ಪತ್ರ:

ಕಳೆದ ಕೆಲ ವರ್ಷಗಳಿಂದ ನಾನಾಯಿತು ನನ್ನ ಕೆಲಸವಾಯಿತು. ಇನ್ನೇನು ಕೆಲಸ ಕೆಲ ವರ್ಷದ್ದಷ್ಟೇ..  ಈಗಂತೂ ಟಿವಿ, ಕಂಪ್ಯೂಟರ್ ಅಂತ ಸಮಯ ಕಳೆದದ್ದೂ ತಿಳಿಯುವುದಿಲ್ಲ. ಇಂದಿನ ಆಧುನಿಕ ಯುಗದಲ್ಲಿ ಪತ್ರ ವ್ಯವಹಾರ ಮುಗಿದೇ ಹೋಗಿದೆ. ಆದರೆ ತುಂಬಾ ದಿನದ ಮೇಲೆ ಮನೆಗೊಂದು ಪತ್ರ ಬಂದಿತ್ತು...

ಹಲ್ಲೋ ಸರ್...
ನಾನು ಶರತ್ ಅಂತ. ಜರ್ನಲಿಸಮ್ ಮಾಡ್ತಾ ಇದ್ದೇನೆ. ಕೆಲ ಹಳೆಯ ಬರಹಗಾರರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇನೆ. ಅದರಲ್ಲಿ ನಿಮ್ಮದೂ ಹೆಸರಿದೆ. ಸ್ವಲ್ಪ ಮಾಹಿತಿ ಸಂಗ್ರಹಿಸಿದಾಗ ನಿಮ್ಮ ಬಗ್ಗೆ ಕೆಲ ವಿಷಯ ತಿಳಿಯಿತು. ನಿಮ್ಮ ಕೆಲ ಬರಹಗಳನ್ನೂ ಓದಿದೆ. ಆದರೆ ಕಳೆದ ತುಂಬಾ ವರ್ಷಗಳಿಂದ ನೀವು ಏನನ್ನೂ ಬರೆಯುತ್ತಿಲ್ಲ ಯಾಕೇ? ದಯವಿಟ್ಟು ಉತ್ತರಿಸಿ, ನನಗೆ ತುಂಬಾ ಸಹಕಾರಿಯಾಗುತ್ತೆ ನನ್ನ ಅಭ್ಯಾಸಕ್ಕೆ...
-ಶರತ್

ಕೆಳಗೆ ಆತನ ವಿಳಾಸವಿತ್ತು. ನನಗೆ ಇದು ಹೊಸತಲ್ಲ.. ಕಳೆದ ಕೆಲ ವರ್ಷಗಳಲ್ಲಿ ಹೀಗೆ ತುಂಬಾ ಪತ್ರಗಳು ಬಂದಿದ್ದವು. ಯಾವುದಕ್ಕೂ ನಾನು ಉತ್ತರಿಸಲೂ ಇಲ್ಲ. ಆದರೇ ಈ ಹುಡುಗ ಮಾತ್ರ ಬಿಡುವಂತೆ ಕಾಣಲಿಲ್ಲ, ತಿಂಗಳೊಳಗೆ ಮೂರು ಪತ್ರಗಳು ಬಂದಿದ್ದವು. ಮೊನ್ನೆ ಬಂದ ಪತ್ರ ನನ್ನ ಹಳೆಯ ದಿನವನ್ನು ನೆನಪಿಸಿತ್ತು. ದಯವಿಟ್ಟು ಒಂದು ಪತ್ರವಾದರೂ ಬರೆಯಿರಿ, ನಿಮ್ಮಿಂದ ಒಂದೇ ಒಂದು ಪತ್ರದ ನಿರೀಕ್ಷೆಯಲ್ಲಿದ್ದೇನೆ ಅನ್ನುವ ಸಾಲುಗಳು ಮನಕ್ಕೆ ಚುಚ್ಚಿದ್ದವು. ಮತ್ತೆ ಪೆನ್ನು ಹಿಡಿದು ಆತನಿಗೊಂದು ಪತ್ರ ಬರೆದೆ, ಈ ಬಾರಿ ಕೈ ನಡುಗಲಿಲ್ಲ. ಯಾಕೋ ಗೊತ್ತಿಲ್ಲ.

ಆಗ ಇಸವಿ೧೯೯೦. ಇಂಟರ್ ನೆಟ್, ಮೊಬೈಲ್ ಅವ್ಯಾವುದೂ ಅಸ್ತಿತ್ವದಲ್ಲಿರಲಿಲ್ಲ. ದೂರಧ್ವನಿ ಅಷ್ಟರ ಮಟ್ಟಿಗೆ ಪ್ರಸಿದ್ಧಿಯಲ್ಲಿರಲಿಲ್ಲ.ಆಗ ನಾನಿನ್ನೂ ಅವಿವಾಹಿತ ಸಂಪದ ಪತ್ರಿಕೆಯಲ್ಲಿ ಅಂಕಣಕಾರನಾಗಿ ಪ್ರಸಿದ್ಧಿ ದೊರೆತಿತ್ತು. ಎರಡು ಪುಸ್ತಕಗಳು ಪ್ರಕಟಣೆಯಾಗಿ ಉತ್ತಮ ಮಾರಾಟ ಕಂಡಿದ್ದವು. ಮೊದಮೊದಲು ಬರವಣಿಗೆ ನನ್ನ ಹವ್ಯಾಸವಾಗಿದ್ದರೂ ಕೆಲ ಬರಹಗಳು ಅನೇಕ ಪತ್ರಿಕೆಗಳಲ್ಲಿ ಪ್ರಕಟಣೆಗೊಂಡು ಕ್ರಮೇಣ ಅಂಕಣಗಳ ರೂಪದಲ್ಲಿ ಮಾರ್ಪಾಡಾಯಿತು.ಅತೀ ಚಿಕ್ಕ ವಯಸ್ಸಿನ ಅಂಕಣಕಾರ ಅನ್ನುವ ಬಿರುದೂ ಬೆನ್ನೆರಿತು. ಉಪಾಸನಾ ಮತ್ತು ಮಾತೆಯ ಮಡಿಲಲ್ಲಿ ಹೀಗೆ ಎರಡು ಪುಸ್ತಕಗಳು ಪ್ರಕಟಣೆಯಾಗಿ, ಮಾತೆಯ ಮಡಿಲಲ್ಲಿ ಕೃತಿಗೆ ಕನ್ನಡ ಸಾಹಿತ್ಯ ಪ್ರಕಾಶನದ ಪ್ರಶಸ್ತಿಯೂ ದೊರೆಯಿತು. ಇನ್ನೇನು ಬೇಕು ಒಬ್ಬ ವ್ಯಕ್ತಿಗೆ.  ವೃತ್ತಿಯಲ್ಲಿ ಇಂಜಿನೀಯರ್, ಬೆಂಗಳೂರಿನಲ್ಲಿ ಮನೆ ಗಾಡಿ, ಸಮಾಜದಲ್ಲಿ ಗೌರವ, ಹೆಚ್ಚಿದ ಬೇಡಿಕೆ, ಉತ್ತಮ ಸಂಪಾದನೆ ಜೋತೆಜೋತೆಗೆ ನನ್ನ ಅಹಂ ಕೂಡ ಬೆಳೆದಿತ್ತು.
ಆಗೆಲ್ಲ ಓದುಗರ ಅಭಿಪ್ರಾಯಗಳು ಪತ್ರಗಳ ಮೂಲಕ ಬರಹಗಾರರನ್ನ ತಲುಪುತ್ತಿತ್ತು. ಹೀಗೆ ಬಂದ ಪತ್ರಗಳನ್ನು ಓದುವುದು, ಕೆಲವಕ್ಕೆ ಉತ್ತರಿಸುವುದು ನನ್ನ ವಾಡಿಕೆಯಾಗಿತ್ತು. ಓಂದು ದಿನ ಹೀಗೆ ಬರೆಯುತ್ತ ಕುಳಿತಾಗ ಕೆಲಸದವ ಒಂದಿಷ್ಟು ಪತ್ರಗಳನ್ನು ನನ್ನ ಮುಂದಿಟ್ಟು ನಡೆದ. ನೋಡಿದರೆ ಸುಮಾರು ಇಪ್ಪತ್ತು ಮೂವತ್ತು ಪತ್ರಗಳಿದ್ದವು. ಇದು ನನಗೆ ಸರ್ವೇಸಾಮಾನ್ಯ.ಪೊಸ್ಟ್ ಕಾರ್ಡ್, ಅಂತರ್ದೇಶೀಯ ಪತ್ರಗಳು ನಿಯತಕಾಲಿಕಗಳು ಹೀಗೆ ನೋಡುತ್ತಿದ್ದಾಗ ನನ್ನ ದೃಷ್ಟಿ ಒಂದು ಪತ್ರದ ಮೇಲೆ ಬಿತ್ತು, ಸ್ಟಾಂಪ್ ನೋಡಿದಾಗ ಅದು ಮೈಸೂರಿನಿಂದ ಬಂದದ್ದು.ಬರೆದದ್ದು ಯಾವುದೋ ಹುಡುಗಿ. ಉಳಿದೆಲ್ಲ ಪತ್ರಗಳನ್ನು ಬದಿಗಿಟ್ಟು ಆ ಪತ್ರ ಓದತೊಡಗಿದೆ.

ಪ್ರಿಯ ವಿನೀತ್ ಕುಮಾರ್,
 ನಿಯಮಿತವಾಗಿ ನಿಮ್ಮ ಅಂಕಣಗಳನ್ನ ಓದುತ್ತಿರುತ್ತೇನೆ, ಮೊನ್ನೆಯಷ್ಟೇ ನಿಮ್ಮ ಉಪಾಸನಾ ಓದಿದೆ, ಓಂದು ಹೋಸ ಪ್ರಯೋಗ, ಮಾಹಿತಿಯ ವಿಸ್ತರಣೆ, ವಿಷಯಗಳ ಮಂಡನೆ ಹೀಗೆ ಪುಸ್ತಕ ತುಂಬಾ ಇಷ್ಟವಾಯಿತು. ನಿಮ್ಮ ಇನ್ನೋಂದು ಪುಸ್ತಕ ಎಲ್ಲೂ ಸಿಗುತ್ತಿಲ್ಲ, ಓಂದು ಪ್ರತಿ ಕಳುಹಿಸಿ ಕೊಡುತ್ತೀರಾ? ಮೊತ್ತವನ್ನು ನಿಮಗೆ ಮನಿ ಆರ್ಡರ್ ಮಾಡಿದ್ದೇನೆ.
   ನನಗೆ ನಿಮ್ಮ ಜೋತೆ ಇನ್ನೂ ಕೆಲ ವಿಶಯಗಳ ಬಗ್ಗೆ ಚರ್ಚೆ ಮಾಡುವುದಿದೆ. ಸಾಹಿತ್ಯ, ವಿಜ್ನಾನ, ಆಧ್ಯಾತ್ಮ ಇವುಗಳ ಬಗ್ಗೆ ತಿಳಿದುಕೊಳ್ಳುವ ಆಸೆಯಿದೆ. ಅನೇಕ ಪ್ರಶ್ನೆಗಳು ನನ್ನ ಮನದಲ್ಲಿವೆ, ನನ್ನ ಪ್ರಶ್ನೆಗಳಿಗೆಲ್ಲ ನಿಮ್ಮಿಂದ ಉತ್ತರ ಸಿಗಬಹುದು ಅನ್ನುವ ಭರವಸೆಯಿದೆ. ಅಂಕಣಕಾರರಲ್ಲದೇ ಮತ್ತೇನು ಮಾಡುತ್ತೀರಿ? ನಿಮ್ಮ ಹವ್ಯಾಸಗಳೇನು? ನೀವು ಮೈಸೂರಿಗೆ ಬರ್ತಾ ಇರ್ತೀರಾ?
   ಈ ಪತ್ರಕ್ಕೆ ಆದಷ್ಟು ಬೇಗ ಉತ್ತರಿಸುತ್ತೀರಿ ಅನ್ನುವ ನಂಬಿಕೆ ಇದೆ. ಜೋತೆಗೆ ನಿಮ್ಮ ಫೋನ್ ನಂಬರ್ ಕೂಡ ಕಳುಹಿಸಿ.
-ಕಲ್ಪನಾ.
ಮರುದಿನ ಆಕೆ ಕಳುಹಿಸಿದ್ದ ಮನಿ ಆರ್ಡರ್ ದೊರೆಯಿತು, ಆಕೆಯ ವಿಳಾಸಕ್ಕೆ ನನ್ನ ಪುಸ್ತಕವನ್ನು ಜೋತೆಗೆ ಕೆಲ ಅಂಕಣಗಳ ಪ್ರತಿಯನ್ನೂ ಕಳುಹಿಸಿದೆ, ಆದರೆ ಯಾಕೋ ಆಕೆಯ ಪತ್ರಕ್ಕೆ ಉತ್ತರಿಸಬೇಕೆಂದು ನನಗೆ ಅನಿಸಲೇ ಇಲ್ಲ.ಎಲ್ಲ ಓದುಗರಂತೆ ಆಕೆಯೂ ಒಬ್ಬಳು ಅನ್ನುವ ಭಾವನೆ ನನ್ನಲ್ಲಿ ಮೂಡಿತ್ತು.
ವಾರದಲ್ಲೇ ಆಕೆಯಿಂದ ಮತ್ತೆ ಪತ್ರ ಬಂದಿತ್ತು
ನಿಮ್ಮ ಪುಸ್ತಕ ದೊರೆಯಿತು, ಓದಿ ಮುಗಿಸಿದೆ. ಕೆಲ ಕ್ಷಣ ನನ್ನನ್ನ ಮೂಕವಾಗಿಸಿತ್ತು ನಿಮ್ಮ ಪುಸ್ತಕ. ಧನ್ಯವಾದಗಳು. ಆದರೆ ನನ್ನ ಮೊದಲ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ, ದಯವಿಟ್ಟು ಉತ್ತರಿಸಿ.

ಅವಳ ಈ ಪತ್ರಕ್ಕೂ ನನ್ನಿಂದ ನಿರುತ್ತರ.
ನಾವು ಯಾವುದಾದರೂ ವ್ಯಕ್ತಿಯ ಬಗ್ಗೆ ಆಸಕ್ತಿ ವಹಿಸದಿದ್ದಲ್ಲಿ ಏನಾಗುತ್ತೋ ಅದೇ ಆಯಿತು. ಕೆಲ ದಿನದಲ್ಲೇ ಆಕೆಯಿಂದ ಕೋಪತಾಪಯುಕ್ತ ಪತ್ರ ನನ್ನ ಕೈ ಸೇರಿತ್ತು.
ಮಿ.ವಿನೀತ್,
ಇದು ನನ್ನ ಮೂರನೇ ಪತ್ರ, ಈ ಮೊದಲು ಎರಡು ಪತ್ರ ಬರೆದಿದ್ದೆ, ಯಾವುದಕ್ಕೊ ನಿಮ್ಮಿಂದ ಸರಿಯಾದ ಉತ್ತರವಿಲ್ಲ. ನಿಮಗೆ ನಿಮ್ಮ ಓದುಗರ ಬಗ್ಗೆ ಗೌರವವಿಲ್ಲ, ಇದು ಓಳ್ಳೆಯ ಬೆಳವಣಿಗೆಯಲ್ಲ. ನನ್ನ ಪ್ರಶ್ನೆಗಳಿಗೆ ಓಂದು ನಾಲ್ಕು ಸಾಲಲ್ಲಾದರೂ ಉತ್ತರಿಸಬೇಕು ಅಂತ ನಿಮಗೇ ಅನಿಸುವುದೇ ಇಲ್ಲವೇ? ನಿಮಗೆ ನಿಮ್ಮ ಓದುಗರ ಬಗ್ಗೆ ಬೆಲೆಯಿಲ್ಲದಿದ್ದರೆ ನನಗೂ ನಿಮ್ಮ ಓದುಗರಾಗಿ ಇರುವುದರಲ್ಲಿ ಯಾವುದೇ ಆಸಕ್ತಿ ಇಲ್ಲ, ನಿಮ್ಮ ಪುಸ್ತಕವನ್ನು ನಿಮಗೇ ಕಳುಹಿಸುತ್ತಿದ್ದೇನೆ.

ಈ ಪತ್ರವನ್ನು ಓದಿ ಒಮ್ಮೆ ಎದೆಯಲ್ಲಿ ಧಸ್ಸೆಂದಿತ್ತು. ಅವಳ ಪ್ರಶ್ನೆಗಳಿಗೆ ಉತ್ತರಿಸದೇ ಇರದಿದ್ದಕ್ಕೆ ನನಗೂ ಸ್ವಲ್ಪ ಬೇಸರವೆನಿಸಿತು. ಎಲ್ಲರಂತೇ ಅವಳನ್ನೂ ಸಾಮಾನ್ಯ ಓದುಗರಂತೆ ವ್ಯವಹರಿಸಿದ್ದಕ್ಕೆ ದುಃಖವಾಯಿತು. ಆದರೆ ನನ್ನ ಈ ವರ್ತನೆಗೆ ಕಾರಣವಿತ್ತು, ಹೀಗೆ ಬರುತ್ತಿದ್ದ ಅದೆಷ್ಟೊ ಪತ್ರಗಳಿಗೆ ನಾನು ಉತ್ತರಿಸುತ್ತಲೇ ಇರಲಿಲ್ಲ, ಅದು ಸಾಧ್ಯವೂ ಇರಲಿಲ್ಲ ನನ್ನಿಂದ. ಪುಸ್ತಕ ಓದಿಯಾದ ಮೇಲೆ ವಾಪಸ್ ಕಳುಹಿಸಿದ್ದಾಳೆ, ಎಷ್ಟು ಸೊಕ್ಕಿರಬೇಡ ಅವಳಿಗೆ... ಹೋಗಲಿ ಎಂದು ನಾನು ಸುಮ್ಮನಾದೆ. ನನ್ನ ಬರಹಗಳಿಗೆ ಅದೆಷ್ಟೋ ಓದುಗರಿದ್ದಾರೆ ಅದರಲ್ಲಿ ಇವಳು ಏನು ಮಹಾ ಅನ್ನುವ ಹಿರಿಮೆ ಮನದಲ್ಲಿ ಮೂಡಿತ್ತು. ಈ ವಿಶಯವನ್ನು ಅಲ್ಲಿಗೇ ಮರೆತು ನನ್ನ ದಿನನಿತ್ಯದ ಕೆಲಸದಲ್ಲಿ ನಾನು ಮಗ್ನನಾಗಿದ್ದೆ.

ನಾನು ಸುಮ್ಮನಾದರೂ ಅವಳು ಸುಮ್ಮನಾಗಲಿಲ್ಲ. ಕೆಲ ದಿನದಲ್ಲಿ ಮತ್ತೆ ಅವಳಿಂದ ಪತ್ರ ಬಂದಿತ್ತು. ಓದಲೋ ಬೇಡವೋ ಅಂತ ಅನುಮಾನಿಸುತ್ತಲೇ ಕೊನೆಗೆ ಓದಿದೆ. ಅವಳು ನನ್ನ ಕ್ಷಮೆ ಕೋರಿದ್ದಳು. ಬೆದರಿಕೆಯ ಪತ್ರಕ್ಕಾದರೂ ಉತ್ತರಿಸುತ್ತೇನೆ ಅನ್ನುವ ಅವಳ ನಿರೀಕ್ಷೆಯೂ ಸುಳ್ಳಾಗಿತ್ತು. ಪತ್ರದ ಕೊನೆಯಲ್ಲಿ ಅವಳ ಕಳಕಳಿಯ ವಿನಂತಿಯಿತ್ತು ದಯವಿಟ್ಟು ಓಂದಾದರೂ ಪತ್ರ ಬರೆಯಿರಿ... ನಿಮ್ಮಿಂದ ಬರುವ ಓಂದಾದರೂ ಪತ್ರ ಓದುವ ಆಸೆಯಿದೆ ನನಗೆ.

ಅವಳು ತುಂಬಾ ಭಾವುಕಳಾಗಿ, ದುಃಖದಿಂದ ಇರುವುದು ನನ್ನ ಅರಿವಿಗೆ ಬಂತು, ಅವಳನ್ನು ಅರಿತು ಸಮಾಧಾನಿಸುವ ಗೆಳೆಯ ಬೇಕಾಗಿತ್ತು ಅವಳಿಗೆ. ಅವಳೊಟ್ಟಿಗೆ ತುಂಬಾ ಕಠೋರವಾಗಿ ವರ್ತಿಸಿದೆ ಅನ್ನುವ ಕೀಳರಿಮೆ ನನ್ನನ್ನು ಕಾಡಿತು. ಅವಳಲ್ಲಿ ಕ್ಷಮೆ ಕೋರುವುದು ಮಹತ್ವವಾಗಿತ್ತು. ಇದರಿಂದ ನಮ್ಮಿಬ್ಬರ ತಲೆಯ ಮೇಲಿನ ಭಾರ ಇಳಿಯುವುದೆಂದು ಅನಿಸತೊಡಗಿತು. ಅವಳ ಮೊದಲ ಪತ್ರವನ್ನೆಲ್ಲ ಮತ್ತೋಮ್ಮೆ ಓದಿದೆ. ಕೊನೆಗೆ ಅವಳಿಗಾಗಿ ಪತ್ರ ಬರೆಯತೊಡಗಿದೆ ಮೇಲ್ಗಡೆ ನನ್ನ ವಿಳಾಸ ಬರೆದೆ. ಈಗ ಶುರು ಮಾಡುವುದು ಎಲ್ಲಿಂದ..? ಗೆಳೆತನ ಮಾಡುವುದು ಅಂತ ನಿರ್ಧರಿಸಿದ ಮೇಲೆ ಆಯಿತು.. ಪ್ರಿಯ ಕಲ್ಪನಾ ಅಂತಲೇ ಶುರು ಮಾಡಿದೆ.

ಪ್ರಿಯ ಕಲ್ಪನಾ
ನಾನು ನಿನ್ನ ಪತ್ರಕ್ಕೆ ಉತ್ತರಿಸಲಿಲ್ಲ, ಅದಕ್ಕಾಗಿ ನಿನ್ನಲ್ಲಿ ಕ್ಷಮೆ ಕೋರುತ್ತೇನೆ. ನಾನು ಉತ್ತರಿಸದೇ ಇರುವುದಕ್ಕೆ ಕೆಲ ಕಾರಣಗಳಿವೆ. ನನಗೆ ಬರುವ ಎಲ್ಲ ಪತ್ರಗಳಿಗೂ ಉತ್ತರಿಸುವಷ್ಟು ಸಮಯ ನನ್ನಲ್ಲಿ ಇಲ್ಲ, ಅಲ್ಲದೇ ಈ ರೀತಿಯ ಪತ್ರವ್ಯವಹಾರದಿಂದ ಗೆಳೆತನ ಶುರುವಾಗಿ ಮುಂದೇ ಅದೆಲ್ಲೋ ಹೋಗುವುದು ನನಗೆ ಇಷ್ಟವಿಲ್ಲ. ಈ ರೀತಿಯ ಯಾವುದೇ ಬಂದನದಲ್ಲಿ ಸಿಲುಕಿಕೊಳ್ಳುವುದು ನನಗೆ ಇಷ್ಟವಿಲ್ಲ. ಹಾಗಾಗಿ ನಾನು ಯಾವುದೇ ಹುಡುಗಿಯ ಪತ್ರಕ್ಕೆ ಉತ್ತರಿಸುವುದೇ ಇಲ್ಲ. ಆದರೆ ನಿನ್ನ ವಿಷಯದಲ್ಲಿ ನಾನು ತಪ್ಪಿದ್ದೇನೆ ಅಂತ ಅನಿಸತೊಡಗಿತು ಅದಕ್ಕೆ ನಿನಗೆ ಪತ್ರ ಬರೆದಿದ್ದೇನೆ.
ಅದೆಕೋ ನಿನ್ನ ಜೋತೆ ಗೆಳೆತನ ಮಾಡಬೇಕೆಂದು ಅನಿಸಿತು, ಬರೀ ಗೆಳೆತನ. ಅದೂ ಪತ್ರದ ಮೂಲಕ ಮಾತ್ರ. ನಾವು ಈ ಜನ್ಮದಲ್ಲಿ ಒಬ್ಬರಿಗೊಬ್ಬರು ಭೇಟಿ ಮಾಡುವ ಹಾಗಿಲ್ಲ.. ಅದೆಷ್ಟೇ ಅನಿಸಿದರೂ. ಅದು ಕೇವಲ ಸಮಯ ವ್ಯರ್ಥವೇ ವಿನಃ ಬೇರೆನಿಲ್ಲ. ಆದಷ್ಟು ನಾವು ವಿಶಯಕ್ಕನುಗುಣವಾಗೇ ಪತ್ರದಲ್ಲಿ ವ್ಯವಹರಿಸೋಣ, ಸುಮ್ಮನೇ ತಮಾಷೆ, ಚೇಷ್ಟೆ ಇವೆಲ್ಲ ಬೇಡ. ನಿನ್ನ ಸುಖ ದುಃಖಗಳನ್ನ ನನ್ನಲ್ಲಿ ಹೇಳಿಕೊಳ್ಳಬಹುದು.
ಇನ್ನು ನೀನು ಕೇಳಿದಂತೆ ನೀವೇನು ಮಾಡುತ್ತೀರಿ, ಹವ್ಯಾಸಗಳೇನು, ಮೈಸೂರಿಗೆ ಬರುತ್ತೀರಾ?? ಹೀಗೆ
ನಾನು ವೃತ್ತಿಯಲ್ಲಿ ಇಂಜಿನಿಯರ್.ಬರವಣಿಗೆ, ಪ್ರವಾಸ, ಹೊಸ ವಿಶಯಗಳನ್ನು ತಿಳಿದುಕೊಳ್ಳುವುದು ನನ್ನ ಹವ್ಯಾಸ. ನಾನು ಆಗಾಗ ಮೈಸೂರಿಗೆ ಬರುತ್ತಾ ಇರುತ್ತೇನೆ, ಆದರೆ ನಿನ್ನನ್ನು ಸಿಗಲು ಬರುತ್ತೇನೆ ಅಂತ ನಿರೀಕ್ಷಿಸಬೇಡ ಕ್ಷಮಿಸು. ಸಧ್ಯದ ಮಟ್ಟಿಗೆ ನಾವಿಬ್ಬರೂ ಫೋನ್ ನಲ್ಲಿ ಮಾತನಾಡಬೇಕೆಂದು ನನಗೆ ಅನಿಸುವದಿಲ್ಲ. ಪತ್ರ ವ್ಯವಹಾರ ಇದ್ದೇ ಇದೆಯಲ್ಲ. ಪತ್ರ ಬರೆಯುವುದರಲ್ಲಿ, ಬರುವ ಪತ್ರಕ್ಕಾಗಿ ಕಾಯುವುದರಲ್ಲಿ ಇರುವ ಆನಂದ ಫೋನ್ ನಲ್ಲಿ ಇದೆಯೆ? ಇರಲಿ. ನೀನೆನು ಮಾಡುತ್ತೀಯಾ ಎಂದು ತಿಳಿದುಕೊಳ್ಳುವ ಆಸಕ್ತಿಯಿದೆ. ಇದುವರೆಗೆ ನಿನ್ನ ಪತ್ರ ಬರುತ್ತದೋ ಅನ್ನುವ ಸಣ್ಣ ಭಯ ನನ್ನಲ್ಲಿತ್ತು, ಆದರೆ ಈ ಬಾರಿ ನಿನ್ನ ಪತ್ರಕ್ಕಾಗಿ ಕಾಯಿತ್ತಿರುತ್ತೇನೆ. ಎಂಟತ್ತು ದಿನದಲ್ಲಿ ನಿನ್ನ ಪತ್ರ ಬರಬಹುದೆಂದು ನಿರೀಕ್ಷಿಸುತ್ತೇನೆ, ಬೇಗ ಬಂದರೂ ಆಶ್ಚರ್ಯವಿಲ್ಲ.
-ವಿನೀತ್.

ಪತ್ರ ಬರೆದು ಪೊಸ್ಟ್ ಮಾಡಿ ನನ್ನ ಕಾರ್ಯದಲ್ಲಿ ನಾನು ನಿರತನಾದೆ. ಕೆಲಸದ ಗಡಿಬಿಡಿಯಲ್ಲಿ ತಿಂಗಳು ಕಳೆದಿದ್ದು ಅರಿವಿಗೇ ಬರಲಿಲ್ಲ, ಅವಳ ಪತ್ರ ಬಂದಿದೆಯೋ ಎಂದು ಪತ್ರಗಳ ರಾಶಿಯಲ್ಲಿ ತಡಕಾಡಿದೆ.ಎಲ್ಲೂ ಅವಳ ಪತ್ರ ಕಾಣಲಿಲ್ಲ, ಆದರೆ ಇನ್ನೊಂದು ಪತ್ರ ನನ್ನ ಕಣ್ಣಿಗೆ ಬಿತ್ತು. ಅದು ಓಂದು ಅನಾಥಾಲಯದಿಂದ ತುಂಬಾ ಹಿಂದೆಯೇ ಬಂದ ಪತ್ರವಾಗಿತ್ತು, ಕುತೂಹಲದಿಂದಲೇ ಓದತೊಡಗಿದೆ.
ಮಿ.ವಿನೀತ್ ಕುಮಾರ್,
ನಮಸ್ತೇ. ನೀವು ಕಲ್ಪನಾಳಿಗೆ ಬರೆದ ಪತ್ರ ನಮ್ಮ ಕೈ ಸೇರಿತು, ಅವಳು ಸಧ್ಯ ಈ ಪತ್ರವನ್ನು ಓದುವ ಪರೀಸ್ಥಿತಿಯಲ್ಲಿಲ್ಲ. ನಿಮ್ಮ ಪತ್ರ ಬಂದದ್ದು ಕೇಳಿ ತುಂಬಾ ಖುಶಿಯಾಯಿತು ಅವಳಿಗೆ. ನೀವು ಒಮ್ಮೆ ಬಂದು ಅವಳನ್ನು ನೋಡಬೇಕೆಂಬುದು ಅವಳ ಆಸೆ. ನೀವು ಇಲ್ಲಿ ಬಂದರೆ ಎಲ್ಲವನ್ನು ವಿಸ್ತಾರವಾಗಿ ಮಾತನಾಡೋಣ. ನೀವು ಬಂದೇ ಬರುತ್ತೀರಿ ಅಂತ ನಿರೀಕ್ಷಿಸುತ್ತೇವೆ.
-ರಾಮನಾಥ್ (ಅಧ್ಯಕ್ಷ - ಆಶ್ರಯ ಅನಾಥಾಲಯ)

ಎಲ್ಲ ಗೊಂದಲವಾಗಿ ಕಂಡಿತು ನನಗೆ... ಏನು ಮಾಡುವುದೆಂದು ತೋಚದೇ, ಕೋನೆಗೆ ಮೈಸೂರಿನ ಕಡೆಗೆ ಪ್ರಯಾಣ ಬೆಳೆಸಿದೆ.
ಅದೋಂದು ಸುಂದರ ಅನಾಥಾಲಯ, ಸುತ್ತೆಲ್ಲ ಗುಡ್ಡ ಬೆಟ್ಟ, ಎಲ್ಲ ಕಡೆ ಹಸಿರೇ ಹಸಿರು. ಕಾವ್ಯ ರಚನೆಗೆ ಕವಿಗಳಿಗೆ ಹೇಳಿ ಮಾಡಿಸಿದ ಜಾಗದಂತಿತ್ತು. ಅಲ್ಲಿಲ್ಲಿ ಆಡುತ್ತಿದ್ದ ಕೆಲ ಮಕ್ಕಳು ನನ್ನನ್ನ ನೋಡಿ ಅಪರಿಚಿತ ಭಾವ ವ್ಯಕ್ತಪಡಿಸಿ ದೂರಾದವು. ಅತ್ತಿತ್ತ ಗಮನಿಸುತ್ತಿದ್ದಂತೆ ಅತ್ತ ಕಡೆಯಿಂದ ನನ್ನತ್ತ ಒಬ್ಬ ಹುಡುಗಿ ಕೈ ಮಾಡಿದಳು. ಇವಳೆ ಕಲ್ಪನಾ ಇರಬಹುದೇ ಅಂತ ಅತ್ತ ನಡೆದೆ. ನಾನು ವಿನೀತ್ ಇಲ್ಲಿಂದ ನನಗೆ ಪತ್ರ ಬಂದಿತ್ತು. ನೀನು ಕಲ್ಪನಾ ತಾನೇ?? ನಾನು ನುಡಿದೆ... ಅಲ್ಲವೆಂಬಂತೆ ತಲೆಯಾಡಿಸಿ ನನ್ನನ್ನು ಕಾರ್ಯಾಲಯದತ್ತ ಕರೆದೊಯ್ದಳು.
ಒಳಗೆ ಕಾಲಿಡುತ್ತಿದ್ದಂತೆ ಬನ್ನಿ ನಾನು ರಾಮನಾಥ್, ಏನಾಗಬೇಕಿತ್ತು?? ಅನ್ನುತ್ತ ತಮ್ಮ ಪರಿಚಯ ಮಾಡಿಕೊಟ್ಟರು ರಾಮನಾಥ್. ನನ್ನ ಪರಿಚಯ ಮಾಡಿಕೊಟ್ಟು ಪತ್ರ ಬರೆಯಲು ಕಾರಣ ಏನೆಂದು ಪ್ರಶ್ನಿಸಿದೆ. ಬನ್ನಿ ನನ್ನ ಜೋತೆ ಅನ್ನುತ್ತ ಓಂದು ರೂಮಿನತ್ತ ನನ್ನನ್ನು ಕರೆದೊಯ್ದರು.
ಒಳಬರುತ್ತಿದ್ದಂತೆ ಇವಳೇ ಕಲ್ಪನಾ ಅಂತ ಕೈ ತೋರಿದರು...
ಅತ್ತ ಕಣ್ಣಾಯಿಸಿದಾಗ ಕಂಡದ್ದು ಕಲ್ಪನಾ... ಇವಳೇನಾ ಕಲ್ಪನಾ?? ೨೦-೨೨ ಹರೆಯ ಬಹುತೇಕ, ಅದೆಷ್ಟೋ ಆಸೆ ಹೊತ್ತು ಮಿನುಗುವ ಕಣ್ಗಳು, ದುಂಡು ಮುಖ, ಸಂಪಿಗೆಯನ್ನೂ ನಾಚಿಸುವ ಮೂಗು, ಮಾತನಾಡಲು ಹಾತೊರೆಯುತ್ತಿದ್ದ ಅಧರಗಳು...
ಕಲ್ಪನಾಳ ಕಪ್ಪು ಬಿಳುಪು ಫೋಟೊ ಅದಕ್ಕೊಂದು ಹಾರ. . .  ಕಾಲ್ಕೆಳಗಿನ ಭೂಮಿ ಕುಸಿದ ಅನುಭವ... ಇದು ಹೇಗೆ ಸಾಧ್ಯ? ಏನಾಗಿತ್ತು ಇವಳಿಗೆ? ಅವಳು ಯಾಕೆ ಏನೂ ಹೇಳಲಿಲ್ಲ? ಸಾವಿರಾರು ಪ್ರಶ್ನೆಗಳು ತಲೆಯಲ್ಲಿ ಬಿಗುಗಾಳಿಯಂತೆ ಹೊಕ್ಕವು. ಆ ರಭಸಕ್ಕೆ ಕೆಲ ಕ್ಷಣ ಎನೂ ತೋಚದಂತೆ ಮೂಕನಾಗಿದ್ದೆ. ಯಾರೋ ಅಲುಗಾಡಿಸುತ್ತಿದ್ದ ಅನುಭವ, ಕೆಲ ಕ್ಷಣ ನಾನು ಕಳೆದುಹೋಗಿದ್ದೆ... ಮಿ.ವಿನೀತ್.... ಮಿ.ವಿನೀತ್... ರಾಮನಾಥ್ ರ ಧ್ವನಿ ಸಣ್ಣದಾಗಿ ಮನದಲ್ಲಿ ಪ್ರತಿಧ್ವನಿಸುತ್ತಿತ್ತು. ಹ್ಮಾಂ.. ಹ್ಮಾಂ.. ಎನ್ನುತ್ತ ಮತ್ತೆ ಈ ಜಗದಲ್ಲಿ ಪ್ರಸ್ಥಾನಿಸುತ್ತಿದ್ದೆ. ಬನ್ನಿ ವಿನೀತ್ ಕುಳಿತುಕೊಳ್ಳಿ, ಸ್ವಲ್ಪ ನೀರು ಕುಡಿಯಿರಿ ರಾಮನಾಥ್ ಸಮಾಧಾನಿಸುತ್ತ ನನ್ನನ್ನು ಕುರ್ಚಿಯ ಮೇಲೆ ಕುಳ್ಳಿರಿಸಿದರು, ನೀರು ಕುಡಿದು ಸ್ವಲ್ಪ ಸಮಾಧಾನಿಸಿಕೊಂಡೆ, ಪ್ರಶ್ನಿಸಬೇಕು ಅಂತ ಅವರತ್ತ ನೋಡುತ್ತಲೇ  ಅವರೇ ಮಾತನಾಡಲು ಮುಂದಾದರು.
ಕಲ್ಪನಾ ಅನಾಥೆ. ಇಪ್ಪತ್ತು ವರ್ಷದಿಂದ ಇಲ್ಲೇ ಇದ್ದಳು. ತುಂಬಾ ಮುಗ್ಧೆ, ಸುಖ ಅನ್ನೋದು ಅವಳ ಬಾಳಲ್ಲಿ ಸಿಗಲಿಲ್ಲ. ತುಂಬಾ ಕಷ್ಟಪಟ್ಟು ಓದಿ ಕಳೆದ ವರ್ಷವಷ್ಟೇ ಒಂದು ಕೆಲಸಕ್ಕೆ ಸೇರಿದ್ದಳು. ಆಗಿಂದ ಅವಳು ನಿಮ್ಮ ಅಭಿಮಾನಿ. ಇನ್ನೇನು ಎಲ್ಲ ಸರಿಹೊಯಿತು ಅನ್ನುವಷ್ಟರಲ್ಲಿ ಮತ್ತೋಂದು ದೊಡ್ಡ ಆಘಾತ ಕಾದಿತ್ತು. ಕೆಲ ದಿನಗಳ ಹಿಂದಷ್ಟೇ ಅವಳಿಗೆ ಕ್ಯಾನ್ಸರ್ ಇರುವುದು ತಿಳಿಯಿತು, ಗುಣಪಡಿಸಲಾಗದ ಮಟ್ಟಕ್ಕೆ ಬೆಳೆದಿತ್ತು. ಪರೀಕ್ಷಿಸಿದ ವೈದ್ಯರು ಕೆಲ ತಿಂಗಳಷ್ಟೇ ಆಯಸ್ಸು ಉಳಿದಿರುವುದೆಂದು ತಿಳಿಸಿ ಇದ್ದಷ್ಟು ದಿನ ಹಾಯಾಗಿರಿ ಎಂದು ಸುಮ್ಮನಾದರು. ಆದರೆ ಇಷ್ಟು ಬೇಗ ಸಾಯುತ್ತಾಳೆ ಅಂತ ಊಹಿಸಿರಲಿಲ್ಲ, ಮನಸ್ಸಿಂದ ಕುಗ್ಗಿ ಹೋದದ್ದೇ ಅವಳ ಆಯಸ್ಸು ಕಡಿಮೆಯಾಯಿತು. ಎಲ್ಲ ದೇವರ ಆಟ ನಾವೇನು ಮಾಡುವುದಕ್ಕೆ ಬರುತ್ತೇ ಅಲ್ಲವೇ. ನಿಮ್ಮ ಪತ್ರ ಬಂದಿದ್ದು ಅವಳಿಗೆ ತುಂಬಾ ಖುಶಿಯಾಯಿತು, ಆದರಾಗ ಅವಳು ಅದನ್ನು ಓದುವ ಪರಿಸ್ಥಿತಿಯಲ್ಲಿರಲಿಲ್ಲ, ನಾವು ಓದಿ ಹೇಳುತ್ತೇವೆ ಅಂದರೂ ಕೇಳಲಿಲ್ಲ. ಅದಕ್ಕೆ ನಿಮಗೆ ನಾವೇ ಪತ್ರ ಬರೆದೆವು, ತಕ್ಷಣ ನೀವು ಬಂದಿದ್ದರೆ ಅವಳನ್ನು ನೋಡಬಹುದಿತ್ತೆನೋ. ಮೊನ್ನೆಯಷ್ಟೆ ಕಲ್ಪನಾ ನಮ್ಮನ್ನೆಲ್ಲ ಬಿಟ್ಟು ಹೊರಟುಹೋದಳು.ಅನ್ನುತ್ತು ಒಂದು ಪತ್ರವನ್ನು ನನ್ನ ಕೈಗಿಟ್ಟು ಇದು ಅವಳ ಕೊನೆಯ ಪತ್ರ, ನೀವು ಬರುತ್ತೀರಿ ಆಗ ನಿಮಗೆ ಕೊಡಲು ಹೇಳಿದ್ದಳು, ನೀವು ಇನ್ನೆರಡು ದಿನ ಬರದೇ ಇದ್ದರೆ ಪೊಸ್ಟ್ ಮಾಡಬೇಕು ಅಂದುಕೊಂಡಿದ್ದೆ.
ಅದನ್ನು ತೆಗೆದುಕೊಳ್ಳುವಾಗ ಕೈ ನಡುಗುತ್ತಿತ್ತು... ಅಲ್ಲಿ ತುಂಬಾ ಹೊತ್ತು ನಿಲ್ಲಲಾಗದೇ ಸೀದಾ ಬೆಂಗಳೂರಿಗೆ ಬಂದಿದ್ದೆ. ಪತ್ರ ಜೇಬಿನಲ್ಲಿತ್ತು, ಓದುವ ಧೈರ್ಯ ಇರಲಿಲ್ಲ. ಆದರೇ ಓದದೇ ಇರಲಾಗಲಿಲ್ಲ. ನಡುಗುವ ಕೈಗಳಿಂದ ಪತ್ರ ಹಿಡಿದು ಓದಲಾರಂಬಿಸಿದೆ.

ಪ್ರಿಯ ವಿನೀತ್.
ಈ ಪತ್ರ ಓದುವಾಗ ನಾನು ಬದುಕಿರುವುದಿಲ್ಲ. ಯಾರಿಗೂ ನಾವೆಷ್ಟು ದಿನ ಬದಿಕಿರುತ್ತೇನೆ ಅಂತ ಗೊತ್ತಿರುವುದಿಲ್ಲ, ಆದರೆ ನನಗೆ ಮೊದಲೇ ಗೊತ್ತಾಯಿತು. ಇದೋಂದೆ ನಾನು ಪಡೆದುಕೊಂಡು ಬಂದ ಭಾಗ್ಯ. ನಿಮ್ಮ ಪತ್ರ ಬರುವುದಿಲ್ಲ ಅಂತ ಗೊತ್ತಿತ್ತು, ಅದಕ್ಕೆ ನಿಮ್ಮಲ್ಲಿ ತುಂಬಾ ಕಾರಣಗಳಿರಬಹುದು. ನನ್ನಂತೆ ಅದೆಷ್ಟೋ ಅಭಿಮಾನಿಗಳ ಪತ್ರ ನಿಮಗೆ ಬರುತ್ತಿರಬಹುದು, ಎಲ್ಲವಕ್ಕೂ ಉತ್ತರಿಸುವಷ್ಟು ಸಮಯ ನಿಮ್ಮಲ್ಲಿ ಇಲ್ಲದಿರಬಹುದು ಅಥವಾ ಸ್ವಲ್ಪ ಜಂಭವೂ ಇರಬಹುದು. ನನ್ನ ಹೇಳಿಕೆ ಇಷ್ಟೇ ಓದುಗರಿಂದ ನೀವು, ನಿಮ್ಮಿಂದ ಓದುಗರಲ್ಲ ಇದನ್ನ ನೆನಪಿಟ್ಟುಕೊಳ್ಳಿ. ಕೆಲವರು ನಿಮ್ಮನ್ನ ಉತ್ತಮ ಬರಹಗಾರ ಅಂದುಕೊಂಡರೆ, ಮತ್ತೆ ಕೆಲವರು ನೀವು ಹೇಳಿದ್ದೆಲ್ಲ ನಿಜ ಅಂದುಕೊಳ್ಳುತ್ತಾರೆ ಇನ್ನು ಕೆಲವರು ನಿಮ್ಮನ್ನ ದೇವರಂತೆ ಪೂಜಿಸುತ್ತಾರೆ. ಅದಕ್ಕಾಗಿಯಾದರೂ ಒಮ್ಮೆ ನಿಮ್ಮ ಅಭಿಮಾನಿಗಳನ್ನು ಸಂಪರ್ಕಿಸಿ. ಒಂದೆರಡು ಸಾಲಿನಲ್ಲಾದರೂ ನಿಮ್ಮ ಪ್ರತಿಕ್ರಿಯೆಯನ್ನು ತಿಳಿಸಿ. ನನ್ನ ಪತ್ರವನ್ನು ನೀವು ಓದಿದ್ದೀರಾ ಅಂತ ನನಗೆ ಗೊತ್ತು. ಪುಸ್ತಕ ಕಳಿಸುವುದರ ಜೋತೆಗೆ ಒಂದೆರಡು ಸಾಲು ಬರೆದಿದ್ದರೂ ನನಗೆ ಖುಶಿಯಾಗುತ್ತಿತ್ತು. ಇರಲಿ ಬಿಡಿ.  ನೀವು ನಿಮ್ಮ ಜೀವನದಲ್ಲಿ ತುಂಬಾ ಅಭಿಮಾನಿಗಳನ್ನು ಹೊಂದಿರಬಹುದು, ತುಂಬಾ ಆಸ್ತಿ ಪಾಸ್ತಿ ಗಳಿಸಿರಬಹುದು ಆದರೆ ಅದಕ್ಕಿಂತ ಹೆಚ್ಚಾದದ್ದು ಅಂದರೆ ನೀವು ಕಷ್ಟದಲ್ಲಿ ಇದ್ದಾಗ ಯಾರು ನಿಮ್ಮ ಜೋತೆ ಇರುತ್ತಾರೋ ಅದೇ ನಿಮ್ಮ ನಿಜವಾದ ಆಸ್ತಿ. ನಿಮ್ಮನ್ನು ಕೀಳಾಗಿ ಭಾವಿಸುತ್ತಿಲ್ಲ ನಾನು, ಅಥವಾ ನಿಮ್ಮನ್ನು ಅವಮಾನಿಸುತ್ತಿಲ್ಲ. ಒಂದಂತೂ ನಿಜ ನಿಮಗೆ ಸ್ವಲ್ಪ ಅಹಂ ಇರುವುದು. ಹೌದಲ್ಲವೇ...? ಹೊಗಲಿ ಬಿಡಿ. ನಾನು ಪಡೆದುಕೊಂಡದ್ದು ನನಗೆ. ನಿಮ್ಮ ಮನ ನೋಯಿಸಿದ್ದರೆ ಕ್ಷಮೆಯಿರಲಿ. ನಾನು ಹೇಳಿದ್ದರ ಬಗ್ಗೆ ನೀವು ಖಂಡಿತವಾಗಿಯೂ ಆತ್ಮಾವಲೋಕನ ಮಾಡಿಕೊಳ್ಳುತ್ತೀರಿ ಅಂತ ಭಾವಿಸುತ್ತೇನೆ.
-ನಿಮ್ಮ ಅಭಿಮಾನಿ ಕಲ್ಪನಾ.

ಇದನ್ನೆಲ್ಲ ಓದಿದ ನನಗೆ ನನ್ನ ಬಗ್ಗೆ ಅಸಹ್ಯವೆನಿಸತೊಡಗಿತು. ನಾನು ಪತ್ರ ಬರೆಯುವುದಕ್ಕಿಂತ ಮುಂಚೆಯೇ ಅವಳು ಈ ಪತ್ರ ಬರೆದಿದ್ದಳು. ಅವಳ ಬಗೆಗಿನ ಅದೆಷ್ಟೋ ಪ್ರಶ್ನೆಗಳು ನನ್ನ ಮನದಲ್ಲಿ ಕೊರೆಯತೊಡಗಿತು, ಇಂದಿಗೂ ಕೊರೆಯುತ್ತಲೇ ಇದೆ. ಅವಳಿಗೆ ನನ್ನ ಬಗ್ಗೆ ಎಲ್ಲ ಗೊತ್ತಿತ್ತೇ? ನನ್ನನ್ನು ತಿದ್ದಬೇಕು ಅಂತ ಹೀಗೆ ಮಾಡಿದಳೇ? ತಾನು ಜಾಸ್ತಿ ದಿನ ಬದುಕಿರುವುದಿಲ್ಲ ಅಂತ ಗೊತ್ತಿದ್ದರೂ ನನಗೆ ಯಾಕೆ ಯಾವುದೇ ಸುಳಿವು ಕೊಡಲಿಲ್ಲ? ಬೇರಾವುದೋ ವಿಳಾಸದಿಂದ ಪತ್ರ ಬರೆದಿದ್ದು ಯಾಕೇ? ನನ್ನ ಪತ್ರ ಬಂದಿದೆ ಅಂತ ಗೊತ್ತಿದ್ದರೂ ಅದರಲ್ಲಿ ಏನು ಬರೆದಿದ್ದೇನೆ ಅಂತ ಯಾಕೆ ತಿಳಿದುಕೊಳ್ಳಲಿಲ್ಲ? ಯಾಕೆ ನನ್ನ ಜೀವನದಲ್ಲಿ ಬಿರುಗಾಳಿಯಂತೆ ಬಂದಳು? ಜೀವನದಲ್ಲಿ ಕೇವಲ ಸುಖವಷ್ಟೇ ಅಲ್ಲ, ದುಃಖವೂ ಇರುತ್ತದೆ ಅಂತ ತೋರಿಸಲು ಹೀಗೆ ಮಾಡಿದಳೇ? ಎಲ್ಲವೂ ಪ್ರಶ್ನೆಗಳೇ...

ಈ ಜನ್ಮದಲ್ಲಿ ನಾವು ಭೇಟಿಯಾಗುವುದು ಬೇಡ ಅಂತ ಬರಿದಿದ್ದೆ, ಅದು ಹಾಗೇ ಆಯಿತು. ಇದೇ ಚಿಂತೆಯಿಂದ ಸುಮಾರು ಇಪ್ಪತ್ತೈದು ವರ್ಷ ಕಳೆದಿದ್ದೇನೆ. ಪಡಬಾರದ ಯಾತನೆ ಪಟ್ಟಿದ್ದೇನೆ. ಮದುವೆಯಾಗಬೇಕು ಅಂತ ಅನಿಸಲೂ ಇಲ್ಲ. ಯಾವಾಗ ನಾನು ಹೋಗಿ ಅವಳನ್ನ ಸೇರುತ್ತೇನೆ, ನನ್ನ ಪ್ರಶ್ನೆಗಳಿಗೆ ಯಾವಾಗ ಉತ್ತರ ಪಡೆದುಕೊಳ್ಳುತ್ತೇನೆ ಅಂತ ಕಾದಿದ್ದೇನೆ. ಅಂದಿನಿಂದ ಇಂದಿನವರೆಗೂ ಪೆನ್ನು ಹಿಡೀದಾಗಲೆಲ್ಲ ಅವಳದೇ ಚಿತ್ರ ನನ್ನ ಕಣ್ಮುಂದೆ ಬರುತ್ತದೆ, ಎನೂ ಬರೆಯಲಾಗುತ್ತಿಲ್ಲ. ಆದರೆ ಇಂದು ನನ್ನ ಮನದ ಭಾವನೆಗಳನ್ನೆಲ್ಲ ಗೀಚಿದ್ದೇನೆ. ಆದಷ್ಟು ಬೇಗ ಅವಳನ್ನು ಸೇರುತ್ತೇನೆ ಅನಿಸುತ್ತಿದೆ ಈಗೀಗ, ಆಕಾಶದ ಕಡೆ ಮುಖ ಮಾಡಿದಾಗೆಲ್ಲ ಅಲ್ಲೆಲ್ಲೋ ಮಿನುಗುವ ನಕ್ಷತ್ರ ನನ್ನನ್ನೇ ಕೈಬೀಸಿ ಕರೆಯುವಂತೆ ಕಾಣುತ್ತದೆ. ಬಹುತೇಕ ಅವಳೇ ಇರಬೇಕು.
ಇದೇ ನಾನು ಇಷ್ಟು ವರ್ಷ ಏನನ್ನೂ ಬರೆಯದಿರುವುದಕ್ಕೆ ಕಾರಣ. ಅಂದಿನ ಪಾಪಪ್ರಜ್ನೆ ಇಂದಿನವರೆಗೂ ನನ್ನನ್ನು ಕಾಡುತ್ತಿದೆ.

****************************************************************

ಇಂದಿನ ಪತ್ರಿಕೆಯ ಮೂಲೆಯಲ್ಲಿನ ಸುದ್ದಿ: ಅಂಕಣಕಾರ ವಿನೀತ್ ಕುಮಾರ್ ನಿಧನ
ಅತೀ ಚಿಕ್ಕ ವಯಸ್ಸಿನ ಅಂಕಣಕಾರ ಪ್ರಸಿದ್ಧಿ ಪಡೆದಿದ್ದ ಅಲ್ಲದೇ ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪಡೆದಿದ್ದ ಸಾಹಿತಿ ವಿನೀತ್ ಕುಮಾರ್ ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಅವರಿಗೆ ೫೩ ವಯಸ್ಸಾಗಿತ್ತು. ೧೯೯೦ ರ ಅವಧಿಯಲ್ಲಿ ಪ್ರಕಟವಾದ ಮಾತೆಯ ಮಡಿಲಲ್ಲಿ ಕೃತಿಗೆ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆತಿತ್ತು.

ನವೆಂಬರ್ ೩ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾದ ಬರಹ.
http://www.panjumagazine.com/?p=9186

1 comment:

  1. ತುಂಬಾ ಚೆನ್ನಾಗಿದೆ ಸರ್. ಒಮ್ಮೆ ನನ್ನ ಬ್ಲಾಗ್ ನೋಡಿ ಸಾದ್ಯವಾದರೆ?

    ReplyDelete