ನನಗೆ ತೋಚಿದ ಸಾಲುಗಳು.

 * 
ಮೂರು ದಿನದ ಜೀವನ:

ನಿನ್ನೆ ಕವಿತೆ ಬರೆದೆ ಕಾಣದಿರುವ ನಲ್ಲೆಯ ಕನಸ ಕಾಣುತ, 
ಇಂದು ಕವಿತೆ ಬರೆದೆ ನೀನೆ ನನ್ನ ಜೀವ ಎಂದು ಹೊಗಳುತ,
ನಾಳೆ ಕವಿತೆ ಬರೆಯಬೇಕಾಗಿದೆ ನೀ ಏಕೆ ದೂರವಾದೆ ಎನ್ನುತ.

ಜೀವನವೆಂಬುದೇ ಹೀಗೆ ,
ನಿನ್ನೆ ಜನುಮವೆತ್ತಿ
ಇಂದು ಸಿಕ್ಕ ಸುಖವ ಅನುಭವಿಸಿ
ನಾಳೆ ಮತ್ತೆ ಮಸಣಕೆ ಪಯಣ.


*
ಜಗದ ಸೌಂದರ್ಯವ ನೋಡಿ ಮನಸೋತು
ಬಿಳಿ ಹಾಳೆಯ ಮೇಲೆ ಗೀಚಿದವ ಕವಿಯಾದ,
ಅದೇ ಸೌಂದರ್ಯಕೆ ಮನಸೋತು, ಬಿಳಿ ಹಾಳೆಯ ಮೇಲೆ
ಬಣ್ಣ ಚೆಲ್ಲಿ ಸೌಂದರ್ಯವ ಬಿಂಬಿಸಿದವ ಕಲೆಗಾರನಾದ.

 
*
ಪ್ರಿತಿಗಾಗಿ ಹುಟ್ಟಿದ ಕವಿತೆ ಮಾಸದಿರಲಿ ಎಂದಿಗೂ,
ಕವಿತೆಯಿಂದ ಹುಟ್ಟಿದ ಪ್ರೀತಿ ದೂರವಾಗದಿರಲಿ ಎಂದಿಗೂ.


*
 ಕವಿಯಾಗುವಾಸೆ ಎನಗೆ ಕವಿಯಾಗುವಾಸೆ.

ಶಬ್ಧಗಳ ಸ್ನೇಹವಿಲ್ಲ
ಸಾಹಿತ್ಯದ ಅರಿವಿಲ್ಲ
ಯೋಚಿಸುವ ಮನಸಿಲ್ಲ
ಮೃದುವಾದ ಹೃದಯವಿಲ್ಲ

ಪ್ರೀತಿಯ ಅಪ್ಪುಗೆಯಿಲ್ಲ
ವಿರಹದ ವೆದನೆಯಿಲ್ಲ
ಬಡತನದ ಬೇಗೆಯಿಲ್ಲ
ಸಿರಿತನದ ವೈಭೋಗವಿಲ್ಲ

ಜನರ ಸಂಪರ್ಕವಿಲ್ಲ
ಪರಿಸರದ ಒಡನಾಟವಿಲ್ಲ
ಮಳೆಯಲಿ ನೆನೆದ ನೆನಪಿಲ್ಲ
ಕನಸು ಕಾಣಲು ನಿದ್ದೆಯಿಲ್ಲ

ಗೆಳೆತನದ ಅನುಭವವಿಲ್ಲ
ದ್ವೇಷಿಸುವ ವೈರಿಗಳಿಲ್ಲ
ಮಾತೆಯ ಮಮತೆಯಿಲ್ಲ
ಮಡದಿಯ ಬೆಸುಗೆಯಿಲ್ಲ

ಓದುವ ಅಭ್ಯಾಸವಿಲ್ಲ
ಬರೆಯುವ ಹವ್ಯಾಸವಿಲ್ಲ
ನಿನ್ನೆಯ ನೆನಪಿಲ್ಲ
ನಾಳೆಯ ಚಿಂತೆಯಿಲ್ಲ

ಎದುರಿಗೊಂದು ಬಿಳಿ ಹಾಳೆ
ಕೈಯ್ಯಲೊಂದು ಲೇಖನಿ
ಬಿಟ್ಟರೆ ಬೇರೇನೂ ತಿಳಿಯದೆನಗೆ
ಆದರೂ ನನಗೊಂದಾಸೆ

ಕವಿಯಾಗುವಾಸೆ ಎನಗೆ ಕವಿಯಾಗುವಾಸೆ.


*
ಎಲ್ಲ ಕವಿವರ್ಯರಿಗೆ ವಂದಿಸುತ್ತಾ...

"ಒಮ್ಮೆ ಯಾರೋ ಕೇಳಿದರು
ಕವಿಯೆಂದರೆ ಯಾರು??
ತುಸು ನಕ್ಕು ನಾನಂದೆ

ಆ ರವಿಗೂ  ಕಾಣದ್ದನ್ನ ಕಂಡವ ಕವಿ,
ಗಾಳಿಗೂ ಸ್ಪರ್ಶಿಸದ್ದನ್ನ ಅನುಭವಿಸುವವ ಕವಿ,
ಬೆಳಕಿಗೂ ಕಾಣದ ವಸ್ತುವನ್ನ ಹುಡುಕಿದವ ಕವಿ,
ಈಶನಿಗೂ ಹೊಳೆಯದ ಶಬ್ದವ ರಚಿಸಿದವ ಕವಿ.

ಭೂಗರ್ಭದೊಳಗಿರುವ ನೋವ ಅರಿತವ ಕವಿ.
ಸಮುದ್ರದಾಳದಲ್ಲಿರುವ ಮುತ್ತನ್ನ ಹೆಕ್ಕಿ ತಂದವ ಕವಿ.
ಮಲ್ಲಿಗೆಯ ಸುವಾಸನೆಯ ಎಲ್ಲೆಡೆ ಪಸರಿಸಿದವ ಕವಿ.
ಗುಲಾಬಿಯ ಸೌಂದರ್ಯವ ಇಮ್ಮಡಿಗೋಳಿಸಿದವ  ಕವಿ

ರಾಮಾಯಣ ಮಹಾಭಾರತದ ರೂವಾರಿ ಕವಿ.
ಕೃಷ್ಣ ರಾಧೆಯರ ರಾಸಕ್ರೀಡೆಯ ದೃಷ್ಟಿಸಿದವ ಕವಿ.
ಕರುನಾಡ ಸೊಬಗ ದೇಶಕೆ ಸಾರಿದವ ಕವಿ.
ಗಂಧದ ಗುಡಿಯ ಸೌಂದರ್ಯವ ವರ್ಣಿಸಿದವ ಕವಿ.

ಮಣ್ಣಿನ ಕಂಪನ್ನ ಬಣ್ಣಿಸಿದವ ಕವಿ.
ಹೆಣ್ಣಿನ ಸೌಂದರ್ಯವ ಹೆಚ್ಚಿಸಿದವ ಕವಿ.
ಮಲೆನಾಡಿನ ಮೈಯ್ಯ ತೊಳೆದವ ಕವಿ
ಬೇಲೂರ ಬಾಲೆಗೆ ರೂಪು ಕೊಟ್ಟವ ಕವಿ.

ಹೂವಿನೊಳಗಿನ ಮಕರಂದ ಕವಿ.
ಮರದ ಕೆಳಗಿನ ನೆರಳ ತಂಪು ಕವಿ.
ಜೋಗದ ಸಿರಿಯ ಜಲಧಾರೆ ಕವಿ.
ಕಾವೇರಿಯ ನೀರ ಜುಳು ಜುಳು ನಾದ ಕವಿ.

ಮಗುವಿನ ಹೆಜ್ಜೆಯ ಗೆಜ್ಜೆ ನಾದ  ಕವಿ
ಕೋಗಿಲೆಯ ಮಂಜುಳ ಗಾನದ ಧ್ವನಿ ಕವಿ.
ಮೈಸೂರಿನ ಅರಮನೆಯ ಸೊಬಗು ಕವಿ.
ಹಂಪೆಯ ದೇವಾಲಯದ ಸುಂದರ ಕೆತ್ತನೆ ಕವಿ.

ಪ್ರೀತಿ ಪ್ರೇಮಕೆ ಸೇತುವೆಯಾಗಿ
ಎರಡು ಜೀವಗಳ ಮಿಲನವಾಗಿ
ಸುಂದರ ಅರಮನೆಯ ಕಟ್ಟಿ
ಕನಸ ನನಸು ಮಾಡಿದವ ಕವಿ.

ಅರಿಯದಿದ್ದರೂ ಪ್ರೇಯಸಿಯ ಅಗಲಿಕೆಯ
ಹೃದಯಕೆ ಗಾಯ ಮಾಡಿಕೊಂಡು
ಅನುಭವಿಸಿ ವಿರಹ ವೇದನೆಯ
ಮಧುರ ಗೀತೆಯ ಬರೆದವ ಕವಿ.


ದಿನ,ರಾತ್ರಿ,ಊಟ,ನಿದ್ದೆಯ ಮರೆತು
ಮರದ ಕೆಳಗೆ ಕೂತು ಬರೆಯುತ
ಮನಕೆ ತೋಚಿದ ಸಾಲ ಗೀಚುತ
ಕಾಣದಂತ ಕನಸ ಕಂಡವ ಕವಿ.

ಏನೆಂದು ಹೊಗಳಲಿ ನಾ ಆ ಕವಿಯ
ಹೋಗಲಾಡಿಸಿ ಜಾತಿ ಧರ್ಮದ ಹಗೆಯ
ಕನ್ನಡ ಸಾಹಿತ್ಯವ ಉಳಿಸಿ ಬೆಳೆಸಿ
ಹೊಗಳಲು ಶಭ್ದವ ಸಾಲದಂತಾಗಿಸಿದವ ಕವಿ."


ಕವಿಯ ವರ್ಣನೆಗೆ ಶಬ್ದಗಳು ಸಾಲದು
ಆದರೂ ಮಾಡಿರುವೆ ಚಿಕ್ಕ ಪ್ರಯತ್ನವ
ತಪ್ಪಿದ್ದಲ್ಲಿ ಕ್ಷಮೆಯಿರಿಸಿ, ಬೇಸರಿಸದೆ
ಹಾಕಿಕೊಳ್ಳಿರಿ ಹೊಟ್ಟೆಗೆ ಇವ ನಮ್ಮವನೆಂದು.



*
ಇಷ್ಟ ಕಷ್ಟಗಳ ನಡುವೆ,
ಹೃದಯದ ಮೆರವಣಿಗೆ.
ಸಾಗುತಿದೆ ಅರಿವಿಲ್ಲದೆ,
ಪ್ರಪಂಚದ ಮಡಿವಂತಿಕೆ.

ನೋವು ನಲಿವುಗಳ
ಸಮಪಾಲಿಲ್ಲದೆ,
ಸಿಹಿ ಕಹಿಗಳ
ಅನುಭವವಿಲ್ಲದೆ.

ಮುಂದಿನ ಜೀವನದ
ಗುರಿಯಿಲ್ಲದೆ,
ಹಾಕುತಿದೆ ನಡಿಗೆ
ನಾಳೆಯ ಚಿಂತೆಯಿಲ್ಲದೆ.

ಇದ್ದಾಗ ನಲಿವಿನ
ಆನಂದದೊಂದಿಗೆ,
ಬಂದಾಗ ನೋವಿನ
ಕಹಿ ಅನುಭವದೊಂದಿಗೆ.

ಇದ್ದಷ್ಟು ದಿನ
ಪ್ರೇಮ ಗೀತೆಯ ಹಾಡುತ,
ದೂರವಾದಾಗ
ವಿರಹ ವೇದನೆಯ ಸಹಿಸುತ.
 

ಇಷ್ಟ ಕಷ್ಟಗಳ ನಡುವೆ  ನಡೆದಿದೆ
ಹುಚ್ಚು ಹೃದಯದ ಮೆರವಣಿಗೆ.

*
ಇಂದು ಏಕೋ ಬರೆಯುವ ಮನಸಿತ್ತು..
ಹೃದಯಕೆ ಕಾಣದ ಕೈಯ್ಯ ಸ್ಪರ್ಶವಿತ್ತು
ವರ್ಣಿಸೆಯ ನನ್ನ ಓ ಚೆಲುವ ಅಂದ ಹಾಗಿತ್ತು.
ಅವಳ ನೆನೆಯುತ ಕವನ ಬರೆದಾಗಿತ್ತು.

*ಏನಿದು ಕವಿಗಳೆಲ್ಲ ಎಲ್ಲಿ ಮಾಯ .?
ಆಗಿದೆಯೇ ಹೃದಯಕೆ ಗಾಯ.?
ಅಥವಾ ತುಂಬಾ ತಲೆ ನೋವಾ.?

ತಲೆ ನೋವಾದರೆನಂತೆ ,
ಹೃದಯಕೆ ಗಾಯವಾದರೆನಂತೆ ,
ನಮಗೆ ಬರೀ ಕವನಗಳದೆ ಚಿಂತೆ.


*
ಖಾಲಿ ಹಾಳೆಯಂತೆ ನನ್ನ ಜೀವನ
ನೀ ಬಂದು ಬರೆ ಅದರಲ್ಲಿ ಕವನ.

ಪ್ರೀತಿಯ ಲೇಖನಿಯಿಂದ ಪ್ರೇಮ ಕಾವ್ಯವ ರಚಿಸಿ,
ಜೀವನದ ಬಿಳಿ ಹಾಳೆಯ ಶೋಭೆಯ ಹೆಚ್ಚಿಸಿ.
ಕಹಿ ಅನುಭವದ ಲೇಖನವ ಅಳಿಸಿ ,
ಕಾವ್ಯ ಸುಧೆಯ ರಸದೂಟವ ಉಣಬಡಿಸಿ .

ನನಗೆ ಹಾರೈಸು ಮುದ್ದು ಪ್ರೇಯಸಿಯಾಗಿ,
ಯಶ,ಕೀರ್ತಿ ಸಾಧನೆಗೆ ಮುನ್ನುಡಿಯಾಗಿ.

ನಲ್ಮೆಯ ಗೆಳತಿ ನೀನು ನನಗೆ ರೂಪಸಿಯಾಗಿ,
ನನ್ನ ಪ್ರತಿ ಹೆಜ್ಜೆಗೂ ಗೆಲುವಿನ ತಿಲಕವಾಗಿ.
ಬೇಸರದ ಸಮಯದೀ ಒಲುಮೆ ಸಾಂತ್ವನವಾಗಿ ,
ವಿಜಯದ ಪತಾಕೆಯ ರೂವಾರಿಯಾಗಿ.

ನನಗೆ ಹಾರೈಸು ಮುದ್ದು ಪ್ರೇಯಸಿಯಾಗಿ,
ಯಶ,ಕೀರ್ತಿ ಸಾಧನೆಗೆ ಮುನ್ನುಡಿಯಾಗಿ.
 

ಖಾಲಿ ಹಾಳೆಯಂತೆ ನನ್ನ ಜೀವನ
ನೀ ಬಂದು ಬರೆ ಅದರಲ್ಲಿ ಕವನ ಕವನ.


*
ನಿನ್ನೀ ನೋಟಕೆ ಮನ ಸೋಲದವರಾರಿಲ್ಲ..
ಈ ನೋಟದಲ್ಲೇ ಎಲ್ಲರ ಮನ ಸೆಳೆದೆಯಲ್ಲ.
ನಿನ್ನ ಮನದಲಿ ಇರುವವರು ಯಾರೆಲ್ಲ..
ನನ್ನ ಮನದರಸಿ ಆಗಲಿ ಎಂದು ಬಯಸುವರೆಲ್ಲ.

*
ಮುಂಗಾರಿನ ಮಳೆ ಹನಿ ಹನಿಯಾಗಿ ಸುರಿದಿದೆ,
ಮತ್ತೆ ನನ್ನವಳ ನೆನಪ ತಂದಿದೆ..
ಮರೆಯಲಾಗದೆ ಕಳೆದ ದಿನ ಅವಳ ಜೊತೆ,
ಮತ್ತೆ ಸೇರು ಬಾ ನನ್ನ ಜೊತೆ ಎಂದಿದೆ..

*
"ಪಂಚರಂಗಿ" ಇಫೆಕ್ಟುಗಳು

ಹಾಳೆಗಳು ಬರೆಯೋಕೆ ಪೆನ್ನುಗಳು,ಮನದಲ್ಲಿ ನೂರಾರು ವಿಚಾರಗಳು.
ಹಾಸ್ಯಗಳು ಚುಟುಕುಗಳು,ಏನು ಬರೆಯಬೇಕೆಂಬ ಚಿಂತೆಗಳು.
ತಲೆ ಕೆರಕೊಂಡರೆ ಬರೀ ಹೇನುಗಳು,ಕಾಡುವ ನೆನಪುಗಳು.
ನಾ ಬರೆಯುತಿರೂ ಸಾಲುಗಳು,ಇಗೋ ಬರುತಿದೆ ಒಂದೊಂದು ಶಬ್ದಗಳು.

ಹುಟ್ಟು ಸಾವುಗಳು, ಮಧ್ಯದಲ್ಲಿ ಕೊರಗೋ ಜೀವಗಳು.
ಮಕ್ಕಳ ನಲಿವುಗಳು,ಪ್ರೇಮಿಗಳ ನೋವುಗಳು.
ಆಸೆಗಳು ನಿರಾಸೆಗಳು,ಮುಗಿಯದ ಕನಸುಗಳು.
ತಿನ್ನುವುದಕ್ಕೆ ಇರುವ ಜೀವಗಳು,ತಿನ್ನಲಿಕ್ಕಿಲ್ಲದಿರುವವರ ಆತ್ಮಹತ್ಯೆಗಳು.

ಮನೆ ಬಿಲ್ಡಿಂಗ್ ಬಂಗಲೆಗಳು, ಹೆಚ್ಚುತ್ತಿರುವ ಜನಸಂಖ್ಯೆಗಳು.
ಬಿಯರ್ ಬಾರ್ ಸಾರಾಯಿ ಅಂಗಡಿಗಳು,ಹಾಳಾಗ್ತಿರೋ ಹುಚ್ಚು ಹೃದಯಗಳು.
ಬಿಗ್ ಬಾಜಾರ್ ರಿಲಯನ್ಸ್ ಫ್ರೆಶಗಳು,ಅಪ್ಪ ಅಮ್ಮ ಬಿಟ್ಟು ಎಲ್ಲ ಸಿಗೋ ಅಂಗಡಿಗಳು.
ಹೊಟ್ಟೆ ಕೆಡಿಸೋ ಫಾಸ್ಟ್ ಫುಡ್ ಗಳು,ಹಾಳಾಗ್ತಿರೋ ಜಮಾನಾಗಳು.

ಹಳ್ಳಿ ಪಟ್ಟಣಗಳು,ಜನರ ಜಂಜಾಟಗಳು.
ಎಮ್ಮೆ ಕೋಣ ಎತ್ತುಗಳು,ಕಾರು ಬೈಕು ರಿಕ್ಷಾಗಳು.
ಹಳ್ಳಿಯ ಸೋಬಗುಗಳು,ಪಟ್ಟಣದ ಬೆರಗುಗಳು.
ಶುದ್ಧ ಗಾಳಿಯ ಸುಂದರ ಪರಿಸರಗಳು,ಸಾವಿರಾರು ಗಾಡಿಗಳು ಟ್ರಾಫಿಕ್ ರೂಲ್ಸಗಳು.

ಊರ ತುಂಬಾ ದೇವಸ್ಥಾನಗಳು,ಸಾವಿರಾರು ಚಪ್ಪಲಿಗಳು.  
ಮಂತ್ರ ಹೇಳೋ ಬಾಯಿಗಳು,ಘಂಟೆ ಅಲುಗಿಸೋ ಕೈಗಳು.
ಚಿಲ್ಲರೆ ಕಾಸುಗಳು,ಹರಿದ ನೋಟುಗಳು.
ಚಪ್ಪಲ್ ಕದಿಯೋ ಕಳ್ಳರು,ಭಿಕ್ಷೆ ಬೇಡೋ ಭಿಕಾರಿಗಳು.

ಕಾರುಗಳು ಬೈಕುಗಳು,ಮುಗಿಯದ ಟ್ರಾಫಿಕ್ ಜಾಮ್ ಗಳು.
ಬೆಟ್ಟ ಗುಡ್ಡಗಳು,ನದಿಗಳು ಜಲಪಾತಗಳು.
ಹಸಿರು ಕಾನನಗಳು,ತುಂಬಾ ಕಾಡು ಪ್ರಾಣಿಗಳು.
ಬಣ್ಣ ಬಣ್ಣದ ಚಿಟ್ಟೆಗಳು,ಹಾರಾಡೋ ಪಕ್ಷಿಗಳು.

ಇಂಜನಿಯರಿಂಗ್ ಮೆಡಿಕಲ್ ಕಾಲೇಜ್ಗಳು,ಮಕ್ಕಳಿಲ್ಲದ ಕ್ಲಾಸ್ ರೂಮುಗಳು.
ತುಂಬಿರೋ ಕ್ಯಾಂಟೀನುಗಳು,ಪಾರ್ಕ್ ಬೆಂಚುಗಳು.
ಕಿಟಲೆ ಮಾಡೋ ಹುಡುಗರು,ಸ್ಟೈಲ್ ಮಾಡೋಕೆ ಬೈಕುಗಳು.
ಲವ್ ಮಾಡೋ ಹಾರ್ಟ್ ಗಳು,ನೋವು ಅನುಭವಿಸೋ ಮನಸುಗಳು.

ಬಣ್ಣ ಬಣ್ಣದ ಬೆಡಗಿಯರು,ಹಿಂದೆ ಬೀಳುವ ಪಡ್ಡೆ ಜೀವಗಳು.
ಟಿ ಶರ್ಟ್ ಟೈಟ್ ಪ್ಯಾಂಟ್ ಗಳು, ಅರ್ಧ ಬ್ಲೌಸ್ ಗಳು ಸಾರಿಗಳು.
ತುಂಬಿ ತುಳುಕುವ ಪಾರ್ಕುಗಳು,ಕಾಫಿ ಶಾಪ್ ಥಿಯೇಟರ್ ಗಳು.
ಸುತ್ತಾಡಲು ಬೈಕುಗಳು,ದಿನಾ ಚೇಂಜ್ ಆಗೋ ಐಟಂಗಳು.

ಸಾಹಿತಿ ಲೇಖಕರು ಕವಿಗಳು,ದಿನವೂ ಪ್ರಕಟವಾಗೋ ಹೊಸ ಪುಸ್ತಕಗಳು.
ಲೇಖನಗಳು ಕವನ ಕಾದಂಬರಿಗಳು, ಜನವಿಲ್ಲದ ಗ್ರಂಥಾಲಯಗಳು.
ಅಣ್ಣಾ ಮಾಡುವ ಉಪೋಷಣಗಳು, ಟೋಪಿ ಹಾಕ್ಕೊಂಡು ಕೂಗಾಡೋ ಜನಗಳು.
ಭ್ರಷ್ಟ ಮಂತ್ರಿಗಳು ಅಧಿಕಾರಿಗಳು,ಯಾವಾಗ ಬರುವುದೋ ಲೋಕಪಾಲ್ ಬಿಲ್ಲುಗಳು.

ಹೆಚ್ಚುತ್ತಿರೋ ಹಾರ್ಟ್ ಪೇಷೆಂಟ್ ಗಳು,ದುಡ್ಡು ಎಳೆಯೋ ಹೋಸ್ಪಿಟಲ್ ಗಳು.
ನರ್ಸ್ಸುಗಳು ಸ್ಪೆಷಲಿಸ್ಟ್ ಡಾಕ್ಟರುಗಳು,ಮುಟ್ಟಿದರೆ ಕಾಸು ಕೇಳೋ ದೈತ್ಯಗಳು.
ಜ್ವರ ಕೆಮ್ಮು ಥಂಡಿಗಳು,ಬಣ್ಣ ಬಣ್ಣದ ಗುಳಿಗೆಗಳು.
ಮದುವೆ ಇಲ್ಲದೆ ಪ್ರೆಗ್ನೆಂಟ್ ಆಗೋ ಜೀವಗಳು,ಗರ್ಭ ನಿರೋಧಕ ಮಾತ್ರೆಗಳು.

ಟಿವಿ ಕಂಪ್ಯೂಟರ್ ಗಳು ,ಮೊಬೈಲ್ ಎಸ್ ಎಂ ಎಸ್ಸುಗಳು.
ಅರ್ಥವಿಲ್ಲದ ಮೆಸ್ಸೇಜುಗಳು,ಚಾಟಿಂಗ್ ಮಾಡೋ ಜೀವಗಳು.
ಪ್ರೇಮಕ್ಕೆ ಲವ್ ಪಾಯಿಂಟುಗಳು,ಸಾಯೋಕೆ ಸುಸೈಡ್ ಪಾಯಿಂಟುಗಳು.
ಹಾಳಾದ ಹಾರ್ಟ್ ಗಳು,ಮತ್ತೆ ಹುಟ್ಟೋ ಪ್ರಿತಿಗಳು.

ಸಾವಿರಾರು ಅಂತರ್ಜಾಲ ಪುಟಗಳು,orkut facebook twitter ಗಳು.
ಟೈಮ್ ವೇಸ್ಟ್ ಮಾಡೋ ಜನಗಳು,ದುಡ್ಡು ಮಾಡೋ ಕಂಪನಿಗಳು.
ನೂರಾರು ಪೋಸ್ಟುಗಳು,ಪೋಕ್ ಲೈಕ್ ಕಾಮೆಂಟುಗಳು.
ಚಿತ್ರಗಳು ಹಾಡುಗಳು ವೀಡಿಯೊಗಳು,ದಿನವಿಡೀ ಡೌನ್ಲೋಡ್ ಗಳು.

ನಾ ಬರೆಯೋ ಕವನಗಳು,ಅದನ್ನ ಓದೋ ಜನಗಳು.
ಅರ್ಥವಿಲ್ಲದ  ಪದಗಳು, ಸಾವಿರಾರು ತಪ್ಪುಗಳು.
ಆದರೂ ಬರೆಯೋ ಕನಸುಗಳು,ತಪ್ಪು ತಿದ್ದುವ ನೀವುಗಳು.
ನನ್ ಲೈಫ್ ಇಸ್ಟೆನೆ ಇವೆಲ್ಲ "ಪಂಚರಂಗಿ" ಇಫೆಕ್ಟುಗಳು.

*
ಇಂದು ಏಕೋ ಅವಳ ನೆನಪು ಮತ್ತೆ ಕಾಡಿದೆ,
ನನ್ನ ಮನವು ರೆಕ್ಕೆ ಬಿಚ್ಚಿ ಹಾರಿದೆ .
ಅವಳ ಜೀವ ಕರೆಯಿತು ಬಾನಂಚಿನೆಡೆಗೆ,
ನಿನ್ನ ಸೇರಲು ಬರುವೆನೆಂದೆ ಹಾಕುತ ನಡಿಗೆ.

*
ಓ ನನ್ನ ಮನದರಿಸಿಯೇ ನೀ ಎಲ್ಲಿರುವೇ??
ನಿನ್ನೀ ಹುಡುಕಾಟದಲ್ಲೇ ದಿನ ಕಳೆದಿವೆ..
ನೀನಿಲ್ಲದ ಜೀವನ ಮರಳುಗಾಡಿನಂತಾಗಿದೆ
ನೀ ಬಂದು ತಬ್ಬಿ ಜೀವನ ಗೀತೆ ಹಾಡಬೇಕಾಗಿದೆ.


*
ಜೀವನವೆಂಬುದು ಮರಳುಗಾಡಿನಂತೆ
ಪ್ರೀತಿ ಎಂಬುದು ನೀರ ಚಿಲುಮೆಯಂತೆ
ಜೀವನ ಸಾಗುತಿರಲಿ ನಿಮ್ಮ ನೇರ ಗುರಿಯೆಡೆಗೆ
ಚಿಲುಮೆ ಸಿಗುವುದು ಮುಗಿಯುವುದರೊಳಗೆ ನಿಮ್ಮ ನಡಿಗೆ

*
ಪ್ರೀತಿಯೆಂಬ ಮಾಯೆಗೆ ಬಲಿಯಾಗದವರಿಲ್ಲ...
ಪ್ರೀತಿಯ ಸುಳಿಗೆ ಸಿಕ್ಕು ನರಳಾಡದವರಿಲ್ಲ ...
ಏನೀ ಪ್ರೀತಿ ಮಾಯೆ,ಏನೀ ಪ್ರೀತಿಯ ಛಾಯೆ?
ಯಾಕೋ ಏನೋ ನನಗೆಂದೂ ಅದು ಕಾಡಲಿಲ್ಲ.







9 comments:

  1. ತುಂಬ ಚೆನ್ನಾಗಿದೆ ಕಣ್ರಿ :)

    ReplyDelete
  2. This comment has been removed by the author.

    ReplyDelete
  3. ತುಂಬಾ ತುಂಬಾ ಚೆನ್ನಾಗಿದೆ ಸರ್ 🙏🙏

    ReplyDelete
  4. ಬರೆಯಲು ಪದಗಳೇ ಸಿಗುತ್ತಿಲ್ಲ ಈ ನಿಮ್ಮ ಸಾಲುಗಳ ಕಂಡು....ಕವಿಯತ್ರಿ

    ReplyDelete