ಅಪ್ಪ ಅಮ್ಮಂಗೊಂದು ಪತ್ರ :



              ತೀರ್ಥರೂಪ ತಂದೆಯವರಿಗೆ ಮತ್ತು ಮಾತೋಶ್ರಿಯವರಿಗೆ ನಿಮ್ಮ ಮಗನ ನಮನಗಳು. ಹೇಗಿದ್ದೀರಾ?ನಾನಿಲ್ಲಿ ಆರಾಮಾಗಿದ್ದೇನೆ. ಏನಪ್ಪಾ ಇದು ಫೋನಾಯಿಸಿ ಎಷ್ಟು ಹೊತ್ತು ಬೇಕಾದರೂ ಮಾತಾಡುವ ಕಾಲ ಬಂದಿರುವಾಗ ಇದೇನು ಪತ್ರ ಬರೆದಿದ್ದಾನೆ ಅಂತ ಯೋಚಿಸುತ್ತಿದ್ದೀರಾ? ಹ್ಮಂ ಕೆಲವೊಮ್ಮೆ ಹೀಗೆ ಕೆಲವು ವಿಷಯಗಳನ್ನ ಎದುರು ಕೂತು ಅಥವಾ ಫೋನಲ್ಲಿಯೋ ಹೇಳಲು ಆಗುವುದಿಲ್ಲ. ಓಂಟಿಯಾಗಿ ಕೂತಾಗ ಮನದಲ್ಲಿ ಬರುವ ವಿಚಾರಗಳನ್ನ ಹಾಗೆ ಶಬ್ಧಗಳಲ್ಲಿ ಹೇಳೊ ಪ್ರಯತ್ನ ಮಾಡುತ್ತಿದ್ದೇನೆ ಅಷ್ಟೆ.

ಅಮ್ಮ..ಮೊನ್ನೆ ಮೊನ್ನೆ ನೀನು ಊರಿಗೆ ಬಂದು ಹೋದಾಗಿಂದ ಕೆಲ ವಿಷಯಗಳು ನನ್ನನ್ನ ಕೊರೆಯುತ್ತಿವೆ.ನೀವು ಮದುವೆಯಾಗಿ ಸುಮಾರು ೨೫ ಸಂವತ್ಸರಗಳನ್ನ ಕಳೆದಿದ್ದೀರಾ, ಈ ಎಲ್ಲ ಸಂವತ್ಸರಗಳು ಕೂಡ ನಿಮ್ಮ ಪಾಲಿಗೆ ಬಹಳ ಖುಷಿಯನ್ನ ತಂದಿರಲಿಕ್ಕಿಲ್ಲ ಬಹುಷಃ. ನನ್ನನ್ನ ಹೆತ್ತು ಹೊತ್ತು, ಸಾಕಿ ಸಲಹಿ ದೊಡ್ಡವನನ್ನಾಗಿ ಮಾಡಲು ನೀವು ಪಟ್ಟ ಕಷ್ಟಗಳು ಅಷ್ಟಿಷ್ಟಲ್ಲ. ರೂಪಾಯಿ ರೂಪಾಯಿಗೂ ಕೂಡ ಬೆಲೆ ಕಟ್ಟಿ ಬರುವ ಸ್ವಲ್ಪ ಹಣದಲ್ಲೇ ಉಳಿತಾಯ ಮಾಡುವ ಕಲೆ ಬೇರೆ ಯಾರಲ್ಲೂ ನಾ ಕಾಣಲಾರೆ.
ಅಪ್ಪಾ ನಿನ್ನದಂತೂ ತುಂಬಾ ಸಿಡುಕು ಸ್ವಭಾವ, ಅಮ್ಮ ನೀನಂತೂ ಶಾಂತಮೂರ್ತಿ.ಇಬ್ಬರದೂ ವಿರುದ್ದ ಗುಣಗಳಾದರೂ ಉತ್ತಮ ಸಂಸಾರ ನಿಮ್ಮದು. ನಾ ಕಂಡ ಜಗತ್ತಿನ ಅದ್ಭುತ ಜೋಡಿಗಳಲ್ಲಿ ನಿಮಗೇ ಮೊದಲ ಸ್ಥಾನ. ಎಷ್ಟೇ ಬಡತನವಿದ್ದರೂ ಮಗನ ಖುಷಿಗೆನೂ ಕಡಿಮೆಯಿಲ್ಲ ನಿಮ್ಮಲ್ಲಿ. ಮಗನ ಖುಷಿಯ ಸಲುವಾಗಿ ಇಷ್ಟು ವರ್ಷ ಸತತವಾಗಿ ದುಡಿದಿದ್ದೀರಾ, ಇನ್ನೂ ದುಡಿಯುತ್ತಲೇ ಇದ್ದೀರಾ ಕೂಡ.ವಯಸ್ಸು ಅರವತ್ತರ ಮೇಲಾದರೂ ನಿಮ್ಮಲ್ಲಿರುವ ಹುರುಪಿಗೆನೂ ಕಡಿಮೆಯಿಲ್ಲ. ಇನ್ನೂ ನಿಮ್ಮಲ್ಲಿರುವ ಕೆಲಸದ ಉತ್ಸಾಹ ನೋಡಿ ಹರೆಯದ ನನಗೆ ನಾಚಿಕೆಯಾಗುತ್ತದೆ.
ಅಪ್ಪಾ.. ಮಂಡಿ ನೋವಿದ್ದರೂ ಇನ್ನೂ ನಿಮ್ಮ ಓಡಾಟ ನಡೆಯುತ್ತಲೇ ಇದೆ.
ಅಮ್ಮಾ..ನಿನ್ನ ಕಣ್ಣು ಮಂಜಾಗಿದ್ದರೂ ನಿನ್ನ ಹೊಲಿಗೆ ಕೆಲಸ ಮಾತ್ರ ಇನ್ನೂ ಪ್ರಖರವಾಗಿ ಬೆಳೆಯುತ್ತಲೇ ಇದೆ. ಯಾಕಾಗಿ ಇದೆಲ್ಲ.?ಯಾರಿಗಾಗಿ ಇದೆಲ್ಲ??
ಮದುವೆಯಾಗಿ ಮಗುವನ್ನ ಹೆತ್ತು ಹೊತ್ತು ಹೆಗಲೆತ್ತರಕ್ಕೆ ಬೆಳೆಸಿ, ಅವನಿಗೊಂದು ನೆಲೆ ಹುಡುಕಿ,ಮದುವೆ ಮಾಡಿ ಮೊಮ್ಮಕ್ಕಳನ್ನ ಆಡಿಸಿದರೆ ನಿಮ್ಮ ಜೀವನ ಸಾರ್ಥಕ ಅಲ್ಲವೇ..? ಆದರೆ ನನ್ನದು..??

ಹೀಗೆ ಒಬ್ಬಂಟಿಯಾಗಿ ಕುಳಿತು ಯೋಚಿಸಿದಾಗ ಹಳೆಯ ನೆನೆಪುಗಳೆಲ್ಲ ಕಾಡುತ್ತವೆ.ಆ ನೆನಪುಗಳಲ್ಲಿ ಸುಖ ದುಃಖ ಹೀಗೆ ಒಮ್ಮೊಮ್ಮೆ ಮೊಗದಲ್ಲಿ ಮೂಡುವ ನಗು, ಮಗದೊಮ್ಮೆ ತುಂಬಿ ಬರುವ ಹೃದಯ. ಒಟ್ಟಿನಲ್ಲಿ ನೀವು ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಹೊಟ್ಟೆಪಾಡಿಗಾಗಿ ಅದೆಷ್ಟೋ ಊರೂರು ಅಲೆದಿದ್ದೀರಿ. ನಾಲ್ಕೈದು ಊರು ಸುತ್ತಿದ ಅನುಭವ ನನಗೂ ಆಗಿದೆ ಬಿಡಿ.ಗದ್ದೆ, ತೋಟದಲ್ಲಿ ಬೆವರಿಳಿಸಿದ್ದೀರಾ. ಚಿಕ್ಕವನಿದ್ದಾಗ ನಾನು ಮಾಡಿದ ತುಂಟಾಟಕ್ಕೆ ಲೆಕ್ಕವೇ ಇಲ್ಲ ಬಿಡಿ, ಅದನ್ನೆಲ್ಲ ಹೇಗೆ ಸಹಿಸುತ್ತಿದ್ದೀರಿ ನೀವು?? "ಹೆತ್ತವರಿಗೆ ಹೆಗ್ಗಣ ಮುದ್ದು" ಅಂತ ಮಗನ ನಗುವಲ್ಲೇ ನಿಮ್ಮ ನೋವ ಮರೆವ ಪರಿ ಅದೆಂತಹ ವಿಸ್ಮಯವೋ ನಾನರಿಯೆ.ಆಗಿನ ನನ್ನ ತುಂಟಾಟಗಳು ನಿಮಗೆ ಎಷ್ಟು ನೋವನ್ನ ನೀಡಿದೆ ಅನ್ನುವುದು ನನಗೆ ಈಗ ತಿಳಿಯುತ್ತಿದೆ. (ನಿಮ್ಮ ಪಾಲಿಗೆ ಅದು ನೋವಲ್ಲದಿರಬಹುದು.) ಗುದ್ದಲಿ, ಕತ್ತಿ ಹಿಡಿದು ಎನಾದರೂ ಮಾಡಲು ಹೋಗಿ ನೆಲದಲ್ಲಿದ್ದ ನೀರಿನ ಪೈಪನ್ನು ಅದೆಷ್ಟು ಬಾರಿ ಒಡೆದಿದ್ದೇನೋ ಅಲ್ಲವಾ..? ಪೆನ್ನು, ಪೆನ್ಸೀಲ್, ರಬ್ಬರ್ಗಳನ್ನ ಎಷ್ಟೋ ಸಲ ಕಳೆದುಕೊಂಡು ಹಣಕ್ಕಾಗಿ ನಿಮ್ಮನ್ನ ಪೀಡಿಸಿದಾಗ ಬಯ್ದು ನೀವು ನೀಡುತ್ತಿದ್ದ ನಾಲ್ಕೈದು ರೂಪಾಯಿಗೆ ಬೆಲೆ ಕಟ್ಟಲಾರೆ ನಾನು.೧ನೇ ತರಗತಿಯಲ್ಲಿದ್ದಾಗ ಶಾಲೆಗೆ ಹೋಗಲು ಹಟ ಮಾಡುತ್ತಿದ್ದ ನನ್ನನ್ನ ಒಮ್ಮೆ ತೋಟದ ತುದಿಯಲ್ಲಿದ್ದ ಗೇಟಿನವರೆಗೂ ಹೊಡೆಯುತ್ತ ಅಟ್ಟಿಸಿಕೊಂಡು ಬಂದಿದ್ದು ಇನ್ನೂ ನೆನಪಿದೆ.ಮುಂದೆ ನಿಮ್ಮಿಂದ ದೂರವಾಗಿ ಚಿಕ್ಕಮ್ಮನ ಮನೆಯಲ್ಲಿ ಶಾಲೆಗೆ ಹೋಗುತ್ತಿದ್ದಾಗ ಒಬ್ಬನೇ ಅದೆಷ್ಟು ಬಾರಿ ಅತ್ತಿದ್ದೆನೋ.. ಆಗ ನಿಮಗೂ ದುಃಖವಾಗಿರಬೇಕು ಬಹುಷಃ.ಮೂರನೇ ತರಗತಿಯಲ್ಲಿದ್ದಾಗ ನಾವಿದ್ದದ್ದು ಬಹುಷಃ ೧೫/೨೦ ರ ಖೊಲಿಯಾಗಿರಬೇಕು ಅಲ್ಲವಾ?? ಒಂದು ಮೂಲೆಯಲ್ಲಿ ಬಚ್ಚಲು ಮನೆ, ಮತ್ತೊಂದು ಮೂಲೆಯಲ್ಲಿ ಅಡುಗೆ ಮನೆ. ಇಷ್ಟರಲ್ಲೆ ಸಂತೋಷವಾಗಿದ್ದದ್ದು ಮರೆಯುವಂತಿಲ್ಲ. ತೋಟದಲ್ಲಿದ್ದ ಒಂಟಿ ಮನೆ,ಏನಾದರೂ ಬೇಕೆಂದರೆ ಮೂರ್ನಾಲ್ಕು ಕಿ.ಮಿ ನಡಿಗೆ. ಮಳೆಗಾಲದಲ್ಲಿ ಲೈಟ್ ಹೋದರೆ ತಿಂಗಳುಗಟ್ಟಲೆ ನಾಪತ್ತೆ.ಚಿಮಣಿ ಬುಡ್ಡೆಯಲ್ಲೇ ಜೀವನ.ಎದುರಿಗಿದ್ದ ತೆರೆದ ಬಾವಿಯ ಕೆಂಪಾದ ನೀರನ್ನೇ ಕುದಿಸಿ ಕುಡಿಯುತ್ತಿದ್ದದ್ದು.ಎಲ್ಲಿ ಜೋರು ಗಾಳಿ ಮಳೆಯಾದರೆ ಬದಿಯ ಗೋಡೆ ಕುಸಿಯುತ್ತೆನೋ ಅನ್ನುವ ಭಯ ಬೇರೆ.ಹೀಗೆ ಸುಮಾರು ಏಳು ವರ್ಷ ಒಟ್ಟಿಗೆ ಇದ್ದಾಗಿನ ಕೆಲ ನೆನಪುಗಳು ಕೆಲವೊಮ್ಮೆ ಬಹಳ ಕಾಡುತ್ತವೆ.ಅಪ್ಪ ಮಗ ದೋಸೆ ತಿನ್ನೋಕೆ ಕುಳಿತರೆ ಕೊನೆಗೆ ನಿನಗೆ ಉಳಿಯದೇ ಅಮ್ಮಾ ನೀನು ಮತ್ತೆನಾದರೂ ತಿನ್ನುತ್ತಿದ್ದದ್ದು ನೆನೆಪಿದೆ. ಬಾಲ್ಯದ ಖುಷಿಯ ದಿನಗಳ ಜೊತೆಗೆ ನಿಮ್ಮ ಕಷ್ಟದ ದಿನಗಳ ನೆನಪು ಮನಕ್ಕೆ ಚುಚ್ಚುತ್ತವೆ.ಒಮ್ಮೆ ನಾನು ಮನೆ ಬಿಟ್ಟು ಹೋದದ್ದು ನೆನಪಿದೆಯಾ..? ಎಷ್ಟು ಹುಡುಕಿದ್ದೀರಿ ಅಲ್ಲವಾ..? ನಾನು ತೋಟದಲ್ಲಿ ಅಡಗಿ ಕೂತಿದ್ದೆ, ನಿಮ್ಮ ಕೂಗು ನನಗೆ ಕೇಳುತ್ತಿತ್ತು.ಆ ಕೂಗಿನಲ್ಲಿನ ನಿಮ್ಮ ನೋವು ಆಗ ನನ್ನ ಅರಿವಿಗೆ ಬಂದಿರಲಿಕ್ಕಿಲ್ಲ.. ಬಹಳ ಹೊತ್ತು ನಿಮ್ಮಿಂದ ದೂರವಿರಲಾರದೆ ಮತ್ತೆ ಬಂದು ನೀವು ಬಿಗಿದಪ್ಪಿದಾಗ ಸಿಕ್ಕ ಸುಖ ಅಷ್ಟಿಷ್ಟಲ್ಲ.ಹತ್ತನೇ ತರಗತಿ ಮುಗಿದ ಮೇಲೆ ಮತ್ತೆ ನಿಮ್ಮಿಂದ ದೂರವಾಗಬೇಕಾದಾಗ ನಾನೆಷ್ಟು ಅತ್ತಿದ್ದೆ, ಆದರೆ ನಿಮ್ಮ ಕಣ್ಣಲ್ಲಿ ಒಂದು ಹನಿಯೂ ಇರದಿರುವುದನ್ನ ನೋಡಿ ಆಶ್ಚರ್ಯವಾಗಿತ್ತು ನನಗೆ..! ಯಾಕೆ ಹೀಗೆ..? ನಿಮ್ಮ ಮಗ ಜೀವನದಲ್ಲಿ ಎನಾದರೂ ಸಾಧಿಸಲು ಹೊರಟಿದ್ದಾನೆ ಅನ್ನುವ ನಂಬಿಕೆಯೆ..?? ಅಥವಾ ನನಗೆ ಧೈರ್ಯ ನೀಡುವ ಸಲುವಾಗಿ ಹಾಗೆ ನಟಿಸಿದ್ದೀರೊ ನಾನರಿಯೆ..ಇವೆಲ್ಲವೂ ನನ್ನ ಜೀವನದಲ್ಲಿ ಮರೆಯಲಾರದ ಕಹಿ ನೆನಪುಗಳು.

ನನಗೀಗ ಕಾಡುವ ಪ್ರಶ್ನೆಗಳೇ ಬೇರೆ.ನಿಮ್ಮ ಹೆಗಲೆತ್ತರಕ್ಕೆ ಬೆಳೆದಿದ್ದರೂ ನಿಮ್ಮನ್ನ ದುಡಿಸುತ್ತಲೇ ಇದ್ದೇನೆ. ಮನೆ ಬಿಟ್ಟು ಷಹರಕ್ಕೆ ಬಂದು ದುಡಿದು ಸಾಲ ಮಾಡಿ ಮನೆ ತೆಗೆದುಕೊಂಡರೂ ನಿಮಗಿನ್ನೂ ನೆಮ್ಮದಿಯ ನಿದ್ದೆಯಿಲ್ಲ, ಇನ್ನೂ ಹಳ್ಳಿಯಲ್ಲೇ ನಿಮ್ಮ ಜೀವನ. ಇದುವರೆಗೂ ಒಮ್ಮೆಯೂ ಮನೆಗೆ ತಿಂಗಳು ತಿಂಗಳು ಹಣ ಕಳಿಸಿಲ್ಲ.. ನಿಮ್ಮ ಜೀವನಕ್ಕೆ ಬೇಕಾಗುವಷ್ಟು ದುಡಿದು, ಅದರಲ್ಲೂ ಸ್ವಲ್ಪ ಉಳಿಸಿ ನನಗೇ ಕೊಡುತ್ತಿದ್ದೀರಾ ಹೊರತು ನನ್ನಿಂದ ಇದುವರೆಗೂ ಒಂದು ರೂಪಾಯಿ ಸಹ ಕೇಳಿಲ್ಲ ನೀವು.ಬೇರೆಯವರೆಲ್ಲಾ ಮಗ ಕಳಿಸಿದ ಅಂತ ತೀರ್ಥಯಾತ್ರೆ ಮಾಡುತ್ತಿದ್ದರೆ ನೀವೆಂದೂ ನಮಗೆ ಎಲ್ಲಾದರೂ ಹೋಗಬೇಕಂತ ಎಂದೂ ಕೇಳಿಲ್ಲ.ಮೊದಲ ಸಂಬಳದಿಂದ ಸೀರೆ, ಶರ್ಟ್ ಪ್ಯಾಂಟ್ ತಂದಾಗಲೂ ಇದೆಲ್ಲ ಯಾಕೆ ಬೇಕಿತ್ತು ಅಂತಲೇ ಕೇಳಿದ್ದೀರಿ. ದುಡ್ಡಿದ್ದಾಗೆಲ್ಲ ಏನಾದರೂ ತಂದರೆ ಹೇಗಿದೆ ಅನ್ನುವ ಬದಲು ಇದಕ್ಕೆಷ್ಟು ಕೊಟ್ಟೆ ಅಂತಲೇ ಕೇಳುತ್ತೀರಿ. ನಾನು ಊರಿಗೆ ಬಂದಾಗಲೆಲ್ಲಾ ನನ್ನಲ್ಲಿದ್ದ ದುಡ್ಡನ್ನ ನಿಮ್ಮ ಹತ್ತಿರವೇ ಕೊಡುತ್ತಿದ್ದೆ, ಮತ್ತೆ ಖರ್ಚಿಗೇನಾದರೂ ನಿಮ್ಮಲ್ಲಿ ಹಣ ಕೇಳಿದರೆ ನೀವು ಕೈಗಿಡುತ್ತಿದ್ದ ೧೦ ರೂ. ಕಂಡು ನಗು ಬರುತ್ತಿತ್ತು. ನಾನಿಲ್ಲಿ ಎಷ್ಟೊ ದುಡ್ಡನ್ನ ವ್ಯಯ ಮಾಡುತ್ತಿದ್ದರೂ ನೀವು ರೂಪಾಯಿಗೂ ಲೆಕ್ಕವಿಟ್ಟು ಸುಮ್ಮನೆ ದುಡ್ಡು ಹಾಳು ಮಾಡಬೇಡ ಅಂತ ಪ್ರೀತಿಯಿಂದ ಕೆನ್ನೆ ತಟ್ಟಿದಾಗ ಮನ ತುಂಬಿಬರುತ್ತೆ. ಮೊಬೈಲ್ ಇದೆ ಅಂತ ದಿನವೂ ಫೋನ್ ಮಾಡಬೇಕು ಅಂತೇನಿಲ್ಲ, ವಾರಕ್ಕೊಮ್ಮೆ ಮಾಡಿದರೆ ಸಾಕು ಅನ್ನುವ ನಿಮ್ಮ ಮಾತಿಗೆ ಏನು ಹೇಳಬೇಕೋ ನಾನರಿಯೆ.ಅಮ್ಮ ನೀನು ಊರಿಗೆ ಬರ್ತೀನಿ ಅಂದಾಗ ನಾನು ರಿಜರ್ವೆಶನ್ ಮಾಡಿಸ್ತೀನಿ ಆರಾಮವಾಗಿ ಮಲಗಿಕೊಂಡು ಬರಬಹುದು ಅಂದರೆ ಅದೆಲ್ಲ ಬೇಡ ಸುಮ್ಮನೆ ದುಡ್ಡು ಹಾಳು ಅನ್ನುವ ನಿನ್ನ ಮಾತಿಗೆ ನನ್ನ ಮನ ಚುರುಗುಡುತ್ತೆ. ಈ ಮಗನಿಂದ ನೀವೆನನ್ನೂ ನೀರೀಕ್ಷಿಸಲೇ ಇಲ್ಲ, ನನ್ನ ಖುಷಿಯೊಂದೇ ಸಾಕೇ..? ಬೇರೆನೂ ಬೇಡವೇ ನಿಮಗೆ..?ನನಗೆ ನೀವು ಇದುವರೆಗೂ ಯಾವುದಕ್ಕೂ ಕಡಿಮೆ ಮಾಡಿಲ್ಲ.ಹಟ ಮಾಡಿದಾಗೆಲ್ಲ ಬಯ್ಯುತ್ತ ಎಲ್ಲವನ್ನೂ ಕೊಡಿಸಿದ್ದೀರ. ನಿಮಗೆ ಒಂದೆರಡು ತುತ್ತು ಕಡಿಮೆಯಾದರೂ ನನಗೆ ಮೃಷ್ಟಾನ್ನವನ್ನೇ ನೀಡಿದ್ದೀರ. ನಿಮಗೆ ಹೊಸ ಬಟ್ಟೆಯಿಲ್ಲದಿದ್ದರೂ ನನಗಾಗಿ ಯಾವಾಗಲೂ ಚಂದದ ಉಡುಪನ್ನೇ ಹೊಲಿಸಿದ್ದೀರ. ಹುಟ್ಟುಹಬ್ಬವನ್ನ ಜೋರಾಗಿ ಆಚರಿಸದಿದ್ದರೂ ಅಮ್ಮಾ ನೀ ಮಾಡುವ ಪಾಯಸದ ರುಚಿ ಮರೆಯುವಂತಿಲ್ಲ. ಎಷ್ಟೇ ಬಡತನವಿದ್ದರೂ ನೀವೆಂದಿಗೂ ನಿಮ್ಮ ನಿಷ್ಠೆ, ಕರ್ತ್ಯವ್ಯ, ಪ್ರಾಮಾಣಿಕತೆ, ಸ್ವಾಭಿಮಾನವನ್ನ ಮರೆತಿಲ್ಲ. ನಿಜಕ್ಕೂ ನಿಮ್ಮಂಥವರ ಮಗನಾಗಿ ಹುಟ್ಟಿದ ನನ್ನ ಬಾಳು ಧನ್ಯ. ಪ್ರತಿ ಜನ್ಮದಲ್ಲೂ ನಿಮ್ಮ ಮಗನಾಗೇ ಹುಟ್ಟಿ ನಿಮ್ಮ ಋಣವನ್ನ ತೀರಿಸುವ ಭಾಗ್ಯ ನನ್ನದಾಗಲಿ ಅನ್ನುವುದಷ್ಟೇ ಆ ಭವವಂತನಲ್ಲಿ ನನ್ನ ಕೋರಿಕೆ.

ನಿಮಗೆ ಹೋಲಿಸಿದರೆ ನಾನೀಗಲೇ ಮುದುಕನಾಗಿದ್ದೇನೆ ಅನಿಸುತ್ತದೆ.ಬೆನ್ನು ನೊವು ಅದು ಇದು ಅಂತ ಈಗಲೇ ಕೊರಗು ಶುರುವಾಗಿದೆ.ಒಮ್ಮೊಮ್ಮೆ ಎಂಟಕ್ಕೆಲ್ಲಾ ಎದ್ದಾಗ ನೀವು ಐದಕ್ಕೇ ಎದ್ದು ದಿನವಿಡೀ ಕೆಲಸ ಮಾಡುವ ನಿಮ್ಮ ಉತ್ಸಾಹ ನಾಚಿಸುತ್ತದೆ. ನಿಮ್ಮಲ್ಲಿರುವ ಕೆಲಸ ಮಾಡುವ ಸಾಮರ್ಥ್ಯ, ಹುರುಪು, ಆಶಾವಾದ ನನ್ನಲ್ಲಿಲ್ಲ. ಬಿಸಿಲಿಗೆ ಕಾಯಲಿಲ್ಲ ನಿಮ್ಮ ದೇಹ, ಮಳೆ ಗಾಳಿಗೆ ಮುದುಡಲಿಲ್ಲ. ನಿಮ್ಮ ಸಹನಶೀಲತೆಗೆ ಸರಿಸಾಟಿಯಾವುದಿಲ್ಲ.ನನ್ನ ಕೂದಲುಗಳೋ ಈಗಲೇ ಬೆಳ್ಳಗಾಗತೊಡಗಿದೆ.ಇನ್ನಾದರೂ ನಾವೆಲ್ಲ ಒಟ್ಟಿಗೆ ಇರಬೇಕು, ಮನೆಯಲ್ಲಿ ನಿಮ್ಮನ್ನ ರಾಜ-ರಾಣಿಯರಂತೆ ನೋಡಿಕೊಳ್ಳಬೇಕು, ನಿಮ್ಮ ಆಸೆಯನ್ನೆಲ್ಲ ಪೂರೈಸಬೇಕು(ಮಗನ ಸುಖ ಬಿಟ್ಟು ನಿಮಗೆ ಬೇರೆನೂ ಆಸೆಗಳಿಲ್ಲ ಬಹುತೇಕ) ಅನ್ನುವ ಆಸೆ ನನಗೂ ಇದೆ. ಆದರೆ ಸಿಗುವ ಸಂಬಳ, ಮನೆಯ ಸಾಲದ ಕಂತು, ಪೆಟ್ರೋಲ್ ಮೋಬೈಲ್ ಅದು ಇದು ಅಂತ ಈ ಷಹರದ ಜೀವನದಲ್ಲಿ ಉಳಿತಾಯ ಶೂನ್ಯ. ನಿನ್ನ ಜೀವನ ಮೊದಲು ಸರಿಯಾಗಲಿ ಆಮೇಲೆ ನಾವು ನಿನ್ನ ಜೋತೆ ಬಂದುಳಿಯುತ್ತೇವೆ ಅನ್ನುವ ನಿಮ್ಮ ಮಾತಿಗೆ ಕಣ್ತುಂಬಿ ಬರುತ್ತದೆ. ನನಗಿಷ್ಟು ವಯಸ್ಸಾಗಿದ್ದರೂ ಇನ್ನೂ ನಿಮ್ಮನ್ನ ಸುಖವಾಗಿ ನೋಡಿಕೊಳ್ಳಲು ಆಗುತ್ತಿಲ್ಲ ಅಂದರೆ ಇದೆಂಥಹ ಜೀವನ ನನ್ನದು, ಬದುಕಿದ್ದೂ ವ್ಯರ್ಥ ಅನಿಸುತ್ತದೆ ಒಮ್ಮೊಮ್ಮೆ.
ನಾನು ಚಿಕ್ಕವನಿದ್ದಾಗ ನೀವು ಪಡುತ್ತಿದ್ದ ಕಷ್ಟಗಳು ತಿಳಿಯುತ್ತಿರಲಿಲ್ಲ.ಆದರೆ ಈಗ ಸ್ವಂತ ಕಾಲ ಮೇಲೆ ನಿಂತಾಗ, ಜೀವನದ ಏಳು-ಬೀಳುಗಳ ಪೆಟ್ಟು ತಿಂದಾಗ ಅದರ ಅರಿವಾಗುತ್ತಿದೆ.ನಾವು ದುಡಿದು ತಿಂದಾಗಲೇ ಅದರ ಬೆಲೆ ತಿಳಿಯುವುದು, ಅದರಲ್ಲಿ ಸಿಗುವ ಸುಖವೇ ಬೇರೆ.ಮೊದಲೆಲ್ಲ ಹೇಗೆ ಬೇಕೊ ಹಾಗೆಖರ್ಚು ಮಾಡುತ್ತಿದ್ದವನು ಈಗ ಪ್ರತಿಯೊಂದಕ್ಕೂ ಲೆಕ್ಕ ಹಾಕುತ್ತಿದ್ದೇನೆ.
ಅಮ್ಮಾ...ಮಗನೇ ಈಗ ಬುದ್ದಿ ಬಂತಾ ಅಂತ ನಗುತ್ತಿದ್ದೀಯಾ..??
ಅಪ್ಪಾ... ನಿಮಗೂ ಖುಷಿಯಾಗಿರಬೇಕಲ್ಲ.. ಮಗ ತನ್ನ ಕಾಲ ಮೇಲೆ ನಿಂತಿದ್ದಾನೆ ಅಂತ. ಸಿಟಿಯಲ್ಲಿ ಮಗ ಮನೆ ತಗೊಂಡಿದ್ದಾನೆಂದು ಊರೆಲ್ಲ ಖುಷಿಯಿಂದ ಸಾರಿದ್ದೀರ ಅಂತ ನನಗೆ ಗೊತ್ತು.ಬಹಳ ಹೆಮ್ಮೆ ಪಡುವ ಕೆಲಸ ಮಾಡದಿದ್ದರೂ ನಿಮ್ಮ ಹೆಸರಿಗೆ ಚ್ಯುತಿ ಬರುವ ಕೆಲಸವನ್ನ ನಾನೆಂದೂ ಮಾಡುವುದಿಲ್ಲ ಎಂದಷ್ಟೇ ಹೇಳಬಲ್ಲೆ.ನಾ ಕಂಡ ಪ್ರತ್ಯಕ್ಷ ದೈವ ನೀವು. ನಿಮ್ಮ ಮುಖದಲ್ಲಿ ಸದಾ ನಗುವನ್ನ ನೋಡಬಯಸುತ್ತೇನೆ ಅಷ್ಟೆ.

ಹೃದಯ ಮಿಡಿಯುತ್ತಿದೆ
ಕಣ್ಗಳು ತುಂಬಿ ಬಂದಿದೆ,
ಕೈಗಳು ನಡುಗುತ್ತಿದೆ
ಶಬ್ದಗಳು ಆರತೊಡಗಿವೆ.

ಒಂದೆರಡು ಕಣ್ಣ ಹನಿಗಳು ಹಾಳೆಯನ್ನ ಹಸಿಯಾಗಿಸಿವೆ,
ತೊಯ್ದು ಮುದ್ದೆಯಾಗಿಸುವ ಮೊದಲು ಮುಗಿಸುತ್ತಿದ್ದೇನೆ.


ಇಂತಿ ನಿಮ್ಮ ಮುದ್ದಿನ ಕಣ್ಮಣಿ.