ಹೆಣ್ಣು ಕಾರಣ...!

ಯಾಕೆ ಆಗುತ್ತಿದೆ ಹೀಗೆಲ್ಲ..?

    ಮೊನ್ನೆಯಷ್ಟೇ ಎಲ್ಲ ಕಡೆ ಜಾಗತಿಕ ಮಹಿಳಾ ದಿನದ ಆಚರಣೆಯಾಯಿತು. ದಿನಪತ್ರಿಕೆಗಳಿಂದ ಹಿಡಿದು ಫೇಸ್‌ಬುಕ್‌ವರೆಗೂ ಅಂದು ಹೆಣ್ಣಿಗೆ ವಿಶೇಷ ಗೌರವ. ಹೀಗೊಂದು ವಿಶೇಷ ದಿನದಂದು ಹೆಣ್ಣಿಗೆ ಗೌರವ ಕೊಟ್ಟು ಉಳಿದ ದಿನ ಹೆಣ್ಣನ್ನು ನೋಡುವ ದೃಷ್ಟಿಕೋನವೇ ಬೇರೆಯಾದರೆ ಏನೂ ಅರ್ಥವಿಲ್ಲ.

ಇಂದು ಹೆಣ್ಣು ಅಡುಗೆಮನೆಯಿಂದ ಸೈನ್ಯದಲ್ಲಿ ಬಂದೂಕು ಹಿಡಿಯುವವರೆಗೆ ಗುರುತಿಸಿಕೊಂಡಿದ್ದಾಳೆ. ಹಳ್ಳಿಯ ಮೂಲೆಯಲ್ಲಿ ಕುಂಟೆಬಿಲ್ಲೆ ಆಡುತ್ತಿದ್ದವಳು ಇಂದು ಕ್ರಿಕೆಟ್, ಟೆನಿಸ್‌ಗಳಲ್ಲಿ ಮಿಂಚುತ್ತಿದ್ದಾಳೆ. ಅಡುಗೆ ಮನೆಯ ಸಾಮಾನಿನ ಪಟ್ಟಿ ಬರೆಯುತ್ತಿದ್ದವಳು ಇಂದು ಇನ್‌ಫಾರ್ಮೇಷನ್ ಟೆಕ್ನಾಲಜಿಯಂಥ ಕ್ಷೇತ್ರದಲ್ಲಿ ಸಾಧನೆಗೈಯ್ಯುತ್ತಿದ್ದಾಳೆ. ಮನೆಯಿಂದ ಹೊರಬರಲು ಹೆದರುತ್ತಿದ್ದವಳು ಅಂತರಿಕ್ಷಯಾನ ಕೈಗೊಂಡಿದ್ದಾಳೆ.
ಆದರೆ, ಆಕೆ ಎಷ್ಟೇ ಸಾಧಿಸುತ್ತಿದ್ದರೂ ಅವಳನ್ನು ಅತ್ಯಾಚಾರದ ಮೂಲಕ ಕಟ್ಟಿಹಾಕುತ್ತಿರುವುದು ವಿಪರ್ಯಾಸ. ಇದಕ್ಕೆ ಕಾರಣ ಹುಡುಕುತ್ತ ಹೋದರೆ ಇದಕ್ಕೆಲ್ಲ ಸ್ವಲ್ಪ ಮಟ್ಟಿಗೆ ಹೆಣ್ಣೇ ಕಾರಣ ಎಂಬ ಸಂಶಯ ಬರುವುದಂತೂ ನಿಜ. ಪುರುಷರಿಗೆ ಸಮನಾಗಿ ನಿಲ್ಲುವ ಹುಮ್ಮಸ್ಸಿನಲ್ಲಿ ಸ್ತ್ರೀ ತನ್ನದೇ ಜವಾಬ್ದಾರಿ ಮರೆತು ಎಡವುತ್ತಿದ್ದಾಳೆ ಅನಿಸುತ್ತದೆ. ಹೇಗೆ ಹೆಣ್ಣು ವಿಜ್ಞಾನ, ಅಂತರಿಕ್ಷ, ಸೈನ್ಯ, ರಾಜಕೀಯ ಮುಂತಾದ ಕ್ಷೇತ್ರದಲ್ಲಿ ಪುರುಷರಿಗೆ ಸರಿಸಮಾನವಾಗಿ ನಿಂತಿದ್ದಾಳೋ ಅದೇ ರೀತಿ ಆಧುನಿಕ (ಶರಾಬು, ಸಿಗರೇಟು ಇತ್ಯಾದಿ) ಕ್ಷೇತ್ರದಲ್ಲೂ ತಾನು ಪುರುಷರಿಗೆ ಸರಿಸಮಾನಳು ಅನ್ನುತ್ತಿರುವುದು ನಿಜಕ್ಕೂ ವಿಷಾದನೀಯ. ನಮ್ಮ ಸಂಸ್ಕೃತಿಯನ್ನ ಮರೆತು ಪಾಶ್ಚಾತ್ಯ ಸಂಸ್ಕೃತಿಯ ಮೊರೆ ಹೋಗುತ್ತಿರುವುದು ಇದಕ್ಕೆಲ್ಲ ಕಾರಣ. ಹುಡುಗಿಯರ ವಸ್ತ್ರವಿನ್ಯಾಸ, ಸಿಗರೇಟು, ಶರಾಬು ಇವೂ ಹೆಣ್ಣಿನ ಅತ್ಯಾಚಾರಕ್ಕೆ ಸ್ವಲ್ಪಮಟ್ಟಿಗೆ ಕಾರಣವಾಗಿವೆ. ಸಿನಿಮಾ, ಟಿವಿ ಸೀರಿಯಲ್‌ಗಳ ಕೆಟ್ಟ ಪ್ರಭಾವಗಳೂ ಆಕೆಯ ಮೇಲೆ ಬೀಳುತ್ತಿವೆ.
ಹೆಣ್ಣಿಗೆ ಒದಗಿರುವ ಈ ಸಮಸ್ಯೆಗಳನ್ನು ದೂರ ಮಾಡಲು ಒಂದಿಷ್ಟು ಪರಿಹಾರಗಳೂ ಇವೆ. ಶಾಲಾ ಶಿಕ್ಷಣದ ಜತೆ ನಮ್ಮ ನಾಡು-ನುಡಿ, ಸಂಸ್ಕೃತಿಯ ಬಗೆಗೆ ಚಿಕ್ಕಂದಿನಿಂದಲೇ ಅರಿವು ಮೂಡಿಸಬೇಕು. ಸ್ವಲ್ಪ ಅರಿತು ವ್ಯವಹರಿಸಿದರೆ ಹೆಣ್ಣು ತನ್ನದೇ ಆದ ಸ್ಥಾನವನ್ನು ರೂಪಿಸಿಕೊಳ್ಳಬಲ್ಲಳು ಎನ್ನುವುದರಲ್ಲಿ ಸಂಶಯವಿಲ್ಲ. ತಂದೆ- ತಾಯಿ ಮಗುವಿಗೆ ಉತ್ತಮ ಸಂಸ್ಕಾರ ನೀಡಬೇಕು. ಹೊರದೇಶದವರು ನಮ್ಮ ಸಂಸ್ಕೃತಿಯನ್ನು ಅನುಸರಿಸಲು ಪ್ರಯತ್ನಿಸುತ್ತಿರುವಾಗ ನಾವು ಹೊರದೇಶದ ಆಚರಣೆಯನ್ನು ಅನುಸರಿಸುವುದರಲ್ಲಿ ಏನೂ ಅರ್ಥವಿಲ್ಲ.

ಸ್ವಲ್ಪ ಯೋಚಿಸಿ, ಹೆಣ್ಣು ಸಮಾಜವನ್ನು ನೋಡುವ ದೃಷ್ಟಿಕೋನ ಬದಲಾಗಿದ್ದರೂ ಸಮಾಜ ಹೆಣ್ಣನ್ನು ನೋಡುವ ದೃಷ್ಟಿಕೋನ ಬದಲಾಗಿಲ್ಲ. ಒಮ್ಮೆ ಇಡೀ ಸಮಾಜದ ಬಗ್ಗೆ ವಿಚಾರ ಮಾಡಿ ನೋಡಿ. ಇದು ನನ್ನ ವಿನಂತಿ. ನನ್ನ ಉದ್ದೇಶ ಇಷ್ಟೇ ದೇವರೆಂದು ಪೂಜಿಸುವ ಹೆಣ್ಣಿಗೆ ಎಂದೂ ಕಳಂಕ ಬರಬಾರದು.

- ಗಣೇಶ ಖರೆ

ಅಕ್ಟೋಬರ್ ೧೬ ರ "ಕನ್ನಡ ಪ್ರಭ"ದಲ್ಲಿ ಪ್ರಕಟವಾದ ಬರಹ.
 

No comments:

Post a Comment