು ಅಂದ್ರೆ ಸುಲಭಾ ಅಲ್ಲ ಕಣ್ರೀ.. ಅಬ್ಬಬ್ಬ ಬರೆಯೋದ್ರಲ್ಲೇ ಇಷ್ಟೆಲ್ಲಾ ಗೋಳಿದೆ ಇನ್ನೇನಾದ್ರೂ... ...??

ಅದಕ್ಕೆ ಹೇಳೋದು
ಬಾಳ ನೌಕೆಯ ನಾವಿಕನಾಗಿ ನೋಡು
ಜೀವನ ಯುದ್ಧದಲ್ಲಿ ಭಾಗವಹಿಸಿ ನೋಡು
ಗೆದ್ದರೂ ಗೆಲುವಿನ ನಗೆಯಿಲ್ಲ ನೋಡು
ಮನೆ 
ಕಟ್ಟಿ ನೋಡು ಮದುವೆ ಮಾಡಿ ನೋಡು.

No comments:

Post a Comment