ಮೊದಲ ರಾತ್ರಿ:

ಇಂದಿಗೆ ನಮ್ಮ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ. ಸರಿಯಾಗಿ ಹತ್ತುವರ್ಷಗಳ ಹಿಂದೆ ಇದೆ ದಿನ ನಾವಿಬ್ಬರೂ ಬಾಳ ಸಂಗಾತಿಯಾಗಿದ್ದೆವು. ನಾನು ನನ್ನ ಹೆಂಡತಿ ಸಿಂಧು ಮತ್ತು ನನ್ನ ಎಂಟು ವರ್ಷದ ಧೃತಿಯ ಪುಟ್ಟ ಸಂಸಾರ. ಮದುವೆಯಾಗಿ ಹತ್ತು ವರ್ಷಗಳು ಹೇಗೆ ಉರುಳಿದವೋ ನಾನಂತೂ ತಿಳಿಯೆ. ಈ ಹತ್ತು ವರ್ಷದಲ್ಲಿ ನಮ್ಮಿಬ್ಬರ ನಡುವೆ ಬಂದ ಚಿಕ್ಕಪುಟ್ಟ ಮುನಿಸು, ಕೋಪ, ನೋವು, ನಲಿವು ಹೀಗೆ ಎಲ್ಲದರ ನಡುವೆಯೂ ನಮ್ಮ ಸಂಸಾರ ಈಗಲೂ ನೋಡಿದವರೆಲ್ಲ ಹೊಟ್ಟೆಕಿಚ್ಚುಪಡುವಂತಿದೆ. ಹತ್ತು ವರ್ಷದ ಈ ಸುಖೀ ಸಂಸಾರದಲ್ಲಿ ಅದೆಷ್ಟು ನೋವು ನಲಿವುಗಳು ಬಂದು ಹೋದರೂ ನಮ್ಮ ಮದುವೆಯ ಮೊದಲ ರಾತ್ರಿಯ ನೆನಪುಗಳು ಮಾತ್ರ ಹೃದಯದ ಗೂಡಿನಲ್ಲಿ ಬೆಚ್ಚಗೆ ಇನ್ನೂ ಹಾಗೆ ಉಳಿದಿವೆ, ಅದಕ್ಕೆ ವಿಶೇಷ ಕಾರಣವೂ ಇರುವುದು ಅಷ್ಟೇ ನಿಜ.

ನಮ್ಮಿಬ್ಬರದೂ  ಮಧ್ಯಮ ವರ್ಗದ ಕುಟುಂಬ ಜೊತೆಗೆ ಧರ್ಮ ಮತ್ತು ಧಾರ್ಮಿಕ ಮನೋಭಾವನೆಯುಳ್ಳ ಕುಟುಂಬವಾಗಿತ್ತು. ಹಾಗಾಗಿ ಗುರುಹಿರಿಯರ ಅನುಮತಿಯಿಂದಲೇ ನಮ್ಮ ಮದುವೆ ನಿಶ್ಚಯವಾಗಿತ್ತು. ಅಷ್ಟೇನೂ ಹುಷಾರಿಲ್ಲದಿದ್ದರೂ ಬಿ ಕಾಂ ಮುಗಿಸಿ ಪುಟ್ಟ ಕೆಲಸ ಮಾಡುತ್ತಿದ್ದ ನನ್ನನ್ನು ಎಂ ಟೆಕ್ ಮಾಡಿದ ಹುಡುಗಿ ಮದುವೆಯಾಗಲು ಒಪ್ಪಿದ್ದು ನನಗೆ ಸ್ವಲ್ಪ ಅಚ್ಚರಿಯನ್ನು ಉಂಟುಮಾಡಿತ್ತು. ತಂದೆತಾಯಿಯಿಲ್ಲದ ಅವಳು ಬೆಳೆದಿದ್ದೆಲ್ಲ ದೊಡ್ಡಪ್ಪನ ಮನೆಯಲ್ಲಿಯೇ.ನಿಶ್ಚಯವಾಗಿ ಒಂದೇ ತಿಂಗಳಲ್ಲಿ ಮದುವೆ ಇದ್ದರಿಂದ ಮನೆಯಲ್ಲೆಲ್ಲ ಓಡಾಟ ಜೋರಾಗಿತ್ತು.ಆಗಿನ ಕಾಲದಲ್ಲಿ ಮೊಬೈಲ್ ಇಲ್ಲವಾದ್ದರಿಂದ ಮಧ್ಯದಲ್ಲಿ ಸೀರೆ ಆರಿಸಲೆಂದು ಅವಳು ಬಂದಾಗ ಭೇಟಿಯಾಗಿದ್ದು ಬಿಟ್ಟರೆ ನಮಗೆ ಮಧ್ಯದಲ್ಲಿ ಮಾತನಾಡಲು ಅವಕಾಶವಿರಲಿಲ್ಲ.ಹಾಗಾಗಿ ಒಬ್ಬರಿಗೊಬ್ಬರು ಅರಿಯಲು ಅವಕಾಶವೇ ಇಲ್ಲವಾಗಿತ್ತು. ಅಂತೂ ಇಂತೂ ತಿಂಗಳು ಕಳೆದು ಮದುವೆಯ ದಿನ ಬಂದೇಬಿಟ್ಟಿತು. ಇಷ್ಟರೊಳಗೆ ಗೆಳೆಯರೆಲ್ಲ ಬಂದು ಸಿಕ್ಕಾಪಟ್ಟೆ ಗೋಳುಹೊಯ್ದುಕೊಂಡಿದ್ದೂ ಆಯಿತು. ಎಲ್ಲ ವಿಧಿವಿದಾನಗಳೆಲ್ಲ ಹಿರಿಯರ ಉಪಸ್ಥಿತಿಯಲ್ಲಿ ವೇದಮಂತ್ರಗಳ ಘೋಷದಲ್ಲಿ ನಡೆದವು. ಕನ್ಯಾದಾನ, ಕಂಕಣ ಬಂಧನ, ಮಾಂಗಲ್ಯ ಬಂಧನ, ಲಾಜ ಹೋಮ, ಪಾಣಿಗ್ರಹಣ, ಸಪ್ತಪದಿ ಹೀಗೆ ಎಲ್ಲ ವಿಧಿಗಳೆಲ್ಲ ಸರಾಗವಾಗಿ ನಡೆದವು.ಊಟದಲ್ಲಿ ಒಬ್ಬರಿಗೊಬ್ಬರು ನೀಡಿದ ಕೈತುತ್ತು ಇನ್ನೂ ನೆನಪಿದೆ. ಸಂಜೆ ದೇವಸ್ಥಾನಕ್ಕೆ ಜೊತೆಯಾಗಿ ಹೋಗಿ ಕೈಮುಗಿದು ಮನೆಗೆ ಬರುವವರೆಗೂ ಇಬ್ಬರೂ ಮೌನವಾಗಿಯೇ ಇದ್ದೆವು. ಮನೆಗೆ ಬರುವುದರೊಳಗೆ ಮನೆಯಲ್ಲಿ ಎಲ್ಲ ಗೆಳೆಯರ ಗಲಾಟೆ ಜೋರಾಗಿತ್ತು, ಏನೆಂದು ನೋಡಿದರೆ ನನ್ನ ಕೆಲ ಗೆಳೆಯರು ಅವಳ ಕೆಲ ಗೆಳತಿಯರು ಹೀಗೆ ಎಲ್ಲ ಸೇರಿ ಮೊದಲ ರಾತ್ರಿಯ ತಯಾರಿ ನಡೆಸುತ್ತಿದ್ದರು.

ರಾತ್ರಿಯ ಊಟದವರೆಗೂ ನಮ್ಮಿಬ್ಬರನ್ನ ಎಷ್ಟು ಪೀಡಿಸಿದಿರೆಂದರೆ ಅದು ಹೇಳತೀರದು. ಹುಡುಗರ ಆಟಕ್ಕೆ ಕೆಲಹಿರಿಯರ ಸಪೋರ್ಟ್ ಬೇರೆ,ಇಷ್ಟಿದ್ದರೆ ಕೇಳಬೇಕೆ? ಊಟಮುಗಿದು ಸ್ನೇಹಿತರೆಲ್ಲ ಒಂದಿಷ್ಟು ಕಿವಿಮಾತುಗಳನ್ನ ಹೇಳಿ ಹುಷಾರಪ್ಪ ಅಂತ ಕೋಣೆಗೆ ದಬ್ಬಿದಾಗ ಹತ್ತಾಗಿತ್ತು, ಸಿಂಗರಿಸಿದ ಮಂಚ, ಪುಟ್ಟದೊಂದು ದೀಪ,ಎಲ್ಲ ಬದಿಯಿಂದ ಹೂವಿನ ಹಾರಗಳು.. ಮಲ್ಲಿಗೆ ಹೂಗಳ ಸುಗಂಧದ ಜೊತೆಗೆ ನನ್ನ ಎದೆಯ ಬಡಿತವೂ ಹೆಚ್ಚಾಗಿತ್ತು. ಗೆಳೆಯರ ಕಿವಿಮಾತುಗಳೆಲ್ಲ ಹಣೆಯ ಬೆವರಿನ ಜೊತೆ ಇಳಿದುಹೋಗಿತ್ತು. ಕೈಯಲ್ಲಿ ಹಾಲಿನ ಲೋಟ ಹಿಡಿದು ಎಲ್ಲರಿಂದ ಬೀಳ್ಕೊಟ್ಟು ತಲೆ ಕೆಳಗೆ ಹಾಕಿ ಒಳಗೆ ಬಂದ ಅವಳನ್ನ ನೋಡಿ ಯಾವುದೋ ಸಿನಿಮಾದ ಸೀನ್ ನೆನಪಿಗೆ ಬಂದಿತ್ತು... ಹಾಲಿನ ಲೋಟವನ್ನ ಕೈಗಿತ್ತು ಬದಿಗೆ ಕುಳಿತಾಗ ಈ ಸಿನೆಮಾಕ್ಕೆ ನಾನೇ ಹೀರೋ ಎಂಬುದು ಕೂಡ ಅರಿವಿಗೆ ಬಂದಿತ್ತು. ಮುಂದೇನು ಅನ್ನುವುದು ಇಬ್ಬರಿಗೂ ತಿಳಿಯದೆ ಹತ್ತು ನಿಮಿಷಗಳು ಮೌನದಲ್ಲೇ ಕಳೆಯಿತು. ಕೊನೆಗೆ ನಾನೇ ಗಂಟಲು ಸರಿಮಾಡಿಕೊಂಡು ಮಾತು ಶುರುಮಾಡಿದೆ, ಇದು ನಂಗೆ ಫಸ್ಟ್ ಟೈಮ್ ನೋಡು ಸ್ವಲ್ಪ ಹೆದರಿಕೆ ಅಂತ ತೊದಲುತ್ತಲೇ ನುಡಿದೆ. ಒಮ್ಮೆಲೇ ನನ್ನತ್ತ ತಿರುಗಿದಳವಳು, ನಾನು ಸಾವರಿಸಿಕೊಂಡು ನನ್ನ ಮಾತಿನ ಅರ್ಥ ಹಾಗಲ್ಲ ಎಂದೇ.. ಮತ್ತೆ ತಲೆ ಕೆಳಗೆ ಹಾಕಿದಳು. ಮತ್ತೈದು ನಿಮಿಷ ಮೌನ. ನಾನೇ ಮತ್ತೆ  ಮಾತಿಗೆಳೆದೆ ನೀನು ಎಂ ಟೆಕ್ ಓದಿದವಳು ಕಾಲೇಜ್ ಎಲ್ಲ ತಿರುಗಿದವಳು ಇಷ್ಟು ಸೈಲೆಂಟ್ ಹೇಗೆ ಅಂದೆ..  ನಿರುತ್ತರ. ನಾನೇ ಮತ್ತೆ ಯಾಕೆ ಸುಮ್ಮನಿದ್ದೀಯ? ಏನೂ ಮಾತಾಡಲ್ವ, ಏನೋ ಹೇಳಬೇಕೆಂದು ಹೊರಟವಳು ಮತ್ತೆ ಸುಮ್ಮನಾದಳು.ಇರಲಿ ಪರವಾಗಿಲ್ಲ ಹೇಳು ಅಂದೆ. ಹಾಗೇನಿಲ್ಲ ಕಾಲೇಜ್ ಅದೂ ಇದು ಅಂತ ತಿರುಗಿದರೂ ನಾನು ಸ್ವಲ್ಪ ಸೈಲೆಂಟೆ, ಮನೇಲಿ ಹೇಗೆಬೇಕೋ ಹಾಗೆ ಇರೋಕೆ ಬಿಟ್ಟಿಲ್ಲ ಅಂತ ಕೊನೆಗೂ ಉಸಿರು ಬಿಟ್ಟಳು. ನೋಡು ಇದು ಇನ್ಮೇಲೆ ನಿನ್ನದೇ ಹಕ್ಕಿನ ಮನೆ, ಇಲ್ಲಿ ನೀನು ಹೇಗೆ ಬೇಕೋ ಹಾಗಿರಬಹುದು, ಯಾವುದಕ್ಕೂ ಭಯಪಡಬೇಕಾಗಿಲ್ಲ, ಆದರೆ ನಮ್ಮ ಸಂಪ್ರದಾಯಗಳನ್ನ ಸ್ವಲ್ಪ ಮಟ್ಟಿಗೆ ಅನುಸರಿಸಿಕೊಂಡು ಹೋಗಬೇಕು ಅಷ್ಟೇ ಅಂದೇ. ಅನಪೆಕ್ಷಿತವಾದ ಮಾತಿಗೆ ನಸುನಕ್ಕು ತಲೆಯಾಡಿಸಿದಳು. ಯಾಕೆ ನಗು ?? ಏನಿಲ್ಲ ನನಗೆ ತುಂಬಾ ಖುಷಿಯಾಯ್ತು ಇಷ್ಟು ದಿನ ದೊಡ್ಡಪ್ಪನ ಮನೆಯಲ್ಲಿದ್ದೆ, ಎಷ್ಟಿದ್ದರೂ ಕೊನೆಗೆ ಅಪ್ಪ ಅಮ್ಮನ ತರ ಅಲ್ಲ ನೋಡಿ ಆದರೆ ಈಗ ನೀವು ಇದು ನಿನ್ನ ಸ್ವಂತದ ಮನೆ ಅಂದ್ರಲ್ಲ ಅಷ್ಟೇ ಸಾಕು ಎಂದು ಮುಗ್ಧವಾಗಿಯೇ ನುಡಿದಳು . ನಾ ನಕ್ಕೆ ..  ಯಾಕೀ ನಗು ಅನ್ನುವಂತಿತ್ತು ಅವಳ ನೋಟ.ನೋಡು ಸಿಂಧು ನೀನು ಈ ಮನೆಯ ಭಾಗ್ಯಲಕ್ಷ್ಮಿ ಆಗಬೇಕು ಅನ್ನೋದೇ ನನ್ನ ಆಸೆ, ಎಲ್ಲರ ಜೊತೆ ಹೊಂದಿಕೊಂಡು ಈ ಮನೆಯ ಮಗುವಾಗಿ ನನ್ನ ಮುದ್ದು ಪತ್ನಿಯಾಗಿ ಇದ್ದರೆ ನನಗೆ ಮತ್ತೇನೂ ಬೇಡ ಅಂದಿದ್ದಕ್ಕೆ ಖಂಡಿತ ನಾನು ಪ್ರಯತ್ನಿಸುತ್ತೇನೆ ಅತ್ತೆ ಮಾವ ನನಗೆ ತಂದೆ ತಾಯಿಯಿದ್ದಂತೆ ಅವರನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ, ನೀವೊಬ್ಬರು ಜೊತೆಗಿದ್ದರೆ ನನಗೆ ಯಾವುದೇ ಭಯವಿಲ್ಲ ಎಂದೂ ನನ್ನ ಕೈ ಬಿಡುವುದಿಲ್ಲ ತಾನೇ ಅಂತ ನನ್ನ ಕೈ ಹಿಡಿದಳು... ಏನೋ ಹೊಸ ರೋಮಾಂಚನ ಮನದಲ್ಲಿ, ಬೆಳಿಗ್ಗೆ ಎಲ್ಲರೆದುರಿಗೆ ಪಾಣಿಗ್ರಹಣದಲ್ಲಿ ಕೈ ಹಿಡಿದಾಗ ಏನೂ ಅನಿಸಿರಲಿಲ್ಲ ಆದರೆ ಈಗ ಏಕಾಂತದಲ್ಲಿ ಏನೋ ಹೊಸ ಅನುಭವ. ನನ್ನ ಮನದಲ್ಲಾದ ಬದಲಾವಣೆ ಅವಳ ಅರಿವಿಗೆ ಬಂದಿತ್ತು,ಆದರೂ ಹಿಡಿದ ಕೈ ಹಾಗೆ ಇತ್ತು. ನೋಡು ಚಿನ್ನ ಇವತ್ತು ನೀನು ಹಳೆಯ ಎಲ್ಲ ಬಂಧನವನ್ನ ಬಿಟ್ಟು ನನ್ನ ಜೊತೆ ಬಂದಿದೀಯ "ಮಾಂಗಲ್ಯಂ ತಂತುನಾನೇನ ಮಮ ಜೀವನ ಹೆತುನಾ ಕಂಠೇ ಬಧ್ನಾಮಿ ಸುಭಗೆ ಸಾಜೀವ ಶರದಃ ಶತಮ್" ಅಂತ ಮಾಂಗಲ್ಯ ಕಟ್ಟಿರುವುದು  ನೂರು ವರ್ಷ ಸುಖವಾಗಿ ಬಾಳೋಣ ಎಂದು. ಅಗ್ನಿಯ ಸುತ್ತ ಪ್ರದಕ್ಷಿಣೆ ಹಾಕಿದ್ದು ನಾವಿಬ್ಬರೂ ಪ್ರೀತಿಯಿಂದ ಹೊಂದಾಣಿಕೆಯಿಂದ ಇರೋಣ ಅಂತ. "ಧರ್ಮೇಚ ಅರ್ಥೆಚ ಕಾಮೇಚ ನಾತಿಚರಾಮಿ" ಅಂದಿದ್ದು ಎಲ್ಲದರಲ್ಲೂ ನಿನ್ನ ಜೊತೆ ಸಮಪಾಲು ಹಂಚಿಕೊಳ್ಳುತ್ತೇನೆ ಅಂತ.ದೇವಾಗ್ನಿ ದ್ವಿಜ(ಬ್ರಾಹ್ಮಣ)ರ ಸನ್ನಿಧಿಯಲ್ಲಿ ನಿನ್ನ ಕೈ ಹಿಡಿದಿರುವುದು ಬಿಡಲಿಕ್ಕಲ್ಲ. ಏನೂ ಚಿಂತೆ ಮಾಡಬೇಡ, ಮದ್ವೆ ಆದ ಮೇಲೆ ಈಡೀ ದಿನ ಗಂಡ ಅತ್ತೆ ಮಾವ ನ ಸೇವೆ ಮಾಡಿಕೊಂಡು ಇರಬೇಕು ಅಂತ ಏನೂ ಇಲ್ಲ,ನನಗೆ ಹೋಗ್ರೀ ಬರ್ರೀ ಅಂತ ಕರೀಬೇಕೂ ಅಂತನೂ ಇಲ್ಲ, ಎಲ್ಲರೆದುರಿಗೆ ಬೇಕಾದ್ರೆ ಹಾಗೆ ಕರೀ ಪರವಾಗಿಲ್ಲ ಆದರೆ ನಾವಿಬ್ರೇ ಇರೋವಾಗ ಹೋಗು ಬಾ ಅಂದ್ರೆ ಸಾಕು. ಮುಂದೆ ಏನಾದ್ರೂ ಕೆಲಸ ಮಾಡಬೇಕು ಅನಿಸಿದರೆ ನಿನ್ನಿಷ್ಟ. ನಿಂಗೆ ನಿನ್ನ ಕೆಲಸದಲ್ಲಿ ನನ್ನ ಕೈಲಾದ ಸಹಾಯ ನಾನು ಮಾಡ್ತೀನಿ. ಹೆಂಡತಿ ಈಡೀ ದಿನ ಮನೇಲಿ ದುಡಿಬೇಕು,ಗಂಡ ಕುತ್ಕೊಂಡು ತಿನ್ಬೇಕು ಅನ್ನೋನು ನಾನಲ್ಲ. ಇದನ್ನೆಲ್ಲಾ ತದೇಕಚಿತ್ತದಿಂದ ಕೇಳುತ್ತಿದ್ದ ಅವಳ ಮೇಲೆ ಕರುಣೆ ಬಂದು ಬೋರ್ ಆಯ್ತಾ ಅಂದೇ.. ಇಲ್ಲ ಇಲ್ಲ ನಿಮಗೆ ನನ್ನ ಮೇಲೆ ಪ್ರೀತಿಗೆ ನಾನು ಚಿರಋಣಿ ಇಷ್ಟು ಪ್ರೀತಿಸುವ ನನ್ನ ಮನದ ದುಗುಡವನ್ನ ಅರಿಯುವ ಗಂಡ ಸಿಗ್ತಾರೆ ಅನ್ಕೊಂಡಿರಲಿಲ್ಲ, ಮದುವೆಯಾದ ಮೇಲೆ ಹೇಗೋ ಏನೋ ಅನ್ಕೊಂಡಿದ್ದ ನನಗೆ ಈಗ ಸ್ವಲ್ಪ ಸಮಾಧಾನವಾಯಿತು. ನಿಮ್ಮೆಲ್ಲ ನೋವು ನಲಿವಿನಲ್ಲಿ ಸಮಪಾಲು ಹಂಚಿಕೊಂಡು ಸದಾ ಸುಖವಾಗಿ ಬಾಳಲು ಖಂಡಿತ ಪ್ರಯತ್ನ ಪಡ್ತೀನಿ ಅಂತ ನನ್ನ ಪ್ರಶ್ನೆಗೆ ಸಹಜವಾಗಿಯೇ ಉತ್ತರಿಸಿದ್ದಳು. ಈಗ ನಮ್ಮಿಬ್ಬರ ನಡುವಿನ ಅಂತರ ತುಂಬಾ ಕಮ್ಮಿಯಾಗಿತ್ತು. ಒಬ್ಬರಿಗೊಬ್ಬರು ಸ್ವಲ್ಪ ಅರ್ಥಮಾಡಿಕೊಂಡಿದ್ದೆವು. "ಸಖಾ ಸಪ್ತಪದೀ ಭವ" ಅಂತ ಜೊತೆಗೂಡಿ ಏಳು ಹೆಜ್ಜೆ ಇತ್ತು ನಮ್ಮ ಈ ಸಂಬಧ ಸ್ನೇಹದಂತೆ ಇರಲಿ ಎಂದಿದ್ದು ನಮ್ಮಿಬ್ಬರಲ್ಲಿ ಸ್ನೇಹಭಾವ ಏರ್ಪಾಡಾಗಿತ್ತು.

ಮದುವೆಯ ಮೊದಲ ರಾತ್ರಿ ಏನೇನೋ ಆಸೆ ಇಟ್ಟುಕೊಂಡು ಬಂದ ನಿನಗೆ ನನ್ನ ಪುರಾಣ ಕೇಳಿ ಬೇಜಾರ್ ಬಂದಿರಬೇಕು ಅಲ್ವ ಅಂತ ನಕ್ಕೆ. ಅದಕ್ಕವಳು ನಗುತ್ತ ಆಸೆ ಆಕಾಂಕ್ಷೆಗಳು ಜೀವನವಿಡೀ ಇರುವುದೇ ಆದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಬಾಳಿದರೆ ಮಾತ್ರ ಆ ಆಸೆಗಳು ಸಹಜವಾಗಿ ಪೂರೈಸುವುದು ಅಲ್ಲವೇ? ಈಡೀ ಜೀವನದ ನಿರ್ಧಾರವನ್ನ ಈ ರಾತ್ರಿಯಲ್ಲಿ ತೆಗೆದುಕೊಂಡರೆ ಈ ರಾತ್ರಿಯ ಮಹತ್ವವೇ ಬೇರೆ ತಾನೇ. ಇಡೀ ದಿನದ ಜಂಜಾಟವನ್ನ ಮರೆತು ನಾಳೆಯ ಚಿಂತೆ ಬಿಟ್ಟು ಒಬ್ಬರಿಗೊಬ್ಬರು ನಮ್ಮ ಮನದ ಭಾವನಗಳನ್ನ ನಾಲ್ಕು ಗೋಡೆಯ ಒಳಗೆ ಬಂಧಿಸಿ ಅರ್ಥೈಸಿಕೊಂಡರೆ ಬಾಳು ಸುಂದರವಾಗುವುದು ಖಂಡಿತ, ದೇಹದಿಂದ ಒಂದಾದಂತೆ ಮನದಿಂದ ಒಂದಾಗುವುದು ಈ ರಾತ್ರಿಯಲ್ಲಿ ಮಾತ್ರ ಸಾಧ್ಯ ಅಲ್ಲವೇ??. ನನಗೆ ಅವಳ ಅರ್ಥಭರಿತ ಮಾತುಗಳು ತುಂಬಾ ಹಿಡಿಸಿದವು. ಸರಿಯಾಗಿ ಹೇಳಿದೆ ಚಿನ್ನ ಆದರೆ ಪ್ರತಿರಾತ್ರಿಯೂ ಹೀಗೆ ಮಾತಾಡ್ತಾ ಹೋದರೆ ಹೇಗೆ ಅಂದೇ ... ನನ್ನ ಮಾತುಗಳ ಗೂಢಾರ್ಥ ತಿಳಿದ ಅವಳ ಗಲ್ಲ ರಂಗೇರಿತ್ತು, ಎರಡೂ ಕೈಯ್ಯಿಂದ ಮುಖವನ್ನ ಮೇಲೆತ್ತಿ ನಾಚಿದರೆ ತುಬಾ ಸುಂದರವಾಗಿ ಕಾಣ್ತೀಯ ಅಂದೆ. ನಗುತ್ತ ಸೆಳೆದು ತಬ್ಬಿದಳು. ನಾಲ್ಕು ಗೋಡೆಯ ಹೊರಗೆ ಸಾವಿರಾರು ಚರ್ಚೆಗಳು ಆದರೆ ನಾಲ್ಕು ಗೋಡೆಯ ಮಧ್ಯೆ ಬಾಹುಬಂಧನದಲ್ಲಿ ನಮ್ಮ ಮನದ ಮಿಲನವಾಗಿತ್ತು.