ಪ್ರೀತಿ ಪ್ರೇಮ ಪ್ರಣಯ:

೧.
ನನಗಾಗ ಹದಿನೆಂಟು, ಅವಳಿಗೋ ಹದಿನೈದಿರಬಹುದು. ನೋಡಲು ಸುರಸುಂದರಿ. ಇನ್ನೇನು ಬೇಕು ಪ್ರೇಮಾಂಕುರವಾಗಲು? ನಮ್ಮ ಪ್ರೇಮಕ್ಕೆ ಕೆಲ ವರುಷಗಳೇ ಕಳೆದವು, ಅವಳಿಗೂ ನನ್ನ ಮೇಲೆ ಪ್ರೀತಿಯಿತ್ತು, ನನ್ನ ನೋಡಿದಾಗೆಲ್ಲ ಅವಳು ಬೀರುವ ಮುಗುಳ್ನಗೆಯೇ ಅದಕ್ಕೆ ಸಾಕ್ಷಿ. ಒಬ್ಬರಿಗೊಬ್ಬರು ಎಂದೂ ಪ್ರೇಮದ ಪ್ರಸ್ತಾಪವನ್ನು ಮಾಡಲಿಲ್ಲ. ಕೊನೆಗೆ ನಾನೇ ಮಡಿದೆ, ಅವಳಿಗೆ ಗುಲಾಬಿ ಕೊಟ್ಟಾಗ ನನಗೆ ವಯಸ್ಸು ಇಪ್ಪತ್ತೈದು. ಗುಲಾಬಿ ಪಡೆದು ನಾಚಿ ನಡೆದಿದ್ದಳು, ಅವಳ ಸಮ್ಮತಿ ಕಣ್ಣಲ್ಲೇ ವ್ಯಕ್ತಪಡಿಸಿದ್ದಳು. ಅಂದಿನಿಂದ ಇಂದಿನವರೆಗೂ ಪ್ರತಿ ವರ್ಷ ಅವಳಿಗೆ ಗುಲಾಬಿ ಅರ್ಪಿಸುತ್ತಿದ್ದೇನೆ. ಪ್ರೀತಿಯಿಂದ ಅವಳ ಕೈಗಲ್ಲ, ದುಃಖದಿಂದ ಅವಳ ಗೋರಿಯ ಮೇಲೆ. ನಾ ಗುಲಾಬಿ ಕೊಟ್ಟ ಮರುದಿನವೇ ಅಪಘಾತದಲ್ಲಿ ಅವಳ ಮೃತ್ಯುವಾಗಿತ್ತು. ನನ್ನ ಅವಳ ಗುಲಾಬಿಯ ನಂಟು ಇನ್ನೂ ಮುಗಿದಿಲ್ಲ, ನನಗೀಗ ಎಪ್ಪತ್ತೈದು.

೨.
ಅವಳೊಂದು ತೀರ, ಇವನೊಂದು ತೀರ. ಅವಳೊ ಅವನ ಪ್ರೀತಿಯಲ್ಲಿ ತೇಲಿಹೋದವಳು, ಅವನ ನಡೆ ನುಡಿಗೆಲ್ಲ ಮರುಳಾದವಳು. ಇವನಿಗೋ ಅವಳಂತವಳು ನೂರಾರು, ಎಲ್ಲರೊಂದಿಗೂ ಒಂದೇ ತರಹ ಬೆರೆಯುತ್ತಿದ್ದನವ. ಪರಸ್ಪರ ಇಬ್ಬರೂ ಭೇಟಿಯಾಗಿ ಮಾತನಾಡಿದರು, ಕೊನೆಗೂ ಒಂದಾಗಲಿಲ್ಲ, ಅವಳು ಇನ್ನೊಬ್ಬನನ್ನು ಮದುವೆಯಾದಳು, ಅವನೂ ಬೇರೆಯವಳನ್ನು ಮದುವೆಯಾದ. ವರ್ಷದೊಳಗೇ ಅವಳ ಗಂಡ ತೀರಿಹೋದ, ಅವನೂ ಹೆಂಡತಿಯನ್ನು ಬಿಟ್ಟ. ಒಂದು ದಿನ ಅವಳು ಮತ್ತು ಅವನು ಆಕಸ್ಮಿಕವಾಗಿ ಭೆಟಿಯಾದರು. ಹಳೆಯ ಪ್ರೇಮದ ಬೇರು ಮತ್ತೆ ಚಿಗುರೊಡೆಯಿತು. ಇವತ್ತು ಅವಳ ಮತ್ತು ಅವನ ಮದುವೆ. ನನಗೂ ಮದುವೆಯ ಕರೆ ಬಂದಿದೆ.

೩.
ಅವರಿಬ್ಬರದು ಆಳವಾದ ಪ್ರೇಮ, ಒಬ್ಬರಿಗೊಬ್ಬರು ಬಿಟ್ಟಿರದಷ್ಟು. ಮದುವೆಯ ಪ್ರಸ್ತಾಪವನ್ನು ಮನೆಯಲ್ಲಿಟ್ಟರು, ಹುಡುಗನ ಮನೆಯವರ ತಿರಸ್ಕಾರ. ಕಾರಣವಿಷ್ಟೇ ಹುಡುಗಿ ಕೆಟ್ಟ ನಕ್ಷತ್ರದಲ್ಲಿ ಹುಟ್ಟಿರುವುದು, ಇದರಿಂದ ಹುಡುಗನ ವೈವಾಹಿಕ ಜೀವನ ಸುಖವಾಗಿರದು ಎನ್ನುವುದು. ಇಬ್ಬರ ನೋವು ಹೇಳತೀರದು. ಕೊನೆಗೆ ಇಬ್ಬರೂ ತಮ್ಮ ಮನಸ್ಸನ್ನು ಗಟ್ಟಿ ಮಾಡಿ ಬೇರೆಬೇರೆಯಾದರು. ಇಬ್ಬರ ಮದುವೆಯೂ ಅನ್ಯರೊಂದಿಗೆ ನಡೆಯಿತು. ಎರಡು ವರ್ಷಗಳ ತರುವಾಯ ಅವಳು ಗಂಡ ಮಗುವಿನೊಂದಿಗೆ ಸುಖಿ ಸಂಸಾರ ನಡೆಸುತ್ತಿದ್ದಾಳೆ. ಅವನೋ ವರ್ಷದೊಳಗೇ ಹೆಂಡತಿಯೊಡನೆ ವಿಚ್ಚೇದನ ಪಡೆದು ಹೆಂಡದ ದಾಸನಾಗಿದ್ದಾನೆ. ಹುಡುಗನ ಮನೆಯವರು ಹಣೆಬರಹವನ್ನು ಹಳಿಯುತ್ತಿದ್ದಾರೆ.

೪.
ನಾನು ಅವಳನ್ನು ಪ್ರೀತಿಸುತ್ತಾ ಇದ್ದೆ, ಅವಳೋ ಅವನನ್ನು, ಅವನೋ ಇವಳನ್ನು, ಇವಳೋ ನನ್ನನ್ನು ಪ್ರೀತಿಸುತ್ತಾ ಇದ್ದಳು. ಇದು ಗೊತ್ತಾಗಿದ್ದು ಹೇಗೆನ್ನುವುದೇ ಒಂದು ವಿಶೇಷ. ನಾನು ಬರೆದ ಪ್ರೇಮ ಪತ್ರವನ್ನು ಅವಳಿಗೆ ನೀಡಿದ್ದೆ, ಅವಳು ಹೆಸರು ಬದಲಾಯಿಸಿ ಅವನಿಗೆ ಕೊಟ್ಟಳು, ಅವನೋ ಇವಳಿಗೆ ಕೊಟ್ಟಿದ್ದ, ಇವಳದನ್ನೇ ನನಗೆ ಕೊಟ್ಟಿದ್ದಳು. ನಾನು ಇವಳಿಗೆ ಇಲ್ಲವೆಂದೆ, ಇವಳು ಅವನಿಗೆಂದಳು, ಅವನು ಅವಳಿಗೆಂದ, ಅವಳು ನನಗಿಲ್ಲವೆಂದಳು. ಇದರ ಜಾಲು ಹಿಡಿದಾಗೆ ಇದು ತಿಳಿದಿದ್ದು. ಇದಕ್ಕೆ ಪರಿಹಾರ ಕಂಡುಕೊಳ್ಳಲು ನಾವೆಲ್ಲ ಒಟ್ಟಾದೆವು, ಕೊನೆಗೊಂದು ನಿರ್ಣಯವಾಯಿತು ಪ್ರತಿಯೊಬ್ಬರೂ ನಮ್ಮ ಗುಂಪಿನಲ್ಲಿರುವರನ್ನು ಬಿಟ್ಟು ಬೇರೆಯವರನ್ನು ಮದುವೆಯಾಗಬೇಕೆಂದು.

೫.
ಅವರಿಬ್ಬರ ಪರಿಚಯ ಫೇಸ್ ಬುಕ್ಕಿನಲ್ಲಾದದ್ದು, ಇಬ್ಬರೂ ಬೇರೆ ಬೇರೆ ಊರಿನವರು. ಸ್ನೇಹ ದಿನ ಕಳೆದಂತೆ ಗಾಢವಾಯಿತು, ಕೆಲ ದಿನದಲ್ಲೇ ಪ್ರೇಮವಾಗಿ ಪರಿವರ್ತನೆಯಾಯಿತು. ಚಾಟಿಂಗ್ ನಲ್ಲಿ ಶುರುವಾದ ಗೆಳೆತನ ಕ್ರಮೇಣ ಮೊಬೈಲ್ ಮೆಸೇಜ್ ಗಳಲ್ಲಿ ತರುವಾಯ ತಾಸುಗಟ್ಟಲೇ ಹರಟುವಲ್ಲಿ ಬದಲಾವಣೆಯಾಯಿತು. ವರ್ಷಗಟ್ಟಲೇ ಹರಟಿದರು, ನಗು ಅಳುವಿನಲ್ಲಿ ಭಾಗಿಯಾದರು, ಪರಸ್ಪರ ವಿಚಾರಗಳನ್ನು ವಿನಿಮಯ ಮಾಡಿಕೊಂಡರು, ಸ್ಪಂದನೆಗಳನ್ನು ಹಂಚಿಕೊಂಡರು. ಕೊನೆಗೊಮ್ಮೆ ಪರಸ್ಪರ ಭೇಟಿಯಾಗುವ ನಿರ್ಣಯಕ್ಕೆ ಬಂದರು. ದಿನ, ಸ್ಥಳವನ್ನು ನಿರ್ಧರಿಸಿದರು. ಕೊನೆಗೂ ಅವರಿಬ್ಬರೂ ಮುಖಾಮುಖಿಯಾಗುವ ದಿನ ಬಂದೇಬಿಟ್ಟಿತು. ಪರಸ್ಪರ ಭೇಟಿಯಾದಾಗಲೇ ಗೊತ್ತಾಗಿದ್ದು ಅವರಿಬ್ಬರು ಅಕ್ಕ ತಮ್ಮನೆಂದು. ಇಬ್ಬರೂ ದೊಡ್ಡಪ್ಪ ಚಿಕ್ಕಪ್ಪನ ಮಕ್ಕಳಾಗಿದ್ದರು. ತಮ್ಮ ಅಪ್ಪ ಅಮ್ಮ, ಊರು ಕೇರಿ, ಮನೆ ಮಠ ಇವುಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೇ ಮುಂದುವರೆದಿದ್ದು ಇದಕ್ಕೆ ಕಾರಣವಾಗಿದ್ದು.

*****

ನವೆಂಬರ ೨೪ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಮಾತೆಯ ಮಡಿಲಲ್ಲಿ:

ಆಕೆ ಕರುಣಾಮಯಿ, ವಾತ್ಸಲ್ಯರೂಪ. ದೈವತ್ವಕ್ಕೆ ಮತ್ತೋಂದು ಹೆಸರೇ ಆಕೆ ಅಂದರೆ ತಪ್ಪಾಗಲಾರದು. ಆಕೆಗೆ ಬದುಕುವ ಆಸೆಯಿದ್ದದ್ದು ಅವಳ ಪುಟ್ಟ ಮಗನ ನಗುವಲ್ಲಿ. ಹುಟ್ಟಿಸಿದ ದೇವರು ಹುಲ್ಲು ಮೇಯಿಸದೇ ಇರಲಾರ ಅಂದುಕೊಂಡು ಮಗನ ನಗುವಲ್ಲೇ ನನ್ನ ಜೀವನವೆನ್ನುತ್ತ ಬಾಳತೊಡಗಿದಳು. ಮನೆ ಮನೆಯಲ್ಲಿ ಪಾತ್ರೆ ಬಟ್ಟೆ ತೊಳೆದಾದರೂ ನನ್ನ ಮಗನನ್ನು ಸಾಕುತ್ತೇನೆ ಅನ್ನುವ ಛಲ ಅವಳಲ್ಲಿ. ಒಬ್ಬಳಾದರೇನು ಅವಳಿಗಾರ ಭಯವಿರಲಿಲ್ಲ, ಅದೆಷ್ಟೋ ಜನರೊಂದಿಗೆ ದೇಹ ಹಂಚಿಕೊಂಡವಳು ಅವಳು. ಎಲ್ಲವನ್ನೂ ಕಳೆದುಕೊಂಡವಳು, ಕಳೆದುಕೊಳ್ಳಲು ಇನ್ನೇನೂ ಉಳಿದಿರಲಿಲ್ಲ ಅವಳಲ್ಲಿ. ಇದೇ ಊರಲ್ಲಿದ್ದರೆ ಮಗನಿಗೆ ಎಲ್ಲಿ ತೋಂದರೆಯಾಗುತ್ತದೋ, ಮಗ ನನ್ನ ಬಗ್ಗೆ ಏನು ಕೇಳುತ್ತಾನೋ ಅನ್ನುವ ಭಯದಿಂದ ಬೆಂಗಳೂರು ಬಿಟ್ಟು ಮೈಸೂರಿಗೆ ಬಂದಳು. ಕಷ್ಟಪಟ್ಟು ಮಗನನ್ನು ಬೆಳೆಸಿದಳು. ತನ್ನೆಲ್ಲ ಇತಿಹಾಸವನ್ನು ಮರೆತು ಮಗನ ಭವಿಷ್ಯ ರೂಪಿಸಿದಳು. ಇಂದು ಮಗ ಬೆಳೆದು ದೊದ್ದವನಾಗಿದ್ದಾನೆ, ಕಲಿತು ನೌಕರಿ ಮಾಡತೊಡಗಿದ್ದಾನೆ. ಇನ್ನೆನು ಹೊಸ ಮನೆಯ ಖರೀದಿ ವಿಚಾರ ನಡೆಸಿದ್ದಾನೆ. ಇದೆಲ್ಲ ಕೇವಲ ಅವಳಿಂದ, ಅವಳ ತ್ಯಾಗದಿಂದ. ಎಲ್ಲಿ ಮಗ ನನ್ನ ಅಪ್ಪ ಯಾರು? ಎಲ್ಲಿದ್ದಾರೆ? ಏನು ಮಾಡುತ್ತಿದ್ದಾರೆ? ಅಂತ ಕೇಳುತ್ತಾನೋ ಅನ್ನುವ ಭಯ ದಿನವೂ ಅವಳಲ್ಲಿ ಕಾಡಿದ್ದುಂಟು. ತನ್ನೆಲ್ಲ ನೋವ ಮರೆತದ್ದು ಮಗನ ಖುಶಿಯಲ್ಲಿ. ಎಲ್ಲ ಸುಖಮಯವಾಗಿದೆ ಈಗ. ಇನ್ನೆನು ಮಗನ ಮದುವೆಯಾದರೆ ನನ್ನ ಕರ್ತವ್ಯ ಮುಗಿಯಿತು ಅನ್ನುವುದಷ್ಟೆ ಆಕೆಯ ಮನದಲ್ಲಿದ್ದದ್ದು.

ಅಂತೂ ಮಗನ ಮದುವೆಯೂ ನಿಶ್ಚಯವಾದಂತೆ, ಹುಡುಗಿಯನ್ನು ಅವನೇ ನೋಡಿಕೊಂಡಿದ್ದ. ಅದೊಂದು ಚಿಂತೆಯ ವಿಷಯವೇ ಆಗಿತ್ತು, ತಾನು ಎಲ್ಲಿ ಅಂತ ಹುಡುಗಿಯನ್ನು ಹುಡುಕಬೇಕಾಗಿತ್ತು, ಆಗಿದ್ದೆಲ್ಲ ಒಳ್ಳೆಯದಕ್ಕೇ ಅನ್ನುವ ಭಾವ ಅವಳ ಮನದಲ್ಲಿ. ನಿಶ್ಚಿತಾರ್ಥದ ದಿನವೂ ನಿಗದಿಯಾಯಿತು. ಮಗ ಕೊಡಿಸಿದ್ದ ಜರಿ ಸೀರೆಯಲ್ಲಿ ಆಕೆ ಮಹಾಲಕ್ಷ್ಮಿಯ ಸ್ವರೂಪ. ಮನೆಯೆಲ್ಲ ತೋರಣ, ಮಾಲೆಗಳಿಂದ ಕಂಗೊಳಿಸುತ್ತಿತ್ತು. ಆಕೆಯ ಆನಂದಕ್ಕೆ ಮಿತಿಯೇ ಇರಲಿಲ್ಲ. ಹುಡುಗಿಯ ಮನೆಯವರೆಲ್ಲ ಆಗಮಿಸಿದ್ದರು. ಅತಿಥಿ ಸತ್ಕಾರಗಳನ್ನೆಲ್ಲ ತನಗೆ ತಿಳಿದಂತೆ ಮಾಡಿದಳಾಕೆ. ಹುಡುಗಿಯ ತಂದೆ ಇವಳನ್ನ ಅನುಮಾನದಿಂದಲೇ ನೋಡತೊಡಗಿದ್ದರು. ಕೇಲವೇ ಕ್ಷಣದಲ್ಲಿ ಎಲ್ಲವೂ ಮುಗಿದೇ ಹೋಯಿತು. ಈ ಮದುವೆ ಸಾಧ್ಯವೇ ಇಲ್ಲವೆಂಬಂತೆ ಹುಡುಗಿಯ ಕಡೆಯವರು ನಡೆದಿದ್ದರು. ಏನಾಯಿತು? ಯಾಕೆ ಮದುವೆ ಬೇಡವೆಂದರು ಆಕೆಗೆ ಏನೂ ತಿಳಿಯದು. ಮಗನ ಯಾತನೆ ಆಕೆಯ ಹೃದಯ ಹಿಂಡಿತ್ತು. ಏನಾಯಿತೆಂದು ವಿಚಾರಿಸುವಂತೆ ಮಗನಲ್ಲಿ ಕೇಳಿದಳು. ಸರಿ ಎಂದು ಹೋದವನು ಸ್ವಲ್ಪ ಸಮಯದಲ್ಲಿ ಬಂದಿದ್ದ. ಮಗನ ನಿರೀಕ್ಷೆಯಲ್ಲಿದ್ದ ಆಕೆ ಆತ ಬರುತ್ತಿದ್ದಂತೆ ಪ್ರಶ್ನೆಗಳ ಸುರಿಮಳೆಗೈದಳು. ಅದಕ್ಕೆಲ್ಲ ಆತನ ಉತ್ತರ ನೀನು ಸೂಳೆಯಾ? ಆಕೆ ದಿಗ್ಭ್ರಾಂತಳಾದಳು. ಇಷ್ಟು ವರ್ಷ ತನ್ನ ಒಡಲಲ್ಲಿ ಉಳಿದಿದ್ದ ಕಟು ಸತ್ಯ ಈತನಿಗೆ ಹೇಗೆ ಗೊತ್ತಾಯಿತು ಏನೋಂದೂ ಆಕೆಗೆ ತಿಳಿಯದಾಯಿತು. ಇಷ್ಟು ವರ್ಷದ ಪಟ್ಟ ಕಷ್ಟವೆಲ್ಲ ನೀರಿನಲ್ಲಿ ಮಾಡಿದ ಹೋಮದಂತೆ ಅನಿಸತೊಡಗಿತು ಆಕೆಗೆ. ನೀನೊಬ್ಬಳು ವ್ಯಭಿಚಾರಿ, ಇಷ್ಟು ದಿನ ಇದನ್ನೆಲ್ಲ ನೀನು ನನ್ನಿಂದ ಮುಚ್ಚಿಟ್ಟೆ... ಯಾರಿಗೋ ಹುಟ್ಟಿದವ ನಾನು, ನನಗೇಕೆ ಅವರು ಹೆಣ್ಣು ಕೋಡುತ್ತಾರೆ. ಯಾಕೆ ನನ್ನನ್ನು ಹೆತ್ತೆ ನೀನು, ಹುಟ್ಟುವ ಮೊದಲೇ ಹಿಸುಕಿಬಿಡಬೇಕಾಗಿತ್ತು. ಆಗ ಇದನ್ನೆಲ್ಲ ನೋಡುವ ಪರಿಸ್ಥಿತಿ ನನಗೆ ಬರುತ್ತಿರಲಿಲ್ಲ, ನಿನ್ನ ಮಗನೆಂದು ಹೇಳಿಕೊಳ್ಳುವುದಕ್ಕೆ ನಾಚಿಕೆಯಾಗುತ್ತಿದೆ ನನಗೆ. ಸೂಳೆಯ ಮಗ ಅಂತ ಸಮಾಜಕ್ಕೆ ತಿಳಿದರೆ ಸಮಾಜದಲ್ಲಿ ನನ್ನ ಮಾನ ಹರಾಜಾಗುವದಿಲ್ಲವೇ? ನಿನ್ನ ಮುಖ ನೋಡುವುದಕ್ಕೂ ಅಸಹ್ಯವಾಗುತ್ತಿದೆ ನನಗೆ. ಮಗನ ಈ ಮಾತುಗಳು ಹರಿತವಾದ ಚೂರಿಯಿಂದ ಎದೆಗೆ ಚುಚ್ಚಿದಂತೆ ಅನಿಸತೊಡಗಿತ್ತು ಆಕೆಗೆ. ವರ್ಷಾನುವರ್ಷಗಳ ಕಷ್ಟ ಕ್ಷಣದಲ್ಲೇ ನುಚ್ಚುನೂರಾಗಿತ್ತು. ಕಣ್ಣು ಒದ್ದೆಯಾಗದಂತೆ ಇಷ್ಟು ದಿನ ಪ್ರೀತಿಯಿಂದ ನೋಡಿಕೊಂಡ ಮಗ ಇಂದು ನನ್ನಿಂದ ಕಣ್ಣೀರಿಡುತ್ತಿದ್ದಾನೆ ಅಂದರೆ ನಾನು ಬದುಕಿದ್ದು ಏನು ಪ್ರಯೋಜನವೆನಿಸತೊಡಗಿತು ಆಕೆಗೆ.

ರಾತ್ರಿ ಕಳೆದಿತ್ತು ಮಗ ಕೋಣೆಯಿಂದ ಹೊರಬಂದ. ರಾತ್ರಿಯೆಲ್ಲ ನಿದ್ದೆಯಿಲ್ಲವೆಂದು ಆತನ ಕಣ್ಣು ಹೇಳುತ್ತಿತ್ತು. ಅಮ್ಮನ ಬಗ್ಗೆ ಹೀಗೆಲ್ಲ ಮಾತನಾಡಬಾರದಿತ್ತು, ಅವಳು ಯಾಕೆ ಹೀಗೆ ಮಾಡಿದಳು ಅಂತ ತಿಳಿದುಕೊಳ್ಳಬೇಕಿತ್ತು. ಇದೇ ಚಿಂತೆಯಲ್ಲಿ ಆತ ರಾತ್ರಿಯೆಲ್ಲ ನಿದ್ರಿಸಿರಲಿಲ್ಲ, ಆಕೆಯ ಕ್ಷಮೆ ಕೇಳಬೇಕೆಂದು ಅಮ್ಮನನ್ನು ಕೂಗತೊಡಗಿದ್ದ. ಆಕೆ ಎಲ್ಲೂ ಕಾಣಿಸಲಿಲ್ಲ, ಮನೆಯ ಒಳ ಹೊರಗೆಲ್ಲ ಹುಡುಕಾಡಿದ. ಆಕೆ ಎಲ್ಲೂ ಸಿಗಲಿಲ್ಲ, ಸಿಕ್ಕಿದ್ದು ಆಕೆ ಬರೆದಿಟ್ಟ ಪತ್ರ ಮಾತ್ರ.
ಮಗು ನಾನು ಸೂಳೆಯೇ.. ಆದರೆ ಯಾರೂ ನಾನೋಬ್ಬ ಸೂಳೆ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವುದಿಲ್ಲ, ಅದೇ ನಾನು ಮಾಡಿದ ತಪ್ಪು. ನನ್ನನ್ನು ಕ್ಷಮಿಸಿಬಿಡು ಮಗನೇ. ನಾನು ಪಡೆದುಕೊಂಡು ಬಂದದ್ದು ಅದು, ಏನು ಮಾಡೊದು? ಮನೆಯಲ್ಲಿ ಕಡು ಬಡತನ, ಕೆಲಸ ಕೊಡಿಸುತ್ತೇನೆ ಅಂತ ನನ್ನನ್ನು ಕರೆದುಕೊಂಡು ಬಂದವ ನನ್ನನ್ನು ಈ ಪಾಪಕೂಪಕ್ಕೆ ತೂರಿದ್ದ. ಅಲ್ಲಿಂದ ಹೊರಬರಲು ಆಗಲೇ ಇಲ್ಲ. ನಾನು ಅಲ್ಲಿಂದ ಹೊರಬಂದು ಬದುಕಲು ನೀನೇ ಕಾರಣ, ನಿನ್ನ ಬದುಕಿನಲ್ಲಿ ನನ್ನ ವೃತ್ತಿ ಕಪ್ಪು ಚುಕ್ಕೆಯಾಗಬಾರದು ಅನ್ನುವುದೇ ನನ್ನ ಉದ್ದೇಶವಾಗಿತ್ತು. ಆದರೆ ಅದೇ ಇಂದು ನಿನ್ನ ದುಃಖಕ್ಕೆ ಕಾರಣವಾಗಿದೆ. ನಾನು ನಿನ್ನಿಂದ ಇನ್ನೂ ಒಂದು ವಿಷಯವನ್ನು ಮುಚ್ಚಿಟ್ಟೆ, ಹೋಗುವ ಮೊದಲು ಅದನ್ನೂ ಹೇಳಿಬಿಡುತ್ತೇನೆ ಕೇಳು. ನೀನು ನನಗೆ ಹುಟ್ಟಿದವನಲ್ಲ... ಹೌದು ಮಗನೇ. ಒಂದು ದಿನ ಈ ಪಾಪಕೂಪದಿಂದ ಮುಕ್ತಿ ಪಡೆದು ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ರಸ್ತೆಯಲ್ಲಿ ಬರುತ್ತಿದ್ದಾಗ ನೀನು ಕಸದ ತೊಟ್ಟಿಯಲ್ಲಿ ಅನಾಥವಾಗಿ ಬಿದ್ದಿದ್ದೆ. ಆಗಲೇ ನಾನು ನಿರ್ಧರಿಸಿದ್ದು, ನಿನ್ನನ್ನು ಸಾಕಲಾದರೂ ನಾನು ಬದುಕಬೇಕು ಎಂದು. ನಿನ್ನನ್ನು ಅನಾಥವಾಗಿ ಬಿಡಲೋ ಅಥವಾ ಅನಾಥಾಶ್ರಮ ಸೇರಿಸಲು ನನಗೆ ಮನಸ್ಸು ಬರಲೇ ಇಲ್ಲ, ನಿನ್ನ ನಗುವಲ್ಲೇ ನನ್ನ ನೋವನ್ನೆಲ್ಲ ಮರೆತೆ. ನನಗೆ ಇನ್ನೆನೂ ಬೇಡವಾಗಿತ್ತು, ನೀನು ಯಾವಾಗಲೂ ಸದಾ ನಗುತ್ತಿರಬೇಕು ಅನ್ನುವುದೇ ನನ್ನ ಆಸೆ. ಅದಕ್ಕೆ ನಾನು ನಿನ್ನಿಂದ ದೂರವಾಗುತ್ತಿದ್ದೇನೆ. ಈಗ ನೀನು ನಿನ್ನ ಕಾಲ ಮೇಲೆ ನಿಂತಿದ್ದೀಯಾ. ಇನ್ನಾದರೂ ಆರಾಮವಾಗಿರು. ಹೋಗುವ ಮೊದಲು ಇನ್ನೊಂದು ವಿಷಯವನ್ನು ಹೇಳುತ್ತೇನೆ ಕೇಳು. ನಾನು ವ್ಯಭಿಚಾರಿ ಅನ್ನುವುದು ಸತ್ಯ ಆದರೆ ಅದು ಹೆಣ್ಣಿನ ತಂದೆಗೆ ಹೇಗೆ ತಿಳಿಯಿತು. ಎಂದಾದರೂ ಆತ ಅಲ್ಲಿಗೆ ಬಂದಿರುವುದಕ್ಕೆ ತಾನೆ. ಹೆಣ್ಣು ಹಲವರ ಜೋತೆ ದೇಹ ಹಂಚಿಕೊಳ್ಳುವುದು ತಪ್ಪು ಆದರೆ ಗಂಡು ಈ ಕೆಲಸ ಮಾಡಿದರೆ ತಪ್ಪಿಲ್ಲ ಅಲ್ಲವಾ? ಯಾರೋ ಹೇಳಿದ ಮಾತಿಗೆ ನೀನು ನನ್ನನ್ನು ದೂಷಿಸಿದ್ದು ನಿಜಕ್ಕೊ ನನಗೆ ಬೇಸರವಾಯಿತು ಮಗನೇ. ಇರಲಿ ಬಿಡು, ಇನ್ನು ನಾನು ನಿನ್ನ ಜೋತೆಗಿಲ್ಲ.ನಿನಗಾರ ಕಾಟವೂ ಇಲ್ಲ, ನೂರು ಕಾಲ ಸುಖವಾಗಿ ಬಾಳು ಮಗನೇ, ಇದಕ್ಕಾಗೇ ನಾನು ಇಷ್ಟು ವರ್ಷ ಬದುಕಿದ್ದು. ಈ ಅಮ್ಮನ ಆಶೀರ್ವಾದ ಸದಾ ನಿನ್ನ ಮೇಲಿದೆ. ಬರುತ್ತೇನೆ,

ಆತ ನಡುಗುತ್ತ ಅಲ್ಲೇ ಕುಸಿದ. ಇವನಿಗೆ ತಿಳಿದಯದೇ ಇದ್ದ ಅದೆಷ್ಟೋ ಗುಟ್ಟನ್ನು ಬಿಚ್ಚಿಟ್ಟಿದ್ದಳು ಆಕೆ. ಆದರೆ ಮಾತು ಆಡಾಗಿತ್ತು ಮುತ್ತು ಒಡೆದು ಹೋಗಿತ್ತು, ಕ್ಷಮೆ ಕೋರಲು ಆಕೆ ಅಲ್ಲಿರಲಿಲ್ಲ. ಈಗ ಅವನ ಹತ್ತಿರ ಇದ್ದದ್ದು ಅಮ್ಮನ ನೆನಪು ಮತ್ತು ಆಕೆಯ ಪತ್ರ ಮಾತ್ರ.

ಪತ್ರ:

ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ..  ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು...

ಹಲ್ಲೋ ಸರ್...
ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ ತಿಳಿಯಿತು. ನಿಮ್ಮ ಕೆಲ ಬರಹಗಳನ್ನೂ ಓದಿದೆ. ಆದರೆ ಕಳೆದ ತುಂಬಾ ವರ್ಷಗಳಿಂದ ನೀವು ಏನನ್ನೂ ಬರೆಯುತ್ತಿಲ್ಲ ಯಾಕೇ? ದಯವಿಟ್ಟು ಉತ್ತರಿಸಿ, ನನಗೆ ತುಂಬಾ ಸಹಕಾರಿಯಾಗುತ್ತೆ ನನ್ನ ಅಭ್ಯಾಸಕ್ಕೆ...
-ಶರತ್

ಕೆಳಗೆ ಆತನ ವಿಳಾಸವಿತ್ತು. ನನಗೆ ಇದು ಹೊಸತಲ್ಲ.. ಕಳೆದ ಕೆಲ ವರ್ಷಗಳಲ್ಲಿ ಹೀಗೆ ತುಂಬಾ ಪತ್ರಗಳು ಬಂದಿದ್ದವು. ಯಾವುದಕ್ಕೂ ನಾನು ಉತ್ತರಿಸಲೂ ಇಲ್ಲ. ಆದರೇ ಈ ಹುಡುಗ ಮಾತ್ರ ಬಿಡುವಂತೆ ಕಾಣಲಿಲ್ಲ, ತಿಂಗಳೊಳಗೆ ಮೂರು ಪತ್ರಗಳು ಬಂದಿದ್ದವು. ಮೊನ್ನೆ ಬಂದ ಪತ್ರ ನನ್ನ ಹಳೆಯ ದಿನವನ್ನು ನೆನಪಿಸಿತ್ತು. ದಯವಿಟ್ಟು ಒಂದು ಪತ್ರವಾದರೂ ಬರೆಯಿರಿ, ನಿಮ್ಮಿಂದ ಒಂದೇ ಒಂದು ಪತ್ರದ ನಿರೀಕ್ಷೆಯಲ್ಲಿದ್ದೇನೆ ಅನ್ನುವ ಸಾಲುಗಳು ಮನಕ್ಕೆ ಚುಚ್ಚಿದ್ದವು. ಮತ್ತೆ ಪೆನ್ನು ಹಿಡಿದು ಆತನಿಗೊಂದು ಪತ್ರ ಬರೆದೆ, ಈ ಬಾರಿ ಕೈ ನಡುಗಲಿಲ್ಲ. ಯಾಕೋ ಗೊತ್ತಿಲ್ಲ.

ಆಗ ಇಸವಿ೧೯೯೦. ಇಂಟರ್ ನೆಟ್, ಮೊಬೈಲ್ ಅವ್ಯಾವುದೂ ಅಸ್ತಿತ್ವದಲ್ಲಿರಲಿಲ್ಲ. ದೂರಧ್ವನಿ ಅಷ್ಟರ ಮಟ್ಟಿಗೆ ಪ್ರಸಿದ್ಧಿಯಲ್ಲಿರಲಿಲ್ಲ.ಆಗ ನಾನಿನ್ನೂ ಅವಿವಾಹಿತ ಸಂಪದ ಪತ್ರಿಕೆಯಲ್ಲಿ ಅಂಕಣಕಾರನಾಗಿ ಪ್ರಸಿದ್ಧಿ ದೊರೆತಿತ್ತು. ಎರಡು ಪುಸ್ತಕಗಳು ಪ್ರಕಟಣೆಯಾಗಿ ಉತ್ತಮ ಮಾರಾಟ ಕಂಡಿದ್ದವು. ಮೊದಮೊದಲು ಬರವಣಿಗೆ ನನ್ನ ಹವ್ಯಾಸವಾಗಿದ್ದರೂ ಕೆಲ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡು ಕ್ರಮೇಣ ಅಂಕಣಗಳ ರೂಪದಲ್ಲಿ ಮಾರ್ಪಾಡಾಯಿತು.ಅತೀ ಚಿಕ್ಕ ವಯಸ್ಸಿನ ಅಂಕಣಕಾರ ಅನ್ನುವ ಬಿರುದೂ ಬೆನ್ನೆರಿತು. ಉಪಾಸನಾ ಮತ್ತು ಮಾತೆಯ ಮಡಿಲಲ್ಲಿ ಹೀಗೆ ಎರಡು ಪುಸ್ತಕಗಳು ಪ್ರಕಟಣೆಯಾಗಿ, ಮಾತೆಯ ಮಡಿಲಲ್ಲಿ ಕೃತಿಗೆ ಕನ್ನಡ ಸಾಹಿತ್ಯ ಪ್ರಕಾಶನದ ಪ್ರಶಸ್ತಿಯೂ ದೊರೆಯಿತು. ಇನ್ನೇನು ಬೇಕು ಒಬ್ಬ ವ್ಯಕ್ತಿಗೆ.  ವೃತ್ತಿಯಲ್ಲಿ ಇಂಜಿನೀಯರ್, ಬೆಂಗಳೂರಿನಲ್ಲಿ ಮನೆ ಗಾಡಿ, ಸಮಾಜದಲ್ಲಿ ಗೌರವ, ಹೆಚ್ಚಿದ ಬೇಡಿಕೆ, ಉತ್ತಮ ಸಂಪಾದನೆ ಜೋತೆಜೋತೆಗೆ ನನ್ನ ಅಹಂ ಕೂಡ ಬೆಳೆದಿತ್ತು.
ಆಗೆಲ್ಲ ಓದುಗರ ಅಭಿಪ್ರಾಯಗಳು ಪತ್ರಗಳ ಮೂಲಕ ಬರಹಗಾರರನ್ನ ತಲುಪುತ್ತಿತ್ತು. ಹೀಗೆ ಬಂದ ಪತ್ರಗಳನ್ನು ಓದುವುದು, ಕೆಲವಕ್ಕೆ ಉತ್ತರಿಸುವುದು ನನ್ನ ವಾಡಿಕೆಯಾಗಿತ್ತು. ಓಂದು ದಿನ ಹೀಗೆ ಬರೆಯುತ್ತ ಕುಳಿತಾಗ ಕೆಲಸದವ ಒಂದಿಷ್ಟು ಪತ್ರಗಳನ್ನು ನನ್ನ ಮುಂದಿಟ್ಟು ನಡೆದ. ನೋಡಿದರೆ ಸುಮಾರು ಇಪ್ಪತ್ತು ಮೂವತ್ತು ಪತ್ರಗಳಿದ್ದವು. ಇದು ನನಗೆ ಸರ್ವೇಸಾಮಾನ್ಯ.ಪೊಸ್ಟ್ ಕಾರ್ಡ್, ಅಂತರ್ದೇಶೀಯ ಪತ್ರಗಳು ನಿಯತಕಾಲಿಕಗಳು ಹೀಗೆ ನೋಡುತ್ತಿದ್ದಾಗ ನನ್ನ ದೃಷ್ಟಿ ಒಂದು ಪತ್ರದ ಮೇಲೆ ಬಿತ್ತು, ಸ್ಟಾಂಪ್ ನೋಡಿದಾಗ ಅದು ಮೈಸೂರಿನಿಂದ ಬಂದದ್ದು.ಬರೆದದ್ದು ಯಾವುದೋ ಹುಡುಗಿ. ಉಳಿದೆಲ್ಲ ಪತ್ರಗಳನ್ನು ಬದಿಗಿಟ್ಟು ಆ ಪತ್ರ ಓದತೊಡಗಿದೆ.

ಪ್ರಿಯ ವಿನೀತ್ ಕುಮಾರ್,
 ನಿಯಮಿತವಾಗಿ ನಿಮ್ಮ ಅಂಕಣಗಳನ್ನ ಓದುತ್ತಿರುತ್ತೇನೆ, ಮೊನ್ನೆಯಷ್ಟೇ ನಿಮ್ಮ ಉಪಾಸನಾ ಓದಿದೆ, ಓಂದು ಹೋಸ ಪ್ರಯೋಗ, ಮಾಹಿತಿಯ ವಿಸ್ತರಣೆ, ವಿಷಯಗಳ ಮಂಡನೆ ಹೀಗೆ ಪುಸ್ತಕ ತುಂಬಾ ಇಷ್ಟವಾಯಿತು. ನಿಮ್ಮ ಇನ್ನೋಂದು ಪುಸ್ತಕ ಎಲ್ಲೂ ಸಿಗುತ್ತಿಲ್ಲ, ಓಂದು ಪ್ರತಿ ಕಳುಹಿಸಿ ಕೊಡುತ್ತೀರಾ? ಮೊತ್ತವನ್ನು ನಿಮಗೆ ಮನಿ ಆರ್ಡರ್ ಮಾಡಿದ್ದೇನೆ.
   ನನಗೆ ನಿಮ್ಮ ಜೋತೆ ಇನ್ನೂ ಕೆಲ ವಿಶಯಗಳ ಬಗ್ಗೆ ಚರ್ಚೆ ಮಾಡುವುದಿದೆ. ಸಾಹಿತ್ಯ, ವಿಜ್ನಾನ, ಆಧ್ಯಾತ್ಮ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸೆಯಿದೆ. ಅನೇಕ ಪ್ರಶ್ನೆಗಳು ನನ್ನ ಮನದಲ್ಲಿವೆ, ನನ್ನ ಪ್ರಶ್ನೆಗಳಿಗೆಲ್ಲ ನಿಮ್ಮಿಂದ ಉತ್ತರ ಸಿಗಬಹುದು ಅನ್ನುವ ಭರವಸೆಯಿದೆ. ಅಂಕಣಕಾರರಲ್ಲದೇ ಮತ್ತೇನು ಮಾಡುತ್ತೀರಿ? ನಿಮ್ಮ ಹವ್ಯಾಸಗಳೇನು? ನೀವು ಮೈಸೂರಿಗೆ ಬರ್ತಾ ಇರ್ತೀರಾ?
   ಈ ಪತ್ರಕ್ಕೆ ಆದಷ್ಟು ಬೇಗ ಉತ್ತರಿಸುತ್ತೀರಿ ಅನ್ನುವ ನಂಬಿಕೆ ಇದೆ. ಜೋತೆಗೆ ನಿಮ್ಮ ಫೋನ್ ನಂಬರ್ ಕೂಡ ಕಳುಹಿಸಿ.
-ಕಲ್ಪನಾ.
ಮರುದಿನ ಆಕೆ ಕಳುಹಿಸಿದ್ದ ಮನಿ ಆರ್ಡರ್ ದೊರೆಯಿತು, ಆಕೆಯ ವಿಳಾಸಕ್ಕೆ ನನ್ನ ಪುಸ್ತಕವನ್ನು ಜೋತೆಗೆ ಕೆಲ ಅಂಕಣಗಳ ಪ್ರತಿಯನ್ನೂ ಕಳುಹಿಸಿದೆ, ಆದರೆ ಯಾಕೋ ಆಕೆಯ ಪತ್ರಕ್ಕೆ ಉತ್ತರಿಸಬೇಕೆಂದು ನನಗೆ ಅನಿಸಲೇ ಇಲ್ಲ.ಎಲ್ಲ ಓದುಗರಂತೆ ಆಕೆಯೂ ಒಬ್ಬಳು ಅನ್ನುವ ಭಾವನೆ ನನ್ನಲ್ಲಿ ಮೂಡಿತ್ತು.
ವಾರದಲ್ಲೇ ಆಕೆಯಿಂದ ಮತ್ತೆ ಪತ್ರ ಬಂದಿತ್ತು
ನಿಮ್ಮ ಪುಸ್ತಕ ದೊರೆಯಿತು, ಓದಿ ಮುಗಿಸಿದೆ. ಕೆಲ ಕ್ಷಣ ನನ್ನನ್ನ ಮೂಕವಾಗಿಸಿತ್ತು ನಿಮ್ಮ ಪುಸ್ತಕ. ಧನ್ಯವಾದಗಳು. ಆದರೆ ನನ್ನ ಮೊದಲ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ, ದಯವಿಟ್ಟು ಉತ್ತರಿಸಿ.

ಅವಳ ಈ ಪತ್ರಕ್ಕೂ ನನ್ನಿಂದ ನಿರುತ್ತರ.
ನಾವು ಯಾವುದಾದರೂ ವ್ಯಕ್ತಿಯ ಬಗ್ಗೆ ಆಸಕ್ತಿ ವಹಿಸದಿದ್ದಲ್ಲಿ ಏನಾಗುತ್ತೋ ಅದೇ ಆಯಿತು. ಕೆಲ ದಿನದಲ್ಲೇ ಆಕೆಯಿಂದ ಕೋಪತಾಪಯುಕ್ತ ಪತ್ರ ನನ್ನ ಕೈ ಸೇರಿತ್ತು.
ಮಿ.ವಿನೀತ್,
ಇದು ನನ್ನ ಮೂರನೇ ಪತ್ರ, ಈ ಮೊದಲು ಎರಡು ಪತ್ರ ಬರೆದಿದ್ದೆ, ಯಾವುದಕ್ಕೊ ನಿಮ್ಮಿಂದ ಸರಿಯಾದ ಉತ್ತರವಿಲ್ಲ. ನಿಮಗೆ ನಿಮ್ಮ ಓದುಗರ ಬಗ್ಗೆ ಗೌರವವಿಲ್ಲ, ಇದು ಓಳ್ಳೆಯ ಬೆಳವಣಿಗೆಯಲ್ಲ. ನನ್ನ ಪ್ರಶ್ನೆಗಳಿಗೆ ಓಂದು ನಾಲ್ಕು ಸಾಲಲ್ಲಾದರೂ ಉತ್ತರಿಸಬೇಕು ಅಂತ ನಿಮಗೇ ಅನಿಸುವುದೇ ಇಲ್ಲವೇ? ನಿಮಗೆ ನಿಮ್ಮ ಓದುಗರ ಬಗ್ಗೆ ಬೆಲೆಯಿಲ್ಲದಿದ್ದರೆ ನನಗೂ ನಿಮ್ಮ ಓದುಗರಾಗಿ ಇರುವುದರಲ್ಲಿ ಯಾವುದೇ ಆಸಕ್ತಿ ಇಲ್ಲ, ನಿಮ್ಮ ಪುಸ್ತಕವನ್ನು ನಿಮಗೇ ಕಳುಹಿಸುತ್ತಿದ್ದೇನೆ.

ಈ ಪತ್ರವನ್ನು ಓದಿ ಒಮ್ಮೆ ಎದೆಯಲ್ಲಿ ಧಸ್ಸೆಂದಿತ್ತು. ಅವಳ ಪ್ರಶ್ನೆಗಳಿಗೆ ಉತ್ತರಿಸದೇ ಇರದಿದ್ದಕ್ಕೆ ನನಗೂ ಸ್ವಲ್ಪ ಬೇಸರವೆನಿಸಿತು. ಎಲ್ಲರಂತೇ ಅವಳನ್ನೂ ಸಾಮಾನ್ಯ ಓದುಗರಂತೆ ವ್ಯವಹರಿಸಿದ್ದಕ್ಕೆ ದುಃಖವಾಯಿತು. ಆದರೆ ನನ್ನ ಈ ವರ್ತನೆಗೆ ಕಾರಣವಿತ್ತು, ಹೀಗೆ ಬರುತ್ತಿದ್ದ ಅದೆಷ್ಟೊ ಪತ್ರಗಳಿಗೆ ನಾನು ಉತ್ತರಿಸುತ್ತಲೇ ಇರಲಿಲ್ಲ, ಅದು ಸಾಧ್ಯವೂ ಇರಲಿಲ್ಲ ನನ್ನಿಂದ. ಪುಸ್ತಕ ಓದಿಯಾದ ಮೇಲೆ ವಾಪಸ್ ಕಳುಹಿಸಿದ್ದಾಳೆ, ಎಷ್ಟು ಸೊಕ್ಕಿರಬೇಡ ಅವಳಿಗೆ... ಹೋಗಲಿ ಎಂದು ನಾನು ಸುಮ್ಮನಾದೆ. ನನ್ನ ಬರಹಗಳಿಗೆ ಅದೆಷ್ಟೋ ಓದುಗರಿದ್ದಾರೆ ಅದರಲ್ಲಿ ಇವಳು ಏನು ಮಹಾ ಅನ್ನುವ ಹಿರಿಮೆ ಮನದಲ್ಲಿ ಮೂಡಿತ್ತು. ಈ ವಿಶಯವನ್ನು ಅಲ್ಲಿಗೇ ಮರೆತು ನನ್ನ ದಿನನಿತ್ಯದ ಕೆಲಸದಲ್ಲಿ ನಾನು ಮಗ್ನನಾಗಿದ್ದೆ.

ನಾನು ಸುಮ್ಮನಾದರೂ ಅವಳು ಸುಮ್ಮನಾಗಲಿಲ್ಲ. ಕೆಲ ದಿನದಲ್ಲಿ ಮತ್ತೆ ಅವಳಿಂದ ಪತ್ರ ಬಂದಿತ್ತು. ಓದಲೋ ಬೇಡವೋ ಅಂತ ಅನುಮಾನಿಸುತ್ತಲೇ ಕೊನೆಗೆ ಓದಿದೆ. ಅವಳು ನನ್ನ ಕ್ಷಮೆ ಕೋರಿದ್ದಳು. ಬೆದರಿಕೆಯ ಪತ್ರಕ್ಕಾದರೂ ಉತ್ತರಿಸುತ್ತೇನೆ ಅನ್ನುವ ಅವಳ ನಿರೀಕ್ಷೆಯೂ ಸುಳ್ಳಾಗಿತ್ತು. ಪತ್ರದ ಕೊನೆಯಲ್ಲಿ ಅವಳ ಕಳಕಳಿಯ ವಿನಂತಿಯಿತ್ತು ದಯವಿಟ್ಟು ಓಂದಾದರೂ ಪತ್ರ ಬರೆಯಿರಿ... ನಿಮ್ಮಿಂದ ಬರುವ ಓಂದಾದರೂ ಪತ್ರ ಓದುವ ಆಸೆಯಿದೆ ನನಗೆ.

ಅವಳು ತುಂಬಾ ಭಾವುಕಳಾಗಿ, ದುಃಖದಿಂದ ಇರುವುದು ನನ್ನ ಅರಿವಿಗೆ ಬಂತು, ಅವಳನ್ನು ಅರಿತು ಸಮಾಧಾನಿಸುವ ಗೆಳೆಯ ಬೇಕಾಗಿತ್ತು ಅವಳಿಗೆ. ಅವಳೊಟ್ಟಿಗೆ ತುಂಬಾ ಕಠೋರವಾಗಿ ವರ್ತಿಸಿದೆ ಅನ್ನುವ ಕೀಳರಿಮೆ ನನ್ನನ್ನು ಕಾಡಿತು. ಅವಳಲ್ಲಿ ಕ್ಷಮೆ ಕೋರುವುದು ಮಹತ್ವವಾಗಿತ್ತು. ಇದರಿಂದ ನಮ್ಮಿಬ್ಬರ ತಲೆಯ ಮೇಲಿನ ಭಾರ ಇಳಿಯುವುದೆಂದು ಅನಿಸತೊಡಗಿತು. ಅವಳ ಮೊದಲ ಪತ್ರವನ್ನೆಲ್ಲ ಮತ್ತೋಮ್ಮೆ ಓದಿದೆ. ಕೊನೆಗೆ ಅವಳಿಗಾಗಿ ಪತ್ರ ಬರೆಯತೊಡಗಿದೆ ಮೇಲ್ಗಡೆ ನನ್ನ ವಿಳಾಸ ಬರೆದೆ. ಈಗ ಶುರು ಮಾಡುವುದು ಎಲ್ಲಿಂದ..? ಗೆಳೆತನ ಮಾಡುವುದು ಅಂತ ನಿರ್ಧರಿಸಿದ ಮೇಲೆ ಆಯಿತು.. ಪ್ರಿಯ ಕಲ್ಪನಾ ಅಂತಲೇ ಶುರು ಮಾಡಿದೆ.

ಪ್ರಿಯ ಕಲ್ಪನಾ
ನಾನು ನಿನ್ನ ಪತ್ರಕ್ಕೆ ಉತ್ತರಿಸಲಿಲ್ಲ, ಅದಕ್ಕಾಗಿ ನಿನ್ನಲ್ಲಿ ಕ್ಷಮೆ ಕೋರುತ್ತೇನೆ. ನಾನು ಉತ್ತರಿಸದೇ ಇರುವುದಕ್ಕೆ ಕೆಲ ಕಾರಣಗಳಿವೆ. ನನಗೆ ಬರುವ ಎಲ್ಲ ಪತ್ರಗಳಿಗೂ ಉತ್ತರಿಸುವಷ್ಟು ಸಮಯ ನನ್ನಲ್ಲಿ ಇಲ್ಲ, ಅಲ್ಲದೇ ಈ ರೀತಿಯ ಪತ್ರವ್ಯವಹಾರದಿಂದ ಗೆಳೆತನ ಶುರುವಾಗಿ ಮುಂದೇ ಅದೆಲ್ಲೋ ಹೋಗುವುದು ನನಗೆ ಇಷ್ಟವಿಲ್ಲ. ಈ ರೀತಿಯ ಯಾವುದೇ ಬಂದನದಲ್ಲಿ ಸಿಲುಕಿಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಯಾವುದೇ ಹುಡುಗಿಯ ಪತ್ರಕ್ಕೆ ಉತ್ತರಿಸುವುದೇ ಇಲ್ಲ. ಆದರೆ ನಿನ್ನ ವಿಷಯದಲ್ಲಿ ನಾನು ತಪ್ಪಿದ್ದೇನೆ ಅಂತ ಅನಿಸತೊಡಗಿತು ಅದಕ್ಕೆ ನಿನಗೆ ಪತ್ರ ಬರೆದಿದ್ದೇನೆ.
ಅದೆಕೋ ನಿನ್ನ ಜೋತೆ ಗೆಳೆತನ ಮಾಡಬೇಕೆಂದು ಅನಿಸಿತು, ಬರೀ ಗೆಳೆತನ. ಅದೂ ಪತ್ರದ ಮೂಲಕ ಮಾತ್ರ. ನಾವು ಈ ಜನ್ಮದಲ್ಲಿ ಒಬ್ಬರಿಗೊಬ್ಬರು ಭೇಟಿ ಮಾಡುವ ಹಾಗಿಲ್ಲ.. ಅದೆಷ್ಟೇ ಅನಿಸಿದರೂ. ಅದು ಕೇವಲ ಸಮಯ ವ್ಯರ್ಥವೇ ವಿನಃ ಬೇರೆನಿಲ್ಲ. ಆದಷ್ಟು ನಾವು ವಿಶಯಕ್ಕನುಗುಣವಾಗೇ ಪತ್ರದಲ್ಲಿ ವ್ಯವಹರಿಸೋಣ, ಸುಮ್ಮನೇ ತಮಾಷೆ, ಚೇಷ್ಟೆ ಇವೆಲ್ಲ ಬೇಡ. ನಿನ್ನ ಸುಖ ದುಃಖಗಳನ್ನ ನನ್ನಲ್ಲಿ ಹೇಳಿಕೊಳ್ಳಬಹುದು.
ಇನ್ನು ನೀನು ಕೇಳಿದಂತೆ ನೀವೇನು ಮಾಡುತ್ತೀರಿ, ಹವ್ಯಾಸಗಳೇನು, ಮೈಸೂರಿಗೆ ಬರುತ್ತೀರಾ?? ಹೀಗೆ
ನಾನು ವೃತ್ತಿಯಲ್ಲಿ ಇಂಜಿನಿಯರ್.ಬರವಣಿಗೆ, ಪ್ರವಾಸ, ಹೊಸ ವಿಶಯಗಳನ್ನು ತಿಳಿದುಕೊಳ್ಳುವುದು ನನ್ನ ಹವ್ಯಾಸ. ನಾನು ಆಗಾಗ ಮೈಸೂರಿಗೆ ಬರುತ್ತಾ ಇರುತ್ತೇನೆ, ಆದರೆ ನಿನ್ನನ್ನು ಸಿಗಲು ಬರುತ್ತೇನೆ ಅಂತ ನಿರೀಕ್ಷಿಸಬೇಡ ಕ್ಷಮಿಸು. ಸಧ್ಯದ ಮಟ್ಟಿಗೆ ನಾವಿಬ್ಬರೂ ಫೋನ್ ನಲ್ಲಿ ಮಾತನಾಡಬೇಕೆಂದು ನನಗೆ ಅನಿಸುವದಿಲ್ಲ. ಪತ್ರ ವ್ಯವಹಾರ ಇದ್ದೇ ಇದೆಯಲ್ಲ. ಪತ್ರ ಬರೆಯುವುದರಲ್ಲಿ, ಬರುವ ಪತ್ರಕ್ಕಾಗಿ ಕಾಯುವುದರಲ್ಲಿ ಇರುವ ಆನಂದ ಫೋನ್ ನಲ್ಲಿ ಇದೆಯೆ? ಇರಲಿ. ನೀನೆನು ಮಾಡುತ್ತೀಯಾ ಎಂದು ತಿಳಿದುಕೊಳ್ಳುವ ಆಸಕ್ತಿಯಿದೆ. ಇದುವರೆಗೆ ನಿನ್ನ ಪತ್ರ ಬರುತ್ತದೋ ಅನ್ನುವ ಸಣ್ಣ ಭಯ ನನ್ನಲ್ಲಿತ್ತು, ಆದರೆ ಈ ಬಾರಿ ನಿನ್ನ ಪತ್ರಕ್ಕಾಗಿ ಕಾಯಿತ್ತಿರುತ್ತೇನೆ. ಎಂಟತ್ತು ದಿನದಲ್ಲಿ ನಿನ್ನ ಪತ್ರ ಬರಬಹುದೆಂದು ನಿರೀಕ್ಷಿಸುತ್ತೇನೆ, ಬೇಗ ಬಂದರೂ ಆಶ್ಚರ್ಯವಿಲ್ಲ.
-ವಿನೀತ್.

ಪತ್ರ ಬರೆದು ಪೊಸ್ಟ್ ಮಾಡಿ ನನ್ನ ಕಾರ್ಯದಲ್ಲಿ ನಾನು ನಿರತನಾದೆ. ಕೆಲಸದ ಗಡಿಬಿಡಿಯಲ್ಲಿ ತಿಂಗಳು ಕಳೆದಿದ್ದು ಅರಿವಿಗೇ ಬರಲಿಲ್ಲ, ಅವಳ ಪತ್ರ ಬಂದಿದೆಯೋ ಎಂದು ಪತ್ರಗಳ ರಾಶಿಯಲ್ಲಿ ತಡಕಾಡಿದೆ.ಎಲ್ಲೂ ಅವಳ ಪತ್ರ ಕಾಣಲಿಲ್ಲ, ಆದರೆ ಇನ್ನೊಂದು ಪತ್ರ ನನ್ನ ಕಣ್ಣಿಗೆ ಬಿತ್ತು. ಅದು ಓಂದು ಅನಾಥಾಲಯದಿಂದ ತುಂಬಾ ಹಿಂದೆಯೇ ಬಂದ ಪತ್ರವಾಗಿತ್ತು, ಕುತೂಹಲದಿಂದಲೇ ಓದತೊಡಗಿದೆ.
ಮಿ.ವಿನೀತ್ ಕುಮಾರ್,
ನಮಸ್ತೇ. ನೀವು ಕಲ್ಪನಾಳಿಗೆ ಬರೆದ ಪತ್ರ ನಮ್ಮ ಕೈ ಸೇರಿತು, ಅವಳು ಸಧ್ಯ ಈ ಪತ್ರವನ್ನು ಓದುವ ಪರೀಸ್ಥಿತಿಯಲ್ಲಿಲ್ಲ. ನಿಮ್ಮ ಪತ್ರ ಬಂದದ್ದು ಕೇಳಿ ತುಂಬಾ ಖುಶಿಯಾಯಿತು ಅವಳಿಗೆ. ನೀವು ಒಮ್ಮೆ ಬಂದು ಅವಳನ್ನು ನೋಡಬೇಕೆಂಬುದು ಅವಳ ಆಸೆ. ನೀವು ಇಲ್ಲಿ ಬಂದರೆ ಎಲ್ಲವನ್ನು ವಿಸ್ತಾರವಾಗಿ ಮಾತನಾಡೋಣ. ನೀವು ಬಂದೇ ಬರುತ್ತೀರಿ ಅಂತ ನಿರೀಕ್ಷಿಸುತ್ತೇವೆ.
-ರಾಮನಾಥ್ (ಅಧ್ಯಕ್ಷ - ಆಶ್ರಯ ಅನಾಥಾಲಯ)

ಎಲ್ಲ ಗೊಂದಲವಾಗಿ ಕಂಡಿತು ನನಗೆ... ಏನು ಮಾಡುವುದೆಂದು ತೋಚದೇ, ಕೋನೆಗೆ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆ.
ಅದೋಂದು ಸುಂದರ ಅನಾಥಾಲಯ, ಸುತ್ತೆಲ್ಲ ಗುಡ್ಡ ಬೆಟ್ಟ, ಎಲ್ಲ ಕಡೆ ಹಸಿರೇ ಹಸಿರು. ಕಾವ್ಯ ರಚನೆಗೆ ಕವಿಗಳಿಗೆ ಹೇಳಿ ಮಾಡಿಸಿದ ಜಾಗದಂತಿತ್ತು. ಅಲ್ಲಿಲ್ಲಿ ಆಡುತ್ತಿದ್ದ ಕೆಲ ಮಕ್ಕಳು ನನ್ನನ್ನ ನೋಡಿ ಅಪರಿಚಿತ ಭಾವ ವ್ಯಕ್ತಪಡಿಸಿ ದೂರಾದವು. ಅತ್ತಿತ್ತ ಗಮನಿಸುತ್ತಿದ್ದಂತೆ ಅತ್ತ ಕಡೆಯಿಂದ ನನ್ನತ್ತ ಒಬ್ಬ ಹುಡುಗಿ ಕೈ ಮಾಡಿದಳು. ಇವಳೆ ಕಲ್ಪನಾ ಇರಬಹುದೇ ಅಂತ ಅತ್ತ ನಡೆದೆ. ನಾನು ವಿನೀತ್ ಇಲ್ಲಿಂದ ನನಗೆ ಪತ್ರ ಬಂದಿತ್ತು. ನೀನು ಕಲ್ಪನಾ ತಾನೇ?? ನಾನು ನುಡಿದೆ... ಅಲ್ಲವೆಂಬಂತೆ ತಲೆಯಾಡಿಸಿ ನನ್ನನ್ನು ಕಾರ್ಯಾಲಯದತ್ತ ಕರೆದೊಯ್ದಳು.
ಒಳಗೆ ಕಾಲಿಡುತ್ತಿದ್ದಂತೆ ಬನ್ನಿ ನಾನು ರಾಮನಾಥ್, ಏನಾಗಬೇಕಿತ್ತು?? ಅನ್ನುತ್ತ ತಮ್ಮ ಪರಿಚಯ ಮಾಡಿಕೊಟ್ಟರು ರಾಮನಾಥ್. ನನ್ನ ಪರಿಚಯ ಮಾಡಿಕೊಟ್ಟು ಪತ್ರ ಬರೆಯಲು ಕಾರಣ ಏನೆಂದು ಪ್ರಶ್ನಿಸಿದೆ. ಬನ್ನಿ ನನ್ನ ಜೋತೆ ಅನ್ನುತ್ತ ಓಂದು ರೂಮಿನತ್ತ ನನ್ನನ್ನು ಕರೆದೊಯ್ದರು.
ಒಳಬರುತ್ತಿದ್ದಂತೆ ಇವಳೇ ಕಲ್ಪನಾ ಅಂತ ಕೈ ತೋರಿದರು...
ಅತ್ತ ಕಣ್ಣಾಯಿಸಿದಾಗ ಕಂಡದ್ದು ಕಲ್ಪನಾ... ಇವಳೇನಾ ಕಲ್ಪನಾ?? ೨೦-೨೨ ಹರೆಯ ಬಹುತೇಕ, ಅದೆಷ್ಟೋ ಆಸೆ ಹೊತ್ತು ಮಿನುಗುವ ಕಣ್ಗಳು, ದುಂಡು ಮುಖ, ಸಂಪಿಗೆಯನ್ನೂ ನಾಚಿಸುವ ಮೂಗು, ಮಾತನಾಡಲು ಹಾತೊರೆಯುತ್ತಿದ್ದ ಅಧರಗಳು...
ಕಲ್ಪನಾಳ ಕಪ್ಪು ಬಿಳುಪು ಫೋಟೊ ಅದಕ್ಕೊಂದು ಹಾರ. . .  ಕಾಲ್ಕೆಳಗಿನ ಭೂಮಿ ಕುಸಿದ ಅನುಭವ... ಇದು ಹೇಗೆ ಸಾಧ್ಯ? ಏನಾಗಿತ್ತು ಇವಳಿಗೆ? ಅವಳು ಯಾಕೆ ಏನೂ ಹೇಳಲಿಲ್ಲ? ಸಾವಿರಾರು ಪ್ರಶ್ನೆಗಳು ತಲೆಯಲ್ಲಿ ಬಿಗುಗಾಳಿಯಂತೆ ಹೊಕ್ಕವು. ಆ ರಭಸಕ್ಕೆ ಕೆಲ ಕ್ಷಣ ಎನೂ ತೋಚದಂತೆ ಮೂಕನಾಗಿದ್ದೆ. ಯಾರೋ ಅಲುಗಾಡಿಸುತ್ತಿದ್ದ ಅನುಭವ, ಕೆಲ ಕ್ಷಣ ನಾನು ಕಳೆದುಹೋಗಿದ್ದೆ... ಮಿ.ವಿನೀತ್.... ಮಿ.ವಿನೀತ್... ರಾಮನಾಥ್ ರ ಧ್ವನಿ ಸಣ್ಣದಾಗಿ ಮನದಲ್ಲಿ ಪ್ರತಿಧ್ವನಿಸುತ್ತಿತ್ತು. ಹ್ಮಾಂ.. ಹ್ಮಾಂ.. ಎನ್ನುತ್ತ ಮತ್ತೆ ಈ ಜಗದಲ್ಲಿ ಪ್ರಸ್ಥಾನಿಸುತ್ತಿದ್ದೆ. ಬನ್ನಿ ವಿನೀತ್ ಕುಳಿತುಕೊಳ್ಳಿ, ಸ್ವಲ್ಪ ನೀರು ಕುಡಿಯಿರಿ ರಾಮನಾಥ್ ಸಮಾಧಾನಿಸುತ್ತ ನನ್ನನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದರು, ನೀರು ಕುಡಿದು ಸ್ವಲ್ಪ ಸಮಾಧಾನಿಸಿಕೊಂಡೆ, ಪ್ರಶ್ನಿಸಬೇಕು ಅಂತ ಅವರತ್ತ ನೋಡುತ್ತಲೇ  ಅವರೇ ಮಾತನಾಡಲು ಮುಂದಾದರು.
ಕಲ್ಪನಾ ಅನಾಥೆ. ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದಳು. ತುಂಬಾ ಮುಗ್ಧೆ, ಸುಖ ಅನ್ನೋದು ಅವಳ ಬಾಳಲ್ಲಿ ಸಿಗಲಿಲ್ಲ. ತುಂಬಾ ಕಷ್ಟಪಟ್ಟು ಓದಿ ಕಳೆದ ವರ್ಷವಷ್ಟೇ ಒಂದು ಕೆಲಸಕ್ಕೆ ಸೇರಿದ್ದಳು. ಆಗಿಂದ ಅವಳು ನಿಮ್ಮ ಅಭಿಮಾನಿ. ಇನ್ನೇನು ಎಲ್ಲ ಸರಿಹೊಯಿತು ಅನ್ನುವಷ್ಟರಲ್ಲಿ ಮತ್ತೋಂದು ದೊಡ್ಡ ಆಘಾತ ಕಾದಿತ್ತು. ಕೆಲ ದಿನಗಳ ಹಿಂದಷ್ಟೇ ಅವಳಿಗೆ ಕ್ಯಾನ್ಸರ್ ಇರುವುದು ತಿಳಿಯಿತು, ಗುಣಪಡಿಸಲಾಗದ ಮಟ್ಟಕ್ಕೆ ಬೆಳೆದಿತ್ತು. ಪರೀಕ್ಷಿಸಿದ ವೈದ್ಯರು ಕೆಲ ತಿಂಗಳಷ್ಟೇ ಆಯಸ್ಸು ಉಳಿದಿರುವುದೆಂದು ತಿಳಿಸಿ ಇದ್ದಷ್ಟು ದಿನ ಹಾಯಾಗಿರಿ ಎಂದು ಸುಮ್ಮನಾದರು. ಆದರೆ ಇಷ್ಟು ಬೇಗ ಸಾಯುತ್ತಾಳೆ ಅಂತ ಊಹಿಸಿರಲಿಲ್ಲ, ಮನಸ್ಸಿಂದ ಕುಗ್ಗಿ ಹೋದದ್ದೇ ಅವಳ ಆಯಸ್ಸು ಕಡಿಮೆಯಾಯಿತು. ಎಲ್ಲ ದೇವರ ಆಟ ನಾವೇನು ಮಾಡುವುದಕ್ಕೆ ಬರುತ್ತೇ ಅಲ್ಲವೇ. ನಿಮ್ಮ ಪತ್ರ ಬಂದಿದ್ದು ಅವಳಿಗೆ ತುಂಬಾ ಖುಶಿಯಾಯಿತು, ಆದರಾಗ ಅವಳು ಅದನ್ನು ಓದುವ ಪರಿಸ್ಥಿತಿಯಲ್ಲಿರಲಿಲ್ಲ, ನಾವು ಓದಿ ಹೇಳುತ್ತೇವೆ ಅಂದರೂ ಕೇಳಲಿಲ್ಲ. ಅದಕ್ಕೆ ನಿಮಗೆ ನಾವೇ ಪತ್ರ ಬರೆದೆವು, ತಕ್ಷಣ ನೀವು ಬಂದಿದ್ದರೆ ಅವಳನ್ನು ನೋಡಬಹುದಿತ್ತೆನೋ. ಮೊನ್ನೆಯಷ್ಟೆ ಕಲ್ಪನಾ ನಮ್ಮನ್ನೆಲ್ಲ ಬಿಟ್ಟು ಹೊರಟುಹೋದಳು.ಅನ್ನುತ್ತು ಒಂದು ಪತ್ರವನ್ನು ನನ್ನ ಕೈಗಿಟ್ಟು ಇದು ಅವಳ ಕೊನೆಯ ಪತ್ರ, ನೀವು ಬರುತ್ತೀರಿ ಆಗ ನಿಮಗೆ ಕೊಡಲು ಹೇಳಿದ್ದಳು, ನೀವು ಇನ್ನೆರಡು ದಿನ ಬರದೇ ಇದ್ದರೆ ಪೊಸ್ಟ್ ಮಾಡಬೇಕು ಅಂದುಕೊಂಡಿದ್ದೆ.
ಅದನ್ನು ತೆಗೆದುಕೊಳ್ಳುವಾಗ ಕೈ ನಡುಗುತ್ತಿತ್ತು... ಅಲ್ಲಿ ತುಂಬಾ ಹೊತ್ತು ನಿಲ್ಲಲಾಗದೇ ಸೀದಾ ಬೆಂಗಳೂರಿಗೆ ಬಂದಿದ್ದೆ. ಪತ್ರ ಜೇಬಿನಲ್ಲಿತ್ತು, ಓದುವ ಧೈರ್ಯ ಇರಲಿಲ್ಲ. ಆದರೇ ಓದದೇ ಇರಲಾಗಲಿಲ್ಲ. ನಡುಗುವ ಕೈಗಳಿಂದ ಪತ್ರ ಹಿಡಿದು ಓದಲಾರಂಬಿಸಿದೆ.

ಪ್ರಿಯ ವಿನೀತ್.
ಈ ಪತ್ರ ಓದುವಾಗ ನಾನು ಬದುಕಿರುವುದಿಲ್ಲ. ಯಾರಿಗೂ ನಾವೆಷ್ಟು ದಿನ ಬದಿಕಿರುತ್ತೇನೆ ಅಂತ ಗೊತ್ತಿರುವುದಿಲ್ಲ, ಆದರೆ ನನಗೆ ಮೊದಲೇ ಗೊತ್ತಾಯಿತು. ಇದೋಂದೆ ನಾನು ಪಡೆದುಕೊಂಡು ಬಂದ ಭಾಗ್ಯ. ನಿಮ್ಮ ಪತ್ರ ಬರುವುದಿಲ್ಲ ಅಂತ ಗೊತ್ತಿತ್ತು, ಅದಕ್ಕೆ ನಿಮ್ಮಲ್ಲಿ ತುಂಬಾ ಕಾರಣಗಳಿರಬಹುದು. ನನ್ನಂತೆ ಅದೆಷ್ಟೋ ಅಭಿಮಾನಿಗಳ ಪತ್ರ ನಿಮಗೆ ಬರುತ್ತಿರಬಹುದು, ಎಲ್ಲವಕ್ಕೂ ಉತ್ತರಿಸುವಷ್ಟು ಸಮಯ ನಿಮ್ಮಲ್ಲಿ ಇಲ್ಲದಿರಬಹುದು ಅಥವಾ ಸ್ವಲ್ಪ ಜಂಭವೂ ಇರಬಹುದು. ನನ್ನ ಹೇಳಿಕೆ ಇಷ್ಟೇ ಓದುಗರಿಂದ ನೀವು, ನಿಮ್ಮಿಂದ ಓದುಗರಲ್ಲ ಇದನ್ನ ನೆನಪಿಟ್ಟುಕೊಳ್ಳಿ. ಕೆಲವರು ನಿಮ್ಮನ್ನ ಉತ್ತಮ ಬರಹಗಾರ ಅಂದುಕೊಂಡರೆ, ಮತ್ತೆ ಕೆಲವರು ನೀವು ಹೇಳಿದ್ದೆಲ್ಲ ನಿಜ ಅಂದುಕೊಳ್ಳುತ್ತಾರೆ ಇನ್ನು ಕೆಲವರು ನಿಮ್ಮನ್ನ ದೇವರಂತೆ ಪೂಜಿಸುತ್ತಾರೆ. ಅದಕ್ಕಾಗಿಯಾದರೂ ಒಮ್ಮೆ ನಿಮ್ಮ ಅಭಿಮಾನಿಗಳನ್ನು ಸಂಪರ್ಕಿಸಿ. ಒಂದೆರಡು ಸಾಲಿನಲ್ಲಾದರೂ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ನನ್ನ ಪತ್ರವನ್ನು ನೀವು ಓದಿದ್ದೀರಾ ಅಂತ ನನಗೆ ಗೊತ್ತು. ಪುಸ್ತಕ ಕಳಿಸುವುದರ ಜೋತೆಗೆ ಒಂದೆರಡು ಸಾಲು ಬರೆದಿದ್ದರೂ ನನಗೆ ಖುಶಿಯಾಗುತ್ತಿತ್ತು. ಇರಲಿ ಬಿಡಿ.  ನೀವು ನಿಮ್ಮ ಜೀವನದಲ್ಲಿ ತುಂಬಾ ಅಭಿಮಾನಿಗಳನ್ನು ಹೊಂದಿರಬಹುದು, ತುಂಬಾ ಆಸ್ತಿ ಪಾಸ್ತಿ ಗಳಿಸಿರಬಹುದು ಆದರೆ ಅದಕ್ಕಿಂತ ಹೆಚ್ಚಾದದ್ದು ಅಂದರೆ ನೀವು ಕಷ್ಟದಲ್ಲಿ ಇದ್ದಾಗ ಯಾರು ನಿಮ್ಮ ಜೋತೆ ಇರುತ್ತಾರೋ ಅದೇ ನಿಮ್ಮ ನಿಜವಾದ ಆಸ್ತಿ. ನಿಮ್ಮನ್ನು ಕೀಳಾಗಿ ಭಾವಿಸುತ್ತಿಲ್ಲ ನಾನು, ಅಥವಾ ನಿಮ್ಮನ್ನು ಅವಮಾನಿಸುತ್ತಿಲ್ಲ. ಒಂದಂತೂ ನಿಜ ನಿಮಗೆ ಸ್ವಲ್ಪ ಅಹಂ ಇರುವುದು. ಹೌದಲ್ಲವೇ...? ಹೊಗಲಿ ಬಿಡಿ. ನಾನು ಪಡೆದುಕೊಂಡದ್ದು ನನಗೆ. ನಿಮ್ಮ ಮನ ನೋಯಿಸಿದ್ದರೆ ಕ್ಷಮೆಯಿರಲಿ. ನಾನು ಹೇಳಿದ್ದರ ಬಗ್ಗೆ ನೀವು ಖಂಡಿತವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳುತ್ತೀರಿ ಅಂತ ಭಾವಿಸುತ್ತೇನೆ.
-ನಿಮ್ಮ ಅಭಿಮಾನಿ ಕಲ್ಪನಾ.

ಇದನ್ನೆಲ್ಲ ಓದಿದ ನನಗೆ ನನ್ನ ಬಗ್ಗೆ ಅಸಹ್ಯವೆನಿಸತೊಡಗಿತು. ನಾನು ಪತ್ರ ಬರೆಯುವುದಕ್ಕಿಂತ ಮುಂಚೆಯೇ ಅವಳು ಈ ಪತ್ರ ಬರೆದಿದ್ದಳು. ಅವಳ ಬಗೆಗಿನ ಅದೆಷ್ಟೋ ಪ್ರಶ್ನೆಗಳು ನನ್ನ ಮನದಲ್ಲಿ ಕೊರೆಯತೊಡಗಿತು, ಇಂದಿಗೂ ಕೊರೆಯುತ್ತಲೇ ಇದೆ. ಅವಳಿಗೆ ನನ್ನ ಬಗ್ಗೆ ಎಲ್ಲ ಗೊತ್ತಿತ್ತೇ? ನನ್ನನ್ನು ತಿದ್ದಬೇಕು ಅಂತ ಹೀಗೆ ಮಾಡಿದಳೇ? ತಾನು ಜಾಸ್ತಿ ದಿನ ಬದುಕಿರುವುದಿಲ್ಲ ಅಂತ ಗೊತ್ತಿದ್ದರೂ ನನಗೆ ಯಾಕೆ ಯಾವುದೇ ಸುಳಿವು ಕೊಡಲಿಲ್ಲ? ಬೇರಾವುದೋ ವಿಳಾಸದಿಂದ ಪತ್ರ ಬರೆದಿದ್ದು ಯಾಕೇ? ನನ್ನ ಪತ್ರ ಬಂದಿದೆ ಅಂತ ಗೊತ್ತಿದ್ದರೂ ಅದರಲ್ಲಿ ಏನು ಬರೆದಿದ್ದೇನೆ ಅಂತ ಯಾಕೆ ತಿಳಿದುಕೊಳ್ಳಲಿಲ್ಲ? ಯಾಕೆ ನನ್ನ ಜೀವನದಲ್ಲಿ ಬಿರುಗಾಳಿಯಂತೆ ಬಂದಳು? ಜೀವನದಲ್ಲಿ ಕೇವಲ ಸುಖವಷ್ಟೇ ಅಲ್ಲ, ದುಃಖವೂ ಇರುತ್ತದೆ ಅಂತ ತೋರಿಸಲು ಹೀಗೆ ಮಾಡಿದಳೇ? ಎಲ್ಲವೂ ಪ್ರಶ್ನೆಗಳೇ...

ಈ ಜನ್ಮದಲ್ಲಿ ನಾವು ಭೇಟಿಯಾಗುವುದು ಬೇಡ ಅಂತ ಬರಿದಿದ್ದೆ, ಅದು ಹಾಗೇ ಆಯಿತು. ಇದೇ ಚಿಂತೆಯಿಂದ ಸುಮಾರು ಇಪ್ಪತ್ತೈದು ವರ್ಷ ಕಳೆದಿದ್ದೇನೆ. ಪಡಬಾರದ ಯಾತನೆ ಪಟ್ಟಿದ್ದೇನೆ. ಮದುವೆಯಾಗಬೇಕು ಅಂತ ಅನಿಸಲೂ ಇಲ್ಲ. ಯಾವಾಗ ನಾನು ಹೋಗಿ ಅವಳನ್ನ ಸೇರುತ್ತೇನೆ, ನನ್ನ ಪ್ರಶ್ನೆಗಳಿಗೆ ಯಾವಾಗ ಉತ್ತರ ಪಡೆದುಕೊಳ್ಳುತ್ತೇನೆ ಅಂತ ಕಾದಿದ್ದೇನೆ. ಅಂದಿನಿಂದ ಇಂದಿನವರೆಗೂ ಪೆನ್ನು ಹಿಡೀದಾಗಲೆಲ್ಲ ಅವಳದೇ ಚಿತ್ರ ನನ್ನ ಕಣ್ಮುಂದೆ ಬರುತ್ತದೆ, ಎನೂ ಬರೆಯಲಾಗುತ್ತಿಲ್ಲ. ಆದರೆ ಇಂದು ನನ್ನ ಮನದ ಭಾವನೆಗಳನ್ನೆಲ್ಲ ಗೀಚಿದ್ದೇನೆ. ಆದಷ್ಟು ಬೇಗ ಅವಳನ್ನು ಸೇರುತ್ತೇನೆ ಅನಿಸುತ್ತಿದೆ ಈಗೀಗ, ಆಕಾಶದ ಕಡೆ ಮುಖ ಮಾಡಿದಾಗೆಲ್ಲ ಅಲ್ಲೆಲ್ಲೋ ಮಿನುಗುವ ನಕ್ಷತ್ರ ನನ್ನನ್ನೇ ಕೈಬೀಸಿ ಕರೆಯುವಂತೆ ಕಾಣುತ್ತದೆ. ಬಹುತೇಕ ಅವಳೇ ಇರಬೇಕು.
ಇದೇ ನಾನು ಇಷ್ಟು ವರ್ಷ ಏನನ್ನೂ ಬರೆಯದಿರುವುದಕ್ಕೆ ಕಾರಣ. ಅಂದಿನ ಪಾಪಪ್ರಜ್ನೆ ಇಂದಿನವರೆಗೂ ನನ್ನನ್ನು ಕಾಡುತ್ತಿದೆ.

****************************************************************

ಇಂದಿನ ಪತ್ರಿಕೆಯ ಮೂಲೆಯಲ್ಲಿನ ಸುದ್ದಿ: ಅಂಕಣಕಾರ ವಿನೀತ್ ಕುಮಾರ್ ನಿಧನ
ಅತೀ ಚಿಕ್ಕ ವಯಸ್ಸಿನ ಅಂಕಣಕಾರ ಪ್ರಸಿದ್ಧಿ ಪಡೆದಿದ್ದ ಅಲ್ಲದೇ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಸಾಹಿತಿ ವಿನೀತ್ ಕುಮಾರ್ ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ೫೩ ವಯಸ್ಸಾಗಿತ್ತು. ೧೯೯೦ ರ ಅವಧಿಯಲ್ಲಿ ಪ್ರಕಟವಾದ ಮಾತೆಯ ಮಡಿಲಲ್ಲಿ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು.

ನವೆಂಬರ್ ೩ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.
http://www.panjumagazine.com/?p=9186