ಶುಭರಾತ್ರಿ :

ನಿದ್ರಾದೇವಿಯ
ಮಡಿಲಲಿ
ಲಾಲಿ ಹಾಡ
ಕೇಳುತ
ಮಲಗುವ ಮುನ್ನ
ನಿಮಗೆಲ್ಲ
ಶುಭ ರಾತ್ರಿಯ
ಶುಭ ಸಂದೇಶ.

ಮೋಡವೆಲ್ಲ ಚದುರಿ
ಚಂದಿರ ನಕ್ಕಿರಲು,
ಬಾನಿನ ತುಂಬೆಲ್ಲ
ನಕ್ಷತ್ರ ಮಿನುಗಿರಲು,
ರಾತ್ರಿಯ ಕಂಪಿಗೆ
ನಿದಿರೆ ಬಂದಿರಲು,
ಮಲಗುವ ಮೊದಲು
ನಿಮಗೆಲ್ಲ ಶುಭ ಸಂದೇಶಗಳು..

ಹನಿ ಹನಿ 8 :

ವಿರಹ :

೧.
ನಿನ್ನ
ಅಗಲಿಕೆಯ
ಮನದ
ಗಾಯಕೆ
ನಿನ್ನದೇ
ಸ್ಪರ್ಶದ
ಮುಲಾಮು
ಬೇಕು.

೨.
ನಿನ್ನ ಜೊತೆಗೂಡಿ
ಕಟ್ಟಿದ ಕನಸ ಗೋಪುರ
ನಿನ್ನ ವಿರಹದ
ಬಿರುಗಾಳಿಗೆ ನೆಲಕಚ್ಚಿದೆ.

೩.
ಬಂದೆ ನೀನು
ನನ್ನ ಬಾಳಲಿ
ಮರುಭೂಮಿಯ
ಚಿಲುಮೆಯಂತೆ
ಕ್ಷಣದಲೇ ಮಾಯವಾದೆ
ತೀರಿಸದೆ ಮನದ ದಾಹವ
ಮುಂದೆಲ್ಲಿ ಸಿಗುವೆ
ಅಂತಲೂ ಹೇಳದಂತೆ.

೪.
ನೀ ದೂರಾದೆಯೆಂದು
ಹುಡುಕಿದೆ ನಾ ಎಲ್ಲೆಲ್ಲಿ
ನನಗೆ ತಿಳಿಯಲೇ ಇಲ್ಲ
ಇದ್ದೆ ನೀ ನನ್ನ ಹೃದಯದಲ್ಲಿ.


೫.
ನೀ ಬಂದು
ಹಕ್ಕಿಯಂತೆ
ನನ್ನೆದೆಯಲಿ
ಗೂಡ ಮಾಡಿ
ನೆನಪೆಂಬ
ಮೊಟ್ಟೆಯನಿತ್ತು
ಕಾವು ಕೊಡದೆ
ಹಾರಿ ಹೋದೆಯಲ್ಲ.

೬.
ನೀ ಅತ್ತರೆ
ನನ್ನೆದೆಯಲಿ
ಏನೋ ತೊಳಲಾಟ
ಅದೇ ನೀ ನಕ್ಕರೆ
ನಿಲ್ಲುವುದು
ನನ್ನೆದೆಯ ಬಡಿದಾಟ.

೭.
ಓ ನಲ್ಲೆ
ನೀ ಬಂದು
ಬಿಗಿದಪ್ಪಿ
ನನ್ನೆದೆಯಲಿ
ಬಿಟ್ಟು ಹೋದ
ಕನಸುಗಳು
ನನಸಾಗದೇ
ಕಾಯುತಿದೆ
ನಿನ್ನದೇ
ಪುರಾಗಮಾನವ.

ನಿರೀಕ್ಷೆ:ನೀ ಒಪ್ಪಿದ ನಂತರ
ವಿವಾಹ ಬಂಧನಕೆ
ಕಾದ ಕ್ಷಣಗಳೆಷ್ಟೋ..

ಬಾಗಿಲಲಿ ಕುಳಿತು
ನಿನ್ನ ನೆನೆಯುತ
ಕಾದ ಕ್ಷಣಗಳೆಷ್ಟೋ..

ನೀ ನಗುತ ತರುವ
ಮೊಳ ಮಲ್ಲಿಗೆಯ ಕಂಪಿಗೆ
ಕಾದ ಕ್ಷಣಗಳೆಷ್ಟೋ..

ಪರದೂರಿಗೆ ಹೋದಾಗ
ನಿನ್ನಾಗಮನವ ಬಯಸಿ
ಕಾದ ಕ್ಷಣಗಳೆಷ್ಟೋ..

ಹುಸಿ ಕೋಪವ ಮರೆತು
ನಿನ್ನೊಲವ ಉಡುಗೊರೆಗೆ
ಕಾದ ಕ್ಷಣಗಳೆಷ್ಟೋ..

ಮಳೆಯಲಿ ನೆನೆಯುತ
ನಿನ್ನ ಬಿಸಿಯಪ್ಪುಗೆಗೆ
ಕಾದ ಕ್ಷಣಗಳೆಷ್ಟೋ..

ಪ್ರೀತಿಯಲಿ ಬಿಗಿದಪ್ಪಿ
ನೀಡುವ ಸಿಹಿ ಮುತ್ತಿಗೆ
ಕಾದ ಕ್ಷಣಗಳೆಷ್ಟೋ..

ಮನ ಕೊರಗಿ ನೊಂದಾಗ
ನೀ ನೀಡುವ ಸಾಂತ್ವನಕೆ
ಕಾದ ಕ್ಷಣಗಳೆಷ್ಟೋ..

ಪ್ರೀತಿಯ ಒಲವ ಬೆರೆಸಿ
ಉಣಿಸುವ ಕೈ ತುತ್ತಿಗೆ
ಕಾದ ಕ್ಷಣಗಳೆಷ್ಟೋ..

ಕಪ್ಪು ಬಿಳುಪ ಜೀವನದಿ
ತುಂಬುವ ಒಲುಮೆ ರಂಗಿಗೆ
ಕಾದ ಕ್ಷಣಗಳೆಷ್ಟೋ..

ಕ್ಷಣ ಕ್ಷಣವ ನೆನೆಯುತ
ಸಿಗುವ ಕ್ಷಣದ ಸುಖಕೆ
ಕಾದ ಕ್ಷಣಗಳೆಷ್ಟೋ..??

ಜೀವನದಲ್ಲಿ ಸಿಗುವ ಕ್ಷಣದ ಸುಖಕೆ ಎಷ್ಟೋ ಮಹತ್ವದ ಕ್ಷಣವನ್ನ ಕಾಯುತ್ತಲೇ ಕಳೆಯುವ ಹೆಣ್ಣಿಗೆ ನನ್ನ ನಮನ.

ಋಣ:ಓ ಹಡೆದವ್ವ ನನಗೆ ಜನುಮ ನೀಡುವಾಗ ನೀ ಪಟ್ಟ ನೋವೆಷ್ಟೋ ...? 
ಓ ತಂದೆ ನಿಮ್ಮ ಹೆಗಲೆತ್ತರಕೆ ನನ್ನ ಬೆಳೆಸುವಾಗ ಪಟ್ಟ ಕಷ್ಟವೆಷ್ಟೋ ..?

 
ತಿಳಿಯದೆ ನಾ ನೀಡಿದ ಕಷ್ಟಕೆ
ಅವ್ವ ನೀ ಬೆನ್ನ ಸವರಿದ್ದೆ
ತಿಳಿದೇ ಮಾಡಿದ ಎಷ್ಟೋ ತಪ್ಪಿಗೆ
ತಿದ್ದಿ ಬುದ್ಧಿ ಮಾತ ಹೇಳಿದ್ದೆ.

ಅಂದು ನೀ ಹೊಡೆದ ಪೆಟ್ಟಿಗೆ
ಮನೆ ಬಿಟ್ಟು ಓಡಿ ಹೋಗಿದ್ದೆ ,
ಹೊಡೆತವಲ್ಲ ತಂದೆ ಅದು
ಪ್ರೀತಿಯ ಅಪ್ಪುಗೆಯೆಂದು ತಿಳಿಯದೆ .

ನನ್ನ ನಿಮ್ಮೆತ್ತರಕೆ ಬೆಳೆಸಿದ ಕಷ್ಟಕೆ
ಇಂದು ಮನ ತುಂಬಿ ಬಂದಿದೆ,
ನನಗೆಂದೋ ಕಡಿಮೆ ಮಾಡದ
ನಿಮ್ಮ ನೋವು ಇಂದೆನಗೆ ಅರಿವಾಗಿದೆ.

ಜನುಮವೀಡಿ ಜೀತ ಮಾಡಲೇ
ಹೆಗಲ ಮೇಲೆ ಹೊತ್ತು ತಿರುಗಲೇ,
ಇದ್ಯಾವುದು ಸಾಲದಾಗದೆ ಹೋಯಿತಲ್ಲ
ತೀರಿಸಲು ನಿಮ್ಮ ಈ ಋಣವ .

ಮಡದಿಯ ವಿರೋಧವಾದರೇನು
ಜಗವೇ ಎದುರು ನಿಂತರೇನು,
ಬಿಡೆನು ನಾ ನಿಮ್ಮನೆಂದಿಗೂ
ಬಿಡೆನು ನಾನೆಂದಿಗೂ ಬಿಡೆನು.

ನನಗೂ ಇಷ್ಟವಿದೆ ಮಳೆಯಾಗಲು:


ನನಗೂ ಇಷ್ಟವಿದೆ ಮಳೆಯಾಗಲು

ಹೇಳದೆ ಬಂದು ನಿನ್ನ ಸೇರಿ
ಹುಚ್ಚನಂತೆ  ಸ್ಪರ್ಶಿಸಲು,
ಕೂದಲಿನಿಂದ ಬೆನ್ನ ಮೇಲಿಳಿದು
ಮೈಯ್ಯೆಲ್ಲ ತೋಯ್ದು ತಂಪಾಗಿಸಲು.

ಹಣೆಯ ಮೇಲಿಂದ ಇಳಿದು
ಕೆನ್ನೆಯ ರಂಗ ಸವಿಯಲು,
ತುಟಿಗೊಂದು ಸಿಹಿ ಮುತ್ತನೀಡಿ
ಮೊಗದಲಿ ಮಂದಹಾಸ ಮೂಡಿಸಲು

ನನಗೂ ಇಷ್ಟವಿದೆ ಮಳೆಯಾಗಲು...

ಮಿಲನ:ಇಂದೇಕೋ ಜೀವ ಕಾದಿತ್ತು
ನಲ್ಲನ ಒಡನಾಟಕೆ,
ಅವನ ಆಗಮನವಾಗಿತ್ತು
ನೆನೆದ ಕೆಲ ಹೊತ್ತಿಗೆ.

ನನ್ನ ಮುಖ ರಂಗೇರಿತ್ತು
ಕಂಡವನ ತುಟಿಗೆ,
ದೇಹವೆಲ್ಲ ಬಿಸಿಯಾಗಿತ್ತು
ನನ್ನವನ ಅಪ್ಪುಗೆಗೆ.

ತನು ಮನವೆಲ್ಲ ಕಂಪಿಸಿತ್ತು
ನಲ್ಲನ ತುಂಟಾಟಕೆ,
ನಾಚಿ ಕೆನ್ನೆ ಕೆಂಪೇರಿತ್ತು
ಕೊಟ್ಟ ಸಿಹಿ ಮುತ್ತಿಗೆ.

ಇಂದು ಮನದಾಸೆ ತೀರಿತ್ತು
ಸೇರಿ ನಲ್ಲನ ಜೊತೆಗೆ,
ರಾತ್ರಿಯಿಡೀ ಹೀಗೆ ಕಳೆದಿತ್ತು
ನಮ್ಮೀ ಸರಸದಾಟದೊಳಗೆ.

ಮಳೆರಾಣಿ:ವಿರಹ ವೇದನೆಯಲಿ ಜೀವ ಮುದುಡಿತ್ತು
ನಿನ್ನಯ ಸ್ಪರ್ಶವಿಲ್ಲದೆ ಮನ ನೊಂದಿತ್ತು,
ಇಂದು ನನ್ನ ಮನದಾಸೆಗೆ ಮತ್ತೆ ಜೀವ ಬಂದಿತ್ತು
ಕಾರ್ಮೋಡಗಳ ಅಂಚಿನಲ್ಲಿ ನಿನ್ನ ಮೊಗ ಕಂಡಿತ್ತು.

ಬಾನಂಚಿನ ಮೇಘಗಳ ಮಾಲೆಯಿಂದ ಜಿಗಿದು
ನನ್ನಯ ಮನ ತಣಿಸಲು ಬಂದಿರುವೆ ನೀನಿಂದು,
ನೆತ್ತಿಯ ಮೇಲೆ ಬಿದ್ದ ನಿನ್ನ ಹನಿಯ ಸ್ಪರ್ಶಕೆ
ಮನದಲಿ ನವ ಚೈತನ್ಯ ಮೂಡಿದೆಯಿಂದು.

ಹಣೆಯ ಮೇಲಿಂದ ಕೆನ್ನೆಯ ಮೇಲಿಳಿದು
ಹಾಗೆ ಸಿಹಿ ಮುತ್ತನಿಟ್ಟು ತುಟಿಗೊಂದು,
ನಿನ್ನ ಅಪ್ಪುಗೆಯಲಿ ಶರೀರವೆಲ್ಲ ತೋಯ್ದು
ತಂಪಾಗದೆ ಮೈಯ್ಯೆಲ್ಲ ಬಿಸಿಯಾಗಿದೆಯಿಂದು.