ಯಾಂತ್ರಿಕ ಜಗತ್ತು :

ಗೆಳತಿಯೊಬ್ಬಳ ಬಾಲ್ಯದ ನೆನಪುಗಳ ಸರಮಾಲೆಯ ಬುತ್ತಿ ಬಿಚ್ಚಿಟ್ಟ ಬರಹಗಳನ್ನ ಓದಿದಾಗ ಮತ್ತೆ ಮನ ಬಾಲ್ಯದ ದಿನದತ್ತ ಸಾಗಿತ್ತು. ಆದರೆ ಕೆಲವೇ ಕ್ಷಣ ಮಾತ್ರ ಈ ಆನಂದ, ಮತ್ತೆ ವಾಸ್ತವಕ್ಕೆ ಬಂದಾಗ ಅದೇ ದಿನದ ಗೋಳು. ಬ್ಯುಸಿ ಶೆಡ್ಯೂಲಿನ ರೇಸಿಂಗ್ ಜಗತ್ತಿನಲ್ಲಿ ಬಾಳುತ್ತ ಇತ್ತೀಚಿಗೆ ಯಾಕೋ ಬಾಲ್ಯದ ನೆನಪುಗಳು ಕೂಡ ನನ್ನಿಂದ ದೂರವಾಗುತ್ತಿದೆ ಅನಿಸತೊಡಗಿದೆ. ಅಷ್ಟೇ ಅಲ್ಲ ಜೊತೆಗೆ ಸಂಬಂಧಗಳು ಕೂಡ ನಮ್ಮಿಂದ ದೂರವಾಗುತ್ತಿದೆ. ಯಾಕೆ ಹೀಗೆ ಅಂತ ಹುಡುಕ ಹೋದರೆ ಎಲ್ಲವೂ ಶೂನ್ಯ. ಸಮಾಜದಲ್ಲಿ ನನ್ನತನವನ್ನ ಸ್ಥಾಪಿಸುವ ಭರದಲ್ಲಿ ನನ್ನವರನ್ನ ಕಳೆದುಕೊಳ್ಳುತ್ತಿರುವುದು ನಿಜಕ್ಕೂ ಬೇಸರದ ಸಂಗತಿ. ಇವೆಲ್ಲವೂ ನಮಗರಿವಿಲ್ಲದಂತೆಯೇ ಘಟಿಸುವಂತಹದ್ದು. ಜೀವನದ ಕೊನೆಗೆ ಎಲ್ಲವನ್ನೂ ಸಾಧಿಸಿ ಶಿಖರವೆರಿದಾಗ ಸಂಬಂಧಗಳು ದೂರವಾಗಿರುದು ಅರಿವಿಗೂ ಬರುವುದಿಲ್ಲ ನಮಗೆ, ಅಕಸ್ಮಾತ್ ಬಂದರೂ ನಮಗೆ ಅವರ ಅವಶ್ಯಕತೆಯೇ ಬೇಡದಂತಾಗಿರುತ್ತೆ.

ಸದ್ಯದ ಟೆನ್ಶನ್ ಬದಿಗಿಟ್ಟು ಸ್ವಲ್ಪ ನಮ್ಮ ಬಾಲ್ಯದ ಜೀವನವನ್ನ ನೆನೆಸಿಕೊಂಡಾಗ ಏನೋ ಒಂಥರಾ ಖುಷಿ ಸಿಗುವುದಂತೂ ಖಂಡಿತ. ಆ ಮೋಜು- ಮಸ್ತಿ, ಆಟ-ಪಾಠ, ಜಗಳ, ಮುನಿಸು, ಕೋಪ ಇವೆಲ್ಲವನ್ನ ನಾವು ಕಳೆದುಕೊಂಡಿದ್ದೇವೆ ಜೊತೆಗೆ ನಮ್ಮನ್ನ ಸಲಹಿದವರೂ ಕೂಡ. ಹಳ್ಳಿಯ ಆ ಬಾಲ್ಯದ ದಿನಗಳು ಇತ್ತೇಚೆಗೆ ಉರಿಸುವಂತಾಗಿದೆ ಯಾಕೋ. ನಾವು ಕಂಡ ಈ ಬಾಳು ನಮ್ಮ ಮುಂದಿನ ಪೀಳಿಗೆಯವರಂತೂ ಕಾಣುವುದು ಅಸಾಧ್ಯವೇ. ಇತ್ತೀಚೆಗೆ ಹಳ್ಳಿಗಳೂ ಸುಧಾರಿಸಿವೆ. ಚಿನ್ನಿ ದಾಂಡು, ಬುಗುರಿ, ಗೋಲಿ,ಚನ್ನೆಮಣೆ ಹೀಗೆ ಎಲ್ಲ ಆಟಗಳು ಮರೆಯಾಗಿ ಎಲ್ಲೆಡೆ ಕ್ರಿಕೆಟ್ ಒಂದೇ ಆಟವಾಗಿದೆ. ನಾವು ಕೂಡ ಹಳ್ಳಿಯಿಂದಲೇ ಬೆಳೆದು ಬಂದರೂ,ಒಮ್ಮೆ ಶಹರದ ನೀರು ಕುಡಿದ ಮೇಲೆ ಮತ್ತೆ ಹಳ್ಳಿಗೆ ಹೋದರೆ ಅಲ್ಲಿ ಹೊಂದಿಕೊಳ್ಳಲು ಆಗದಂತಿದೆ ನಮ್ಮ ಜೀವನ ವ್ಯವಸ್ಥೆ. ನಾವೆಲ್ಲಾ ಒಂದೂರು ಬಿಟ್ಟು ಮತ್ತೊಂದೂರಿಗೆ ಬಂದಾಗ ಹಳೆಯ ನೆನಪುಗಳ ಜೊತೆಜೊತೆಗೆ ಮನುಷ್ಯರನ್ನೂ ಮರೆಯುತ್ತಿದ್ದೇವೆ. ಮರೆಯುತ್ತಿದ್ದೇವೆ ಅನ್ನುವುದಕ್ಕಿಂತ ಮರೆಸುತ್ತಿದೆ ಈ ಯಾಂತ್ರಿಕ ಜೀವನ ಅಂದರೆ ತಪ್ಪಾಗಲಾರದು ಬಹುಶಃ. ನಾನಾಯಿತು ನನ್ನ ಸಂಸಾರವಾಯಿತು ಅನ್ನುವ ಮೆಂಟಾಲಿಟಿ ಈಗ ಎಲ್ಲರಲ್ಲೂ ಬಂದಿದೆ. ಈಡಿ ಊರನ್ನೇ ಹಚ್ಚಿಕೊಂಡಿದ್ದ ನಮಗೆ ಸಿಟಿಯಲ್ಲಿ ಪಕ್ಕದ ಮನೆಯವರ ಗುರುತೇ ಇರುವುದಿಲ್ಲ. ಪರಿಸರದಿಂದ ದೊರಾಗುವುದರ ಜೊತೆಜೊತೆಗೆ ನಾವು ನಮ್ಮವರಿಂದಲೂ ದೂರಾಗುತ್ತಿದ್ದೇವೆ. ನಮ್ಮವರಿಗಾಗಿ ನಾವು ದಿನದಲ್ಲಿ ಒಂದೈದು ನಿಮಿಷ ಕೂಡ ಬದಿಗಿಡದಷ್ಟು ಬ್ಯುಸಿ ಆಗಿದ್ದೇವೆ. ನಮ್ಮ ಕೆಲಸ ನಾವು ಮಾಡಿಕೊಳ್ಳಲಾಗದಷ್ಟು ಬ್ಯುಸಿ. ಈ ಯಾಂತ್ರಿಕ ಬದುಕಿನಲ್ಲಿ ಹತ್ತಿರದವರು ದೂರಾದವರೆಷ್ಟೋ, ದೂರದವರು ಹತ್ತಿರ ಆದವರೆಷ್ಟೋ ಏನೊಂದೂ ತಿಳಿಯದಂತಾಗಿದೆ. ನಮ್ಮತನವನ್ನ ಬಿಟ್ಟು ಏನನ್ನ ಸಾಧಿಸಲು ಹೊರಟಿದ್ದೇವೆ ನಾವು? ಯಾಕೆ ಹೀಗೆ?? ಎಲ್ಲವೂ ಉತ್ತರವಿಲ್ಲದ ಪ್ರಶ್ನೆಗಳಾ? ಅಥವಾ ಉತ್ತರ ಬಯಸದ ಪ್ರಶ್ನೆಗಳಾ??

ನಮ್ಮ ಮನಸ್ಸು ಕೂಡ ಯಾವುದಕ್ಕೂ ಸ್ಪಂದಿಸದೇ ಕಲ್ಲಾಗಿದೆ, ಬುದ್ಧಿ ಸೀಮಿತದಲ್ಲಿಲ್ಲ, ಸಂಬಂಧಗಳ ಪರಿವೆಯೇ ಇಲ್ಲ. ನಮ್ಮತನವನ್ನ ಬಿಟ್ಟು ಯಾಂತ್ರಿಕ ಜಗತ್ತಿನೊಡನೆ ನಾವೂ ಕೂಡ ಯಂತ್ರಗಳಂತೆ ಬದುಕುತ್ತಿದ್ದೇವೆ ಅಲ್ಲವೇ? ಈ ಯಾಂತ್ರಿಕ ಬದುಕಿನ ರೇಸಿಗೆ ಬ್ರೇಕ್ ಹಾಕುವದಾದರೂ ಹೇಗೆ? ಒಟ್ಟಿನಲ್ಲಿ ಹೇಳುವುದಾದರೆ ಮೊಟ್ಟೆಗಾಗಿ ಕೋಳಿಯನ್ನು ಕಳೆದುಕೊಂಡಂತಾಗಿದೆ ನಮ್ಮ ಜೀವನ ಅಲ್ಲವೇ??

3 comments:

 1. ನಿಜ ಗೆಳೆಯ ..ಅನಿವಾರ್ಯತೆಯೊಂದಿಗೆ ಹೊಂದಿಕೊಂಡಿರೊ ಜೀವನದ ನಿನ್ನೀ ಪ್ರಶ್ನೆಗಳು ಬರಿಯ ಪ್ರಶ್ನೆಗಳಾಗಿಯೇ ಉಳೀತು ಕೊನೆಗೂ ...

  ಉತ್ತರ ತಿಳಿಯದ ಗೊಂದಲ ಎಲ್ಲರದೂ ...
  ಇಷ್ಟವಾಗೋ ಬಾಲ್ಯದ ಭಾವಗಳು, ಆ ಹಳ್ಳಿಯ ಗರಿಮನೆ, ಅನ್ ಲಿಮಿಟೆಡ್ ಆಟಗಳು ,ಆ ಪುಟ್ಟ ಪುಟ್ಟ ಖುಷಿಗಳನ್ನ ನೆನಪಿಸಿಕೊಂಡಾದ್ರೂ ಖುಷಿ ಪಡೋಣ ಇಂತದ್ದೊಂದು ಖುಷಿ ನಮ್ಮದಾಗಿತ್ತಲ್ವಾ ಅಂತಾ ...
  ಪುಟ್ಟ ಪುಟದಲ್ಲಿ ಅದೇನೋ ಹೇಳಲಾಗದ ಭಾವ ಕಂಡೆ ನಾ ...
  ಬರೀತಾ ಇರಿ

  ReplyDelete
  Replies
  1. ನನ್ನ ಬರಹಕ್ಕೆ ನಿಮ್ಮ ಪ್ರತಿಕ್ರಿಯೆ ಖುಷಿ ಕೊಟ್ಟಿದೆ. ನಮ್ಮ ಅನ್ಲಿಮಿಟೆಡ್ ಖುಷಿ ಲೈಫ್ ಬೇಗ ಮುಗಿಯಿತೇನೋ ಅಂತ ಅನಿಸಿದೆ. ಚಿಕ್ಕವರಿದ್ದಾಗ ದೊಡ್ಡವರ ಹಿತ ನುಡಿಗಳು ಖಾರವೆನಿಸುತ್ತದೆ. ನಾವ್ಯಾಗ ದೊಡ್ಡವರಾಗಿ ಉಳಿದವರ ಮೇಲೆ ಅಧಿಕಾರ ಚಲಾಯಿಸುತ್ತೀವೋ ಅಂತನಿಸುತ್ತದೆ. ಆದರೆ ಬೆಳೆದು, ಜವಾಬ್ದಾರಿ ಹೆಚ್ಚಿ ಜೀವನದ ಸಿಹಿ ಕಹಿ ಉಂಡಾಗ ನಮಗೆ ಮತ್ತೆ ಬಾಲ್ಯವೇ ಬೇಕೆನಿಸುತ್ತದೆ ಅಲ್ಲವೇ?? ಒಟ್ಟಿನಲ್ಲಿ ಇರುವುದರ ಬಗೆಗಿಂತ ಇಲ್ಲದಿರುವುದರ ಬಗ್ಗೆ ಜಾಸ್ತಿ ಒಲವು ನಮ್ಮದು.

   Delete
 2. ಹಳ್ಳಿಯಿಂದ ಬಂದು ನೆಲೆಸಿದ ನಮ್ಮಂತಹವರ ಅಳಲೇ ಇದು. ಅಲ್ಲಿ ಊರೇ ಮನೆಯೊಳಗೆ ಇಲ್ಲಿ ಪಕ್ಕದ ಮನೆಯವರೇ ಅಪರಿಚಿತರು.
  ಬದುಕು ತೀರಾ ಯಾಂತ್ರಿಕ 90ರ ದಶಕದ ಬೆಂಗಳೂರಿಗೆ ಹೋಲಿಸಿದರೆ ಇಂದು ಚಾರ್ಲೀ ಚಾಪ್ಲಿನ್ ಚಲನಚಿತ್ರ ಮಾಡ್ರನ್ ಟೈಮ್ಸ್ ನೆನಪಾಗುತ್ತದೆ, ನಾವು ಬರೀ ಯಾಂತ್ರಿಕ. ಈ ಯಾಂತಿಕತೆ ನಮ್ಮ ಬದುಕು, ಒಲವು ಮತ್ತು ಭವಿತವ್ಯವನ್ನು ಆವರಿಸಿಬಿಟ್ಟಿದೆ.

  ReplyDelete