ತ್ಯಾಗ:

ನೀ ದಾನವ ನೀಡಲು
ಏನಯ್ಯ ನಿನ್ನದು??
ಇರುವುದೆಲ್ಲವೂ ಆ
ದೇವರ ಕರುಣೆಯು.

ಅವನಿಂದ ಬಂದದ್ದು
ಇನ್ನೊಬ್ಬನಿಗೆ ನೀಡಿದೆ,
ಕೊಡು-ಕೊಡುಗೆಗಳ
ಮಧ್ಯೆ ನೀ ದೊಡ್ಡವನಾದೆ.

ನಿನ್ನದಲ್ಲ ಏನೂ
ಎಲ್ಲವೂ ಅವನದ್ದೇ,
ನೀಡಿದ ಅವನ ದ್ವೇಷಿಸಿ
ನೀ ದೇವನಾದೆ.

ಕಾಣದ ದೇವರ ನೀ
ಗುಡಿಯೊಳು ಬಂಧಿಸಿದೆ,
ವೇದಮಂತ್ರಗಳ ಹೆಸರಲಿ
ಮೂಢನಂಬಿಕೆಗಳ ಸೃಷ್ಟಿಸಿದೆ.

ಅನಾಥನಿಗೆ ನೀಡಲಿಲ್ಲ
ನೀ ತುತ್ತು ಅನ್ನವನು,
ಕಲ್ಲು ದೇವತೆಗೆ ನೀಡಿದೆ
ಬಂಗಾರದ ಒಡವೆಯನು.

ಕಾಣಲಿಲ್ಲ ದೇವ ನಿನಗೆ
ಬೇಡುತಿದ್ದ ಮುಗ್ಧ ಕಂಗಳಲಿ,
ಬರಲಿಲ್ಲ ಕರುಣೆ ನಿನಗೆ
ಆ ಹಸಿದ ಮಗುವಿನಲಿ.

ನಿನ್ನಲ್ಲಿ ಇರುವುದೆಂದಲ್ಲ
ದೇವರಿಗೆ ನೀ ನೀಡಿದ್ದು,
ನಿನ್ನೆಲ್ಲ ಪಾಪ ಕಾರ್ಯವ
ತೊಳೆಯಲು ಲಂಚವೆಂದು.

ಅರಿಯೋ ಮೂಢ ಮಾನವ
ನಿನ್ನದಲ್ಲ ಏನೂ,ಇಲ್ಲೇನೂ ನನ್ನದಲ್ಲ,
ಎರಡು ದಿನದ ಬಾಳಿನಲಿ
ಎಲ್ಲವೂ ನನ್ನದೆಂಬ ಮಾತು ಸಲ್ಲ.

ಹನಿ ಹನಿ 12 :

ನಶೆ:
೧.
ಮೊದಲೆಲ್ಲ ಅವಳ ನೋಡಿದೊಡೆ
ದೇಹದಲ್ಲೆಲ್ಲ
ನಶೆ ಏರುತ್ತಿತ್ತು
ಈಗೆಲ್ಲ ಅವಳು ಕಂಡೊಡೆ
ಕುಡಿದ ನಶೆಯೂ
ಇಳಿಯತೊಡಗಿದೆ.

೨.
ಹೆಂಡದಲಿ
ಮಾಲು ಹಳೆಯದಾದಂತೆ
ನಶೆ ಏರುತ್ತಂತೆ
ಪ್ರೀತಿಯಲಿ
ಮಾಲು ಹಳೆಯದಾದಂತೆ
ನಶೆ ಇಳಿಯುತ್ತಂತೆ

೩.
ಪ್ರೀತಿಯಲಿ ನಶೆ ಏರುತ್ತೆ
ಮದುವೆಯಾಡೋದೇ ಇಳಿಯುತ್ತೆ


ಅಂದು-ಇಂದು
೧.
ಅಂದು ನನ್ನ ಮಾತಿಗೆಲ್ಲ
ಹೂಂ ಗುಡುತ್ತಿದ್ದವಳು
ಇಂದು ಮಾತಿಗೆ ಮೊದಲೇ
ಹೂಂಕರಿಸುತ್ತಿದ್ದಾಳೆ.

೨.
ಮೊದಲೆಲ್ಲ ನನ್ನಾಕೆ
ಇಡುತ್ತಿದ್ದ ಕುಂಕುಮದಂತೆ
ದಪ್ಪಗಿದ್ದ ನಾನು
ಬರುಬರುತ್ತಾ
ಅವಳ ಟಿಕಲಿಯಂತೆ
ಸಣ್ಣಗಾಗಿದ್ದೇನೆ.

ಹನಿ ಹನಿ 11:

ಮದುವೆ ಮದುವೆ ಮದುವೆ :

 ೧.
ಮದುವೆಯ ಮೊದಲು
ಆಕೆ ಸುಂದರಿ..
ಆತ ಗುಂಡಪ್ಪ..

ಮದುವೆಯ ತರುವಾಯ
ಆಕೆ ಬಜಾರಿ..
ಆತ ಬರೀ ಹೌ "ದಪ್ಪ".

೨.
ಮದುವೆಯ ಮೊದಲು ಹೇಳುತ್ತಿದ್ದ
ಏನೆಲ್ಲಾ ಇದೆ ಮದುವೆಯ ನಂತರ,
ತದನಂತರ ಹೇಳತೊಡಗಿದ
ಹೀಗೂ ಉಂಟೇ, ವೀಕ್ಷಿಸಿ ಬ್ರೇಕ್ ನಂತರ.

೩.

ಪ್ರೀತಿಸುತ್ತಿದ್ದಾಗ
ಬಾಳು ಸುಂದರಕಾಂಡ,
ಮದುವೆಯ ಬಳಿಕ
ಬರೀ ಯುದ್ಧ ಕಾಂಡ.

೪.
ಪ್ರೀತಿ ಮಾಡಿದರೆ
ಸುಖ ಸಿಗುತ್ತೆ,
ಮದುವೆ ಆದಮೇಲೆ
ಬುದ್ಧಿ ಬರುತ್ತೆ.

೫.
ಪ್ರೀತಿಸುವವರು ಕುರುಡರಂತೆ,
ಮದುವೆ ಕಣ್ಣು ತೆರೆಸುತ್ತಂತೆ.

೬.
ಮದುವೆಯೆಂದರೆ ಏನಯ್ಯ ಅಂದಾತ,
ಮೊದಮೊದಲು "ಮಧು"
ಆಮೇಲೆ ಬರೀ "ವೆ ವೆ" ಎಂದೆ ನಾ..

ಕನಸು:

ಭಾನುವಾರ ಎದ್ದಾಗ 10 ಗಂಟೆಯಾಗಿತ್ತು. ತಲೆ ತುಂಬಾ ಭಾರವಾಗಿತ್ತು. ದಿನದ ಉತ್ಸಾಹವೂ ಇರಲಿಲ್ಲ. ಒಂದು ಕಪ್ ಕಾಫಿಯನ್ನಾದರೂ ಕುಡಿಯೋಣ ಅಂತ ಮುಖ ತೊಳೆದು ಫ್ರೆಶ್ ಆಗಿ ಅಡುಗೆ ಮನೆಗೆ ಬಂದೆ. ಗ್ಯಾಸ್ ಕಟ್ಟೆಯ ಮೇಲೆ ಹರಡಿದ್ದ ಪಾತ್ರೆಗಳನ್ನೆಲ್ಲ ಬದಿಗೆ ಸರಿಸಿ ಹಾಲನ್ನು ಬಿಸಿ ಮಾಡಿ, ಕಾಫಿ ಪೌಡರ್ ಸಕ್ಕರೆ ಹಾಕಿ ಕದಡಿ ಕಪ್ಪನ್ನ ಕೈಯ್ಯಲ್ಲಿ ಹಿಡಿದು ಹಾಗೆ ಹಾಸಿಗೆಯ ಮೇಲೆ ಬಂದೊರಗಿದೆ. ಮನಸ್ಸಿನಲ್ಲಿ ನೂರಾರು  ಚಿಂತೆಗಳು ಸುಳಿದಾಡುತ್ತಿದ್ದವು. ಇದೇ ಚಿಂತೆಯಲ್ಲಿ ನಿನ್ನೆ ಮಲಗಿದಾಗ ರಾತ್ರಿ ಎರಡಾಗಿತ್ತು. ಕಾಫಿಯ ಗುಟುಕನ್ನ ಹೀರುತ್ತಾ ಹಾಗೆ ಮನಸ್ಸು ಕಲ್ಪನಾ ಲೋಕದಲ್ಲಿ ತೇಲಿಹೋಗಿತ್ತು. ಸಾವಿರಾರು ವಿಚಾರಗಳು ಮನದಲ್ಲಿ ಮೂಡಿ ಮಾಯವಾಗುತ್ತಿದ್ದವು. ಒಂದಕ್ಕೊಂದು ಸಂಬಂಧವಿರದ ವಿಚಾರಗಳು. ಒಮ್ಮೆಲೇ ಬಾಲ್ಯದ ಕೆಲ ಸುಖ ಕ್ಷಣಗಳು ಮಿಂಚಿ ಮುಖದಲ್ಲಿ ಸ್ಮಿತ ಮೂಡಿಸಿದರೆ ತಕ್ಷಣದಲ್ಲೇ ಕೆಲಸಕ್ಕಾಗಿ ಊರೂರು ಅಲೆದು ಅನುಭವಿಸಿದ ಕಷ್ಟದ ಕ್ಷಣಗಳು ವದನದಲ್ಲಿ ಮತ್ತೆ ನೆರಿಗೆಗಳನ್ನ ಮೂಡಿಸುತ್ತಿದ್ದವು. ಸುಖ ದುಃಖಗಳ ನಡುವಿನ ಈ ಇಪ್ಪತೈದು ವರ್ಷಗಳ ಕೆಲ ನೆನಪುಗಳು ಇಂದು ತುಂಬಾ ಕಾಡತೊಡಗಿತ್ತು. ಇದೇ ಚಿಂತೆಯ ಗೊಂದಲದಲ್ಲಿ ಕೈಯ್ಯಲ್ಲಿದ್ದ ಕಾಫಿ ಕಪ್ ಖಾಲಿಯಾಗಿತ್ತು. ಏಕೋ ಏಳಲು ತಯಾರಿರದ ಮತ್ತದೇ ಕಲ್ಪನಾ ಜಗತ್ತಿಗೆ ಹೊರಟಿದ್ದ ಮನಸ್ಸನ್ನ ಹಿಡಿದೆಳೆದು ಎದ್ದು ಅಡುಗೆ ಮನೆಗೆ ಬಂದು ‘ಉಸ್…’ ಎನ್ನುತ್ತಾ ಹರಡಿದ್ದ ಪಾತ್ರೆಗಳನ್ನೆಲ್ಲ ಒಂದೊಂದಾಗಿ ಎತ್ತಿಟ್ಟು, ಸ್ನಾನಕ್ಕೆಂದು ಒಲೆಯ ಮೇಲೆ ನೀರಿಟ್ಟೆ. ಕಲ್ಪನಾ ಲೋಕದಲ್ಲೇ ಅರ್ಧ ದಿನ ಕಳೆದು ನೆನ್ನೆಯ ರಾತ್ರಿ ಅರ್ಧ ಲೋಟ ಹಾಲು ಕುಡಿದು ಮಲಗಿದ್ದರಿಂದ ಉದರದಲ್ಲಿ ಗಣೇಶನ ವಾಹನ ಓಡಾಡತೊಡಗಿತ್ತು. ಒಂದೆರಡು ಡಬ್ಬಿಯ ಮುಚ್ಚಳ ತೆಗೆದು ನೋಡಿದರೆ ಎಲ್ಲೂ ಅವಲಕ್ಕಿಯ ಸುಳಿವಿರಲಿಲ್ಲ. ಯಾವುದಾದರೂ ಡಬ್ಬದಲ್ಲಿ ಹುಡುಕಿದರೆ ಸಿಗುವುದಾದರೂ ಹೇಗೆ ಅನ್ನುವುದು ಮತ್ತೊಂದು ಡಬ್ಬದಲ್ಲಿ ಅವಲಕ್ಕಿ ಸಿಕ್ಕಾಗ ಅರಿವಿಗೆ ಬಂತು.

ಯಾಕೋ ಮನಸ್ಸು ನನ್ನ ಹಿಡಿತದಲ್ಲಿರಲಿಲ್ಲ. ಯಾವುದೋ ಬೇರೊಂದು ಲೋಕದಲ್ಲಿ ವಿಹರಿಸಲು ನನ್ನಿಂದ ದೂರವಾಗತೊಡಗಿತ್ತು ಈ ಎರಡು ದಿನಗಳಲ್ಲಿ. ಏನೆಂದು ಪ್ರಶ್ನಿಸಲು ಹೋದರೆ ಮತ್ತೆ ಎಲ್ಲೆಲ್ಲೊ ಹೋಗಿಬಿಡುತ್ತೆ ಈ ಮನಸ್ಸು ಅಂತ ತಡೆಹಿಡಿದು ಬಾಣಲಿಯನ್ನ ಇನ್ನೊಂದು ಒಲೆಯ ಮೇಲಿಟ್ಟು ಎಣ್ಣೆ ಹಾಕಿ ಒಗ್ಗರಣೆ ಮಾಡಿ ಸ್ವಲ್ಪ ಅವಲಕ್ಕಿ ಹೊಯ್ದು ಕೈಯಾಡಿ ಪ್ಲೇಟಿನಲ್ಲಿ ಹಾಕಿ ತಿಂದು ಮುಗಿಸಿದೆ. ಒಂದು ಗ್ಲಾಸ್ ನೀರಿಳಿಸಿ ಹಾಗೆ ಗ್ಯಾಸ್ ಕಟ್ಟೆಗೆ ಕೈಕೊಟ್ಟು ಬಿಸಿಗಿಟ್ಟಿದ್ದ ನೀರನ್ನೇ ನೋಡತೊಡಗಿದೆ. ನೀರು ಬಿಸಿಯಾಗಿ ಕೆಳಗಿಂದ ಗುಳ್ಳೆಗಳು ಮೇಲೆ ಬಂದು ಟಪ್ಪನೆ ಒಡೆಯುತ್ತಿದ್ದವು. ನೋಡುತ್ತಿದ್ದಂತೆಯೇ ಮನದಲ್ಲಿ ಕೆಲ ವಿಚಾರಗಳು ಮೂಡಿದವು. ನಮ್ಮ ಜೀವನ ಇಷ್ಟೇ ಅಲ್ಲವೇ ನೀರ ಮೇಲಿನ ಗುಳ್ಳೆಯಂತೆ? ಇಂದಲ್ಲ ನಾಳೆ ನಾವೂ ಸಾಯುವವರೆ, ನಶ್ವರವಾದ ಈ ಜೀವನದಲ್ಲಿ ಎಷ್ಟೋ ಆಸೆಗಳನ್ನ ಮನದಲ್ಲಿ ಹುಟ್ಟು ಹಾಕಿ ಅದನ್ನ ಈಡೇರಿಸಲು ಈ ಹಾಳು ದುನಿಯಾದಲ್ಲಿ ಜೀವನವಿಡೀ ಕಷ್ಟಗಳನ್ನ ಅನುಭವಿಸುತ್ತೇವೆ. ಕೆಲ ಕ್ಷಣದ ಸುಖಕ್ಕಾಗಿ ಜೀವನವಿಡೀ ದುಃಖ ಅನುಭವಿಸುವುದು ಏತಕ್ಕೆ ಅನ್ನುವ ಸಹಜ ಪ್ರಶ್ನೆ ಉದ್ಭವಿಸಿತು. ಮತ್ತೆ  ಮನಸಿಗೆ ಲಗಾಮು ಹಾಕಿ ಗ್ಯಾಸ್ ಸ್ಟೋವ್ ಬಂದ್ ಮಾಡಿ ಬಿಸಿ ನೀರನ್ನ ಬಕೇಟಿಗೆ ಹೊಯ್ದು ಸ್ನಾನಕ್ಕೆ ಅಡಿಮಾಡಿಕೊಂಡೆ. ದಿನವೂ ಕೆಲಸದ ಗಡಿಬಿಡಿಯಲ್ಲಿ ಬೆಳಿಗ್ಗೆ ಏಳಕ್ಕೆ ಮನೆ ಖಾಲಿ ಮಾಡುವ ನಾನು ಇಂದು ಭಾನುವಾರವಾದ್ದರಿಂದ ಯಾವುದೇ ಗಡಿಬಿಡಿಯಿಲ್ಲದೆ ಆರಾಮವಾಗಿದ್ದೆ. ಭಾನುವಾರ ಬಹುತೇಕ ಗೆಳೆಯರೊಡನೆ ಎಲ್ಲಾದರೂ ತಿರುಗಾಡಲೋ ಅಥವಾ ಸಿನೆಮಾಕ್ಕೋ ಹೋಗಿ ಸಂತಸದಿಂದ ಕಳೆಯಿತ್ತಿದ್ದೆ, ಆದರೆ ಇಂದು ಏನೂ ಬೇಡವಾಗಿತ್ತು. ನೆನ್ನೆಯೇ ಗೆಳೆಯರಿಗೆಲ್ಲ ನಾನೆಲ್ಲೂ ಬರುವುದಿಲ್ಲ ಒಂದು ದಿನ ಒಂಟಿಯಾಗಿರಬೇಕು, ದಯವಿಟ್ಟು ಒತ್ತಾಯ ಮಾಡಬೇಡಿ ಎಂದಿದ್ದರಿಂದ  ಎಲ್ಲರೂ ಯಾವುದಾದರೂ ಹುಡುಗಿ ಕೈಕೊಟ್ಟಿರಬೇಕು ಅಂತ ಕೀಟಲೆ ಮಾಡಿ ತಮ್ಮ ಪಾಡಿಗೆ ಹೊರಟುಹೋಗಿದ್ದರು. ಯಾಕೋ ಕೆಲ ದಿನಗಳಿಂದ ಒಂಟಿಯಾಗಿರಲು ಬಯಸುತ್ತಿತ್ತು ಮನ. ಯಾರಾದರೂ ಜೊತೆಗೆ ಇಲ್ಲದಿದ್ದರೆ ಬೋರ್ ಆಗುತ್ತಿದ್ದ ನನಗೆ ಇಂದು ಒಂಟಿಯಾಗಿರುವುದು ಬೇಸರ ತಂದಿರಲಿಲ್ಲ.

ಟವೆಲ್ ಸುತ್ತಿ ಬಚ್ಚಲು ಮನೆಗೆ ಬಂದು ಹಾಗೆ ಚೊಂಬಿನಿಂದ ತಲೆಯ ಮೇಲೆ ನೀರ್ಹೊಯ್ದುಕೊಳ್ಳುತ್ತ ಕನಸಿನ ಲೋಕಕ್ಕೆ ಹೋಗಿ ಮರಳಿದ್ದು ಬಕೆಟಿನಲ್ಲಿ ನೀರು ಖಾಲಿಯಾದಾಗಲೇ. ಸೋಪನ್ನ ಹಚ್ಚಿಕೊಳ್ಳಲೂ ಮರೆತ ನಾನು ನನ್ನನ್ನೇ ಬಯ್ದುಕೊಳ್ಳುತ್ತಾ ಎದುರಿಗಿದ್ದ ಸೋಪನ್ನ ಮೈಗೆಲ್ಲ ಉಜ್ಜಿ ಒಂದೆರಡು ಚೊಂಬು ತಣ್ಣೀರನ್ನ ಮೈಮೇಲೆ ಸುರಿದು ನಡುಗುತ್ತ ಮೈ ಒರೆಸಿ ಟವೆಲನ್ನ ಸೊಂಟಕ್ಕೆ ಸುತ್ತಿ ದೇವರ ಫೋಟೋಕ್ಕೆ ನಮಸ್ಕರಿಸಿ ಹಣೆಗೆ ಕುಂಕುಮ ಇಟ್ಟುಕೊಂಡು ರೂಮಿಗೆ ಬಂದು ಬನಿಯನ್ ಹಾಕಿ ಲುಂಗಿಯೇರಿಸಿದೆ. ಟೈಮ್ ನೋಡಿದರೆ ಹನ್ನೊಂದೂವರೆಯಾಗಿತ್ತು. ಹೊರಗಡೆ ಹೋಗಲೂ ಮನಸ್ಸಿರಲಿಲ್ಲ. ಸ್ವಲ್ಪ ಹೊತ್ತಾದರೆ ಹೊಟ್ಟೆಯಲ್ಲಿ ಮತ್ತೆ ಸದ್ದಾಗುವುದಂತೂ ಖಚಿತವೆಂದು ಏನಾದರೂ ಬೇಯಿಸೋಣ ಅಂತ ಮತ್ತೆ ಅಡುಗೆ ಮನೆಯತ್ತ ನಡೆದೆ. ಮದುವೆಯೆಂದರೆ ಮೈ ಉರಿಯುತ್ತಿದ್ದ ನನಗೆ ಇಂದೇಕೋ ನನಗೂ ಒಂದು ಸಂಗಾತಿ ಬೇಕೆನಿಸಿದ್ದಂತೂ ನಿಜ. ಮನಸ್ಸಿನ ಈ ತೊಳಲಾಟದ ನಡುವೆ ಏನು ಮಾಡಬೇಕೆಂದು ತೋಚದೆ ಕೊನೆಗೆ ಮಸಾಲೆ ಭಾತ್ ಮಾಡಲು ಸ್ವಲ್ಪ ತರಕಾರಿಗಳನ್ನ ಹೆಚ್ಚಿ ಕುಕ್ಕರಿನಲ್ಲಿ ಅಕ್ಕಿ ತರಕಾರಿ ಮಸಾಲೆಯನ್ನೆಲ್ಲ ಹೊಯ್ದು ನೀರು ಹಾಕಿ ಗ್ಯಾಸ್ ಮೇಲಿಟ್ಟು  ಮತ್ತೆ ರೂಮಿಗೆ ಬಂದೆ, ಹಾಸಿಗೆ ಇನ್ನೂ ಹಾಗೇ ಇತ್ತು. ಒಂದು ವಾರದ ಗಡಿಬಿಡಿಯಲ್ಲಿ ಹರಡಿದ್ದ ಮನೆಯನ್ನ ಸ್ವಚ್ಛಗೊಳಿಸಲು ಇಂದ್ಯಾಕೋ ಮನಸ್ಸಿರಲಿಲ್ಲ.ಹಾಗೆ ಹಾಸಿಗೆಯ ಮೆಲೋರಗಿದೆ. ಮನ ಜಾರಿತ್ತು, ತಲೆ ಚಿಟ್ಟು ಹಿಡಿಯುವ ಈ ಹಾಳು ಜಗವನ್ನ ಬಿಟ್ಟು ಸುಂದರವಾದ ಏನೂ ಗೋಳಿರದ ನನ್ನ ಹಳ್ಳಿಯ ಜೀವನದಲ್ಲಿ ನನ್ನ ಮನ ತೇಲಾಡುತ್ತಿತ್ತು.

ಸುಂದರ ಹಳ್ಳಿ ನನ್ನದು, ಯಾರ ಹಂಗಿರದ ಸರಳ ಜೀವನ. ಆ ಶಾಲಾ ದಿನಗಳು ಬಾಲ್ಯದ ದಿನಗಳೆಲ್ಲ ನನ್ನ ಕಣ್ಮುಂದಿದ್ದವು. ಬೆಳಿಗ್ಗೆ ಆರಕ್ಕೆ ಎದ್ದು ಮುಖ ತೊಳೆದು ಸ್ವಲ್ಪ ಮನೆ ಕೆಲಸ ಮಾಡಿ ಸ್ನಾನ ತಿಂಡಿ ಮುಗಿಸಿ ಶಾಲೆಗೆ ಹೋದರೆ ಮಧಾಹ್ನದ ಊಟ ಅಲ್ಲೇ, ಸಂಜೆಯ ಹೊತ್ತು ಗೆಳೆಯರ ಜೊತೆಗೂಡಿ ಬುಗುರಿ, ಗೋಲಿ, ಚಿನ್ನಿ ದಾಂಡು ಆಡಿ ಸಂಜೆ ಏಳಕ್ಕೆ ಮನೆಗೆ ಬಂದು ಕೈ ಕಾಲು ತೊಳೆದು ದೇವರ ಶ್ಲೋಕಗಳನ್ನ ಪಠಿಸಿ ಶಾಲೆಯಲ್ಲಿ ಕೊಟ್ಟ ಮನೆಗೆಲಸ ಮುಗಿಸಿ ಅಮ್ಮನ ಪ್ರೀತಿಯ ಕೈಊಟ ಮಾಡಿ ಅಪ್ಪ ಅಮ್ಮನ ಮಡಿಲಲ್ಲಿ ರಾತ್ರಿ ಒಂಬತ್ತಕ್ಕೆ ಮಲಗಿದರೆ ಏಳುವುದು ಬೆಳಗ್ಗೆ ಆರಕ್ಕೇ. ಯಾವುದೇ ಚಿಂತೆಯಿಲ್ಲದ ಯಾವುದೇ ಗೋಳಿರದ ಏಳು ವರ್ಷದ ಸುಂದರ ಬದುಕು ಹೇಗೆ ಕಳೆಯಿತೋ? ಇದಾಗಿ ಹೈ ಸ್ಕೂಲ್ ಮೆಟ್ಟಿಲು ಹತ್ತಿದಾಗ ಏನೋ ಹೊಸ ಹುರುಪು, ಹೊಸ ಉತ್ಸಾಹ, ಮನದಲ್ಲೇನೋ ಭೀತಿ, ಹೊಸ ಸ್ನೇಹಿತರು, ಹೊಸ ಶಿಕ್ಷಕರು ಎಲ್ಲ ಒಂದು ಸುಂದರ ಅನುಭವ. ಆ ಮೂರು ವರ್ಷದಲ್ಲಿ ಮಾಡಿದ ಅಧ್ಯಯನ, ತಮಾಷೆಗಳು, ಕೀಟಲೆಗಳಿಗೆನೂ ಲೆಕ್ಕವಿಲ್ಲ. ಎಂತಹ ಸುಂದರ ಬಾಳಿದು, ಸ್ವಲ್ಪ ಪ್ರೌಢರಾದ  ನಮಗೆ ಹಿರಿಯರ ಕೆಲ ವಿಚಾರಗಳು ಸರಿಹೊಂದುತ್ತಿರಲಿಲ್ಲ, ನಾವ್ಯಾಗ ದೊಡ್ದವರಾಗುತ್ತೀವೋ ಅನಿಸುತ್ತಿತ್ತು. ಆ ದಿನದ ನೆನಪುಗಳೆಲ್ಲ ಹಚ್ಚ ಹಸಿರಲ್ಲದಿದ್ದರೂ ಮರೆಯದೆ ಹೃದಯದ ಗೂಡಿನಲ್ಲಿ ಉಳಿದ ಎಷ್ಟೋ ಸಂಗತಿಗಳಿದ್ದವು. ಪರಿಚಯವಾದ ಹೊಸ ಮುಖಗಳು, ಮರೆತ ಕೆಲ ಸ್ನೇಹಿತರು, ಗಣಿತದ ಟೀಚರ್, ಎಲ್ಲ ಶಿಕ್ಷಕರ ಅನುಕರಣೆ ಮಾಡುವ ಗೆಳೆಯ, ಚಿಗುರಿದ ಮೀಸೆ, ಮೊದಲ ಬಾರಿಗೆ ಇಷ್ಟಪಟ್ಟ ಹುಡುಗಿ, ಎಲ್ಲರ ಕಣ್ಣು ತಪ್ಪಿಸಿ ಅವಳನ್ನ ನೋಡುತ್ತಿದ್ದ ಕ್ಷಣಗಳು, ಗೆಳೆಯರೆಲ್ಲ ಅವಳ ಹೆಸರು ಹಿಡಿದು ನನ್ನನ್ನ ಅಣುಕಿಸುತ್ತಿದ್ದದ್ದು, ಎಲ್ಲರೆದುರಿಗೆ ಆದ ಕಪಾಳ ಮೋಕ್ಷ, ಗೋಲಿ ಚಿನ್ನಿದಾಂಡು ಬಿಟ್ಟು ಕ್ರಿಕೆಟ್ ಫೂಟ್ಬಾಲ್ ಆಡಿದ್ದು, ಗೆಳೆಯನ ಜೊತೆ ಮಾಡಿದ ಫೈಟಿಂಗ್, ಗೆಳತಿಯ ಮುಗುಳ್ನಗು, ಆಹಾ ಇಂತಹ ಅದೆಷ್ಟೋ ಕ್ಷಣಗಳು ಮರೆಯದೆ ಮನಸ್ಸಿನ ಪುಟದಲ್ಲಿ ಸುವರ್ಣ ಅಕ್ಷರದಲ್ಲಿ ಕೊರದಂತೆ ಉಳಿದುಬಿಟ್ಟಿವೆ. ಸ್ನೇಹ ಸಮ್ಮೇಳನದಲ್ಲಿ ಆಡಿದ ನಾಟಕ, ಆಶುಭಾಷಣ ಸ್ಪರ್ಧೆಯಲ್ಲಿ ವಿಷಯ ತಿಳಿಯದೆ ಪೆಚ್ಚು ಮೊರೆ ಹಾಕಿ ಎಲ್ಲರ ನಗೆಪಾಟಲೆಯಾಗಿದ್ದು, ಇದೆಲ್ಲದರ ನಡುವೆ ಮನೆಯಲ್ಲಿ ಅಪ್ಪನ ಜೊತೆ ಮಾಡಿದ ಜಗಳ, ಸೆಕ್ಸ್ ಪುಸ್ತಕ ಓದುವಾಗ ಸಿಕ್ಕು ಒದೆಸಿಕೊಂಡಿದ್ದು ಎಲ್ಲವೂ ಜೀವನದಲ್ಲಿ ಮರೆಯಲಾರದ ಕ್ಷಣಗಳು. ಎಂತಹ ಸುಂದರ ಬದುಕಲ್ಲವೇ ಇದು ಅಂತ ಯೋಚಿಸುತ್ತಿರುವಾಗಲೇ "ಟುಸ್"  ಎಂದು ಕುಕ್ಕರ್ ಸೀಟಿಯಾದಾಗ ಮತ್ತೆ ಸ್ವಪ್ನ ಲೋಕದಿಂದ ಈ ಮಾಯಾ ಲೋಕಕ್ಕೆ ಬಂದಿದ್ದೆ.

ಒಂದೆರಡು ನಿಮಿಷ ಗ್ಯಾಸ್ ಸ್ಟವ್ ಎದುರಿಗೆ ನಿಂತು ಮೂರು ಸೀಟಿಯಾದ ಮೇಲೆ ಗ್ಯಾಸ್ ಬಂದ್ಮಾಡಿ ಅತ್ತಿತ್ತ ನಲಿದಾಡುತ್ತಿದ್ದ ಮನಸ್ಸನ್ನ ಬಿಗಿ ಹಿಡಿದು ಹರಡಿದ ಮನೆಯನ್ನೆಲ್ಲ ಸ್ವಲ್ಪ ಸ್ವಚ್ಛಗೊಳಿಸುವುದರೊಳಗೆ ಗಂಟೆ ಎರಡಾಗಿತ್ತು. ಹೊಟ್ಟೆಯಲ್ಲಿ ಗುಡು ಗುಡು ಶಬ್ಧವಾಗತೊಡಗಿತ್ತು.ಉಪ್ಪು ಹಾಕಲು ಮರೆತಿದ್ದ ಮಸಾಲೆ ಭಾತಿಗೆ ಮೇಲಿಂದ ಉಪ್ಪು ಉದುರಿಸಿ ಸ್ವಲ್ಪ ತುಪ್ಪ ಹಾಕಿ ರುಚಿಸದಿದ್ದರೂ ಹಾಗೋ ಹೀಗೋ ತಿಂದು ಮುಗಿಸಿದೆ. ಯಾಕೋ ಕಣ್ಣು ಎಳೆಯತೊಡಗಿತು, ಕನಸಿನ ಲೋಕದಲ್ಲಿ ವಿಹರಿಸುತ್ತಿದ್ದ ಮನಸ್ಸಿಗೆ ವಿಶ್ರಾಂತಿ ಬೇಕೆನಿಸಿತು, ರೂಮಿನಲ್ಲಿದ್ದ ಅದೇ ಹಾಸಿಗೆಯ ಮೆಲೋರಗಿದೆ. ಮಲಗುತ್ತಿದ್ದಂತೆಯೇ ನಿದ್ರಾದೇವಿ ಪ್ರಸನ್ನಳಾಗಿಯೇ ಬಿಟ್ಟಳು, ಎದ್ದದ್ದು ದಿನವೀಡೀ ಮಲಗಿದ್ದ ಫೋನ್ ರಿಂಗಾದಾಗ. ಕಂಪನಿ ಕಾಲ್ ಸಿಟ್ಟಿನಿಂದ ಕಟ್ ಮಾಡಿ ಟೈಮ್ ನೋಡಿದಾಗ ನಾಲ್ಕಾಗಿತ್ತು. ಮೊಬೈಲ್ ಬದಿಗೆಸೆದು ಹಾಸಿಗೆ ಮಡಿಚಿಟ್ಟು ಸ್ವಲ್ಪ ಫ್ರೆಶ್ ಆಗಿ ಒಂದು ಕಪ್ ಕಾಫಿ ಮಾಡಿಕೊಂಡು ಹಾಲ್ ನಲ್ಲಿದ್ದ ಕುರ್ಚಿಯ ಮೇಲೆ ಬಂದು ಕುಳಿತೆ. ಅರ್ಧದಲ್ಲೇ ಉಳಿದಿದ್ದ ನೆನಪುಗಳ ಸರಮಾಲೆ ಮತ್ತೆ ಬಿಚ್ಚತೊಡಗಿತು. ಹೈ ಸ್ಕೂಲಿನ ಈ ಮೂರು ವರ್ಷದ ಅನುಭವಗಳ ಮಜವೇ ಬೇರೆ. ಅಂತೂ ಇಂತೂ ಎಲ್ಲ ಗೆಳೆಯ ಗೆಳತಿಯರಿಂದ ಬೀಳ್ಕೊಟ್ಟು ಕಾಲೇಜ್ ಸೇರಾಯಿತು. ಹೈ ಸ್ಕೂಲ್ ಬಿಟ್ಟು ಕಾಲೇಜಿಗೆ ಸೇರಿದಾಗ ಮತ್ತೊಂದು ಹೊಸ ಅನುಭವ ಮನೆ ಬಿಟ್ಟು ದೂರ ಬಂದಿದ್ದು, ಗೆಳೆಯರ ಜೊತೆ ರೂಂ ಶೇರ್ ಮಾಡಿದ್ದು, ಹೊಸ ಹೊಸ ಪರಿಚಯಗಳು, ರಾತ್ರಿ ಮಲಗುವುದು ಒಂಬತ್ತರ ಬದಲಾಗಿ ಹನ್ನೊಂದಾಗಿದ್ದು, ಕೈಯ್ಯಲ್ಲೊಂದು ಮೊಬೈಲ್, ಹುಡುಗಿಯರೆದುರಿಗೆ ಮಾಡುತ್ತಿದ ಸ್ಟೈಲ್, ಕ್ಲಾಸಿಗೆ ಕಳ್ಳ ಬಿದ್ದು ಸಿನೆಮಾ ನೋಡಿದ್ದು, ಮೊದಲ ಬಾರಿಗೆ ಮಾಡಿದ ಪ್ರಪೋಸ್, ಗೆಳೆಯನ ಜೊತೆಗೂಡಿ ಎಳೆದ ದಂ, ಸೆಮಿಸ್ಟರ್ ಅಲ್ಲಿ ಫೈಲ್ ಆಗಿದ್ದು, ಮಾಡಿದ ಕೆಟ್ಟ ಕೆಲಸಗಳಿಗೆ ಮನೆಯಲ್ಲಿ ಉಗಿಸಿಕೊಂಡಿದ್ದು ಒಂದೇ ಎರಡೇ? ಒಟ್ಟಿನಲ್ಲಿ ಕಾಲೇಜಿನಲ್ಲಿ ಮಜಾ ಮಾಡಿದ ದಿನಗಳೂ ಕೂಡ ಮರೆಯದೆ ಹಾಗೆ ಉಳಿದಿವೆ. ಗೆಳೆಯರ ಜೊತೆ ತಾಸಂತಾಸು ಹರಟಿದ್ದು , ಟ್ರೆಕಿಂಗ್, ಬೈಕ್ ರೈಡಿಂಗ್ ಹೀಗೆ ಖುಷಿಯಾಗಿ ಕಳೆದ ದಿನಗಳೆಷ್ಟೋ? ನೀಲಿ ಬಾನಲಿ ತೇಲಾಡುವ ಸ್ವಚ್ಚಂದ ಹಕ್ಕಿಯಂತ ಜೀವನದ ಹದಿನೆಂಟು ವರ್ಷಗಳು ಹೇಗೆ ಕಳೆದವೋ?

ಕಾಲೇಜು ದಿನಗಳ ಕೊನೆಯಲ್ಲಿಯೇ ಅಪ್ಪ ಅಮ್ಮ ಇಹ ಲೋಕ ತ್ಯಜಿಸಿದ್ದರು, ನನ್ನ ಜೀವನದಲ್ಲಿ ಇದೊಂದು ದೊಡ್ಡ ತಿರುವಾಗಿತ್ತು.ಜೀವನದ ಜವಾಬ್ದಾರಿಗಳು ತಿಳಿಯತೊಡಗಿದವು. ಅಪ್ಪ ಮಾಡಿಟ್ಟ ಸ್ವಲ್ಪ ಹಣವನ್ನ ಎತ್ತಿಕೊಂಡು ಪಯಣ ಬೆಳೆಸಿದ್ದು ಮಾಯಾನಗರಿ ಬೆಂಗಳೂರಿನ ಕಡೆಗೆ. ಕೆಲವು ವರ್ಷಗಳಿಂದ ನನಗೂ ಬೆಂಗಳೂರಿನ ಹುಚ್ಚು ಹಿಡಿದಿತ್ತು, ಆದರೆ ಈ ಮಾಯನಗರದ ನದಿಯ ಸುಳಿಯಲ್ಲಿ ಸಿಕ್ಕಾಗ ಅತ್ತ ಸಾಯಲೂ ಆಗದೆ ಇತ್ತ ನೀರಿನಿಂದ ಹೊರಬರಲೂ ಆಗದೆ ಅಲ್ಲೇ ತೇಲಾಡುವಂತಾಗಿತ್ತು ಜೀವನ. ಒಮ್ಮೆಲೇ ಫೋನ್ ರಿಂಗಾದಾಗ ಎಚ್ಚೆತ್ತು ನೋಡಿದರೆ ಗೆಳೆಯನ ಫೋನ್, ಇನ್ನು ಹತ್ತು ನಿಮಿಷದಲ್ಲಿ ಅಲ್ಲಿರುತ್ತೇನೆ ಇಬ್ಬರೂ ಹೊರಗಡೆ ಹೋಗಿ ಸ್ವಲ್ಪ ಸುತ್ತಾಡಿ ಅಲ್ಲೇ ಎಲ್ಲಾದರೂ ಊಟ ಮಾಡಿ ಬರೋಣ ನಂಗೆ ಫುಲ್ ಬೋರಾಗಿದೆ ಅಂತ ನನ್ನುತ್ತರಕ್ಕೂ ಕಾಯದೆ ಫೋನ್ ಕಟ್ ಮಾಡಿದ್ದ. ಎದ್ದು ಕಾಫಿ ಕಪ್ಪನ್ನ ಮೊರಿಯಲ್ಲಿಟ್ಟು ಮುಖ ತೊಳೆದು ಫ್ರೆಶ್ ಆಗಿ ಪ್ಯಾಂಟ್ ಶರ್ಟ್ ಏರಿಸಿ ರೆಡಿಯಾಗುವುದರೊಳಗೆ ಗೆಳೆಯ ಬಂದು ಬಾಗಿಲು ತಟ್ಟಿದ್ದ, ಒಳಗೂ ಬರದೆ ನಡೆ ಬೇಗ ಎಂದು ಹೊರಟೇಬಿಟ್ಟ. ಬಾಗಿಲು ಭದ್ರಪಡಿಸಿ ಅವನ ಹೆಜ್ಜೆಗೆ ಹೆಜ್ಜೆ ಸೇರಿಸಿದೆ. ಯಮಹಾ ಬೈಕಿಗೆ ಜೋರಾಗಿ ಒದ್ದು ಸ್ಟಾರ್ಟ್ ಮಾಡಿ ಕೂತ್ಕೋ ಅಂದ, ಒಲ್ಲದ ಮನಸ್ಸಿನಿಂದ ಅವನ ಜೊತೆ ಮಾಯಾನಗರಿಗೆ ಪ್ರದಕ್ಷಿಣೆ ಹಾಕಲು ಹೊರಟಿದ್ದೆ.ಗಾಡಿ ಚಲಿಸುತ್ತಿತ್ತು, ಸುತ್ತಲೂ ಬುಸ್ ಬುಸ್ ಎಂದು ಹೊಗೆ ಕಾರುವ ವಾಹನಗಳು, ಹಾರ್ನ್ ಶಬ್ಧಗಳು. ಸಾವಿರಾರು ಚಿತ್ರ ವಿಚಿತ್ರ ಶಬ್ಧಗಳೆಲ್ಲ ಒಮ್ಮೆಲೇ ಕಿವಿಯ ಮೇಲೆ ಅಪ್ಪಳಿಸಿದಾಗ ತಲೆ ಚಿಟ್ಟು ಹಿಡಿದಂತಾಯಿತು. ಹಳ್ಳಿಯ ಬ್ಲಾಕ್ & ವೈಟ್ ಜೀವನದಿಂದ ಸಿಟಿಯ ಸಿಟಿಯ ಕಲರಫುಲ್ ಜೀವನಕ್ಕೆ ನಾವು ಹೇಗೆ ಒಗ್ಗಿ ಹೋಗಿದ್ದೇವೆ ಅನಿಸತೊಡಗಿತು. ‘ಓಲ್ಡ್ ಇಸ್ ಗೋಲ್ಡ್’ ಎನ್ನುವುದು ತಿಳಿದಿದ್ದರೂ ನಮಗೆ ಕಲರಫುಲ್  ಜೀವನವೇ ಬೇಕೆಂದು ಸಿಟಿಗೆ ಬಂದಾಗ ಒಮ್ಮೆಲೇ ಸಾವಿರಾರು ಬಣ್ಣಗಳು ನಮ್ಮ ಕಣ್ಕುಕ್ಕಿದಾಗ ಕಣ್ಕತ್ತಲೆ ಬಂದಿದ್ದಂತೂ ನಿಜ. ಆದರೆ ಇದಲ್ಲಲ್ಲದೆ ಬೇರೆ ಆಯ್ಕೆಗಳೇ ಇಲ್ಲದಾಗಿದೆ ನಮ್ಮಲ್ಲಿ. ಚಂಚಲ ಚಿತ್ತ  ಮತ್ತೆ ನನ್ನಿಂದ ದೂರವಾಗಿತ್ತು.

ದಾಂಡೇಲಿಯಲ್ಲಿ ಕಾಲೇಜು ಓದಿದ ನನಗೆ ಬೆಂಗಳೂರಿನ ಗೋಲ್ ಮಾಲ್ ಅರಿವಾಗಿದ್ದು ಬೆಂಗಳೂರಿಗೆ ಬಂದಾಗಲೇ. ಮೊದಲ ಬಾರಿ ಬೆಂಗಳೂರಿಗೆ ಬಂದಾಗ ಮನದಲ್ಲಿ ಏನೋ ಒಂಥರಾ ಸಂತಸ, ದುಗುಡ, ಅಂಜಿಕೆ ಏನೆಲ್ಲಾ ಇತ್ತು, ಆದರೆ ಈಗ ಬೆಂಗಳೂರೆಂದರೆ ತಿರಸ್ಕಾರ ಭಾವನೆ ಬಿಟ್ಟರೆ ಬೇರೇನಿಲ್ಲ. ಇವೆಲ್ಲ ನಾವು ಕಟ್ಟಿಕೊಂಡು ಬಂದ ಕಟ್ಟುಪಾಡುಗಳೇ ಹೊರತು ಬೇರೇನಲ್ಲ. ಕೆಲಸಕ್ಕಾಗಿ ಒಂದು ವರ್ಷವಿಡೀ ಬೆಂಗಳೂರು ಸುತ್ತಾಡಿ, ಸಾಹೇಬರಿಂದ ಹಿಡಿದು ಜವಾನನ ವರೆಗೂ ಸಲಾಮು ಹೊಡೆದು, ಅವರಿವರ ಕೈಕಾಲು ಹಿಡಿದು, ಸಾವಿರಾರು ಇಂಟರ್ವ್ಯೂಗಳನ್ನ ಎದುರಿಸುವುದರೊಳಗೆ ಬೆಂಗಳೂರು ಚಿರಪರಿಚಿತವಾಗಿತ್ತು. ಅಂತೂ ಇಂತೂ ಕಷ್ಟ ಪಟ್ಟು ಸೇರಿದ ಕೆಲಸಕ್ಕೆ ಐದು ಇಂದಿಗೆ ವರ್ಷಗಳು ತುಂಬಿವೆ. ಈ ಐದು ವರ್ಷದಲ್ಲಿ ಆರು ಬಾರಿ ಸಂಬಳ ಹೆಚ್ಚಳ, ಮೂರು ಪ್ರಮೋಶನ್, ಹೆಚ್ಚಿದ ಕೆಲಸದ ಒತ್ತಡ ಬಿಟ್ಟರೆ ಮತ್ತೇನೂ ಬದಲಾಗಲಿಲ್ಲ. ದಿನವೂ ಒಂದೇ ಯಾಂತ್ರಿಕ ಬದುಕು. ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ಕೊಲೆ, ಸುಲಿಗೆ, ಅತ್ಯಾಚಾರ ಭ್ರಷ್ಟಾಚಾರ ಹೆಚ್ಚಾಗುತ್ತಿದ್ದವೇ ಹೊರತು ಏಳಿಗೆಯ ಯಾವುದೇ ಸುಳಿವಿರಲಿಲ್ಲ. ಇವೆಲ್ಲದರ ಜೊತೆ ನಾವು ಹೇಗೆ ಹೊಂದಿಕೊಂಡು ಹೋಗುತ್ತಿದ್ದೇವೆ ಅಲ್ಲವೇ? ಹೊಂದಿಕೊಳ್ಳುವುದು ಬಿಟ್ಟರೆ ಬೇರೆ ಯಾವುದೇ ಪರ್ಯಾಯಗಳೇ ಇಲ್ಲವೆಂಬುದು ಕೂಡ ಅಷ್ಟೇ ಸತ್ಯ. ಈ ಕಚಡಾ, ತಲೆ ಹಿಡುಕ ಜಗತ್ತಿನಲ್ಲಿ ಕೇಳಿದರೂ ಕೇಳದಂತೆಯೇ, ಗೊತ್ತಿದ್ದರೂ ಗೊತ್ತಿಲ್ಲದಂತೆಯೇ ಕಣ್ಣೆದುರಿಗೆ ನಡೆಯುವ ಅತ್ಯಾಚಾರ ಅನಾಚಾರಗಳನ್ನ ಸುಮ್ಮನೆ ಕೈಕಟ್ಟಿ ನೋಡಿ ಮುಂದೆ ಹೋಗುತ್ತಿದ್ದೆವೆಯೇ ಹೊರತು ನಮ್ಮಿಂದ ಬೇರೇನೂ ಮಾಡಲು ಸಾಧ್ಯವಾಗುತ್ತಿಲ್ಲ. ಯಾಕೆ ಹೀಗೆ? ಏನೀ ನಾಯಿ ಬಾಳು? ಗದರಿಸಿದರೆ ಬಾಲ ಮುದುರಿಕೊಂಡು ಹೋಗುತ್ತಿದ್ದೇವೆಯೇ ಹೊರತು ಕಚ್ಚುವುದು ಹೋಗಲಿ ಬೊಗಳುವುದನ್ನ ಕೂಡ ಮರೆತಿದ್ದೇವೆ ನಾವು. ಎಂತಹ ಕೀಳು ಜೀವನ ನಮ್ಮದು. ಇಲ್ಲಿಯ ಸಿಂಗಾರದ ಜಗಮಗಿಸುವ ಕ್ರೂರ ಮಾಯಾವಿಯ ದಾಸರಾಗಿದ್ದೇವೆ ನಾವೆಲ್ಲಾ, ನಮಗೆ ತಿಳಿಯದೆಯೇ ಈ ಮಾಯಾ ನಗರಿಯ ವೈಭೊಗಕ್ಕೆ ಒಗ್ಗಿ ಹೋಗಿದ್ದೇವೆ . ಈ ಹೊಲಸು ನಾಯಿ ಬಾಳಿಗಿಂತ ಸಾಯುವುದೇ ಮೇಲು ಎಂದರೂ ಸಾಯಲು ಬಿಡುತ್ತಿಲ್ಲ ಈ ಬಣ್ಣದ ದುನಿಯಾ. ಜಗತ್ತು ಬದಲಾದಂತೆ ನಾವೂ ಬದಲಾಗುತ್ತಿದ್ದೇವೆ. ಕೆಲವೇ ಕ್ಷಣದಲ್ಲಿ ಇಂಟರ್ ನೆಟ್ ಅಲ್ಲಿ ಜಗವನ್ನೇ ಜಾಲಾಡುವ ನಮಗೆ ಪಕ್ಕದ ಮನೆಯವರ ಗುರುತೇ ಇರುವುದಿಲ್ಲ. ಕಳೆದ ಕೆಲ ದಿನಗಳಲ್ಲಿ ಫೇಸ್ ಬುಕ್ ,ಟ್ವಿಟ್ಟರ್ ನಂತಹ ಅಂತರ್ಜಾಲ ಪುಟದಲ್ಲಿ ಕೆಲ ಬಾಲ್ಯದ ಸ್ನೇಹಿತರು ಸಿಕ್ಕಾಗ ನನ್ನ ಮನ ಮತ್ತೆ ಹಳೆಯದ್ದನ್ನೆಲ್ಲ ಮತ್ತೆ ನೆನಪಿಸಿಕೊಡುತ್ತಿತ್ತು . ಈ ಇಪ್ಪತ್ತೈದು ವರ್ಷಗಳ ನನ್ನ ಜೀವನದಲ್ಲಿ ಅದೆಷ್ಟು ವ್ಯಕ್ತಿಗಳು ಬಂದರೋ ಅದೆಷ್ಟು ಜನ ದೂರವಾದರೋ ತಿಳಿಯದು. ಚಿರಪರಿಚಿತರು ದೂರವಾದರು, ಗುರುತಿರದಿಲ್ಲದವರು ತುಂಬಾ ಸನಿಹವಾದರು.ಪ್ರಿತಿಗಾಗಿ ಗೋಗರೆದೆ ಸ್ನೇಹಕ್ಕಾಗಿ ಬೇಡಿದೆ, ಎಲ್ಲವೂ ವ್ಯರ್ಥ ವ್ಯರ್ಥ. ಈ ನಡುವೆ ಎಷ್ಟೋ ಜನ ತೆಗಳಿದರು, ಉಗಿದರು, ಮತ್ತೆ ಕೆಲವರು ಹೊಗಳಿ ಅಟ್ಟಕ್ಕೇರಿಸಿದರು. ಇಷ್ಟೆಲ್ಲಾ ಆದರೂ ನಾನು ಎಲ್ಲಿದ್ದೇನೋ ಅಲ್ಲಿಯೇ ಇದ್ದೇನೆ, ಒಂದೇ ಯಾಂತ್ರಿಕ ಬದುಕು.

“ಅಲ್ನೋಡೋ ಮಗಾ.. ಫಿಗರು ಏನು ಸೂಪರಾಗಿದೆ..” ಅಂತ ಗೆಳೆಯ ಕೂಗಿದಾಗ ಮತ್ತೆ ಈ ಜಗಕ್ಕೆ ಬಂದಿತ್ತು ನನ್ನೀ ಚಂಚಲ ಚಿತ್ತ. ಕೋರಮಂಗಲದ ರೋಡಿನಲ್ಲಿ ಸಂಜೆಯ ಹೊತ್ತಿಗೆ ಒಳ್ಳೆ ಜೀನ್ಸ್ ಪ್ಯಾಂಟ್, ಟೈಟ್ ಟಿ ಶರ್ಟ್ ಹಾಕಿದ್ದ ಲಲನೆಯರನ್ನ ನೋಡಿದಾಗ ಬೆಳಿಗ್ಗೆಯಿಂದ ಗಂಟಾಗಿದ್ದ ಮುಖದಲ್ಲಿ ಸ್ಮಿತಹಾಸ್ಯ ಮೂಡಿತ್ತು. ಏನೀ ಚಂಚಲ ಮನಸ್ಸು ಒಮ್ಮೆಲೇ ತನ್ನ ರೂಪವನ್ನೇ ಬದಲಾಯಿಸುತ್ತೆ? ದಿನವಿಡೀ ಹಳೆಯ ನೆನಪುಗಳ ಹಿಂದೆ ಸುತ್ತುತ್ತಿದ್ದ ಈ ಚಿತ್ತ ಒಮ್ಮೆಲೇ ಬದಲಾದದ್ದಾರೂ ಹೇಗೆ? ಎಲ್ಲ ಮಾಯನಗರಿಯ ಮಹಿಮೆ. ಎಷ್ಟೇ ಸುಖ ದುಃಖಗಳಿದ್ದರೂ ಬೆಂಗಳೂರಿನ ಗಲ್ಲಿ ಗಲ್ಲಿ ತಿರುಗಿ ಬಾರಲ್ಲಿ ಕೂತು ಒಂದೆರಡು ಪೆಗ್ ಹಾಕಿದರೆ ಎಲ್ಲ ಮಾಯ. ಬೆಂಗಳೂರಿಗೆ ಬಂದು ಈ ಐದು ವರ್ಷದಲ್ಲಿ ಅದೆಷ್ಟು ಹುಡುಗಿಯರು ಕಣ್ಣೆದುರಿಗೆ ಹೋದರೋ? ಪ್ರತಿಬಾರಿಯೂ ಈ ಮನ ಅರಳುತ್ತೆ. ಒಂದು ಹುಡುಗಿ ಹಿಂದೆ ಬಿದ್ದು ಸ್ವಲ್ಪ ದಿನ ಜೊತೆ ತಿರುಗಾಡಿ ಅವಳು ಕೈಕೊಟ್ಟು ಹೋದಾಗ ವಾರವಿಡೀ ಗಡ್ಡ ಬಿಟ್ಟುಕೊಂಡು,ವಿರಹ ಗೀತೆ ಹಾಡುತ್ತ, ಬಾರಲ್ಲಿ ಕೂತು ಎರಡು ಪೆಗ್ ಹಾಕಿ, ಮರುದಿನ ಆಫಿಸಿಗೆ ಲೇಟಾಗಿ ಹೋಗಿ ಉಗಿಸಿಕೊಂಡು, ಇದೇ ಚಿಂತೆಯಲ್ಲಿ ಒಂದೆರಡು ವಾರ ಕಳೆದು ಮತ್ಯಾವುದಾದರೂ ಹುಡುಗಿ ನೋಡಿ ಸ್ಮೈಲ್ ಕೊಟ್ಟರೆ ಮುಗಿಯಿತು. ಹಳೆಯದನ್ನೆಲ್ಲ ಮರೆತು ಈ ಮನ ಅವಳ ಹಿಂದೆಯೇ ಸುತ್ತತೊಡಗುತ್ತೆ. ಅವಳೇನಾದರೂ ಕೈ ಕುಲುಕಿದರಂತೂ ಮುಗಿಯಿತು ಮತ್ತೊಂದು ಪ್ರೇಮಗೀತೆ ಶುರುವಾದಂತೆ. ಅಂತೂ ಇಂತೂ ದಿನವಿಡೀ ಹಳೆಯ ನೆನಪುಗಳನ್ನೆಲ್ಲ ಮೆಲುಕುಹಾಕಿ ನಾಳಿನ ಬಾಳಿಗೆ ಹೊಸ ಮುನ್ನುಡಿಯನ್ನ ಬರೆದ ಚಿತ್ತ ಮತ್ತೆ ತನ್ನ ದಾರಿಗೆ ಬಂದಿದೆ, ಇದಕ್ಕೆಲ್ಲ ಕಾರಣ ಹುಡುಕಿದರೆ ಎಲ್ಲ ಕತ್ತಲೆ ಕತ್ತಲೆ. ಮತ್ತೆ ನಾಳೆಯಿಂದ ಕೆಲಸ-ಮನೆ, ಕೆಲಸ-ಮನೆ ಹೀಗೆ ಒಂದು ವಾರದ ಗಡಿಬಿಡಿಯಲ್ಲಿ ಈ ಮನಸ್ಸಿಗೆ ಬೇರೇನೂ ಕೆಲಸವಿಲ್ಲ. ಈ ಚಿತ್ತ ಇನ್ನೊಂದು ವಾರ ನನ್ನ ಮುಷ್ಟಿಯಲ್ಲೇ. ಗೆಳೆಯನ ಜೊತೆ ತಿರುಗಾಡಿ ಸ್ವಲ್ಪ ಹೊತ್ತು ಹರಟೆ ಹೊಡೆದು ಉಂಡು ಮನೆಗೆ ಬಂದಾಗ ರಾತ್ರಿಯ ಹನ್ನೊಂದು.

ಈ ಹೈಪರ್ ಟೆನ್ಶನ್ ಜಗದಲ್ಲಿ ಮನವನ್ನ ತಂಪಾಗಿಸಿ, ಬದುಕಲು ಹೊಸ ಚೈತನ್ಯವನ್ನು ನೀಡುವ ಹೊಸ ಕನಸಿಗಾಗಿ ಕಾಯುತ್ತ ಹಾಸಿಗೆಯ ಮೇಲೆ ಒರಗಿದ ನನಗೆ ನಿದ್ರಾದೇವಿ ಯಾವಾಗ ಪ್ರಸನ್ನಳಾದಳೋ ತಿಳಿಯಲೇ ಇಲ್ಲ…



* ಮಾರ್ಚ್ ಮೊದಲ ವಾರದ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.

ಲಿಂಕ್:  http://www.panjumagazine.com/?p=1183