ಮಸಣದ ಹೂವು ೨:

೧:  
ಮಸಣದಲಿ 
ಸತ್ತ ದೇಹಗಳಿಗೆ 
ಗೋರಿ, 
ನನ್ನ ಹೃದಯದಲಿ
ಸತ್ತ ನಿನ್ನ ನೆನಪುಗಳಿಗೆ
ಗೋರಿ.

೨: 
ನೀ ಕೊಂದದ್ದು
ಬರೀ ನನ್ನನ್ನಲ್ಲ
ಜನ್ಮ ತಳೆದು
ಬದುಕಬೇಕಿದ್ದ
ಅದೆಷ್ಟೋ
ಕವಿತೆಗಳನ್ನ.

೩: 
ನನ್ನ ಕವಿತೆಗಳಿಗೆ 
ಮರುಹುಟ್ಟು
ಮಸಣದ
ಗೋರಿಗಳಲ್ಲಿ.

೪: 
ಮಸಣದಲ್ಲೂ
ಕವಿತೆ ಹುಟ್ಟಬಹುದು
ಅತೃಪ್ತ ಆತ್ಮಗಳು
ಜೋತೆ ಬೆರೆತಾಗ.

೫: 
ಮಸಣದಲಿ
ಆತ್ಮಗಳ
ಮಿಲನವಾದೊಡೆ
ಮುಕ್ತಿ, ಮುಂದೆ…
ಸ್ವರ್ಗವೋ.?
ನರಕವೋ.?

೬: 
ಬೀದಿಗುಂಟ
ಹೂ ಗಿಡವನ್ನೆಲ್ಲ
ಕೀಳುತ್ತಾ ಹೊರಟಿದ್ದ
ಪೂಜಾರಿಯ
ಕಂಡು ನಕ್ಕಿದ್ದು
ಮಸಣದ ಹೂವು.

ಫೇಸ್ ಬುಕ್ ಮಾಯೆ:

ಏನ್ ಮಾಡ್ಲಿ:

ಮರೆಯಬೇಕು 
ಎಂದುಕೊಂಡಾಗೆಲ್ಲ
ಮತ್ತೆ ಮತ್ತೆ 
ಕಾಡುತ್ತಾಳೆ
ಪ್ರೋಫೈಲ್ ಪಿಕ್
ಚೇಂಜ್ ಮಾಡಿ.

ನ್ಯಾಯ ಎಲ್ಲಿದೆ:

ನ್ಯಾಯಾಲಯದ ಸಭಾಗೃಹ.ಎಲ್ಲ ವಕೀಲರು, ಮಾಧ್ಯಮದವರು, ಪೋಲಿಸರು, ಅಪರಾಧಿಗಳು ಎಲ್ಲರೂ ಹಾಜರಾಗಿದ್ದಾರೆ. ನ್ಯಾಯಾಧೀಶರು ಬರುತ್ತಿದ್ದಂತೆ ಎಲ್ಲರೂ ವಂದನೆಯನ್ನು ಸಲ್ಲಿಸುತ್ತಾರೆ. ಕಲಾಪವನ್ನು ಶುರು ಮಾಡುವಂತೆ ನ್ಯಾಯಾಧೀಶರು ಸೂಚನೆಯನ್ನು ನೀಡುತ್ತಾರೆ. ಆರೋಪಿ ಸ್ಥಾನದಲ್ಲಿ ಇದ್ದವರು ನಗರದ ನಾಮವಂತ, ನಿಷ್ಠಾವಂತ, ಕರ್ತವ್ಯ ದಕ್ಷ ಪೋಲಿಸ್ ಅಧಿಕಾರಿ. ಮೂರು ಜನರನ್ನು ಹತ್ಯೆಗೈದ ಅರೋಪವಿತ್ತು ಅವರ ಮೇಲೆ. ತಮ್ಮ ಅಪರಾಧವನ್ನು ತಾವೇ ಒಪ್ಪಿಕೊಂಡು ನ್ಯಾಯಾಲಯದಲ್ಲಿ ಹಾಜರಾಗಿದ್ದು ಅಲ್ಲದೇ, ತಮ್ಮ ಪರವಾಗಿ ಯಾವ ವಕೀಲರನ್ನೂ ನೇಮಿಸಿಕೊಳ್ಳದೇ ತಾವೇ ವಾದ ಮಾಡುವುದಾಗಿ ಹೇಳಿದ್ದು ಎಲ್ಲರಿಗೂ ಅಚ್ಚರಿಯನ್ನುಂಟು ಮಾಡಿತ್ತು. ಎದುರಿಗೆ ಇದ್ದದ್ದು ನಗರದ ಹೆಸರಾಂತ ವಕೀಲರು. ಈಗ ನಡೆಯುತ್ತಿದ್ದದ್ದು ನ್ಯಾಯಮಂದಿರದ ಇತಿಹಾಸದಲ್ಲೇ ಒಂದು ಮಹತ್ವಪೂರ್ಣ ಖಟಲೆಯಾಗಿತ್ತು. ಎಲ್ಲರ ಕಣ್ಣು ಕಿವಿಗಳು ಎದುರಿಗೆ ನಡೆಯುವ ವಾದ ವಿವಾದಗಳತ್ತ ನೆಟ್ಟಿತ್ತು.

ಕೆಲ ದಿನಗಳ ಹಿಂದಷ್ಟೇ ನಗರದ ನಿರ್ಜನ ಪ್ರದೇಶದಲ್ಲಿ ಯುವತಿಯೊಬ್ಬಳನ್ನು ಬಲಾತ್ಕಾರ ಮಾಡಿ ಕೊಲೆಗೈಯ್ಯಲಾಗಿತ್ತು... ಒಂದೇ ದಿನದಲ್ಲಿ ಚುರುಕಾದ ತನಿಖೆ ನಡೆಸಿ ಎಲ್ಲ ಸಾಕ್ಷಾಧಾರದಿಂದ ಇವರೇ ಕೊಲೆಗೈಯಿದ್ದು ಎಂದು ತಿಳಿದ ಪೋಲಿಸ್ ಅಧಿಕಾರಿ ಮೂರು ಅಪರಾಧಿಗಳನ್ನ ನಡು ಬೀದಿಯಲ್ಲಿ ನೇಣು ಬಿಗಿದು ಹತ್ಯೆ ಮಾಡಿದ್ದರು. ಅವರೇ ಇಂದು ನ್ಯಾಯಾಲಯದಲ್ಲಿ ಅಪರಾಧಿ ಸ್ಥಾನದಲ್ಲಿ ನಿಂತಿರುವ ಅಧಿಕಾರಿ. ಮಾನಭಂಗ ಮಾಡಿ ಕೊಲೆ ಮಾಡಿದವರಲ್ಲಿ ಒಬ್ಬ, ನಗರದ ಪ್ರತಿಷ್ಠಿತ ಮಂತ್ರಿಯ ಪರಮ ಸ್ನೇಹಿತರ ಮಗ. ಅವನು ತನ್ನೆರಡು ಸ್ನೇಹಿತರ ಜೋತೆಗೂಡಿ ತನ್ನದೇ ವಿಶ್ವವಿದ್ಯಾನಿಲಯದಲ್ಲಿ ಓದುತ್ತಿದ್ದ ಯುವತಿಯೊಬ್ಬಳನ್ನ ಅಪಹರಿಸಿ ಹೇಯವಾಗಿ ಭೋಗಿಸಿ ಕೊಲೆಗೈಯ್ದಿದ್ದ. ಮಂತ್ರಿಗಳ ಗುರುತಿನ ವ್ಯಕ್ತಿಯೆಂದಮೇಲೆ ಆದಷ್ಟು ಬೇಗ ಪೋಲೀಸ್ ಅಧಿಕಾರಿಗೆ ಶಿಕ್ಷೆಯಾಗಬೇಕೆಂದು ವಕೀಲರಿಗೆ ಆದೇಶವಿತ್ತು. ಅದೇ ಗತ್ತಿನಲ್ಲಿ ಅವರು ವಾದ ಮಾಡಲು ಪ್ರಾರಂಭಿಸಿದ್ದರು.

"ನ್ಯಾಯಮೂರ್ತಿಗಳಲ್ಲಿ ಮನವಿ... ಕಟಕಟೆಯಲ್ಲಿ ಆರೋಪಿ ಸ್ಥಾನದಲ್ಲಿ ನಿಂತಿರುವ ಪೋಲೀಸ್ ಅಧಿಕಾರಿ ತನ್ನ ಅಧಿಕಾರದ ಗತ್ತಿನಲ್ಲಿ ಅಮಾಯಕರಾದ ನನ್ನ ಮೂವರು ಕಕ್ಷೀದಾರರನ್ನ ಕೊಲೆಗೈಯ್ದಿದ್ದಾನೆ. ಅಧಿಕಾರದ ಮದದಿಂದ ಮನ ಬಂದಂತೆ ಕರ್ತವ್ಯ ನಿರ್ವಹಿಸುವ ಈತ ಅನೇಕ ಬಾರಿ ವರ್ಗಾವಣೆ ಮತ್ತು ಕೆಲಸ ಕಳೆದುಕೊಂಡಿದ್ದಾನೆ ಸಹ. ಸುಳ್ಳು ಸಾಕ್ಷಾಧಾರಗಳನ್ನು ನಿರ್ಮಿಸಿ ನನ್ನ ಕಕ್ಷೀದಾರರನ್ನು ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ, ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸದೇ ತಾನೇ ಅಮಾನುಷವಾಗಿ ನಡುಬೀದಿಯಲ್ಲಿ ನೇಣು ಬಿಗಿದು ಸಾಯಿಸಿದ್ದಾನೆ. ನಿಜವಾಗಿಯೂ ಆ ಮೂವರೇ ಕೊಲೆ ಮಾಡಿದ್ದಾರೆಯೇ, ಅಥವಾ ಒಬ್ಬನೇ ಕೊಲೆ ಮಾಡಿದ್ದಾನೆಯೇ ಇದ್ಯಾವುದನ್ನೂ ತಿಳಿಯದೇ ಅವರಿಗೆ ತಾನೇ ಶಿಕ್ಷೆ ವಿಧಿಸಿದ್ದಾನೆ. ಒಂದು ವೇಳೆ ಅವರೇ ಅಪರಾಧ ಮಾಡಿದ್ದಲ್ಲಿ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಬಹುದಿತ್ತಲ್ಲವೇ, ಅದನ್ನು ಬಿಟ್ಟು ನನ್ನೊಬ್ಬ ಕಕ್ಷೀದಾರನ ಯಾವುದೋ ಹಳೇ ದ್ವೇಷದಿಂದ ಅವರನ್ನು ನಿರ್ಮಾನುಷವಾಗಿ ಕೊಂದಿದ್ದಾನೆ. ಹೀಗೆ ನಡುಬೀದಿಯಲ್ಲಿ ಅಪರಾಧಿಗಳನ್ನು ನೇಣಿಗೇರಿಸಿದ್ದು ನೋಡಿದರೇ ಈತ ತನ್ನ ಮಾನಸಿಕ ಸಂತುಲನವನ್ನು ಕಳೆದುಕೊಂಡಿದ್ದಾನೆ. ಈ ತರಹದ ಅಧಿಕಾರಿಗಳನ್ನ ಹೀಗೆ ಬಿಟ್ಟರೇ ಅಧಿಕಾರವನ್ನು ದುರುಪಯೋಗಪಡಿಸಿಕೊಳ್ಳುತ್ತ ಸಿಕ್ಕ ಸಿಕ್ಕವರನ್ನೆಲ್ಲ ಕೊಲೆಗೈಯ್ಯುತ್ತಾನೆ ಅನ್ನುವುದರಲ್ಲಿ ಸಂದೇಹವಿಲ್ಲ. ಹಾಗಾಗಿ ನ್ಯಾಯಮೂರ್ತಿಗಳಲ್ಲಿ ನನ್ನ ಮನವಿ ಇಷ್ಟೇ... ಮೂವರನ್ನು ಹತ್ಯೆಗೈದ ಆರೋಪದ ಮೇಲೆ ಈ ಕರ್ತವ್ಯ ಭ್ರಷ್ಟ ಅಧಿಕಾರಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಕೇಳಿಕೊಳ್ಳುತ್ತೇನೆ."

ಪೋಲೀಸ್ ಅಧಿಕಾರಿ ತನ್ನ ಹೇಳಿಕೆಯಲ್ಲಿ ಹೇಳಿದ್ದಿಷ್ಟೆ "ನಾನು ಆ ಅಮೂವರನ್ನೂ ಕೊಂದಿದ್ದು  ನಿಜ, ಇದು ನನ್ನ ಅಧಿಕಾರದ ದುರುಪಯೋಗ ಅನ್ನುವುದೂ ನಿಜ. ನಾನು ಆ ಮೂವರನ್ನೂ ನೇಣಿಗೇರಿಸುವಾಗ ನನಗೆ ಹೀಗೆ ಅನಿಸಿದ್ದುಂಟು, ಆದರೆ ಆ ಮುಗ್ಧ ಬಾಲಿಕೆಯನ್ನ ಅಮಾನುಷವಾಗಿ ಭೋಗಿಸಿ ಹತ್ಯೆಗೈದ ಚಿತ್ರಣ ನನ್ನ ಕಣ್ಮುಂದಿತ್ತು. ಅಷ್ಟು ಹೇಯವಾಗಿ ಈ ಕೃತ್ಯವನ್ನು ಮಾಡಿದವರಿಗೆ ನಾನು ನೀಡಿದ ಶಿಕ್ಷೆ ಸರಿಯಾಗೇ ಇದೆ. ಆ ಬಾಲಕಿಯನ್ನು ಕೊಂಡು ಬೀಸಾಡಿದ್ದನ್ನ ನೋಡಿದವರಲ್ಲಿ ಈ ರೀತಿಯ ಜ್ವಾಲೆ ಕುದಿಯಲಿಲ್ಲ ಅಂದರೆ ಆತ ಗಂಡಸೇ ಅಲ್ಲ. ಅವರೆಲ್ಲ ಈ ಕೃತ್ಯವನ್ನು ಮಾಡಿದ್ದಾರೆ ಅನ್ನುವುದಕ್ಕೆ ಎಲ್ಲ ಸಾಕ್ಷಾಧಾರವೂ ಇದೆ ಅದನ್ನೆಲ್ಲ ನ್ಯಾಯಾಲಯಕ್ಕೆ ಒಪ್ಪಿಸಿದ್ದೇನೆ ಪರೀಕ್ಷಿಸಬೇಕು. ಇನ್ನು ವಕೀಲರು ಹೇಳಿದಂತೆ ಅವರು ಕೊಲೆ ಮಾಡಿಲ್ಲದಿರಬಹುದು ಅಥವಾ ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಬೇಕು ಅನ್ನುವುದಕ್ಕೆ ನಾನು ಹೇಳುವುದಿಷ್ಟೆ, ಅವರನ್ನು ನ್ಯಾಯಾಲಯಕ್ಕೆ ಒಪ್ಪಿಸಿ ಏನು ಮಾಡಬೇಕಿತ್ತು? ನಮ್ಮ ನ್ಯಾಯಾಲಯದ ಅವಸ್ಥೆ ನಮಗೆ ತಿಳಿದಿಲ್ಲವೇ? ಅವರಿಗೆ ಶಿಕ್ಷೆ ಆಗುತ್ತಿತ್ತೇ? ಆದರೂ ಎಷ್ಟು ವರ್ಶದ ನಂತರ? ಅಲ್ಲಿಯವರೆಗೂ ಅವರು ಜೈಲಿನಲ್ಲಿಯೇ ಇರುತ್ತಿದ್ದರೇ? ಅಥವಾ ಹೊರಗಡೆ ಹೋಗಿ ಮತ್ತಿಷ್ಟು ಅತ್ಯಾಚಾರಗಳನ್ನು ಮಾಡುತ್ತಿರಲಿಲ್ಲವೇ? ನಿಮಗೆ ಮಂತ್ರಿಗಳು ಜವಾಬ್ದಾರಿ ವಹಿಸಿದ್ದಾರೆ ಎಂದರೆ ಅಪರಾಧಿಗಳಿಗೆ ಶಿಕ್ಷೆ ಆಗದಂತೆ ಸುಳ್ಳು ಸಾಕ್ಷಿ ಸೃಷ್ಟಿಸಿ ಅವರನ್ನ ನಿರಪರಾಧಿ ಅಂತ ನೀವು ಸಾಬೀತುಪಡೀಸುತ್ತಿರಲಿಲ್ಲವೇ? ಅಪ್ಪಿ ತಪ್ಪಿ ಎಷ್ಟೊ ವರ್ಷಗಳ ನಂತರ ಶಿಕ್ಷೆಯಾದರೂ ಅಲ್ಲಿಯವರೆಗೆ ಆತ ಇನ್ನೆಷ್ಟು ಇಂಥಹ ಕೃತ್ಯವೆಸಗಬಹುದು.? ನಾನು ಅನೇಕ ಬಾರಿ ಕೆಲಸ ಕಳೆದುಕೊಂಡಿದ್ದು, ವರ್ಗಾವಣೆಯಾಗಿದ್ದು ನಿಜ, ಅದು ಕೇವಲ ನನ್ನ ಕರ್ತವ್ಯ ನಿಷ್ಠೆಯಿಂದಲೇ ಹೊರತು ಲೋಪದಿಂದಲ್ಲ. ಇಂದು ಒಬ್ಬ ಅಧಿಕಾರಿ ಪ್ರಾಮಾಣಿಕವಾಗಿ ಕರ್ತವ್ಯ ನಡೆಸಲು ಬಿಡುತ್ತಾರೆಯೇ?? ಒಬ್ಬ ಅಪರಾಧಿಯನ್ನು ಬಂಧಿಸುವ ಮೊದಲೇ ಆತನನ್ನು ಬಂಧಿಸದಂತೆ ಆದೇಶ ಬರುತ್ತದೆ. ಇನ್ನು ಬಂದಿಸಿ ಆತ ಅಪರಾಧಿ ಅಂತ ಸಾಬೀತುಪಡಿಸಲು ಪುರಾವೆಗಳನ್ನೆಲ್ಲ ಒದಗಿಸಿದರೂ, ನಿಮ್ಮಂಥ ವಕೀಲರು ಅದನ್ನೆಲ್ಲ ಸುಳ್ಳು ಸಾಬೀತುಪಡಿಸುತ್ತೆರಲ್ಲ. ಅಧಿಕಾರದಲ್ಲಿದ್ದವರಿಗೆ ಇದೆನು ಹೊಸದಲ್ಲ ಮತ್ತು ಕಷ್ಟವೂ ಅಲ್ಲ. ಇದು ನಮ್ಮಲ್ಲಿನ ನ್ಯಾಯ ವ್ಯವಸ್ಥೆ. ಹೀಗಿರುವಾಗ ಅಪರಾಧಿಗಳನ್ನ ನ್ಯಾಯಾಲಯಕ್ಕೆ ಒಪ್ಪಿಸಿ ನ್ಯಾಯಕ್ಕಾಗಿ ವರ್ಷಗಟ್ಟಲೇ ಹೆಣೆದಾಡಿ ಕೊನೆಗೆ ನ್ಯಾಯ ದೊರಕದೆ ಇದ್ದರೇ ಅಥವಾ ನ್ಯಾಯ ಸಿಗುವುದರೊಳಗೆ ಪೀಡಿತ ಕುಟುಂಬದವರು ಜೀವಂತವಾಗಿರುತ್ತಾರೆ ಅನ್ನುವ ಭರವಸೆಯೂ ಇಲ್ಲ. ಇಂಥಹ ಪರಿಸ್ಥಿತಿ ಇರುವಾಗ ನಾನು ಮಾಡಿರುವು ಸರಿಯಾಗೇ ಇದೆ, ನ್ಯಾಯ ಎಲ್ಲಿದೆ ಸ್ವಾಮಿ ಇಂದಿನ ಕಾಲದಲ್ಲಿ??? ಯಾರು ನ್ಯಾಯ ಒದಗಿಸುತ್ತಾರೋ ಇಲ್ಲವೋ ಗೊತ್ತಿಲ್ಲ ಆದರೆ ನಾನು ಆ ಹೆಣ್ಣಿಗೆ ಅವರ ಕುಟುಂಬದವರಿಗೆ ನ್ಯಾಯ ಒದಗಿಸಿದ್ದೇನೆ ಅನ್ನುವ ಸಮಾಧಾನ ನನಗಿದೆ.ನನ್ನಂತೆ ಎಲ್ಲರೂ ಕರ್ತವ್ಯ ನಿಷ್ಠರಾಗಿ ಕೆಲಸ ಮಾಡಿದರೆ ಅಪರಾಧಿಗಳಿಗೆ ಅಲ್ಲಲ್ಲೇ ಶಿಕ್ಷೆ ವಿಧಿಸಿದರೆ ಏನೂ ತಪ್ಪಿಲ್ಲ ಅನ್ನುವುದು ನನ್ನ ಅಭಿಪ್ರಾಯ. ಇನ್ನು ಅತ್ಯಾಚಾರಕ್ಕೊಳಗಾದವರ ಪರಿಸ್ಥಿತಿ ಏನೆನ್ನುವುದು ನಿಮಗೆ ತಿಳಿದಿದೆಯೇ?? ಮಾಧ್ಯಮದವರೋ ಅವರೇ ತಪ್ಪೆಸಗಿದ್ದಾರೆ ಅನ್ನುವಂತೆ ಮಾಧ್ಯಮದಲ್ಲಿ ಚಿತ್ರಿಸಿ ಅವರ ಮನೋ ಧೈರ್ಯವನ್ನು ಇನ್ನಷ್ಟು ಕುಗ್ಗಿಸುತ್ತಿದ್ದಾರೆ  ಅಂತ ಅನ್ನಿಸುವುದಿಲ್ಲವೇ? ಅವರಿಗೆ ಮನೋಧೈರ್ಯವನ್ನು ತುಂಬುವುದನ್ನು ಬಿಟ್ಟು ಇನ್ನಷ್ಟು ಕುಗ್ಗುವಂತೆ ಮಾಡುವುದು ಎಷ್ಟರ ಮಟ್ಟಿಗೆ ಸರಿ? ನಿಜ ಹೇಳಬೇಕೆಂದರೆ ಅವರು ಪೀಡಿತರಲ್ಲ. ಈಗಿನ ಕಾಲದಲ್ಲಿ ದಿನಕ್ಕೊಬ್ಬರಂತೆ ಪ್ರಿಯಕರನನ್ನು ಬದಲಿಸುತ್ತ, ಅದೆಷ್ಟು ಜನರ ಜೋತೆ ದೇಹ ಹಂಚಿಕೂಳ್ಳುತ್ತಿರುವ ಅದೆಷ್ಟು ಹುಡುಗಿಯರಿಲ್ಲ, ಅವರಿಗಿಂತ ಇವರೇನು ಕೀಳಲ್ಲ. ನಾನು ಸಮಾಜಕ್ಕೆ ಹೇಳುವುದಿಷ್ಟೆ ಅತ್ಯಾಚಾರವೆಸಗಿದರೆಂದು ಯಾರೂ ಸಹನೆ ಕಳೆದುಕೊಳ್ಳಬೇಡಿ, ನಿಮಗೆ ನಿಮ್ಮ ಜೀವನದ ಅಧಿಕಾರವಿದೆ, ಅದನ್ನು ನೀವು ಸುಖದಿಂದ ಜೀವಿಸಿ. ಇವತ್ತು ನಡೆದಿದ್ದು ನಾಳೆ ಮರೆತುಬಿಡುತ್ತಾರೆ ಜನ. ಹೀಗಿರುವಾಗ ನಮ್ಮ ಮೇಲೆ ದೌರ್ಜನ್ಯ ನಡೆದಿದೆ ಎಂದು ಕೊರಗುತ್ತ ಜೀವಿಸುವುದೋ ಅಥವಾ ಆತ್ಮಹತ್ಯೆಗೆ ಪ್ರಯತ್ನಿಸುವುದು ಹೇಡಿಗಳ ಲಕ್ಷಣ. ನೀವು ಹೇಡಿಗಳಲ್ಲ, ಅತ್ಯಾಚಾರವೆಸಗಿದವರು ಹೇಡಿಗಳು ಅವರು ಆತ್ಮಹತ್ಯೆ ಮಾಡಿಕೊಳ್ಳಬೇಕು ನಿಜವಾಗಿ. ಕೈಲಾಗದ ನಾಮರ್ದರಂತೆ ಇಂಥಹ ಕೃತ್ಯವೆಸಗುವವರು ನಿಜವಾದ ಹೇಡಿಗಳು. ಇಲ್ಲಿ ಮಾನಭಂಗವಾಗುವುದು ಬಾಲಕಿಯರದ್ದಲ್ಲ, ತೃಷೆ ತೀರಿಸಿಕೊಳ್ಳಲು ಈ ಥರಹದ ಕೃತ್ಯವೆಸಗುವರದ್ದು. ಹೀಗಂತ ಸುಮ್ಮನೇ ಕುಳಿತುಕೊಳ್ಳಬೇಡಿ, ಹೋರಾಡಿ. ಇಂದಲ್ಲ ನಾಳೆ ನಿಮಗೆ ನ್ಯಾಯ ಸಿಗಬಹುದು. ಇಲ್ಲಿ ಸಿಗದಿದ್ದರೂ ಆ ಭಗವಂತನ ನ್ಯಾಯಮಂದಿರದಲ್ಲಿ ಖಂಡಿತ ನ್ಯಾಯ ಸಿಗುತ್ತದೆ. ಸಮಾಜ ಕೂಡ ಅವರನ್ನು ತಿರಸ್ಕರಿಸದೇ ಜೋತೆ ನೀಡಬೇಕು, ಆಗ ಅವರಿಗೂ ಮಾನಸಿಕ ಸಮಾಧಾನವಿರುತ್ತದೆ.

ಅದೇ ಆ ಹೆಣ್ಣಿನ ಸ್ಥಾನದಲ್ಲಿ ಇದೇ ವಕೀಲರ ಮಗಳೋ, ತಂಗಿಯೋ ಅಥವಾ ಅವರ ಸಂಬಂಧದವರು ಯಾರಾದರೂ ಇದ್ದರೇ ಇವರು ಹೀಗೆ ವಾದಿಸುತ್ತಾ ಇದ್ದರಾ?? ಹೀಗೆ ಅಪರಾಧಿಗಳಿಗೆ ಕಠಿಣವಾದ ಶಿಕ್ಷೆ ವಿಧಿಸದೇ ನ್ಯಾಯಾಲಯದಲ್ಲಿ ವರುಷಗಳ ತನಕ ಏಳೆಯುತ್ತ ನಡೆದರೆ ಅಪರಾಧಿಗಳು ಹೊರಗಡೆ ಆರಾಮವಾಗಿ  ಇರುತ್ತಾರೆ. ಇಂಥಹ ಕೃತ್ಯವೆಸಗುವವರಿಗೆ ನ್ಯಾಯಾಲಯದ ಯಾವುದೇ ಹೆದರಿಕೆಯೂ ಇರುವುದಿಲ್ಲ. ಅಪರಾಧಿಗಳು ಮತ್ತೆಂದೂ ಇಂಥಹ ಕೃತ್ಯವೆಸಗಿರಬಾರದು ಅಂಥಹ ಶಿಕ್ಷೆ ಅವರಿಗೆ ವಿಧಿಸಬೇಕು, ಅದೇ ಕೆಲಸವನ್ನು ನಾನು ಮಾಡಿದ್ದೇನೆ. ನಾನು ಮಾಡುತ್ತಿರುವುದು, ಮಾತನಾಡುತ್ತಿರುವುದು ಹುಚ್ಚನಂತೆ ಎಂದು ನಿಮಗನಿಸಿದರೆ ನಾನೋಬ್ಬ ಮನೋವೈಕಲ್ಯನೇ.  ಪೀಡಿತರಿಗೆ ನ್ಯಾಯ ಒದಗಿಸುವುದು, ಅಪರಾಧಿಗಳಿಗೆ ಶಿಕ್ಷೆ ನೀಡುವುದು ತಪ್ಪು ಅಂದಾದರೆ ನಾನು ಮಾಡಿರುವುದು ತಪ್ಪೇ. ಜನರಿಗೆ ಪೋಲೀಸ್ ಅಧಿಕಾರಿಗಳ ಮೇಲೆ, ನ್ಯಾಯ ವ್ಯವಸ್ಥೆಯ ಮೇಲೆ ವಿಶ್ವಾಸವಿದೆ ಗೌರವವಿದೆ, ಅದನ್ನು ಕಾಪಾಡಿಕೊಳ್ಳುವುದು ತಪ್ಪು ಎಂದಾದರೆ ಹೌದು ನಾನು ತಪ್ಪು ಮಾಡಿದ್ದೇನೆ. ದುಡ್ಡಿನಾಸೆಯಿಂದ ಅನ್ಯಾಯದ ಪರವಾಗಿ ವಾದ ಮಾಡುವ ವಕೀಲರೇ ಸರಿ, ಅನ್ಯಾಯದ ವಿರುದ್ಧ ಹೋರಾಡುವುದು ತಪ್ಪು, ಕರ್ತವ್ಯ ನಿಷ್ಠೆ ತಪ್ಪು ಎಂದಾದರೆ ನಾನು ತಪ್ಪು ಮಾಡಿದ್ದೇನೆ. ಆ ತಪ್ಪಿಗೆ ನಾನು ಶಿಕ್ಷೆ ಅನುಭವಿಸಲು ತಯಾರಿದ್ದೇನೆ. ನ್ಯಾಯಮೂರ್ತಿಗಳೇ ನೀವು ನೀಡುವ ತೀರ್ಪು ಮಹತ್ವಪೂರ್ಣವಾಗಿದೆ.. ನೀವು ನೀಡುವ ತೀರ್ಪು ಕೇವಲ ನನಗಷ್ಟೇ ಅಲ್ಲ, ಅನ್ಯಾಯದ ವಿರುದ್ಧ ಹೋರಾಡುವ ಅನೇಕರ ಮೇಲೆ ಅವಲಂಬಿಸಿದೆ. ನಾನೋ ನೇಣಿಗೇರಲು ಸಿದ್ಧನಾಗಿದ್ದೇನೆ. ನೀವು ನೀಡುವ ತೀರ್ಪು ಅನೇಕರಿಗೆ ಅನ್ಯಾಯದ ವಿರುದ್ಧ ಕಿಡಿಕಾರಲು ಮೊದಲಾಗಬೇಕು ಅನ್ನುವುದಷ್ಟೆ ನನ್ನ ಮನವಿ. ನೀವು ಏನೇ ತೀರ್ಪು ನೀಡಿದರೂ ನಾನದನ್ನು ಆನಂದದಿಂದಲೇ ಸ್ವೀಕರಿಸುತ್ತೇನೆ. ಶಂಢರಂತೆ ಸಮಾಜದಲ್ಲಿ ನಡೆಯುವ ತಪ್ಪುಗಳಿಗೆ ತಲೆಯಾಡಿಸದೇ, ಕರ್ತವ್ಯ ನಿಷ್ಠನಾಗಿ ಪ್ರಾಣ ಕಳೆದುಕೊಂಡರೆ ಅದಕ್ಕಿಂಥ ಹೆಮ್ಮೆಯ ವಿಷಯ ಬೇರೊಂದಿಲ್ಲ ನನಗೆ."

ಇಂಥಹ ಸನ್ನಿವೇಶಗಳು ಸಮಾಜದಲ್ಲಿ ನಡೆದರೆ, ನೀವು ಯಾವ ತೀರ್ಪನ್ನು ಅಪೇಕ್ಷಿಸುತ್ತಿದ್ದೀರಿ ಅಥವಾ ನೀವು ನ್ಯಾಯಮೂರ್ತಿ ಸ್ಥಾನದಲ್ಲಿ ಕುಳಿತಿದ್ದರೆ ಯಾವ ರೀತಿ ನ್ಯಾಯ ಒದಗಿಸುತ್ತಿದ್ದೀರಿ ಅನ್ನುವುದನ್ನ ಯೋಚಿಸಿ ಓದುಗರೆ...