ಬದುಕಿನ ಪುಟಗಳಿಂದ ಭಾಗ-೧:

ಮಳೆಗಾಲದ ಆ ದಿನಗಳು:

ಈಗ ಸುಮಾರು ಹತ್ತು ಹದಿನೈದು ವರ್ಷಗಳ ಹಿಂದಿನ ಮಾತು. ಆಗ ನಾವಿದ್ದದ್ದು ಬನವಾಸಿಯ ಹತ್ತಿರದ ಒಂದು ತೋಟದ ಮನೆಯಲ್ಲಿ. ಊರಿನಿಂದ ಸುಮಾರು ನಾಲ್ಕೈದು ಕಿಲೋ ಮೀಟರ್ ದೂರದ ತೋಟಕ್ಕೆ ಇದ್ದದ್ದು ಮಣ್ಣಿನ ದಾರಿ. ಅಲ್ಲಿಗೆ ಹೋಗುವಾಗ ಮಧ್ಯದಲ್ಲಿ ಒಂದು ದೊಡ್ಡ ಬಯಲು, ಆಮೇಲೆ ಮುಂದೆ ಕಿರಿದಾದ ದಾರಿ. ಮಳೆಗಾಲದಲ್ಲಿ ಅಲ್ಲಿ ಪೂರ್ಣ ನೀರು ತುಂಬಿಕೊಳ್ಳುತ್ತಿತ್ತು, ದನಗಳೆಲ್ಲ ಓಡಾಡಿ ಕೆಸರು ರಾಡಿ. ಅದರಲ್ಲಿ ಸೈಕಲ್ ಹೊಡೆಯೋದು ಒಂದು ಕಸರತ್ತೇ ಆಗಿತ್ತು. ಆ ದಾರಿಯಲ್ಲಿ ಗಾಡಿಗಳು ಓಡಾಡುವುದು ಬಲು ಅಪರೂಪ. ದನ ಮೇಯಿಸುವರು, ನಾವು ಹೀಗೆ ಜನರ ಓಡಾಟವೂ ಕಡಿಮೆ. ನಾವಿದ್ದ ತೋಟದ ಪಕ್ಕದಲ್ಲಿ ಮತ್ತೊಂದು ತೋಟವಿತ್ತು, ಹಗಲು ಹೊತ್ತು ಕೆಲಸದವರು ಇರುತ್ತಿದ್ದರು ಬಿಟ್ಟರೆ ರಾತ್ರಿ ಯಾರ ಸುಳಿವೂ ಇರುತ್ತಿರಲಿಲ್ಲ. ನಮ್ಮದು ಒಂಟಿ ಮನೆ. ಸುಮಾರು ನಾಲ್ಕೈದು ಎಕರೆಯ ತೆಂಗು, ಅಡಿಕೆ, ಬಾಳೆ ತೋಟ, ನಮ್ಮ ತಂದೆ ಅದನ್ನ ನೋಡಿಕೊಳ್ಳುತ್ತ ಇದ್ದರು. ತೋಟಕ್ಕೆ ನೀರು ಹಾಯಿಸೋದು, ಗದ್ದೆ ನೋಡಿಕೊಳ್ಳೊದು, ತೋಟದಲ್ಲಿನ ಕೆಲಸ ಮಾಡೋದು ಇದು ನಮ್ಮ ತಂದೆಯ ಜವಾಬ್ದಾರಿ. ಆಗ ಇದಕ್ಕೆಲ್ಲ ಸಿಗುತ್ತಿದ್ದದ್ದು ತಿಂಗಳಿಗೆ ಎಂಟುನೂರೋ, ಸಾವಿರವೋ. ಅದರಲ್ಲೇ ಸಂಸಾರ, ಸ್ವಲ್ಪ ಉಳಿತಾಯ. ನೀರಿಗಾಗಿ ಇದ್ದದ್ದು ಬೋರ್ವೆಲ್ ಮತ್ತು ತೆರೆದ ಒಂದು ಕೊಳ. ಒಂದು ಪುಟ್ಟ ಹಂಚಿನ ಮನೆ, ಬದಿಯಲ್ಲಿ ಮಣ್ಣಿನ ಬಚ್ಚಲು ಮನೆ. ಇದ್ದದ್ದು ನಾನು, ಅಪ್ಪ, ಅಮ್ಮ, ನಾಯಿ, ಬೆಕ್ಕು, ಒಂದೆರಡು ದನ. ಮನೆಯಲ್ಲಿ ಒಂದು ಫೋನಿತ್ತಾದರೂ ವರ್ಷದಲ್ಲಿ ಏಳೆಂಟು ತಿಂಗಳು ಹಾಳಾಗಿರುತ್ತಿತ್ತು. ಏನಾದರೂ ಬೇಕೆಂದರೆ ನಾಲ್ಕು ಮೈಲು ನಡೆದು ಪೇಟೆಗೆ ಹೋಗಬೇಕಾಗಿತ್ತು. ವಾರದ ಸಂತೆಯಲ್ಲಿ ಮನೆಗೆ ಬೇಕಾದ ಸಾಮಾನುಗಳನ್ನೆಲ್ಲ ತಂದಿಡಬೇಕಾಗಿತ್ತು. ಸೊಪ್ಪು ತರಕಾರಿ ಸುಮಾರು ಮನೆಯಲ್ಲೇ ಬೆಳೆಯುತ್ತಾ ಇದ್ದೆವು. ಹೀಗೆಲ್ಲ ಇದ್ದರೂ ನಮ್ಮದು ಸುಖಿ ಸಂಸಾರ. ನಾವು ಬಡವರು ಅಥವಾ ಏನಪ್ಪ ಇದು ನಮ್ಮ ಜೀವನ ಅಂತ ಎಂದೂ ಅನಿಸಲಿಲ್ಲ. ಅದರಲ್ಲೂ ನನಗೆ, ಅಷ್ಟು ಮುದ್ದಾಗಿ ಏನೂ ಕಡಿಮೆಯಾಗದಂತೆ ನನ್ನನ್ನು ಬೆಳೆಸಿದ್ದರು.  ಬಾಕಿ ಯಾವ ತೊಂದರೆ ಇಲ್ಲದಿದ್ದರೂ ಕಷ್ಟವಾಗುತ್ತಿದ್ದದ್ದು ಮಳೆಗಾಲದಲ್ಲಿ.

ಒಮ್ಮೆ ಮಳೆಗಾಲ ಶುರುವಾಯಿತು ಎಂದರೆ ಮುಗಿಯಿತು, ಲೈಟ್ ಕೈ ಕೊಟ್ಟಂತೆ. ರಸ್ತೆ ಸರಿ ಇಲ್ಲ, ಸಿಕ್ಕಾಪಟ್ಟೆ ಮಳೆ ಅಂತ ಯಾರೂ ರಿಪೇರಿಗೂ ಬರುತ್ತಿರಲಿಲ್ಲ, ಮಧ್ಯ ಸ್ವಲ್ಪ ಮಳೆ ಹೊಳವಾಗಿ, ರಸ್ತೆ ಒಣಗಿದರೆ ರಿಪೇರಿಗೆ ಜನ ಬಂದು ಲೈಟ್ ಬಂದಂತೆ. ಇಲ್ಲವಾದರೆ ಗೋವಿಂದ. ಕೆಲವೊಮ್ಮೆ ಎರಡೆರಡು ತಿಂಗಳುಗಟ್ಟಲೇ ಲೈಟ್ ಇಲ್ಲದೆ ಕಳೆದಿದ್ದೂ ಇದೆ. ಫೋನ್ ಡೆಡ್. ಲೈಟ್ ಇಲ್ಲವೆಂದ ಮೇಲೆ ಬೋರ್ವೆಲ್ ಕೂಡ್ ಬಂದ್. ಆಗ ತೆರೆದೆ ಬಾವಿಯ ನೀರೇ ಗತಿ ನಮಗೆ. ಆ ಬಾವಿಯಿಂದ ನೀರು ತೆಗೆಯುವುದೆಂದರೆ ಹರ ಸಾಹಸವೇ ಸರಿ. ಮೆಟ್ಟಿಗಳಿರಲಿಲ್ಲ, ಮೊದಲೇ ಜಾರಿಕೆ ಬೇರೆ. ಆ ಬಾವಿಯ ಕೆಂಪಾದ ನೀರನ್ನೇ ಕುದಿಸಿ ಕುಡಿಯುತ್ತಿದ್ದೆವು. ಮಳೆಯ ನೀರು ಹಿಡಿದು ಸ್ನಾನಕ್ಕೆ, ಕೈ ಕಾಲು ತೊಳೆಯುವುದಕ್ಕೆ ಉಳಿದ ದಿನಚರಿಗೆ ಉಪಯೋಗಿಸುತ್ತಿದ್ದೆವು. ಅಲ್ಲಲ್ಲಿ ಸೋರುವ ಮಾಡಿನ ಕೆಳಗೆ ಪಾತ್ರೆ ಇಡುವುದಂತೂ ಸಹಜವಾಗಿತ್ತು. ಸಂಜೆಯಾಯಿತು ಎಂದರೆ ಮುಗಿಯಿತು, ಸಿಕ್ಕಾಪಟ್ಟೆ ಬೇಜಾರು ಬಂದುಬಿಡುತ್ತಿತ್ತು. ಲೈಟ್ ಇರುತ್ತಿರಲಿಲ್ಲ, ಸಮಯ ಕಳೆಯುವುದೇ ಕಷ್ಟವಾಗುತ್ತಿತ್ತು. ಆಗೆಲ್ಲ ಟಿವಿಯಂತೂ ಇರಲೇ ಇಲ್ಲ. ರೇಡಿಯೋ ಕೇಳುವುದೇ ದೊಡ್ಡ ವಿಷಯ. ವಾರ್ತೆ, ಹಾಡುಗಳು ಹೀಗೆ. ಆಗೆಲ್ಲ ರೇಡಿಯೋ ಪ್ರೋಗ್ರಾಮ್ ಗಳೆಲ್ಲ ಬಾಯಿಪಾಠವಾಗಿತ್ತು. ಚಿಮಣಿ ಬುಡ್ಡೆಯಲ್ಲೇ ರಾತ್ರಿ ಕಳೆಯುವುದಾಗಿತ್ತು, ಚಿಮಣಿಯ ಬೆಳಕಲ್ಲೇ ಓದುವುದು, ಅಡಿಗೆ ಮಾಡುವುದು, ಸ್ವಲ್ಪ ಹೊತ್ತು ಇಸ್ಪೀಟ್ ಆಟ. ಕಟ್ಟಿಗೆ ಒಲೆಯಲ್ಲಿ ಅಡಿಗೆ. ರಾತ್ರಿ ಎಂಟಾಯಿತು ಎಂದರೆ ಊಟ ಮುಗಿದಿರುತ್ತಿತ್ತು. ಎಂಟೂವರೆ ಎಂದರೆ ಹಾಸಿಗೆ ಕಾಣುತ್ತಿದ್ದೆವು. ಬೆಳಗ್ಗೆ ಎದ್ದು ಸ್ವಲ್ಪ ಹೊತ್ತು ಬೆಂಕಿ ಕಾಯಿಸಿ, ಸ್ನಾನ ತಿಂಡಿಯನ್ನೆಲ್ಲ ಮುಗಿಸಿ ನಾನು ಸೈಕಲ್ ಏರುತ್ತಿದ್ದೆ. ಅಪ್ಪ ತೋಟ, ಕೆಲಸ ಅಂತ ಹೋಗುತ್ತಿದ್ದರು. ಮನೆಗೆಲಸ, ಹೋಲಿಗೆ ಮಾಡುವುದು, ದನದ ಚಾಕರಿ, ತೋಟದಲ್ಲಿ ತರಕಾರಿ ಗಿಡಗಳನ್ನು ನೋಡಿಕೊಳ್ಳುವುದು ಅಮ್ಮನ ದಿನಚರಿಯಾಗಿತ್ತು. ನನ್ನ ಮಧ್ಯಾಹ್ನದ ಊಟ  ಬನವಾಸಿಯಲ್ಲೇ ಇದ್ದ ದೊಡ್ಡಪ್ಪನ ಮನೆಯಲ್ಲಿ, ಮಳೆ ಜೋರಿದ್ದರೆ ಸಂಜೆ ಶಾಲೆ ಮುಗಿಸಿದವ ಅಲ್ಲೇ ಉಳಿದುಬಿಡುತ್ತಿದ್ದೆ. ಆಗೆಲ್ಲ ಅಪ್ಪ ಅಮ್ಮ ಇಬ್ಬರೇ ಮನೆಯಲ್ಲಿ, ನಾನಿದ್ದರೆ ಸ್ವಲ್ಪ ಹೊತ್ತು ಹೋಗುತ್ತೆ ಬಂದು ಬಿಡು ಸಂಜೆ ಅಂತ ಒಮ್ಮೊಮ್ಮೆ ಹೇಳುತ್ತಿದ್ದದ್ದುಂಟು. ನಾನೋ ಆ ಮಳೆ, ಆ ರಾಡಿಯ ರಸ್ತೆ, ಅದರಲ್ಲಿ ಸೈಕಲ್ ಹೋಡೆಯೋದು, ಹೇಗೋ ಮನೆ ಸೇರಿದರೆ ಅಲ್ಲಿ ಲೈಟೇ ಇರುತ್ತಿರಲಿಲ್ಲ. ಹಾಗಾಗಿ ಸುಮಾರು ಸಲ ದೊಡ್ಡಪ್ಪನ ಮನೆಯಲ್ಲೇ ಉಳಿದುಬಿಡುತ್ತಿದ್ದೆ, ಒಮ್ಮೆ ಮಳೆಗಾಲ ಮುಗಿಯಿತೆಂದರೆ ನಿಟ್ಟುಸಿರು ಬಿಟ್ಟಂತೆ. ಮುಂದಿನ ಮಳೆಗಾಲದವರೆಗೆ ನಿಶ್ಚಿಂತೆ.

ಹೀಗೆ ಸುಮಾರು ಹತ್ತು ವರ್ಷ ಕಳೆದಿದ್ದೇವೆ. ನಾನು ಸುಮಾರು ಆರು ವರ್ಷ, ನಾಲ್ಕನೇ ಇಯತ್ತೆಯಿಂದ ಹತ್ತರವರೆಗೆ. ಆಮೇಲೆ ನಾನು ಪುಣೆಗೆ ಬಂದೆ. ಅಪ್ಪ ಅಮ್ಮ ಮುಂದೆ ನಾಲ್ಕೈದು ವರ್ಷ ಅಲ್ಲೇ ಕಳೆದರು. ಈ ನಡುವೆ ಒಂದು ಬ್ಲಾಕ್ ಅಂಡ್ ವೈಟ್ ಟಿವಿ, ಅಂಟೆನಾ ಬಂದಿತ್ತು. ಚಂದನ ವಾಹಿನಿಯ ಎಲ್ಲ ಕಾರ್ಯಕ್ರಮಗಳು, ಭಾನುವಾರದ ಸಿನೆಮಾ ಇವೆಲ್ಲ ಮರೆಯುವಂತಿಲ್ಲ. ಈಗೆಲ್ಲ ಇದನ್ನ ನೆನಪಿಸಿಕೊಂಡರೆ ನಾವು ಹೀಗೆ ಬದುಕಿದ್ದೆವಾ ಅಂತ ಅನಿಸುವುದೇ ಇಲ್ಲ. ನಾನೀಗ ಪುಣೆಯಲ್ಲೇ ಮನೆ ಮಾಡಿದ್ದೇನೆ, ಅಪ್ಪ ಅಮ್ಮ ಈಗ ಜೊತೆಗಿದ್ದಾರೆ. ಮನೆಯಲ್ಲಿ ಟಿವಿ, ಫ್ರಿಡ್ಜ್, ವಾಶಿಂಗ್ ಮಶಿನ್ ಎಲ್ಲ ಇದೆ. ಈಗೀನ ಯುಗಕ್ಕೆ ನಾವು ಒಗ್ಗಿ ಹೋಗಿದ್ದೇವೆ. ಇಪ್ಪತ್ನಾಲ್ಕು ಗಂಟೆ ಲೈಟ್, ಟಿವಿ, ಮೊಬೈಲ್, ಕಂಪ್ಯೂಟರ್, ಇಂಟರ್ ನೆಟ್ ಹೀಗೆ. ಯಾವುದೇ ಒಂದು ಇಲ್ಲದಿದ್ದರೂ ಏನೋ ಕಳೆದುಕೊಂಡಂತೆ ಅನಿಸುತ್ತದೆ. ಇಷ್ಟಿದ್ದರೂ ಆಗಿನ ಸುಖ ಈಗಿಲ್ಲ ಬಿಡಿ. ಹೇಗೇ ಇದ್ದರೂ ಆಗಿನದೆಲ್ಲ ಸಿಹಿ ನೆನಪುಗಳೇ ಸರಿ.


No comments:

Post a Comment