ಹನಿ ಹನಿ 10 :

೧.
ಅವಳು ಕೊಟ್ಟ ಮುತ್ತಿಗೆ ನಾ ತಲೆ ತಿರುಗಿ ಬಿದ್ದೆ
ಆಮೇಲೆ,
ಎದ್ದು ನೋಡಿದರೆ ನಾ ಮಂಚದ ಕೆಳಗಿದ್ದೆ.

೨.
ಅವಳ ಕಣ್ಣ ಸನ್ನೆಗೆ ಹೃದಯ ಜೋರಾಗಿ ಬಡಿದಿತ್ತು
ಮುಂದೆ ,
ಅವಳು ಬಿಟ್ಟು ಹೋದಾಗ ಅದರ ಕೆಲಸ ನಿಂತಿತ್ತು.

೩.
ದಿನವಿಡೀ ಅವಳದೇ ಧ್ಯಾನದಲಿ ಮುಳುಗಿರುತ್ತಿದೆ
ಅಲ್ಲದೆ ,
ರಾತ್ರಿಯೂ ಕನಸಲಿ ಕಾದುತ್ತಿದ್ದಳು ಕೊಡದೆ ನಿದ್ದೆ.

೪.
ಇಲ್ಲದ ಹುಡುಗಿಯ ಕನಸಲಿ ಜೀವನ ನಡೆದಿತ್ತು
ಮುಂದೆ ,
ಮಡದಿಯ ಮೊಗದಲಿ ಅವಳ ಮುಖ ಕಂಡಿತ್ತು.

ಮೌನ :

ಮೌನದಲ್ಲಿರುವ  ಮಾತುಗಳೆಷ್ಟೋ.?
ಮೌನದಲ್ಲಿರುವ ಭಾವನೆಗಳೆಷ್ಟೋ.?
ಮೌನದಲಿ ಬೆರೆಯುವ ಸಂಬಂಧಗಳೆಷ್ಟೋ.?
ಮೌನದಲಿ ಮರೆಯುವ ಮುನಿಸುಗಳೆಷ್ಟೋ..?

ಹೆಸರಿನಲ್ಲೇನಿದೆ:




ಅಲ್ಲ ಈ ಹೆಸರಿನಲ್ಲೇನಿದೆ ಬಿಡಿ ಅಂತ ನಾವೆಲ್ಲಾ ಹೆಸರಿನ ಬಗ್ಗೆ ಅಷ್ಟಾಗಿ ಯೋಚನೆ ಮಾಡೋಕೆ ಹೋಗಲ್ಲ ಅಲ್ಲವಾ?? ಇರಲಿ ಬಿಡಿ ಅದಕ್ಕೆ ನಾನು ಹೊಸ ಪೀಠಿಕೆ ಹಾಕಿದ್ದು. ವಿಷಯ ಏನಪ್ಪಾ ಅಂದರೆ ನಮ್ಮ ನಿಮ್ಮ ಹೆಸರು ಮತ್ತು ಅಡ್ಡ ಹೆಸರು(ಸರ್ ನೇಮ್). ಹಮ್.. ಇದರ ಬಗ್ಗೆ ಸ್ವಲ್ಪ ಕುತೂಹಲ ವಹಿಸಿದರೆ ನಮ್ಮ ಗಮನಕ್ಕೆ ಬರೋದು ತುಂಬಾ ಮಜವಾದ ಸಂಗತಿ..ಹೆಸರು ಅಂದ್ರೆ ಏನಪ್ಪಾ? ನನಗೆ ತಿಳಿದ ಮಟ್ಟಿಗೆ ಯಾವುದೇ ವ್ಯಕ್ತಿ ಅಥವಾ ವಸ್ತುಗಳನ್ನ ಗುರುತಿಸುವ ಸಲುವಾಗಿ ನಾವಿಡುವ ಶಬ್ಧವೇ ಹೆಸರು.ವಸ್ತುವನ್ನ ಬಿಟ್ಟಾಕಿ ಸದ್ಯ ನಾವು ವ್ಯಕ್ತಿಗಳ ಬಗ್ಗೆ ಮಾತನಾಡೋಣ... ನಮಗೆಲ್ಲ ನಮ್ಮ ಅಪ್ಪ ಅಮ್ಮಂದಿರು ಚಂದದ ಹೆಸರಿಟ್ಟಿದ್ದಾರೆ ಅಲ್ಲವಾ? ಇದು ನಮ್ಮ ಭಾವನೆ ಅಷ್ಟೇ ಅದು ಸರಿಯೋ ತಪ್ಪು ಅಂತ ಕೂಡ ನಮಗೆ ಗೊತ್ತಿರೋಲ್ಲ.. ಅಲ್ಲ ಗೊತ್ತಾದರೂ ಮತ್ತೆ ಚೇಂಜ್ ಮಾಡೋಕೆ ಆಗುತ್ತಾ..ಬಿಡಿ.ಹಳೆಯ ಕಾಲದಲ್ಲಿ ಬಹುತೇಕ ದೇವರ ಹೆಸರು ಅಥವಾ ಹಿರಿಯರ ಹೆಸರನ್ನ ಇಡುತ್ತ ಇದ್ದರು. ರಾಮ ಕೃಷ್ಣ ಹನುಮಂತ ರಾಧೇ ರುಕ್ಮಿಣಿ ಹೀಗೆ. ಇನ್ನು ಈಗಿನ ಕಾಲದ ಹೆಸರು ಕೇಳಬೇಡ ಬಿಡಿ. ಹೆಸರಿಡೋಕೆ ವಿಷಯಗಳು ಬೇಕಾ ದೇವರ ಹೆಸರಿದೆ,ಋಷಿ ಮುನಿಗಳ ಹೆಸರಿದೆ, ಮಹಾನ ಪುರುಷರ ಹೆಸರಿದೆ, ಮರಗಿಡಗಳ ಹೆಸರಿದೆ, ಪ್ರಾಣಿ ಪಕ್ಷಿಗಳ ಹೆಸರಿದೆ, ಸಿನಿಮಾ ನಟರ ಹೆಸರಿದೆ ಹೀಗೆ ಸಾಕಷ್ಟಿದೆ ಬಿಡಿ ಏನಪ್ಪಾ ಇದು ಅಂತ ಯೋಚನೆ ಮಾಡ್ತಾ ಇದ್ದೀರಾ ಮುಂದೆ ಇದೆ ನೋಡಿ ಗಮ್ಮತು..

ಹೆಸರಿಗೆ ತಕ್ಕಂತೆ ನಿಮ್ಮ ನಡೆ ನುಡಿಗಳು ಸ್ವಭಾವ ಇದ್ದರೆ ಚೆನ್ನ ಇಲ್ಲವಾದರೆ ತುಂಬಾ ಕಷ್ಟ.. ಈಗ ನೋಡಿ "ಭೀಮ" ಅಂತ ಹೆಸರಿಟ್ಟುಕೊಂಡವ ನರಪೇತಲ ಆಗಿದ್ದರೆ ಹೇಗೆ ಅಲ್ಲವೇ? ಹಾಗಂತ "ಕೃಷ್ಣ" ಅಂತ ಹೆಸರಿಟ್ಟುಕೊಂಡು ಕಳ್ಳತನ ಮಾಡಿದ್ರೆ ಸರಿ ಅಂತ ಅಂದ್ರೆ ಒದೆ ಬೀಳೋದು ಗ್ಯಾರಂಟಿ.ಕೆಂಡದಂತ ಕಪ್ಪು ಹುಡುಗಿಗೆ ಹೆಸರು ಕೇಳಿದರೆ ನಗುತ್ತ "ಶ್ವೇತ" ಅಂತ ಹೇಳಿದರೆ ಹೇಗಿರುತ್ತೆ ಹೇಳಿ? ನಾನು ಸುಮಾರು ಜನರನ್ನ ನೋಡಿದ್ದೇನೆ ಹೆಸರಿನಲ್ಲಿ ಮಾತ್ರ "ಚೈತನ್ಯ" ಇರುತ್ತೆ ಹೊರತು ಮತ್ಯಾವುದರಲ್ಲೂ ಇರೋಲ್ಲ. "ನಾರಾಯಣ" ಅಂತ ಹೆಸರಿಟ್ಟುಕೊಂಡು ಊರೆಲ್ಲ ತಿರುಗಿ ಸುದ್ದಿ ಹಬ್ಬಿಸುವ ಮಂದಿಯೂ ಇದ್ದಾರೆ ಬಿಡಿ. "ನೀಲವೇಣಿ" ಅಂತ ಹೆಸರಿಟ್ಟುಕೊಂಡವರ ಜಡೆ ನೋಡಿದರೆ ಅಷ್ಟೇ. "ಸುಶೀಲ" ಅಂತ ಹೆಸರಿಟ್ಟುಕೊಂಡು ದಿನವೂ ಒಬ್ಬೊಬ್ಬರ ಜೊತೆ ತಿರುಗುವರಿಗೆ ಏನನ್ನೋಣ?"ಸೌಮ್ಯ" ಹೆಸರಿನಾಕೆ ಸೌಮ್ಯವಾಗಿರದೆ "ದುರ್ಗಾ" ಹೆಸರಿನಾಕೆ ಸೌಮ್ಯವಾಗಿರುವುದೂ ಕೂಡ ಇದೆ. "ನಾಗಪ್ಪ" ಅನ್ನುವವನು ಬುಸ್ ಗುಡದಿದ್ದರೆ  ಸಾಕು."ಆನಂದ" "ಸ್ಮಿತಾ" "ಉಲ್ಲಾಸ" "ಸಂತೋಷ" ಹೆಸರಿನ ವ್ಯಕ್ತಿಯ ಮುಖದಲ್ಲಿ ನಗುವಾಗಲಿ ಸಂತೋಷವಾಗಲಿ ಇರೋದೇ ಇಲ್ಲ. "ಆದರ್ಶ" ಅನ್ನುವವನು ಯಾರಿಗಾದರೂ ಆದರ್ಶನಾಗುತ್ತಾನೆ ಅಥವಾ "ವಿವೇಕ"ಅನ್ನುವವನು ವಿವೇಕದಿಂದ ಇರುತ್ತಾನೆ ಅಂತ ಹೇಳೋಕೆ ಆಗಲ್ಲ .ಅಬ್ಬಾ ಹೇಳೋಕೆ ಸಾಕಷ್ಟು ಇದೆ ಬಿಡಿ.. ಏನು ಮಾಡೋಕೆ ಆಗುತ್ತೆ ಅಪ್ಪ ಅಮ್ಮಂಗೆ ಮೊದಲೇ ಗೊತ್ತಿರೋತ್ತ ಮಂದೆ ಮಕ್ಕಳು ಹೇಗಿರುತ್ತಾರೆ ಅಂತ ಅವರೇನೋ ಇಷ್ಟಪಟ್ಟು ಹೆಸರಿಡುತ್ತಾರೆ ಅಲ್ಲವೇ? ಬಿಡಿ..

ಇನ್ನೊಂದು ವಿಷಯ ಏನು ಗೊತ್ತ? ಹಳೆಯ ಕಾಲದಲ್ಲಿ "ನಾಗಪ್ಪ" "ಬಸಪ್ಪ" "ಭರಮಪ್ಪ" ಅಂತೆಲ್ಲ ಹೆಸರು ಇಡ್ತಾ ಇದ್ದರು ಅದೇ ಅವರ ಹೆಂಡಂದಿರ ಹೆಸರು ಏನಿರುತ್ತೆ ಗೊತ್ತ?? "ನಾಗಮ್ಮ" "ಬಸವ್ವ "ಭರಮವ್ವ"...ಹೀಗೆ. ಕೃಷ್ಣ ಹೆಸರಿರುವವರು ಬೇಕಾದಷ್ಟು ಮದುವೆಯಾಗಿ "ಗಣೇಶ" "ಹನುಮಂತ" ಹೆಸರಿನವರು ಮದುವೆ ಆಗಲಾರದೆ ಇರಲಾದೀತೇ?ಇನ್ನು "ಶಿವ"ನ ಹೆಂಡತಿಯಾಗುವವಳು "ಸರಸ್ವತಿ", "ನಾರಾಯಣ"ನ ಹೆಂಡತಿಯಾಗುವವಳು "ಪಾರ್ವತಿ", "ಕೃಷ್ಣ"ನ ಹೆಂಡತಿಯಾಗಿ ಬರುವವಳು "ಯಶೋದ" ಆಗಿದ್ದರೆ?? ಹೌದುರೀ ನಮ್ಮ ತಂದೆಯ ಹೆಸರು ಕೃಷ್ಣ ಅಮ್ಮ ಯಶೋದ ಹಾಗಾಗಿ ಮದುವೆ ಆದ ಕೂಡಲೇ ಸತ್ಯಭಾಮ ಅಂತ ಚೇಂಜ್ ಮಾಡಿದ್ರು ಈಗ ಗಂಡನ ಮನೆಯಲ್ಲಿ ಸತ್ಯಭಾಮ ತವರಿನಲ್ಲಿ ಯಶೋದ.. ಅದಕ್ಕಾಗಿಯೇ ಅಂತ ಕಾಣುತ್ತೆ ನಮ್ಮಲ್ಲಿ ಮದುವೆಯಾದ ನಂತರ ಹೆಂಡತಿಯ ಹೆಸರು ಬದಲಿಸುವ ರೂಢಿ ಇರುವುದು.

ಇನ್ನು ಅಡ್ಡ ಹೆಸರಿನ ಬಗ್ಗೆ ಬಂದರೆ ಕೇಳಬೇಡಿ ಏನೆಲ್ಲಾ ಇವೆರಿ ಉಳ್ಳಾಗಡ್ಡೆ, "ಬೆಳ್ಳುಳ್ಳಿ", "ಮೆಣಸಿನಕಾಯಿ","ಗಿಡ್ ಮನಿ","ಕೆಳಗಿನ ಮನೆ","ಮೇಲಿನ ಮನೆ", "ತಂಬೋಲಿ", "ಅಂಗಡಿ" ಹೀಗೆ ಏನೇನೋ?? ಮುಂಚೆ ಯಾವುದೋ ಊರಲ್ಲಿದ್ದರು ಅದೇ ಊರಿನ ಹೆಸರೇ ಅಡ್ಡ ಹೆಸರಾಗಿರುತ್ತೆ."ಮಂಗಳೂರು" ಹೆಸರಿನವರು ಮಂಗಳೂರು ನೋಡೇ ಇರೋಲ್ಲ."ಖರೆ" ಅಡ್ಡ ಹೆಸರಿನವರು ನಿಜವೇ ಹೇಳುತ್ತಾರ ಅನ್ನುವ ಪ್ರಶ್ನೆ ಬರದೇ ಇರಲಾರದು. ಮತ್ತೆ ನೋಡಿ ಇಡುವ ಹೆಸರೊಂದು ಕರೆವ ಹೆಸರೊಂದು ಇದರಲ್ಲೂ ಮಜಾ ಇದೆ. ಚಂದ್ರ ಶೇಖರ ಅಂತ ಹೆಸರಿದ್ರೆ "ಚಮ್ಯಾ" ಅಂತಲೋ "ಚಂದು" ಅಂತಲೋ ಕರೆಯುತ್ತಾರೆ.ರಮೇಶ "ರಮ್ಯಾ" ಆದರೆ ಸುರೇಶ "ಸುರ್ಯಾ",ಪವನ "ಪವಿ" ಆದರೆ ಸೂರಜ "ಸೂರಿ" ಆಗುತ್ತಾನೆ.ಚಿದಂಬರ "ಚಿದು" ಆದರೆ ಪ್ರಕಾಶ "ಪಕ್ಯಾ".ಕೊನೆಗೆ ಅವರಿಗೇ ತಮ್ಮ ಹೆಸರು ಏನೆಂದು ಮರೆತು ಹೋಗುವ ಪರಿಸ್ಥಿತಿ ಬರುತ್ತೆ.ಇದೆಲ್ಲ ಇದ್ದ ಹೆಸರಲ್ಲೇ ಶಾರ್ಟ್ ಕಟ್ ಆದರೆ ಇನ್ನು ಕೆಲವರು ಪ್ರೀತಿಯಿಂದ "ಚ್ಯಾಂ" "ಮ್ಯಾಂ" "ಕಾವು" ಅಂತೆಲ್ಲ ಕರೆಯುತ್ತಾರೆ.ಇನ್ನು ಹವ್ಯಕರಲ್ಲಿ ಗಂಡು ಮಕ್ಕಳಿಗೆಲ್ಲ "ತಮ್ಮ" ಅಥವಾ "ಮಾಣಿ" ಅಂತ ಕರೆದರೆ ಹೆಣ್ಣು ಮಕ್ಕಳಿಗೆ "ಕೂಸೇ" ಅನ್ನುತ್ತಾರೆ. ಒಮ್ಮೆ ಲೇ ಭೂಮೀ ಆಕಾಶಂಗೆ ಕರಿಯೇ ಅಂತ ಒಬ್ಬ ಹೆಂಗಸು ಅಂದಾಗ ಕೆಲ ಕ್ಷಣ ಕಸಿವಿಸಿಗೊಂಡಿದ್ದೆ. ನಾನು ಮಹಾರಾಷ್ಟ್ರದಲ್ಲಿ ಇರುವುದರಿಂದ ಇಲ್ಲಿನ ಕೆಲವು ಹೆಸರುಗಳ ಬಗ್ಗೆ ಹೇಳುತ್ತೇನೆ ಕೇಳಿ ಇಲ್ಲಿನ ಮುಖ್ಯ ಹೆಸರುಗಳಲ್ಲಿ "ಸಾಯಲಿ" ಒಂದು.. ಹೆಸರು ಕೇಳಿದ್ರೆ ಸಾಯಲಿ ಅಂದ ಕೂಡಲೇ ನನಗೆ ಮೊದಲೆಯ ಬಾರಿಗೆ ಘಾಬರಿಯಾಗಿತ್ತು. "ಸೈ" "ಜಾಯಿ" "ಜುಯಿ"ಹೀಗೆ ಹಲಾವಾರು ಹೆಸರುಗಳು ಇಲ್ಲಿ ಕೇಳಿಬರುತ್ತೆ.ಅಡ್ಡ ಹೆಸರುಗಳಲ್ಲಿ "ಪ್ರಾಣಿ" ಅಡ್ಡ ಹೆಸರು ಕೇಳಿದಾಗ ನನಗೆ ನಗುವೇ ಬಂದಿತ್ತು. "ಝಾಕಾಸ್" "ದಶಪುತ್ರೆ" "ಅಷ್ಟಪುತ್ರೆ" "ಕಂಗಾಲ್" ಈ ರೀತಿಯ ಹೆಸರುಗಳೂ ಇವೆ.

ಇತ್ತೀಚೆಗಂತೂ ಹೆಸರಿಡುವದು ದೊಡ್ಡ ಸಂಭ್ರಮವೇ ಆಗಿದೆ.ನಮ್ಮ ಮಗುವಿಗೆ ಹೆಸರಿಡಬೇಕಿದೆ ಏನಾದರೂ ಹೆಸರು ಹೇಳುತ್ತೀರಾ ಅಂತ ಕೇಳಿದವರಿಗೆ ಮಗು ಗಂಡೋ ಹೆಣ್ಣೋ ಅಂದಾಗ  ಇನ್ನು ಹುಟ್ಟಿಲ್ಲ ಹುಟ್ಟಿದ ಮೇಲೆ ಇಡಲು ಈಗಿಂದಲೇ ತಯಾರಿ ಮಾಡುತ್ತಿದ್ದೇವೆ ಅನ್ನುವ ಜನರಿದ್ದಾರೆ.ಮಗು ಹುಟ್ಟುವ ಮೊದಲೇ ಹೆಸರು ನಿರ್ಧರಿಸುವಷ್ಟು ಕಾಲ ಮುಂದಾಗಿದೆ.ಅಪ್ಪನ ಹೆಸರಿನ ಮೊದಲನೇ ಅಕ್ಷರ ಅಮ್ಮನ ಹೆಸರಿನ ಕೊನೆಯ ಅಕ್ಷರ ಸೇರಿಸಿಯೋ ಮಗನ ಹೆಸರು ಬರಬೇಕು ಹಾಗೆ ಹೀಗೆ ಅಂತ ಇಂಟರ್ನೆಟ್ ನಲ್ಲಿ ಹುಡುಕಾಡಿ ಅವರಿಗೆ ಇವರಿಗೆ ಕೇಳಿ ಕೊನೆಗೆ ಮಗನಿಗೆ "ಟಾಮಿ" ಅಂತ ಹೆಸರಿಟ್ಟು ಮನೆ ನಾಯಿಗೆ "ರಾಜು" ಅಂತ ಹೆಸರಿಡುತ್ತಾರೆ ಅಷ್ಟೇ. ಇಂಟರ್ನೆಟ್  ಅಲ್ಲಿ ಅಪ್ಪ ಅಮ್ಮನ ಹೆಸರು ಟೈಪ್ ಮಾಡಿದ್ರೆ ಅದಕ್ಕೆ ಸೂಟ್ ಆಗುವ ಮಕ್ಕಳ ಹೆಸರು ಬರುತ್ತೆ ಅನ್ನುವುದನ್ನ ಕೇಳಿದ್ದೇನೆ. ಒಬ್ಬ ದಂಪತಿಗೆ ಗಂಡು ಮಗುವಾಯಿತು "ಚಿದಂಬರ" ಅಂತ ಹೆಸರಿಟ್ಟರಂತೆ ಎರಡನೆಯದು ಗಂಡು "ಔದುಂಬರ" ಅಂತ ಇಟ್ಟರಂತೆ ಮತ್ತೆರಡು ಗಂಡಾಯಿತು???  "ನವಂಬರ", "ಡಿಸಂಬರ" !!!  ಚೀನಾ ಜಪಾನ ನಲ್ಲಿ ಪಾತ್ರೆಗಳನ್ನ ಮೇಲಿಂದ ಬೀಳಿಸಿ ಬರುವ ಶಬ್ಧವನ್ನೇ ತಮ್ಮ ಮಕ್ಕಳಿಗೆ ಇಡುತ್ತಾರಂತೆ "ಟಿಂಗ್ ಟಾಂಗ್ ಟುಂಗ್" ಅಂತೆಲ್ಲ, ಅಬ್ಬ ನಮ್ಮ ದೇಶದಲ್ಲಿ ಈ ರೂಢಿ ಇಲ್ಲ ಇದ್ದಿದ್ದರೆ ನಮ್ಮ ಹೆಸರು ಏನಾಗಿರುತ್ತಿತ್ತೋ?

ಹೆಸರಿನಲ್ಲೇನಿದೆ ಅಂತ ಹೇಳೋಕೆ ಹೋದ್ರೆ ಇನ್ನೂ ಬೇಕಾದಷ್ಟಿದೆ ಬಿಡಿ... ಸುಮ್ನೆ ಪಾಪ ನಿಮ್ಮನ್ನ ಎಷ್ಟು ಅಂತ ಕೊರೆಯೋದು ಅಲ್ಲವ?? ಇದನ್ನ ಓದಿದ ಮೇಲೆ ನಿಮಗೂ ಕೂಡ ನಿಮ್ಮ ಹೆಸರಿನ ಬಗ್ಗೆ ತಲೆಯಲ್ಲಿ ಹುಳ ಹೊಕ್ಕ ಹಾಗೆ ಆಗಿದೆ ಅಲ್ಲವಾ? ಬೇಜಾರು ಮಾಡ್ಕೋಬೇಡ್ರೀ  ಸುಮ್ನೆ ತಮಾಷೆಗೆ ಅಂತ ಇಷ್ಟೆಲ್ಲಾ ಕೊರೆದಿದ್ದು.
ಮೇಲೆ ಒಂದು ಮಾತು ಹೇಳಿದ್ದೆ "ಖರೆ ಅಡ್ಡ ಹೆಸರಿನವರು ನಿಜವೇ ಹೇಳುತ್ತಾರ ಅನ್ನುವ ಪ್ರಶ್ನೆ ಬರದೇ ಇರಲಾರದು"ಅಂತ.. ಹೌದಲ್ಲವೇ??

ಸ್ವಾತಂತ್ರ್ಯ:


ಅಂದು ನಡು ರಾತ್ರಿಯಲಿ
ಯಾರೋ ಯಾರಿಗೋ
ಏನೋ ಕೊಟ್ಟು ಹೋದರು
ಏನೊಂದೂ ತಿಳಿಯದ
ಕೆಲ ಜನ ಅದನ್ನೇ
ಸ್ವಾತಂತ್ರ್ಯವೆಂದರು.

ಚಂಚಲ ಚಿತ್ತ:

ಭಾವನೆಗಳ ಸುತ್ತ
ಕನಸುಗಳ ಹುಡುಕುತ್ತ
ಜಾರುತಿದೆ ಅತ್ತಿತ್ತ
ಈ ಚಂಚಲ ಚಿತ್ತ.

ತುಂಬಿದ ಕತ್ತಲೆಗಳ ಸುತ್ತ
ಕೇಳುತಿದೆ ದ್ವೇಷ ಅಸೂಯೆಗಳ ಮಂತ್ರ
ಸುತ್ತಲಿರಲು ಸರ್ಪಗಳ ಹುತ್ತ
ಇದ್ದರೂ ನಮಗೆಲ್ಲಿದೆ ಇಲ್ಲಿ ಸ್ವಾತಂತ್ರ್ಯ.

ಪ್ರೀತಿ ಪ್ರೇಮವ ಬದಿಗಿಟ್ಟು
ತಿಂದ ಮನೆಗೇ ದ್ರೋಹ ಬಗೆಯುವರೆಲ್ಲ
ಭಾವನೆಗಳ ಹರಾಜಿಗಿಟ್ಟು
ಕಾಂಚಾಣದ ಮೋಡಿಗೆ ಕುಣಿಯುತಿಹರೆಲ್ಲ.

ನನ್ನವರಾರಿಲ್ಲ ಇಲ್ಲಿ
ನನಗ್ಯಾರಲ್ಲೂ ನಂಬಿಕೆಯಿಲ್ಲ
ಶುಭ ಕೊರುವವರಿಲ್ಲ ಇಲ್ಲಿ
ಇರುವರು ಬರೀ ವೈರಿಗಳೆಲ್ಲ.

ಜೀವನ ನಡೆಸುವ ಧೈರ್ಯವಿಲ್ಲ
ಈ ಕೊಳಕು ಜಗದಲಿ
ಮೃದು ಮನಕೆ ಸಮಾಧಾನವಿಲ್ಲ
ಹೇಗೆ ನಾ ಬದುಕಲಿ..

ಭಾವನೆಗಳ ಸುತ್ತ
ಕನಸುಗಳ ಹುಡುಕುತ್ತ
ಜಾರುತಿದೆ ಅತ್ತಿತ್ತ
ಈ ಚಂಚಲ ಚಿತ್ತ.