ಹೆಣ್ಣು ಕಾರಣ...!

ಯಾಕೆ ಆಗುತ್ತಿದೆ ಹೀಗೆಲ್ಲ..?

    ಮೊನ್ನೆಯಷ್ಟೇ ಎಲ್ಲ ಕಡೆ ಜಾಗತಿಕ ಮಹಿಳಾ ದಿನದ ಆಚರಣೆಯಾಯಿತು. ದಿನಪತ್ರಿಕೆಗಳಿಂದ ಹಿಡಿದು ಫೇಸ್‌ಬುಕ್‌ವರೆಗೂ ಅಂದು ಹೆಣ್ಣಿಗೆ ವಿಶೇಷ ಗೌರವ. ಹೀಗೊಂದು ವಿಶೇಷ ದಿನದಂದು ಹೆಣ್ಣಿಗೆ ಗೌರವ ಕೊಟ್ಟು ಉಳಿದ ದಿನ ಹೆಣ್ಣನ್ನು ನೋಡುವ ದೃಷ್ಟಿಕೋನವೇ ಬೇರೆಯಾದರೆ ಏನೂ ಅರ್ಥವಿಲ್ಲ.

ಇಂದು ಹೆಣ್ಣು ಅಡುಗೆಮನೆಯಿಂದ ಸೈನ್ಯದಲ್ಲಿ ಬಂದೂಕು ಹಿಡಿಯುವವರೆಗೆ ಗುರುತಿಸಿಕೊಂಡಿದ್ದಾಳೆ. ಹಳ್ಳಿಯ ಮೂಲೆಯಲ್ಲಿ ಕುಂಟೆಬಿಲ್ಲೆ ಆಡುತ್ತಿದ್ದವಳು ಇಂದು ಕ್ರಿಕೆಟ್, ಟೆನಿಸ್‌ಗಳಲ್ಲಿ ಮಿಂಚುತ್ತಿದ್ದಾಳೆ. ಅಡುಗೆ ಮನೆಯ ಸಾಮಾನಿನ ಪಟ್ಟಿ ಬರೆಯುತ್ತಿದ್ದವಳು ಇಂದು ಇನ್‌ಫಾರ್ಮೇಷನ್ ಟೆಕ್ನಾಲಜಿಯಂಥ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿದ್ದಾಳೆ. ಮನೆಯಿಂದ ಹೊರಬರಲು ಹೆದರುತ್ತಿದ್ದವಳು ಅಂತರಿಕ್ಷಯಾನ ಕೈಗೊಂಡಿದ್ದಾಳೆ.
ಆದರೆ, ಆಕೆ ಎಷ್ಟೇ ಸಾಧಿಸುತ್ತಿದ್ದರೂ ಅವಳನ್ನು ಅತ್ಯಾಚಾರದ ಮೂಲಕ ಕಟ್ಟಿಹಾಕುತ್ತಿರುವುದು ವಿಪರ್ಯಾಸ. ಇದಕ್ಕೆ ಕಾರಣ ಹುಡುಕುತ್ತ ಹೋದರೆ ಇದಕ್ಕೆಲ್ಲ ಸ್ವಲ್ಪ ಮಟ್ಟಿಗೆ ಹೆಣ್ಣೇ ಕಾರಣ ಎಂಬ ಸಂಶಯ ಬರುವುದಂತೂ ನಿಜ. ಪುರುಷರಿಗೆ ಸಮನಾಗಿ ನಿಲ್ಲುವ ಹುಮ್ಮಸ್ಸಿನಲ್ಲಿ ಸ್ತ್ರೀ ತನ್ನದೇ ಜವಾಬ್ದಾರಿ ಮರೆತು ಎಡವುತ್ತಿದ್ದಾಳೆ ಅನಿಸುತ್ತದೆ. ಹೇಗೆ ಹೆಣ್ಣು ವಿಜ್ಞಾನ, ಅಂತರಿಕ್ಷ, ಸೈನ್ಯ, ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾಳೋ ಅದೇ ರೀತಿ ಆಧುನಿಕ (ಶರಾಬು, ಸಿಗರೇಟು ಇತ್ಯಾದಿ) ಕ್ಷೇತ್ರದಲ್ಲೂ ತಾನು ಪುರುಷರಿಗೆ ಸರಿಸಮಾನಳು ಅನ್ನುತ್ತಿರುವುದು ನಿಜಕ್ಕೂ ವಿಷಾದನೀಯ. ನಮ್ಮ ಸಂಸ್ಕೃತಿಯನ್ನ ಮರೆತು ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗುತ್ತಿರುವುದು ಇದಕ್ಕೆಲ್ಲ ಕಾರಣ. ಹುಡುಗಿಯರ ವಸ್ತ್ರವಿನ್ಯಾಸ, ಸಿಗರೇಟು, ಶರಾಬು ಇವೂ ಹೆಣ್ಣಿನ ಅತ್ಯಾಚಾರಕ್ಕೆ ಸ್ವಲ್ಪಮಟ್ಟಿಗೆ ಕಾರಣವಾಗಿವೆ. ಸಿನಿಮಾ, ಟಿವಿ ಸೀರಿಯಲ್‌ಗಳ ಕೆಟ್ಟ ಪ್ರಭಾವಗಳೂ ಆಕೆಯ ಮೇಲೆ ಬೀಳುತ್ತಿವೆ.
ಹೆಣ್ಣಿಗೆ ಒದಗಿರುವ ಈ ಸಮಸ್ಯೆಗಳನ್ನು ದೂರ ಮಾಡಲು ಒಂದಿಷ್ಟು ಪರಿಹಾರಗಳೂ ಇವೆ. ಶಾಲಾ ಶಿಕ್ಷಣದ ಜತೆ ನಮ್ಮ ನಾಡು-ನುಡಿ, ಸಂಸ್ಕೃತಿಯ ಬಗೆಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕು. ಸ್ವಲ್ಪ ಅರಿತು ವ್ಯವಹರಿಸಿದರೆ ಹೆಣ್ಣು ತನ್ನದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬಲ್ಲಳು ಎನ್ನುವುದರಲ್ಲಿ ಸಂಶಯವಿಲ್ಲ. ತಂದೆ- ತಾಯಿ ಮಗುವಿಗೆ ಉತ್ತಮ ಸಂಸ್ಕಾರ ನೀಡಬೇಕು. ಹೊರದೇಶದವರು ನಮ್ಮ ಸಂಸ್ಕೃತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿರುವಾಗ ನಾವು ಹೊರದೇಶದ ಆಚರಣೆಯನ್ನು ಅನುಸರಿಸುವುದರಲ್ಲಿ ಏನೂ ಅರ್ಥವಿಲ್ಲ.

ಸ್ವಲ್ಪ ಯೋಚಿಸಿ, ಹೆಣ್ಣು ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಗಿದ್ದರೂ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಒಮ್ಮೆ ಇಡೀ ಸಮಾಜದ ಬಗ್ಗೆ ವಿಚಾರ ಮಾಡಿ ನೋಡಿ. ಇದು ನನ್ನ ವಿನಂತಿ. ನನ್ನ ಉದ್ದೇಶ ಇಷ್ಟೇ ದೇವರೆಂದು ಪೂಜಿಸುವ ಹೆಣ್ಣಿಗೆ ಎಂದೂ ಕಳಂಕ ಬರಬಾರದು.

- ಗಣೇಶ ಖರೆ

ಅಕ್ಟೋಬರ್ ೧೬ ರ "ಕನ್ನಡ ಪ್ರಭ"ದಲ್ಲಿ ಪ್ರಕಟವಾದ ಬರಹ.
 

ಮೇಕಿಂಗ್ ಆಪ್ ಲುಂಗಿ ಡಾನ್ಸ್:


ಏ ಕೋಮ್ಲಿ ನಮ್ ಊರ್ನಾಗೆ ಈ ಲುಂಗಿ ಡಾನ್ಸ್ ಪುಲ್ ಪೆಮಸ್ ಆಗ್ ಬುಟ್ಟೈತೆ .... ನಮ್ ಗಣಪತಿ ಕೂಡ ಇನ್ನೊಂದ್ ಎರ್ಡು ದಿನ್ನ ಇದ್ದಿದ್ರೆ ಅವ್ನೂ ಸ್ಟೆಪ್ ಹಾಕೊನು..... ಇದ್ರ ಹಿಂದೆ ಎನೊ ಮರ್ಮ ಐತೆ ನಿಂಗೊತ್ತೆನ್ಲಾ.

ಎ ಬುಡ್ಲಾ ಗಣಿ ಅದೊಂದ್ ದೊಡ್ಡ್ ಇಸ್ಟೊರಿ ಐತೆ ಕಲಾ. 

ಹೆಳ್ಲಾ ನಮ್ ಎಕ್ತಾ ಕಪೂರ್ ಸ್ಟೊರಿ ಅಸ್ಟೆನೂ ದೊಡ್ಡಾ ಇರಾಕಿಲ್ಲ ಬುಡು..

ಕೆಳ್ಲಾ... ನಮ್ ಕ್ ಕ್ ಕ್ ಕ್ ಕ್ ಕಿಂಗ್ ಖಾನ್ ಇಲ್ವಾ ಅದ್ಕೆ ಈ ಡಾನ್ಸು ಬೀನ್ಸು ಎಲ್ಲಾ ಬರಾಕಿಲ್ಲ, ಅದ್ರಾಕೂ ನಮ್ ರಜ್ನಿ ತರ ಲುಂಗಿ ಉಡ್ಸಿದ್ರೆ ಎನಾಗ್ಬೆಕು ಹೇಳು.

ಅದೂ ಹೌದ್ ಕಣ್ಲಾ.. ನೆಟ್ಗೆ ಡೈಲಾಗ್ ಹೊಡಿಯಾಕೆ ಬರಂಗಿಲ್ಲಾ ಇನ್ನೆನ್ ಕುಣಿತದೆ..., ಅದ್ರಾಕೂ ಲುಂಗಿ ಉಟ್ಗಂಡು..., ಅದೇ ಗೊತ್ತಾಗಿಲ್ಲಾ ಕಲಾ ಅದೆಂಗೆ ಡಾನ್ಸ್ ಮಾಡ್ತು ಅಂತಾ.

ವಿಸ್ಯಾ ಬೇರೆ ಐತೆ ಇಲ್ಕೇಳು..ಅದೇನಾಯ್ತು ಗೊತ್ತಾ... ಸಾರುಕ್ ಗೆ ಲುಂಗಿ ಉಡ್ಸಿದ್ರಾ ಅದ್ಕೆ ನಡಿಯಾಕೆ ಬರ್ತಾ ಇರ್ಲಿಲ್ಲಾ... ದಮ್ ಹೋಡಿತಾ ನಂಗೆ ಇದ್ನಾ ಉಟ್ಗಂಡು ನಡ್ಯಾಕೆ ಬರಾಂಗಿಲ್ಲಾ ನಾ ಹೇಂಗ್ಲಾ ಕುಣಿಲಿ ಅಂತು..... ನಮ್ ದೀಪಿಕಾ ಒಳ್ಳೆ ಗಂಡಾ ಸತ್ತೊರ್ ತರಾ ಕುತ್ಕಂಡಿತ್ತು..... ಆಮೇಲೆ ಡೈರೆಕ್ಟರು ಪ್ರೊಡ್ಯುಸರು ಎಲ್ಲಾ ತಲೆ ಮೇಲೆ ಕೈ ಹಾಕ್ಕಂಡು ಕುತ್ಗಂಡಿದ್ರು.... ನಮ್ ಜುಂಜ ಸಾನೇ ಹುಸಾರು ಕಣ್ಲಾ ಒಂದ್ ಐಡಿರಿಯಾ ಮಾಡಿ ಡೈರೆಕ್ಟರ್ ತಾವ ಹೋಗಿ ನಾನೋಂದು ಐಡಿರಿಯಾ ಮಾಡಿವ್ನಿ ... ಸ್ವಲ್ಪಾ ತಡ್ಕಳಿ ಹತ್ ನಿಮಿಸ ಹಂಗೆ ಸಾರುಕ್ ಕುಣಿತದೆ ಅಂದಾ.. ಡೈರೆಕ್ಟರ್ ಪುಲ್ ಕುಸಿ ಆಗ್ ಬುಟ್ಟು ಅದೆಂಗ್ಲಾ ಅಂದಾ..... ಅದೆಲ್ಲಾ ಕೆಳ್ಬ್ಯಾಡಿ ಸುಮ್ಕೆ ನಾನು ಅಕ್ಸನ್ ಅಂದ್ಕೂಡ್ಲೆ ಸೂಟಿಂಗ್ ನಾ ಸುರು ಹಚ್ಕಳಿ ಅಂದಾ.

ಆಮೆಕ್ ಎನಾತ್ಲಾ ಕೊಮ್ಲಿ.. ಬೊ ಇಂಟ್ರೆಸ್ಟಿಂಗ್ ಆಗೈತೆ.

ನಮ್ ಜುಂಜಾ ಇದ್ದೋನು ಎಲ್ಲೊ ಹೋಗಿ ಕವರ್ನಾಗೆ ಅದೇನೊ ಹಿಡ್ಕಂಬಂದಾ.. ನಾನು ಅದೆನ್ಲಾ ಅಂದೆ.... ಕಟ್ಟಿರುವೆ ಅಂದಾ....ಅದ್ಯಾಕ್ಲಾ ಅಂದೆ.... ಇದ್ನಾ ಸಾರುಕ್ ಲುಂಗಿ ಒಳ್ಗೆ ಬುಟ್ರೆ ಹೆಂಗೆ ಕುಣಿತದೆ ನೋಡ್ತಾ ಇರು ಅಂದ...... ಅಯ್ಯೊ ಲೆ ನಿನ್ ಮುಕ್ಕೆ ಎಮ್ಮೆ ಸಗಣಿ ಹೊಯ್ಯಾ,,, ಇರುವೆ ಬಿಟ್ಟು ಹೊಗೆ ಹಾಕ್ಕಂಡೀತು ಲೇ ಹುಸಾರು ಅಂದೆ....
ಹಂಗೆಲ್ಲಾ ಎನೂ ಆಗಾಕಿಲ್ಲ ಬುಡ್ಲಾ ಅಂದೊನೆ ...ಮಗಾ ಹೋಗಿ ಸಾರುಕ್ ಕಾಲ್ಗೆ ಬೀಳೋ ಅಕ್ಟಿಂಗ್ ಮಾಡಿ ಸುಮ್ಕೆ ಅಂಗೆಯಾ ಇರುವೆ ಬಿಟ್ಟು ಬಂದವ್ನೆ.... ಹಂಗೆ ಹತ್ತು ಸೆಕೆಂಡ್ ಆಗೈತೆ ಆಟೆಯ, ನಮ್ ಖಾನು ಲುಂಗಿ ಒಳ್ಗೆ ಎನೊ ಕಚಗುಳಿ ಇಟ್ಟಂಗೆ ಆಗ್ತೈತೆ ಅಂತಾ ಅಲ್ಲಾಡಾಕೆ ಹಿಡ್ದಾ..... ಜುಂಜಾ ಹಂಗೆಯಾ ಡೈರೆಕ್ಟರ್ ನೊಡಿ ಅಕ್ಸನ್ ಅಂದಾ... ಸೂಟಿಂಗ್ ಸುರು ಆತು.... ಪಾಪ ನಮ್ ಸಾರುಕ್ ಗೆ ಎನೂ ಗೊತ್ತೆ ಇಲ್ಲಾ,,, ಒಳ್ಗಡೆ ಇರುವೆ ಕಡಿಯೊಕೆ ಶುರು ಹಚ್ಕಂಡೈತೆ..... ಉರಿ ಆಗಿ ಲುಂಗಿ ಅಲ್ಲಾಡ್ಸಾಕೆ ಸುರು ಹಚ್ಕಂಡಾ...... ಸೈಡ್ ಡಾನ್ಸರ್ ಎಲ್ಲಾ ನಮ್ ಸಾರುಕ್ಕು ಕುಣಿಯಾಕೆ ಹತ್ತೈತೆ ಹೇಳಿ ಸ್ಟೆಪ್ ಹಾಕೊವು......... ಸಾರುಕ್ಕು ಲುಂಗಿ ಅಲ್ಲಾಡಿದ್ದೆ ಅಲ್ಲಾಡ್ಸಿದ್ದು.... ದಿಪಿಕಾನು ಕುಣ್ದಿದ್ದೆ ಕುಣ್ದಿದ್ದು

ಲುಂಗಿ ಡಾನ್ಸ್ ಲುಂಗಿ ಡಾನ್ಸ್
ಲುಂಗಿ ಡಾನ್ಸ್ ಲುಂಗಿ ಡಾನ್ಸ್
ಲುಂಗಿ ಡಾನ್ಸ್ ಲುಂಗಿ ಡಾನ್ಸ್
ಲುಂಗಿ ಡಾನ್ಸ್ ಲುಂಗಿ ಡಾನ್ಸ್


ಕಟ್ ಕಟ್ ಕಟ್...... ವೊಂಡರ್ಪುಲ್, ಸುಪರ್ಬ್.... ಗ್ರೆಟ್ ಸ್ಟೆಪ್... ಡೈರೆಕ್ಟರ್ ಹೊಗಳಿದ್ದೆ ಹೊಗಳಿದ್ದು.. ಪಾಪ ಸಾರುಕ್ಕು ಮುಖ ಎಲ್ಲಾ ಕೆಂಪಗಾಗಿ ಲುಂಗಿ ಹಿಡ್ಕಂಡು ಎದ್ನೊ ಬಿದ್ನೊ ಅಂತ ಓಡೊಗ್ಬುಟ್ಟ. ಡೈರೆಕ್ಟರು ಜುಂಜಂಗೆ ಹಂಗೆ ಹಿಡ್ಕಂಡು ಒಂದ್ಸಾವ್ರ ರೂಪಾಯಿ ನೊಟ್ನಾ ಕೊಟ್ಟು ಮಜಾ ಮಾಡ್ಲಾ ಅಂದಾ..... ದೀಪಿಕಾ ಇದ್ದದ್ದು ಹಂಗೆ ತಬ್ಕಂಡು ಯು ಅರ್ ಸೊ ಸ್ವೀಟ್ ಅಂತ ಕಿಸ್ ಕೊಟ್ತು ಕಲಾ...... ನಂಗೆ ಮೈಯೆಲ್ಲಾ ಉರ್ದೋಯ್ತು..... ನಾ ಇಷ್ಟ್ ದಿನಾ ಸ್ಟೆಪ್ ಹೇಳ್ಕೊಟ್ರು ಒಂದ್ ದಿನಾ ನನ್ಕಡೆ ತಿರ್ಗಿ ಕೂಡಾ ನೊಡ್ಲಿಲ್ಲಾ ಇವಂಗೆ ಈ ಪಾಟಿ ಮುತ್ತ್ ಕೊಟ್ಟೈತೆ.....

ಹೋಗ್ಲಿ ಬುಡ್ಲಾ ಕೋಮ್ಲಿ.... ಅದೆನೋ ಅಂತಾರಲ್ಲಾ ಅತ್ತೆಗೊಂದು ಕಾಲ, ಮಾವಂಗೊಂದು ಕಾಲಾ ಅಂತ... ನಿಂಗೂ ಒಳ್ಳೆ ಕಾಲ ಬತ್ತದೆ ಬುಡ್ಲಾ...

ಥು ನಿನ್ ಮುಕ್ಕೆ ಅದು ಅತ್ತೆಗೊಂದು ಕಾಲ, ಸೊಸೆಗೊಂದು ಕಾಲ ಕಣ್ಲಾ.

ಎನೊ ಓಂದು.. ಬರೀ ಬಾವನೆ ಅರ್ತಾ ಮಾಡ್ಕಬೇಕು ಕಲಾ.... ನಡಿಲಾ ತಿಮ್ಮನ್ ಅಂಗಡಿಗೋಗಿ ಓಂದ್ ಹಾಪ್ ಟೀ ನಾರು ಕುಡಿವಾ... ಬಿಲ್ ನಾ ಜುಂಜನ್ ಹೆಸರ್ನಾಗೆ ಹಾಕಿದ್ರಾಯ್ತು.

ಎ ಥು...ನಡಿಲಾ... 


ಹಾಸ್ಯ ಬರಹಗಾರ ಕೋಮಲ್ ಕುಮಾರ್ ಅವರ ಬರಹಗಳ ಪ್ರೇರಣೆಯಿಂದ ಒಂದು ಪುಟ್ಟ ಪ್ರಯತ್ನ. 

ಅಪ್ಪ ಅಮ್ಮಂಗೊಂದು ಪತ್ರ :



              ತೀರ್ಥರೂಪ ತಂದೆಯವರಿಗೆ ಮತ್ತು ಮಾತೋಶ್ರಿಯವರಿಗೆ ನಿಮ್ಮ ಮಗನ ನಮನಗಳು. ಹೇಗಿದ್ದೀರಾ?ನಾನಿಲ್ಲಿ ಆರಾಮಾಗಿದ್ದೇನೆ. ಏನಪ್ಪಾ ಇದು ಫೋನಾಯಿಸಿ ಎಷ್ಟು ಹೊತ್ತು ಬೇಕಾದರೂ ಮಾತಾಡುವ ಕಾಲ ಬಂದಿರುವಾಗ ಇದೇನು ಪತ್ರ ಬರೆದಿದ್ದಾನೆ ಅಂತ ಯೋಚಿಸುತ್ತಿದ್ದೀರಾ? ಹ್ಮಂ ಕೆಲವೊಮ್ಮೆ ಹೀಗೆ ಕೆಲವು ವಿಷಯಗಳನ್ನ ಎದುರು ಕೂತು ಅಥವಾ ಫೋನಲ್ಲಿಯೋ ಹೇಳಲು ಆಗುವುದಿಲ್ಲ. ಓಂಟಿಯಾಗಿ ಕೂತಾಗ ಮನದಲ್ಲಿ ಬರುವ ವಿಚಾರಗಳನ್ನ ಹಾಗೆ ಶಬ್ಧಗಳಲ್ಲಿ ಹೇಳೊ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೆ.

ಅಮ್ಮ..ಮೊನ್ನೆ ಮೊನ್ನೆ ನೀನು ಊರಿಗೆ ಬಂದು ಹೋದಾಗಿಂದ ಕೆಲ ವಿಷಯಗಳು ನನ್ನನ್ನ ಕೊರೆಯುತ್ತಿವೆ.ನೀವು ಮದುವೆಯಾಗಿ ಸುಮಾರು ೨೫ ಸಂವತ್ಸರಗಳನ್ನ ಕಳೆದಿದ್ದೀರಾ, ಈ ಎಲ್ಲ ಸಂವತ್ಸರಗಳು ಕೂಡ ನಿಮ್ಮ ಪಾಲಿಗೆ ಬಹಳ ಖುಷಿಯನ್ನ ತಂದಿರಲಿಕ್ಕಿಲ್ಲ ಬಹುಷಃ. ನನ್ನನ್ನ ಹೆತ್ತು ಹೊತ್ತು, ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಲು ನೀವು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ರೂಪಾಯಿ ರೂಪಾಯಿಗೂ ಕೂಡ ಬೆಲೆ ಕಟ್ಟಿ ಬರುವ ಸ್ವಲ್ಪ ಹಣದಲ್ಲೇ ಉಳಿತಾಯ ಮಾಡುವ ಕಲೆ ಬೇರೆ ಯಾರಲ್ಲೂ ನಾ ಕಾಣಲಾರೆ.
ಅಪ್ಪಾ ನಿನ್ನದಂತೂ ತುಂಬಾ ಸಿಡುಕು ಸ್ವಭಾವ, ಅಮ್ಮ ನೀನಂತೂ ಶಾಂತಮೂರ್ತಿ.ಇಬ್ಬರದೂ ವಿರುದ್ದ ಗುಣಗಳಾದರೂ ಉತ್ತಮ ಸಂಸಾರ ನಿಮ್ಮದು. ನಾ ಕಂಡ ಜಗತ್ತಿನ ಅದ್ಭುತ ಜೋಡಿಗಳಲ್ಲಿ ನಿಮಗೇ ಮೊದಲ ಸ್ಥಾನ. ಎಷ್ಟೇ ಬಡತನವಿದ್ದರೂ ಮಗನ ಖುಷಿಗೆನೂ ಕಡಿಮೆಯಿಲ್ಲ ನಿಮ್ಮಲ್ಲಿ. ಮಗನ ಖುಷಿಯ ಸಲುವಾಗಿ ಇಷ್ಟು ವರ್ಷ ಸತತವಾಗಿ ದುಡಿದಿದ್ದೀರಾ, ಇನ್ನೂ ದುಡಿಯುತ್ತಲೇ ಇದ್ದೀರಾ ಕೂಡ.ವಯಸ್ಸು ಅರವತ್ತರ ಮೇಲಾದರೂ ನಿಮ್ಮಲ್ಲಿರುವ ಹುರುಪಿಗೆನೂ ಕಡಿಮೆಯಿಲ್ಲ. ಇನ್ನೂ ನಿಮ್ಮಲ್ಲಿರುವ ಕೆಲಸದ ಉತ್ಸಾಹ ನೋಡಿ ಹರೆಯದ ನನಗೆ ನಾಚಿಕೆಯಾಗುತ್ತದೆ.
ಅಪ್ಪಾ.. ಮಂಡಿ ನೋವಿದ್ದರೂ ಇನ್ನೂ ನಿಮ್ಮ ಓಡಾಟ ನಡೆಯುತ್ತಲೇ ಇದೆ.
ಅಮ್ಮಾ..ನಿನ್ನ ಕಣ್ಣು ಮಂಜಾಗಿದ್ದರೂ ನಿನ್ನ ಹೊಲಿಗೆ ಕೆಲಸ ಮಾತ್ರ ಇನ್ನೂ ಪ್ರಖರವಾಗಿ ಬೆಳೆಯುತ್ತಲೇ ಇದೆ. ಯಾಕಾಗಿ ಇದೆಲ್ಲ.?ಯಾರಿಗಾಗಿ ಇದೆಲ್ಲ??
ಮದುವೆಯಾಗಿ ಮಗುವನ್ನ ಹೆತ್ತು ಹೊತ್ತು ಹೆಗಲೆತ್ತರಕ್ಕೆ ಬೆಳೆಸಿ, ಅವನಿಗೊಂದು ನೆಲೆ ಹುಡುಕಿ,ಮದುವೆ ಮಾಡಿ ಮೊಮ್ಮಕ್ಕಳನ್ನ ಆಡಿಸಿದರೆ ನಿಮ್ಮ ಜೀವನ ಸಾರ್ಥಕ ಅಲ್ಲವೇ..? ಆದರೆ ನನ್ನದು..??

ಹೀಗೆ ಒಬ್ಬಂಟಿಯಾಗಿ ಕುಳಿತು ಯೋಚಿಸಿದಾಗ ಹಳೆಯ ನೆನೆಪುಗಳೆಲ್ಲ ಕಾಡುತ್ತವೆ.ಆ ನೆನಪುಗಳಲ್ಲಿ ಸುಖ ದುಃಖ ಹೀಗೆ ಒಮ್ಮೊಮ್ಮೆ ಮೊಗದಲ್ಲಿ ಮೂಡುವ ನಗು, ಮಗದೊಮ್ಮೆ ತುಂಬಿ ಬರುವ ಹೃದಯ. ಒಟ್ಟಿನಲ್ಲಿ ನೀವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಟ್ಟೆಪಾಡಿಗಾಗಿ ಅದೆಷ್ಟೋ ಊರೂರು ಅಲೆದಿದ್ದೀರಿ. ನಾಲ್ಕೈದು ಊರು ಸುತ್ತಿದ ಅನುಭವ ನನಗೂ ಆಗಿದೆ ಬಿಡಿ.ಗದ್ದೆ, ತೋಟದಲ್ಲಿ ಬೆವರಿಳಿಸಿದ್ದೀರಾ. ಚಿಕ್ಕವನಿದ್ದಾಗ ನಾನು ಮಾಡಿದ ತುಂಟಾಟಕ್ಕೆ ಲೆಕ್ಕವೇ ಇಲ್ಲ ಬಿಡಿ, ಅದನ್ನೆಲ್ಲ ಹೇಗೆ ಸಹಿಸುತ್ತಿದ್ದೀರಿ ನೀವು?? "ಹೆತ್ತವರಿಗೆ ಹೆಗ್ಗಣ ಮುದ್ದು" ಅಂತ ಮಗನ ನಗುವಲ್ಲೇ ನಿಮ್ಮ ನೋವ ಮರೆವ ಪರಿ ಅದೆಂತಹ ವಿಸ್ಮಯವೋ ನಾನರಿಯೆ.ಆಗಿನ ನನ್ನ ತುಂಟಾಟಗಳು ನಿಮಗೆ ಎಷ್ಟು ನೋವನ್ನ ನೀಡಿದೆ ಅನ್ನುವುದು ನನಗೆ ಈಗ ತಿಳಿಯುತ್ತಿದೆ. (ನಿಮ್ಮ ಪಾಲಿಗೆ ಅದು ನೋವಲ್ಲದಿರಬಹುದು.) ಗುದ್ದಲಿ, ಕತ್ತಿ ಹಿಡಿದು ಎನಾದರೂ ಮಾಡಲು ಹೋಗಿ ನೆಲದಲ್ಲಿದ್ದ ನೀರಿನ ಪೈಪನ್ನು ಅದೆಷ್ಟು ಬಾರಿ ಒಡೆದಿದ್ದೇನೋ ಅಲ್ಲವಾ..? ಪೆನ್ನು, ಪೆನ್ಸೀಲ್, ರಬ್ಬರ್ಗಳನ್ನ ಎಷ್ಟೋ ಸಲ ಕಳೆದುಕೊಂಡು ಹಣಕ್ಕಾಗಿ ನಿಮ್ಮನ್ನ ಪೀಡಿಸಿದಾಗ ಬಯ್ದು ನೀವು ನೀಡುತ್ತಿದ್ದ ನಾಲ್ಕೈದು ರೂಪಾಯಿಗೆ ಬೆಲೆ ಕಟ್ಟಲಾರೆ ನಾನು.೧ನೇ ತರಗತಿಯಲ್ಲಿದ್ದಾಗ ಶಾಲೆಗೆ ಹೋಗಲು ಹಟ ಮಾಡುತ್ತಿದ್ದ ನನ್ನನ್ನ ಒಮ್ಮೆ ತೋಟದ ತುದಿಯಲ್ಲಿದ್ದ ಗೇಟಿನವರೆಗೂ ಹೊಡೆಯುತ್ತ ಅಟ್ಟಿಸಿಕೊಂಡು ಬಂದಿದ್ದು ಇನ್ನೂ ನೆನಪಿದೆ.ಮುಂದೆ ನಿಮ್ಮಿಂದ ದೂರವಾಗಿ ಚಿಕ್ಕಮ್ಮನ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದಾಗ ಒಬ್ಬನೇ ಅದೆಷ್ಟು ಬಾರಿ ಅತ್ತಿದ್ದೆನೋ.. ಆಗ ನಿಮಗೂ ದುಃಖವಾಗಿರಬೇಕು ಬಹುಷಃ.ಮೂರನೇ ತರಗತಿಯಲ್ಲಿದ್ದಾಗ ನಾವಿದ್ದದ್ದು ಬಹುಷಃ ೧೫/೨೦ ರ ಖೊಲಿಯಾಗಿರಬೇಕು ಅಲ್ಲವಾ?? ಒಂದು ಮೂಲೆಯಲ್ಲಿ ಬಚ್ಚಲು ಮನೆ, ಮತ್ತೊಂದು ಮೂಲೆಯಲ್ಲಿ ಅಡುಗೆ ಮನೆ. ಇಷ್ಟರಲ್ಲೆ ಸಂತೋಷವಾಗಿದ್ದದ್ದು ಮರೆಯುವಂತಿಲ್ಲ. ತೋಟದಲ್ಲಿದ್ದ ಒಂಟಿ ಮನೆ,ಏನಾದರೂ ಬೇಕೆಂದರೆ ಮೂರ್ನಾಲ್ಕು ಕಿ.ಮಿ ನಡಿಗೆ. ಮಳೆಗಾಲದಲ್ಲಿ ಲೈಟ್ ಹೋದರೆ ತಿಂಗಳುಗಟ್ಟಲೆ ನಾಪತ್ತೆ.ಚಿಮಣಿ ಬುಡ್ಡೆಯಲ್ಲೇ ಜೀವನ.ಎದುರಿಗಿದ್ದ ತೆರೆದ ಬಾವಿಯ ಕೆಂಪಾದ ನೀರನ್ನೇ ಕುದಿಸಿ ಕುಡಿಯುತ್ತಿದ್ದದ್ದು.ಎಲ್ಲಿ ಜೋರು ಗಾಳಿ ಮಳೆಯಾದರೆ ಬದಿಯ ಗೋಡೆ ಕುಸಿಯುತ್ತೆನೋ ಅನ್ನುವ ಭಯ ಬೇರೆ.ಹೀಗೆ ಸುಮಾರು ಏಳು ವರ್ಷ ಒಟ್ಟಿಗೆ ಇದ್ದಾಗಿನ ಕೆಲ ನೆನಪುಗಳು ಕೆಲವೊಮ್ಮೆ ಬಹಳ ಕಾಡುತ್ತವೆ.ಅಪ್ಪ ಮಗ ದೋಸೆ ತಿನ್ನೋಕೆ ಕುಳಿತರೆ ಕೊನೆಗೆ ನಿನಗೆ ಉಳಿಯದೇ ಅಮ್ಮಾ ನೀನು ಮತ್ತೆನಾದರೂ ತಿನ್ನುತ್ತಿದ್ದದ್ದು ನೆನೆಪಿದೆ. ಬಾಲ್ಯದ ಖುಷಿಯ ದಿನಗಳ ಜೊತೆಗೆ ನಿಮ್ಮ ಕಷ್ಟದ ದಿನಗಳ ನೆನಪು ಮನಕ್ಕೆ ಚುಚ್ಚುತ್ತವೆ.ಒಮ್ಮೆ ನಾನು ಮನೆ ಬಿಟ್ಟು ಹೋದದ್ದು ನೆನಪಿದೆಯಾ..? ಎಷ್ಟು ಹುಡುಕಿದ್ದೀರಿ ಅಲ್ಲವಾ..? ನಾನು ತೋಟದಲ್ಲಿ ಅಡಗಿ ಕೂತಿದ್ದೆ, ನಿಮ್ಮ ಕೂಗು ನನಗೆ ಕೇಳುತ್ತಿತ್ತು.ಆ ಕೂಗಿನಲ್ಲಿನ ನಿಮ್ಮ ನೋವು ಆಗ ನನ್ನ ಅರಿವಿಗೆ ಬಂದಿರಲಿಕ್ಕಿಲ್ಲ.. ಬಹಳ ಹೊತ್ತು ನಿಮ್ಮಿಂದ ದೂರವಿರಲಾರದೆ ಮತ್ತೆ ಬಂದು ನೀವು ಬಿಗಿದಪ್ಪಿದಾಗ ಸಿಕ್ಕ ಸುಖ ಅಷ್ಟಿಷ್ಟಲ್ಲ.ಹತ್ತನೇ ತರಗತಿ ಮುಗಿದ ಮೇಲೆ ಮತ್ತೆ ನಿಮ್ಮಿಂದ ದೂರವಾಗಬೇಕಾದಾಗ ನಾನೆಷ್ಟು ಅತ್ತಿದ್ದೆ, ಆದರೆ ನಿಮ್ಮ ಕಣ್ಣಲ್ಲಿ ಒಂದು ಹನಿಯೂ ಇರದಿರುವುದನ್ನ ನೋಡಿ ಆಶ್ಚರ್ಯವಾಗಿತ್ತು ನನಗೆ..! ಯಾಕೆ ಹೀಗೆ..? ನಿಮ್ಮ ಮಗ ಜೀವನದಲ್ಲಿ ಎನಾದರೂ ಸಾಧಿಸಲು ಹೊರಟಿದ್ದಾನೆ ಅನ್ನುವ ನಂಬಿಕೆಯೆ..?? ಅಥವಾ ನನಗೆ ಧೈರ್ಯ ನೀಡುವ ಸಲುವಾಗಿ ಹಾಗೆ ನಟಿಸಿದ್ದೀರೊ ನಾನರಿಯೆ..ಇವೆಲ್ಲವೂ ನನ್ನ ಜೀವನದಲ್ಲಿ ಮರೆಯಲಾರದ ಕಹಿ ನೆನಪುಗಳು.

ನನಗೀಗ ಕಾಡುವ ಪ್ರಶ್ನೆಗಳೇ ಬೇರೆ.ನಿಮ್ಮ ಹೆಗಲೆತ್ತರಕ್ಕೆ ಬೆಳೆದಿದ್ದರೂ ನಿಮ್ಮನ್ನ ದುಡಿಸುತ್ತಲೇ ಇದ್ದೇನೆ. ಮನೆ ಬಿಟ್ಟು ಷಹರಕ್ಕೆ ಬಂದು ದುಡಿದು ಸಾಲ ಮಾಡಿ ಮನೆ ತೆಗೆದುಕೊಂಡರೂ ನಿಮಗಿನ್ನೂ ನೆಮ್ಮದಿಯ ನಿದ್ದೆಯಿಲ್ಲ, ಇನ್ನೂ ಹಳ್ಳಿಯಲ್ಲೇ ನಿಮ್ಮ ಜೀವನ. ಇದುವರೆಗೂ ಒಮ್ಮೆಯೂ ಮನೆಗೆ ತಿಂಗಳು ತಿಂಗಳು ಹಣ ಕಳಿಸಿಲ್ಲ.. ನಿಮ್ಮ ಜೀವನಕ್ಕೆ ಬೇಕಾಗುವಷ್ಟು ದುಡಿದು, ಅದರಲ್ಲೂ ಸ್ವಲ್ಪ ಉಳಿಸಿ ನನಗೇ ಕೊಡುತ್ತಿದ್ದೀರಾ ಹೊರತು ನನ್ನಿಂದ ಇದುವರೆಗೂ ಒಂದು ರೂಪಾಯಿ ಸಹ ಕೇಳಿಲ್ಲ ನೀವು.ಬೇರೆಯವರೆಲ್ಲಾ ಮಗ ಕಳಿಸಿದ ಅಂತ ತೀರ್ಥಯಾತ್ರೆ ಮಾಡುತ್ತಿದ್ದರೆ ನೀವೆಂದೂ ನಮಗೆ ಎಲ್ಲಾದರೂ ಹೋಗಬೇಕಂತ ಎಂದೂ ಕೇಳಿಲ್ಲ.ಮೊದಲ ಸಂಬಳದಿಂದ ಸೀರೆ, ಶರ್ಟ್ ಪ್ಯಾಂಟ್ ತಂದಾಗಲೂ ಇದೆಲ್ಲ ಯಾಕೆ ಬೇಕಿತ್ತು ಅಂತಲೇ ಕೇಳಿದ್ದೀರಿ. ದುಡ್ಡಿದ್ದಾಗೆಲ್ಲ ಏನಾದರೂ ತಂದರೆ ಹೇಗಿದೆ ಅನ್ನುವ ಬದಲು ಇದಕ್ಕೆಷ್ಟು ಕೊಟ್ಟೆ ಅಂತಲೇ ಕೇಳುತ್ತೀರಿ. ನಾನು ಊರಿಗೆ ಬಂದಾಗಲೆಲ್ಲಾ ನನ್ನಲ್ಲಿದ್ದ ದುಡ್ಡನ್ನ ನಿಮ್ಮ ಹತ್ತಿರವೇ ಕೊಡುತ್ತಿದ್ದೆ, ಮತ್ತೆ ಖರ್ಚಿಗೇನಾದರೂ ನಿಮ್ಮಲ್ಲಿ ಹಣ ಕೇಳಿದರೆ ನೀವು ಕೈಗಿಡುತ್ತಿದ್ದ ೧೦ ರೂ. ಕಂಡು ನಗು ಬರುತ್ತಿತ್ತು. ನಾನಿಲ್ಲಿ ಎಷ್ಟೊ ದುಡ್ಡನ್ನ ವ್ಯಯ ಮಾಡುತ್ತಿದ್ದರೂ ನೀವು ರೂಪಾಯಿಗೂ ಲೆಕ್ಕವಿಟ್ಟು ಸುಮ್ಮನೆ ದುಡ್ಡು ಹಾಳು ಮಾಡಬೇಡ ಅಂತ ಪ್ರೀತಿಯಿಂದ ಕೆನ್ನೆ ತಟ್ಟಿದಾಗ ಮನ ತುಂಬಿಬರುತ್ತೆ. ಮೊಬೈಲ್ ಇದೆ ಅಂತ ದಿನವೂ ಫೋನ್ ಮಾಡಬೇಕು ಅಂತೇನಿಲ್ಲ, ವಾರಕ್ಕೊಮ್ಮೆ ಮಾಡಿದರೆ ಸಾಕು ಅನ್ನುವ ನಿಮ್ಮ ಮಾತಿಗೆ ಏನು ಹೇಳಬೇಕೋ ನಾನರಿಯೆ.ಅಮ್ಮ ನೀನು ಊರಿಗೆ ಬರ್ತೀನಿ ಅಂದಾಗ ನಾನು ರಿಜರ್ವೆಶನ್ ಮಾಡಿಸ್ತೀನಿ ಆರಾಮವಾಗಿ ಮಲಗಿಕೊಂಡು ಬರಬಹುದು ಅಂದರೆ ಅದೆಲ್ಲ ಬೇಡ ಸುಮ್ಮನೆ ದುಡ್ಡು ಹಾಳು ಅನ್ನುವ ನಿನ್ನ ಮಾತಿಗೆ ನನ್ನ ಮನ ಚುರುಗುಡುತ್ತೆ. ಈ ಮಗನಿಂದ ನೀವೆನನ್ನೂ ನೀರೀಕ್ಷಿಸಲೇ ಇಲ್ಲ, ನನ್ನ ಖುಷಿಯೊಂದೇ ಸಾಕೇ..? ಬೇರೆನೂ ಬೇಡವೇ ನಿಮಗೆ..?ನನಗೆ ನೀವು ಇದುವರೆಗೂ ಯಾವುದಕ್ಕೂ ಕಡಿಮೆ ಮಾಡಿಲ್ಲ.ಹಟ ಮಾಡಿದಾಗೆಲ್ಲ ಬಯ್ಯುತ್ತ ಎಲ್ಲವನ್ನೂ ಕೊಡಿಸಿದ್ದೀರ. ನಿಮಗೆ ಒಂದೆರಡು ತುತ್ತು ಕಡಿಮೆಯಾದರೂ ನನಗೆ ಮೃಷ್ಟಾನ್ನವನ್ನೇ ನೀಡಿದ್ದೀರ. ನಿಮಗೆ ಹೊಸ ಬಟ್ಟೆಯಿಲ್ಲದಿದ್ದರೂ ನನಗಾಗಿ ಯಾವಾಗಲೂ ಚಂದದ ಉಡುಪನ್ನೇ ಹೊಲಿಸಿದ್ದೀರ. ಹುಟ್ಟುಹಬ್ಬವನ್ನ ಜೋರಾಗಿ ಆಚರಿಸದಿದ್ದರೂ ಅಮ್ಮಾ ನೀ ಮಾಡುವ ಪಾಯಸದ ರುಚಿ ಮರೆಯುವಂತಿಲ್ಲ. ಎಷ್ಟೇ ಬಡತನವಿದ್ದರೂ ನೀವೆಂದಿಗೂ ನಿಮ್ಮ ನಿಷ್ಠೆ, ಕರ್ತ್ಯವ್ಯ, ಪ್ರಾಮಾಣಿಕತೆ, ಸ್ವಾಭಿಮಾನವನ್ನ ಮರೆತಿಲ್ಲ. ನಿಜಕ್ಕೂ ನಿಮ್ಮಂಥವರ ಮಗನಾಗಿ ಹುಟ್ಟಿದ ನನ್ನ ಬಾಳು ಧನ್ಯ. ಪ್ರತಿ ಜನ್ಮದಲ್ಲೂ ನಿಮ್ಮ ಮಗನಾಗೇ ಹುಟ್ಟಿ ನಿಮ್ಮ ಋಣವನ್ನ ತೀರಿಸುವ ಭಾಗ್ಯ ನನ್ನದಾಗಲಿ ಅನ್ನುವುದಷ್ಟೇ ಆ ಭವವಂತನಲ್ಲಿ ನನ್ನ ಕೋರಿಕೆ.

ನಿಮಗೆ ಹೋಲಿಸಿದರೆ ನಾನೀಗಲೇ ಮುದುಕನಾಗಿದ್ದೇನೆ ಅನಿಸುತ್ತದೆ.ಬೆನ್ನು ನೊವು ಅದು ಇದು ಅಂತ ಈಗಲೇ ಕೊರಗು ಶುರುವಾಗಿದೆ.ಒಮ್ಮೊಮ್ಮೆ ಎಂಟಕ್ಕೆಲ್ಲಾ ಎದ್ದಾಗ ನೀವು ಐದಕ್ಕೇ ಎದ್ದು ದಿನವಿಡೀ ಕೆಲಸ ಮಾಡುವ ನಿಮ್ಮ ಉತ್ಸಾಹ ನಾಚಿಸುತ್ತದೆ. ನಿಮ್ಮಲ್ಲಿರುವ ಕೆಲಸ ಮಾಡುವ ಸಾಮರ್ಥ್ಯ, ಹುರುಪು, ಆಶಾವಾದ ನನ್ನಲ್ಲಿಲ್ಲ. ಬಿಸಿಲಿಗೆ ಕಾಯಲಿಲ್ಲ ನಿಮ್ಮ ದೇಹ, ಮಳೆ ಗಾಳಿಗೆ ಮುದುಡಲಿಲ್ಲ. ನಿಮ್ಮ ಸಹನಶೀಲತೆಗೆ ಸರಿಸಾಟಿಯಾವುದಿಲ್ಲ.ನನ್ನ ಕೂದಲುಗಳೋ ಈಗಲೇ ಬೆಳ್ಳಗಾಗತೊಡಗಿದೆ.ಇನ್ನಾದರೂ ನಾವೆಲ್ಲ ಒಟ್ಟಿಗೆ ಇರಬೇಕು, ಮನೆಯಲ್ಲಿ ನಿಮ್ಮನ್ನ ರಾಜ-ರಾಣಿಯರಂತೆ ನೋಡಿಕೊಳ್ಳಬೇಕು, ನಿಮ್ಮ ಆಸೆಯನ್ನೆಲ್ಲ ಪೂರೈಸಬೇಕು(ಮಗನ ಸುಖ ಬಿಟ್ಟು ನಿಮಗೆ ಬೇರೆನೂ ಆಸೆಗಳಿಲ್ಲ ಬಹುತೇಕ) ಅನ್ನುವ ಆಸೆ ನನಗೂ ಇದೆ. ಆದರೆ ಸಿಗುವ ಸಂಬಳ, ಮನೆಯ ಸಾಲದ ಕಂತು, ಪೆಟ್ರೋಲ್ ಮೋಬೈಲ್ ಅದು ಇದು ಅಂತ ಈ ಷಹರದ ಜೀವನದಲ್ಲಿ ಉಳಿತಾಯ ಶೂನ್ಯ. ನಿನ್ನ ಜೀವನ ಮೊದಲು ಸರಿಯಾಗಲಿ ಆಮೇಲೆ ನಾವು ನಿನ್ನ ಜೋತೆ ಬಂದುಳಿಯುತ್ತೇವೆ ಅನ್ನುವ ನಿಮ್ಮ ಮಾತಿಗೆ ಕಣ್ತುಂಬಿ ಬರುತ್ತದೆ. ನನಗಿಷ್ಟು ವಯಸ್ಸಾಗಿದ್ದರೂ ಇನ್ನೂ ನಿಮ್ಮನ್ನ ಸುಖವಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಅಂದರೆ ಇದೆಂಥಹ ಜೀವನ ನನ್ನದು, ಬದುಕಿದ್ದೂ ವ್ಯರ್ಥ ಅನಿಸುತ್ತದೆ ಒಮ್ಮೊಮ್ಮೆ.
ನಾನು ಚಿಕ್ಕವನಿದ್ದಾಗ ನೀವು ಪಡುತ್ತಿದ್ದ ಕಷ್ಟಗಳು ತಿಳಿಯುತ್ತಿರಲಿಲ್ಲ.ಆದರೆ ಈಗ ಸ್ವಂತ ಕಾಲ ಮೇಲೆ ನಿಂತಾಗ, ಜೀವನದ ಏಳು-ಬೀಳುಗಳ ಪೆಟ್ಟು ತಿಂದಾಗ ಅದರ ಅರಿವಾಗುತ್ತಿದೆ.ನಾವು ದುಡಿದು ತಿಂದಾಗಲೇ ಅದರ ಬೆಲೆ ತಿಳಿಯುವುದು, ಅದರಲ್ಲಿ ಸಿಗುವ ಸುಖವೇ ಬೇರೆ.ಮೊದಲೆಲ್ಲ ಹೇಗೆ ಬೇಕೊ ಹಾಗೆಖರ್ಚು ಮಾಡುತ್ತಿದ್ದವನು ಈಗ ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಿದ್ದೇನೆ.
ಅಮ್ಮಾ...ಮಗನೇ ಈಗ ಬುದ್ದಿ ಬಂತಾ ಅಂತ ನಗುತ್ತಿದ್ದೀಯಾ..??
ಅಪ್ಪಾ... ನಿಮಗೂ ಖುಷಿಯಾಗಿರಬೇಕಲ್ಲ.. ಮಗ ತನ್ನ ಕಾಲ ಮೇಲೆ ನಿಂತಿದ್ದಾನೆ ಅಂತ. ಸಿಟಿಯಲ್ಲಿ ಮಗ ಮನೆ ತಗೊಂಡಿದ್ದಾನೆಂದು ಊರೆಲ್ಲ ಖುಷಿಯಿಂದ ಸಾರಿದ್ದೀರ ಅಂತ ನನಗೆ ಗೊತ್ತು.ಬಹಳ ಹೆಮ್ಮೆ ಪಡುವ ಕೆಲಸ ಮಾಡದಿದ್ದರೂ ನಿಮ್ಮ ಹೆಸರಿಗೆ ಚ್ಯುತಿ ಬರುವ ಕೆಲಸವನ್ನ ನಾನೆಂದೂ ಮಾಡುವುದಿಲ್ಲ ಎಂದಷ್ಟೇ ಹೇಳಬಲ್ಲೆ.ನಾ ಕಂಡ ಪ್ರತ್ಯಕ್ಷ ದೈವ ನೀವು. ನಿಮ್ಮ ಮುಖದಲ್ಲಿ ಸದಾ ನಗುವನ್ನ ನೋಡಬಯಸುತ್ತೇನೆ ಅಷ್ಟೆ.

ಹೃದಯ ಮಿಡಿಯುತ್ತಿದೆ
ಕಣ್ಗಳು ತುಂಬಿ ಬಂದಿದೆ,
ಕೈಗಳು ನಡುಗುತ್ತಿದೆ
ಶಬ್ದಗಳು ಆರತೊಡಗಿವೆ.

ಒಂದೆರಡು ಕಣ್ಣ ಹನಿಗಳು ಹಾಳೆಯನ್ನ ಹಸಿಯಾಗಿಸಿವೆ,
ತೊಯ್ದು ಮುದ್ದೆಯಾಗಿಸುವ ಮೊದಲು ಮುಗಿಸುತ್ತಿದ್ದೇನೆ.


ಇಂತಿ ನಿಮ್ಮ ಮುದ್ದಿನ ಕಣ್ಮಣಿ.

ಹನಿ ಹನಿ 13:

ಹೆಂಡತಿ v/s ಅಮ್ಮ



ಅಮ್ಮನ ಗುಳಿಗೆ ಮರೆತುಬಂದ ಮಗ,
ಹೆಂಡತಿಗೆ ನೆನಪಿಂದ ಮಲ್ಲಿಗೆ ತಂದಿದ್ದ.

ಹೆಂಡತಿಯ ಜೊತೆಗೆ ಅಮೇರಿಕ ತಿರುಗಿದ್ದ,
ಆದರೆ ಅಮ್ಮನ ಕಾಶೀಯಾತ್ರೆಗೆ ದುಡ್ಡಿರಲಿಲ್ಲ.

ಅಮ್ಮನ ಮಡಿಲಲ್ಲಿ ಬೆಳೆದವನಿಗೆ,
ಸುಖ ಸಿಕ್ಕಿದ್ದು ಹೆಂಡತಿಯ ಮಡಿಲಲ್ಲಿ.

ಹೆಂಡತಿಯ ಕೈ ಕೊಯ್ದರೆ ಸಂಕಟ,
ಅಮ್ಮ ರಾತ್ರಿ ಕೆಮ್ಮಿದರೆ ಕಿರಿಕಿರಿ.

ಹೆಂಡತಿ ನೀಡಿದ್ದು ಪ್ರೀತಿ,
ಅಮ್ಮ ಬೆಳೆಸಿದ್ದು ಕರ್ತವ್ಯ.

ಹೆಂಡತಿಯ ತಟ್ಟೆಯೂಟದೆದುರು, 
ಅಮ್ಮನ ಕೈತುತ್ತು ರುಚಿಸದಾಗಿದೆ.




ನಿನಗೆನಾದರೂ ನಾ ಬದುಕುವುದಿಲ್ಲವೆಂಬ ಹೆಂಡತಿ,
ನಿನಗೇನೂ ಆಗಲು ಬಿಡುವುದಿಲ್ಲವೆಂಬ ತಾಯಿ.

ಕೈ ಕೊಯ್ದಾಗ
ಬ್ಯಾಂಡೇಜ್ ತರಲು ಹೆಂಡತಿಯೋಡಿದರೆ,
ಅಮ್ಮ ಹರಿದದ್ದು ಸೀರೆಯ ಸೆರಗು.

ಗೆಲುವಿಗೆ
ಹೆಂಡತಿ ಖುಷಿಪಟ್ಟರೆ,
ಅಮ್ಮನ ಕಣ್ಣಲ್ಲಿ ನೀರು.

ಆಸೆ ಹೆಂಡತಿಯ ಸೆರಗಲ್ಲಿ,
ಸುಖ ಅಮ್ಮನ ಮಡಿಲಲ್ಲಿ.

ಹೆಂಡತಿ ಮನೆಯಲ್ಲಿ,
ಅಮ್ಮ ಹೃದಯದಲ್ಲಿ.

ಮಡದಿಯೆಂದರೆ ಸುಖ,
ಅಮ್ಮ ಎಂದರೆ ಸ್ವರ್ಗ. 
 

ಪ್ರೇಮ ಪತ್ರ:

ನವೀನ ಮೇಘನಳ ಪರಿಚಯ ಸುಮಾರು ಆರೇಳು ವರ್ಷಗಳಷ್ಟು ಹಳೆಯದು. ಕಾಲೇಜಿನಿಂದ ಹಿಡಿದು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು ಇಬ್ಬರು ಜೊತೆಗಿದ್ದು. ನಿಷ್ಕಲ್ಮಶ ಸ್ನೇಹ ಇಬ್ಬರದು. ಇವರಿಬ್ಬರ ಸ್ನೇಹ ನೋಡಿ ಅಸೂಯೆಪಡದವರಿಲ್ಲ. ನಸುಗೆಂಪು ಬಣ್ಣದ ಉತ್ತಮ ಮೈಕಟ್ಟಿನ ಮಧ್ಯಮ ವರ್ಗದ ಸೀದಾ ಸಾದಾ ಹುಡುಗ ನವೀನ, ಹಾಲ್ಗೆನ್ನೆಯ ಎಲ್ಲರ ನೋಟವನ್ನ ಒಮ್ಮೆಲೇ ತನ್ನೆಡೆಗೆ ಸೆಳೆಯುವ ಶ್ರೀಮಂತರ ಮನೆಯ ಹುಡುಗಿ ಮೇಘನ, ಆದರೂ ಮನೆಯ ಶ್ರೀಮಂತಿಕೆ ಅವಳ ಸ್ವಭಾವದಲ್ಲಿರಲಿಲ್ಲ, ಬಹುಷಃ ಇದೆ ಕಾರಣವಿರಬೇಕು ಇವರಿಬ್ಬರ ಸ್ನೇಹ ಇಷ್ಟು ಗಟ್ಟಿಯಾಗಿರಲು. ಕಾಲೇಜಿನ ಪ್ರಾರಂಭದ ದಿನದಲ್ಲೇ ಇವರ ಪರಿಚಯವಾಗಿತ್ತು. ಶಾಂತ ಸ್ವಭಾವದ ತಾನಾಯಿತು ತನ್ನ ಕೆಲಸವಾಯಿತು ಅಂತ ಇರುತ್ತಿದ್ದ ನವೀನನ ಈ ಸ್ವಭಾವವೇ ಮೇಘನಳನ್ನ ತುಂಬಾ ಆಕರ್ಷಿಸಿತ್ತು. ಎಷ್ಟೋ ಹುಡುಗರು ಇವಳ ಸ್ನೇಹ ಬಯಸಿದರಾದರೂ ಮೇಘನ ಸ್ನೇಹ ಮಾಡಿದ್ದು ನವೀನನ ಜೊತೆ. ಹೀಗಾಗಿ ಇವರ ಸ್ನೇಹ ನೋಡಿ ಹೊಟ್ಟೆ ಉರಿದುಕೊಂಡವರು ಅದೆಷ್ಟೋ ಜನ. ಕಾಲೇಜಿನ ದಿನಗಳು ತುಂಬಾ ಸಲುಗೆಯಿಂದ ಮುಗಿದಿದ್ದವು. ಇಬ್ಬರಿಗೂ ಒಳ್ಳೆ ಕೆಲಸ ಕೂಡ ಸಿಕ್ಕಿತು. ಇವರಿಬ್ಬರ ಸ್ನೇಹ ಇನ್ನೂ ಹಾಗೆ ಉಳಿದಿತ್ತು. ವಾರಕ್ಕೆ ಒಂದೆರಡು ಬಾರಿಯಾದರೂ ಸಿಕ್ಕು ತಾಸಂತಾಸು ಹರಟುತ್ತಿದ್ದರು. ಇವರನ್ನು ನೋಡಿದವರೆಲ್ಲ ಇವರಿಬ್ಬರೂ ಪ್ರೇಮಿಗಳು ಅಂದುಕೊಳ್ಳುತ್ತಿದ್ದರು, ಆದರೆ ಎಂದೂ ನವೀನ ಮತ್ತು ಮೇಘನಳ ನಡುವೆ ಪ್ರೀತಿಯ ವಿಷಯ ಬಂದಿರಲಿಲ್ಲ. ಆಗೀಗ ಮೇಘನಳೇ ತಮಾಷೆಗೆ ನವೀನಳನ್ನ ಪೀಡಿಸುತ್ತಿದ್ದಳೇ ಹೊರತು ನವೀನ ಎಂದೂ ಪ್ರೀತಿಯ ವಿಷಯವಾಗಿ ಮಾತಾಡುತ್ತಿರಲಿಲ್ಲ.

ಮೇಘನಳ ಕುಟುಂಬವೆಲ್ಲ ಬೆಂಗಳೂರಿನಲ್ಲೇ ಇತ್ತು. ತಂದೆ ಒಳ್ಳೆ ಉದ್ಯಮಿ, ತಾಯಿ ಗೃಹಿಣಿಯಾಗಿ ತಂದೆಯ ಕೆಲಸದಲ್ಲೂ ಸ್ವಲ್ಪ ಮಟ್ಟಿಗೆ ನೆರವಾಗುತ್ತಿದ್ದರು. ಎಷ್ಟೇ ಸಿರಿತನವಿದ್ದರೂ ಮಗಳನ್ನ ಹೇಗೆ ಬೇಕೋ ಹಾಗೆ ಬೆಳೆಸದೆ ಉತ್ತಮ ಸಂಸ್ಕಾರ ನೀಡಿದ್ದರು. ಇನ್ನು ನವೀನನ ಕುಟುಂಬವೆಲ್ಲ ಇದ್ದದ್ದು ಕಾರವಾರ ಸಮೀಪದ ಹಳ್ಳಿಯಲ್ಲಿ. ಅಲ್ಲೇ ಸ್ವಲ್ಪ ಸ್ವಂತದ ಜಮೀನು ಇದ್ದರಿಂದ ತಂದೆ ತಾಯಂದರಿಬ್ಬರೂ ಅಲ್ಲೇ ಇದ್ದರು. ನವೀನ ಊರಿಗೆ ಬರುತ್ತಿದ್ದದ್ದು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ. ಇತ್ತೇಚೆಗೆ ನವೀನನ ತಾಯಿಯ ಆರೋಗ್ಯವೂ ಸರಿ ಇರಲಿಲ್ಲ, ಆದಷ್ಟು ಬೇಗ ಮಗನ ಮದುವೆ ವಿಚಾರವಾಗಿ ಮಗನಲ್ಲಿ ಮಾತಾಡಿದ್ದರು. ಮುಂದಿನ ಸಲ ಊರಿಗೆ ಬಂದಾಗ ಈ ವಿಚಾರ ಮಾತಾಡೋಣ ಅಂತ ವಿಷಯವನ್ನ ಅಲ್ಲಿಗೇ ನಿಲ್ಲಿಸಿದ್ದ ನವೀನ.

ಕಳೆದ ಕೆಲ ತಿಂಗಳಿನಲ್ಲಿ ಮೇಘನ ಸ್ವಲ್ಪ ಡಲ್ ಆಗಿದ್ದಳು, ಆರೋಗ್ಯವೂ ಸ್ವಲ್ಪ ಹದಗೆಟ್ಟಿತ್ತು. ಏನೆಂದು ನವೀನ ವಿಚಾರಿಸಿದರೆ ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದಳು. ಇವರ ನಡುವಿನ ಒಡನಾಟವೂ ಸ್ವಲ್ಪ ಕಡಿಮೆಯಾಗಿತ್ತು. ನವೀನನಿಗೋ ಏನೋ ಕಳೆದುಕೊಂಡ ಭಾಸವಾಗುತ್ತಿತ್ತು. ಕೆಲಸದ ಒತ್ತಡದ ನಡುವೆ ಊರಿಗೆ ಹೋಗಲು ಆಗಿರದೆ ಸುಮಾರು ಒಂದು ವರ್ಷದ ನಂತರ ಮತ್ತೆ ಊರಿಗೆ ಹೊರಟಿದ್ದ ನವೀನ. ಹೋಗುವ ಮೊದಲ ದಿನ ಹುಷಾರಿಲ್ಲದಿದ್ದರೂ ಮೇಘನ ಇವನನ್ನ ಸಿಗಲು ಬಂದಿದ್ದಳು, ಇಬ್ಬರೂ ಒಟ್ಟಿಗೆ ಸುಮಾರು ತಾಸುಗಟ್ಟಲೆ ಹರಟಿದರು. ಮೇಘನ ತನ್ನದೇ ಚಿಂತೆಯಲ್ಲಿ ಇದ್ದದ್ದನ್ನ ಗಮನಿಸಿದ ನವೀನ ಏನಾಯ್ತು ತುಂಬಾ ಚಿಂತೆಯಲ್ಲಿದ್ದೀಯ ಎಂದ. ಏನಿಲ್ಲ ನವೀನ್ ನೀನು ಊರಿಗೆ ಹೊರಟಿದ್ದೀಯ ಬರೋಕೆ ಹದಿನೈದು ದಿನ ಆಗುತ್ತೆ ಅಂತಾ ಇದೀಯ ನನಗ್ಯಾಕೋ ಮತ್ತೆ ನಾವಿಬ್ಬರು ಸಿಗ್ತೀವಿ ಅಂತ ಅನಿಸ್ತ ಇಲ್ಲ ಕಣೋ, ಯಾಕೆ ಅಂತ ಗೊತ್ತಾಗ್ತಾ ಇಲ್ಲ ಅಂತ ಅಂದಳು. ಸಾಕು ತಮಾಷೆ ಮಾಡಿದ್ದು ನಡೀ ನಾನಿನ್ನು ಬರ್ತೀನಿ ಇನ್ನೂ ಬ್ಯಾಗ್ ತುಂಬಾಗಿಲ್ಲ, ಕೆಲಸ ಬೇಕಷ್ಟಿದೆ ಮತ್ತೆ ಸಿಗೋಣ ಇನ್ನೊಂದು ವಿಷಯ ನಮ್ಮೂರಲ್ಲಿ ಮೊಬೈಲ್ ರೇಂಜ್ ಇಲ್ಲ ಹಾಗಾಗಿ ನೋ ಕಾಲ್, ನೋ ಮೆಸೇಜ್ ಅಂತ ಬೇಸರದಿಂದ ನುಡಿದು ಬೈ ಅಂದು ಹೊರಟ. ಮೇಘನ ತುಸು ನಗುತ್ತ ಬೈ ಅಂದಿದ್ದಳು, ಅವಳ ಮುಖದ ನಗು ಕೇವಲ ಕಾಲ್ಪನಿಕವಾಗಿತ್ತು.

ಒಂದು ವರ್ಷದ ನಂತರ ಮಗ ಊರಿಗೆ ಬಂದಿದ್ದ, ಅಮ್ಮನಿಗೋ ಎಲ್ಲಿಲ್ಲದ ಖುಷಿ. ಮೈ ಸರಿಯಾಗಿ ಹುಷಾರಿಲ್ಲದಿದ್ದರೂ ದಿನಕ್ಕೊಂದು ಅವನಿಗಿಷ್ಟವಾದ ತಿಂಡಿ ತಿನಿಸುಗಳನ್ನ ಮಾಡುತ್ತಿದ್ದರು. ಅಪ್ಪ ಮಗನ ಕೆಲಸದ ಬಗ್ಗೆ ಆರೋಗ್ಯದ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದರು. ಹೀಗೆ ಅಪ್ಪ ಅಮ್ಮನ ಪ್ರೀತಿ, ಊರಿನ ಗೆಳೆಯರ ಜೊತೆ ನಲಿದಾಟ, ಬೆಟ್ಟ ಗುಡ್ಡ ಸುತ್ತಾಟ ಅನ್ನುತ್ತ ಏಳೆಂಟು ದಿನ ಕಳೆಯಿತು. ಈ ನಡುವೆ ಮೆಘನಳ ಜೊತೆ ಮಾತಿಲ್ಲದೆ, ಮೆಸೇಜ್ ಇಲ್ಲದೆ ಏನೋ ಕಳೆದುಕೊಂಡಂತಾಗಿತ್ತು ನವೀನನಿಗೆ. ಒಂದು ದಿನ ಹೀಗೆ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದಾಗ ಅಮ್ಮ ಮದುವೆ ವಿಷಯ ತೆಗೆದರು. ಅಪ್ಪ ತಕ್ಷಣ ಅಲ್ಲಿ ಯಾರನ್ನಾದರೂ ಪ್ರೀತಿ ಗೀತಿ ಅಂತ ಏನಾದ್ರೂ ಇದ್ರೆ ಹೇಳು, ನೀವೆಲ್ಲ ಈಗಿನ ಕಾಲದ ಹುಡುಗರು ಪ್ರೀತಿ ಮಾಡ್ತೀರ ನಾವು ಒಪ್ಪಿಲ್ಲ ಅಂದ್ರೆ ಓಡಿ ಹೋಗೋದೋ ಅಥವಾ ಆತ್ಮಹತ್ಯೆ ಅಂತೆಲ್ಲ ಯೋಚಿಸ್ತೀರ ಅದೆಲ್ಲ ಬೇಡ, ಹಾಗೇನಾದರೂ ಇದ್ರೆ ನಿಸ್ಸಂಕೋಚವಾಗಿ ಹೇಳು ಅಂದರು. ನವೀನ ಹಾಗೇನಿಲ್ಲ ಅಪ್ಪ ಆದರೆ.. ಅನ್ನುತ್ತ ತನ್ನ ಮತ್ತು ಮೆಘನಳ ಬಗ್ಗೆ ಎಲ್ಲ ವಿಷಯವನ್ನ ಹೇಳಿದ. ನಮಗೆ ಯಾವತ್ತೂ ನಾವು ಪ್ರೇಮಿಗಳು ಅಂತ ಅನಿಸಲಿಲ್ಲ ಆದರೆ ನಮಗ್ಯಾಕೋ ಒಬ್ಬರಿಗೊಬ್ಬರನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲಾ. ಇದು ಸ್ನೇಹಾನ ಪ್ರಿತೀನ ಅಂತ ಗೊತ್ತಾಗ್ತಾ ಇಲ್ಲ ಅಂತ ಎಲ್ಲವನ್ನೂ ಬಿಡಿಸಿ ಹೇಳಿದ. ಎಲ್ಲ ಮಾತನ್ನ ಕೇಳಿದ ಅಮ್ಮ ಇದು ನಿಜಕ್ಕೂ ಪ್ರಿತಿನೇ ನೀನು ಅವಳನ್ನ ಪ್ರೀತಿಸ್ತಾ ಇದೀಯ ಅವಳಿಗೆ ಈ ವಿಷಯ ಹೇಳು, ಅವಳೂ ನಿನ್ನ ಪ್ರೀತಿಸ್ತ ಇದಾಳೆ. ಒಳ್ಳೆ ಮನೆತನದವಳು ಅಂತಾ ಇದ್ದೀಯ ನಾವು ಮುಂದೆ ನಿಂತು ನಿಮ್ಮ ಮದುವೆ ಮಾಡಿಸ್ತೀವಿ. ಆದಷ್ಟು ಬೇಗ ನಿರ್ಧಾರ ಮಾಡಪ್ಪಾ, ನಾನು ಇರೋದ್ರೊಳಗೆ ನಿನ್ನ ಮದುವೆ ಆಗಬೇಕು ಅನ್ನೋದೇ ನನ್ನ ಆಸೆ ಅಂತ ಅಂದಿದ್ದನ್ನ ಕೇಳಿ ನವೀನ ಯಾಕಮ್ಮ ಹಾಗೆಲ್ಲ ಮಾತಾಡ್ತೀಯ? ಬೆಂಗಳೂರಿಗೆ ಹೋದ ಕೂಡಲೇ ಅವಳ ಹತ್ರ ಮಾತಾಡ್ತೀನಿ ಅಂತ ನಾಚುತ್ತಲೇ ನುಡಿದ. ನವೀನನಿಗೂ ಅನಿಸಿತ್ತು ನಾನು ಮೆಘನಳನ್ನ ಪ್ರೀತಿಸ್ತಾ ಇದ್ದೇನೆ, ಅವಳೂ ನನ್ನ ಪ್ರೀತಿಸ್ತಾ ಇದಾಳೆ. ಅವಳು ಕೆಲವು ಬಾರಿ ತನ್ನ ಪ್ರಿತಿಯನ್ನ ಹೇಳೋ ಪ್ರಯತ್ನ ಮಾಡಿದಾಳೆ, ಆದರೆ ನಾನೇ ಅದನ್ನ ಅರ್ಥ ಮಾಡಿಕೊಂಡಿಲ್ಲ ಅಷ್ಟೇ. ನಿಜ ನಿಜ.. ಇದೆಲ್ಲ ಪ್ರಿತಿನೆ. ಇದನ್ನ ಅವಳಿಗೆ ಹೇಳೋದು ಹೇಗೆ? ಫೋನ್ ಮಾಡಲಾ? ಮೆಸೇಜ್ ಮಾಡಲಾ? ಬೇಡ ಬೇಡ "ಪ್ರೇಮ ಪತ್ರ" ಹಮ್ ಇದೆ ಸರಿ.. ಒಂದು ಲವ್ ಲೆಟರ್ ಬರೆದು ಅವಳ ಕೈಗೆ ಕೊಡ್ತೀನಿ.ಅಂತ ಯೋಚಿಸಿ. ಒಂದು ಲವ್ ಲೆಟರ್ ಕೂಡ ತಯಾರು ಮಾಡಿಕೊಂಡು ಮತ್ತೆ ಬೆಂಗಳೂರಿನ ಕಡೆ ಹೊರಟಿದ್ದ ನವೀನ.

ರಾತ್ರಿ ಊರು ಬಿಟ್ಟಿದ್ದ ನವೀನ ಬೆಂಗಳೂರು ಸೇರಿದ್ದು ಬೆಳಿಗ್ಗೆ ಐದಕ್ಕೆ. ಮಧ್ಯದಲ್ಲೇ ಮೊಬೈಲ್ ಸಿಗ್ನಲ್ ಬಂದಾಗ ತಾನು ಬರುತ್ತಿರುವ ವಿಷಯವನ್ನ ಮೇಘನಳಿಗೆ ಮೆಸೇಜ್ ಮಾಡಿದ್ದ. ಬೆಂಗಳೂರು ಸೇರಿದವನೇ ರೂಮಿಗೆ ಹೋಗಿ ಫ್ರೆಶ್ ಆಗಿ ತಯಾರಾದ. ನಿನ್ನೆಯಿಂದಲೂ ನವೀನನ ಮನದಲ್ಲಿ ಏನೋ ಒಂಥರಾ ದುಗುಡ, ಭಯ. ಬೆಳಿಗ್ಗೆಯ ಏಳಾಗಿತ್ತು ಮೆಘನಳಿಂದ ಉತ್ತರವೇನೂ ಬಂದಿರಲಿಲ್ಲ. ಮೆಘನಳಿಗೆ ಫೋನಾಯಿಸಿದ, ಕೈ ನಡುಗುತ್ತಿತ್ತು. ಫೋನ್ ಸ್ವಿಚ್ ಆಫ್ ಆಗಿತ್ತು. ಸುಮಾರು ಹತ್ತು ಘಂಟೆಯ ವರೆಗೆ ಫೋನ್ ಮಾಡಿ ಸುಸ್ತಾಗಿ ಏನೂ ತಿಳಿಯದಂತಾಗಿ ಕುಳಿತಿದ್ದ.  ಕೆಲವು ಬಾರಿ ನವೀನ ಮೆಘನಳ ಮನೆಗೂ ಹೋಗಿಬಂದಿದ್ದರಿಂದ ಅವರ ಮನೆಯವರ ಪರಿಚಯವಾಗಿತ್ತು, ಹಾಗಾಗಿ ಸೀದಾ ಅವಳ ಮನೆಗೇ ಹೊರಟ. ಮನೆಯ ಬಾಗಿಲು ಹಾಕಿತ್ತು ಕಾಲಿಂಗ್ ಬೆಲ್ ಬಾರಿಸಿದ, ಕೆಲ ಕ್ಷಣದಲ್ಲಿ ಬಾಗಿಲು ತೆರೆಯಿತು. ಎದುರಿಗಿದ್ದದ್ದು ಮೆಘನಳ ಅಮ್ಮ. ಬಾ ನವೀನ ಎನ್ನುತ್ತಾ ಒಳಗೆ ಕರೆದರು ಅಮ್ಮ. ಒಳಗೆ ನಡೆಯುತ್ತಲೇ ನಿನ್ನೆಯಿಂದ ಮೆಘನಳ ಫೋನ್ ಟ್ರೈ ಮಾಡ್ತಾ ಇದ್ದೆ, ಸ್ವಿಚ್ ಆಫ್ ಬರ್ತಾ ಇದೆ ಅಂದ. ಇನ್ನೆಂದೂ ಅವಳ ಫೋನ್ ಆನ್ ಆಗುವುದಿಲ್ಲ ಅನ್ನುವ ಅಮ್ಮನ ಮಾತು ಅರ್ಥವಾಗದೆ, ನೀವೇನು ಹೇಳ್ತಾ ಇದ್ದೀರಾ ಅಂತ ಅರ್ಥ ಆಗ್ತಾ ಇಲ್ಲ ಅಂದ. ಬಾರಪ್ಪ ಎಲ್ಲ ಹೇಳ್ತೀನಿ ಅಂತ ಅವಳ ರೂಮಿಗೆ ಕರೆದುಕೊಂಡು ಹೋದರು. ರೂಮಿಗೆ ಕಾಲಿಡುತ್ತಿದ್ದಂತೆ ಎದುರಿಗೆ ಮುಗುಳ್ನಗುತ್ತಿರುವ ಮೇಘನ… ಅವಳ ಫೋಟೊಕ್ಕೊಂದು ಗಂಧದ ಹಾರ ನೋಡಿ ಒಮ್ಮೆಲೇ ದಂಗು ಬಡಿದಂತವನಾಗಿ ಹಾಗೆಯೇ ನಿಂತ. ಕೆಲ ಕ್ಷಣ ಅವನಿಗೆ ಏನೂ ತೋಚಲಿಲ್ಲ, ಅರಿವಿಲ್ಲದಂತೆಯೇ ಕಣ್ಣುಗಳು ತುಂಬಿದ್ದವು. ಸ್ವಲ್ಪ ಸಮಯದ ನಂತರ ಅಮ್ಮ ಬಾರಪ್ಪ ಕೂತ್ಕೋ ಅಂತ ಅಲುಗಾಡಿಸಿದಾಗ ವಾಸ್ತವಕ್ಕೆ ಬಂದಿದ್ದ. ಇದೆಲ್ಲ ಏನು ಅಂದಾಗ ಅಮ್ಮ ಮೇಘನಳ ಲೆಟರ್ ಒಂದನ್ನ ಅವನ ಕೈಗಿತ್ತು ಇದರಲ್ಲಿ ಎಲ್ಲ ಇದೆ ಓದಪ್ಪ ಎಂದರು.

"ಹಾಯ್ ನವೀನ, ನೀನು ಈ ಪತ್ರ ಓದುವಾಗ ನಾನು ನಿನ್ನ ಬಿಟ್ಟು ತುಂಬಾ ದೂರ ಹೋಗಿರುತ್ತೇನೆ. ನಿನ್ನ ಕೈಗೆ ಸಿಗದಷ್ಟು ದೂರ. ನಿನ್ನ ಬಿಟ್ಟು ಹೋಗೋ ಮನಸ್ಸಿಲ್ಲ ನನಗೆ ಆದರೆ ಈ ಹಾಳು ರೋಗ ನಿನ್ನಿಂದ ನನ್ನನ್ನ ದೂರ ಮಾಡ್ತಾ ಇದೆ. ಹೋದು ಕಣೋ ನಾನು ಕಳೆದ ಐದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಾ ಇದ್ದೆ. ಈ ವಿಷಯ ನಿನ್ನ ಹತ್ರ ಹೇಳಬೇಕು ಅಂತ ತುಂಬಾ ಪ್ರಯತ್ನ ಪಟ್ಟೆ ಆದರೆ ನಿನ್ನ ಸ್ನೇಹ, ಪ್ರೀತಿ ಅದಕ್ಕೆ ಅವಕಾಶಾನೇ ನೀಡಿಲ್ಲ. ನಿಜ ತಾನೇ?? ನಿನ್ನ ಸಲುಗೆ ಬರೀ ಸ್ನೇಹವಲ್ಲ ಅದು ಪ್ರಿತಿಯಾಗಿತ್ತು. ಹೌದು ಕಣೋ ನಾನು ನಿನ್ನ ತುಂಬಾ ಪ್ರೀತಿಸ್ತಾ ಇದೀನಿ. ಆದರೆ ನಿನ್ನ ಹತ್ರ ಹೇಳಿಕೊಳ್ಳೋ ಹಾಗೆ ಇರಲಿಲ್ಲ ನನ್ನ ಪರಿಸ್ಥಿತಿ. ಏನು ಮಾಡೋದು ನಿನ್ನನ್ನ ಪ್ರೀತಿಸಿ ಅರ್ಧಕ್ಕೆ ಬಿಟ್ಟು ಹೋಗೋ ಮನಸ್ಸು ಇರಲಿಲ್ಲ ನಂಗೆ. ನಿನ್ನ ಜೊತೆ ಹಾಯಾಗಿ ಬಾಳಬೇಕು, ನನ್ನ ಪ್ರಿತಿಯನ್ನೆಲ್ಲ ಧಾರೆಯೆರೆಯಬೇಕು ಅಂತೆಲ್ಲ ಕನಸು ಕಾಣುವಾಗ ಕೂಡ ಹೆದರಿದ್ದೆ. ಸುಮಾರು ಏಳು ವರ್ಷಗಳ ಸ್ನೇಹ ಇಂದಿಗೆ ಮುಗಿತಾ ಇದೆ. ನನ್ನ ಬಾಳಿನಲ್ಲಿ ನನಗೆ ಸಿಕ್ಕ ಅತ್ಯಮೂಲ್ಯ ಕಾಣಿಕೆ ನೀನು. ನಿನ್ನ ಸ್ನೇಹ, ಪ್ರೀತಿಯ ನೆನಪುಗಳನ್ನ ಹೊತ್ತು ನಿನ್ನಿಂದ ದೂರ ಸಾಗುತ್ತಿದ್ದೇನೆ. ನನಗಿದ್ದ ಈ ರೋಗವನ್ನ ಮರೆಸಿ ನಗುನಗುತ್ತ ಬಾಳಲು ತೋರಿದ ನಿನ್ನ ಸ್ನೇಹಕ್ಕೆ ನಾನು ಚಿರಋಣಿ. ಮುಂದಿನ ಜನ್ಮದಲ್ಲಾದರೂ ನಿನ್ನನ್ನ ಸೇರುವ ಅವಕಾಶ ಸಿಗಲಿ ಅನ್ನುವುದಷ್ಟೇ ಆ ದೇವರಲ್ಲಿ ನನ್ನ ಕೋರಿಕೆ..  ಇದಕ್ಕಿಂತ ಹೆಚ್ಚು ಬರೆಯಲು ನನ್ನಿಂದ ಆಗುತ್ತಿಲ್ಲ ನವೀನ್. ನಿನ್ನಿಂದ ತುಂಬಾ ದೂರ ಹೋಗ್ತಾ ಇದ್ದೇನೆ, ಬೇಸರಿಸಬೇಡ ಗೆಳೆಯ.
ದುಃಖಭರಿತ ಕಣ್ಣೀರಿನೊಂದಿಗೆ ನಿನ್ನ ಗೆಳತಿ ಮೇಘನ."
ಇದನ್ನೆಲ್ಲಾ ಓದಿದ ನವೀನನಿಗೆ ಏನು ಹೇಳಬೇಕೆಂದು ತೋಚದೆ ಕಣ್ಣೀರಿಡುತ್ತಾ ತದೇಕಚಿತ್ತದಿಂದ ಮೇಘನಳ ಫೋಟೋ ಕಡೆ ನೋಡುತ್ತಿದ್ದ.. ಅವಳ ಮುಗುಳ್ನಗು ಎದೆಯಲ್ಲಿ ಚುಚ್ಚುತ್ತಿತ್ತು. ಮೆಘನಳ ಅಮ್ಮ ಬಂದು ಸಮಾಧಾನಿಸುತ್ತ ಆದದ್ದೆಲ್ಲಾ ಆಗಿಹೋಯಿತು, ಏನು ಮಾಡೋದು ಎಲ್ಲ ದೇವರ ಲೀಲೆ. ಕ್ಯಾನ್ಸರ್ ಪತ್ತೆಯಾದಾಗ ಅವಳು ಬದುಕುವುದು ಕೇವಲ ಎರಡು-ಮೂರು ವರ್ಷ ಮಾತ್ರ, ನಗುತ್ತ ಅವಳ ಇಚ್ಚೆಯಂತೆ ಹಾಯಾಗಿ ಇರಲು ಬಿಡಿ ಸ್ವಲ್ಪ ಕಾಲ ಜಾಸ್ತಿ ಬದುಕಿದರೂ ಬದುಕಬಹುದು ಅಂದಿದ್ದರು ಡಾಕ್ಟರ್. ಇನ್ನೆರಡು ವರ್ಷ ಅವಳು ನಮ್ಮ ಜೊತೆ ಇರಲು ಅವಕಾಶ ಮಾಡಿಕೊಟ್ಟ ನಿನ್ನ ಋಣವನ್ನ ನಾವು ಈ ಜನ್ಮದಲ್ಲಿ ಮರೆಯುವದಿಲ್ಲಪ್ಪ ಅಂದು ಕೈ ಮುಗಿದಾಗ ತಲೆಯಲ್ಲೆಲ್ಲ ಮಿಂಚಿನ ಸುಳಿಗಳು ಸುಳಿದಂತಾಗಿ ಒಮ್ಮೆಲೇ ಅಲ್ಲಿಂದ ಹೊರಟು ಸುತ್ತಲಿನ ಜಗತ್ತಿನ ಪರಿವೆ ಇಲ್ಲದಂತೆ ಒಂಟಿಯಾಗಿ ನಡೆಯತೊಡಗಿದ್ದ. ತಲೆಯಲ್ಲೆಲ್ಲ ಅವಳದ್ದೇ ಚಿಂತೆ. ಅವಳ ಎಲ್ಲ ತುಂಟಾಟಗಳು ಹೃದಯದ ಗೋಡೆಗೆ ಬಂದು ಅಪ್ಪಳಿಸುತ್ತಿದ್ದವು.

ಎಲ್ಲದರ ನಡುವೆ ನವೀನ ಮೇಘನಳಿಗಾಗಿ ಬರೆದಿದ್ದ ಪ್ರೇಮ ಪತ್ರ ಅವನ ಕಿಸೆಯಲ್ಲಿಯೇ ಉಳಿದಿತ್ತು..
"ಪ್ರೀತಿಯ ಗೆಳತಿ ಮೇಘನಾ
ಒಂದು ವಿಷಯ ನಿನಗೆ ಹೇಳ್ಬೇಕು ಕೆಲ ದಿನದಿಂದ ಅನ್ಕೊಂಡಿದ್ದೆ ಆದರೆ ಹೇಗೆ ಹೇಳಬೇಕು ಅನ್ನೋದೇ ಗೊತ್ತಾಗ್ತಾ ಇರ್ಲಿಲ್ಲ . ಆದರೆ ಇವತ್ತು ಯಾಕೋ ಗೊತ್ತಿಲ್ಲ ಹೃದಯ ಹೇಳ್ತಾ ಇದೆ ಹೇಳಿಬಿಡು ಅಂತ, ಯಾಕೋ ಧೈರ್ಯ ಸಾಲ್ತಾ ಇಲ್ಲ, ಆದರೆ ಎಷ್ಟು ದಿನ ಅಂತ ಹೇಳ್ದೆ ಇರೋಕೆ ಆಗುತ್ತೆ ಹೇಳು. ಬಹಳ ದಿನದಿಂದ ಮನದಲ್ಲಿ ಬಚ್ಚಿಟ್ಟ ಪ್ರೀತಿನ ಇವತ್ತು ನಿನ್ನ ಎದುರಿಗೆ ಇಡ್ತಾ ಇದ್ದೇನೆ. ಹಂ ಹೌದು ಕಣೆ ನಾನಿನ್ನ ಮನಸಾರೆ ಪ್ರೀತಿಸ್ತಾ ಇದೀನಿ. ಇಷ್ಟು ದಿನ ನಿನ್ನ ಜೊತೆಗಿನ ಸಲುಗೆ ಹೇಗೆ ಪ್ರೀತಿಯಾಗಿ ಬದಲಾಯ್ತೋ ಗೊತ್ತಿಲ್ಲ, ಆದರೆ ಪ್ರೀತಿ ಹುಟ್ಟಿದ್ದಂತೂ ನಿಜ. ಆದರೆ ಇದೆಲ್ಲ ಪ್ರೀತಿ ಅಂತ ನನಗೆ ತಿಳಿದೇ ಇರಲಿಲ್ಲ. ಇತ್ತೀಚಿಗೆ ದಿನವೂ ನಿನ್ನ ಜೊತೆ ಮಾತಾಡ್ತಾ ಇರಬೇಕು ಅನಿಸುತ್ತೆ ಕಣೆ. ನಿನ್ನ ಮೆಸೇಜ್ ಬರಲಿಲ್ಲ ಅಂದ್ರೆ ಏನೋ ಒಂಥರಾ ಚಡಪಡಿಕೆ, ದಿನವಿಡೀ ನಿನ್ನದೇ ಗುಂಗಲ್ಲಿ ಇರ್ತೀನಿ, ಸದಾ ನಿನ್ನದೇ ಯೋಚನೆ.. ಇದೆಲ್ಲ ಪ್ರೀತಿ ತಾನೇ? ನಿನಗೂ ನನ್ನ ಬಗ್ಗೆ ಈ ರೀತಿ ಭಾವನೆಗಳು ಇದ್ಯಾ ?? ನೀನು ನನ್ನ ಜೊತೆ ಮಾತಾಡುವಾಗ ಒಂದೊಂದು ಸಲ ನನಗೂ ಅನಿಸಿದೆ ನಿಂಗೂ ನನ್ನ ಮೇಲೆ ಸ್ವಲ್ಪನಾದ್ರೂ ಪ್ರೀತಿ ಇದೆ ಅಂತ … ನಿಜಾನ ಗೆಳತಿ? ಬಹಳ ದಿನ ಈ ವಿಷಯ ಬಚ್ಚಿಟ್ಟು ನನ್ನ ಹೃದಯ ಭಾರವಾಗಿತ್ತು, ಈಗ ಸ್ವಲ್ಪ ಹಗುರಾಗಿದೆ.  ನೀನಿಲ್ಲದೆ ನನ್ನ ಬಾಳು ಶೂನ್ಯ ಕಣೆ, ಇಷ್ಟು ದಿನದಲ್ಲಿ ನನ್ನನ್ನ ಅರ್ಥಮಾಡಿಕೊಂಡ ಹುಡುಗಿ ಅಂದ್ರೆ ನೀನೊಬ್ಬಳೆ ಕಣೆ. ನನ್ನ ಕೈ ಹಿಡಿದು ನನ್ನ ಬಾಳ ಸಂಗಾತಿ ಆಗ್ತೀಯ?? ಎಂದೂ ನಿನ್ನ ಕಣ್ಣು ಒದ್ದೆಯಾಗದಂತೆ ನೋಡಿಕೊಳ್ಳುವ ಶತ ಪ್ರಯತ್ನ ಮಾಡ್ತೀನಿ. ಅಡುಗೆ ಮನೆಯಲ್ಲಿ ಈರುಳ್ಳಿ ಹೆಚ್ಚೋ ಕೆಲಸಾ ನಾನೇ ಮಾಡ್ತೀನಿ, ಬೆಂಜ್ ಕಾರಲ್ಲಿ ತಿರುಗಾಡಿಸದಿದ್ರೂ ನನ್ನ ಹೀರೋ ಹೊಂಡಾ ಬೈಕಲ್ಲಿ ಸುತ್ತಾಡಿಸ್ತೀನಿ ಕಣೆ, ಪಿಜ್ಜಾ ಹಟ್ ಗೆ ಕರ್ಕೊಂಡು ಹೋಗಿ ಪಿಜ್ಜಾ ತಿನಿಸದಿದ್ರೂ ಕಾರ್ನರ್ ಅಂಗಡಿಲಿ ಸಿಗೋ ಪಾನಿಪುರಿ, ಗೋಬಿ ಖಂಡಿತ ತಿನಿಸ್ತೀನಿ. ಮನೇಲಿ ನಾನೇ ಖುದ್ದಾಗಿ ಮಾತಾಡ್ತೀನಿ ಬೇಕಾದ್ರೆ, ಎಲ್ಲರ ಆಶೀರ್ವಾದ ತಂಗೊಂಡೆ ಒಂದಾಗೋಣ. ನಮ್ಮನ್ನ ಸಾಕಿ ಸಲಹಿದವರ ಆಶೀರ್ವಾದ ಇಲ್ಲದೆ ಇದ್ರೆ ಹೇಗೆ ಆಲ್ವಾ? ಎಲ್ಲರನ್ನ ಒಪ್ಪಿಸೋ ಜವಾಬ್ದಾರಿ ನಂದು ಕಣೆ ಸರಿನಾ? ನಿಂಗೆ ನನ್ನ ಭಾವನೆಗಳು ಅರ್ಥ ಆಗ್ತಾ ಇದೆ ಆಲ್ವಾ? ನೀನು ನನ್ನವಳಾಗ್ತೀಯ ಅಲ್ವಾ?
ನಿನ್ನ ಹುಚ್ಚು ಪ್ರೀತಿಗಾರ ನವೀನ "

ಈ ಒಂಟಿ ಪಯಣಕ್ಕೆ ಕೊನೆಯೇಲ್ಲಿದೆ ಏನೊಂದೂ ಅರಿಯದೆ ಆತ ಇಂದಿಗೂ ಅವಳದೇ ನೆನಪ ದಾರಿಯಲ್ಲಿ ನಡೆಯುತ್ತಲೇ ಇದ್ದಾನೆ.


*ಎಪ್ರೀಲ್  ಮೂರನೇ ವಾರದ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಲಿಂಕ್: http://www.panjumagazine.com/?p=1834

ಯಾಂತ್ರಿಕ ಜಗತ್ತು :

ಗೆಳತಿಯೊಬ್ಬಳ ಬಾಲ್ಯದ ನೆನಪುಗಳ ಸರಮಾಲೆಯ ಬುತ್ತಿ ಬಿಚ್ಚಿಟ್ಟ ಬರಹಗಳನ್ನ ಓದಿದಾಗ ಮತ್ತೆ ಮನ ಬಾಲ್ಯದ ದಿನದತ್ತ ಸಾಗಿತ್ತು. ಆದರೆ ಕೆಲವೇ ಕ್ಷಣ ಮಾತ್ರ ಈ ಆನಂದ, ಮತ್ತೆ ವಾಸ್ತವಕ್ಕೆ ಬಂದಾಗ ಅದೇ ದಿನದ ಗೋಳು. ಬ್ಯುಸಿ ಶೆಡ್ಯೂಲಿನ ರೇಸಿಂಗ್ ಜಗತ್ತಿನಲ್ಲಿ ಬಾಳುತ್ತ ಇತ್ತೀಚಿಗೆ ಯಾಕೋ ಬಾಲ್ಯದ ನೆನಪುಗಳು ಕೂಡ ನನ್ನಿಂದ ದೂರವಾಗುತ್ತಿದೆ ಅನಿಸತೊಡಗಿದೆ. ಅಷ್ಟೇ ಅಲ್ಲ ಜೊತೆಗೆ ಸಂಬಂಧಗಳು ಕೂಡ ನಮ್ಮಿಂದ ದೂರವಾಗುತ್ತಿದೆ. ಯಾಕೆ ಹೀಗೆ ಅಂತ ಹುಡುಕ ಹೋದರೆ ಎಲ್ಲವೂ ಶೂನ್ಯ. ಸಮಾಜದಲ್ಲಿ ನನ್ನತನವನ್ನ ಸ್ಥಾಪಿಸುವ ಭರದಲ್ಲಿ ನನ್ನವರನ್ನ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇವೆಲ್ಲವೂ ನಮಗರಿವಿಲ್ಲದಂತೆಯೇ ಘಟಿಸುವಂತಹದ್ದು. ಜೀವನದ ಕೊನೆಗೆ ಎಲ್ಲವನ್ನೂ ಸಾಧಿಸಿ ಶಿಖರವೆರಿದಾಗ ಸಂಬಂಧಗಳು ದೂರವಾಗಿರುದು ಅರಿವಿಗೂ ಬರುವುದಿಲ್ಲ ನಮಗೆ, ಅಕಸ್ಮಾತ್ ಬಂದರೂ ನಮಗೆ ಅವರ ಅವಶ್ಯಕತೆಯೇ ಬೇಡದಂತಾಗಿರುತ್ತೆ.

ಸದ್ಯದ ಟೆನ್ಶನ್ ಬದಿಗಿಟ್ಟು ಸ್ವಲ್ಪ ನಮ್ಮ ಬಾಲ್ಯದ ಜೀವನವನ್ನ ನೆನೆಸಿಕೊಂಡಾಗ ಏನೋ ಒಂಥರಾ ಖುಷಿ ಸಿಗುವುದಂತೂ ಖಂಡಿತ. ಆ ಮೋಜು- ಮಸ್ತಿ, ಆಟ-ಪಾಠ, ಜಗಳ, ಮುನಿಸು, ಕೋಪ ಇವೆಲ್ಲವನ್ನ ನಾವು ಕಳೆದುಕೊಂಡಿದ್ದೇವೆ ಜೊತೆಗೆ ನಮ್ಮನ್ನ ಸಲಹಿದವರೂ ಕೂಡ. ಹಳ್ಳಿಯ ಆ ಬಾಲ್ಯದ ದಿನಗಳು ಇತ್ತೇಚೆಗೆ ಉರಿಸುವಂತಾಗಿದೆ ಯಾಕೋ. ನಾವು ಕಂಡ ಈ ಬಾಳು ನಮ್ಮ ಮುಂದಿನ ಪೀಳಿಗೆಯವರಂತೂ ಕಾಣುವುದು ಅಸಾಧ್ಯವೇ. ಇತ್ತೀಚೆಗೆ ಹಳ್ಳಿಗಳೂ ಸುಧಾರಿಸಿವೆ. ಚಿನ್ನಿ ದಾಂಡು, ಬುಗುರಿ, ಗೋಲಿ,ಚನ್ನೆಮಣೆ ಹೀಗೆ ಎಲ್ಲ ಆಟಗಳು ಮರೆಯಾಗಿ ಎಲ್ಲೆಡೆ ಕ್ರಿಕೆಟ್ ಒಂದೇ ಆಟವಾಗಿದೆ. ನಾವು ಕೂಡ ಹಳ್ಳಿಯಿಂದಲೇ ಬೆಳೆದು ಬಂದರೂ,ಒಮ್ಮೆ ಶಹರದ ನೀರು ಕುಡಿದ ಮೇಲೆ ಮತ್ತೆ ಹಳ್ಳಿಗೆ ಹೋದರೆ ಅಲ್ಲಿ ಹೊಂದಿಕೊಳ್ಳಲು ಆಗದಂತಿದೆ ನಮ್ಮ ಜೀವನ ವ್ಯವಸ್ಥೆ. ನಾವೆಲ್ಲಾ ಒಂದೂರು ಬಿಟ್ಟು ಮತ್ತೊಂದೂರಿಗೆ ಬಂದಾಗ ಹಳೆಯ ನೆನಪುಗಳ ಜೊತೆಜೊತೆಗೆ ಮನುಷ್ಯರನ್ನೂ ಮರೆಯುತ್ತಿದ್ದೇವೆ. ಮರೆಯುತ್ತಿದ್ದೇವೆ ಅನ್ನುವುದಕ್ಕಿಂತ ಮರೆಸುತ್ತಿದೆ ಈ ಯಾಂತ್ರಿಕ ಜೀವನ ಅಂದರೆ ತಪ್ಪಾಗಲಾರದು ಬಹುಶಃ. ನಾನಾಯಿತು ನನ್ನ ಸಂಸಾರವಾಯಿತು ಅನ್ನುವ ಮೆಂಟಾಲಿಟಿ ಈಗ ಎಲ್ಲರಲ್ಲೂ ಬಂದಿದೆ. ಈಡಿ ಊರನ್ನೇ ಹಚ್ಚಿಕೊಂಡಿದ್ದ ನಮಗೆ ಸಿಟಿಯಲ್ಲಿ ಪಕ್ಕದ ಮನೆಯವರ ಗುರುತೇ ಇರುವುದಿಲ್ಲ. ಪರಿಸರದಿಂದ ದೊರಾಗುವುದರ ಜೊತೆಜೊತೆಗೆ ನಾವು ನಮ್ಮವರಿಂದಲೂ ದೂರಾಗುತ್ತಿದ್ದೇವೆ. ನಮ್ಮವರಿಗಾಗಿ ನಾವು ದಿನದಲ್ಲಿ ಒಂದೈದು ನಿಮಿಷ ಕೂಡ ಬದಿಗಿಡದಷ್ಟು ಬ್ಯುಸಿ ಆಗಿದ್ದೇವೆ. ನಮ್ಮ ಕೆಲಸ ನಾವು ಮಾಡಿಕೊಳ್ಳಲಾಗದಷ್ಟು ಬ್ಯುಸಿ. ಈ ಯಾಂತ್ರಿಕ ಬದುಕಿನಲ್ಲಿ ಹತ್ತಿರದವರು ದೂರಾದವರೆಷ್ಟೋ, ದೂರದವರು ಹತ್ತಿರ ಆದವರೆಷ್ಟೋ ಏನೊಂದೂ ತಿಳಿಯದಂತಾಗಿದೆ. ನಮ್ಮತನವನ್ನ ಬಿಟ್ಟು ಏನನ್ನ ಸಾಧಿಸಲು ಹೊರಟಿದ್ದೇವೆ ನಾವು? ಯಾಕೆ ಹೀಗೆ?? ಎಲ್ಲವೂ ಉತ್ತರವಿಲ್ಲದ ಪ್ರಶ್ನೆಗಳಾ? ಅಥವಾ ಉತ್ತರ ಬಯಸದ ಪ್ರಶ್ನೆಗಳಾ??

ನಮ್ಮ ಮನಸ್ಸು ಕೂಡ ಯಾವುದಕ್ಕೂ ಸ್ಪಂದಿಸದೇ ಕಲ್ಲಾಗಿದೆ, ಬುದ್ಧಿ ಸೀಮಿತದಲ್ಲಿಲ್ಲ, ಸಂಬಂಧಗಳ ಪರಿವೆಯೇ ಇಲ್ಲ. ನಮ್ಮತನವನ್ನ ಬಿಟ್ಟು ಯಾಂತ್ರಿಕ ಜಗತ್ತಿನೊಡನೆ ನಾವೂ ಕೂಡ ಯಂತ್ರಗಳಂತೆ ಬದುಕುತ್ತಿದ್ದೇವೆ ಅಲ್ಲವೇ? ಈ ಯಾಂತ್ರಿಕ ಬದುಕಿನ ರೇಸಿಗೆ ಬ್ರೇಕ್ ಹಾಕುವದಾದರೂ ಹೇಗೆ? ಒಟ್ಟಿನಲ್ಲಿ ಹೇಳುವುದಾದರೆ ಮೊಟ್ಟೆಗಾಗಿ ಕೋಳಿಯನ್ನು ಕಳೆದುಕೊಂಡಂತಾಗಿದೆ ನಮ್ಮ ಜೀವನ ಅಲ್ಲವೇ??

ಯುಗಾದಿ:

ಬಂದಿದೆ ಮತ್ತೊಂದು ಹೊಸ ವರುಷ
ಈ ಸಂವತ್ಸರದಲ್ಲಾದರೂ,
ಸಿಗಬಹುದೇ ಹೊಸ ಹರುಷ?

ಪ್ರತಿ ವರುಷದಲ್ಲಿಯೂ ಇದೇ ಆಶಯ
ದೊರಕಲಿ ಎಲ್ಲರಿಗೂ,
ಸುಖ ಶಾಂತಿಯ ಶುಭಾಶಯ.

ನವ ವರ್ಷಕ್ಕೆ ಮತ್ತೆ ಹೊಸ ಸಂಕಲ್ಪ
ಎರಡೇ ದಿನಕ್ಕೆ,
ಮುಗಿಯುವುದಿರಲಿ ಕಾರ್ಯಕಲ್ಪ.

ಪಾಪಿ ಜಗದಲಿ ನಾವು
ಆದರೂ ಬಾಳುತ್ತಿದೇವೆ,
ನಿರೀಕ್ಷೆಯ ಭ್ರಮೆಯಲಿ.

ಅನೀತಿ ಅಕ್ರಮಗಳ
ಸಂಕ್ರಮಣ ಕಾಲವಿದು,
ಕಾದಿದ್ದೇವೆ ಸುಧಾರಿಸುವ ಆಶಯಹೊತ್ತು.

ವರುಷವೆಲ್ಲ ಹರಿಯುತ್ತಿರಲಿ ಹರುಷ
ಪ್ರತಿಯೊಬ್ಬರಿಗೂ ಸಿಗಲೆಂಬ ಪ್ರಾರ್ಥನೆ,
ಸ್ವಾರ್ಥಕ್ಕೆ ನಾವು ಆಗದಿರಲಿ ಉದಾಹರಣೆ.

ಬೇವು-ಬೆಲ್ಲದ ಹಬ್ಬದಲಿ
ಕಹಿಪಾಲು ಗೌಣವಾಗಿ,
ಸಿಹಿಪಾಲು ಸಮೃದ್ಧವಾಗಿ ಪಸರಿಸಲಿ ಎಲ್ಲರಲು.

ತ್ಯಾಗ:

ನೀ ದಾನವ ನೀಡಲು
ಏನಯ್ಯ ನಿನ್ನದು??
ಇರುವುದೆಲ್ಲವೂ ಆ
ದೇವರ ಕರುಣೆಯು.

ಅವನಿಂದ ಬಂದದ್ದು
ಇನ್ನೊಬ್ಬನಿಗೆ ನೀಡಿದೆ,
ಕೊಡು-ಕೊಡುಗೆಗಳ
ಮಧ್ಯೆ ನೀ ದೊಡ್ಡವನಾದೆ.

ನಿನ್ನದಲ್ಲ ಏನೂ
ಎಲ್ಲವೂ ಅವನದ್ದೇ,
ನೀಡಿದ ಅವನ ದ್ವೇಷಿಸಿ
ನೀ ದೇವನಾದೆ.

ಕಾಣದ ದೇವರ ನೀ
ಗುಡಿಯೊಳು ಬಂಧಿಸಿದೆ,
ವೇದಮಂತ್ರಗಳ ಹೆಸರಲಿ
ಮೂಢನಂಬಿಕೆಗಳ ಸೃಷ್ಟಿಸಿದೆ.

ಅನಾಥನಿಗೆ ನೀಡಲಿಲ್ಲ
ನೀ ತುತ್ತು ಅನ್ನವನು,
ಕಲ್ಲು ದೇವತೆಗೆ ನೀಡಿದೆ
ಬಂಗಾರದ ಒಡವೆಯನು.

ಕಾಣಲಿಲ್ಲ ದೇವ ನಿನಗೆ
ಬೇಡುತಿದ್ದ ಮುಗ್ಧ ಕಂಗಳಲಿ,
ಬರಲಿಲ್ಲ ಕರುಣೆ ನಿನಗೆ
ಆ ಹಸಿದ ಮಗುವಿನಲಿ.

ನಿನ್ನಲ್ಲಿ ಇರುವುದೆಂದಲ್ಲ
ದೇವರಿಗೆ ನೀ ನೀಡಿದ್ದು,
ನಿನ್ನೆಲ್ಲ ಪಾಪ ಕಾರ್ಯವ
ತೊಳೆಯಲು ಲಂಚವೆಂದು.

ಅರಿಯೋ ಮೂಢ ಮಾನವ
ನಿನ್ನದಲ್ಲ ಏನೂ,ಇಲ್ಲೇನೂ ನನ್ನದಲ್ಲ,
ಎರಡು ದಿನದ ಬಾಳಿನಲಿ
ಎಲ್ಲವೂ ನನ್ನದೆಂಬ ಮಾತು ಸಲ್ಲ.

ಹನಿ ಹನಿ 12 :

ನಶೆ:
೧.
ಮೊದಲೆಲ್ಲ ಅವಳ ನೋಡಿದೊಡೆ
ದೇಹದಲ್ಲೆಲ್ಲ
ನಶೆ ಏರುತ್ತಿತ್ತು
ಈಗೆಲ್ಲ ಅವಳು ಕಂಡೊಡೆ
ಕುಡಿದ ನಶೆಯೂ
ಇಳಿಯತೊಡಗಿದೆ.

೨.
ಹೆಂಡದಲಿ
ಮಾಲು ಹಳೆಯದಾದಂತೆ
ನಶೆ ಏರುತ್ತಂತೆ
ಪ್ರೀತಿಯಲಿ
ಮಾಲು ಹಳೆಯದಾದಂತೆ
ನಶೆ ಇಳಿಯುತ್ತಂತೆ

೩.
ಪ್ರೀತಿಯಲಿ ನಶೆ ಏರುತ್ತೆ
ಮದುವೆಯಾಡೋದೇ ಇಳಿಯುತ್ತೆ


ಅಂದು-ಇಂದು
೧.
ಅಂದು ನನ್ನ ಮಾತಿಗೆಲ್ಲ
ಹೂಂ ಗುಡುತ್ತಿದ್ದವಳು
ಇಂದು ಮಾತಿಗೆ ಮೊದಲೇ
ಹೂಂಕರಿಸುತ್ತಿದ್ದಾಳೆ.

೨.
ಮೊದಲೆಲ್ಲ ನನ್ನಾಕೆ
ಇಡುತ್ತಿದ್ದ ಕುಂಕುಮದಂತೆ
ದಪ್ಪಗಿದ್ದ ನಾನು
ಬರುಬರುತ್ತಾ
ಅವಳ ಟಿಕಲಿಯಂತೆ
ಸಣ್ಣಗಾಗಿದ್ದೇನೆ.

ಹನಿ ಹನಿ 11:

ಮದುವೆ ಮದುವೆ ಮದುವೆ :

 ೧.
ಮದುವೆಯ ಮೊದಲು
ಆಕೆ ಸುಂದರಿ..
ಆತ ಗುಂಡಪ್ಪ..

ಮದುವೆಯ ತರುವಾಯ
ಆಕೆ ಬಜಾರಿ..
ಆತ ಬರೀ ಹೌ "ದಪ್ಪ".

೨.
ಮದುವೆಯ ಮೊದಲು ಹೇಳುತ್ತಿದ್ದ
ಏನೆಲ್ಲಾ ಇದೆ ಮದುವೆಯ ನಂತರ,
ತದನಂತರ ಹೇಳತೊಡಗಿದ
ಹೀಗೂ ಉಂಟೇ, ವೀಕ್ಷಿಸಿ ಬ್ರೇಕ್ ನಂತರ.

೩.

ಪ್ರೀತಿಸುತ್ತಿದ್ದಾಗ
ಬಾಳು ಸುಂದರಕಾಂಡ,
ಮದುವೆಯ ಬಳಿಕ
ಬರೀ ಯುದ್ಧ ಕಾಂಡ.

೪.
ಪ್ರೀತಿ ಮಾಡಿದರೆ
ಸುಖ ಸಿಗುತ್ತೆ,
ಮದುವೆ ಆದಮೇಲೆ
ಬುದ್ಧಿ ಬರುತ್ತೆ.

೫.
ಪ್ರೀತಿಸುವವರು ಕುರುಡರಂತೆ,
ಮದುವೆ ಕಣ್ಣು ತೆರೆಸುತ್ತಂತೆ.

೬.
ಮದುವೆಯೆಂದರೆ ಏನಯ್ಯ ಅಂದಾತ,
ಮೊದಮೊದಲು "ಮಧು"
ಆಮೇಲೆ ಬರೀ "ವೆ ವೆ" ಎಂದೆ ನಾ..

ಕನಸು:

ಭಾನುವಾರ ಎದ್ದಾಗ 10 ಗಂಟೆಯಾಗಿತ್ತು. ತಲೆ ತುಂಬಾ ಭಾರವಾಗಿತ್ತು. ದಿನದ ಉತ್ಸಾಹವೂ ಇರಲಿಲ್ಲ. ಒಂದು ಕಪ್ ಕಾಫಿಯನ್ನಾದರೂ ಕುಡಿಯೋಣ ಅಂತ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಬಂದೆ. ಗ್ಯಾಸ್ ಕಟ್ಟೆಯ ಮೇಲೆ ಹರಡಿದ್ದ ಪಾತ್ರೆಗಳನ್ನೆಲ್ಲ ಬದಿಗೆ ಸರಿಸಿ ಹಾಲನ್ನು ಬಿಸಿ ಮಾಡಿ, ಕಾಫಿ ಪೌಡರ್ ಸಕ್ಕರೆ ಹಾಕಿ ಕದಡಿ ಕಪ್ಪನ್ನ ಕೈಯ್ಯಲ್ಲಿ ಹಿಡಿದು ಹಾಗೆ ಹಾಸಿಗೆಯ ಮೇಲೆ ಬಂದೊರಗಿದೆ. ಮನಸ್ಸಿನಲ್ಲಿ ನೂರಾರು  ಚಿಂತೆಗಳು ಸುಳಿದಾಡುತ್ತಿದ್ದವು. ಇದೇ ಚಿಂತೆಯಲ್ಲಿ ನಿನ್ನೆ ಮಲಗಿದಾಗ ರಾತ್ರಿ ಎರಡಾಗಿತ್ತು. ಕಾಫಿಯ ಗುಟುಕನ್ನ ಹೀರುತ್ತಾ ಹಾಗೆ ಮನಸ್ಸು ಕಲ್ಪನಾ ಲೋಕದಲ್ಲಿ ತೇಲಿಹೋಗಿತ್ತು. ಸಾವಿರಾರು ವಿಚಾರಗಳು ಮನದಲ್ಲಿ ಮೂಡಿ ಮಾಯವಾಗುತ್ತಿದ್ದವು. ಒಂದಕ್ಕೊಂದು ಸಂಬಂಧವಿರದ ವಿಚಾರಗಳು. ಒಮ್ಮೆಲೇ ಬಾಲ್ಯದ ಕೆಲ ಸುಖ ಕ್ಷಣಗಳು ಮಿಂಚಿ ಮುಖದಲ್ಲಿ ಸ್ಮಿತ ಮೂಡಿಸಿದರೆ ತಕ್ಷಣದಲ್ಲೇ ಕೆಲಸಕ್ಕಾಗಿ ಊರೂರು ಅಲೆದು ಅನುಭವಿಸಿದ ಕಷ್ಟದ ಕ್ಷಣಗಳು ವದನದಲ್ಲಿ ಮತ್ತೆ ನೆರಿಗೆಗಳನ್ನ ಮೂಡಿಸುತ್ತಿದ್ದವು. ಸುಖ ದುಃಖಗಳ ನಡುವಿನ ಈ ಇಪ್ಪತೈದು ವರ್ಷಗಳ ಕೆಲ ನೆನಪುಗಳು ಇಂದು ತುಂಬಾ ಕಾಡತೊಡಗಿತ್ತು. ಇದೇ ಚಿಂತೆಯ ಗೊಂದಲದಲ್ಲಿ ಕೈಯ್ಯಲ್ಲಿದ್ದ ಕಾಫಿ ಕಪ್ ಖಾಲಿಯಾಗಿತ್ತು. ಏಕೋ ಏಳಲು ತಯಾರಿರದ ಮತ್ತದೇ ಕಲ್ಪನಾ ಜಗತ್ತಿಗೆ ಹೊರಟಿದ್ದ ಮನಸ್ಸನ್ನ ಹಿಡಿದೆಳೆದು ಎದ್ದು ಅಡುಗೆ ಮನೆಗೆ ಬಂದು ‘ಉಸ್…’ ಎನ್ನುತ್ತಾ ಹರಡಿದ್ದ ಪಾತ್ರೆಗಳನ್ನೆಲ್ಲ ಒಂದೊಂದಾಗಿ ಎತ್ತಿಟ್ಟು, ಸ್ನಾನಕ್ಕೆಂದು ಒಲೆಯ ಮೇಲೆ ನೀರಿಟ್ಟೆ. ಕಲ್ಪನಾ ಲೋಕದಲ್ಲೇ ಅರ್ಧ ದಿನ ಕಳೆದು ನೆನ್ನೆಯ ರಾತ್ರಿ ಅರ್ಧ ಲೋಟ ಹಾಲು ಕುಡಿದು ಮಲಗಿದ್ದರಿಂದ ಉದರದಲ್ಲಿ ಗಣೇಶನ ವಾಹನ ಓಡಾಡತೊಡಗಿತ್ತು. ಒಂದೆರಡು ಡಬ್ಬಿಯ ಮುಚ್ಚಳ ತೆಗೆದು ನೋಡಿದರೆ ಎಲ್ಲೂ ಅವಲಕ್ಕಿಯ ಸುಳಿವಿರಲಿಲ್ಲ. ಯಾವುದಾದರೂ ಡಬ್ಬದಲ್ಲಿ ಹುಡುಕಿದರೆ ಸಿಗುವುದಾದರೂ ಹೇಗೆ ಅನ್ನುವುದು ಮತ್ತೊಂದು ಡಬ್ಬದಲ್ಲಿ ಅವಲಕ್ಕಿ ಸಿಕ್ಕಾಗ ಅರಿವಿಗೆ ಬಂತು.

ಯಾಕೋ ಮನಸ್ಸು ನನ್ನ ಹಿಡಿತದಲ್ಲಿರಲಿಲ್ಲ. ಯಾವುದೋ ಬೇರೊಂದು ಲೋಕದಲ್ಲಿ ವಿಹರಿಸಲು ನನ್ನಿಂದ ದೂರವಾಗತೊಡಗಿತ್ತು ಈ ಎರಡು ದಿನಗಳಲ್ಲಿ. ಏನೆಂದು ಪ್ರಶ್ನಿಸಲು ಹೋದರೆ ಮತ್ತೆ ಎಲ್ಲೆಲ್ಲೊ ಹೋಗಿಬಿಡುತ್ತೆ ಈ ಮನಸ್ಸು ಅಂತ ತಡೆಹಿಡಿದು ಬಾಣಲಿಯನ್ನ ಇನ್ನೊಂದು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಒಗ್ಗರಣೆ ಮಾಡಿ ಸ್ವಲ್ಪ ಅವಲಕ್ಕಿ ಹೊಯ್ದು ಕೈಯಾಡಿ ಪ್ಲೇಟಿನಲ್ಲಿ ಹಾಕಿ ತಿಂದು ಮುಗಿಸಿದೆ. ಒಂದು ಗ್ಲಾಸ್ ನೀರಿಳಿಸಿ ಹಾಗೆ ಗ್ಯಾಸ್ ಕಟ್ಟೆಗೆ ಕೈಕೊಟ್ಟು ಬಿಸಿಗಿಟ್ಟಿದ್ದ ನೀರನ್ನೇ ನೋಡತೊಡಗಿದೆ. ನೀರು ಬಿಸಿಯಾಗಿ ಕೆಳಗಿಂದ ಗುಳ್ಳೆಗಳು ಮೇಲೆ ಬಂದು ಟಪ್ಪನೆ ಒಡೆಯುತ್ತಿದ್ದವು. ನೋಡುತ್ತಿದ್ದಂತೆಯೇ ಮನದಲ್ಲಿ ಕೆಲ ವಿಚಾರಗಳು ಮೂಡಿದವು. ನಮ್ಮ ಜೀವನ ಇಷ್ಟೇ ಅಲ್ಲವೇ ನೀರ ಮೇಲಿನ ಗುಳ್ಳೆಯಂತೆ? ಇಂದಲ್ಲ ನಾಳೆ ನಾವೂ ಸಾಯುವವರೆ, ನಶ್ವರವಾದ ಈ ಜೀವನದಲ್ಲಿ ಎಷ್ಟೋ ಆಸೆಗಳನ್ನ ಮನದಲ್ಲಿ ಹುಟ್ಟು ಹಾಕಿ ಅದನ್ನ ಈಡೇರಿಸಲು ಈ ಹಾಳು ದುನಿಯಾದಲ್ಲಿ ಜೀವನವಿಡೀ ಕಷ್ಟಗಳನ್ನ ಅನುಭವಿಸುತ್ತೇವೆ. ಕೆಲ ಕ್ಷಣದ ಸುಖಕ್ಕಾಗಿ ಜೀವನವಿಡೀ ದುಃಖ ಅನುಭವಿಸುವುದು ಏತಕ್ಕೆ ಅನ್ನುವ ಸಹಜ ಪ್ರಶ್ನೆ ಉದ್ಭವಿಸಿತು. ಮತ್ತೆ  ಮನಸಿಗೆ ಲಗಾಮು ಹಾಕಿ ಗ್ಯಾಸ್ ಸ್ಟೋವ್ ಬಂದ್ ಮಾಡಿ ಬಿಸಿ ನೀರನ್ನ ಬಕೇಟಿಗೆ ಹೊಯ್ದು ಸ್ನಾನಕ್ಕೆ ಅಡಿಮಾಡಿಕೊಂಡೆ. ದಿನವೂ ಕೆಲಸದ ಗಡಿಬಿಡಿಯಲ್ಲಿ ಬೆಳಿಗ್ಗೆ ಏಳಕ್ಕೆ ಮನೆ ಖಾಲಿ ಮಾಡುವ ನಾನು ಇಂದು ಭಾನುವಾರವಾದ್ದರಿಂದ ಯಾವುದೇ ಗಡಿಬಿಡಿಯಿಲ್ಲದೆ ಆರಾಮವಾಗಿದ್ದೆ. ಭಾನುವಾರ ಬಹುತೇಕ ಗೆಳೆಯರೊಡನೆ ಎಲ್ಲಾದರೂ ತಿರುಗಾಡಲೋ ಅಥವಾ ಸಿನೆಮಾಕ್ಕೋ ಹೋಗಿ ಸಂತಸದಿಂದ ಕಳೆಯಿತ್ತಿದ್ದೆ, ಆದರೆ ಇಂದು ಏನೂ ಬೇಡವಾಗಿತ್ತು. ನೆನ್ನೆಯೇ ಗೆಳೆಯರಿಗೆಲ್ಲ ನಾನೆಲ್ಲೂ ಬರುವುದಿಲ್ಲ ಒಂದು ದಿನ ಒಂಟಿಯಾಗಿರಬೇಕು, ದಯವಿಟ್ಟು ಒತ್ತಾಯ ಮಾಡಬೇಡಿ ಎಂದಿದ್ದರಿಂದ  ಎಲ್ಲರೂ ಯಾವುದಾದರೂ ಹುಡುಗಿ ಕೈಕೊಟ್ಟಿರಬೇಕು ಅಂತ ಕೀಟಲೆ ಮಾಡಿ ತಮ್ಮ ಪಾಡಿಗೆ ಹೊರಟುಹೋಗಿದ್ದರು. ಯಾಕೋ ಕೆಲ ದಿನಗಳಿಂದ ಒಂಟಿಯಾಗಿರಲು ಬಯಸುತ್ತಿತ್ತು ಮನ. ಯಾರಾದರೂ ಜೊತೆಗೆ ಇಲ್ಲದಿದ್ದರೆ ಬೋರ್ ಆಗುತ್ತಿದ್ದ ನನಗೆ ಇಂದು ಒಂಟಿಯಾಗಿರುವುದು ಬೇಸರ ತಂದಿರಲಿಲ್ಲ.

ಟವೆಲ್ ಸುತ್ತಿ ಬಚ್ಚಲು ಮನೆಗೆ ಬಂದು ಹಾಗೆ ಚೊಂಬಿನಿಂದ ತಲೆಯ ಮೇಲೆ ನೀರ್ಹೊಯ್ದುಕೊಳ್ಳುತ್ತ ಕನಸಿನ ಲೋಕಕ್ಕೆ ಹೋಗಿ ಮರಳಿದ್ದು ಬಕೆಟಿನಲ್ಲಿ ನೀರು ಖಾಲಿಯಾದಾಗಲೇ. ಸೋಪನ್ನ ಹಚ್ಚಿಕೊಳ್ಳಲೂ ಮರೆತ ನಾನು ನನ್ನನ್ನೇ ಬಯ್ದುಕೊಳ್ಳುತ್ತಾ ಎದುರಿಗಿದ್ದ ಸೋಪನ್ನ ಮೈಗೆಲ್ಲ ಉಜ್ಜಿ ಒಂದೆರಡು ಚೊಂಬು ತಣ್ಣೀರನ್ನ ಮೈಮೇಲೆ ಸುರಿದು ನಡುಗುತ್ತ ಮೈ ಒರೆಸಿ ಟವೆಲನ್ನ ಸೊಂಟಕ್ಕೆ ಸುತ್ತಿ ದೇವರ ಫೋಟೋಕ್ಕೆ ನಮಸ್ಕರಿಸಿ ಹಣೆಗೆ ಕುಂಕುಮ ಇಟ್ಟುಕೊಂಡು ರೂಮಿಗೆ ಬಂದು ಬನಿಯನ್ ಹಾಕಿ ಲುಂಗಿಯೇರಿಸಿದೆ. ಟೈಮ್ ನೋಡಿದರೆ ಹನ್ನೊಂದೂವರೆಯಾಗಿತ್ತು. ಹೊರಗಡೆ ಹೋಗಲೂ ಮನಸ್ಸಿರಲಿಲ್ಲ. ಸ್ವಲ್ಪ ಹೊತ್ತಾದರೆ ಹೊಟ್ಟೆಯಲ್ಲಿ ಮತ್ತೆ ಸದ್ದಾಗುವುದಂತೂ ಖಚಿತವೆಂದು ಏನಾದರೂ ಬೇಯಿಸೋಣ ಅಂತ ಮತ್ತೆ ಅಡುಗೆ ಮನೆಯತ್ತ ನಡೆದೆ. ಮದುವೆಯೆಂದರೆ ಮೈ ಉರಿಯುತ್ತಿದ್ದ ನನಗೆ ಇಂದೇಕೋ ನನಗೂ ಒಂದು ಸಂಗಾತಿ ಬೇಕೆನಿಸಿದ್ದಂತೂ ನಿಜ. ಮನಸ್ಸಿನ ಈ ತೊಳಲಾಟದ ನಡುವೆ ಏನು ಮಾಡಬೇಕೆಂದು ತೋಚದೆ ಕೊನೆಗೆ ಮಸಾಲೆ ಭಾತ್ ಮಾಡಲು ಸ್ವಲ್ಪ ತರಕಾರಿಗಳನ್ನ ಹೆಚ್ಚಿ ಕುಕ್ಕರಿನಲ್ಲಿ ಅಕ್ಕಿ ತರಕಾರಿ ಮಸಾಲೆಯನ್ನೆಲ್ಲ ಹೊಯ್ದು ನೀರು ಹಾಕಿ ಗ್ಯಾಸ್ ಮೇಲಿಟ್ಟು  ಮತ್ತೆ ರೂಮಿಗೆ ಬಂದೆ, ಹಾಸಿಗೆ ಇನ್ನೂ ಹಾಗೇ ಇತ್ತು. ಒಂದು ವಾರದ ಗಡಿಬಿಡಿಯಲ್ಲಿ ಹರಡಿದ್ದ ಮನೆಯನ್ನ ಸ್ವಚ್ಛಗೊಳಿಸಲು ಇಂದ್ಯಾಕೋ ಮನಸ್ಸಿರಲಿಲ್ಲ.ಹಾಗೆ ಹಾಸಿಗೆಯ ಮೆಲೋರಗಿದೆ. ಮನ ಜಾರಿತ್ತು, ತಲೆ ಚಿಟ್ಟು ಹಿಡಿಯುವ ಈ ಹಾಳು ಜಗವನ್ನ ಬಿಟ್ಟು ಸುಂದರವಾದ ಏನೂ ಗೋಳಿರದ ನನ್ನ ಹಳ್ಳಿಯ ಜೀವನದಲ್ಲಿ ನನ್ನ ಮನ ತೇಲಾಡುತ್ತಿತ್ತು.

ಸುಂದರ ಹಳ್ಳಿ ನನ್ನದು, ಯಾರ ಹಂಗಿರದ ಸರಳ ಜೀವನ. ಆ ಶಾಲಾ ದಿನಗಳು ಬಾಲ್ಯದ ದಿನಗಳೆಲ್ಲ ನನ್ನ ಕಣ್ಮುಂದಿದ್ದವು. ಬೆಳಿಗ್ಗೆ ಆರಕ್ಕೆ ಎದ್ದು ಮುಖ ತೊಳೆದು ಸ್ವಲ್ಪ ಮನೆ ಕೆಲಸ ಮಾಡಿ ಸ್ನಾನ ತಿಂಡಿ ಮುಗಿಸಿ ಶಾಲೆಗೆ ಹೋದರೆ ಮಧಾಹ್ನದ ಊಟ ಅಲ್ಲೇ, ಸಂಜೆಯ ಹೊತ್ತು ಗೆಳೆಯರ ಜೊತೆಗೂಡಿ ಬುಗುರಿ, ಗೋಲಿ, ಚಿನ್ನಿ ದಾಂಡು ಆಡಿ ಸಂಜೆ ಏಳಕ್ಕೆ ಮನೆಗೆ ಬಂದು ಕೈ ಕಾಲು ತೊಳೆದು ದೇವರ ಶ್ಲೋಕಗಳನ್ನ ಪಠಿಸಿ ಶಾಲೆಯಲ್ಲಿ ಕೊಟ್ಟ ಮನೆಗೆಲಸ ಮುಗಿಸಿ ಅಮ್ಮನ ಪ್ರೀತಿಯ ಕೈಊಟ ಮಾಡಿ ಅಪ್ಪ ಅಮ್ಮನ ಮಡಿಲಲ್ಲಿ ರಾತ್ರಿ ಒಂಬತ್ತಕ್ಕೆ ಮಲಗಿದರೆ ಏಳುವುದು ಬೆಳಗ್ಗೆ ಆರಕ್ಕೇ. ಯಾವುದೇ ಚಿಂತೆಯಿಲ್ಲದ ಯಾವುದೇ ಗೋಳಿರದ ಏಳು ವರ್ಷದ ಸುಂದರ ಬದುಕು ಹೇಗೆ ಕಳೆಯಿತೋ? ಇದಾಗಿ ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಗ ಏನೋ ಹೊಸ ಹುರುಪು, ಹೊಸ ಉತ್ಸಾಹ, ಮನದಲ್ಲೇನೋ ಭೀತಿ, ಹೊಸ ಸ್ನೇಹಿತರು, ಹೊಸ ಶಿಕ್ಷಕರು ಎಲ್ಲ ಒಂದು ಸುಂದರ ಅನುಭವ. ಆ ಮೂರು ವರ್ಷದಲ್ಲಿ ಮಾಡಿದ ಅಧ್ಯಯನ, ತಮಾಷೆಗಳು, ಕೀಟಲೆಗಳಿಗೆನೂ ಲೆಕ್ಕವಿಲ್ಲ. ಎಂತಹ ಸುಂದರ ಬಾಳಿದು, ಸ್ವಲ್ಪ ಪ್ರೌಢರಾದ  ನಮಗೆ ಹಿರಿಯರ ಕೆಲ ವಿಚಾರಗಳು ಸರಿಹೊಂದುತ್ತಿರಲಿಲ್ಲ, ನಾವ್ಯಾಗ ದೊಡ್ದವರಾಗುತ್ತೀವೋ ಅನಿಸುತ್ತಿತ್ತು. ಆ ದಿನದ ನೆನಪುಗಳೆಲ್ಲ ಹಚ್ಚ ಹಸಿರಲ್ಲದಿದ್ದರೂ ಮರೆಯದೆ ಹೃದಯದ ಗೂಡಿನಲ್ಲಿ ಉಳಿದ ಎಷ್ಟೋ ಸಂಗತಿಗಳಿದ್ದವು. ಪರಿಚಯವಾದ ಹೊಸ ಮುಖಗಳು, ಮರೆತ ಕೆಲ ಸ್ನೇಹಿತರು, ಗಣಿತದ ಟೀಚರ್, ಎಲ್ಲ ಶಿಕ್ಷಕರ ಅನುಕರಣೆ ಮಾಡುವ ಗೆಳೆಯ, ಚಿಗುರಿದ ಮೀಸೆ, ಮೊದಲ ಬಾರಿಗೆ ಇಷ್ಟಪಟ್ಟ ಹುಡುಗಿ, ಎಲ್ಲರ ಕಣ್ಣು ತಪ್ಪಿಸಿ ಅವಳನ್ನ ನೋಡುತ್ತಿದ್ದ ಕ್ಷಣಗಳು, ಗೆಳೆಯರೆಲ್ಲ ಅವಳ ಹೆಸರು ಹಿಡಿದು ನನ್ನನ್ನ ಅಣುಕಿಸುತ್ತಿದ್ದದ್ದು, ಎಲ್ಲರೆದುರಿಗೆ ಆದ ಕಪಾಳ ಮೋಕ್ಷ, ಗೋಲಿ ಚಿನ್ನಿದಾಂಡು ಬಿಟ್ಟು ಕ್ರಿಕೆಟ್ ಫೂಟ್ಬಾಲ್ ಆಡಿದ್ದು, ಗೆಳೆಯನ ಜೊತೆ ಮಾಡಿದ ಫೈಟಿಂಗ್, ಗೆಳತಿಯ ಮುಗುಳ್ನಗು, ಆಹಾ ಇಂತಹ ಅದೆಷ್ಟೋ ಕ್ಷಣಗಳು ಮರೆಯದೆ ಮನಸ್ಸಿನ ಪುಟದಲ್ಲಿ ಸುವರ್ಣ ಅಕ್ಷರದಲ್ಲಿ ಕೊರದಂತೆ ಉಳಿದುಬಿಟ್ಟಿವೆ. ಸ್ನೇಹ ಸಮ್ಮೇಳನದಲ್ಲಿ ಆಡಿದ ನಾಟಕ, ಆಶುಭಾಷಣ ಸ್ಪರ್ಧೆಯಲ್ಲಿ ವಿಷಯ ತಿಳಿಯದೆ ಪೆಚ್ಚು ಮೊರೆ ಹಾಕಿ ಎಲ್ಲರ ನಗೆಪಾಟಲೆಯಾಗಿದ್ದು, ಇದೆಲ್ಲದರ ನಡುವೆ ಮನೆಯಲ್ಲಿ ಅಪ್ಪನ ಜೊತೆ ಮಾಡಿದ ಜಗಳ, ಸೆಕ್ಸ್ ಪುಸ್ತಕ ಓದುವಾಗ ಸಿಕ್ಕು ಒದೆಸಿಕೊಂಡಿದ್ದು ಎಲ್ಲವೂ ಜೀವನದಲ್ಲಿ ಮರೆಯಲಾರದ ಕ್ಷಣಗಳು. ಎಂತಹ ಸುಂದರ ಬದುಕಲ್ಲವೇ ಇದು ಅಂತ ಯೋಚಿಸುತ್ತಿರುವಾಗಲೇ "ಟುಸ್"  ಎಂದು ಕುಕ್ಕರ್ ಸೀಟಿಯಾದಾಗ ಮತ್ತೆ ಸ್ವಪ್ನ ಲೋಕದಿಂದ ಈ ಮಾಯಾ ಲೋಕಕ್ಕೆ ಬಂದಿದ್ದೆ.

ಒಂದೆರಡು ನಿಮಿಷ ಗ್ಯಾಸ್ ಸ್ಟವ್ ಎದುರಿಗೆ ನಿಂತು ಮೂರು ಸೀಟಿಯಾದ ಮೇಲೆ ಗ್ಯಾಸ್ ಬಂದ್ಮಾಡಿ ಅತ್ತಿತ್ತ ನಲಿದಾಡುತ್ತಿದ್ದ ಮನಸ್ಸನ್ನ ಬಿಗಿ ಹಿಡಿದು ಹರಡಿದ ಮನೆಯನ್ನೆಲ್ಲ ಸ್ವಲ್ಪ ಸ್ವಚ್ಛಗೊಳಿಸುವುದರೊಳಗೆ ಗಂಟೆ ಎರಡಾಗಿತ್ತು. ಹೊಟ್ಟೆಯಲ್ಲಿ ಗುಡು ಗುಡು ಶಬ್ಧವಾಗತೊಡಗಿತ್ತು.ಉಪ್ಪು ಹಾಕಲು ಮರೆತಿದ್ದ ಮಸಾಲೆ ಭಾತಿಗೆ ಮೇಲಿಂದ ಉಪ್ಪು ಉದುರಿಸಿ ಸ್ವಲ್ಪ ತುಪ್ಪ ಹಾಕಿ ರುಚಿಸದಿದ್ದರೂ ಹಾಗೋ ಹೀಗೋ ತಿಂದು ಮುಗಿಸಿದೆ. ಯಾಕೋ ಕಣ್ಣು ಎಳೆಯತೊಡಗಿತು, ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದ ಮನಸ್ಸಿಗೆ ವಿಶ್ರಾಂತಿ ಬೇಕೆನಿಸಿತು, ರೂಮಿನಲ್ಲಿದ್ದ ಅದೇ ಹಾಸಿಗೆಯ ಮೆಲೋರಗಿದೆ. ಮಲಗುತ್ತಿದ್ದಂತೆಯೇ ನಿದ್ರಾದೇವಿ ಪ್ರಸನ್ನಳಾಗಿಯೇ ಬಿಟ್ಟಳು, ಎದ್ದದ್ದು ದಿನವೀಡೀ ಮಲಗಿದ್ದ ಫೋನ್ ರಿಂಗಾದಾಗ. ಕಂಪನಿ ಕಾಲ್ ಸಿಟ್ಟಿನಿಂದ ಕಟ್ ಮಾಡಿ ಟೈಮ್ ನೋಡಿದಾಗ ನಾಲ್ಕಾಗಿತ್ತು. ಮೊಬೈಲ್ ಬದಿಗೆಸೆದು ಹಾಸಿಗೆ ಮಡಿಚಿಟ್ಟು ಸ್ವಲ್ಪ ಫ್ರೆಶ್ ಆಗಿ ಒಂದು ಕಪ್ ಕಾಫಿ ಮಾಡಿಕೊಂಡು ಹಾಲ್ ನಲ್ಲಿದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ಅರ್ಧದಲ್ಲೇ ಉಳಿದಿದ್ದ ನೆನಪುಗಳ ಸರಮಾಲೆ ಮತ್ತೆ ಬಿಚ್ಚತೊಡಗಿತು. ಹೈ ಸ್ಕೂಲಿನ ಈ ಮೂರು ವರ್ಷದ ಅನುಭವಗಳ ಮಜವೇ ಬೇರೆ. ಅಂತೂ ಇಂತೂ ಎಲ್ಲ ಗೆಳೆಯ ಗೆಳತಿಯರಿಂದ ಬೀಳ್ಕೊಟ್ಟು ಕಾಲೇಜ್ ಸೇರಾಯಿತು. ಹೈ ಸ್ಕೂಲ್ ಬಿಟ್ಟು ಕಾಲೇಜಿಗೆ ಸೇರಿದಾಗ ಮತ್ತೊಂದು ಹೊಸ ಅನುಭವ ಮನೆ ಬಿಟ್ಟು ದೂರ ಬಂದಿದ್ದು, ಗೆಳೆಯರ ಜೊತೆ ರೂಂ ಶೇರ್ ಮಾಡಿದ್ದು, ಹೊಸ ಹೊಸ ಪರಿಚಯಗಳು, ರಾತ್ರಿ ಮಲಗುವುದು ಒಂಬತ್ತರ ಬದಲಾಗಿ ಹನ್ನೊಂದಾಗಿದ್ದು, ಕೈಯ್ಯಲ್ಲೊಂದು ಮೊಬೈಲ್, ಹುಡುಗಿಯರೆದುರಿಗೆ ಮಾಡುತ್ತಿದ ಸ್ಟೈಲ್, ಕ್ಲಾಸಿಗೆ ಕಳ್ಳ ಬಿದ್ದು ಸಿನೆಮಾ ನೋಡಿದ್ದು, ಮೊದಲ ಬಾರಿಗೆ ಮಾಡಿದ ಪ್ರಪೋಸ್, ಗೆಳೆಯನ ಜೊತೆಗೂಡಿ ಎಳೆದ ದಂ, ಸೆಮಿಸ್ಟರ್ ಅಲ್ಲಿ ಫೈಲ್ ಆಗಿದ್ದು, ಮಾಡಿದ ಕೆಟ್ಟ ಕೆಲಸಗಳಿಗೆ ಮನೆಯಲ್ಲಿ ಉಗಿಸಿಕೊಂಡಿದ್ದು ಒಂದೇ ಎರಡೇ? ಒಟ್ಟಿನಲ್ಲಿ ಕಾಲೇಜಿನಲ್ಲಿ ಮಜಾ ಮಾಡಿದ ದಿನಗಳೂ ಕೂಡ ಮರೆಯದೆ ಹಾಗೆ ಉಳಿದಿವೆ. ಗೆಳೆಯರ ಜೊತೆ ತಾಸಂತಾಸು ಹರಟಿದ್ದು , ಟ್ರೆಕಿಂಗ್, ಬೈಕ್ ರೈಡಿಂಗ್ ಹೀಗೆ ಖುಷಿಯಾಗಿ ಕಳೆದ ದಿನಗಳೆಷ್ಟೋ? ನೀಲಿ ಬಾನಲಿ ತೇಲಾಡುವ ಸ್ವಚ್ಚಂದ ಹಕ್ಕಿಯಂತ ಜೀವನದ ಹದಿನೆಂಟು ವರ್ಷಗಳು ಹೇಗೆ ಕಳೆದವೋ?

ಕಾಲೇಜು ದಿನಗಳ ಕೊನೆಯಲ್ಲಿಯೇ ಅಪ್ಪ ಅಮ್ಮ ಇಹ ಲೋಕ ತ್ಯಜಿಸಿದ್ದರು, ನನ್ನ ಜೀವನದಲ್ಲಿ ಇದೊಂದು ದೊಡ್ಡ ತಿರುವಾಗಿತ್ತು.ಜೀವನದ ಜವಾಬ್ದಾರಿಗಳು ತಿಳಿಯತೊಡಗಿದವು. ಅಪ್ಪ ಮಾಡಿಟ್ಟ ಸ್ವಲ್ಪ ಹಣವನ್ನ ಎತ್ತಿಕೊಂಡು ಪಯಣ ಬೆಳೆಸಿದ್ದು ಮಾಯಾನಗರಿ ಬೆಂಗಳೂರಿನ ಕಡೆಗೆ. ಕೆಲವು ವರ್ಷಗಳಿಂದ ನನಗೂ ಬೆಂಗಳೂರಿನ ಹುಚ್ಚು ಹಿಡಿದಿತ್ತು, ಆದರೆ ಈ ಮಾಯನಗರದ ನದಿಯ ಸುಳಿಯಲ್ಲಿ ಸಿಕ್ಕಾಗ ಅತ್ತ ಸಾಯಲೂ ಆಗದೆ ಇತ್ತ ನೀರಿನಿಂದ ಹೊರಬರಲೂ ಆಗದೆ ಅಲ್ಲೇ ತೇಲಾಡುವಂತಾಗಿತ್ತು ಜೀವನ. ಒಮ್ಮೆಲೇ ಫೋನ್ ರಿಂಗಾದಾಗ ಎಚ್ಚೆತ್ತು ನೋಡಿದರೆ ಗೆಳೆಯನ ಫೋನ್, ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ ಇಬ್ಬರೂ ಹೊರಗಡೆ ಹೋಗಿ ಸ್ವಲ್ಪ ಸುತ್ತಾಡಿ ಅಲ್ಲೇ ಎಲ್ಲಾದರೂ ಊಟ ಮಾಡಿ ಬರೋಣ ನಂಗೆ ಫುಲ್ ಬೋರಾಗಿದೆ ಅಂತ ನನ್ನುತ್ತರಕ್ಕೂ ಕಾಯದೆ ಫೋನ್ ಕಟ್ ಮಾಡಿದ್ದ. ಎದ್ದು ಕಾಫಿ ಕಪ್ಪನ್ನ ಮೊರಿಯಲ್ಲಿಟ್ಟು ಮುಖ ತೊಳೆದು ಫ್ರೆಶ್ ಆಗಿ ಪ್ಯಾಂಟ್ ಶರ್ಟ್ ಏರಿಸಿ ರೆಡಿಯಾಗುವುದರೊಳಗೆ ಗೆಳೆಯ ಬಂದು ಬಾಗಿಲು ತಟ್ಟಿದ್ದ, ಒಳಗೂ ಬರದೆ ನಡೆ ಬೇಗ ಎಂದು ಹೊರಟೇಬಿಟ್ಟ. ಬಾಗಿಲು ಭದ್ರಪಡಿಸಿ ಅವನ ಹೆಜ್ಜೆಗೆ ಹೆಜ್ಜೆ ಸೇರಿಸಿದೆ. ಯಮಹಾ ಬೈಕಿಗೆ ಜೋರಾಗಿ ಒದ್ದು ಸ್ಟಾರ್ಟ್ ಮಾಡಿ ಕೂತ್ಕೋ ಅಂದ, ಒಲ್ಲದ ಮನಸ್ಸಿನಿಂದ ಅವನ ಜೊತೆ ಮಾಯಾನಗರಿಗೆ ಪ್ರದಕ್ಷಿಣೆ ಹಾಕಲು ಹೊರಟಿದ್ದೆ.ಗಾಡಿ ಚಲಿಸುತ್ತಿತ್ತು, ಸುತ್ತಲೂ ಬುಸ್ ಬುಸ್ ಎಂದು ಹೊಗೆ ಕಾರುವ ವಾಹನಗಳು, ಹಾರ್ನ್ ಶಬ್ಧಗಳು. ಸಾವಿರಾರು ಚಿತ್ರ ವಿಚಿತ್ರ ಶಬ್ಧಗಳೆಲ್ಲ ಒಮ್ಮೆಲೇ ಕಿವಿಯ ಮೇಲೆ ಅಪ್ಪಳಿಸಿದಾಗ ತಲೆ ಚಿಟ್ಟು ಹಿಡಿದಂತಾಯಿತು. ಹಳ್ಳಿಯ ಬ್ಲಾಕ್ & ವೈಟ್ ಜೀವನದಿಂದ ಸಿಟಿಯ ಸಿಟಿಯ ಕಲರಫುಲ್ ಜೀವನಕ್ಕೆ ನಾವು ಹೇಗೆ ಒಗ್ಗಿ ಹೋಗಿದ್ದೇವೆ ಅನಿಸತೊಡಗಿತು. ‘ಓಲ್ಡ್ ಇಸ್ ಗೋಲ್ಡ್’ ಎನ್ನುವುದು ತಿಳಿದಿದ್ದರೂ ನಮಗೆ ಕಲರಫುಲ್  ಜೀವನವೇ ಬೇಕೆಂದು ಸಿಟಿಗೆ ಬಂದಾಗ ಒಮ್ಮೆಲೇ ಸಾವಿರಾರು ಬಣ್ಣಗಳು ನಮ್ಮ ಕಣ್ಕುಕ್ಕಿದಾಗ ಕಣ್ಕತ್ತಲೆ ಬಂದಿದ್ದಂತೂ ನಿಜ. ಆದರೆ ಇದಲ್ಲಲ್ಲದೆ ಬೇರೆ ಆಯ್ಕೆಗಳೇ ಇಲ್ಲದಾಗಿದೆ ನಮ್ಮಲ್ಲಿ. ಚಂಚಲ ಚಿತ್ತ  ಮತ್ತೆ ನನ್ನಿಂದ ದೂರವಾಗಿತ್ತು.

ದಾಂಡೇಲಿಯಲ್ಲಿ ಕಾಲೇಜು ಓದಿದ ನನಗೆ ಬೆಂಗಳೂರಿನ ಗೋಲ್ ಮಾಲ್ ಅರಿವಾಗಿದ್ದು ಬೆಂಗಳೂರಿಗೆ ಬಂದಾಗಲೇ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಮನದಲ್ಲಿ ಏನೋ ಒಂಥರಾ ಸಂತಸ, ದುಗುಡ, ಅಂಜಿಕೆ ಏನೆಲ್ಲಾ ಇತ್ತು, ಆದರೆ ಈಗ ಬೆಂಗಳೂರೆಂದರೆ ತಿರಸ್ಕಾರ ಭಾವನೆ ಬಿಟ್ಟರೆ ಬೇರೇನಿಲ್ಲ. ಇವೆಲ್ಲ ನಾವು ಕಟ್ಟಿಕೊಂಡು ಬಂದ ಕಟ್ಟುಪಾಡುಗಳೇ ಹೊರತು ಬೇರೇನಲ್ಲ. ಕೆಲಸಕ್ಕಾಗಿ ಒಂದು ವರ್ಷವಿಡೀ ಬೆಂಗಳೂರು ಸುತ್ತಾಡಿ, ಸಾಹೇಬರಿಂದ ಹಿಡಿದು ಜವಾನನ ವರೆಗೂ ಸಲಾಮು ಹೊಡೆದು, ಅವರಿವರ ಕೈಕಾಲು ಹಿಡಿದು, ಸಾವಿರಾರು ಇಂಟರ್ವ್ಯೂಗಳನ್ನ ಎದುರಿಸುವುದರೊಳಗೆ ಬೆಂಗಳೂರು ಚಿರಪರಿಚಿತವಾಗಿತ್ತು. ಅಂತೂ ಇಂತೂ ಕಷ್ಟ ಪಟ್ಟು ಸೇರಿದ ಕೆಲಸಕ್ಕೆ ಐದು ಇಂದಿಗೆ ವರ್ಷಗಳು ತುಂಬಿವೆ. ಈ ಐದು ವರ್ಷದಲ್ಲಿ ಆರು ಬಾರಿ ಸಂಬಳ ಹೆಚ್ಚಳ, ಮೂರು ಪ್ರಮೋಶನ್, ಹೆಚ್ಚಿದ ಕೆಲಸದ ಒತ್ತಡ ಬಿಟ್ಟರೆ ಮತ್ತೇನೂ ಬದಲಾಗಲಿಲ್ಲ. ದಿನವೂ ಒಂದೇ ಯಾಂತ್ರಿಕ ಬದುಕು. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊಲೆ, ಸುಲಿಗೆ, ಅತ್ಯಾಚಾರ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದವೇ ಹೊರತು ಏಳಿಗೆಯ ಯಾವುದೇ ಸುಳಿವಿರಲಿಲ್ಲ. ಇವೆಲ್ಲದರ ಜೊತೆ ನಾವು ಹೇಗೆ ಹೊಂದಿಕೊಂಡು ಹೋಗುತ್ತಿದ್ದೇವೆ ಅಲ್ಲವೇ? ಹೊಂದಿಕೊಳ್ಳುವುದು ಬಿಟ್ಟರೆ ಬೇರೆ ಯಾವುದೇ ಪರ್ಯಾಯಗಳೇ ಇಲ್ಲವೆಂಬುದು ಕೂಡ ಅಷ್ಟೇ ಸತ್ಯ. ಈ ಕಚಡಾ, ತಲೆ ಹಿಡುಕ ಜಗತ್ತಿನಲ್ಲಿ ಕೇಳಿದರೂ ಕೇಳದಂತೆಯೇ, ಗೊತ್ತಿದ್ದರೂ ಗೊತ್ತಿಲ್ಲದಂತೆಯೇ ಕಣ್ಣೆದುರಿಗೆ ನಡೆಯುವ ಅತ್ಯಾಚಾರ ಅನಾಚಾರಗಳನ್ನ ಸುಮ್ಮನೆ ಕೈಕಟ್ಟಿ ನೋಡಿ ಮುಂದೆ ಹೋಗುತ್ತಿದ್ದೆವೆಯೇ ಹೊರತು ನಮ್ಮಿಂದ ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗೆ? ಏನೀ ನಾಯಿ ಬಾಳು? ಗದರಿಸಿದರೆ ಬಾಲ ಮುದುರಿಕೊಂಡು ಹೋಗುತ್ತಿದ್ದೇವೆಯೇ ಹೊರತು ಕಚ್ಚುವುದು ಹೋಗಲಿ ಬೊಗಳುವುದನ್ನ ಕೂಡ ಮರೆತಿದ್ದೇವೆ ನಾವು. ಎಂತಹ ಕೀಳು ಜೀವನ ನಮ್ಮದು. ಇಲ್ಲಿಯ ಸಿಂಗಾರದ ಜಗಮಗಿಸುವ ಕ್ರೂರ ಮಾಯಾವಿಯ ದಾಸರಾಗಿದ್ದೇವೆ ನಾವೆಲ್ಲಾ, ನಮಗೆ ತಿಳಿಯದೆಯೇ ಈ ಮಾಯಾ ನಗರಿಯ ವೈಭೊಗಕ್ಕೆ ಒಗ್ಗಿ ಹೋಗಿದ್ದೇವೆ . ಈ ಹೊಲಸು ನಾಯಿ ಬಾಳಿಗಿಂತ ಸಾಯುವುದೇ ಮೇಲು ಎಂದರೂ ಸಾಯಲು ಬಿಡುತ್ತಿಲ್ಲ ಈ ಬಣ್ಣದ ದುನಿಯಾ. ಜಗತ್ತು ಬದಲಾದಂತೆ ನಾವೂ ಬದಲಾಗುತ್ತಿದ್ದೇವೆ. ಕೆಲವೇ ಕ್ಷಣದಲ್ಲಿ ಇಂಟರ್ ನೆಟ್ ಅಲ್ಲಿ ಜಗವನ್ನೇ ಜಾಲಾಡುವ ನಮಗೆ ಪಕ್ಕದ ಮನೆಯವರ ಗುರುತೇ ಇರುವುದಿಲ್ಲ. ಕಳೆದ ಕೆಲ ದಿನಗಳಲ್ಲಿ ಫೇಸ್ ಬುಕ್ ,ಟ್ವಿಟ್ಟರ್ ನಂತಹ ಅಂತರ್ಜಾಲ ಪುಟದಲ್ಲಿ ಕೆಲ ಬಾಲ್ಯದ ಸ್ನೇಹಿತರು ಸಿಕ್ಕಾಗ ನನ್ನ ಮನ ಮತ್ತೆ ಹಳೆಯದ್ದನ್ನೆಲ್ಲ ಮತ್ತೆ ನೆನಪಿಸಿಕೊಡುತ್ತಿತ್ತು . ಈ ಇಪ್ಪತ್ತೈದು ವರ್ಷಗಳ ನನ್ನ ಜೀವನದಲ್ಲಿ ಅದೆಷ್ಟು ವ್ಯಕ್ತಿಗಳು ಬಂದರೋ ಅದೆಷ್ಟು ಜನ ದೂರವಾದರೋ ತಿಳಿಯದು. ಚಿರಪರಿಚಿತರು ದೂರವಾದರು, ಗುರುತಿರದಿಲ್ಲದವರು ತುಂಬಾ ಸನಿಹವಾದರು.ಪ್ರಿತಿಗಾಗಿ ಗೋಗರೆದೆ ಸ್ನೇಹಕ್ಕಾಗಿ ಬೇಡಿದೆ, ಎಲ್ಲವೂ ವ್ಯರ್ಥ ವ್ಯರ್ಥ. ಈ ನಡುವೆ ಎಷ್ಟೋ ಜನ ತೆಗಳಿದರು, ಉಗಿದರು, ಮತ್ತೆ ಕೆಲವರು ಹೊಗಳಿ ಅಟ್ಟಕ್ಕೇರಿಸಿದರು. ಇಷ್ಟೆಲ್ಲಾ ಆದರೂ ನಾನು ಎಲ್ಲಿದ್ದೇನೋ ಅಲ್ಲಿಯೇ ಇದ್ದೇನೆ, ಒಂದೇ ಯಾಂತ್ರಿಕ ಬದುಕು.

“ಅಲ್ನೋಡೋ ಮಗಾ.. ಫಿಗರು ಏನು ಸೂಪರಾಗಿದೆ..” ಅಂತ ಗೆಳೆಯ ಕೂಗಿದಾಗ ಮತ್ತೆ ಈ ಜಗಕ್ಕೆ ಬಂದಿತ್ತು ನನ್ನೀ ಚಂಚಲ ಚಿತ್ತ. ಕೋರಮಂಗಲದ ರೋಡಿನಲ್ಲಿ ಸಂಜೆಯ ಹೊತ್ತಿಗೆ ಒಳ್ಳೆ ಜೀನ್ಸ್ ಪ್ಯಾಂಟ್, ಟೈಟ್ ಟಿ ಶರ್ಟ್ ಹಾಕಿದ್ದ ಲಲನೆಯರನ್ನ ನೋಡಿದಾಗ ಬೆಳಿಗ್ಗೆಯಿಂದ ಗಂಟಾಗಿದ್ದ ಮುಖದಲ್ಲಿ ಸ್ಮಿತಹಾಸ್ಯ ಮೂಡಿತ್ತು. ಏನೀ ಚಂಚಲ ಮನಸ್ಸು ಒಮ್ಮೆಲೇ ತನ್ನ ರೂಪವನ್ನೇ ಬದಲಾಯಿಸುತ್ತೆ? ದಿನವಿಡೀ ಹಳೆಯ ನೆನಪುಗಳ ಹಿಂದೆ ಸುತ್ತುತ್ತಿದ್ದ ಈ ಚಿತ್ತ ಒಮ್ಮೆಲೇ ಬದಲಾದದ್ದಾರೂ ಹೇಗೆ? ಎಲ್ಲ ಮಾಯನಗರಿಯ ಮಹಿಮೆ. ಎಷ್ಟೇ ಸುಖ ದುಃಖಗಳಿದ್ದರೂ ಬೆಂಗಳೂರಿನ ಗಲ್ಲಿ ಗಲ್ಲಿ ತಿರುಗಿ ಬಾರಲ್ಲಿ ಕೂತು ಒಂದೆರಡು ಪೆಗ್ ಹಾಕಿದರೆ ಎಲ್ಲ ಮಾಯ. ಬೆಂಗಳೂರಿಗೆ ಬಂದು ಈ ಐದು ವರ್ಷದಲ್ಲಿ ಅದೆಷ್ಟು ಹುಡುಗಿಯರು ಕಣ್ಣೆದುರಿಗೆ ಹೋದರೋ? ಪ್ರತಿಬಾರಿಯೂ ಈ ಮನ ಅರಳುತ್ತೆ. ಒಂದು ಹುಡುಗಿ ಹಿಂದೆ ಬಿದ್ದು ಸ್ವಲ್ಪ ದಿನ ಜೊತೆ ತಿರುಗಾಡಿ ಅವಳು ಕೈಕೊಟ್ಟು ಹೋದಾಗ ವಾರವಿಡೀ ಗಡ್ಡ ಬಿಟ್ಟುಕೊಂಡು,ವಿರಹ ಗೀತೆ ಹಾಡುತ್ತ, ಬಾರಲ್ಲಿ ಕೂತು ಎರಡು ಪೆಗ್ ಹಾಕಿ, ಮರುದಿನ ಆಫಿಸಿಗೆ ಲೇಟಾಗಿ ಹೋಗಿ ಉಗಿಸಿಕೊಂಡು, ಇದೇ ಚಿಂತೆಯಲ್ಲಿ ಒಂದೆರಡು ವಾರ ಕಳೆದು ಮತ್ಯಾವುದಾದರೂ ಹುಡುಗಿ ನೋಡಿ ಸ್ಮೈಲ್ ಕೊಟ್ಟರೆ ಮುಗಿಯಿತು. ಹಳೆಯದನ್ನೆಲ್ಲ ಮರೆತು ಈ ಮನ ಅವಳ ಹಿಂದೆಯೇ ಸುತ್ತತೊಡಗುತ್ತೆ. ಅವಳೇನಾದರೂ ಕೈ ಕುಲುಕಿದರಂತೂ ಮುಗಿಯಿತು ಮತ್ತೊಂದು ಪ್ರೇಮಗೀತೆ ಶುರುವಾದಂತೆ. ಅಂತೂ ಇಂತೂ ದಿನವಿಡೀ ಹಳೆಯ ನೆನಪುಗಳನ್ನೆಲ್ಲ ಮೆಲುಕುಹಾಕಿ ನಾಳಿನ ಬಾಳಿಗೆ ಹೊಸ ಮುನ್ನುಡಿಯನ್ನ ಬರೆದ ಚಿತ್ತ ಮತ್ತೆ ತನ್ನ ದಾರಿಗೆ ಬಂದಿದೆ, ಇದಕ್ಕೆಲ್ಲ ಕಾರಣ ಹುಡುಕಿದರೆ ಎಲ್ಲ ಕತ್ತಲೆ ಕತ್ತಲೆ. ಮತ್ತೆ ನಾಳೆಯಿಂದ ಕೆಲಸ-ಮನೆ, ಕೆಲಸ-ಮನೆ ಹೀಗೆ ಒಂದು ವಾರದ ಗಡಿಬಿಡಿಯಲ್ಲಿ ಈ ಮನಸ್ಸಿಗೆ ಬೇರೇನೂ ಕೆಲಸವಿಲ್ಲ. ಈ ಚಿತ್ತ ಇನ್ನೊಂದು ವಾರ ನನ್ನ ಮುಷ್ಟಿಯಲ್ಲೇ. ಗೆಳೆಯನ ಜೊತೆ ತಿರುಗಾಡಿ ಸ್ವಲ್ಪ ಹೊತ್ತು ಹರಟೆ ಹೊಡೆದು ಉಂಡು ಮನೆಗೆ ಬಂದಾಗ ರಾತ್ರಿಯ ಹನ್ನೊಂದು.

ಈ ಹೈಪರ್ ಟೆನ್ಶನ್ ಜಗದಲ್ಲಿ ಮನವನ್ನ ತಂಪಾಗಿಸಿ, ಬದುಕಲು ಹೊಸ ಚೈತನ್ಯವನ್ನು ನೀಡುವ ಹೊಸ ಕನಸಿಗಾಗಿ ಕಾಯುತ್ತ ಹಾಸಿಗೆಯ ಮೇಲೆ ಒರಗಿದ ನನಗೆ ನಿದ್ರಾದೇವಿ ಯಾವಾಗ ಪ್ರಸನ್ನಳಾದಳೋ ತಿಳಿಯಲೇ ಇಲ್ಲ…



* ಮಾರ್ಚ್ ಮೊದಲ ವಾರದ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಲಿಂಕ್:  http://www.panjumagazine.com/?p=1183

ಮೊದಲ ರಾತ್ರಿ:

ಇಂದಿಗೆ ನಮ್ಮ ಮದುವೆಯಾಗಿ ಹತ್ತು ವರ್ಷಗಳು ಕಳೆದಿವೆ. ಸರಿಯಾಗಿ ಹತ್ತುವರ್ಷಗಳ ಹಿಂದೆ ಇದೆ ದಿನ ನಾವಿಬ್ಬರೂ ಬಾಳ ಸಂಗಾತಿಯಾಗಿದ್ದೆವು. ನಾನು ನನ್ನ ಹೆಂಡತಿ ಸಿಂಧು ಮತ್ತು ನನ್ನ ಎಂಟು ವರ್ಷದ ಧೃತಿಯ ಪುಟ್ಟ ಸಂಸಾರ. ಮದುವೆಯಾಗಿ ಹತ್ತು ವರ್ಷಗಳು ಹೇಗೆ ಉರುಳಿದವೋ ನಾನಂತೂ ತಿಳಿಯೆ. ಈ ಹತ್ತು ವರ್ಷದಲ್ಲಿ ನಮ್ಮಿಬ್ಬರ ನಡುವೆ ಬಂದ ಚಿಕ್ಕಪುಟ್ಟ ಮುನಿಸು, ಕೋಪ, ನೋವು, ನಲಿವು ಹೀಗೆ ಎಲ್ಲದರ ನಡುವೆಯೂ ನಮ್ಮ ಸಂಸಾರ ಈಗಲೂ ನೋಡಿದವರೆಲ್ಲ ಹೊಟ್ಟೆಕಿಚ್ಚುಪಡುವಂತಿದೆ. ಹತ್ತು ವರ್ಷದ ಈ ಸುಖೀ ಸಂಸಾರದಲ್ಲಿ ಅದೆಷ್ಟು ನೋವು ನಲಿವುಗಳು ಬಂದು ಹೋದರೂ ನಮ್ಮ ಮದುವೆಯ ಮೊದಲ ರಾತ್ರಿಯ ನೆನಪುಗಳು ಮಾತ್ರ ಹೃದಯದ ಗೂಡಿನಲ್ಲಿ ಬೆಚ್ಚಗೆ ಇನ್ನೂ ಹಾಗೆ ಉಳಿದಿವೆ, ಅದಕ್ಕೆ ವಿಶೇಷ ಕಾರಣವೂ ಇರುವುದು ಅಷ್ಟೇ ನಿಜ.

ನಮ್ಮಿಬ್ಬರದೂ  ಮಧ್ಯಮ ವರ್ಗದ ಕುಟುಂಬ ಜೊತೆಗೆ ಧರ್ಮ ಮತ್ತು ಧಾರ್ಮಿಕ ಮನೋಭಾವನೆಯುಳ್ಳ ಕುಟುಂಬವಾಗಿತ್ತು. ಹಾಗಾಗಿ ಗುರುಹಿರಿಯರ ಅನುಮತಿಯಿಂದಲೇ ನಮ್ಮ ಮದುವೆ ನಿಶ್ಚಯವಾಗಿತ್ತು. ಅಷ್ಟೇನೂ ಹುಷಾರಿಲ್ಲದಿದ್ದರೂ ಬಿ ಕಾಂ ಮುಗಿಸಿ ಪುಟ್ಟ ಕೆಲಸ ಮಾಡುತ್ತಿದ್ದ ನನ್ನನ್ನು ಎಂ ಟೆಕ್ ಮಾಡಿದ ಹುಡುಗಿ ಮದುವೆಯಾಗಲು ಒಪ್ಪಿದ್ದು ನನಗೆ ಸ್ವಲ್ಪ ಅಚ್ಚರಿಯನ್ನು ಉಂಟುಮಾಡಿತ್ತು. ತಂದೆತಾಯಿಯಿಲ್ಲದ ಅವಳು ಬೆಳೆದಿದ್ದೆಲ್ಲ ದೊಡ್ಡಪ್ಪನ ಮನೆಯಲ್ಲಿಯೇ.ನಿಶ್ಚಯವಾಗಿ ಒಂದೇ ತಿಂಗಳಲ್ಲಿ ಮದುವೆ ಇದ್ದರಿಂದ ಮನೆಯಲ್ಲೆಲ್ಲ ಓಡಾಟ ಜೋರಾಗಿತ್ತು.ಆಗಿನ ಕಾಲದಲ್ಲಿ ಮೊಬೈಲ್ ಇಲ್ಲವಾದ್ದರಿಂದ ಮಧ್ಯದಲ್ಲಿ ಸೀರೆ ಆರಿಸಲೆಂದು ಅವಳು ಬಂದಾಗ ಭೇಟಿಯಾಗಿದ್ದು ಬಿಟ್ಟರೆ ನಮಗೆ ಮಧ್ಯದಲ್ಲಿ ಮಾತನಾಡಲು ಅವಕಾಶವಿರಲಿಲ್ಲ.ಹಾಗಾಗಿ ಒಬ್ಬರಿಗೊಬ್ಬರು ಅರಿಯಲು ಅವಕಾಶವೇ ಇಲ್ಲವಾಗಿತ್ತು. ಅಂತೂ ಇಂತೂ ತಿಂಗಳು ಕಳೆದು ಮದುವೆಯ ದಿನ ಬಂದೇಬಿಟ್ಟಿತು. ಇಷ್ಟರೊಳಗೆ ಗೆಳೆಯರೆಲ್ಲ ಬಂದು ಸಿಕ್ಕಾಪಟ್ಟೆ ಗೋಳುಹೊಯ್ದುಕೊಂಡಿದ್ದೂ ಆಯಿತು. ಎಲ್ಲ ವಿಧಿವಿದಾನಗಳೆಲ್ಲ ಹಿರಿಯರ ಉಪಸ್ಥಿತಿಯಲ್ಲಿ ವೇದಮಂತ್ರಗಳ ಘೋಷದಲ್ಲಿ ನಡೆದವು. ಕನ್ಯಾದಾನ, ಕಂಕಣ ಬಂಧನ, ಮಾಂಗಲ್ಯ ಬಂಧನ, ಲಾಜ ಹೋಮ, ಪಾಣಿಗ್ರಹಣ, ಸಪ್ತಪದಿ ಹೀಗೆ ಎಲ್ಲ ವಿಧಿಗಳೆಲ್ಲ ಸರಾಗವಾಗಿ ನಡೆದವು.ಊಟದಲ್ಲಿ ಒಬ್ಬರಿಗೊಬ್ಬರು ನೀಡಿದ ಕೈತುತ್ತು ಇನ್ನೂ ನೆನಪಿದೆ. ಸಂಜೆ ದೇವಸ್ಥಾನಕ್ಕೆ ಜೊತೆಯಾಗಿ ಹೋಗಿ ಕೈಮುಗಿದು ಮನೆಗೆ ಬರುವವರೆಗೂ ಇಬ್ಬರೂ ಮೌನವಾಗಿಯೇ ಇದ್ದೆವು. ಮನೆಗೆ ಬರುವುದರೊಳಗೆ ಮನೆಯಲ್ಲಿ ಎಲ್ಲ ಗೆಳೆಯರ ಗಲಾಟೆ ಜೋರಾಗಿತ್ತು, ಏನೆಂದು ನೋಡಿದರೆ ನನ್ನ ಕೆಲ ಗೆಳೆಯರು ಅವಳ ಕೆಲ ಗೆಳತಿಯರು ಹೀಗೆ ಎಲ್ಲ ಸೇರಿ ಮೊದಲ ರಾತ್ರಿಯ ತಯಾರಿ ನಡೆಸುತ್ತಿದ್ದರು.

ರಾತ್ರಿಯ ಊಟದವರೆಗೂ ನಮ್ಮಿಬ್ಬರನ್ನ ಎಷ್ಟು ಪೀಡಿಸಿದಿರೆಂದರೆ ಅದು ಹೇಳತೀರದು. ಹುಡುಗರ ಆಟಕ್ಕೆ ಕೆಲಹಿರಿಯರ ಸಪೋರ್ಟ್ ಬೇರೆ,ಇಷ್ಟಿದ್ದರೆ ಕೇಳಬೇಕೆ? ಊಟಮುಗಿದು ಸ್ನೇಹಿತರೆಲ್ಲ ಒಂದಿಷ್ಟು ಕಿವಿಮಾತುಗಳನ್ನ ಹೇಳಿ ಹುಷಾರಪ್ಪ ಅಂತ ಕೋಣೆಗೆ ದಬ್ಬಿದಾಗ ಹತ್ತಾಗಿತ್ತು, ಸಿಂಗರಿಸಿದ ಮಂಚ, ಪುಟ್ಟದೊಂದು ದೀಪ,ಎಲ್ಲ ಬದಿಯಿಂದ ಹೂವಿನ ಹಾರಗಳು.. ಮಲ್ಲಿಗೆ ಹೂಗಳ ಸುಗಂಧದ ಜೊತೆಗೆ ನನ್ನ ಎದೆಯ ಬಡಿತವೂ ಹೆಚ್ಚಾಗಿತ್ತು. ಗೆಳೆಯರ ಕಿವಿಮಾತುಗಳೆಲ್ಲ ಹಣೆಯ ಬೆವರಿನ ಜೊತೆ ಇಳಿದುಹೋಗಿತ್ತು. ಕೈಯಲ್ಲಿ ಹಾಲಿನ ಲೋಟ ಹಿಡಿದು ಎಲ್ಲರಿಂದ ಬೀಳ್ಕೊಟ್ಟು ತಲೆ ಕೆಳಗೆ ಹಾಕಿ ಒಳಗೆ ಬಂದ ಅವಳನ್ನ ನೋಡಿ ಯಾವುದೋ ಸಿನಿಮಾದ ಸೀನ್ ನೆನಪಿಗೆ ಬಂದಿತ್ತು... ಹಾಲಿನ ಲೋಟವನ್ನ ಕೈಗಿತ್ತು ಬದಿಗೆ ಕುಳಿತಾಗ ಈ ಸಿನೆಮಾಕ್ಕೆ ನಾನೇ ಹೀರೋ ಎಂಬುದು ಕೂಡ ಅರಿವಿಗೆ ಬಂದಿತ್ತು. ಮುಂದೇನು ಅನ್ನುವುದು ಇಬ್ಬರಿಗೂ ತಿಳಿಯದೆ ಹತ್ತು ನಿಮಿಷಗಳು ಮೌನದಲ್ಲೇ ಕಳೆಯಿತು. ಕೊನೆಗೆ ನಾನೇ ಗಂಟಲು ಸರಿಮಾಡಿಕೊಂಡು ಮಾತು ಶುರುಮಾಡಿದೆ, ಇದು ನಂಗೆ ಫಸ್ಟ್ ಟೈಮ್ ನೋಡು ಸ್ವಲ್ಪ ಹೆದರಿಕೆ ಅಂತ ತೊದಲುತ್ತಲೇ ನುಡಿದೆ. ಒಮ್ಮೆಲೇ ನನ್ನತ್ತ ತಿರುಗಿದಳವಳು, ನಾನು ಸಾವರಿಸಿಕೊಂಡು ನನ್ನ ಮಾತಿನ ಅರ್ಥ ಹಾಗಲ್ಲ ಎಂದೇ.. ಮತ್ತೆ ತಲೆ ಕೆಳಗೆ ಹಾಕಿದಳು. ಮತ್ತೈದು ನಿಮಿಷ ಮೌನ. ನಾನೇ ಮತ್ತೆ  ಮಾತಿಗೆಳೆದೆ ನೀನು ಎಂ ಟೆಕ್ ಓದಿದವಳು ಕಾಲೇಜ್ ಎಲ್ಲ ತಿರುಗಿದವಳು ಇಷ್ಟು ಸೈಲೆಂಟ್ ಹೇಗೆ ಅಂದೆ..  ನಿರುತ್ತರ. ನಾನೇ ಮತ್ತೆ ಯಾಕೆ ಸುಮ್ಮನಿದ್ದೀಯ? ಏನೂ ಮಾತಾಡಲ್ವ, ಏನೋ ಹೇಳಬೇಕೆಂದು ಹೊರಟವಳು ಮತ್ತೆ ಸುಮ್ಮನಾದಳು.ಇರಲಿ ಪರವಾಗಿಲ್ಲ ಹೇಳು ಅಂದೆ. ಹಾಗೇನಿಲ್ಲ ಕಾಲೇಜ್ ಅದೂ ಇದು ಅಂತ ತಿರುಗಿದರೂ ನಾನು ಸ್ವಲ್ಪ ಸೈಲೆಂಟೆ, ಮನೇಲಿ ಹೇಗೆಬೇಕೋ ಹಾಗೆ ಇರೋಕೆ ಬಿಟ್ಟಿಲ್ಲ ಅಂತ ಕೊನೆಗೂ ಉಸಿರು ಬಿಟ್ಟಳು. ನೋಡು ಇದು ಇನ್ಮೇಲೆ ನಿನ್ನದೇ ಹಕ್ಕಿನ ಮನೆ, ಇಲ್ಲಿ ನೀನು ಹೇಗೆ ಬೇಕೋ ಹಾಗಿರಬಹುದು, ಯಾವುದಕ್ಕೂ ಭಯಪಡಬೇಕಾಗಿಲ್ಲ, ಆದರೆ ನಮ್ಮ ಸಂಪ್ರದಾಯಗಳನ್ನ ಸ್ವಲ್ಪ ಮಟ್ಟಿಗೆ ಅನುಸರಿಸಿಕೊಂಡು ಹೋಗಬೇಕು ಅಷ್ಟೇ ಅಂದೇ. ಅನಪೆಕ್ಷಿತವಾದ ಮಾತಿಗೆ ನಸುನಕ್ಕು ತಲೆಯಾಡಿಸಿದಳು. ಯಾಕೆ ನಗು ?? ಏನಿಲ್ಲ ನನಗೆ ತುಂಬಾ ಖುಷಿಯಾಯ್ತು ಇಷ್ಟು ದಿನ ದೊಡ್ಡಪ್ಪನ ಮನೆಯಲ್ಲಿದ್ದೆ, ಎಷ್ಟಿದ್ದರೂ ಕೊನೆಗೆ ಅಪ್ಪ ಅಮ್ಮನ ತರ ಅಲ್ಲ ನೋಡಿ ಆದರೆ ಈಗ ನೀವು ಇದು ನಿನ್ನ ಸ್ವಂತದ ಮನೆ ಅಂದ್ರಲ್ಲ ಅಷ್ಟೇ ಸಾಕು ಎಂದು ಮುಗ್ಧವಾಗಿಯೇ ನುಡಿದಳು . ನಾ ನಕ್ಕೆ ..  ಯಾಕೀ ನಗು ಅನ್ನುವಂತಿತ್ತು ಅವಳ ನೋಟ.ನೋಡು ಸಿಂಧು ನೀನು ಈ ಮನೆಯ ಭಾಗ್ಯಲಕ್ಷ್ಮಿ ಆಗಬೇಕು ಅನ್ನೋದೇ ನನ್ನ ಆಸೆ, ಎಲ್ಲರ ಜೊತೆ ಹೊಂದಿಕೊಂಡು ಈ ಮನೆಯ ಮಗುವಾಗಿ ನನ್ನ ಮುದ್ದು ಪತ್ನಿಯಾಗಿ ಇದ್ದರೆ ನನಗೆ ಮತ್ತೇನೂ ಬೇಡ ಅಂದಿದ್ದಕ್ಕೆ ಖಂಡಿತ ನಾನು ಪ್ರಯತ್ನಿಸುತ್ತೇನೆ ಅತ್ತೆ ಮಾವ ನನಗೆ ತಂದೆ ತಾಯಿಯಿದ್ದಂತೆ ಅವರನ್ನ ಚೆನ್ನಾಗಿ ನೋಡಿಕೊಳ್ಳುತ್ತೇನೆ, ನೀವೊಬ್ಬರು ಜೊತೆಗಿದ್ದರೆ ನನಗೆ ಯಾವುದೇ ಭಯವಿಲ್ಲ ಎಂದೂ ನನ್ನ ಕೈ ಬಿಡುವುದಿಲ್ಲ ತಾನೇ ಅಂತ ನನ್ನ ಕೈ ಹಿಡಿದಳು... ಏನೋ ಹೊಸ ರೋಮಾಂಚನ ಮನದಲ್ಲಿ, ಬೆಳಿಗ್ಗೆ ಎಲ್ಲರೆದುರಿಗೆ ಪಾಣಿಗ್ರಹಣದಲ್ಲಿ ಕೈ ಹಿಡಿದಾಗ ಏನೂ ಅನಿಸಿರಲಿಲ್ಲ ಆದರೆ ಈಗ ಏಕಾಂತದಲ್ಲಿ ಏನೋ ಹೊಸ ಅನುಭವ. ನನ್ನ ಮನದಲ್ಲಾದ ಬದಲಾವಣೆ ಅವಳ ಅರಿವಿಗೆ ಬಂದಿತ್ತು,ಆದರೂ ಹಿಡಿದ ಕೈ ಹಾಗೆ ಇತ್ತು. ನೋಡು ಚಿನ್ನ ಇವತ್ತು ನೀನು ಹಳೆಯ ಎಲ್ಲ ಬಂಧನವನ್ನ ಬಿಟ್ಟು ನನ್ನ ಜೊತೆ ಬಂದಿದೀಯ "ಮಾಂಗಲ್ಯಂ ತಂತುನಾನೇನ ಮಮ ಜೀವನ ಹೆತುನಾ ಕಂಠೇ ಬಧ್ನಾಮಿ ಸುಭಗೆ ಸಾಜೀವ ಶರದಃ ಶತಮ್" ಅಂತ ಮಾಂಗಲ್ಯ ಕಟ್ಟಿರುವುದು  ನೂರು ವರ್ಷ ಸುಖವಾಗಿ ಬಾಳೋಣ ಎಂದು. ಅಗ್ನಿಯ ಸುತ್ತ ಪ್ರದಕ್ಷಿಣೆ ಹಾಕಿದ್ದು ನಾವಿಬ್ಬರೂ ಪ್ರೀತಿಯಿಂದ ಹೊಂದಾಣಿಕೆಯಿಂದ ಇರೋಣ ಅಂತ. "ಧರ್ಮೇಚ ಅರ್ಥೆಚ ಕಾಮೇಚ ನಾತಿಚರಾಮಿ" ಅಂದಿದ್ದು ಎಲ್ಲದರಲ್ಲೂ ನಿನ್ನ ಜೊತೆ ಸಮಪಾಲು ಹಂಚಿಕೊಳ್ಳುತ್ತೇನೆ ಅಂತ.ದೇವಾಗ್ನಿ ದ್ವಿಜ(ಬ್ರಾಹ್ಮಣ)ರ ಸನ್ನಿಧಿಯಲ್ಲಿ ನಿನ್ನ ಕೈ ಹಿಡಿದಿರುವುದು ಬಿಡಲಿಕ್ಕಲ್ಲ. ಏನೂ ಚಿಂತೆ ಮಾಡಬೇಡ, ಮದ್ವೆ ಆದ ಮೇಲೆ ಈಡೀ ದಿನ ಗಂಡ ಅತ್ತೆ ಮಾವ ನ ಸೇವೆ ಮಾಡಿಕೊಂಡು ಇರಬೇಕು ಅಂತ ಏನೂ ಇಲ್ಲ,ನನಗೆ ಹೋಗ್ರೀ ಬರ್ರೀ ಅಂತ ಕರೀಬೇಕೂ ಅಂತನೂ ಇಲ್ಲ, ಎಲ್ಲರೆದುರಿಗೆ ಬೇಕಾದ್ರೆ ಹಾಗೆ ಕರೀ ಪರವಾಗಿಲ್ಲ ಆದರೆ ನಾವಿಬ್ರೇ ಇರೋವಾಗ ಹೋಗು ಬಾ ಅಂದ್ರೆ ಸಾಕು. ಮುಂದೆ ಏನಾದ್ರೂ ಕೆಲಸ ಮಾಡಬೇಕು ಅನಿಸಿದರೆ ನಿನ್ನಿಷ್ಟ. ನಿಂಗೆ ನಿನ್ನ ಕೆಲಸದಲ್ಲಿ ನನ್ನ ಕೈಲಾದ ಸಹಾಯ ನಾನು ಮಾಡ್ತೀನಿ. ಹೆಂಡತಿ ಈಡೀ ದಿನ ಮನೇಲಿ ದುಡಿಬೇಕು,ಗಂಡ ಕುತ್ಕೊಂಡು ತಿನ್ಬೇಕು ಅನ್ನೋನು ನಾನಲ್ಲ. ಇದನ್ನೆಲ್ಲಾ ತದೇಕಚಿತ್ತದಿಂದ ಕೇಳುತ್ತಿದ್ದ ಅವಳ ಮೇಲೆ ಕರುಣೆ ಬಂದು ಬೋರ್ ಆಯ್ತಾ ಅಂದೇ.. ಇಲ್ಲ ಇಲ್ಲ ನಿಮಗೆ ನನ್ನ ಮೇಲೆ ಪ್ರೀತಿಗೆ ನಾನು ಚಿರಋಣಿ ಇಷ್ಟು ಪ್ರೀತಿಸುವ ನನ್ನ ಮನದ ದುಗುಡವನ್ನ ಅರಿಯುವ ಗಂಡ ಸಿಗ್ತಾರೆ ಅನ್ಕೊಂಡಿರಲಿಲ್ಲ, ಮದುವೆಯಾದ ಮೇಲೆ ಹೇಗೋ ಏನೋ ಅನ್ಕೊಂಡಿದ್ದ ನನಗೆ ಈಗ ಸ್ವಲ್ಪ ಸಮಾಧಾನವಾಯಿತು. ನಿಮ್ಮೆಲ್ಲ ನೋವು ನಲಿವಿನಲ್ಲಿ ಸಮಪಾಲು ಹಂಚಿಕೊಂಡು ಸದಾ ಸುಖವಾಗಿ ಬಾಳಲು ಖಂಡಿತ ಪ್ರಯತ್ನ ಪಡ್ತೀನಿ ಅಂತ ನನ್ನ ಪ್ರಶ್ನೆಗೆ ಸಹಜವಾಗಿಯೇ ಉತ್ತರಿಸಿದ್ದಳು. ಈಗ ನಮ್ಮಿಬ್ಬರ ನಡುವಿನ ಅಂತರ ತುಂಬಾ ಕಮ್ಮಿಯಾಗಿತ್ತು. ಒಬ್ಬರಿಗೊಬ್ಬರು ಸ್ವಲ್ಪ ಅರ್ಥಮಾಡಿಕೊಂಡಿದ್ದೆವು. "ಸಖಾ ಸಪ್ತಪದೀ ಭವ" ಅಂತ ಜೊತೆಗೂಡಿ ಏಳು ಹೆಜ್ಜೆ ಇತ್ತು ನಮ್ಮ ಈ ಸಂಬಧ ಸ್ನೇಹದಂತೆ ಇರಲಿ ಎಂದಿದ್ದು ನಮ್ಮಿಬ್ಬರಲ್ಲಿ ಸ್ನೇಹಭಾವ ಏರ್ಪಾಡಾಗಿತ್ತು.

ಮದುವೆಯ ಮೊದಲ ರಾತ್ರಿ ಏನೇನೋ ಆಸೆ ಇಟ್ಟುಕೊಂಡು ಬಂದ ನಿನಗೆ ನನ್ನ ಪುರಾಣ ಕೇಳಿ ಬೇಜಾರ್ ಬಂದಿರಬೇಕು ಅಲ್ವ ಅಂತ ನಕ್ಕೆ. ಅದಕ್ಕವಳು ನಗುತ್ತ ಆಸೆ ಆಕಾಂಕ್ಷೆಗಳು ಜೀವನವಿಡೀ ಇರುವುದೇ ಆದರೆ ಒಬ್ಬರಿಗೊಬ್ಬರು ಅರ್ಥ ಮಾಡಿಕೊಂಡು ಹೊಂದಾಣಿಕೆಯಿಂದ ಬಾಳಿದರೆ ಮಾತ್ರ ಆ ಆಸೆಗಳು ಸಹಜವಾಗಿ ಪೂರೈಸುವುದು ಅಲ್ಲವೇ? ಈಡೀ ಜೀವನದ ನಿರ್ಧಾರವನ್ನ ಈ ರಾತ್ರಿಯಲ್ಲಿ ತೆಗೆದುಕೊಂಡರೆ ಈ ರಾತ್ರಿಯ ಮಹತ್ವವೇ ಬೇರೆ ತಾನೇ. ಇಡೀ ದಿನದ ಜಂಜಾಟವನ್ನ ಮರೆತು ನಾಳೆಯ ಚಿಂತೆ ಬಿಟ್ಟು ಒಬ್ಬರಿಗೊಬ್ಬರು ನಮ್ಮ ಮನದ ಭಾವನಗಳನ್ನ ನಾಲ್ಕು ಗೋಡೆಯ ಒಳಗೆ ಬಂಧಿಸಿ ಅರ್ಥೈಸಿಕೊಂಡರೆ ಬಾಳು ಸುಂದರವಾಗುವುದು ಖಂಡಿತ, ದೇಹದಿಂದ ಒಂದಾದಂತೆ ಮನದಿಂದ ಒಂದಾಗುವುದು ಈ ರಾತ್ರಿಯಲ್ಲಿ ಮಾತ್ರ ಸಾಧ್ಯ ಅಲ್ಲವೇ??. ನನಗೆ ಅವಳ ಅರ್ಥಭರಿತ ಮಾತುಗಳು ತುಂಬಾ ಹಿಡಿಸಿದವು. ಸರಿಯಾಗಿ ಹೇಳಿದೆ ಚಿನ್ನ ಆದರೆ ಪ್ರತಿರಾತ್ರಿಯೂ ಹೀಗೆ ಮಾತಾಡ್ತಾ ಹೋದರೆ ಹೇಗೆ ಅಂದೇ ... ನನ್ನ ಮಾತುಗಳ ಗೂಢಾರ್ಥ ತಿಳಿದ ಅವಳ ಗಲ್ಲ ರಂಗೇರಿತ್ತು, ಎರಡೂ ಕೈಯ್ಯಿಂದ ಮುಖವನ್ನ ಮೇಲೆತ್ತಿ ನಾಚಿದರೆ ತುಬಾ ಸುಂದರವಾಗಿ ಕಾಣ್ತೀಯ ಅಂದೆ. ನಗುತ್ತ ಸೆಳೆದು ತಬ್ಬಿದಳು. ನಾಲ್ಕು ಗೋಡೆಯ ಹೊರಗೆ ಸಾವಿರಾರು ಚರ್ಚೆಗಳು ಆದರೆ ನಾಲ್ಕು ಗೋಡೆಯ ಮಧ್ಯೆ ಬಾಹುಬಂಧನದಲ್ಲಿ ನಮ್ಮ ಮನದ ಮಿಲನವಾಗಿತ್ತು.

ಕೈತುತ್ತು:


 










ಅಮ್ಮ ನೀಡುವ ಪ್ರೀತಿಯ ಕೈತುತ್ತು,
ಜಗದಲಿ ಇನ್ಯಾವುದಿದೆ
ಇದಕಿಂತ ಬೆಲೆಬಾಳುವ ವಸ್ತು.

ಫೋಟೋ ಕೃಪೆ: ಸೌಮ್ಯ ಭಾಗವತ್.

ಪುಟ್ ಕಥೆಗಳು:

ಪ್ರೀತಿ ಮಾಯೆ:
ನವೀನ ಮತ್ತು ಮೇಘ ಒಬ್ಬರಿಗೊಬ್ಬರು ತುಂಬಾ ಪ್ರೀತಿಸುತ್ತಿದ್ದರು.ಏನೇ ಆದರೂ ಒಬ್ಬರಿಗೊಬ್ಬರು ಬಿಟ್ಟಿರದಷ್ಟು ಗಟ್ಟಿ ಪ್ರೇಮ ಅವರದ್ದು.ಕೆಲವೇ ದಿನದಲ್ಲಿ ಇಬ್ಬರೂ ಹಸೆ ಮಣೆ ಏರುವವರಿದ್ದರು.ಮದುವೆ ತಯಾರಿಯೆಲ್ಲ ಜೋರಾಗಿ ನಡೆಯುವ ಸಂದರ್ಭದಲ್ಲಿಯೇ ಚಿಕ್ಕ ಅನಾಹುತ ನಡೆದು ಮುಖ ಸುಟ್ಟುಕೊಂಡಿದ್ದಳು ಮೇಘ.ಮುಖ ಮತ್ತೆ ಯಥಾಸ್ಥಿತಿಗೆ ಬರುವುದಿಲ್ಲವೆಂದು ತಿಳಿದು ಮದುವೆ ಆಗುವುದಿಲ್ಲವೆಂದು ಖಡಾಖಂಡಿತವಾಗಿ ನುಡಿದ ನವೀನ.ಇಂದು ಮೇಘಳ ಮದುವೆಯ ದಿನ.ಹಸೆಮಣೆಯ ಮೇಲೆ ಮುಖ ಸುಟ್ಟುಕೊಂಡ ಮೇಘ ಪಕ್ಕದಲ್ಲಿ ಮಧ್ಯಮ ವರ್ಗದ ಹುಡುಗನೆಂದು ಅವನ ಪ್ರಿತಿಯನ್ನ ತಿರಸ್ಕರಿಸಿದ್ದ ಹುಡುಗ ಪವನ್.

ವಿಧಿ:
ಇಂದಿನ ದಿನಗಳೆಲ್ಲ ಶರತ್ ಬಾಳಿನಲ್ಲಿ ಎಂದೂ ಮರೆಯದ ದಿನಗಳಾಗಿದ್ದವು.ಶರತ್ ಮದುವೆ ನಿಶ್ಚಯವಾಗಿತ್ತು.ಕಷ್ಟಪಟ್ಟು ಓದಿ, ಒಳ್ಳೆಯ ಕೆಲಸ ಗಿಟ್ಟಿಸಿ, ಮನೆ ಕೊಂಡುಕೊಂಡು ಸುಂದರ ಹುಡುಗಿ ಕರುಣಾಳನ್ನ ಮದುವೆಯಾದಾಗ ಈ ಜಗತ್ತಿನಲ್ಲಿ ನನ್ನಷ್ಟು ಸುಖಪುರುಷ ಬೇರೆ ಯಾರೂ ಇಲ್ಲವೇನೋ ಅನ್ನುವಷ್ಟು ಖುಷಿಯಾಗಿದ್ದ.ಜನರೆಲ್ಲಾ ಅಸೂಯೆಪಡುವಂತಿತ್ತು ಇವರಿಬ್ಬರ ಸಂಸಾರ.ಕೆಲವೇ ದಿನದಲ್ಲಿ ಇವರಿಬ್ಬರ ಸಂಸಾರದಲ್ಲಿ ಒಂದು ಪುಟ್ಟ ಕಂದಮ್ಮನ ಆಗಮನವಾಗುವುದಿತ್ತು. ನಮಗಾಗುವುದು ಗಂಡು ಮಗುವೇ ಅಂತ ಕರುಣಾ ನುಡಿದಿದ್ದರೆ,ನಮಗಾಗುವುದು ಹೆಣ್ಣು ಮಗುವೇ ಅಂತ ಚಾಲೆಂಜ್ ಮಾಡಿದ್ದ ಶರತ್.ಅಂದು ಕರುಣಾಳಿಗೆ ಹೆರಿಗೆ ನೋವು ಕಾಣಿಸಿಕೊಂಡು ಆಸ್ಪತ್ರೆಗೆ ಸೇರಿಸಿದ ಶರತ್ ಹೊರಗಡೆ  ನಿಂತುಕೊಂಡು ಸಂತಸದ ಸುದ್ದಿಗಾಗಿ ಕಾದಿದ್ದ. ಕೆಲ ಕ್ಷಣದಲ್ಲಿ ಹೊರ ಬಂದಿದ್ದ ಡಾಕ್ಟರ್ ಎದುರಿಗೆ ಒಮ್ಮೆಲೇ ಹೆಣ್ಣು ಮಗು ತಾನೇ ಅಂತ ಕೂಗಿದಾಗ ಹೌದು ಎಂದು ತಲೆಯಾಡಿಸಿದ ಡಾಕ್ಟರ್ ಆದರೆ ಎಂದು ಗೋಗರೆದಾಗ ಏನಾಯಿತೆಂದು ಗೊಂದಲದಿಂದ ನುಡಿದ ಶರತ್.ಡಾಕ್ಟರ್ ಸಮಾಧಾನಪಡಿಸುತ್ತ ಹೆರಿಗೆ ಸಮಯದಲ್ಲಿ ಕರುಣಾಳನ್ನ ಉಳಿಸಲಾಗಲಿಲ್ಲ ಅಂದಾಗ ಶರತ್ ಅಲ್ಲೇ ಕುಸಿದಿದ್ದ.