ಮಸಣದ ಹೂವು:

೧: 
ಮಸಣದಲಿ
ಸತ್ತ ದೇಹಗಳಿಗೆ
ಗೋರಿ,
ನನ್ನ ಹೃದಯದಲಿ
ಸತ್ತ ನಿನ್ನ ನೆನಪುಗಳಿಗೆ
ಗೋರಿ.

೨: 
ನೀ ಕೊಂದದ್ದು
ಬರೀ ನನ್ನನ್ನಲ್ಲ
ಜನ್ಮ ತಳೆದು
ಬದುಕಬೇಕಿದ್ದ
ಅದೆಷ್ಟೋ
ಕವಿತೆಗಳನ್ನ.

೩: 
ನನ್ನ ಕವಿತೆಗಳಿಗೆ 
ಮರುಹುಟ್ಟು
ಮಸಣದ
ಗೋರಿಗಳಲ್ಲಿ.

೪: 
ಮಸಣದಲ್ಲೂ
ಕವಿತೆ ಹುಟ್ಟಬಹುದು
ಅತೃಪ್ತ ಆತ್ಮಗಳು
ಜೋತೆ ಬೆರೆತಾಗ.

೫: 
ಮಸಣದಲಿ
ಆತ್ಮಗಳ
ಮಿಲನವಾದೊಡೆ
ಮುಕ್ತಿ, ಮುಂದೆ…
ಸ್ವರ್ಗವೋ.?
ನರಕವೋ.?

೬: 
ಬೀದಿಗುಂಟ
ಹೂ ಗಿಡವನ್ನೆಲ್ಲ
ಕೀಳುತ್ತಾ ಹೊರಟಿದ್ದ
ಪೂಜಾರಿಯ
ಕಂಡು ನಕ್ಕಿದ್ದು
ಮಸಣದ ಹೂವು.


ಜುಲೈ ೧೪ ರ "ಪಂಜು" ಅಂತರ್ಜಾಲ ಪತ್ರಿಕೆಯಲ್ಲಿ ಪ್ರಕಟವಾಗಿತ್ತು.
http://www.panjumagazine.com/?p=7975

ಹೀಗೆ ಸುಮ್ಮನೆ: ಭಾಗ ೧:

ಹೀಗೆ ಸುಮ್ಮನೆ 1:
ಶಾಮಲಕ್ಕೋ ಸುದ್ದಿ ಗೊತ್ತಾತನೇ....
ಎಂತದೆ ಗಿರಿಜೇ... ಎಂತಾತೆ??

ಶಂಭು ಹೆಗಡ್ರ ಮನೆ ಸೀಮಾ ಒಡೋತಡಲೆ...
ಹೌದನೇ....! ಯಂಗೆ ಮುಂಚೆನೆ ಗೊತ್ತಿತು... ಇದು ಓಡೋಪುದೆ ಹೇಳಿ... ನೋಡಕಾಗಿತ್ತು ಪಾರ್ವತಕ್ಕನ ವಯ್ಯಾರವ, ಯಮ್ಮನೆ ಕೂಸು ಅಂದ್ರೆ ಬಂಗಾರ ಹೇಳಿ ತಲೆ ಮೇಲೆ ಹೊತ್ಕಂಡು ತಿರಗ್ತಿತ್ತು.

ಹುಶಾರೆ ಮಾರಾಯ್ತಿ ನಿಂಗೂ ಮಗಳೆಯಾ...!
ಇಲ್ಯೆ ಗಿರಿಜೆ... ಯಮ್ಮನೆ ಕೂಸು ಹಂಗೆಲ್ಲಾ ಮಾಡ್ತೇ ಇಲ್ಲೆ. ಅದ್ಕೆ ಹುಡುಗ್ರ ಕಂಡ್ರೇ ಆಗ್ತಿಲ್ಲೆ. ತಾನಾತು ತನ್ನ ಓದಾತು. ಅಷ್ಟೆಯಾ....!
.
.
.
.
.
.
.
.

ಓ ಗಿರಿಜಕ್ಕೋ....... ಆಸ್ರಿ ಆತನೇ...??
ಆತೇ.. ನಿಂಗಳದ್ದಾತಾ???

ಹೋ.. ಅವಾಗೇ ಮುಗತ್ತು.. ಇವ್ರಿಗೆ ಬಗೆಲಿ ಕುಮ್ಟೆಗೆ ಹೋಗಕಾಗಿತ್ತು, ಬೇಗ್ನೆ ಮುಗಸ್ಕಂಡು ನಡೆದ್ರು..... ಸುದ್ದಿ ಗೊತ್ತಾತನೇ???
ಎಂತದೇ...!!!
ಶಾಮಲನ ಮಗಳು ಮನೆಗೇ ಬಂದಿಲ್ಯಡ, ಎರಡು ದಿನಾ ಆತಡ.... ಯಾರ್ದೋ ಜೋತೆ ಓಡೋತು ಹೇಳ್ತಾ ಇದ್ವಪ...!!!
*******

ಹೀಗೆ ಸುಮ್ಮನೆ 2:

ಜಪಾನಿ ಮದುಮಕ್ಳ ಫಸ್ಟ್ ನೈಟ್ ನಡೀತಾ ಇತ್ತಡ....!!!

ಗಂಡ: ಸುತಾಆಆಕಿ
ಹೆಂಡ್ತಿ: ಕೊವಾನಿನಿ
ಗಂಡ: ತೊಕಾ ಅಂಜಿ ರೊಡಿ ರೋಮೊ ಹೊಯಾ ಯಾಕೊ

ಹೆಂಡ್ತಿ ಕಾಲೂರಿ ಹೇಳ್ತಡಾ
.
.
ಮಿಮಿ ಯಾವೊ ನಾ ಮಿಮಿ ಕಿನ ತಿಮ್ ತಿನುಕೂಜಿ
ಗಂಡ: ನಾ ಮಾಯಿಒ ಕಿನಾ ತಿಮ್
ಹೆಂಡ್ತಿ: ಸು ಕಿ ಕಿನಾ ಮಾತೊ
ಗಂಡ: ಸಾಕೋ ತೀತೀ ಯಾನಿ
.
.
.
.
.
ಹೆಂಡ್ತಿ:
.
.
.
.ಮ್ ಮ್ ಮ್ ಮ್ ಮ್ ಮ್ ಮ್
.
.
.
.
.
ಗಂಡ: ಯೇ ಯೇ ಯೇ...
.
.
.
.
.

ಎಂತದ್ರಾ ಮಾಯಾಯ್ರೇ... ಹುಡುಗ್ರ ಶೋಕಿ ನೋಡ್ರಾ...
ಎಂತಾ ತಿಳಿತಿಲ್ಲೆ ಬಿಡ್ತಿಲ್ಲೇ....
ಬರೀ ಫಸ್ಟ್ ನೈಟ್ ಹೇಳಿದ್ದೇ ತಡಾ
ಪೂರಾ ಮೇಸೆಜ್ ಓದಿ ಮುಗಸಿದ್ದಾ... :) :) :)
******

ಹೀಗೆ ಸುಮ್ಮನೆ 3:
ಯಾರ್ಗಾದ್ರೂ ಬೆಂಗಳೂರು ಪುಣೆ, ಪುಣೆ ಬೆಂಗಳೂರು ಮಲ್ಟಿ ಎಕ್ಸೆಲ್ ಬಸ್ ಅನುಭವಾ ಇದ್ದನ್ರಾ??
.
.
.
ಇಲ್ಯಾ
.
.
.
ಹೇಳ್ತೆ.. ಕೇಳ್ಕಳಿ
.
.
ಬಸ್ ಹೊರಡದು ಸಂಜೆ ಐದಕ್ಕೆ, ಬಂದ್ ಮುಟ್ಟದು ಬೆಳಿಗ್ಗೆ ಹತ್ತಕ್ಕೆ.
ದರಿದ್ರ ಮುಂಡೇವು ರಾತ್ರಿ ಉಂಬುಲೆ ನಿಲ್ಸ್ ದಾಗ ಎಂತೆಂತಾ ತಿಂತ್ವೇನಾ... ಬೆಳಿಗ್ಗೆ ಡ್ರೈವರ್ ಬಡ್ಡೀಮಗಾ  ಬೇಗಾ ಗಾಡಿನೂ ನಿಲ್ಲಸ್ತ್ನಿಲ್ಲೆ. ಏಳ್ ಗಂಟೆ ಆಪುದೇ ತಡಾ.ಆ..ಆ..
.
.
.
ಬಿಸಿ ಬಿಸಿ ಗಾಳಿ ಬಪ್ಪುಲೆ ಸುರು ಆಗ್ತು, ಬಗೆಲಿ ಕಿವಿ ನೆಟ್ಟಗ್ ಮಾಡಿದ್ರೆ ಟುರ್ ಟುರ್ ಶಬ್ಧಾನೂ ಕೇಳಲಕ್ಕು.
ಕಿಟಕಿನೂ ತೆರುಲೆ ಬತ್ತಿಲ್ಲೆ. ತಡಕಂಬುಲೆ ಆಗ್ತಿಲ್ಯೋ ಮಾರಾಯ್ರೇ... ಅನುಭವಿಸ್ದ್ದಕ್ಕೆ ಗೊತ್ತು.
"ಸ್ಲೀಪ್ ಲೈಕ್ ಅ ಬೇಬಿ" ಬೋರ್ಡ್ ಬೇರೆ.
******
ಹೀಗೆ ಸುಮ್ಮನೆ 4:
ಬ್ರೇಕಿಂಗ್ ನ್ಯೂಸ್:
ಮಳೆಗಾಗಿ ಕಪ್ಪೆಗಳ ಮದುವೆ;ಕೋರ್ಟಿಗೆ ಹೋದ ಹೆಣ್ಣು ಕಪ್ಪೆ.
.
.
.
.
ಎಂತಕ್ಕೆ ಕೇಳ್ತ್ರಾ??
.
.
.
"ಯನ್ ಗಂಡಂಗೆ ಮುಂಚೆನೆಯಾ ಮದ್ವೆ ಆಗಿತ್ತು, ಜನಾ ಎಲ್ಲಾ ಹಿಡ್ಕಂಡೋಗಿ ಎರಡನೇ ಮದುವೆ ಮಾಡಿದ್ದ.  ಯಂಗೆ ಡೈವರ್ಸೂ ಕೊಡದೆ ಅದೆಂಗೆ ಎರ್ಡನೇ ಮದುವೆ ಆದ" ಹೇಳಿ ಕೋರ್ಟಿಗೆ ಹೋಯ್ದಡಾ ಹೆಣ್ ಕಪ್ಪೆ.
******

ಹೀಗೆ ಸುಮ್ಮನೆ 5:

ಕೂಸು: ಅವಂಗೆ ಒಳ್ಳೇ ಜಾಬ್ ಇದ್ದು, ಬೈಕ್ ಇದ್ದು, ಮನೆ ಇದ್ದು...
ನಿನ್ನತ್ರ ಎಂತಾ ಇದ್ದಾ...???
ಮಾಣಿ: ನನ್ನತ್ರ...
.
.
.
.
.
.
.
.
ಯಂಗಳದ್ದು ಐದು ಎಕ್ರೇ ಅಡ್ಕೆ ತೋಟಾ ಇದ್ದು...
ಕೂಸು: ನೀ ಹೆಂಗೇ ಇದ್ರೂವಾ ನಾ ನಿನ್ನೇ ಕಟ್ಕತ್ನಾ... ಅಪ್ಪಯ್ಯಂಗೆ ಹೇಳ್ತಿ, ಕಟ್ಕಂಬುದಾದ್ರೆ ಇವನ್ನೆಯಾ ಹೇಳಿ... ಅಕ್ಕಾ.
******

ಹೀಗೆ ಸುಮ್ಮನೆ 6:
ಯಶೋದಕ್ಕೋ... ಎಂತಾ ಮಾಡ್ತಾ ಇದ್ಯೇ.....??
ಈಗಷ್ಟೇ ಆಸ್ರೀ ಮುಗಸ್ಕಂಡು ಮುಸುರೆ ತಿಕ್ಕುಲೆ ಹೊಂಟಿದ್ನೇ..
ಹೌದ..... ಕಡಿಗೆ ಶಾಮಲನ ಮಗಳ್ ಸುದ್ದಿ ಏನಾರು ತಿಳತ್ತನೇ??
.
.
.
.
ಕೊನೆಗೌಡನ ಮಗನ್ನ ಕಟ್ಕಂಡು ಹೋಯ್ದು ಹೇಳ್ತಿದ್ವಪ... ಅವನ ಮನೆಲಿ ೯೦ ಕ್ವಿಂಟಾಲ್ ಅಡ್ಕೆ ಇದ್ದಿತ್ತು ಹೇಳಿ ಸುದ್ದಿಯಾಗಿತ್ತು.
.
.
೯೦ ಕ್ವಿಂಟಲ್ಲಾ....??? ನಿಂಗ್ ಯಾರ್ ಹೇಳಿದ್ವೆ??
.
ಕೆಳಗಿನ ಮನೆ ಮಾಣಿ ಇದ್ನಲೇ ವಿಘ್ನೇಶಾ ಅಂವ ಹೇಳ್ತಾ ಇದ್ನಪ.
ಹಂಗಿದ್ರೆ ಸರಿನೆಯಾ.... ಎಲ್ಲಾರು ಹಾಳಾಗಿ ಹೊಯ್ಕಳ್ಲಿ....ಸರಿ ಯಂಗೂ ಬಗೆಲಿ ಕೆಲ್ಸ ಇದ್ದು. ಸಿಗುವಾ.
******

ಹೀಗೆ ಸುಮ್ಮನೆ 7:
ಹೋಯ್ ಆಸ್ರಿಗೆ ಆತನ್ರಾ...
ಸುಬ್ಬಾ ಭಟ್ರು... ಬನ್ರಾ... ಕಾಣ್ತೇ ಇಲ್ಯಲ್ರೋ.. ಕೂತ್ಕಳಿ ಆಸ್ರಿಗೆ??
ಆಸ್ರಿ ಎಲ್ಲಾ ಬ್ಯಾಡ್ದಾ... ಮುಗಸ್ಕಂಡೇ ಬಂದೀ.. ಬಗೆಲಿ ಕವಳದ್ ಚಂಚಿ ಕೊಡು ನೋಡ್ವಾ..
.
.
.
.
ಅಲ್ಲಾ ಸುಬ್ಬಾ ಭಟ್ರು ಕಾಣುದೆ ಅಪರೂಪ ಆಗೋತು...
ಹೌದ್ರಾ ... ಬಜೆಟ್ ಅದೂ ಇದೂ ಹೇಳಿ ಬಪ್ಪುಲೇ ಆಯ್ದಿಲ್ಲೆ.. ಮತ್ತೆ ರಾತ್ರಿಗೆ ಫೂಟ್ ಬಾಲ್ ಮ್ಯಾಚ್ ಬೇರೆ ಇರ್ತಲಾ... ಯಮ್ಮನೆ ಮಾಣಿ ಹಾಯ್ಕಂಡು ಕುತ್ಕತ್ತಾ.. ಯಾನೂ ನೋಡ್ತಿ.. ಯಂಗಕ್ಕೆ ಎಂತ ತಿಳಿತಿಲ್ಯಾ ಮಾರಯಾ.. ಒಂದ್ ಬಾಲ್ ಇಟ್ಕಂಡು ಬಯಲ್ ತುಂಬಾ ಒಡ್ತ್ವಪಾ.. ಕೆಂಪ್ ಕಾರ್ಡು ಹಳದಿ ಕಾರ್ಡು ಹೇಳಿ ಯಂಗಳ್ ಕಡೆ ರೇಶನ್ ಕಾರ್ಡ ಇದ್ದಂಗೆ ಅದೆಂತೋ ತೋರ್ಸ್ತಾ.... ಯಾ ಎಂತಾ ಹೇಳ್ತಿ ಅಂದ್ರೆ ಹಗಲಿಗೆ ಆಡುದ್ ಬಿಟ್ಕಂಡು ರಾತ್ರಿ ಹನ್ನೆರಡಕ್ಕೆಲ್ಲಾ ಆಡ್ತಾ ಕುತ್ಕತ್ವಪಾ.. ಎಂತಾ ಹೇಳದು ಬಡ್ಡಿಮಕ್ಕಕ್ಕೆ..

ಮತ್ತೆ ಬಜೆಟ್ ಎಂತಾ ಆತಾ?? ನಿಂಗಳದ್ದು ಅಡ್ಕೆ ಕೊಯ್ಲು ಚಲೋ ಆಯ್ದು ಹೇಳ್ತಿದ್ನಪಾ ಮಾಣಿ, ಮೊನ್ನೆ ಮೇಲ್ನ್ ಕೇರಿ ಶಾಂಭಟ್ರ್ ಮಗಳ ಮದ್ವೆಲಿ ಸಿಕ್ಕಿದ್ನಾಗಿತ್ತು...
ಎಂತಾ ಬಜೆಟ್ಟೂ ಇಲ್ಲೆ, ಮಣ್ಣೂ ಇಲ್ಲೆ... ಮೊನ್ನೆನೆಯಾ ಗೌಡಾ ರೈಲ್ ಬಿಟ್ಟಿನಪ್ಪಾ, ಅದು ಹಳಿ ಮೇಲ್ ಓಡ್ತಾ ಇಲ್ಲಾ ಹಳಿ ಇಲ್ದೆಗಿದ್ದೆ ಓಡ್ತಾ ಗೊತ್ತಿಲ್ಲೆ.. ನಿನ್ನೆ ಅವಾ ಜೆಟ್ಲಿ ಒಂದಿಷ್ಟು ಎನೆನೋ ಹೇಳಿನಪಾ ನೋಡ... ಅವಂಗೆ ಒಂದ್ ತಾಸ್ ನಿತ್ಕಂಬಲೂ ಆಗ್ತಿಲ್ಲೆ, ಒದುಲೆ ಶುರು ಮಾಡಿದ್ ಕೂಡ್ಲೆಯಾ ಬೆನ್ನು ನೋಯುಲೆ ಶುರು ಆತಡಾ... ಯಂಗಳ್ ಕಡೆ ಶಾಲೆಗ್ ಹೋಪಾ ಮಕ್ಳಿಗೆ ಓದುಲೆ ಶುರು ಮಾಡ್ದ ಕೂಡ್ಲೆಯಾ ನಿದ್ದ್ ಬಪ್ಪುಲ್ ಶುರು ಆಗ್ತು ಹಂಗೆಯಪಾ... ಅಡ್ಕೆ ರೇಟು ಜಾಸ್ತಿ ಆಯ್ದು ಹೇಳಿ ಅವಾ ತಂಬಾಕು ಪಾನ್ ಮಸಾಲಾ ಹೇಳಿ ಎಲ್ಲದ್ರ ರೇಟೂ ಜಾಸ್ತಿ ಮಾಡಿಗಿದ್ದ... ಯಮ್ಮನೆ ಅಡ್ಕೆಯಾ ಮುಂಚೆನೆ ಕೊಟ್ಟಾಕಿದ್ನ ಮಾಣಿ.. ಯಾ ಎಷ್ಟ್ ಹೇಳಿಗಿದ್ದಿ ಕೊಡಡ್ದಾ ಮಾರಾಯ, ಆಮೇಲೆ ಕೋಟ್ರಾತು, ರೇಟ್ ಬತ್ತು ಹೇಳಿ... ಯಂಗಳ್ ಮಾತು ಯಾರ್ ಕೇಳ್ತಾ ಹೇಳು?? ನಿಂಗ್ ಎಂತಾ ಗೊತ್ತಾಗ್ತು ಸುಮ್ನ್ ಕುತ್ಕಾ ಹೇಳ್ತಾ.. ಯಾ ಹಂಗಾಗಿ ಮಾತಾಡುದೇ ಬಿಟ್ಟಾಕಿದ್ದಿ.

ಮತ್ತೆಂತೋ ಮಧ್ಯಸ್ತಿ ವ್ಯವಹಾರ ಮಾಡ್ತಿ ಹೇಳಿ ಕೇಳ್ದಿ ಹೌದಾ??
ಹೌದಾ.. ಮಕ್ಕ ಅಂತೂ ಯಂಗಳ್ ಮಾತ್ ಕೇಳ್ತ್ವಿಲ್ಲೆ.. ಎಂತಾರೂ ಮಾಡಕಾತಲಾ.. ಅದೇಯಾ ಇಲ್ಲಿಂದ ಅವ್ರ್ ಇವ್ರದ್ದು ಅಡ್ಕೆ ತಗತ್ತಿ, ಅದನ್ನಾ ಅಲ್ಲ್ ಒಯ್ದು ಮಾರ್ತಿ.. ಬಗೆಲಿ ಕಮೀಶನ್ ಸಿಗ್ತಾ..

ಅದ್ರಲ್ಲಿ ಎಷ್ಟ್ ಕಮೀಶನ್ ಸಿಗ್ತಾ??
ಎಲ್ಲೊ ಕ್ವಿಂಟಲ್ ಗೆ ಹತ್ತಿಪ್ಪತ್ತು ಸಾವ್ರಾ ಸಿಗ್ತಾ.. ಹೆಚ್ಚೇನಿಲ್ಯಾ.. ಇಲ್ಲಿವಕ್ಕೆ ರೇಟ್ ಜಾಸ್ತಿ ಆಗದ್ದು ತಿಳಿತಿಲ್ಲೆ ಕೊಟ್ಟಾಕ್ತಾ, ಮತ್ತೆ ಬಗೆಲಿ ಮಾತಾಡಕಾಗ್ತು ಗೊತ್ತಿದ್ದಲಾ ನಿಂಗೆ.. ಹಾಹಾ..

ನಿಂಗ ಬಿಡಿ ಮಾತಾಡುದ್ರಲ್ಲಿ ಕೇಳವಾ...ತಗಳಿ, ಚಾ ತಗಳಿ..
ತಡೆ ಹಂ.. ಕವಳಾ ತುಪ್ಪಾಕಿ ಬತ್ತೆ...
*****

ಹೀಗೆ ಸುಮ್ಮನೆ 8:
"ಗುರುವಿನ ಗುಲಾಮನಾಗುವತನಕ ದೊರೆಯದಣ್ಣ ಮುಕುತಿ"
ಗುರುಗಳಿಗೆಲ್ಲ ನಮಸ್ಕಾರ...
ಶಿಷ್ಯಂದರಿಗೆಲ್ಲ ಆಶೀರ್ವಾದ...
.
.
.
.
.
.
ಗುರು ದಕ್ಷಿಣೆ ಕೋಡವು ಯಾರ್ಯಾರು ಇದ್ರೋ..??
ಯನ್ ನಂಬರ್ ಕೊಡ್ತಿ, ಒಂದ್ ನೂರು ರಿಚಾರ್ಜ್ ಮಾಡ್ಸಬುಡ್ರಾ..!!!
ಇನ್ನೂರು, ಮುನೂರು ಇದ್ರೂ ನಡೆತು ಹೇಳಿ.
*****

ಹೀಗೆ ಸುಮ್ಮನೆ 9:
ಹಾಯ್ ಎಂತದಾ ಮಾಣಿ... ಮುಖಾ ಸಪ್ಪಗೆ ಮಾಡ್ಕಂಡ್ ಕೂತ್ಕಂಡಿದ್ದೆ??
ಮೊನ್ನೆ ಮೊನ್ನೆ ಇನ್ನೂವಾ ಮದ್ವೆ ಆಯ್ದಪಾ..
.
.
.
.
.
.
.
ಥೋ ಯನ್ ಕಷ್ಟಾ ಯಂಗೆ... ನಿಂಗೆಂತಾಗವಾ??
ಎಂತಾತ ಮಾರಾಯ??
.
.
.
.
ಆಷಾಢ ಅಲ್ದನಾ ಮಾರಾಯ.. ಹೆಂಡ್ತಿ ತವರಿಗೆ ಹೋಗಿ ಹದಿನೈದ್ ದಿನಾ ಆತು... ಒಬ್ಬಂಗೇ ಇಲ್ಲಿ ಕೈ ಕಾಲೇ ಆಡ್ತಿಲ್ಲೆ...!
*****

ಹೀಗೆ ಸುಮ್ಮನೆ 10:
ಹವ್ಯಕ ಹರಟೆ ಬಿಸಿ ಬಿಸಿ ಸುದ್ದಿ...
ಅಡ್ಕೆ ರೇಟ್ ಸಿಕ್ಕಾಪಟ್ಟೆ ಬೆಳದದ್ದು ಅಡ್ಕೆ ಬೆಳೆಗಾರರಲ್ಲಿ ಖುಷಿ ತಂದಿದ್ದು.. ಜೋತೆಗೆಯಾ ಸಿಕ್ಕಾಪಟ್ಟೆ ತ್ರಾಸೂ ಕೊಟ್ಟಿದ್ದು...
ಎಂತದು ಕೇಳ್ತ್ರಾ???
.
.
.
.
.
*ಮೊನ್ನೆ ಮೊನ್ನೆಯಾ ಗಿದ್ದಾಪುರ ಬದಿಗೆ, ಮಂಡಿಗೆ ಅಡ್ಕೆ ಒಯ್ತಿದ್ದ ಮಿನಿ ಟೆಂಪೋ ಅಪಹರಿಸಿ ೧೦ ಕ್ವಿಂಟಾಲ್ ಅಡ್ಕೆ ಕದ್ಕಂಡು ಹೋಯ್ದಾ, ಡ್ರೈವರ್ ಗೆ ನಾಕು ಅಡ್ಕೆ ಬೆಟ್ಟ ಕೊಟ್ಟು ಮಜಾ ಮಾಡು ಹೇಳಿಕಿ ಹೋಯ್ದ ಹೇಳಿ ಸುದ್ದಿ ಆಯ್ದು....
*ಅಡ್ಕೆ ರೇಟ್ ಹೆಚ್ಚಾದ್ದೇಯಾ ಅಡ್ಕೆ ಬೆರೆಗಾರರ ಮಾಣಿಗಳ್ನ ನೋಡುಲೆ ಕೂಸಗಳ ಹಿಂಡೆಯಾ ಬತ್ತಿದ್ದಡ... ಹಂಗಾಗಿ ಹವ್ಯಕ ಮಾಣಿಗಳು ಯಾರನ್ನ ಕಟ್ಟಕಂಬುದು ಹೇಳಿ ಕನ್ ಫ್ಯೂಸ್ ಆಗಿದ್ದ ಹೇಳಿ ಸುದ್ದಿ ಬಂದು.
*ಒಂದು ವಾರದ ಹಿಂದೆಯಾ ಹೆಮ್ಟಾ ಬದಿಗೆ ಮಾಣಿ ನಾಪತ್ತೆ ಆಗಿದ್ದ ಹೇಳಿ ಸುದ್ದಿ ಆಗಿತ್ತು, ಕಡಿಗೆ ನೋಡಿದ್ರೆ ಕೂಸು ಮಾಣಿನ ಅಪಹರಣ ಮಾಡಿ ಮದ್ವೆ ಮಾಡ್ಕಂಡಿದ್ದು ಹೇಳಿ ತಿಳತ್ತು. ಕಾರಣ ಇಷ್ಟೆಯಾ ಆ ಮಾಣಿ ಮನೆದು ೧೦ ಎಕ್ರೆ ಅಡ್ಕೆ ತೋಟಾ ಇದ್ದು ಹೇಳಿ.
*ಮದ್ವೆ ಆದ ಗಂಡಸರನ್ನೂ ಒತ್ತಾಯವಾಗಿ ಮದ್ವೆ ಮಾಡ್ಕಂಡು, ಅಡ್ಕೆಲಿ ಯಂಗೂ ಪಾಲು ಬೇಕು ಹೇಳಿ ಕೂಸು ಕೊರ್ಟಿಗೆ ಹೋಯ್ದು ಹೇಳಿ ಸುದ್ದಿ ಆಯ್ದು.
*ಅಡ್ಕೆ ಕಾಯುಲೇ ಹೆಚ್ಚುವರಿ ಮಿಲಿಟರಿ ಸವಲತ್ತು ಒದಗಿಸಿ ಕೊಡ ಹೇಳಿ ಬೆಳೆಗಾರರು ಮಂತ್ರಿಗಳಿಗೆ ಬೇಡಿಕೆ ಇಟ್ಟಿದ್ದ.
*ಅಡ್ಕೆ ರೇಟ್ ಹೆಚ್ಚಾಗಿದ್ದು ಯಂಗೆಕ್ಕೆ ಸಿಕ್ಕಾಪಟ್ಟೆ ತ್ರಾಸ್ ಆಗ್ತಾ ಇದ್ದು ಹೇಳಿ, ಆದಷ್ಟು ಬೇಗಾ ಅಡ್ಕೆ ರೇಟ್ ಇಳ್ಸ ಹೇಳಿ ಅಡ್ಕೆ ಬೆಳೆಗಾರರ ಒಕ್ಕೂಟದವರು ಮುಖ್ಯಮಂತ್ರಿ ಪೆದ್ದರಾಮಯ್ಯಂಗೆ ಪತ್ರ ಕಳ್ಸಿದ್ದ.

ಇದಕ್ಕೆ ಪ್ರತಿಕ್ರಿಯಿಸಿದ ಮಂತ್ರಿಗಳು ಸ್ವಲ್ಪ ಮಟ್ಟಿಗೆ ಅಡ್ಕೆ ರೇಟ್ ಕಮ್ಮಿ ಮಾಡಿದ್ದು... ಬೆಳೆಗಾರರಿಗೆ ಸಾವಧಾನ ಆಗಿ ಇರುಲೆ ಹೇಳಿದ್ದ. ಮಾಣಿಗಳಿಗೆ ಆದ ತೋಂದರೆಗೆ ಪರಿಹಾರ ಸೂಚಸುಲೆ, ಆದಷ್ಟು ಬೇಗ ಅಧಿಕಾರಿಗಳ್ನ ನೇಮಕಾ ಮಾಡಿ ತನಿಖೆ ಮಾಡುಲೆ ಆದೇಶ ನೀಡಿದ್ದ. ಹವ್ಯಕ ಮಾಣಿಗಳು ಸುಮ್ ಸುಮ್ನೆಯಾ ಮನೆಯಿಂದ ಹೊರ ಬಪ್ಪುಲಿಲ್ಲೆ, ಹೊರಗೆ ಹೊಗಕಾದ್ರೂ ಜೊತೆಗೆ ನಾಲ್ಕ್ ಜನ ಕರ್ಕಂಡು ಹೋಗ ಹೇಳಿ ವಿಶೇಷ ಸೂಚನೆ ನೀಡಿದ್ದ.

ಥೋ... ಎಂತದ್ರಾ ಮಾರಾಯ್ರ?? ಅಡ್ಕೆಗೆ ರೇಟ್ ಬರದೆಗಿದ್ರೂ ಕಷ್ಟ. ಬಂದ್ರೂ ಕಷ್ಟ.



ಮುಂದುವರೆಯುವುದು....

ಕರ್ಮ: ನಾ ಕಂಡಂತೆ.


ಮೊದಲಿನಿಂದಲೂ ನಾನು ಓದಿದ್ದು ಕಡಿಮೆಯೇ... ಅದರಲ್ಲೂ ಪುಣೆಗೆ ಬಂದಮೇಲೆ ಮುಗಿಯಿತು, ಇಲ್ಲಿ ಕನ್ನಡ ಪುಸ್ತಕವೂ ದೊರೆಯುವುದಿಲ್ಲ. ಆದರೆ ಇತ್ತೀಚೆಗೆ ಓದುವ ಹವ್ಯಾಸ ಬೆಳೆದಿದೆ. ಹಾಗಾಗಿ ಊರಿಗೆ ಹೋದಾಗೆಲ್ಲ ಬರುವಾಗ ಒಂದಿಷ್ಟು ಕಾದಂಬರಿಗಳನ್ನ ತಂದಿರುತ್ತೇನೆ. ಅವರಿವರಲ್ಲಿ ಕೇಳಿ ಯಾವ ಕಾದಂಬರಿಗಳು ಚೆನ್ನಾಗಿವೆ ಅಂತ ಖರೀದಿಸುವುದು ನನ್ನ ವಾಡಿಕೆ. ಮೊನ್ನೆ ಹೀಗೆ ಫೇಸ್ ಬುಕ್ ಲ್ಲಿ ಗೆಳತಿಯೊಬ್ಬಳು "ಕರಣಂ ಪವನ್ ಪ್ರಸಾದ್" ಬರೆದಿರುವ "ಕರ್ಮ" ಕಾದಂಬರಿ ತುಂಬಾ ಚೆನ್ನಾಗಿದೆ, ಓದಲೇಬೇಕಾದ ಪುಸ್ತಕ ಅಂದಾಗ ಇವರು ಯಾವ ಲೇಖಕರು ಇವರ ಹೆಸರನ್ನು ಕೇಳಿದ ನೆನಪೇ ಇಲ್ಲ. ಇನ್ನು ಇವರ ಬರಹ ಹೇಗಿರುತ್ತೋ ಅಂತ ಗೊಂದಲದಿಂದಲೇ ಸಪ್ನ ಆನ್ ಲೈನ್ ಅಲ್ಲಿ ಬುಕ್ ಆರ್ಡರ್ ಮಾದಿದೆ. ಮೊದಲೇ ಸ್ವಲ್ಪ ಗೊಂದಲದಲ್ಲಿದ್ದ ನನಗೆ ಬುಕ್ ೧೫ ದಿನ ಆದರೂ ಬರದೇ ಇದ್ದಿದ್ದಕ್ಕೆ ಬೇಸರವಾಗಿತ್ತು. ಸಪ್ನ ಬುಕ್ ಹೌಸ್ ಗೆ ಫೋನಾಯಿಸಿ ವಿವರ ತಗೋಂಡು ನಾನೇ ಖುದ್ದಾಗಿ ಹೋಗಿ ಪುಸ್ತಕ ತರಬೇಕಾಯಿತು. ಆದರೆ ಪುಸ್ತಕ ಸಿಕ್ಕ ಮೇಲೆ ಇದ್ಯಾವುದರ ಪರಿವೆ ಇಲ್ಲದೇ ಯಾವಾಗ ಓದುತ್ತೀನೋ ಅನ್ನುವಂತೆ ಆಗಿತ್ತು. ಇನ್ನೆನು ಒಮ್ಮೆ ನಿರ್ಧಾರ ಮಾಡಿದ ಮೇಲೆ ಮಾಡಿಯೇ ತೀರುವುದು ನನ್ನ ಸ್ವಭಾವ.

ನೋಡು ನೋಡುತ್ತಿದ್ದಂತೆಯೆ ಪುಟಗಳು ಸರಿಯತೊಡಗಿದ್ದವು ನಾನು ಪುಸ್ತಕದೊಳಗೆ ಮುಳುಗಿಹೋಗಿದ್ದು ನನಗೇ ತಿಳಿಯಲಿಲ್ಲ. ವಾಸ್ತವಿಕತೆಗೆ ತೀರ ಹತ್ತಿರವೆನಿಸುವ ಅಥವಾ ವಾಸ್ತವಿಕತೆಯೇ ಅನ್ನುವಂತೆ ಕಥೆ ಮುಂದುವರೆಯಿತ್ತಿತ್ತು. ಸಾವು ಉಂಟಾದಾಗ ಮುಂದೆ ಹದಿನೈದು ದಿನ ನಡೆಯುವ ಶ್ರಾದ್ದ ಕರ್ಮಗಳು, ಅದರಲ್ಲೂ ನಗರದ ನಿವಾಸಿಯಾಗಿದ್ದವನು ಹಳ್ಳಿಯಲ್ಲಿ ಬಂದು ಈ ಕರ್ಮಗಳನ್ನು ಮಾಡುವಾಗ ಆತನಲ್ಲಾಗುವ ತೊಳಲಾಟಗಳು ಈ ಕೃತಿಯಲ್ಲಿ ಉತ್ತಮವಾಗಿ ಮೂಡಿಬಂದಿದೆ. ನಂಬಿಕೆ ಮತ್ತು ಶ್ರದ್ದೆ ಇವುಗಳ ನಡುವಿನ ಸಂಬಂಧ ಅಥವಾ ವ್ಯತ್ಯಾಸ ಇದೇ ಕಥೆಗೆ ಜೀವ ಅಂದರೆ ತಪ್ಪಾಗಲಾರದು. ತೀರ ಸಾಧಾ ಕಥೆ ಅನಿಸಿದರೂ ತಿರುಳು ಅಪ್ಪಟ ಹೊನ್ನಂತೆ ಹೊಳೆಯುತ್ತದೆ. ಕಥೆಗೆ ವಸ್ತು ವಿಷಯ ಯಾವುದೇ ಆದರೂ ಆ ವಿಷಯದ ಬಗ್ಗೆ ಸತ್ಯಾಸತ್ಯತೆಯನ್ನು ಬರೆದಾಗ ಮಾತ್ರ ಅದಕ್ಕೊಂದು ಬೆಲೆ ಅನ್ನುವುದನ್ನ ಲೆಖಕರು ಉತ್ತಮವಾಗಿ ನಿರೂಪಿಸಿದ್ದಾರೆ.

ಬೆಂಗಳೂರು ನಿವಾಸಿ ಸುರೇಂದ್ರ ತನ್ನ ತಂದೆ ತೀರಿಕೊಂಡಾಗ ತನ್ನ ಹಳ್ಳಿಗೆ ಬಂದು ಹದಿನೈದು ದಿನಗಳ ಕಾಲ ಮಾಡುವ ಶ್ರಾದ್ದ ಕರ್ಮವೇ ಈ ಕಥೆಗೆ ಜೀವಾಳ. ಹದಿನೈದು ದಿನದಲ್ಲಾಗುವ ಘಟನೆಗಳು, ಆತನಲ್ಲಾಗುವ ಬದಲಾವಣೆಗಳು, ದೇವರು, ಭಕ್ತಿ, ಶ್ರದ್ಧೆ, ನಂಬಿಕೆ, ಕಾಮ ಹೀಗೆ ಅನೇಕಾನೇಕ ವಿಷಗಳನ್ನ ಉತ್ತಮವಾಗಿ ಬಿಂಬಿಸಿದ್ದಾರೆ. ಒಂದೂವರೆ ವರ್ಶದ ಲೇಖಕರ ಪ್ರಯತ್ನ ಫಲ ಕೊಟ್ಟಿದೆ ಅಂತಲೇ ಹೇಳಬಹುದು. ಯಾವುದೇ ಕೃತಿ ರಚಿಸುವಾಗ ಅದಕ್ಕೆ ಬೇಕಾದ ವಿಷಯ, ವಿಷಯಕ್ಕೆ ಸಂಬಂಧಿಸಿದ ಎಲ್ಲ ಮಾಹಿತಿಗಳು ಕೃತಿಕಾರನಿಗೆ ಇರಲೇ ಬೇಕು. ಅದರಂತೆ ಕರಣಂ ಪವನ್ ಪ್ರಸಾದ್ ಕೂಡ ಕೃತಿಗೆ ಬೇಕಾದ ಎಲ್ಲ ಮಾಹಿತಿಗಳನ್ನು ಒಟ್ಟುಗೂಡಿಸಿ, ಜ್ನಾನಿಗಳಿಂದ ಎಲ್ಲ ವಿವರಗಳನ್ನೂ ಕೂಲಂಕುಶವಾಗಿ ತೆಗೆದುಕೊಂಡು ತಮ್ಮ ಜೀವವನ್ನೇ ಈ ಕೃತಿಯಲ್ಲಿ ಎರೆದಿದ್ದಾರೆ ಎನ್ನಬಹುದು. ಈ ಕಷ್ಟಕ್ಕಾಗಿ ಭೇಷ್ ಎನ್ನಲೇಬೇಕು.ಅನೇಕ ಘಟಾನುಘಟಿಗಳು ಈ ಕೃತಿಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಕೃತಿಯ ಪರಿಪಕ್ವತೆಯನ್ನು ಬಿಂಬಿಸುತ್ತದೆ.

ನಂಬಿಕೆ ಮತ್ತು ಶ್ರದ್ಧೆಯ ನಡುವಿನ ವ್ಯತ್ಯಾಸ ತಿಳಿಸುತ್ತಾ "ನಮ್ಮ ಸಮಾಜ ಸಿದ್ಧಾಂತಗಳನ್ನು ನಂಬಲಿಲ್ಲ, ತರ್ಕ ಮಾಡಿತು, ವಿಶ್ಲೇಷಿಸಿತು. ನಮ್ಮದು ನಂಬಿಕೆಯ ಸಮಾಜವಲ್ಲ, ಶ್ರದ್ಧೆಯ ಸಮಾಜ.ದೇವರು, ಕ್ರಿಯೆ ಆಚರಣೆ ಎಲ್ಲವೂ ನಿಂತಿರುವುದು ನಂಬಿಕೆಯ ಮೇಲಲ್ಲ ಶ್ರದ್ಧೆಯ ಮೇಲೆ.ಶ್ರದ್ಧೆಗೂ ನಂಬಿಕೆಗೂ ಬಹಳ ವ್ಯತ್ಯಾಸವಿದೆ, ನಮ್ಮವರಿಗೂ ಇದು ತಿಳಿದಿಲ್ಲ." ಎನ್ನುತ್ತಾರೆ ಲೇಖಕರು. ಮುಂದೆ "ಸಾಮೂಹಿಕ ನಂಬಿಕೆ, ಸಾಮೂಹಿಕ ದರ್ಶನ ಎಲ್ಲವೂ ಸುಳ್ಳು. ದೈವ, ಪುರಾಣ, ಧರ್ಮ ಎಲ್ಲವೂ ವ್ಯಕ್ತಿಗತವಾದದ್ದು. ಕೆಲವರಿಗೆ ಮೂರ್ತಿಯ ಮೇಲೆ ಶ್ರದ್ದೆ, ಕೆಲವರಿಗೆ ಪುರಾಣಗಳ ಬಗ್ಗೆ ಶ್ರದ್ಧೆ ಇನ್ನೂ ಕೆಲವರಿಗೆ ಕಾಣದ ಅಗೋಚರದ ಬಗ್ಗೆ ಶ್ರದ್ಧೆ. ಆ ಶ್ರದ್ಧೆಯನ್ನೇ ಧರ್ಮ ಕಲಿಸಿದ್ದು.ಅವರವರ ಭಾವಕ್ಕೆ ಅವರವರ ಶ್ರದ್ಧೆ" ಅನ್ನುತ್ತಾರೆ. ನಂಬಿಕೆ ಮತ್ತು ಶ್ರದ್ಧೆಯ ನಡುವಿನ ಗೊಂದಲವನ್ನು ದೂರ ಮಾಡುತ್ತಾ " ಶ್ರದ್ಧೆ ಎಂದರೆ ಅಚಲವಾದದ್ದು, ನಂಬಿಕೆ ಚಂಚಲವಾದದ್ದು. ಧರ್ಮದ ಅಸ್ತಿತ್ವ ಮತ್ತು ಆದರ್ಶಕ್ಕೆ ಶ್ರದ್ಧೆ ಮುಖ್ಯವೇ ಹೊರತು ನಂಬಿಕೆಯಲ್ಲ. ನಂಬಿಕೆಗಳು ಬದಲಾಗುತ್ತವೇ ಶ್ರದ್ಧೆ ಬದಲಾಗಲಾರದು. ಹಿಂದೂ ಧರ್ಮ ಶ್ರದ್ಧೆಯ ಮೇಲೆ ನಿಂತಿದೆ ಅದು ಕೇವಲ ನಂಬಿಕೆಯ ಮೇಲೆ ನಿಂತಿದ್ದರೆ ಎಂದೋ ಅಳಿಸಿಹೋಗುತ್ತಿತ್ತು, ಬೇರೆ ನಾಗರಿಕ ಜೀವನ ಶೈಲಿಯ ರೀತಿ" ಅನ್ನುತ್ತಾ ಸ್ಪಷ್ಟೀಕರಣ ನೀಡುತ್ತಾರೆ. ಬಹಳ ದಿನಗಳಿಂದ ಹಿಂದೂ ಧರ್ಮದ ಬಗ್ಗೆ ಅಧ್ಯಯನ ಮಾಡುತ್ತಿದ್ದ ನನಗೆ ಅನೇಕ ಮಾಹಿತಿಗಳು ದೊರೆತಂತಾಯಿತು. ಶಹರದ ಬದುಕಿಗೆ ಒಗ್ಗಿಕೊಂಡು ತಮ್ಮ ಮನೆಯ ರೀತಿ ರಿವಾಜುಗಳನ್ನೆಲ್ಲ ಮರೆತ ಕಥಾನಾಯಕ ತಂದೆಯ ಶ್ರಾದ್ದಕ್ಕೆ ಮನೆಗೆ ಬಂದು ಎಲ್ಲ ಕಾರ್ಯವನ್ನು ಮಾಡುತ್ತಿರುವುದನ್ನು ಕಂಡ ತಾಯಿ ಪ್ರೀತಿಯಿಂದ ಮಗನನ್ನು ತಬ್ಬಿಕೊಂಡಾಗ, ತಾನು ಮಾಡುವ ಕ್ರಿಯೆಗಿಂತ ಒಂದು ಜೀವಕ್ಕೆ ಸಮಾಧಾನ ಸಿಗುವುದಾದರೆ ಆ ಕ್ರಿಯೆಗಿಂತ ಈ ಸಮಾಧಾನ ಮುಖ್ಯ ಅಂದುಕೊಳ್ಳುವ ದೃಶ್ಯ ಮೈ ನವಿರೇಳಿಸುತ್ತದೆ. ವೈಜ್ನಾನಿಕವಾಗಿ ನಮ್ಮ ಧರ್ಮದ ಕೃತಿಗೆ ಇರುವ ಸಂಬಂಧವನ್ನು ಸಾಕ್ಷಾಧಾರವಾಗಿ ನಿರೂಪಿಸಿದ್ದಾರೆ. ಪೂರ್ಣ ಕಾದಂಬರಿ ಒಂದು ಸಿನೆಮಾದ ತರಹ ನಮ್ಮ ಕಣ್ಮುಂದೆ ಹಾದು ಹೋಗುತ್ತದೆ. ಪ್ರತಿ ಪಾತ್ರಗಳು ನಮ್ಮ ಕಣ್ಮುಂದೆ ನಟಿಸುತ್ತಿರುವಂತೆ ಭಾಸವಾಗುತ್ತದೆ. ಈ ಕೃತಿ ಮುಂದೆ ಸಿನೆಮಾ ರೂಪ ಕಂಡರೆ ಅಚ್ಚರಿಯೇನಿಲ್ಲ. ಅನೇಕ ತಿರುವುಗಳು, ಗೊಂದಲಗಳು, ತಿಳಿ ಹಾಸ್ಯ, ತೊಳಲಾಟ, ನಗು, ಅಳು ಎಲ್ಲವನ್ನೂ ಒಳಗೊಂಡ ಕೃತಿಯೇ "ಕರ್ಮ". ಅನೇಕ ಗೊಂದಲಗಳಿಗೆ ಉತ್ತರವೇ "ಕರ್ಮ". ಒಟ್ಟಿನಲ್ಲಿ ಹೇಳಬೇಕೆಂದರೆ ಒಂದು ಪರಿಪೂರ್ಣ ಕೃತಿ "ಕರ್ಮ".

ಅಂತೂ ಪುಸ್ತಕವನ್ನು ಒಂದೇ ಉಸಿರಿಗೆ ಓದಿ ಮುಗಿಸಿದ ಸಮಾಧಾನ ನನಗೆ. ಓದುಗಾರನಿಗೆ ಎಲ್ಲೂ, ಯಾವ ರೀತಿಯಲ್ಲೂ ಅಸಮಾಧಾನವಾಗದಂತೆ ಕಾಳಜಿವಹಿಸಿದ್ದಾರೆ ಲೇಖಕರು. ಹೇಗೆ ಅಮೀರ್ ಖಾನ್ ತನ್ನ ಚಿತ್ರಕ್ಕಾಗಿ ಕಷ್ಟಪಟ್ಟು ಮಿ.ಪರಫೆಕ್ಟ್ ಅನಿಸಿಕೊಂಡಿದ್ದಾರೋ ಅದೇ ರೀತಿ ಕರಣಂ ಕೂಡ ನನಗನಿಸಿದಂತೆ "ಕರ್ಮ"ಕ್ಕಾಗಿ ಮಿ.ಪರಫೆಕ್ಟ್ ಆಗಿದ್ದಾರೆ. ಮುಂಗಾರು ಮಳೆಯಂತ ಚಲನಚಿತ್ರಗಳು ಹೇಗೆ ಅದರ ಕಥೆ,ಹಾಡುಗಳಿಂದ ಪ್ರಸಿದ್ದವಾಗಿದೆಯೋ ಅದೇ ರೀತಿ ಕರ್ಮ ತನ್ನ ಒಳ ತಿರುಳು ಮತ್ತು ಪರಿಪಕ್ವತೆಯಿಂದ ಎಲ್ಲ ಓದುಗರ ಮನಸೂರೆಗೊಂಡರೆ ತಪ್ಪೇನಿಲ್ಲ. ನನ್ನ ಅನೇಕ ಪ್ರಶ್ನೆಗಳಿಗೆ ಈ ಕೃತಿಯ ಮೂಲಕ ಉತ್ತರವನ್ನ ಕಂಡುಕೊಂಡಿದ್ದೇನೆ, ಅದೇ ರೀತಿ ಅನೇಕ ಓದುಗರಿಗೆ ಈ ಕೃತಿ ಮಾದರಿಯಾಗಬಹುದು ಅನ್ನುವುದು ನನ್ನ ಅನಿಸಿಕೆ. ಶಹರದ ಕಟ್ಟುಪಾಡು ಜೀವನಕ್ಕೆ ಒಗ್ಗಿದವರೆಲ್ಲ ಈ ಕೃತಿಯನ್ನು ಓದಿ ತಾವೆಲ್ಲಿದ್ದೇವೆ ಅನ್ನುವುದನ್ನು ಒಮ್ಮೆ ಮುಟ್ಟಿನೋಡಿಕೊಳ್ಳುವಂತೆ ಮಾಡುತ್ತದೆ "ಕರ್ಮ". ಬ್ರಾಹ್ಮಣರಾದವರು ಅವಶ್ಯವಾಗಿಯೇ ಓದಬೇಕಾದ ಕೃತಿ. ಪುಸ್ತಕದ ಬೆಲೆ ಕೇವಲ ನೂರಿಪ್ಪೈದು(೧೨೫/-), ನಿಮ್ಮ ಸಮೀಪದ ಪುಸ್ತಕ ಮಳಿಗೆಯನ್ನ ಇಂದೇ ಸಂಪರ್ಕಿಸಿ.ಆನ್ ಲೈನ್ ಮುಖಾಂತರ ಕೂಡ ಬುಕ್ ಮಾಡಬಹುದು.

"ಕರ್ಮ"ದ ಮೂಲಕ ಅನೇಕ ಪ್ರಶ್ನೆಗಳಿಗೆ, ಗೊಂದಲಗಳಿಗೆ ಉತ್ತರವನ್ನು ನೀಡಿದ ಲೇಖಕ "ಕರಣಂ ಪವನ್ ಪ್ರಸಾದ್" ಅವರಿಗೆ ಎಲ್ಲ ಓದುಗರ ಪರವಾಗಿ ಶುಭ ಹಾರೈಕೆಗಳು. ಇದೇ ರೀತಿಯಾಗಿ ನಿಮ್ಮಿಂದ ಇನ್ನೂ ಅನೇಕ ಕೃತಿಗಳು ಮೂಡಿ ಬರಲಿ ಎಂದು ಹಾರೈಸುತ್ತೇನೆ.
ಶುಭವಾಗಲಿ.

ನಮ್ಮ ಹಿಂದೂ ಧರ್ಮ: ಭಾಗ ೨

ಪಂಚಾಂಗ: ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ, ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ.

ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.

ನಕ್ಷತ್ರಗಳು(೨೭)
01ಅಶ್ವಿನಿ 02ಭರಣಿ 03ಕೃತ್ತಿಕ 04ರೋಹಿಣಿ 05ಮೃಗಶಿರ 06ಆರ್ದ್ರ 07ಪುನರ್ವಸು 08ಪುಷ್ಯ 09ಆಶ್ಲೇಷ 10ಮಘ 11ಹುಬ್ಬ 12ಉತ್ತರಾ 13ಹಸ್ತ 14ಚಿತ್ತಾ 15ಸ್ವಾತಿ 16ವಿಶಾಖ 17ಅನೂರಾಧ 18ಜ್ಯೇಷ್ಠ 19ಮೂಲ 20ಪೂರ್ವಾಷಾಢ 21ಉತ್ತರಾಷಾಢ 22ಶ್ರವಣ 23ಧನಿಷ್ಠ 24ಶತಭಿಷ 25ಪೂರ್ವಾಭಾದ್ರಪದ
26ಉತ್ತರಾಭಾದ್ರಪದ 27ರೇವತಿ

ಮಾಸಗಳು (೧೨)
01 ಚೈತ್ರ 02 ವೈಶಾಖ 03 ಜ್ಯೇಷ್ಠ 04 ಆಷಾಢ 05 ಶ್ರಾವಣ 06 ಭಾದ್ರಪದ 07 ಆಶ್ವೀಜ 08 ಕಾರ್ತೀಕ 09 ಮಾರ್ಗಶಿರ 10 ಪುಷ್ಯ 11 ಮಾಘ 12 ಪಾಲ್ಗುಣ

ಅಧಿಕ ಮಾಸಗಳು
ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ.
ಋತುಗಳು ೬ (೨ ಮಾಸಗಳಿಗೆ ಒಂದು ಋತು)
01 ವಸಂತ ಋತು ( ಚೈತ್ರ - ವೈಶಾಖ)
02 ಗ್ರೀಶ್ಮ ಋತು (ಜ್ಯೇಷ್ಠ - ಆಷಾಢ)
03 ವರ್ಷ ಋತು (ಶ್ರಾವಣ - ಭಾದ್ರಪದ)
04 ಶರದೃತು (ಆಶ್ವೀಜ - ಕಾರ್ತೀಕ)
05 ಹೇಮಂತ ಋತು ( ಮಾರ್ಗಶಿರ - ಪುಷ್ಯ)
06 ಶಿಶಿರ ಋತು (ಮಾಘ - ಪಾಲ್ಗುಣ)

ಅಯನಗಳು (೨)
ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ ರಿಂದ ಜುಲೈ ೧೬ ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಯೋಗಗಳು (೨೭)
ಯೋಗ: ಇಪ್ಪತ್ತೇಳು ನಕ್ಷತ್ರದಂತೆಯೇ ಇಪ್ಪತ್ತೇಳು ಯೋಗಗಳಿರುತ್ತದೆ. ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ಕಾಂತಿವೃತ್ತದಲ್ಲಿರುವ ಮುನ್ನೂರ ಅರವತ್ತು ಅಂಶಗಳನ್ನು ವಿಭಜಿಸಿದ್ದಲ್ಲಿ ೨೭ ಯೋಗಗಳಾಗುತ್ತವೆ. ಯೋಗ ವೆಂದರೆ ಒಗ್ಗೂಡುವಿಕೆ ಎಂದರ್ಥ. ಸೂರ್ಯ ಚಂದ್ರರ ಗತಿಯನ್ನು ಒಟ್ಟೂ ಸೇರಿಸಿದರೆ ಆಗುವುದು ಯೋಗ. ಈ ಒಟ್ಟುಗೂಡುವಿಕೆಯು ೧೩ ಅಂಶ ಮತ್ತು ೨೦ ಕಲೆಗಳಾಗುತ್ತದೆ.
01ವಿಷ್ಕಂಭ 02ಪ್ರೀತಿ 03ಆಯುಷ್ಮಾನ್ 04ಸೌಭಾಗ್ಯ 05ಶೋಭನ 06ಅತಿಗಂಡ 07ಸುಕರ್ಮ 08ಧೃತಿ 09ಶೂಲ 10ಗಂಡ 11ವೃದ್ಢಿ 12ಧ್ರುವ 13ವ್ಯಾಘಾತ 14ಹರ್ಷಣ 15ವಜ್ರ 16ಸಿದ್ಧಿ 17ವ್ಯತೀಪಾತ 18ವರಿಯಾನ್ 19ಪರಿಘ 20ಶಿವ 21ಸಿದ್ಧ 22ಸಾಧ್ಯ 23ಶುಭ 24ಶುಕ್ಲ 25ಬ್ರಹ್ಮ 26ಐಂದ್ರ 27ವೈಧೃತಿ

ಕರಣಗಳು (೧೧)
ಕರಣ: ಇದು ಪಂಚಾಂಗದ ೫ನೇ ಅಂಗ. ತಿಥಿಯ ಅರ್ಧಭಾಗ ಕರಣವಾಗಿರುತ್ತದೆ. ಶುಕ್ಲಪಕ್ಷದ ಪಾಡ್ಯದಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ೩೦ ತಿಥಿಗಳಿರುತ್ತದೆ. ತಿಥಿಯ ಅರ್ಧ ಭಾಗ ಕರಣವೆನಿಸಿದಾಗ ಅರವತ್ತು ಕರಣಗಳಿರುತ್ತದೆ. ಆದರೆ ೬೦ ಕರಣಗಳಿಗೆ ಪ್ರತ್ಯೇಕ ಹೆಸರು ಇರುವುದಿಲ್ಲ. ಕರಣಗಳಿರಿವುದು ೧೧ ಮಾತ್ರ. ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ.ಪೂರ್ವಾರ್ಧದ ಅಂತ್ಯದ ತನಕ ಬವ, ಬಾಲವ ಕೌಲವ, ತೈತಿಲ, ಗರಜ, ವಣಿಜ ಮತ್ತು ಭದ್ರಾಗಳೆಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲಪರಿವರ್ತಿಸಿ ಬರುತ್ತದೆ. ಈ ಕಾರಣದಿಂದ ಇವುಗಳಿಗೆ ಚರಕರಣಗಳೆಂದು ಹೆಸರು. ಶುಕ್ಲ ಪ್ರಥಮ ತಿಥಿಯ ಮೊದಲ ಭಾಗ (ಮೊದಲ ಅರ್ಧಭಾಗ) ಕಿಂಸ್ತುಘ್ನವೆಂಬ ಕರಣ. ಕೃಷ್ಣ ಚತುರ್ದಶಿಯ ಉತ್ತರಾರ್ಧದ ಆರಂಭದಿಂದ (ಎರಡನೆಯ ಅರ್ಧ) ಶಕುನಿ ಎಂಬ ಕರಣ. ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್ ಮತ್ತು ನಾಗವಾನ್ ಎಂಬ ಕರಣಗಳಿವೆ. ಇವು ತಿಂಗಳೊಂದರ ಒಳಗೆ ಪುನರಾವರ್ತಿಸದಿರುವುದರಿಂದ ಸ್ಥಿರಕರಣಗಳು. ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಕರಣಗಳು ಆಗುತ್ತದೆ. ಇದಕ್ಕೆ ನಾಲ್ಕು ಸ್ಥಿರ ಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುವುವು.

01ಬವ 02ಬಾಲವ 03ಕೌಲವ 04ತೈತಿಲ 05ಗರಜ 06ವಣಿಜ 07ಭದ್ರಾ 08ಶಕುನಿ 09ಚತುಷ್ಪಾತ್ 10ನಾಗವಾನ್ 11ಕಿಂಸ್ತುಘ್ನ

ವಿಷ ಮತ್ತು ಅಮೃತ: ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ನಮೂದಿಸಿದ ನಂತರ ವಿಷ ಅಮೃತಗಳ ತಿಳುವಳಿಕೆಯು ಮುಖ್ಯವಾಗಿದೆ. ಪ್ರತಿ ನಕ್ಷತ್ರದಲ್ಲಿಯೂ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳಿಗೆ ವಿಷಕಾಲವೆಂಬ ಸಂಜ್ಞೆಯಿದೆ. ಇದನ್ನು ವಿಷ ಎನ್ನುತ್ತಾರೆ. ಅಂತಯೇ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳ ಕಾಲವನ್ನು ಅಮೃತ ಅಥವಾ ಅಮೃತಕಾಲವೆನ್ನುತ್ತಾರೆ. ಇದು ಆಯಾ ನಕ್ಷತ್ರದ ಪರಮ ಘಟಿಯು ಅರವತ್ತು ಇದ್ದಾಗಿನ ಲೆಕ್ಕಾಚಾರ. ಪರಮಘಟಿಯಲ್ಲಿ ಹೆಚ್ಚು ಕಡಿಮೆಯಾದಾಗ ತ್ರೈರಾಶಿಕ ವಿಧಾನದಿಂದ ವಿಷ ಮತ್ತು ಅಮೃತ ಕಾಲವನ್ನು ನಿರ್ಧರಿಸಲಾಗುವುದು. ಕೆಲವು ಪಂಚಾಂಗದಲ್ಲಿ ವಿಶೇ, ಅಶೇ ಎಂದು ಬರೆದಿರುತ್ತದೆ. ಇವುಗಳಿಗೆ ವಿಷ ಶೇಷ, ಅಮೃತ ಶೇಷವೆಂದು ಅರ್ಥ. ವಿಷಕಾಲವು ದೋಷಗಳಲ್ಲಿ ಸೇರಿರುವುದರಿಂದ ಶುಭ ಕಾರ್ಯಗಳಿಗೆ ವರ್ಜ್ಯವಾದುದು ಮತ್ತು ಅಮೃತಕಾಲವು ಯೋಗ್ಯವಾಗಿರುತ್ತದೆ.

ನಮ್ಮ ಹಿಂದೂ ಧರ್ಮ:

ಧರ್ಮ: ಮುಖ್ಯವಾಗಿ ಧರ್ಮ ಅಂದರೆ ಏನು ಅನ್ನುವುದನ್ನ ತಿಳಿದುಕೊಳ್ಳಬೇಕಾಗಿದೆ. "ಯಾವುದು ಎಲ್ಲರನ್ನೂ ಉಳಿಸಿ ಬೆಳೆಸುತ್ತದೆಯೋ ಅದೇ ಧರ್ಮ. 'ಯದ್ ಧಾರ್ಯತೆ ತದ್ ಧರ್ಮಂ' ಅಂದರೆ ನಾವು ಉಳಿದು ಬೆಳೆಯುವುದಕ್ಕಾಗಿ ಯಾವ ವಿಚಾರಗಳು,ಯಾವ ಆಚರಣೆಗಳು,ಯಾವ ಸಂಪ್ರದಾಯಗಳು ಉಪಯೋಗಕ್ಕೆ ಬರುತ್ತೋ ಅವೆಲ್ಲವೂ ಧರ್ಮ ಅನ್ನಿಸಿಕೊಳ್ಳುತ್ತೆ.ಎಲ್ಲರಿಗೂ ಉಳಿದು ಬೆಳೆಯುವುದಕ್ಕೆ ಸಹಾಯ ಮಾಡುವ ವಿಚಾರಗಳೇ ಧರ್ಮ."  ಧರ್ಮ ಅನ್ನುವುದು ವ್ಯಕ್ತಿಗತವಲ್ಲ ಅಂದರೆ ಯಾವುದೆ ವ್ಯಕ್ತಿಯಿಂದ ರಚಿಸಲ್ಪಟ್ಟದ್ದಲ್ಲ. ಅದು ತಲೆತಲಾಂತರಗಳಿಂದ ಬಂದಿರುವಂತದ್ದು. ಉದಾಹರಣೆ ಅಂದರೆ ಹಿಂದೂ ಧರ್ಮ. ಈ ಧರ್ಮವನ್ನು ಯಾವುದೇ ವ್ಯಕ್ತಿ ಸ್ಥಾಪಿಸಿದ್ದು ಅಂತ ಹೇಳಲು ಸಾಧ್ಯವಿಲ್ಲ.

ಇನ್ನು ಪಂಥಗಳ ಬಗ್ಗೆ ಸ್ವಲ್ಪ ತೀಳಿದುಕೊಳ್ಳೋಣ. ಪಂಥಗಳು ಅಥವಾ ಮತಗಳು ಎನ್ನಬಹುದು, ಇದು ವ್ಯಕತಿಗತವಾದದ್ದು ಅಂದರೆ ಒಬ್ಬ ವ್ಯಕ್ತಿಯಿಂದ ಸ್ಥಾಪಿತವಾದದ್ದು ಅಥವಾ ವ್ಯಕ್ಯಿಯನ್ನು ಅನುಸರಿಸುವಂತದ್ದು ಅನ್ನಬಹುದು. ಉದಾಹರಣೆಗೆ ಮುಸ್ಲೀಮ್ ಪಂಥ (ಪೈಗಂಬರರಿಂದ ಸ್ಥಾಪಿತವಾದದ್ದು) ಕ್ರಿಸ್ಚಿಯನ್ ಪಂಥ (ಏಸುವಿನಿಂದ ಸ್ಥಾಪಿತವಾದದ್ದು) ಅಂತ ಹೇಳಬಹುದು. ಹಿಂದೂ ಧರ್ಮದಲ್ಲಿ ಮುಖ್ಯ ಪಂಥಗಳೆಂದರೆ ಶೈವ(ಶಿವನ ಆರಾಧಕರು) ವೈಷ್ಣವ(ವಿಷ್ಣುವಿನ ಆರಾಧಕರು) ಹೀಗೆ.

ಈಗ ತಮಗೆಲ್ಲ ಧರ್ಮಕ್ಕೂ ಪಂಥಕ್ಕೂ ಇರುವ ವ್ಯತ್ಯಾಸ ಚೆನ್ನಾಗಿ ತಿಳಿದಿದೆ ಅಂದುಕೊಳ್ಳುತ್ತೇನೆ. ಸೂಕ್ಷ್ಮವಾಗಿ ಗಮನಿಸಿದಾಗ ತಿಳಿದುಬರುವುದೆನೆಂದರೆ ವಿಶ್ವಕ್ಕೆಲ್ಲ ಇದ್ದದ್ದು ಒಂದೇ ಧರ್ಮ ಅದುವೇ ಹಿಂದೂ ಧರ್ಮ. ಉಳಿದವೆಲ್ಲ ಪಂಥಗಳು ಅಥವಾ ಮತಗಳು. ಯಾಕೆಂದರೆ ಹಿಂದೂ ಧರ್ಮವು ಇಂಥವರಿಂದಲೇ ಅಥವಾ ಇದೇ ಕಾಲದಲ್ಲಿ ಸ್ಥಾಪಿತವಾಗಿದೆ ಅಂತ ಹೇಳಲಸಾಧ್ಯ. 

ಹಿಂದೂ ಧರ್ಮ:
ಹಿಂದೂ ಧರ್ಮಕ್ಕೆ ಇದ್ದ ಮೂಲ ಹೆಸರೆಂದರೆ "ಸನಾತನ ಧರ್ಮ". ಸಿಂಧೂ ನದಿಯ ತೀರದಲ್ಲಿ ಅಭಿವೃದ್ದಿ ಹೊಂದಿದ ಈ ಸಂಸ್ಕ್ರತಿಯನ್ನು ಶತಮಾನಗಳ ಹಿಂದೆಯೇ ಪರ್ಶಿಯನ್ನರು "ಹಿಂದೂ" ಎಂದು ಕರೆದರು.(ಅವರಲ್ಲಿ 'ಸ'ಕಾರ 'ಹ'ಕಾರವಾಗಿ ಉಚ್ಚರಿಸಲ್ಪಡುತ್ತದೆ) ಕ್ರಮೇಣ ಹಿಂದೂ ಸಂಸ್ಕ್ರತಿಯವರು ಆಚರಿಸುವ ಸನಾತನ ಧರ್ಮ, ಹಿಂದೂ ಧರ್ಮವಾಗಿಯೂ ಅದರ ಸದಸ್ಯರು ಹಿಂದುಗಳಾಗಿಯೂ ಸ್ಥಾಪಿತರಾದರು. ಸನಾತನ ಧರ್ಮವನ್ನು "ಆಧ್ಯಾತ್ಮದ ತೊಟ್ಟಿಲು" ಎಂತಲೂ "ಎಲ್ಲ ಧರ್ಮಗಳ ತಾಯಿ" ಎಂತಲೂ ಕರೆಯುತ್ತಾರೆ.ಹೀಗೊಂದು ಹೆಸರಿನಿಂದ ಬಂಧಿಸಲ್ಪಟ್ಟ ಸನಾತನ ಧರ್ಮದ ಬೆಳವಣಿಗೆ ನಿಂತುಹೋಯಿತು. ಮುಂದೆ, ಇದೇ ಚೌಕಟ್ಟಿನೊಳಗೆ ಹಲವು ಪ್ರಯೋಗಗಳು ನಡೆದು ವಿಭಿನ್ನ- ವಿಶಿಷ್ಟ ‘ಭಾರತೀಯ ಸಂಸ್ಕೃತಿಯ’ ಉಗಮವಾಯ್ತು.ಜಗತ್ತಿನ ಪ್ರಪ್ರಾಚೀನ ಸಂಸ್ಕೃತಿಗಳಲ್ಲಿ ಹಿಂದೂ ಸಂಸ್ಕೃತಿಗೆ ಮಹತ್ತ್ವದ ಸ್ಥಾನವಿದೆ. ಇತ್ತೀಚಿನ ದಿನಗಳಲ್ಲಿ ‘ಹಿಂದೂ’ ಎನ್ನುವುದು ‘ಜಾತಿ’ವಾಚಕ ಪದವಾಗಿ ಅರ್ಥಾಂತರಗೊಂಡಿರುವುದರಿಂದ, ಈ ಸಂಸ್ಕೃತಿಯು ಉಗಮಗೊಂಡು ಬೆಳೆದುಬಂದಿರುವ ಭಾರತ ದೇಶವನ್ನು ಆಧಾರವಾಗಿಟ್ಟುಕೊಂಡು ‘ಭಾರತೀಯ ಸಂಸ್ಕೃತಿ’ ಎಂದು ಕರೆಯುವುದು ಸೂಕ್ತವೆನಿಸುತ್ತದೆ. ಇಷ್ಟಕ್ಕೂ ‘ಹಿಂದೂ’ ಎನ್ನುವುದು ಒಂದು ಧರ್ಮ. ‘ಧರ್ಮ’ ಅಂದರೆ ‘ಜಾತಿ’ಯಲ್ಲ. ಅದು ಜೀವನ ವಿಧಾನ. ಈ ಜೀವನ ವಿಧಾನದಿಂದ ಮಾನವನ ಆಂತರಿಕ ಪ್ರಗತಿಯುಂಟಾಗಿ ‘ಸಂಸ್ಕೃತಿ’ಯೂ, ಲೌಕಿಕ ಪ್ರಗತಿಯುಂಟಾಗಿ ‘ನಾಗರಿಕತೆ’ಯೂ ಬೆಳೆದುಬಂದವು. 

ಭಾರತದ ಇತಿಹಾಸ ಇಸವಿಗಳ ಲೆಕ್ಕಾಚಾರಕ್ಕೆ ಸಿಕ್ಕುವಂಥದ್ದಲ್ಲ. ನಮ್ಮ ವೈದಿಕ ಪರಂಪರೆಯ ಕಾಲಮಾನ ಸುಮಾರು ಕ್ರಿ.ಪೂ. ೧೦,೦೦೦ದಿಂದ ೭,೦೦೦ ವರ್ಷಗಳು ಎಂದು ಹೇಳಲಾಗುತ್ತದೆ. ಉತ್ಖನನ, ಅಧ್ಯಯನಗಳ ಪುರಾವೆಯಂತೆ, ಇದು ಕನಿಷ್ಠ ಪಕ್ಷ ಕ್ರಿ.ಪೂ. ೫,೦೦೦ವರ್ಷಗಳಿಗಿಂತ ಹಿಂದಿನದು.ಹಿಂದೂ ಧರ್ಮದ ಮೌಲ್ಯಗಳನ್ನೊಳಗೊಂಡ ‘ಹಿಂದೂ ಜಾತಿ’- ಜಾತಿಯಾಗಿ ಗುರುತಿಸಲ್ಪಟ್ಟಿದ್ದು, ಇಸ್ಲಾಮ್, ಇಸಾಯಿ ಮತಗಳ ಉಗಮದ ನಂತರವಷ್ಟೇ. ಅವಕ್ಕೆ ಮುಂಚಿನ ಬೌದ್ಧ , ಜೈನ ಪಂಥಗಳು ಮೋಕ್ಷ ಸಾಧನೆಗಾಗಿ ಕವಲೊಡೆದ ಮಾರ್ಗಗಳಾಗಿ ಗುರುತಿಸಲ್ಪಟ್ಟಿದ್ದವು. ಹಾಗೆಂದೇ ನಾವು ಬೌದ್ಧ- ಜೈನ ಪಂಥಗಳ ದೇವತೆಗಳು, ಪುರಾಣಗಳು, ದೇವಾಲಯಗಳಲ್ಲಿ ಹಿಂದೂ ಧರ್ಮದ ಸಾಮ್ಯತೆ- ಪ್ರಭಾವಗಳನ್ನು ಧಾರಾಳವಾಗಿ ಕಾಣಬಹುದು. ದುರಂತವೆಂದರೆ, ಇಂದು ಹಿಂದೂ ಜಾತಿ, ಹಿಂದೂ ಧರ್ಮದ ಉದಾತ್ತ ಮೌಲ್ಯಗಳನ್ನು ಮರೆಯುತ್ತ, ಅವನ್ನು ಅಪಮೌಲ್ಯಗೊಳಿಸುತ್ತ, ಮಾತೃಧರ್ಮಕ್ಕೆ ಧಕ್ಕೆಯುಂಟು ಮಾಡುತ್ತ ಸಾಗಿರುವುದು. ಇಂದು ನೈಜ ಹಿಂದೂ ಧರ್ಮದ ಪ್ರತಿಪಾದಕರು, ಅನುಚರರು ಕಾಣುವುದು ಅತಿ ವಿರಳ. 

ಹಿಂದೂ ಧರ್ಮದ ಪ್ರಮುಖ ಸಂಕೇತವೆಂದರೆ 'ಪ್ರಣವ' ಅಥವಾ 'ಓಂ'. ಪ್ರಣವ ಅಂದರೆ ಸದಾ ನೂತನ ಅಥವಾ ಫಲಕಾರಿಯಾದ ದೈವವನ್ನು ಸ್ತುತಿಸುವುದು ಎಂದರ್ಥ.ಹಿಂದೂ ದರ್ಮವನ್ನ 'ವೈದಿಕ ಧರ್ಮ'ವೆಂತಲೂ 'ಆರ್ಯ ಧರ್ಮ'ವೆಂತಲೂ ಕರೆಯುವುದುಂಟು. ಹಿಂದೂ ಧರ್ಮದ ಮೂಲ ಗ್ರಂಥಗಳನ್ನು 'ಶೃತಿ' ಮತ್ತು 'ಸ್ಮೃತಿ' ಗಳೆಂದು ವಿಭಾಗಿಸಲಾಗಿದೆ. ಶೃತಿ ಎಂದರೆ ಕೇಳಿಸಿಕೊಂಡದ್ದು ಎಂದರ್ಥ. ವೇದಗಳನ್ನು ಶೃತಿ ಎನ್ನುತ್ತಾರೆ, ವೇದಗಳು ಯಾರಿಂದ ರಚಿಸಲ್ಪಟ್ಟದ್ದಲ್ಲ. ಸ್ಮೃತಿ ಎಂದರೆ ನೆನಪಿನಲ್ಲಿ ಉಳಿದದ್ದು ಎಂದರ್ಥ.ಉದಾಹರಣೆಗೆ ಮನುಸ್ಮೃತಿ.ಸ್ಮೃತಿಯನ್ನು ರೂಪಿಸುವ ಸಾಹಿತ್ಯವನ್ನು ವೇದಗಳ ನಂತರ ಸುಮಾರು ಕ್ರಿ.ಪೂ. ೫೦೦ರ ಹೊತ್ತಿಗೆ ರಚಿಸಲಾಯಿತು.

ಇನ್ನು ಹಿಂದೂ ಧರ್ಮದ ಕೆಲವು ತತ್ವಗಳ ಬಗ್ಗೆ ತಿಳಿಯೋಣ.
ವೇದಗಳು: ಋಗ್ವೇದ, ಯಜುರ್ವೇದ, ಸಾಮವೇದ, ಅಥರ್ವವೇದ.
ವರ್ಣಗಳು: ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ.
ಆಶ್ರಮಗಳು: ಬ್ರಹ್ಮಚರ್ಯ, ಗೃಹಸ್ಥ, ವಾನಪ್ರಸ್ಥ, ಸನ್ಯಾಸ.
ಪುರುಷಾರ್ಥ: ಧರ್ಮ, ಅರ್ಥ, ಕಾಮ, ಮೋಕ್ಷ.
ಮೋಕ್ಷಮಾರ್ಗಗಳು: ಜ್ನಾನ, ಕರ್ಮ, ಭಕ್ತಿ.
(ಇವುಗಳ ಬಗ್ಗೆ ವಿವರವಾಗಿ ಮುಂದೆ ತಿಳಿಯೋಣ).

ಸ್ವಲ್ಪ ಹಿಂದೂ ಧರ್ಮದ ಬಗ್ಗೆ ತಿರಸ್ಕಾರ ಮತ್ತು ಹೊಸ ಮತಗಳ ಉದಯಕ್ಕೆ ಕಾರಣ ಏನು ಅನ್ನುವುದನ್ನ ತಿಳಿಯೋಣ.
ಹಿಂದೂ ಧರ್ಮದ ಹಲವು ದೋಷಗಳು ಮತ್ತು ದಬ್ಬಾಳಿಕೆಗಳು.
ಬ್ರಾಹ್ಮಣರ ಪ್ರಾಬಲ್ಯ.
ಕಠೋರ ಆಚರಣೆಗಳು ಮತ್ತು ಪ್ರಾಣಿಬಲಿ.
ಜನ ಸಾಮಾನ್ಯರಿಗೆ ಅರ್ಥವಾಗದ ಹಿಂದೂ ಗ್ರಂಥಗಳು.
ಜಾತಿ ಪದ್ಧತಿ ಮತ್ತು ಅಸ್ಪೃಶ್ಯತೆ.

ಇಂದಿನ ಕಾಲದಲ್ಲಿ ಹಿಂದೂ ಧರ್ಮದ ಬಗ್ಗೆ ತಾತ್ಸಾರ ಉಂಟಾಗಲು ಮುಖ್ಯ ಕಾರಣವೆಂದರೆ ಹಿಂದೂ ಧರ್ಮದಲ್ಲಿನ ಆಚಾರ ವಿಚಾರಗಳು. ಸಿದ್ಧಾಂತಗಳು, ಹಲವಾರು ಧರ್ಮ ಗ್ರಂಥಗಳು, ಪಂಥಗಳು (ಶೈವ, ವೈಷ್ಣವ, ಚಿತ್ಪಾವನ, ದೇಶಸ್ಥ, ಹವ್ಯಕ) ಪುರಾಣಗಳು ಹೀಗೆ ಬ್ರಾಹ್ಮಣ ಸಮಾಜದಲ್ಲಿ ಒಡಕು ಉಂಟಾಗಿದೆ. ಒಬ್ಬರ ಆಚರಣೆಗಳು ಇನ್ನೊಬ್ಬರಿಗೆ ಮಾನ್ಯವಿಲ್ಲದಿರುವುದು. ಪ್ರತಿಯೊಬ್ಬರೂ ತಮ್ಮದೇ ಆದ ಆಚರಣೆಗಳನ್ನು ಅನುಸರಿಸುತ್ತ ಇನ್ನೊಬ್ಬರ ಆಚರಣೆಗಳನ್ನು ದೂಷಿಸುತ್ತಿರುವುದು ನಮ್ಮ ಧರ್ಮದಲ್ಲಿ ಒಡಕು ಉಂಟಾಗಲು ಮುಖ್ಯ ಕಾರಣವಾಗಿದೆ.