ನಾಂದಿ:


ಸಾಕಿನ್ನು ಅಂಬೆ ಗಾಲಿಡುವುದ ಬಿಟ್ಟು
ನಡೆಯಬೇಕಾಗಿದೆ ತಲೆಯ ಎತ್ತಿ,
ಕೊಳಚೆ ಕೊಳಗೇರಿಯ ಸ್ವಚ್ಛಗೊಳಿಸಿ
ಸಮಾಜವ ಸುಧಾರಿಸಬೇಕಾಗಿದೆ ಮತ್ತೆ.

ಬರೀ ನಡೆದರೆ ಸಾಲದಾಗಿದೆ ಇಂದು
ಓಡಬೇಕಾಗಿದೆ ಹುಚ್ಚು ಜನರ ಜೊತೆ,
ದುಗುಡ ದುಮ್ಮಾನಗಳ ಬದಿಗೊತ್ತಿ
ಜಗಕೆ ಎದೆಯೊಡ್ಡಿ ನಿಲ್ಲಬೇಕಾಗಿದೆ ಮತ್ತೆ.

ಕೈಕಟ್ಟಿ ಕೂತು ಸುಮ್ಮನಿರದೆ
ಹೃದಯದಿ ಆಸೆ ಬೀಜವ ಬಿತ್ತಿ,
ಮನಕೆ ಧೈರ್ಯವ ತುಂಬುತ
ಏಳಿಸಬೇಕಾಗಿದೆ ಜನರ ಮತ್ತೆ.

ಮೌನವಾಗಿರದೆ ಮಾತಿಗೆ ಮಾತ ಬೆಳೆಸಿ
ಧಿಕ್ಕರಿಸಿ ಹೊಲಸು ರಾಜಕೀಯದ ಕ್ರೌರ್ಯವ,
ಸಿಗುವ ಕಾಂಚಾಣದ ಮೋಹಕೆ ಕುರುಡಾಗದೆ
ಹೋರಾಡಬೇಕಾಗಿದೆ ಪಡೆಯಲು ಸ್ವಾತಂತ್ರ್ಯವ ಮತ್ತೆ.

ಹರಡಿರಲು ಹುಚ್ಚು ನಾಯಿಯ ರೋಗ
ಕಷ್ಟ ಕಾರ್ಪಣ್ಯಗಳಿಗೆ ಲಸಿಕೆ ಮದ್ದಾಗಿ,
ದೌರ್ಜನ್ಯವೇ ತುಂಬಿರಲು ಎಲ್ಲೆಲ್ಲೂ
ಮನುಜ ಕುಲವ ಉದ್ಧರಿಸಬೇಕಾಗಿದೆ ಮತ್ತೆ.

ನೋಡಿ ಸಾಕಾಗಿದೆ ಜಗದ ಈ ಕೊರಗ
ಹೊಲಸು ದುರ್ಗಂಧ ಬೀರುತಿರುವ ಯುಗದಲಿ,
ಮತ್ತೆ ಜನುಮವೆತ್ತಿ ವೀರ ನಾಯಕನಾಗಿ
ಜಗದೋದ್ಧಾರಕೆ ನಾಂದಿ ಹಾಡಬೇಕಾಗಿದೆ ಮತ್ತೆ.


1 comment:

  1. ಈ ಧೈರ್ಯ, ಆಶಾಭಾವನೆಯೇ ನಿಮ್ಮನ್ನು ಮುಂದಕ್ಕೆ ತಂದಿದೆ. ಚೆನ್ನಾಗಿದೆ ಕವಿತೆ.

    ReplyDelete