ನಮ್ಮ ಹಿಂದೂ ಧರ್ಮ: ಭಾಗ ೨

ಪಂಚಾಂಗ: ಹಿಂದೂಗಳ ಸೌರಮಾನ,ಚಾಂದ್ರಮಾನ ರೀತಿಯ ಕಾಲಗಣನೆಗೆ ಪಂಚಾಂಗವೆಂದು ಕರೆಯುತ್ತಾರೆ.ಪಂಚಾಂಗವೆಂದರೆ, ಪಂಚ + ಅಂಗ = ಐದು ಅಂಗಗಳನ್ನು ಒಳಗೊಂಡದ್ದು. ತಿಥಿ , ವಾರ , ನಕ್ಷತ್ರ , ಯೋಗ, ಮತ್ತು ಕರಣಗಳು - ಇವೇ ಆ ಐದು ಅಂಗಗಳು.ಇವುಗಳಿಗೆ ಸಂಬಂಧಪಟ್ಟ ಮಾಹಿತಿಯನ್ನು ತಿಳಿಸುವಂಥದ್ದು ಪಂಚಾಂಗ.

ತಿಥಿಗಳು ಮೂವತ್ತು(೩೦). ೩೦ ತಿಥಿಗಳನ್ನು ಎರಡು ಪಕ್ಷಗಳಲ್ಲಿ ೧೫ರಂತೆ ಎಣಿಕೆ ಮಾಡಲಾಗುತ್ತದೆ. ಪಾಡ್ಯ(ಪ್ರತಿಪದೆ)ದಿಂದ ಮೊದಲುಗೊಂಡು ಹುಣ್ಣಿಮೆಯವರೆಗೆ ಬರುವ ಮೊದಲ ೧೫ ತಿಥಿ(ದಿನ)ಗಳಿಗೆ ಶುಕ್ಲಪಕ್ಷವೆಂತಲೂ, ಪಾಡ್ಯದಿಂದ ಅಮಾವಾಸ್ಯೆಯವರೆಗೆ ಬರುವ ಮುಂದಿನ ೧೫ ತಿಥಿ(ದಿನ)ಗಳಿಗೆ ಕೃಷ್ಣಪಕ್ಷವೆಂತಲೂ ಕರೆಯುತ್ತಾರೆ.

ವಾರಗಳು ಏಳು (೭). ಅವು ಸೋಮವಾರ, ಮಂಗಳವಾರ, ಬುಧವಾರ, ಗುರುವಾರ, ಶುಕ್ರವಾರ, ಶನಿವಾರ ಮತ್ತು ಭಾನುವಾರ. ನವಗ್ರಹಗಳಲ್ಲಿ ರಾಹು,ಕೇತುಗಳನ್ನು ಬಿಟ್ಟು ಮಿಕ್ಕ ಏಳು ಅಂದರೆ ಚಂದ್ರ, ಮಂಗಳ, ಬುಧ, ಗುರು, ಶುಕ್ರ, ಶನಿ ಹಾಗೂ ರವಿ -ಈ ಗ್ರಹಗಳ ಹೆಸರಿನಿಂದ ವಾರಗಳಿಗೆ ಹೆಸರಿಸಿದೆ.

ನಕ್ಷತ್ರಗಳು(೨೭)
01ಅಶ್ವಿನಿ 02ಭರಣಿ 03ಕೃತ್ತಿಕ 04ರೋಹಿಣಿ 05ಮೃಗಶಿರ 06ಆರ್ದ್ರ 07ಪುನರ್ವಸು 08ಪುಷ್ಯ 09ಆಶ್ಲೇಷ 10ಮಘ 11ಹುಬ್ಬ 12ಉತ್ತರಾ 13ಹಸ್ತ 14ಚಿತ್ತಾ 15ಸ್ವಾತಿ 16ವಿಶಾಖ 17ಅನೂರಾಧ 18ಜ್ಯೇಷ್ಠ 19ಮೂಲ 20ಪೂರ್ವಾಷಾಢ 21ಉತ್ತರಾಷಾಢ 22ಶ್ರವಣ 23ಧನಿಷ್ಠ 24ಶತಭಿಷ 25ಪೂರ್ವಾಭಾದ್ರಪದ
26ಉತ್ತರಾಭಾದ್ರಪದ 27ರೇವತಿ

ಮಾಸಗಳು (೧೨)
01 ಚೈತ್ರ 02 ವೈಶಾಖ 03 ಜ್ಯೇಷ್ಠ 04 ಆಷಾಢ 05 ಶ್ರಾವಣ 06 ಭಾದ್ರಪದ 07 ಆಶ್ವೀಜ 08 ಕಾರ್ತೀಕ 09 ಮಾರ್ಗಶಿರ 10 ಪುಷ್ಯ 11 ಮಾಘ 12 ಪಾಲ್ಗುಣ

ಅಧಿಕ ಮಾಸಗಳು
ಸೂರ್ಯನು ಯಾವುದೇ ರಾಶಿಯಲ್ಲೂ ಪ್ರಯಾಣಿಸದೇ ಒಂದು ಚಾಂದ್ರಮಾನ ಮಾಸದಲ್ಲಿ ಸಂಪೂರ್ಣವಾಗಿ ಒಂದು ರಾಶಿಯ ಒಳಗೇ ಚಲಿಸುತ್ತದ್ದರೇ (ಅಂದರೆ ಅಮಾವಾಸ್ಯೆಗೆ ಮೊದಲು), ಆ ಚಾಂದ್ರಮಾನ ಮಾಸವನ್ನು ಮುಂಬರುವ ಮೊದಲ ಸಂಕ್ರಮಣದ ಪ್ರಕಾರ ಹೆಸರಿಸಲಾಗುತ್ತದೆ. ಅದು ಅಧಿಕ ಎಂಬ ಉಪಾಧಿಯನ್ನು ತೆಗೆದುಕೊಳ್ಳುತ್ತದೆ. ಉದಾಹರಣೆಗೆ, ಒಂದು ಚಾಂದ್ರಮಾನ ಮಾಸವು ಸಂಕ್ರಮಣವಿಲ್ಲದೆಯೇ ಸರಿದುಹೋದರೆ ಮತ್ತು ಮುಂದಿನ ಸಂಕ್ರಮಣವು ಮೇಷದಲ್ಲಿದ್ದರೆ, ಸಂಕ್ರಮಣವಿಲ್ಲದ ಆ ಮಾಸವನ್ನು ಅಧಿಕ ಚೈತ್ರವೆಂದು ಹೆಸರಿಸಲಾಗುತ್ತದೆ.
ಋತುಗಳು ೬ (೨ ಮಾಸಗಳಿಗೆ ಒಂದು ಋತು)
01 ವಸಂತ ಋತು ( ಚೈತ್ರ - ವೈಶಾಖ)
02 ಗ್ರೀಶ್ಮ ಋತು (ಜ್ಯೇಷ್ಠ - ಆಷಾಢ)
03 ವರ್ಷ ಋತು (ಶ್ರಾವಣ - ಭಾದ್ರಪದ)
04 ಶರದೃತು (ಆಶ್ವೀಜ - ಕಾರ್ತೀಕ)
05 ಹೇಮಂತ ಋತು ( ಮಾರ್ಗಶಿರ - ಪುಷ್ಯ)
06 ಶಿಶಿರ ಋತು (ಮಾಘ - ಪಾಲ್ಗುಣ)

ಅಯನಗಳು (೨)
ಉತ್ತರಾಯಣ ಮತ್ತು ದಕ್ಷಿಣಾಯನ ಪ್ರತಿ ವರ್ಷದ ಜನವರಿ ೧೪ ರಿಂದ ಜುಲೈ ೧೬ ರವರೆಗೆ ಸೂರ್ಯನು ಉತ್ತರಕ್ಕೆ ಸಂಚರಿಸುವುದರಿಂದ ಉತ್ತರಾಯಣವೆಂದೂ, ಜುಲೈ ೧೬ರಿಂದ ಜನವರಿ ೧೪ ರವರೆಗೆ ಸೂರ್ಯನು ದಕ್ಷಿಣ ದಿಕ್ಕಿಗೆ ಬಾಗಿ ಸಂಚರಿಸುವುದರಿಂದ ದಕ್ಷಿಣಾಯಣವೆಂದೂ ಗುರುತಿಸಲಾಗಿದೆ.

ಯೋಗಗಳು (೨೭)
ಯೋಗ: ಇಪ್ಪತ್ತೇಳು ನಕ್ಷತ್ರದಂತೆಯೇ ಇಪ್ಪತ್ತೇಳು ಯೋಗಗಳಿರುತ್ತದೆ. ಹದಿಮೂರು ಅಂಶ ಮತ್ತು ಇಪ್ಪತ್ತು ಕಲೆಗಳನ್ನು ಕಾಂತಿವೃತ್ತದಲ್ಲಿರುವ ಮುನ್ನೂರ ಅರವತ್ತು ಅಂಶಗಳನ್ನು ವಿಭಜಿಸಿದ್ದಲ್ಲಿ ೨೭ ಯೋಗಗಳಾಗುತ್ತವೆ. ಯೋಗ ವೆಂದರೆ ಒಗ್ಗೂಡುವಿಕೆ ಎಂದರ್ಥ. ಸೂರ್ಯ ಚಂದ್ರರ ಗತಿಯನ್ನು ಒಟ್ಟೂ ಸೇರಿಸಿದರೆ ಆಗುವುದು ಯೋಗ. ಈ ಒಟ್ಟುಗೂಡುವಿಕೆಯು ೧೩ ಅಂಶ ಮತ್ತು ೨೦ ಕಲೆಗಳಾಗುತ್ತದೆ.
01ವಿಷ್ಕಂಭ 02ಪ್ರೀತಿ 03ಆಯುಷ್ಮಾನ್ 04ಸೌಭಾಗ್ಯ 05ಶೋಭನ 06ಅತಿಗಂಡ 07ಸುಕರ್ಮ 08ಧೃತಿ 09ಶೂಲ 10ಗಂಡ 11ವೃದ್ಢಿ 12ಧ್ರುವ 13ವ್ಯಾಘಾತ 14ಹರ್ಷಣ 15ವಜ್ರ 16ಸಿದ್ಧಿ 17ವ್ಯತೀಪಾತ 18ವರಿಯಾನ್ 19ಪರಿಘ 20ಶಿವ 21ಸಿದ್ಧ 22ಸಾಧ್ಯ 23ಶುಭ 24ಶುಕ್ಲ 25ಬ್ರಹ್ಮ 26ಐಂದ್ರ 27ವೈಧೃತಿ

ಕರಣಗಳು (೧೧)
ಕರಣ: ಇದು ಪಂಚಾಂಗದ ೫ನೇ ಅಂಗ. ತಿಥಿಯ ಅರ್ಧಭಾಗ ಕರಣವಾಗಿರುತ್ತದೆ. ಶುಕ್ಲಪಕ್ಷದ ಪಾಡ್ಯದಿಂದ ಕೃಷ್ಣಪಕ್ಷದ ಅಮಾವಾಸ್ಯೆಯವರೆಗೆ ೩೦ ತಿಥಿಗಳಿರುತ್ತದೆ. ತಿಥಿಯ ಅರ್ಧ ಭಾಗ ಕರಣವೆನಿಸಿದಾಗ ಅರವತ್ತು ಕರಣಗಳಿರುತ್ತದೆ. ಆದರೆ ೬೦ ಕರಣಗಳಿಗೆ ಪ್ರತ್ಯೇಕ ಹೆಸರು ಇರುವುದಿಲ್ಲ. ಕರಣಗಳಿರಿವುದು ೧೧ ಮಾತ್ರ. ಶುಕ್ಲಪಕ್ಷದ ಪಾಡ್ಯದ ಉತ್ತರಾರ್ಧದಿಂದ ಆರಂಭಿಸಿ ಕೃಷ್ಣಪಕ್ಷದ ಚತುರ್ದಶಿಯ.ಪೂರ್ವಾರ್ಧದ ಅಂತ್ಯದ ತನಕ ಬವ, ಬಾಲವ ಕೌಲವ, ತೈತಿಲ, ಗರಜ, ವಣಿಜ ಮತ್ತು ಭದ್ರಾಗಳೆಂಬ ಏಳು ಕರಣಗಳು ಅನುಕ್ರಮವಾಗಿ ಎಂಟು ಸಲಪರಿವರ್ತಿಸಿ ಬರುತ್ತದೆ. ಈ ಕಾರಣದಿಂದ ಇವುಗಳಿಗೆ ಚರಕರಣಗಳೆಂದು ಹೆಸರು. ಶುಕ್ಲ ಪ್ರಥಮ ತಿಥಿಯ ಮೊದಲ ಭಾಗ (ಮೊದಲ ಅರ್ಧಭಾಗ) ಕಿಂಸ್ತುಘ್ನವೆಂಬ ಕರಣ. ಕೃಷ್ಣ ಚತುರ್ದಶಿಯ ಉತ್ತರಾರ್ಧದ ಆರಂಭದಿಂದ (ಎರಡನೆಯ ಅರ್ಧ) ಶಕುನಿ ಎಂಬ ಕರಣ. ಅಮಾವಾಸ್ಯೆಯ ಪೂರ್ವಾರ್ಧ ಮತ್ತು ಉತ್ತರಾರ್ಧಗಳಲ್ಲಿ ಚತುಷ್ಪಾತ್ ಮತ್ತು ನಾಗವಾನ್ ಎಂಬ ಕರಣಗಳಿವೆ. ಇವು ತಿಂಗಳೊಂದರ ಒಳಗೆ ಪುನರಾವರ್ತಿಸದಿರುವುದರಿಂದ ಸ್ಥಿರಕರಣಗಳು. ಏಳು ಚರಣಗಳ ಎಂಟು ಆವರ್ತನೆಗೆ ಐವತ್ತಾರು ಕರಣಗಳು ಆಗುತ್ತದೆ. ಇದಕ್ಕೆ ನಾಲ್ಕು ಸ್ಥಿರ ಕರಣಗಳನ್ನು ಸೇರಿಸಿದಾಗ ಮೂವತ್ತು ತಿಥಿಗಳಲ್ಲಿ ಒಂದು ತಿಂಗಳಲ್ಲಿ ಅರವತ್ತು ಕರಣಗಳಾಗುವುವು.

01ಬವ 02ಬಾಲವ 03ಕೌಲವ 04ತೈತಿಲ 05ಗರಜ 06ವಣಿಜ 07ಭದ್ರಾ 08ಶಕುನಿ 09ಚತುಷ್ಪಾತ್ 10ನಾಗವಾನ್ 11ಕಿಂಸ್ತುಘ್ನ

ವಿಷ ಮತ್ತು ಅಮೃತ: ಪಂಚಾಂಗದಲ್ಲಿ ತಿಥಿ, ವಾರ, ನಕ್ಷತ್ರ, ಯೋಗ ಮತ್ತು ಕರಣಗಳೆಂಬ ಐದು ಅಂಗಗಳನ್ನು ನಮೂದಿಸಿದ ನಂತರ ವಿಷ ಅಮೃತಗಳ ತಿಳುವಳಿಕೆಯು ಮುಖ್ಯವಾಗಿದೆ. ಪ್ರತಿ ನಕ್ಷತ್ರದಲ್ಲಿಯೂ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳಿಗೆ ವಿಷಕಾಲವೆಂಬ ಸಂಜ್ಞೆಯಿದೆ. ಇದನ್ನು ವಿಷ ಎನ್ನುತ್ತಾರೆ. ಅಂತಯೇ ನಿರ್ದಿಷ್ಟ ಘಟಿಗಳು ಕಳೆದ ಆನಂತರದ ನಾಲ್ಕು ಘಟಿಗಳ ಕಾಲವನ್ನು ಅಮೃತ ಅಥವಾ ಅಮೃತಕಾಲವೆನ್ನುತ್ತಾರೆ. ಇದು ಆಯಾ ನಕ್ಷತ್ರದ ಪರಮ ಘಟಿಯು ಅರವತ್ತು ಇದ್ದಾಗಿನ ಲೆಕ್ಕಾಚಾರ. ಪರಮಘಟಿಯಲ್ಲಿ ಹೆಚ್ಚು ಕಡಿಮೆಯಾದಾಗ ತ್ರೈರಾಶಿಕ ವಿಧಾನದಿಂದ ವಿಷ ಮತ್ತು ಅಮೃತ ಕಾಲವನ್ನು ನಿರ್ಧರಿಸಲಾಗುವುದು. ಕೆಲವು ಪಂಚಾಂಗದಲ್ಲಿ ವಿಶೇ, ಅಶೇ ಎಂದು ಬರೆದಿರುತ್ತದೆ. ಇವುಗಳಿಗೆ ವಿಷ ಶೇಷ, ಅಮೃತ ಶೇಷವೆಂದು ಅರ್ಥ. ವಿಷಕಾಲವು ದೋಷಗಳಲ್ಲಿ ಸೇರಿರುವುದರಿಂದ ಶುಭ ಕಾರ್ಯಗಳಿಗೆ ವರ್ಜ್ಯವಾದುದು ಮತ್ತು ಅಮೃತಕಾಲವು ಯೋಗ್ಯವಾಗಿರುತ್ತದೆ.

No comments:

Post a Comment