ಪ್ರೇಮ ಪತ್ರ:

ನವೀನ ಮೇಘನಳ ಪರಿಚಯ ಸುಮಾರು ಆರೇಳು ವರ್ಷಗಳಷ್ಟು ಹಳೆಯದು. ಕಾಲೇಜಿನಿಂದ ಹಿಡಿದು ಕೆಲಸಕ್ಕೆ ಸೇರಿ ಎರಡು ವರ್ಷಗಳಾಗಿದ್ದವು ಇಬ್ಬರು ಜೊತೆಗಿದ್ದು. ನಿಷ್ಕಲ್ಮಶ ಸ್ನೇಹ ಇಬ್ಬರದು. ಇವರಿಬ್ಬರ ಸ್ನೇಹ ನೋಡಿ ಅಸೂಯೆಪಡದವರಿಲ್ಲ. ನಸುಗೆಂಪು ಬಣ್ಣದ ಉತ್ತಮ ಮೈಕಟ್ಟಿನ ಮಧ್ಯಮ ವರ್ಗದ ಸೀದಾ ಸಾದಾ ಹುಡುಗ ನವೀನ, ಹಾಲ್ಗೆನ್ನೆಯ ಎಲ್ಲರ ನೋಟವನ್ನ ಒಮ್ಮೆಲೇ ತನ್ನೆಡೆಗೆ ಸೆಳೆಯುವ ಶ್ರೀಮಂತರ ಮನೆಯ ಹುಡುಗಿ ಮೇಘನ, ಆದರೂ ಮನೆಯ ಶ್ರೀಮಂತಿಕೆ ಅವಳ ಸ್ವಭಾವದಲ್ಲಿರಲಿಲ್ಲ, ಬಹುಷಃ ಇದೆ ಕಾರಣವಿರಬೇಕು ಇವರಿಬ್ಬರ ಸ್ನೇಹ ಇಷ್ಟು ಗಟ್ಟಿಯಾಗಿರಲು. ಕಾಲೇಜಿನ ಪ್ರಾರಂಭದ ದಿನದಲ್ಲೇ ಇವರ ಪರಿಚಯವಾಗಿತ್ತು. ಶಾಂತ ಸ್ವಭಾವದ ತಾನಾಯಿತು ತನ್ನ ಕೆಲಸವಾಯಿತು ಅಂತ ಇರುತ್ತಿದ್ದ ನವೀನನ ಈ ಸ್ವಭಾವವೇ ಮೇಘನಳನ್ನ ತುಂಬಾ ಆಕರ್ಷಿಸಿತ್ತು. ಎಷ್ಟೋ ಹುಡುಗರು ಇವಳ ಸ್ನೇಹ ಬಯಸಿದರಾದರೂ ಮೇಘನ ಸ್ನೇಹ ಮಾಡಿದ್ದು ನವೀನನ ಜೊತೆ. ಹೀಗಾಗಿ ಇವರ ಸ್ನೇಹ ನೋಡಿ ಹೊಟ್ಟೆ ಉರಿದುಕೊಂಡವರು ಅದೆಷ್ಟೋ ಜನ. ಕಾಲೇಜಿನ ದಿನಗಳು ತುಂಬಾ ಸಲುಗೆಯಿಂದ ಮುಗಿದಿದ್ದವು. ಇಬ್ಬರಿಗೂ ಒಳ್ಳೆ ಕೆಲಸ ಕೂಡ ಸಿಕ್ಕಿತು. ಇವರಿಬ್ಬರ ಸ್ನೇಹ ಇನ್ನೂ ಹಾಗೆ ಉಳಿದಿತ್ತು. ವಾರಕ್ಕೆ ಒಂದೆರಡು ಬಾರಿಯಾದರೂ ಸಿಕ್ಕು ತಾಸಂತಾಸು ಹರಟುತ್ತಿದ್ದರು. ಇವರನ್ನು ನೋಡಿದವರೆಲ್ಲ ಇವರಿಬ್ಬರೂ ಪ್ರೇಮಿಗಳು ಅಂದುಕೊಳ್ಳುತ್ತಿದ್ದರು, ಆದರೆ ಎಂದೂ ನವೀನ ಮತ್ತು ಮೇಘನಳ ನಡುವೆ ಪ್ರೀತಿಯ ವಿಷಯ ಬಂದಿರಲಿಲ್ಲ. ಆಗೀಗ ಮೇಘನಳೇ ತಮಾಷೆಗೆ ನವೀನಳನ್ನ ಪೀಡಿಸುತ್ತಿದ್ದಳೇ ಹೊರತು ನವೀನ ಎಂದೂ ಪ್ರೀತಿಯ ವಿಷಯವಾಗಿ ಮಾತಾಡುತ್ತಿರಲಿಲ್ಲ.

ಮೇಘನಳ ಕುಟುಂಬವೆಲ್ಲ ಬೆಂಗಳೂರಿನಲ್ಲೇ ಇತ್ತು. ತಂದೆ ಒಳ್ಳೆ ಉದ್ಯಮಿ, ತಾಯಿ ಗೃಹಿಣಿಯಾಗಿ ತಂದೆಯ ಕೆಲಸದಲ್ಲೂ ಸ್ವಲ್ಪ ಮಟ್ಟಿಗೆ ನೆರವಾಗುತ್ತಿದ್ದರು. ಎಷ್ಟೇ ಸಿರಿತನವಿದ್ದರೂ ಮಗಳನ್ನ ಹೇಗೆ ಬೇಕೋ ಹಾಗೆ ಬೆಳೆಸದೆ ಉತ್ತಮ ಸಂಸ್ಕಾರ ನೀಡಿದ್ದರು. ಇನ್ನು ನವೀನನ ಕುಟುಂಬವೆಲ್ಲ ಇದ್ದದ್ದು ಕಾರವಾರ ಸಮೀಪದ ಹಳ್ಳಿಯಲ್ಲಿ. ಅಲ್ಲೇ ಸ್ವಲ್ಪ ಸ್ವಂತದ ಜಮೀನು ಇದ್ದರಿಂದ ತಂದೆ ತಾಯಂದರಿಬ್ಬರೂ ಅಲ್ಲೇ ಇದ್ದರು. ನವೀನ ಊರಿಗೆ ಬರುತ್ತಿದ್ದದ್ದು ವರ್ಷದಲ್ಲಿ ಒಂದೆರಡು ಬಾರಿ ಮಾತ್ರ. ಇತ್ತೇಚೆಗೆ ನವೀನನ ತಾಯಿಯ ಆರೋಗ್ಯವೂ ಸರಿ ಇರಲಿಲ್ಲ, ಆದಷ್ಟು ಬೇಗ ಮಗನ ಮದುವೆ ವಿಚಾರವಾಗಿ ಮಗನಲ್ಲಿ ಮಾತಾಡಿದ್ದರು. ಮುಂದಿನ ಸಲ ಊರಿಗೆ ಬಂದಾಗ ಈ ವಿಚಾರ ಮಾತಾಡೋಣ ಅಂತ ವಿಷಯವನ್ನ ಅಲ್ಲಿಗೇ ನಿಲ್ಲಿಸಿದ್ದ ನವೀನ.

ಕಳೆದ ಕೆಲ ತಿಂಗಳಿನಲ್ಲಿ ಮೇಘನ ಸ್ವಲ್ಪ ಡಲ್ ಆಗಿದ್ದಳು, ಆರೋಗ್ಯವೂ ಸ್ವಲ್ಪ ಹದಗೆಟ್ಟಿತ್ತು. ಏನೆಂದು ನವೀನ ವಿಚಾರಿಸಿದರೆ ಹಾರಿಕೆ ಉತ್ತರ ಕೊಟ್ಟು ಸುಮ್ಮನಾಗುತ್ತಿದ್ದಳು. ಇವರ ನಡುವಿನ ಒಡನಾಟವೂ ಸ್ವಲ್ಪ ಕಡಿಮೆಯಾಗಿತ್ತು. ನವೀನನಿಗೋ ಏನೋ ಕಳೆದುಕೊಂಡ ಭಾಸವಾಗುತ್ತಿತ್ತು. ಕೆಲಸದ ಒತ್ತಡದ ನಡುವೆ ಊರಿಗೆ ಹೋಗಲು ಆಗಿರದೆ ಸುಮಾರು ಒಂದು ವರ್ಷದ ನಂತರ ಮತ್ತೆ ಊರಿಗೆ ಹೊರಟಿದ್ದ ನವೀನ. ಹೋಗುವ ಮೊದಲ ದಿನ ಹುಷಾರಿಲ್ಲದಿದ್ದರೂ ಮೇಘನ ಇವನನ್ನ ಸಿಗಲು ಬಂದಿದ್ದಳು, ಇಬ್ಬರೂ ಒಟ್ಟಿಗೆ ಸುಮಾರು ತಾಸುಗಟ್ಟಲೆ ಹರಟಿದರು. ಮೇಘನ ತನ್ನದೇ ಚಿಂತೆಯಲ್ಲಿ ಇದ್ದದ್ದನ್ನ ಗಮನಿಸಿದ ನವೀನ ಏನಾಯ್ತು ತುಂಬಾ ಚಿಂತೆಯಲ್ಲಿದ್ದೀಯ ಎಂದ. ಏನಿಲ್ಲ ನವೀನ್ ನೀನು ಊರಿಗೆ ಹೊರಟಿದ್ದೀಯ ಬರೋಕೆ ಹದಿನೈದು ದಿನ ಆಗುತ್ತೆ ಅಂತಾ ಇದೀಯ ನನಗ್ಯಾಕೋ ಮತ್ತೆ ನಾವಿಬ್ಬರು ಸಿಗ್ತೀವಿ ಅಂತ ಅನಿಸ್ತ ಇಲ್ಲ ಕಣೋ, ಯಾಕೆ ಅಂತ ಗೊತ್ತಾಗ್ತಾ ಇಲ್ಲ ಅಂತ ಅಂದಳು. ಸಾಕು ತಮಾಷೆ ಮಾಡಿದ್ದು ನಡೀ ನಾನಿನ್ನು ಬರ್ತೀನಿ ಇನ್ನೂ ಬ್ಯಾಗ್ ತುಂಬಾಗಿಲ್ಲ, ಕೆಲಸ ಬೇಕಷ್ಟಿದೆ ಮತ್ತೆ ಸಿಗೋಣ ಇನ್ನೊಂದು ವಿಷಯ ನಮ್ಮೂರಲ್ಲಿ ಮೊಬೈಲ್ ರೇಂಜ್ ಇಲ್ಲ ಹಾಗಾಗಿ ನೋ ಕಾಲ್, ನೋ ಮೆಸೇಜ್ ಅಂತ ಬೇಸರದಿಂದ ನುಡಿದು ಬೈ ಅಂದು ಹೊರಟ. ಮೇಘನ ತುಸು ನಗುತ್ತ ಬೈ ಅಂದಿದ್ದಳು, ಅವಳ ಮುಖದ ನಗು ಕೇವಲ ಕಾಲ್ಪನಿಕವಾಗಿತ್ತು.

ಒಂದು ವರ್ಷದ ನಂತರ ಮಗ ಊರಿಗೆ ಬಂದಿದ್ದ, ಅಮ್ಮನಿಗೋ ಎಲ್ಲಿಲ್ಲದ ಖುಷಿ. ಮೈ ಸರಿಯಾಗಿ ಹುಷಾರಿಲ್ಲದಿದ್ದರೂ ದಿನಕ್ಕೊಂದು ಅವನಿಗಿಷ್ಟವಾದ ತಿಂಡಿ ತಿನಿಸುಗಳನ್ನ ಮಾಡುತ್ತಿದ್ದರು. ಅಪ್ಪ ಮಗನ ಕೆಲಸದ ಬಗ್ಗೆ ಆರೋಗ್ಯದ ಬಗ್ಗೆ ಕೂಲಂಕುಶವಾಗಿ ವಿಚಾರಿಸಿದರು. ಹೀಗೆ ಅಪ್ಪ ಅಮ್ಮನ ಪ್ರೀತಿ, ಊರಿನ ಗೆಳೆಯರ ಜೊತೆ ನಲಿದಾಟ, ಬೆಟ್ಟ ಗುಡ್ಡ ಸುತ್ತಾಟ ಅನ್ನುತ್ತ ಏಳೆಂಟು ದಿನ ಕಳೆಯಿತು. ಈ ನಡುವೆ ಮೆಘನಳ ಜೊತೆ ಮಾತಿಲ್ಲದೆ, ಮೆಸೇಜ್ ಇಲ್ಲದೆ ಏನೋ ಕಳೆದುಕೊಂಡಂತಾಗಿತ್ತು ನವೀನನಿಗೆ. ಒಂದು ದಿನ ಹೀಗೆ ರಾತ್ರಿ ಎಲ್ಲರೂ ಒಟ್ಟಿಗೆ ಊಟ ಮಾಡುತ್ತಿದ್ದಾಗ ಅಮ್ಮ ಮದುವೆ ವಿಷಯ ತೆಗೆದರು. ಅಪ್ಪ ತಕ್ಷಣ ಅಲ್ಲಿ ಯಾರನ್ನಾದರೂ ಪ್ರೀತಿ ಗೀತಿ ಅಂತ ಏನಾದ್ರೂ ಇದ್ರೆ ಹೇಳು, ನೀವೆಲ್ಲ ಈಗಿನ ಕಾಲದ ಹುಡುಗರು ಪ್ರೀತಿ ಮಾಡ್ತೀರ ನಾವು ಒಪ್ಪಿಲ್ಲ ಅಂದ್ರೆ ಓಡಿ ಹೋಗೋದೋ ಅಥವಾ ಆತ್ಮಹತ್ಯೆ ಅಂತೆಲ್ಲ ಯೋಚಿಸ್ತೀರ ಅದೆಲ್ಲ ಬೇಡ, ಹಾಗೇನಾದರೂ ಇದ್ರೆ ನಿಸ್ಸಂಕೋಚವಾಗಿ ಹೇಳು ಅಂದರು. ನವೀನ ಹಾಗೇನಿಲ್ಲ ಅಪ್ಪ ಆದರೆ.. ಅನ್ನುತ್ತ ತನ್ನ ಮತ್ತು ಮೆಘನಳ ಬಗ್ಗೆ ಎಲ್ಲ ವಿಷಯವನ್ನ ಹೇಳಿದ. ನಮಗೆ ಯಾವತ್ತೂ ನಾವು ಪ್ರೇಮಿಗಳು ಅಂತ ಅನಿಸಲಿಲ್ಲ ಆದರೆ ನಮಗ್ಯಾಕೋ ಒಬ್ಬರಿಗೊಬ್ಬರನ್ನ ಬಿಟ್ಟು ಇರೋಕೆ ಆಗ್ತಾ ಇಲ್ಲಾ. ಇದು ಸ್ನೇಹಾನ ಪ್ರಿತೀನ ಅಂತ ಗೊತ್ತಾಗ್ತಾ ಇಲ್ಲ ಅಂತ ಎಲ್ಲವನ್ನೂ ಬಿಡಿಸಿ ಹೇಳಿದ. ಎಲ್ಲ ಮಾತನ್ನ ಕೇಳಿದ ಅಮ್ಮ ಇದು ನಿಜಕ್ಕೂ ಪ್ರಿತಿನೇ ನೀನು ಅವಳನ್ನ ಪ್ರೀತಿಸ್ತಾ ಇದೀಯ ಅವಳಿಗೆ ಈ ವಿಷಯ ಹೇಳು, ಅವಳೂ ನಿನ್ನ ಪ್ರೀತಿಸ್ತ ಇದಾಳೆ. ಒಳ್ಳೆ ಮನೆತನದವಳು ಅಂತಾ ಇದ್ದೀಯ ನಾವು ಮುಂದೆ ನಿಂತು ನಿಮ್ಮ ಮದುವೆ ಮಾಡಿಸ್ತೀವಿ. ಆದಷ್ಟು ಬೇಗ ನಿರ್ಧಾರ ಮಾಡಪ್ಪಾ, ನಾನು ಇರೋದ್ರೊಳಗೆ ನಿನ್ನ ಮದುವೆ ಆಗಬೇಕು ಅನ್ನೋದೇ ನನ್ನ ಆಸೆ ಅಂತ ಅಂದಿದ್ದನ್ನ ಕೇಳಿ ನವೀನ ಯಾಕಮ್ಮ ಹಾಗೆಲ್ಲ ಮಾತಾಡ್ತೀಯ? ಬೆಂಗಳೂರಿಗೆ ಹೋದ ಕೂಡಲೇ ಅವಳ ಹತ್ರ ಮಾತಾಡ್ತೀನಿ ಅಂತ ನಾಚುತ್ತಲೇ ನುಡಿದ. ನವೀನನಿಗೂ ಅನಿಸಿತ್ತು ನಾನು ಮೆಘನಳನ್ನ ಪ್ರೀತಿಸ್ತಾ ಇದ್ದೇನೆ, ಅವಳೂ ನನ್ನ ಪ್ರೀತಿಸ್ತಾ ಇದಾಳೆ. ಅವಳು ಕೆಲವು ಬಾರಿ ತನ್ನ ಪ್ರಿತಿಯನ್ನ ಹೇಳೋ ಪ್ರಯತ್ನ ಮಾಡಿದಾಳೆ, ಆದರೆ ನಾನೇ ಅದನ್ನ ಅರ್ಥ ಮಾಡಿಕೊಂಡಿಲ್ಲ ಅಷ್ಟೇ. ನಿಜ ನಿಜ.. ಇದೆಲ್ಲ ಪ್ರಿತಿನೆ. ಇದನ್ನ ಅವಳಿಗೆ ಹೇಳೋದು ಹೇಗೆ? ಫೋನ್ ಮಾಡಲಾ? ಮೆಸೇಜ್ ಮಾಡಲಾ? ಬೇಡ ಬೇಡ "ಪ್ರೇಮ ಪತ್ರ" ಹಮ್ ಇದೆ ಸರಿ.. ಒಂದು ಲವ್ ಲೆಟರ್ ಬರೆದು ಅವಳ ಕೈಗೆ ಕೊಡ್ತೀನಿ.ಅಂತ ಯೋಚಿಸಿ. ಒಂದು ಲವ್ ಲೆಟರ್ ಕೂಡ ತಯಾರು ಮಾಡಿಕೊಂಡು ಮತ್ತೆ ಬೆಂಗಳೂರಿನ ಕಡೆ ಹೊರಟಿದ್ದ ನವೀನ.

ರಾತ್ರಿ ಊರು ಬಿಟ್ಟಿದ್ದ ನವೀನ ಬೆಂಗಳೂರು ಸೇರಿದ್ದು ಬೆಳಿಗ್ಗೆ ಐದಕ್ಕೆ. ಮಧ್ಯದಲ್ಲೇ ಮೊಬೈಲ್ ಸಿಗ್ನಲ್ ಬಂದಾಗ ತಾನು ಬರುತ್ತಿರುವ ವಿಷಯವನ್ನ ಮೇಘನಳಿಗೆ ಮೆಸೇಜ್ ಮಾಡಿದ್ದ. ಬೆಂಗಳೂರು ಸೇರಿದವನೇ ರೂಮಿಗೆ ಹೋಗಿ ಫ್ರೆಶ್ ಆಗಿ ತಯಾರಾದ. ನಿನ್ನೆಯಿಂದಲೂ ನವೀನನ ಮನದಲ್ಲಿ ಏನೋ ಒಂಥರಾ ದುಗುಡ, ಭಯ. ಬೆಳಿಗ್ಗೆಯ ಏಳಾಗಿತ್ತು ಮೆಘನಳಿಂದ ಉತ್ತರವೇನೂ ಬಂದಿರಲಿಲ್ಲ. ಮೆಘನಳಿಗೆ ಫೋನಾಯಿಸಿದ, ಕೈ ನಡುಗುತ್ತಿತ್ತು. ಫೋನ್ ಸ್ವಿಚ್ ಆಫ್ ಆಗಿತ್ತು. ಸುಮಾರು ಹತ್ತು ಘಂಟೆಯ ವರೆಗೆ ಫೋನ್ ಮಾಡಿ ಸುಸ್ತಾಗಿ ಏನೂ ತಿಳಿಯದಂತಾಗಿ ಕುಳಿತಿದ್ದ.  ಕೆಲವು ಬಾರಿ ನವೀನ ಮೆಘನಳ ಮನೆಗೂ ಹೋಗಿಬಂದಿದ್ದರಿಂದ ಅವರ ಮನೆಯವರ ಪರಿಚಯವಾಗಿತ್ತು, ಹಾಗಾಗಿ ಸೀದಾ ಅವಳ ಮನೆಗೇ ಹೊರಟ. ಮನೆಯ ಬಾಗಿಲು ಹಾಕಿತ್ತು ಕಾಲಿಂಗ್ ಬೆಲ್ ಬಾರಿಸಿದ, ಕೆಲ ಕ್ಷಣದಲ್ಲಿ ಬಾಗಿಲು ತೆರೆಯಿತು. ಎದುರಿಗಿದ್ದದ್ದು ಮೆಘನಳ ಅಮ್ಮ. ಬಾ ನವೀನ ಎನ್ನುತ್ತಾ ಒಳಗೆ ಕರೆದರು ಅಮ್ಮ. ಒಳಗೆ ನಡೆಯುತ್ತಲೇ ನಿನ್ನೆಯಿಂದ ಮೆಘನಳ ಫೋನ್ ಟ್ರೈ ಮಾಡ್ತಾ ಇದ್ದೆ, ಸ್ವಿಚ್ ಆಫ್ ಬರ್ತಾ ಇದೆ ಅಂದ. ಇನ್ನೆಂದೂ ಅವಳ ಫೋನ್ ಆನ್ ಆಗುವುದಿಲ್ಲ ಅನ್ನುವ ಅಮ್ಮನ ಮಾತು ಅರ್ಥವಾಗದೆ, ನೀವೇನು ಹೇಳ್ತಾ ಇದ್ದೀರಾ ಅಂತ ಅರ್ಥ ಆಗ್ತಾ ಇಲ್ಲ ಅಂದ. ಬಾರಪ್ಪ ಎಲ್ಲ ಹೇಳ್ತೀನಿ ಅಂತ ಅವಳ ರೂಮಿಗೆ ಕರೆದುಕೊಂಡು ಹೋದರು. ರೂಮಿಗೆ ಕಾಲಿಡುತ್ತಿದ್ದಂತೆ ಎದುರಿಗೆ ಮುಗುಳ್ನಗುತ್ತಿರುವ ಮೇಘನ… ಅವಳ ಫೋಟೊಕ್ಕೊಂದು ಗಂಧದ ಹಾರ ನೋಡಿ ಒಮ್ಮೆಲೇ ದಂಗು ಬಡಿದಂತವನಾಗಿ ಹಾಗೆಯೇ ನಿಂತ. ಕೆಲ ಕ್ಷಣ ಅವನಿಗೆ ಏನೂ ತೋಚಲಿಲ್ಲ, ಅರಿವಿಲ್ಲದಂತೆಯೇ ಕಣ್ಣುಗಳು ತುಂಬಿದ್ದವು. ಸ್ವಲ್ಪ ಸಮಯದ ನಂತರ ಅಮ್ಮ ಬಾರಪ್ಪ ಕೂತ್ಕೋ ಅಂತ ಅಲುಗಾಡಿಸಿದಾಗ ವಾಸ್ತವಕ್ಕೆ ಬಂದಿದ್ದ. ಇದೆಲ್ಲ ಏನು ಅಂದಾಗ ಅಮ್ಮ ಮೇಘನಳ ಲೆಟರ್ ಒಂದನ್ನ ಅವನ ಕೈಗಿತ್ತು ಇದರಲ್ಲಿ ಎಲ್ಲ ಇದೆ ಓದಪ್ಪ ಎಂದರು.

"ಹಾಯ್ ನವೀನ, ನೀನು ಈ ಪತ್ರ ಓದುವಾಗ ನಾನು ನಿನ್ನ ಬಿಟ್ಟು ತುಂಬಾ ದೂರ ಹೋಗಿರುತ್ತೇನೆ. ನಿನ್ನ ಕೈಗೆ ಸಿಗದಷ್ಟು ದೂರ. ನಿನ್ನ ಬಿಟ್ಟು ಹೋಗೋ ಮನಸ್ಸಿಲ್ಲ ನನಗೆ ಆದರೆ ಈ ಹಾಳು ರೋಗ ನಿನ್ನಿಂದ ನನ್ನನ್ನ ದೂರ ಮಾಡ್ತಾ ಇದೆ. ಹೋದು ಕಣೋ ನಾನು ಕಳೆದ ಐದು ವರ್ಷದಿಂದ ಕ್ಯಾನ್ಸರ್ ನಿಂದ ಬಳಲುತ್ತಾ ಇದ್ದೆ. ಈ ವಿಷಯ ನಿನ್ನ ಹತ್ರ ಹೇಳಬೇಕು ಅಂತ ತುಂಬಾ ಪ್ರಯತ್ನ ಪಟ್ಟೆ ಆದರೆ ನಿನ್ನ ಸ್ನೇಹ, ಪ್ರೀತಿ ಅದಕ್ಕೆ ಅವಕಾಶಾನೇ ನೀಡಿಲ್ಲ. ನಿಜ ತಾನೇ?? ನಿನ್ನ ಸಲುಗೆ ಬರೀ ಸ್ನೇಹವಲ್ಲ ಅದು ಪ್ರಿತಿಯಾಗಿತ್ತು. ಹೌದು ಕಣೋ ನಾನು ನಿನ್ನ ತುಂಬಾ ಪ್ರೀತಿಸ್ತಾ ಇದೀನಿ. ಆದರೆ ನಿನ್ನ ಹತ್ರ ಹೇಳಿಕೊಳ್ಳೋ ಹಾಗೆ ಇರಲಿಲ್ಲ ನನ್ನ ಪರಿಸ್ಥಿತಿ. ಏನು ಮಾಡೋದು ನಿನ್ನನ್ನ ಪ್ರೀತಿಸಿ ಅರ್ಧಕ್ಕೆ ಬಿಟ್ಟು ಹೋಗೋ ಮನಸ್ಸು ಇರಲಿಲ್ಲ ನಂಗೆ. ನಿನ್ನ ಜೊತೆ ಹಾಯಾಗಿ ಬಾಳಬೇಕು, ನನ್ನ ಪ್ರಿತಿಯನ್ನೆಲ್ಲ ಧಾರೆಯೆರೆಯಬೇಕು ಅಂತೆಲ್ಲ ಕನಸು ಕಾಣುವಾಗ ಕೂಡ ಹೆದರಿದ್ದೆ. ಸುಮಾರು ಏಳು ವರ್ಷಗಳ ಸ್ನೇಹ ಇಂದಿಗೆ ಮುಗಿತಾ ಇದೆ. ನನ್ನ ಬಾಳಿನಲ್ಲಿ ನನಗೆ ಸಿಕ್ಕ ಅತ್ಯಮೂಲ್ಯ ಕಾಣಿಕೆ ನೀನು. ನಿನ್ನ ಸ್ನೇಹ, ಪ್ರೀತಿಯ ನೆನಪುಗಳನ್ನ ಹೊತ್ತು ನಿನ್ನಿಂದ ದೂರ ಸಾಗುತ್ತಿದ್ದೇನೆ. ನನಗಿದ್ದ ಈ ರೋಗವನ್ನ ಮರೆಸಿ ನಗುನಗುತ್ತ ಬಾಳಲು ತೋರಿದ ನಿನ್ನ ಸ್ನೇಹಕ್ಕೆ ನಾನು ಚಿರಋಣಿ. ಮುಂದಿನ ಜನ್ಮದಲ್ಲಾದರೂ ನಿನ್ನನ್ನ ಸೇರುವ ಅವಕಾಶ ಸಿಗಲಿ ಅನ್ನುವುದಷ್ಟೇ ಆ ದೇವರಲ್ಲಿ ನನ್ನ ಕೋರಿಕೆ..  ಇದಕ್ಕಿಂತ ಹೆಚ್ಚು ಬರೆಯಲು ನನ್ನಿಂದ ಆಗುತ್ತಿಲ್ಲ ನವೀನ್. ನಿನ್ನಿಂದ ತುಂಬಾ ದೂರ ಹೋಗ್ತಾ ಇದ್ದೇನೆ, ಬೇಸರಿಸಬೇಡ ಗೆಳೆಯ.
ದುಃಖಭರಿತ ಕಣ್ಣೀರಿನೊಂದಿಗೆ ನಿನ್ನ ಗೆಳತಿ ಮೇಘನ."
ಇದನ್ನೆಲ್ಲಾ ಓದಿದ ನವೀನನಿಗೆ ಏನು ಹೇಳಬೇಕೆಂದು ತೋಚದೆ ಕಣ್ಣೀರಿಡುತ್ತಾ ತದೇಕಚಿತ್ತದಿಂದ ಮೇಘನಳ ಫೋಟೋ ಕಡೆ ನೋಡುತ್ತಿದ್ದ.. ಅವಳ ಮುಗುಳ್ನಗು ಎದೆಯಲ್ಲಿ ಚುಚ್ಚುತ್ತಿತ್ತು. ಮೆಘನಳ ಅಮ್ಮ ಬಂದು ಸಮಾಧಾನಿಸುತ್ತ ಆದದ್ದೆಲ್ಲಾ ಆಗಿಹೋಯಿತು, ಏನು ಮಾಡೋದು ಎಲ್ಲ ದೇವರ ಲೀಲೆ. ಕ್ಯಾನ್ಸರ್ ಪತ್ತೆಯಾದಾಗ ಅವಳು ಬದುಕುವುದು ಕೇವಲ ಎರಡು-ಮೂರು ವರ್ಷ ಮಾತ್ರ, ನಗುತ್ತ ಅವಳ ಇಚ್ಚೆಯಂತೆ ಹಾಯಾಗಿ ಇರಲು ಬಿಡಿ ಸ್ವಲ್ಪ ಕಾಲ ಜಾಸ್ತಿ ಬದುಕಿದರೂ ಬದುಕಬಹುದು ಅಂದಿದ್ದರು ಡಾಕ್ಟರ್. ಇನ್ನೆರಡು ವರ್ಷ ಅವಳು ನಮ್ಮ ಜೊತೆ ಇರಲು ಅವಕಾಶ ಮಾಡಿಕೊಟ್ಟ ನಿನ್ನ ಋಣವನ್ನ ನಾವು ಈ ಜನ್ಮದಲ್ಲಿ ಮರೆಯುವದಿಲ್ಲಪ್ಪ ಅಂದು ಕೈ ಮುಗಿದಾಗ ತಲೆಯಲ್ಲೆಲ್ಲ ಮಿಂಚಿನ ಸುಳಿಗಳು ಸುಳಿದಂತಾಗಿ ಒಮ್ಮೆಲೇ ಅಲ್ಲಿಂದ ಹೊರಟು ಸುತ್ತಲಿನ ಜಗತ್ತಿನ ಪರಿವೆ ಇಲ್ಲದಂತೆ ಒಂಟಿಯಾಗಿ ನಡೆಯತೊಡಗಿದ್ದ. ತಲೆಯಲ್ಲೆಲ್ಲ ಅವಳದ್ದೇ ಚಿಂತೆ. ಅವಳ ಎಲ್ಲ ತುಂಟಾಟಗಳು ಹೃದಯದ ಗೋಡೆಗೆ ಬಂದು ಅಪ್ಪಳಿಸುತ್ತಿದ್ದವು.

ಎಲ್ಲದರ ನಡುವೆ ನವೀನ ಮೇಘನಳಿಗಾಗಿ ಬರೆದಿದ್ದ ಪ್ರೇಮ ಪತ್ರ ಅವನ ಕಿಸೆಯಲ್ಲಿಯೇ ಉಳಿದಿತ್ತು..
"ಪ್ರೀತಿಯ ಗೆಳತಿ ಮೇಘನಾ
ಒಂದು ವಿಷಯ ನಿನಗೆ ಹೇಳ್ಬೇಕು ಕೆಲ ದಿನದಿಂದ ಅನ್ಕೊಂಡಿದ್ದೆ ಆದರೆ ಹೇಗೆ ಹೇಳಬೇಕು ಅನ್ನೋದೇ ಗೊತ್ತಾಗ್ತಾ ಇರ್ಲಿಲ್ಲ . ಆದರೆ ಇವತ್ತು ಯಾಕೋ ಗೊತ್ತಿಲ್ಲ ಹೃದಯ ಹೇಳ್ತಾ ಇದೆ ಹೇಳಿಬಿಡು ಅಂತ, ಯಾಕೋ ಧೈರ್ಯ ಸಾಲ್ತಾ ಇಲ್ಲ, ಆದರೆ ಎಷ್ಟು ದಿನ ಅಂತ ಹೇಳ್ದೆ ಇರೋಕೆ ಆಗುತ್ತೆ ಹೇಳು. ಬಹಳ ದಿನದಿಂದ ಮನದಲ್ಲಿ ಬಚ್ಚಿಟ್ಟ ಪ್ರೀತಿನ ಇವತ್ತು ನಿನ್ನ ಎದುರಿಗೆ ಇಡ್ತಾ ಇದ್ದೇನೆ. ಹಂ ಹೌದು ಕಣೆ ನಾನಿನ್ನ ಮನಸಾರೆ ಪ್ರೀತಿಸ್ತಾ ಇದೀನಿ. ಇಷ್ಟು ದಿನ ನಿನ್ನ ಜೊತೆಗಿನ ಸಲುಗೆ ಹೇಗೆ ಪ್ರೀತಿಯಾಗಿ ಬದಲಾಯ್ತೋ ಗೊತ್ತಿಲ್ಲ, ಆದರೆ ಪ್ರೀತಿ ಹುಟ್ಟಿದ್ದಂತೂ ನಿಜ. ಆದರೆ ಇದೆಲ್ಲ ಪ್ರೀತಿ ಅಂತ ನನಗೆ ತಿಳಿದೇ ಇರಲಿಲ್ಲ. ಇತ್ತೀಚಿಗೆ ದಿನವೂ ನಿನ್ನ ಜೊತೆ ಮಾತಾಡ್ತಾ ಇರಬೇಕು ಅನಿಸುತ್ತೆ ಕಣೆ. ನಿನ್ನ ಮೆಸೇಜ್ ಬರಲಿಲ್ಲ ಅಂದ್ರೆ ಏನೋ ಒಂಥರಾ ಚಡಪಡಿಕೆ, ದಿನವಿಡೀ ನಿನ್ನದೇ ಗುಂಗಲ್ಲಿ ಇರ್ತೀನಿ, ಸದಾ ನಿನ್ನದೇ ಯೋಚನೆ.. ಇದೆಲ್ಲ ಪ್ರೀತಿ ತಾನೇ? ನಿನಗೂ ನನ್ನ ಬಗ್ಗೆ ಈ ರೀತಿ ಭಾವನೆಗಳು ಇದ್ಯಾ ?? ನೀನು ನನ್ನ ಜೊತೆ ಮಾತಾಡುವಾಗ ಒಂದೊಂದು ಸಲ ನನಗೂ ಅನಿಸಿದೆ ನಿಂಗೂ ನನ್ನ ಮೇಲೆ ಸ್ವಲ್ಪನಾದ್ರೂ ಪ್ರೀತಿ ಇದೆ ಅಂತ … ನಿಜಾನ ಗೆಳತಿ? ಬಹಳ ದಿನ ಈ ವಿಷಯ ಬಚ್ಚಿಟ್ಟು ನನ್ನ ಹೃದಯ ಭಾರವಾಗಿತ್ತು, ಈಗ ಸ್ವಲ್ಪ ಹಗುರಾಗಿದೆ.  ನೀನಿಲ್ಲದೆ ನನ್ನ ಬಾಳು ಶೂನ್ಯ ಕಣೆ, ಇಷ್ಟು ದಿನದಲ್ಲಿ ನನ್ನನ್ನ ಅರ್ಥಮಾಡಿಕೊಂಡ ಹುಡುಗಿ ಅಂದ್ರೆ ನೀನೊಬ್ಬಳೆ ಕಣೆ. ನನ್ನ ಕೈ ಹಿಡಿದು ನನ್ನ ಬಾಳ ಸಂಗಾತಿ ಆಗ್ತೀಯ?? ಎಂದೂ ನಿನ್ನ ಕಣ್ಣು ಒದ್ದೆಯಾಗದಂತೆ ನೋಡಿಕೊಳ್ಳುವ ಶತ ಪ್ರಯತ್ನ ಮಾಡ್ತೀನಿ. ಅಡುಗೆ ಮನೆಯಲ್ಲಿ ಈರುಳ್ಳಿ ಹೆಚ್ಚೋ ಕೆಲಸಾ ನಾನೇ ಮಾಡ್ತೀನಿ, ಬೆಂಜ್ ಕಾರಲ್ಲಿ ತಿರುಗಾಡಿಸದಿದ್ರೂ ನನ್ನ ಹೀರೋ ಹೊಂಡಾ ಬೈಕಲ್ಲಿ ಸುತ್ತಾಡಿಸ್ತೀನಿ ಕಣೆ, ಪಿಜ್ಜಾ ಹಟ್ ಗೆ ಕರ್ಕೊಂಡು ಹೋಗಿ ಪಿಜ್ಜಾ ತಿನಿಸದಿದ್ರೂ ಕಾರ್ನರ್ ಅಂಗಡಿಲಿ ಸಿಗೋ ಪಾನಿಪುರಿ, ಗೋಬಿ ಖಂಡಿತ ತಿನಿಸ್ತೀನಿ. ಮನೇಲಿ ನಾನೇ ಖುದ್ದಾಗಿ ಮಾತಾಡ್ತೀನಿ ಬೇಕಾದ್ರೆ, ಎಲ್ಲರ ಆಶೀರ್ವಾದ ತಂಗೊಂಡೆ ಒಂದಾಗೋಣ. ನಮ್ಮನ್ನ ಸಾಕಿ ಸಲಹಿದವರ ಆಶೀರ್ವಾದ ಇಲ್ಲದೆ ಇದ್ರೆ ಹೇಗೆ ಆಲ್ವಾ? ಎಲ್ಲರನ್ನ ಒಪ್ಪಿಸೋ ಜವಾಬ್ದಾರಿ ನಂದು ಕಣೆ ಸರಿನಾ? ನಿಂಗೆ ನನ್ನ ಭಾವನೆಗಳು ಅರ್ಥ ಆಗ್ತಾ ಇದೆ ಆಲ್ವಾ? ನೀನು ನನ್ನವಳಾಗ್ತೀಯ ಅಲ್ವಾ?
ನಿನ್ನ ಹುಚ್ಚು ಪ್ರೀತಿಗಾರ ನವೀನ "

ಈ ಒಂಟಿ ಪಯಣಕ್ಕೆ ಕೊನೆಯೇಲ್ಲಿದೆ ಏನೊಂದೂ ಅರಿಯದೆ ಆತ ಇಂದಿಗೂ ಅವಳದೇ ನೆನಪ ದಾರಿಯಲ್ಲಿ ನಡೆಯುತ್ತಲೇ ಇದ್ದಾನೆ.


*ಎಪ್ರೀಲ್  ಮೂರನೇ ವಾರದ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಲಿಂಕ್: http://www.panjumagazine.com/?p=1834

No comments:

Post a Comment